‘ದೇವರು’


‘ದೇವರು’ ಇದೊಂದು ಅತ್ಯಂತ ಪ್ರಸಿದ್ಧ ಮತ್ತು ಚಿಂತನಾರ್ಹ ಕೃತಿ. ಎ. ಎನ್ ಮೂರ್ತಿರಾವ್ ಇದರ ಲೇಖಕರು. ೧೫ಕ್ಕೂ ಹೆಚ್ಚು ಬಾರಿ ಮರುಮುದ್ರಣ ಕಂಡ ವೈಚಾರಿಕ ಕೃತಿ. ಈ  ಕೃತಿಯ ಬಗ್ಗೆ ಎಷ್ಟೋ ಚರ್ಚೆ ಆಗಿದೆ. ಆದರೂ ಕೃತಿ ಮಾತ್ರ ತನ್ನ ಮೌಲ್ಯವನ್ನು ಇಂದಿಗೂ ಉಳಿಸಿಕೊಂಡು ಮತ್ತೆ ಓದುಗರನ್ನು  ಸೆಳೆಯುತ್ತಿರುವುದು ಇದರ ವೈಚಾರಿಕತೆಗೆ ಸಾಕ್ಷಿ. ದೇವರು ಇದ್ದಾನೆಯೇ, ಇಲ್ಲವೇ? ಇದ್ದರೆ ಹೇಗಿದ್ದಾನೆ. ದೇವರು ಹೇಗಿರಬೇಕು. ಕಲ್ಲಿನಲ್ಲಿರುವುದೆಲ್ಲ ದೇವರೇ? ದೇವರು ಕೇಡಿತನವನ್ನು ಏಕೆ ಸೃಷ್ಟಿಸಿದ, ಭ್ರಷ್ಟರನ್ನು ಏಕೆ ಕಾಪಾಡುತ್ತಾನೆ? ನಂಬಿಕೆ, ಕಲ್ಪನೆ ದೇವರೇ? ಎಂಬಿತ್ಯಾದಿ ವಿಷಯಗಳ ಬಗ್ಗೆ ಮನಮುಟ್ಟುವಂತೆ ಇಲ್ಲಿ ಬರೆದಿದ್ದಾರೆ.  

ಕೆಲವು ವಿಷಯಗಳನ್ನು ಸತ್ಯ ಎಂದು ಸಾಬೀತು ಮಾಡಲು ಸಾಧ್ಯವಿಲ್ಲ, ಅವು ಸುಳ್ಳು ಎಂದೂ ಸಹ ಸಾಬೀತುಪಡಿಸಲು ಸಾಧ್ಯವಿಲ್ಲ. ದೇವರ ವಿಷಯದಲ್ಲೂ ಹೀಗೆಯೇ ಆಗಿದೆ. ಸರ್ವಜ್ಞನೂ, ಸರ್ವಶಕ್ತನೂ ಆದ ದೇವರು ಇರುವುದು ಸಾಧ್ಯವಿಲ್ಲ ಎಂದು ವಾದಿಸುವುದಾರೆ ಹಾಗಾದರೆ ದೇವರು ಹೇಗಿದ್ದಾನೆ, ಹೀಗೆಯೇ ಇರಬೇಕೆಂಬ ನಿಯಮವಿದೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇದು ಅವರವರ ಕಲ್ಪನೆಯಷ್ಟೆ. ಯಾವತ್ತೂ ನಂಬಿಕೆಗಳು ನಂಬಿಕೆಗಳೇ. ನಮ್ಮ ನಂಬಿಕೆ ನಮಗೆ, ನಿಮ್ಮ ನಂಬಿಕೆ ನಿಮಗೆ. ಇದರಿಂದ ಸಮಾಜದ ಮೇಲೆ ಯಾವುದೇ ಕೆಟ್ಟ ಪರಿಣಾಮವಾಗದಂತೆ ನೋಡಿಕೊಳ್ಳಬೇಕು. ಇದು ಎಲ್ಲ ಮತಧರ್ಮಕ್ಕ್ಕೂ ಅನ್ವಯವಾಗುತ್ತದೆ. ಒಟ್ಟಿನಲ್ಲಿ, ನಮ್ಮ ಬದುಕು ಹೇಗಿರಬೇಕೆಂಬ  ಸ್ಪಷ್ಟ ನೀತಿಯನ್ನು ರೂಪಿಸಿಕೊಂಡು ಬದುಕಿದರೆ ಸಾಕು ಎನ್ನುತ್ತಾರೆ ಲೇಖಕರು. 

ಕೃತಿಯಲ್ಲಿನ ‘ದೇವರ’ ಕುರಿತು: 

 ದೇವರು ಎಂಬ ಕಲ್ಪನೆಯ ಪೂರ್ವಇತಿಹಾಸ, ಈ ಕಲ್ಪನೆಯಿಂದ ಭಯ, ಆಶ್ಚರ್ಯ, ರಕ್ಷಣೆಯನ್ನು ಬೇಡುವ ಮನೋವೃತ್ತಿ ಜನರಲ್ಲಿದೆ ಇದೆ. ದೇವರನ್ನು ಎದುರು ಹಾಕಿಕೊಂಡರೆ ನಮಗೆ ಆತ  ಕಷ್ಟಗಳನ್ನು ತಂದೊಡುತ್ತಾನೆ ಎಂಬ ಭಯದಿಂದಲೋ, ಅಪಾಯಕರ ಕೋಟಲೆಗಳಿಂದಲೋ ನಮ್ಮನ್ನು ಪಾರುಮಾಡಿಯಾನು ಎಂಬ ನಂಬಿಕೆಯಿಂದಲೋ, ಮೌಲ್ಯಗಳ ಸಂಕೇತ ಎಂಬ ದೃಷ್ಟಿಯಿಂದಲೋ ‘ದೇವರು’ ಎಂಬ ಕಲ್ಪನೆ ನಮ್ಮ ಮನಸ್ಸಿನಲ್ಲಿ ಸುಳಿದಾಡುತ್ತಲೇ ಇದೆ. ಆಯಾಯ ಕಾಲಗಳ ಜನರು ಯಾವುದನ್ನು ದೇವರೆಂದು ನಂಬಿದರು, ಆ ದೇವರ ಸ್ವರೂಪವೇನು ಎನ್ನುವುದು ಈ ಕೃತಿಯ ಸಾರ. 

 ಪ್ರಪಂಚದ ಎಲ್ಲ ದೇಶಗಳ ಎಲ್ಲ ಜನರ ಮನಸ್ಸಿನಲ್ಲೂ ಬೇರೂರಿ ನೆಲೆಸಿರುವ ದೇವರಿಗೆ ಅಸ್ತಿತ್ವ ಇದ್ದೇ ಇರಬೇಕು ಎನಿಸುವುದು ಆಶ್ಚರ್ಯವಲ್ಲ. ಯಾವುದನ್ನು ದೇವರು ಎನ್ನಬೇಕು, ದೇವರ ಸ್ವರೂಪವೇನು, ದೇವರ ಕುರಿತ ನಂಬಿಕೆಗಳೇನು, ಕಲ್ಲಿನ ವಿಗ್ರಹ ದೇವರೇ, ಹಾಗಿದ್ದರೆ ಕಲ್ಲಿನ ದೇವರಲ್ಲಿ ದೈವತ್ವ ಇದೆಯೇ ಎಂಬುದು ನಂಬಿಕೆ. ತುಳಸಿ ಗಿಡದ ಪೂಜೆ, ಅರಳಿಮರ ಅಶತ್ಥ ಮರ ಮುಂತಾದರಲ್ಲಿ ನಂಬಿಕೆ ಇಡುವ ಜನ ಇಂದಿಗೂ ಇದ್ದಾರೆ. ಅವರಿಗೆ ಗುಡಿಗಳಿಲ್ಲ. ಸೂರ್ಯ, ಅಗ್ನಿ, ವಾಯು, ಮೊದಲಾದವುಗಳಂತೆ ಪ್ರಕೃತಿ ದೇವತೆಗಳು. ಇದರ ಪಾಡು ಬೇರೆ ತರಹದ್ದು.  ಪ್ರಕೃತಿ ಶಕ್ತಿ ಅಲ್ಲದೆ ಬೇರೆ ಯಾವ ದೇವರಿಗೂ ಇಲ್ಲದ ವಿಶಿಷ್ಟ ಗುಣವುಳ್ಳವನು ಗಣಪತಿ. ಆದರೆ ಗಣಪನಿಗೆ ವಿಕಾರರೂಪ ಕೊಟ್ಟಿದ್ದೇವೆ. ಕೆಲವು ದೇವರಿಗೆ ಆಕಾರ ನೀಡಿ ನಾವು ಗುಡಿಗಳಲ್ಲಿಟ್ಟು ಪೂಜಿಸುತ್ತೇವೆ. 

ನಮಗೆ ಹಲವು ದೇವರು. ಆದರೆ  ದೇವರು ಒಬ್ಬನೇ ಎಂದು ಕ್ರೈಸ್ತರು, ಮುಸಲ್ಮಾನರು ನಂಬುತ್ತಾರೆ. ದೇವರನ್ನು ಕುರಿತ ಕಥೆಗಳಲ್ಲಿ ದೇವರ ಪಟ್ಟಿಯಿಂದ ಅಶ್ವತ್ಥಮರ, ಹಾವು, ಕಪಿ, ಅಮ್ಮ, ಭೂತ ಇವರನ್ನೆಲ್ಲ ತೆಗೆದು ಹಾಕಬೇಕು. ಇವರೆಲ್ಲ ಮೂರನೆಯ ಅಥವಾ ನಾಲ್ಕನೆಯ ದರ್ಜೆಯ ದೈವಗಳು. ಪೂಜೆ ಪುನಸ್ಕಾರಗಳಿಲ್ಲದೆ ತಬ್ಬಲಿಗಳಾಗಿ ಇರುವವರು. ದೇವರನ್ನು ಮನುಷ್ಯ ರೂಪದಲ್ಲಿ ನಾವು ಕಲ್ಪಿಸಿಕೊಂಡಿದ್ದೇವೆ. ದೇವರಲ್ಲಿ ಪ್ರಥಮ ಸ್ಥಾನವನ್ನು ಗಣಪತಿಗೆ ಕೊಟ್ಟಿದ್ದೇವೆ. ದೇವರ ಮಟ್ಟವನ್ನು ಉಳಿಸುವಂತಹ ಕಲ್ಪನೆಗಳು ನಮ್ಮಲ್ಲಿ  ಮಾತ್ರ ಅಲ್ಲ, ಎಲ್ಲ ಮತದವರಲ್ಲಿ ಇದೆ. ದೇವರಿಂದ ಪ್ರಭಾವಿತರಾಗುವವರು ಏನೂ ಅರಿಯದ ಜನರು ಮಾತ್ರವಲ, ವಿದ್ಯಾವಂತರು, ಶಾಸ್ತ್ರಾಭ್ಯಾಸಿಗಳು, ಸಂಶೋಧನಾ ನಿರತರು, ವಿಜ್ಞಾನಿಗಳು ಕೂಡ ಸರ್ವಶಕ್ತ ಎಂದು ಉಳಿದ  ಧರ್ಮದವರಂತೆ ಹೇಳುತ್ತಾರೆ. 

ಸರ್ವಶಕ್ತನಾದವನು ಇಬ್ಬರು ಇರಲು ಸಾಧ್ಯವಿಲ್ಲ. ಒಬ್ಬರ ಶಕ್ತಿ ಇನ್ನೊಬ್ಬರನ್ನು ಕಳೆದುಹಾಕುತ್ತದೆ.  ಎಲ್ಲಿ ಒಬ್ಬನ ಶಕ್ತಿ ಆರಂಭವಾಗುತ್ತದೆಯೋ ಅಲ್ಲಿ ಇನ್ನೊಬ್ಬನ ಸರ್ವ ಶಕ್ತಿಯು ಕಳೆಯಲ್ಪಡುತ್ತದೆ. ಯಾರನ್ನಾದರೂ ಒಬ್ಬರನ್ನು ಮಾತ್ರ ಎಂದು ನಂಬಬೇಕು. ದೇವರು ನಮ್ಮ ಅಹಂನ ಭಾಗವಾಗಬಾರದು. ಅವನ ಸ್ಥಾನಮಾನಗಳ ರಕ್ಷಣೆಗೆ ನಾವೇ ಧಾವಿಸಬೇಕಾದ ಸ್ಥಿತಿ ಇದೆ. ಇತ್ತೀಚೆ ಧರ್ಮಾಂಧರು ‘ನಿಮ್ಮ ದೇವರ ರಕ್ಷಣೆಗಾಗಿ ಕತ್ತಿ ಹಿಡಿಯಿರಿ’ ಎಂದು ಕರೆಕೊಡುತ್ತಿದ್ದಾರೆ. ದೇವರು ಎಲ್ಲೋ ದೂರದಲ್ಲಿರುವ ಅಮೂರ್ತ ಕಲ್ಪನೆಗಳಾಗಿರುವ ಮೊದಲು ನಮಗೆ ಹತ್ತಿರದವರಾಗಿರುತ್ತಾರೆ. ನಾವು ಅವರಿಗೆ ಮದುವೆ ಮಾಡಿಸುತ್ತೇವೆ, ಹೆಂಡತಿಯನ್ನು ಕೊಡುತ್ತೇವೆ. ದೇವರನ್ನು ಉನ್ನತ ಮಟ್ಟದಿಂದ ಇಳಿಸಿ ಅವನನ್ನು ಮಾನವನನ್ನಾಗಿ ಮಾಡುತ್ತಿದ್ದೇವೆ. ಒಟ್ಟಿನಲ್ಲಿ ದೇವರು ಒಬ್ಬನೇ ಎಂಬ ನಿಲುವನ್ನು ಮಾತ್ರ ಒಪ್ಪಿ ಮುಂದುವರೆಯಬೇಕು ಎಂದು ಲೇಖಕರು ಹೇಳುತ್ತಾರೆ  

ದೇವರು ಸರ್ವಾಂತರ್ಯಾಮಿ, ಆದರೆ ಸರ್ವಜ್ಞನಾಗಿರುವುದರ ಜೊತೆಗೆ ಸರ್ವಶಕ್ತನೂ ಆಗಿರಬಲ್ಲನೇ ಎನ್ನುವುದು ಪ್ರಶ್ನೆ. ಕೆಲವರು ಅನ್ಯಾಯದಿಂದ ಕೋಟಿಗಟ್ಟಲೆ ಸಂಪತ್ತು ಸಂಪಾದಿಸಿ ನಂತರ ಅದನ್ನು ಸರಿಮಾಡಿಸಿಕೊಳ್ಳಲು ದೇವರ ಮೊರೆ ಹೋಗುತ್ತಾರೆ.  ದೈವ ಭಯದ ಮಾತು ಬೇರೆ, ಆದರೆ ದೇವರು ಭ್ರಷ್ಟರಿಗೆ ಶಿಕ್ಷೆ ಕೊಡುತ್ತಾನೆಯೇ, ಕೆಟ್ಟವರನ್ನು ಒಳ್ಳೆಯವನಾಗಿ ಮಾರ್ಪಡಿಸಬಹುದಲ್ಲವೇ?  ದುಷ್ಟತನ ನಾಶ ಮಾಡಿ ಅವರನ್ನು ಉದ್ಧಾರ ಮಾಡಬಹುದು. ದೇವರು ಸೃಷ್ಟಿಕತ, ಒಬ್ಬನೇ ಅಂದಮೇಲೆ ಕೇಡಿತನದ ಜವಾಬ್ದಾರಿ ದೇವರ ಮೇಲೆ ಹೋಗುತ್ತದೆ. ಅವನು ಕೇಡನ್ನು ಏಕೆ ಸೃಷ್ಟಿಸಿದ ಎಂಬುದಕ್ಕೆ ಯಾರೂ ಸಮರ್ಪಕವಾದ ಉತ್ತರವನ್ನು ಕೊಡುತ್ತಿಲ್ಲ.

 ಮನುಷ್ಯ ಉದ್ಧಾರವಾಗಬೇಕಾದದ್ದು ಮಾನವನಿಂದಲೇ. ಈ ನಂಬಿಕೆ ನಮಗೆ ಆರೋಗ್ಯಕರ. ಸಂಕಟವನ್ನು ದೇವರು ತಂದು ಹೊರಿಸುವುದಿಲ್ಲ. ನಾವೇ ತಂದುಕೊಳ್ಳುವುದು. ದೇವರು ಕೊಟ್ಟ ಸ್ವಾತಂತ್ರ್ಯವನ್ನು ದುರುಪಯೋಗಮಾಡಿಕೊಂಡು ಅನ್ಯಾಯ ಮಾಡುವವರು ನಾವು. ಆದ್ದರಿಂದ ನಮ್ಮ ಸಂಕಟ ನಮ್ಮ ಕರ್ಮದ ಫಲ. ಬದುಕು ನಿಂತಿರುವುದು ವಿಚಿತ್ರ ರೂಪದಲ್ಲಿ. ಸರ್ವಜ್ಞ, ಸರ್ವಶಕ್ತ ಎನಿಸಿಕೊಂಡಿರುವ ದೇವರಿಗೆ ಇದಕ್ಕಿಂತ ಉತ್ತಮವಾದ ವ್ಯವಸ್ಥೆ ಏಕೆ ತೋರುವುದಿಲ್ಲ? ಧರ್ಮಗಳು ಅವನು ಭಕ್ತ ವತ್ಸಲ, ನಂಬಿದವರ ಕೈ ಬಿಡುವುದಿಲ್ಲ ಎಂದಿವೆ. ಇದನ್ನು ನಂಬುವ ಜನ ಕೋಟಿಗಟ್ಟಲೆ ಇದ್ದಾರೆ. ಅವರಲ್ಲಿ ಮೂಢರು ಮಾತ್ರವಲ್ಲ, ಮೇಧಾವಿಗಳು ಸೇರಿದ್ದಾರೆ. ದೇವರು ತನ್ನನ್ನು ನಂಬಿದವರೆಲ್ಲನ್ನು ಪ್ರೀತಿಯಿಂದ ಕಾಣುತ್ತಾನೆ ಎಂದುಕೊಂಡರೂ ಅವನಲ್ಲಿ ಪಕ್ಷಪಾತದ ಕಣವಿದೆ.

 ಅವನು ಎಲ್ಲರಿಗೂ ದೇವರಲ್ಲ, ಭಕ್ತರಿಗೆ ಮಾತ್ರ. ಇದು ಸರಿಯೇ? ದೇವರು ಒಬ್ಬನೆ ಎಂದ ಮೇಲೆ ಇತರ ದೇವರು ದೇವರೇ ಅಲ್ಲ. ನಾವು ಒಪ್ಪಿದ ದೇವರೇ ದೇವರು. ಎಲ್ಲವನ್ನೂ ದೇವರಿಗೆ ಬಿಡುವುದು ಉತ್ತಮ. ದೇವರು ಪ್ರೇಮದ ಸಾಕಾರಮೂರ್ತಿ. ಪ್ರೇಮವೇ ದೇವರು. ನಮ್ಮನ್ನು ಸಲಹುವುದಕ್ಕೆ ಅವನು ತಾನೆ ಓಡಿ ಬರುತ್ತಾನೆ, ಪಾಪಿಗಳನ್ನು ಕೂಡ ಅಪ್ಪಿಕೊಂಡು ಮುತ್ತಿಟ್ಟು ಬರಮಾಡಿಕೊಳ್ಳುತ್ತಾನೆ. 

ಇದುವರೆಗೆ ನಾವು ಪರಿಶೀಲಿಸಿದ ಎಲ್ಲ ಕಲ್ಪನೆಗಳಿಗಿಂತ ಶ್ರೇಷ್ಠವಾದ ಕಲ್ಪನೆ ನಮ್ಮ ಬಯಕೆಯ ದೇವರು ಹೇಗಿರಬೇಕು, ಆತ ಪ್ರೇಮಮೂರ್ತಿ ಆಗಿರಬೇಕು. ಮಹತ್ವ ಸಂಬಂಧಿ ಗುಣಗಳನ್ನು ಹೊಂದಿರಬೇಕು. ಸರ್ವಜ್ಞತ್ವ, ಸರ್ವಶಕ್ತಿತ್ವ ಎರಡೂ ಒಟ್ಟಿಗೆ ಇರಲಾರ, ದೇವರು ಇದ್ದಾನೆ ಎನ್ನುವುದಕ್ಕೆ ಮಾನವನೇ ಸಾಕ್ಷಿ, ಮಾನವ ಇದ್ದರೆ ಅವನನ್ನು ಸೃಷ್ಟಿಸಿದ ದೇವರು ಇರಬೇಕು.

 ದೇವರ ಪರವಾಗಿ ಮುಂದೆ ಇಡಬಹುದಾದ ವಾದಗಳಲ್ಲಿ ಜನಸಾಮಾನ್ಯರಿಗೆ ಅತ್ಯಂತ ಆಕರ್ಷಕವಾದದ್ದಿದ್ದರೆ ಅದು ಮಹಾತ್ಮರ ಸಾಧು-ಸಂತರ ಅನುಭವ. ಮಹಾತ್ಮ ಗಾಂಧಿ ಸ್ವಾಮಿ ವಿವೇಕಾನಂದರು ಮತ್ತು ಪರಮಹಂಸರು ದೇವರನ್ನು ನಂಬಿದ್ದರು. ಅವರು ನಂಬಿದ್ದ ದೇವರು ನಮ್ಮ ಬಯಕೆಯ ದೇವರೇ. ಮೌಲ್ಯರಕ್ಷಕ, ಪ್ರೇಮಸ್ವರೂಪನಾದ ದೇವರು. ನಂಬಿಕೆ ಕೇವಲ ಸಂಪ್ರದಾಯದಿಂದ ಬಂದದ್ದಲ್ಲ. ಲಕ್ಷಗಟ್ಟಲೆ ಜನರ ಮೇಲೆ ಪ್ರಭಾವ ಬೀರಿ ಅವರ ಬದುಕಿನ ಮಟ್ಟವನ್ನು ಇವರೆಲ್ಲ ಏರಿಸಿದವರು. ಇಂಥವರು ದೇವರ ಅಸ್ತಿತ್ವವನ್ನು ಒಪ್ಪಿರುವಾಗ ದೇವರಿಲ್ಲ ಎನ್ನುವುದಕ್ಕೆ ನಾವು ಯಾರು? ಇದು ಜನಸಾಮಾನ್ಯರು ಮಾತ್ರವಲ್ಲ, ಬುದ್ಧಿಜೀವಿಗಳು ಕೂಡ ಕೇಳುವ ಪ್ರಶ್ನೆ. ದೇವರ ಅಸ್ತಿತ್ವವನ್ನು ವಿಚಾರದ ಮೂಲಕ ಸ್ಥಾಪಿಸುವುದು ಆಗುವುದಿಲ್ಲ. ಇದನ್ನು ಮಹಾತ್ಮರೆ ಒಪ್ಪುತ್ತಾರೆ. ಅಂತರದೃಷ್ಟಿ ಮತ್ತು ಅಂತರಂಗದ ಸಾಕ್ಷಿ ರೂಪದಲ್ಲಿ ದೇವರನ್ನು ಯಾರು ಕಲ್ಪ್ಪಿಸಿಕೊಳ್ಳುತ್ತಾರೋ ಅದೇ ರೂಪದಲ್ಲಿ ದೇವರು ಲಭ್ಯವಾಗುತ್ತಾನೆ ಎಂದು ಗೀತಾಚಾರ್ಯ ಕೃಷ್ಣನೇ ಹೇಳಿದ್ದಾನೆ.

 ‘ನಂಬಿಕೆ ದೊಡ್ಡದು. ಅದು ಪರ್ವತಗಳನ್ನು ಕೂಡ ಅಲುಗಾಡಿಸಬಲ್ಲುದು’ ಎಂಬ ಎಂಬ ಮಾತನ್ನು ನಾವು ಕೇಳಿದ್ದೇವೆ. ಮಹಾತ್ಮರು ಹೇಳಿದ ಮಾತು ಪ್ರಮಾಣದ್ದು ಎಂದು ನಾವು ಒಪ್ಪಬೇಕಿಲ್ಲ. ನಮ್ಮ ಮತಾಚಾರ್ಯರು ಕೆಲವು ವೇಳೆ ವಿಚಾರದ ಕಡೆಗಿಂತ ಹೆಚ್ಚಾಗಿ ದೈವ ಶಾಸ್ತ್ರದ ಕಡೆಗೆ ವಾಲಿದ್ದು ಕಂಡುಬರುತ್ತದೆ. ಅವರು ಚಿಂತಕರೂ ಹೌದು. ದೇವರಿದ್ದಾನೆ ಎನ್ನುವುದಕ್ಕೆ ಇವೆಲ್ಲವೂ ಸಮರ್ಪಕವಾದ ಪ್ರಮಾಣವಾಗಲಾದರೂ ಮಾನವ ದೇವರನ್ನು ಸೃಷ್ಟಿಸಿದ್ದಾನೆ, ಸಾವಿರಾರು ವರ್ಷಗಳು ಕಳೆದಿವೆ, ಆದರೂ ಪ್ರಪಂಚದಲ್ಲಿ ಕೇಡು ಇದ್ದೇ ಇದೆ, ನಮ್ಮ ಉದ್ಧಾರಕ್ಕಾಗಿ ನಾವು ದೇವರನ್ನು ಸೃಷ್ಟಿಸಿದರೆ ಪ್ರಯೋಜನವಿಲ್ಲ. ನಾವು ನಮ್ಮನ್ನೇ ಮೆಚ್ಚಿಕೊಳ್ಳಬೇಕು. ದೇವರನ್ನು ನಂಬಿದ್ದರಿಂದ ಒಳ್ಳೆಯರಾಗಿರುವ ಜನ ಇಲ್ಲವೇ ಇಲ್ಲ ಎಂದು ಹೇಳುವುದು ಕಷ್ಟ. 

ದೇವರು ಎಂದರೆ ಮೌಲ್ಯಗಳು ಮತ್ತು ಅವುಗಳ ಧ್ಯಾನ. ಅದನ್ನು ಕಾರ್ಯಕ್ಷೇತ್ರದಲ್ಲಿ ಸದಾ ಬಳಸುವುದೇ ಪೂಜೆ ಎಂದು ಭಾವಿಸಿದರೆ ಯಾವ ವಿರೋಧವೂ ಇರಬೇಕಾಗಿಲ್ಲ. ಆಚರಣೆಯಲ್ಲಿ ಇಟ್ಟುಕೊಂಡಿದ್ದರೆ ಸಾಕು. ಮೌಲ್ಯಗಳಿಗೆ ಅನುಸಾರವಾಗಿ ಬದುಕು ನಡೆಸುವುದು ಕಷ್ಟ. ನಮಗೆ ಬೇಕಾದ ದೇವರು ಕರುಣಾ ಹೃದಯನಾದ ಮತ್ತು ಪ್ರೇಮ ಸ್ವರೂಪನಾದವನು. ಜೀವನ ನಡೆಸಲು ದೇವರ ಸಹಾಯ ಅವಶ್ಯಕವಲ್ಲ. ದೇವರಿದ್ದಾನೆ ಎಂದು ನಂಬುವುದಕ್ಕೆ ಬೇಕಾದ ಸಾಕ್ಷಿಯೂ ಸಿಕ್ಕಿಲ್ಲ. ಆದರೂ ದೇವರನ್ನು ನಂಬುವ ಜನ ಕೋಟಿಗಟ್ಟಲೆ ಇದ್ದಾರೆ. ದೇವರು ಬೇಕು, ಆದರೆ ಅವನಿಲ್ಲ. ಇದು ನಮ್ಮ ಕರುಣಾಜನಕ ಕಥೆ. ದೇವರು ಬೇಡ ಎಂಬುದಲ್ಲ, ಅವನು ಬೇಕು. ಆದರೆ ಅಲ್ಲಿದ್ದಾನೆ, ಇಲ್ಲಿದ್ದಾನೆ, ಎಲ್ಲೆಲ್ಲೂ ಅವನಿದ್ದಾನೆ ಎಂಬ ಆಧಾರರಹಿತ ಒಣನಂಬಿಕೆಯಿಂದ ಏನೂ ಪ್ರಯೋಜನವಿಲ್ಲ. ದೇವರು ಎಂಬ ಕಲ್ಪನೆಯನ್ನು ಸಂದೇಹಕ್ಕೆ ಗುರಿ ಮಾಡುವುದೇ ಪಾಪ ಎಂಬ ಭಾವನೆಯನ್ನು ಬಿಟ್ಟು ಪರಿಶೀಲನೆ ಮಾಡುವುದರಿಂದ ಒಳ್ಳೆಯದಾಗುತ್ತದೆ.

ಒಟ್ಟಿನಲ್ಲಿ ದೇವರ ಕುರಿತ ಉತ್ತಮ ಚರ್ಚೆಗೆ ಇದು ನಾಂದಿ ಹಾಡಿದೆ. ಇದರಲ್ಲಿ ಯಾವುದೇ ಪಲಾಯನವಾದವಿಲ್ಲ. ನಂಬಿಕೆ ಅವರವರಿಗೆ ಬಿಟ್ಟಿದ್ದಾದರೂ ಧರ್ಮ, ಶಾಸ್ತ್ರ, ಮತಗಳು ದೇವರ ಅಸ್ತಿತ್ವದ ಬಗ್ಗೆ ಹೇಳಿರುವ ಮಾತುಗಳು, ಅವುಗಳನ್ನು ಉತ್ತಮ ನಿದರ್ಶನUಳೊಂದಿಗೆ ಚರ್ಚಿಸುವ ಕೆಲಸವನ್ನು ಲೇಖಕರು ಇಲ್ಲಿ ಮಾಡಿದ್ದಾರೆ.   

- ದತ್ತಾತ್ರೇಯ ಹೆಗಡೆ, ಶಿವಮೊಗ್ಗ 

,,,,,,,,,,,,,,,,,,,,,,



Comments

Popular posts from this blog