ಒಂದು ದಾರಿ ನೂರು ವಿಘ್ನ
ಹೆಣ್ಣು ಸಾಧನೆಯ ಬದುಕನ್ನು ಕಟ್ಟಿಕೊಳ್ಳಬೇಕೆಂದು ಸಾಗುವಾಗ ಅನೇಕ ಕಷ್ಟ -ನಷ್ಟಗಳನ್ನು ಅನುಭವಿಸುತ್ತಾಳೆ. ಛಲ ಬಿಡದೆ ನಡೆದರೂ ಅವಳ ತಂದೆ-ತಾಯಿಗಳೇ ಇದಕ್ಕೆ ಅಡ್ಡಿಯಾಗುವುದು, ಅವರೇ ತುಳಿಯುವುದು, ಅಡ್ಡದಾರಿ ಹಿಡಿಸುವುದು ‘ಒಂದು ದಾರಿ ನೂರು ವಿಘ್ನ’ ಕಾದಂಬರಿಯ ಸಾರಾಂಶ. ಸಮಾಜ ಒಂದು ಹೆಣ್ಣಿಗೆ ತನ್ನ ದರ್ಶನ ಮಾಡಿಸುವುದಿಲ್ಲ, ಮುಖವಾಡ ಮಾತ್ರ ತೋರಿಸಿ ನಿಜವಾದ ಮುಖ ಮುಚ್ಚುತ್ತದೆ ಎನ್ನುವುದನ್ನು ಈ ಕೃತಿ ಸಾರುತ್ತದೆ. ಕಲ್ಬುರ್ಗಿಯ ಶ್ರೀದೇವಿ ಎನ್. ರಾಥೋಡ್ ಇದರ ಕೃತಿಕಾರರಾಗಿದ್ದು, ಕುಟುಂಬವು ಎಲ್ಲಕ್ಕಿಂತ ಸುರಕ್ಷತೆಯ ಸ್ಥಳ ಎಂದು ಒಪ್ಪಿಕೊಂಡಿರುವಾಗಲೇ ಅದು ನರಕದ ಗೂಡಾದರೆ ಎಲ್ಲಿ ಇರಬೇಕು. ಪಾಲಕರು ದೇವರೆನ್ನುವ ನಾವು, ಅವರೇ ಮೃಗಗಳಾದಾಗ ಯಾರಿಗೆ ಪ್ರಶ್ನೆ ಕೇಳಬೇಕು, ಮಕ್ಕಳು ಹುಟ್ಟಿದ್ದು ತಮ್ಮ ಬದುಕು ತೂಗಿಸಲು, ತಮಗೆ ದುಡಿದು ಹಾಕುವ ಒಂದು ಆದಾಯ ಎಂದು ತಿಳಿಯುವವರಿಂದ ಏನನ್ನು ನಿರೀಕ್ಷಿಸಲು ಸಾಧ್ಯ ಎನ್ನುವುದನ್ನು ಈ ಕೃತಿಯಲ್ಲಿ ಅವರು ವಿವರಿಸಿದ್ದಾರೆ.
ಅದಿತಿ ಎನ್ನುವವಳು ಕಮಲಪ್ಪ ಮತ್ತು ರತ್ನಾ ಅವರ ಮಗಳು. ಕಮಲಪ್ಪ ನೀರಾವರಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ. ಆತ ಒಂದೇ ಕಡೆ ಕೆಲಸ ಮಾಡುವವನೂ ಅಲ್ಲ. ಯಾವ ಹೂವು ಎಲ್ಲಿ ಅರಳುತ್ತದೆಯೋ ಅಲ್ಲಿಗೆ ಹೋಗುವ ಮನಃಸ್ಥಿತಿ ಆತನದಾಗಿತ್ತು. ದುಡಿಮೆಯಿಂದ ಆತ ಮನೆಗೆ ಏನನ್ನೂ ತಾರದಿದ್ದಾಗ ರತ್ನಾ ಸಹ ಕೂಲಿ ಕೆಲಸ ಮಾಡುವಂತಹ ಸ್ಥಿತಿ ಎದುರಾಗುತ್ತದೆ. ಇದರಿಂದ ಊರಿಂದ ಊರಿಗೆ ಕೆಲಸಕ್ಕೆ ಅಲೆದಾಡುತ್ತಾನೆ. ಈ ಮಧ್ಯೆ ಹೆಣ್ಣು ಮಗು ಜನಿಸುತ್ತದೆ. ಮತ್ತೆ ಕೆಲವು ವರ್ಷಗಳ ನಂತರ ಎರಡನೇ ಹೆಣ್ಣು ಮಗು ಜನಿಸುತ್ತದೆ. ಅದು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲು ಮಾಡಿದಾಗ ಚಿಕಿತ್ಸೆ ಫಲಿಸದೆ ಇಹಲೋಕ ತ್ಯಜಿಸುತ್ತಾಳೆ. ಇದರ ಬಗ್ಗೆ ಚಿಂತಿತನಾಗದ ಕಮಲಪ್ಪ ತನ್ನ ಚಟವಾದ ಮನೆಗೆ ಹೆಂಗಸರನ್ನು ಕರೆತಂದು ರಾಸಲೀಲೆಯಲ್ಲಿ ಮಗ್ನನಾಗುತ್ತಾನೆ. ಇದು ಮಗಳು ಅದಿತಿಯ ಮೇಲೆ ತುಂಬಾ ಪರಿಣಾಮ ಬೀರುತ್ತದೆ. ಅವಳು ಶಾಲೆಗೆ ಸೇರುತ್ತಾಳೆ. ಹಾಸ್ಟೆಲಿನಲ್ಲಿ ಉಳಿಯುತ್ತಾಳೆ. ಮನೆಗೆ ಬಂದಾಗಲೆಲ್ಲ ಅಕ್ಕಪಕ್ಕದವರು ತಂದೆಯ ಮಾತನಾಡುವುದರಿಂದ ಆಕೆಗೆ ತುಂಬಾ ಹಿಂಸೆ ಮತ್ತು ಅವಮಾನ ಆಗುತ್ತದೆ.
ಪಿಯುಸಿ ಮುಗಿಸಿ ಕಾಲೇಜಿಗೆ ಸೇರಿದ ಅದಿತಿ ಹಣಕ್ಕಾಗಿ ಫೈನಾನ್ಸೊಂದರಲ್ಲಿ ಲೆಕ್ಕ ಬರೆಯಲು ಸೇರಿಕೊಳ್ಳುತ್ತಾಳೆ. ಕಮಲಪ್ಪನ ಪತ್ನಿ ರತ್ನಾಳಿಗೆ ಗ್ಯಾಂಗರಿನ್ ಆಗಿ ಕೈಕತ್ತರಿಸುವ ಸಂದರ್ಭ ಎದುರಾಗುತ್ತದೆ. ೫೦,೦೦೦ ರೂ. ವೆಚ್ಚವಾಗುತ್ತದೆ ಎಂದು ವೈದ್ಯರು ಸೂಚಿಸಿದಾಗ ಕಮಲಪ್ಪ ಊರ ಗೌಡನಿಂದ ಸಾಲವಾಗಿ ಹಣ ತರುತ್ತಾನೆ. ಚಿಕಿತ್ಸೆ ನಂತರ ಆಕೆ ಗುಣಮುಖಳಾಗಿ ಮನೆಗೆ ಬಂದಾಗ ಖರ್ಚು ಹೆಚ್ಚಿದ್ದರಿಂದ, ಸಾಲ ತೀರಿಸುವ ಹೊಣೆಯೂ ಇರುವುದರಿಂದ ಎಲ್‌ಐಸಿ ಏಜೆಂಟ್ ಆಗಿ ಕೆಲಸ ಅರಂಭಿಸುತ್ತಾಳೆ. ಅದಿತಿ ಎಲ್ ಐ ಸಿ ಪಾಲಿಸಿ ಮಾಡಲು ಹಲವರನ್ನು ಭೇಟಿ ಮಾಡುತ್ತಾಳೆ. ತನ್ನ ಮತ್ತು ತಂದೆಯ ಮಿತ್ರರ ಜೊತೆ ಮನವಿ ಮಾಡುತ್ತಾಳೆ. ಈ ಮಧ್ಯೆ ಕಮಲಪ್ಪನ ಮಿತ್ರ ಸುರೇಶ ಪಾಲಿಸಿ ಕೊಡುವುದಾಗಿ ಅದಿತಿಯನ್ನು ಕರೆಸಿಕೊಂಡು ತನ್ನ ಚೇಂಬರ್‌ನಲ್ಲಿ ಅವಳನ್ನು ಗಟ್ಟಿಯಾಗಿ ತಬ್ಬಿಕೊಳ್ಳುತ್ತಾನೆ. ‘ನೀನು ನನಗೆ ಸಹಕರಿಸಬೇಕು. ಬೇಕಾದಷ್ಟು ಹಣ ಕೊಡುತ್ತೇನೆ. ನಿನ್ನ ಸಮಸ್ಯೆ ಪರಿಹರಿಯುತ್ತದೆ’ ಎಂದು ಹೇಳುತ್ತಾನೆ. ಆತನನ್ನು ತಳ್ಳಿ ಬೀಳಿಸಿ ಹೊರಬರುತ್ತಾಳೆ. ಹೀಗೆ ಪ್ರತಿ ಹೆಜ್ಜೆಹೆಜ್ಜೆಗೂ ಸಂಕಷ್ಟವೇ ಅವಳಿಗೆ ಎದುರಾಗುತ್ತದೆ.
ಅದಿತಿ ಊರು ಬಿಟ್ಟು ಹಂಪಿ ವಿಶ್ವವ್ವಿದ್ಯಾಲಯದಲ್ಲಿ ಮಹಿಳಾ ಅಧ್ಯಯನ ವಿಷಯದಲ್ಲಿ ಎಂಎ ಓದುತ್ತಾಳೆ. ಎಂ ಎ ಮುಗಿದ ಬಳಿಕ ಬದುಕಿಗೆ ಮುಂದೆ ದಾರಿ ಸಿಕ್ಕಿತೇ? ಸ್ವತಂತ್ರವಾಗಿ ಬದುಕು ಕಟ್ಟಿಕೊಂಡಳೇ ? ಎನ್ನುವುದು ಕಥೆಯ ಮುಂದಿನ ಭಾಗ.
ಇತ್ತ ಮನೆಯಲ್ಲಿ ಮದುವೆ ಮಾಡಲು ವಿಷಯ ಪ್ರಸ್ತಾಪಿಸಿದಾಗ ಆಕೆ ಒಪ್ಪುವುದಿಲ್ಲ. ಯಾವಾಗ ತಂದೆ -ತಾಯಿಗಳಿಗೆ ಮಕ್ಕಳ ಬಗ್ಗೆ ಕಾಳಜಿ ಇಲ್ಲವೋ, ನಾನು ಎಷ್ಟು ಸುಧಾರಿಸಲು ಪ್ರಯತ್ನಿಸಿದರೂ ಅವರು ಸುಧಾರಣೆಯಾಗದೆ ತನ್ನನ್ನು ಅವರದೇ ಕೆಸರಿನಲ್ಲಿ ಎಳೆಯುವಾಗ ಪಾಲಕರ ಬಗ್ಗೆ ಚಿಂತಿಸುವುದಕ್ಕಿಂತ ಅವರ ಕೂಪದಿಂದ ಹೊರಬಂದರೆ ಸಾಕೆಂದು ಯೋಚಿಸುತ್ತಾಳೆ. ಈ ಮಧ್ಯೆ ಅದೇ ಆಫೀಸಿನಲ್ಲಿ ಕೆಲಸ ಮಾಡುವ ಯುವಕ ಪರಿಚಯವಾಗುತ್ತಾನೆ. ಅದಿತಿಗೆ ಆತ ತಾನು ಪ್ರೀತಿಸುವುದಾಗಿ ಹೇಳುತ್ತಾನೆ. ಆದರೆ ಆತನ ವರ್ತನೆ ಇವಳಿಗೆ ಸರಿ ಬರುತ್ತಿರಲಿಲ್ಲ. ಆದರೂ ನಂಬುತ್ತಾಳೆ. ಆತ ಇದ್ದಕ್ಕಿದಂತೆ ದೂರವಾಗುತ್ತಾನೆ. ಆತನನ್ನು ಹುಡುಕಿ ಮನೆಗೆ ಹೋದಾಗ ಎಂಗೇಜ್ಮೆಂಟ್ ಆಗಿರುವ ವಿಚಾರವನ್ನು ಪಾಲಕರು ತಿಳಿಸುತ್ತಾರೆ. ಇಲ್ಲಿಯೂ ತನಗೆ ನಸೀಬು ಕೈಕೊಟ್ಟ ಬಗ್ಗೆ ವ್ಯಥೆ ಪಡುತ್ತಾಳೆ.
ಕೆಲವು ದಿನಗಳ ನಂತರ ಕಮಲಪ್ಪನ ಗೆಳೆಯ ಕಾರ್ಖಾನೆಯಲ್ಲಿ ಕೆಲಸ ಮಾಡುವ ತನ್ನ ಪರಿಚಿತ ರಾಜು ಎನ್ನುವವ ನ ಜೊತೆ ವಿವಾಹ ಮಾಡಿಸುತ್ತಾನೆ. ಮದುವೆ ನಂತರ ಬದುಕು ಬದಲಾಗಬಹುದು. ಭವಿಷ್ಯ ರೂಪಿಸಿಕೊಳ್ಳಬಹುದೆಂದು ಯೋಚಿಸುತ್ತಾಳೆ. ದಿನಕಳೆದಂತೆ ಗಂಡ ಹೆಂಡಿರಲ್ಲಿ ಜಗಳ, ಹೊಡೆದಾಟ ಆರಂಭವಾಗುತ್ತದೆ. ಹೆಂಡತಿಯನ್ನು ಬಿಡಲು ಗಂಡ ರಾಜು ನಿರ್ಧರಿಸುತ್ತಾನೆ. ನಂತರ ರಾಜಿ ಪಂಚಾಯಿತಿಗೆ ಮೂಲಕ ಅದನ್ನು ತಡೆಯಲಾಗುತ್ತದೆ. ‘ಸಮಾಜ ಹೆಣ್ಣಿಂದ ಮಾತ್ರ ಒಳ್ಳೆಯದನ್ನು ಬಯಸುತ್ತದೆ. ಅದನ್ನೇ ಪುರುಷರು ಸಹ ನಿರೀಕ್ಷಿಸುತ್ತಾರೆ’ ಎಂದು ತನ್ನನ್ನೇ ತಾನು ನಿಂದಿಸಿಕೊಳ್ಳುತ್ತಾಳೆ. ಇತ್ತ ರಾಜು ಕೆಲಸ ಮಾಡುತ್ತಿದ್ದ ಕಾರ್ಖಾನೆ ಮುಚ್ಚುತ್ತದೆ. ಕೆಲಸಕ್ಕಾಗಿ ಪಕ್ಕದ ಹಳ್ಳಿಗೆ ತೆರಳಿ ಡಿಟಿಪಿ ಸೆಂಟರ್ ತೆರೆಯುತ್ತಾನೆ. ಅದಿತಿ ಸಹ ಮೊರಾರ್ಜಿ ಸ್ಕೂಲ್ನಲ್ಲಿ ಕ್ಲರ್ಕ್ ಕೆಲಸಕ್ಕೆ ಸೇರುತ್ತಾಳೆ. ಆಕೆಗೆ ಅದೃಷ್ಟ ಕೈ ಕೊಟ್ಟು ಅಲ್ಲಿಯೂ ಕೆಲಸ ಕಳೆದುಕೊಳ್ಳುತ್ತಾಳೆ. ಸಂಸಾರದ ಬಂಡಿ ನಡೆಸುವುದು ಕಷ್ಟವಾಗುತ್ತದೆ.
ಈ ಮಧ್ಯೆ ರತ್ನಾ ಮತ್ತು ಕಮಲಪ್ಪ ಮನೆಯಲ್ಲಿ ಗಲಾಟೆ ಮಾಡಿಕೊಂಡಿದ್ದರಿಂದ ರತ್ನಾಳಿಗೆ ಚೆನ್ನಾಗಿ ಏಟು ಬೀಳುತ್ತದೆ. ಆಕೆ ಏಳಲಾಗದ ಸ್ಥಿತಿಯಲ್ಲಿ ಬಿದ್ದಿರುತ್ತಾಳೆ. ಆಕೆಯ ತಂಗಿ ಬಂದು ಗೋವಾಕ್ಕೆ ತನ್ನ ಜೊತೆ ಕರೆದೊಯ್ಯುತ್ತಾಳೆ. ದಿನಗಳೆದಂತೆ ಒಂಟಿ ಕಮಲಪ್ಪನ ಸ್ಥಿತಿ ತುಂಬಾ ಚಿಂತಾಜನಕವಾಗುತ್ತದೆ. ಊಟ -ತಿಂಡಿ ಸೇವಿಸದೆ, ಗಲೀಜು ವಾತಾವರಣದಲ್ಲಿ ಬಿದ್ದಿರುತ್ತ್ತಾನೆ. ಸಾಯುವ ಸ್ಥಿತಿಗೆ ತಲುಪುತ್ತಾನೆ, ಇದರ ಮಾಹಿತಿ ಪಡೆದ ಅದಿತಿ ಅಲ್ಲಿಗೆ ಧಾವಿಸಿ ತಂದೆಯನ್ನು ತನ್ನ ಜೊತೆ ಕರೆತರುತ್ತಾಳೆ. ಮಗಳ ಮನೆಗೆ ಬಂದ ನಂತರ ಆರೈಕೆಯಿಂದ ಮತ್ತೆ ಚೆನ್ನಾಗಿ ಮೈ ಕೈ ತುಂಬಿಕೊಂಡ ಕಮಲಪ್ಪ ಕೆಲಸಕ್ಕೆ ಹೋಗದೆ ಎಂದಿನಂತೆ ಹೆಂಗಸರ ಸಹವಾಸವನ್ನು ಆರಂಭಿಸುತ್ತಾನೆ. ಇದರಿಂದ ಮಗಳು ಮತ್ತು ಆಕೆಯ ಗಂಡ ಕ್ರುದ್ಧರಾಗುತ್ತಾರೆ. ತಿಳಿಹೇಳಿದರೂ ಇವರಿಗೆ ಎದುರೇಟು ಕೊಡುತ್ತಾನೆ. ಈ ವಿಚಾರವಾಗಿ ಗಲಾಟೆ ಹೆಚ್ಚಾದಂತೆ ಆತ ಮನೆ ಬಿಟ್ಟು ಹೊರಗೆ ತಿರುಗುತ್ತಾನೆ. ಕೋರ್ಟಿನಲ್ಲಿ ತನ್ನ ಉಪಜೀವನಕ್ಕೆ ಮಗಳು ಹಣ ಕೊಡಬೇಕೆಂದು ದಾವೆ ಹೂಡುತ್ತಾನೆ. ಆದರೆ ಮೇಲಧಿಕಾರಿಗಳು ದಾಖಲೆಗಳನ್ನು ಗಮನಿಸಿ, ‘ನಿನ್ನ ಪಿತ್ರಾರ್ಜಿತ ಆಸ್ತಿಯ ವಿವಾದ ಕೋರ್ಟಿನಲ್ಲಿದೆ. ಮಗಳ ಮನೆಯಲ್ಲಿ ಇರುವುದು ಸರಿಯಲ್ಲ. ಕಾನೂನು ಪ್ರಕಾರ ನಿನ್ನ ಆಸ್ತಿಯಲ್ಲಿ ಯಾವುದೇ ಪಾಲನ್ನು ಅವಳಿಗೆ ಕೊಟ್ಟಿಲ್ಲ. ಜೊತೆಗೆ ಆಕೆ ಸಾಲ ಮಾಡಿ ತನ್ನ ಕುಟುಂಬವನ್ನು ಕಟ್ಟಿಕೊಂಡಿದ್ದಾಳೆ. ಆದ್ದರಿಂದ ನಿಮ್ಮ ಅರ್ಜಿಯನ್ನು ವಜಾ ಮಾಡಲಾಗಿದೆ’ ಎಂದು ಹೇಳುತ್ತಾರೆ.
ಇದರಿಂದ ಕಮಲಪ್ಪನ ಮುಖಕ್ಕೆ ಹೊಡೆದಂತಾಗುತ್ತದೆ. ಅಪ್ಪನ ಕಿರಿಕಿರಿಯಿಂದ ತಪ್ಪಿಸಿಕೊಂಡೆ. ಇನ್ನಾದರೂ ತನ್ನ ಸುಖ ಜೀವನ ಸಾಗಲಿ ಎಂದು ದೇವರಲ್ಲಿ ಬಿಡುತ್ತಾಳೆ. ‘ಬದುಕು ಎಷ್ಟು ಸುಂದರವೋ ಅಷ್ಟೇ ದುರಂತದ್ದು. ಮನುಷ್ಯ ಮಾಡಿದ ಪಾಪಕರ್ಮಗಳನ್ನು ಮತ್ತೊಂದು ಜನುಮದಲ್ಲಿ ಅನುಭವಿಸುವುದಿಲ್ಲ. ಮಣ್ಣಿನಲ್ಲಿ ಹುಟ್ಟಿ ಮಣ್ಣಿಗಾಗಿ ಬಡಿದಾಡಿ ಮತ್ತೆ ಮಣ್ಣಾಗುವ ದೇಹ ವಯಸ್ಸಾದಾಗ ಎಲ್ಲವನ್ನು ಅನುಭವಿಸಿ ಹೋಗಬೇಕಾಗುತ್ತದೆ. ಏಕೆಂದರೆ ಯಾವ ದಾರಿಯಲ್ಲಿ ನಡೆದಿರುವೆಯೋ ಅದೇ ದಾರಿಯಲ್ಲಿ ಫಲ ಸಿಗುತ್ತದೆ. ಎಷ್ಟೊಂದು ಆಡಂಬರ ಸ್ವಾರ್ಥದಿಂದ ನಮಗಾಗಿ ಬದುಕಿದರೂ ಕೊನೆಗೆ ಎಲ್ಲವನ್ನೂ ಬಿಟ್ಟು ಮಣ್ಣಾಗಬೇಕಾಗುತ್ತದೆ’ ಎನ್ನುವ ನೀತಿಯನ್ನು ಲೇಖಕಿ ಇಲ್ಲಿ ನಿರೂಪಿಸಿದ್ದಾರೆ.
ಒಟ್ಟಿನಲ್ಲಿ, ಬದುಕು ಕಟ್ಟಿಕೊಳ್ಳಬೇಕೆಂದು ನಾವು ತಮ್ಮ ಹಾದಿಯಲ್ಲಿ ಸಾಧನೆ ಮಾಡುತ್ತಾ ಹೋದರೂ ಅದಕ್ಕೆ ನೂರಾರು ವಿಘ್ನಗಳು ಎದುರಾಗುತ್ತವೆ. ಪ್ರತಿ ಹಂತದಲ್ಲೂ ಸೋಲು ಎದುರಾಗುತ್ತದೆ ಎನ್ನುವುದನ್ನು ಇಲ್ಲಿ ಲೇಖಕಿ ಚಿತ್ರಿಸಿದ್ದಾರೆ.
-ದತ್ತಾತ್ರೇಯ ಹೆಗಡೆ, ಶಿವಮೊಗ್ಗ

Comments
Post a Comment