ನಿರಂತರ ಕಾಡುವ ಘಟನೆಗಳ 


‘ಸೆಕೆಂಡ್ ವೈಫ್’ 



ಪತ್ರಕರ್ತ, ಬರಹಗಾರ ವಸಂತ್ ಗಿಳಿಯಾರ್  ಅವರ ಕೃತಿ ‘ಸೆಕೆಂಡ್ ವೈಫ್’. ಲೇಖಕರು ವರದಿಗಾರಾಗಿ ಕೆಲಸ ಮಾಡುವಾಗ ಎದುರುಗೊಂಡ ವಿಷಯಗಳೇ ಈ ಕಥೆಗಳು. ಇದರಲ್ಲಿ ಕೆಲವು ವರದಿಯಂತೆ ಇವೆ. ಅದರೆ ಅದರಲ್ಲಿ ಘಟನೆ ಇದೆ. ಕೆಲವು ನಿಜಕ್ಕೂ ನಡೆದ ಘಟನೆಗಳು. ಕೆಲವು ಅಚ್ಚರಿಯ ಬರಹಗಳು, ಇನ್ನೂ ಕೆಲವು ದೇವರು, ಮಾಟ,  ಭೂತಗಳ ಪವಾಡದ ಬಗ್ಗೆ, ಇನ್ನೊಬ್ಬರ ಮಾತು ಕೇಳಿ ದಾರಿತಪ್ಪುವ ಯುವಕ, ಕಾಲೇಜಿನಲ್ಲಿ ಬರವಣಿಗೆ ಮೂಲಕ ಪ್ರೀತಿ ಹುಟ್ಟುವುದು ಕುರಿತಾಗಿದೆ.

ಒಟ್ಟೂ ೧೬ ಕಿರುಕತೆಗಳ ಸಂಕಲನ ಇದು.

ವಿಭಿನ್ನ ವಿಷಯಗಳು, ಸುಂದರ ನಿರೂಪಣೆ, ಸತ್ವಯುತ, ಸರಳ ಭಾಷೆ, ಅಲ್ಲಲ್ಲಿ  ಗಾದೆಮಾತು, ಹಿತನುಡಿ, ಕಚಗುಳಿ ಇಡುವ ಮಾತುಗಳು ಓದಿಗೆ ಸಹಾಯಕವಾಗಿವೆ.   ನಮ್ಮ ಸುತ್ತಲು ನಡೆಯುವ ಘಟನೆಗಳು ಇನ್ನೊಬ್ಬರನ್ನು ತಲುಪಬೇಕು, ನಮಗೆ ಹತ್ತಿರವಿದ್ದರೂ ಎಷ್ಟೋ ಸ್ಥಳಗಳ ಕುರಿತು, ನಡೆಯುತ್ತಿರುವ ಘಟನೆಗಳ ಬಗ್ಗೆ ಅರಿವಿರುವುದಿಲ್ಲ. ಅದನ್ನೆಲ್ಲ ಪತ್ರಕರ್ತನಾದವನು ಗ್ರಹಿಸಿ ಕಂಡು, ಅನುಭವಿಸಿ ಹೇಗೆ ಲೋಕಕ್ಕೆ ತೆರೆದಿಡಬಹುದೆನ್ನುವುದಕ್ಕೆ ಈ  ಕೃತಿ ಒಂದು ಉದಾಹರಣೆ. ಇದನ್ನು ಕತೆ ಎಂದಾದರೂ, ಘಟನೆಗಳು ಎಂದಾದರೂ ಹೇಳಬಹುದು. ಒಟ್ಟಿನಲ್ಲಿ, ನಮ್ಮನ್ನು ಆವರಿಸುವ ಮತ್ತು ಓದಿಸಿಕೊಂಡು ಹೋಗುವ  ಮಲೆನಾಡು, ಕರಾವಳಿ ಪರಿಸರದ ಶಕ್ತಿಯುತ ವಿಷಯಗಳೇ ಇಲ್ಲಿವೆ. ಇಡೀ ಕೃತಿ ಓದಿದಾಗ ಇದರೊಳಗೆ ನಾವೂ ಇದ್ದೇವೆ ಎನ್ನುವಂತೆ ಭಾಸವಾಗುತ್ತದೆ. 

ವಿನಂತಿಗೆ ಶುಭಕರ್ ಎನ್ನುವ ಪ್ರಿಯಕರನಿದ್ದ. ಆತ ಬಿಟ್ಟುಹೋದ ನಂತರ ತಾಯಿಯಾಗುತ್ತಾಳೆ. ಆಗ ಹುಟ್ಟಿದವನೇ ಶುಭಾಂಗ್,. ಆತನಿಗೆ ತನ್ನ ಅಪ್ಪ ಯಾರೆಂದು ಗೊತ್ತಿಲ್ಲ. ಕೇಳಿದರೆ ತಾಯಿ ಹೇಳದೆ ೧೮ರ ಹರಯಕ್ಕೆ ಬಂದಾಗ ಹೇಳುವುದಾಗಿ ಸುಮ್ಮನಿರಿಸುತ್ತಾಳೆ. ೧೮ ವರ್ಷ ತುಂಬಿ ದಿನ ಅಪ್ಪನ ಕತೆ ಹೇಳುತ್ತಾಳೆ. ಐವಿಎಫ್ ಮೂಲಕ ನೀನು ಜನಿಸಿರುವುದಾಗಿಯೂ, ಅದಕ್ಕೆ ವೀರ್ಯವನ್ನು  ಆದಿತ ಶರ್ಮ ಎನ್ನುವವನು ನೀಡಿದ್ದಾಗಿ ವಿವರಿಸಿದಾಗಿ ಆತನನ್ನು ಹುಡುಕಿ ಶುಭಾಂಗ್ ಹೊರಡುವ ಕಥೆ ‘ಸೆಕೆಂಡ್ ವೈಫ್’. ಗಿರಿ ಶಿಖರಗಳ ಮೇಲೆ ಜನವಸತಿ ಪ್ರದೇಶದಿಂದ ದೂರವಿರುವಲ್ಲಿ ಗಾಂಜಾ ಮಾಫಿಯಾಗಳು  ಹೇಗೆ ಗಾಂಜಾವನ್ನು ಓಪನ್ ಆಗಿ ಬೆಳೆಸುತ್ತಾರೆ. ಅಲ್ಲಿಗೆ ಬೇರೆಯವರು ಬರದಂತೆ ಹೇಗೆ ದೆವ್ವದ ಕಥೆ ಕಟ್ಟುತ್ತಾರೆ. ಬಂದವರನ್ನು ಕೊಲೆ ಮಾಡಿ ಬಿಸಾಡುತ್ತಾರೆ ಎನ್ನುವುದನ್ನು  ‘ಅರಮನೆ ಬೆಟ್ಟದ ಕೊಳ್ಳಿ ದೆವ್ವಗಳು’ ಉದಾರಣೆ ಸಹಿತವಾಗಿ ವಿವರಿಸಲಾಗಿದೆ. 

 ಮೈಂದಾಡಿ ಬೆಟ್ಟದ ಕಾಲಭೈರವ ದೇವಸ್ಥಾನದಲ್ಲಿ  ಪ್ರತಿ ಅಮಾವಾಸ್ಯೆ ದಿನ ಅಗೋರಿಗಳು ಬಂದು ಪೂಜೆ ಸಲ್ಲಿಸುವ, ನರ್ತಿಸುವ ಬಗ್ಗೆ ಮಾಹಿತಿ ಪಡೆದಿದ್ದ ಲೇಖಕರು ಒಂದು ರಾತ್ರಿ ಸಮೀಪದ ರೆಸಾರ್ಟಿನಲ್ಲಿ ತಂಗುತ್ತಾರೆ. ಅಂದು ತಾನು ಅಲ್ಲಿಗೆ ಹೋದಂತೆ ತನ್ನ ಕತ್ತು ಹಿಡಿದು ಕೊಲೆ ಮಾಡುತ್ತಿರುವಂತೆ ಅದೇ ಕನಸು ಬೀಳುತ್ತದೆ. ಮನಸಿನಲ್ಲಿದ್ದು ಕನಸಾಗಿ ಪರಿವರ್ತನೆಯಾಗುತ್ತದೆ ಎನ್ನುವುದನ್ನು ‘ಮೈಂದಾಡಿ ಬೆಟ್ಟದ ಕಾಲಭೈರವ’ ವಿವರಿಸುತ್ತದೆ.  ೧೮ರ ಪ್ರಾಯದ ಸುಗಂಧಿಯನ್ನು ರಾಜೇಶ್ ಪೈ ಎನ್ನುವ ದುಡ್ಡಿನ ದಣಿ, ರೆಸಾರ್ಟ್ ಮಾಲಿಕ  ತನ್ನ ಕಾರಿನಲ್ಲಿ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ ನಂತರ ಅಮಾವಾಸ್ಯೆಯ ದಿನ ಅವಳ ಶವ ಸೀತಾನದಿಯಲ್ಲಿ ತೇಲುತ್ತದೆ. ರಾಜೇಶ್ ಪೈ  ಅದೇ ಬ್ರಿಜ್ ಬಳಿ ಸ್ಪೀಡ್ ನಲ್ಲಿ ಬಂದು ಕಾರು ಸಮೇತ ಸೀತಾ ನದಿಗೆ ಬಿದ್ದು ಸುಗಂಧಿ ಸತ್ತ ಸ್ಥಳದಲ್ಲಿಯೇ ಶವವಾಗಿ ತೇಲುವುದು, ಈ ಹಿಂದೆ ಸುಗಂಧಿಯ ವಿವಾಹ ನಿಶ್ಚಯವಾಗಿದ್ದ ಯುವಕನಿಗೆ ಮುಂದಿನ ಹುಣ್ಣಿಮೆಯ ದಿನವೇ ಹೆಣ್ಣು ಮಗು ಜನಿಸಿದಾಗ ಆಕೆಗೆ ಸುಗಂಧಿ ಎಂದು ಹೆಸರಿಡುವುದು ‘ಸುಗಂಧಿ ಮತ್ತೆ ಬಂದರು’ ಎನ್ನುವ ಕಥೆಯ ತಿರುಳು. 

ಮನುಷ್ಯ ಭಯದಲ್ಲಿ ಸಿಕ್ಕಿ ಬಿದ್ದರೆ ಕೊನೆಗೆ ಬದುಕುವುದಕ್ಕೂ ಭಯಗೊಳ್ಳುತ್ತಾನೆ.  ತಾಮಸದತ್ತ  ಸಾಗಿದಂತೆ ಹೆಚ್ಚು ದುಷ್ಟನಾಗುತ್ತಾನೆ ಮತ್ತು ಅದೇ ದುಷ್ಟತನಕ್ಕೆ ತಾನು ಬಲಿಯಾಗುತ್ತಾನೆ ಎನ್ನುವುದನ್ನು ಸತೀಶ್ ರೆಡ್ಡಿ ಎನ್ನುವ ಆಂಧ್ರದ ವಿಜಯವಾಡದವನ ವಂಚನೆಯ ಬಹುದೊಡ್ಡ ಜಾಲ ವಿವರಿಸುವ ‘ತಾಮಸ’, ಸಾವಿನ ಆಚೆಗಿನ ಕನಸಿನ ಲೋಕದಲ್ಲಿ ನಾವು ಹೇಗೆಲ್ಲ ವರ್ತನೆ ಮಾಡುತ್ತೇವೆ. ಹೇಗೆಲ್ಲ ಯೋಚನೆ ಮಾಡುತ್ತೇವೆ ಎನ್ನುವುದನ್ನು ವಿವರಿಸುವ ‘ಇದು ಸತ್ಯವಾ ಅಥವಾ ಅದೇ ಸತ್ಯವಾ’  ನಮ್ಮ ಬದುಕು ಮಾಯಾ ಕನಸಿನ ಲೋಕ. ಎಲ್ಲೋ ಹೇಗೂ ಬದುಕುತ್ತಿದ್ದೇವೆ ಎನ್ನುವುದರ ಬಗ್ಗೆ ವಿಚಾರ ಮಾಡುತ್ತಿರುತ್ತೇವೆಯೇ ವಿನಾ ನಿಜವಾದ ವಿಚಾರ ನಮಗೂ ಗೊತ್ತಿರುವುದಿಲ್ಲ ಎನ್ನುವುದನ್ನು ತಿಳಿಸುತ್ತದೆ.

‘ಮಾರಿಯಮ್ಮನ ಶಾಪ’ದಲ್ಲಿ  ಮಂಗಳೂರಿನ ಊರ್ವದಲ್ಲಿರುವ ಮಾರಿಯಮ್ಮನ ಶಾಪದ ಬಗ್ಗೆ ಜನ ಇವತ್ತಿಗೂ ಭಯ ಬೀಳುತ್ತಿರುವ ಬಗ್ಗೆ ಇದೆ. ಪವಾಡದಿಂದ ಬದುಕುಳಿಯುತ್ತಿರುವವರು, ಹಲವರು ಸಂಕ್ರಾಂತಿ ದಿನ ಸತ್ತಿರುವುದನ್ನು ಇಲ್ಲಿ ಉದಾಹರಿಸಿದರೆ,  ನಾವು ಮೂಲದಲ್ಲಿ ಹೇಗಿರುತ್ತವೆಯೋ ಹಾಗೆಯೇ ಬದುಕುವುದನ್ನು ಕಲಿಯಬೇಕು. ನಮ್ಮ ಹಿಂದಿನವರು ಹಾಕಿಕೊಟ್ಟ ವೃತ್ತಿಯನ್ನು ನಿಷ್ಠೆಯಿಂದ ಮಾಡಿದರೆ ಜೀವನ ಸುಂದರ. ಕೈಲಿ ಹಣ ಬಂತೆಂದು ಮೋಜು, ಮಸ್ತಿಗಿಳಿದರೆ ಬೇಗ ಬರಿದಾಗುತ್ತೇವೆ ಎನ್ನುವುದನ್ನು ‘ಚಾರ್ಲಿ ಮಗ ಕ್ಲಿಂಟನ್ ಕಥೆ’ ಹೇಳುತ್ತದೆ.

 ಬದುಕಿನಲ್ಲಿ ನಡೆದ ಅಚ್ಚರಿಯ ಘಟನೆ ‘ಸಗ್ರಿಯಲ್ಲಿ ಸಿಕ್ಕ ಕಾಯಿ ತ್ಯಾಮ’ದಲ್ಲಿದೆ. ತೆಂಗಿನ ಮರದಿಂದ ಕಾಯುತ್ತಿದ್ದ ತ್ಯಾಮ ಹಿಂದಿನ ವರ್ಷವೇ ಸತ್ತಿದ್ದರೂ ಲೇಖಕರು ಮತ್ತು ಅವರ ಮಿತ್ರರು ಸಗ್ರಿಯ ದೇವಸ್ಥಾನಕ್ಕೆ ಹೋದಾಗ ಆತ ಭೇಟಿಯಾದದ್ದನ್ನು  ಮಿತ್ರನಿಗೆ ಹೇಳಿದಾಗ  ಆತ ಕಳೆದ ವರ್ಷವೇ ತೀರಿಹೋಗಿದ್ದಾನೆ ಎನ್ನುವ ಮಿತ್ರ, ಪಕ್ಕದಲ್ಲಿ ಆತ್ಮಕ್ಕೆ ಚಿರಶಾಂತಿ ಕೋರುವ ಬ್ಯಾನರ್ ಕಾಣುವುದನ್ನು ವಿವರಿಸಲಾಗಿದೆ. ‘ಧರ್ಮಗ್ಲಾನಿ’ ಯಲ್ಲಿ  ಏಕಾಂಗಿಯಾಗಿ ಬದುಕುತ್ತಿದ್ದ ವ್ಯಕ್ತಿಗೆ  ಅವರ ಮಗ ತೋಟ,ಗದ್ದೆ ಅಂತ ಜೀವನವನ್ನು ಹಳ್ಳಿಯಲ್ಲಿ ಮಾಡುವುದು ಯಾಕೆ, ಇದೆಲ್ಲವನ್ನೂ ಮಾರಿ ಸಿಟಿಯಲ್ಲಿ ಒಂದು ಚೆನ್ನಾಗಿರುವ ಮನೆಯನ್ನು ತೆಗೆದುಕೊಂಡರಾಯಿತು ಎಂದು ಹೇಳಿದ್ದರಿಂದ 

ಬೇಸರಗೊಂಡ ಅವರು, ಈ ಮಣ್ಣಿನ ಮೇಲೆ, ಮನೆತನದ ಪರಂಪರೆಯ ಮೇಲೆ ಯಾರಿಗೂ ಹಕ್ಕಿಲ್ಲ. ನನಗೆ ಇದನ್ನು ಮಾರುವ ಹಕ್ಕು ಇಲ್ಲ ಎಂದು ಹೇಳಿ ಕೆಲವೇ ದಿನದಲ್ಲಿ ಸಾಯುತ್ತಾರೆ. ನಂತರ ಆ ಮನೆಯನ್ನು ಮಗ ಕೇರಳದ ಕ್ರಿಶ್ಚಿಯನ್ ಒಬ್ಬರಿಗೆ ಮಾರಾಟ ಮಾಡುತ್ತಾರೆ ಅಂದರೆ ಕುಲಕ್ಷಯದಿಂದ ಅನಾದಿಕಾಲದಿಂದ ಆಚರಿಸಿಕೊಂಡು ಬಂದ ಕುಲಕರ್ಮ ಹೇಗೆ ನಾಶವಾಗುತ್ತದೆ ಎನ್ನುವುದನ್ನು ವಿವರಿಸಲಾಗಿದೆ. 

  ಊರಿನ ಸಾವಿರಾರು ಜನರಿಗೆ ಮದ್ದು ಕೊಟ್ಟ, ಜಾನುವಾರುಗಳನ್ನು ಚಿಕಿತ್ಸೆಯ ಮೂಲಕ ಬದುಕಿಸಿದ  ಕೇರಳದ ಕೊಗ್ಗು ಸಾಹೇಬರ ಮಗ ಇಮ್ತಿಯಾಜ್ ಕಬಡ್ಡಿ ಪಟುವಾಗಿ ಎಲ್ಲರಿಗೂ ಬೇಕಾಗಿದ. ಈ ಹುಡುಗನಿಗೆ ಒಂದು ರಾತ್ರಿ ಪರ್ವೇಜ್ ಎನ್ನುವವ ಚಾಕು ಇರಿದು ಕೊಲೆ ಮಾಡಿದ. ಆದರೆ ಸಾಹೇಬರಲ್ಲಿ ತಮ್ಮ ಮಗನನ್ನು ಉಳಿಸಿಕೊಳ್ಳಲು ಔಷಧವಿರಲಿಲ್ಲ ಎನ್ನುವುದು ‘ಮಾನವೀಯತೆ ಕೊಲೆಯಾದ ಊರಿನಲ್ಲಿ’ ಎಂಬ ಕಥೆಯಲ್ಲಿದೆ. ಕರಾವಳಿಯ ಭೂತಾರಾಧನೆಯೊಂದರ ಕಥೆಯೇ ‘ಕುಲದೈವ’. ದೈವ ಮುನಿದರೆ ಏನೆಲ್ಲ ದುರಂತಗಳು ಘಟಿಸುತ್ತವೆ. ದೈವ ಒಲಿದರೆ ಮುರಿದುಬಿದ್ದ ಮನೆಯೂ ಎದ್ದುನಿಲ್ಲುತ್ತದೆ ಎನ್ನುವುದನ್ನು ಇದು ಕಟ್ಟಿಕೊಡುತ್ತದೆ.  ದೇವರನ್ನೇ ನಂಬದ ವ್ಯಕ್ತಿಯ ಮಗ ವೈಜ್ಞಾನಿಕ ವಿಧಾನದಿಂದಲೂ ಗುಣಪಡಿಸಲಾಗದ ರೋಗಕ್ಕೆ ತುತ್ತ್ತಾದಾಗ ಆಯುರ್ವೇದ ಮೊರೆ ಹೋಗಿ ಗುಣಪಡಿಸಿಕೊಂಡ ಕಥೆ ‘ಅನೂಹ್ಯ’. ಆಯುರ್ವೇದದ ಶಕ್ತಿಯನ್ನು ಬಿಂಬಿಸುವ ಸತ್ಯ ಘಟನೆಯಾಧಾರಿತ ಕಥೆ ಇದು. 

ಹೀಗೆ ನಮ್ಮನ್ನು ಆಕರ್ಷಿಸುವ ಮತ್ತು ನಮ್ಮ ಸುತ್ತಮುತ್ತಲಿನ ಘಟನೆಗಳನ್ನೇ ಆಧರಿಸಿ ಬರೆದ ಈ ಕೃತಿ ಮನಗೆಲ್ಲುವಲ್ಲಿ ಯಶಸ್ವಿಯಾಗುತ್ತದೆ.

- ದತ್ತಾತ್ರೇಯೆ ಹೆಗಡೆ 


Comments

Popular posts from this blog