ವಿಷ್ಣುವರ್ಧನ
...................
‘ವಿಷ್ಣುವರ್ಧನ’ ಇದು ಬರಹಗಾರ ಜೋಗಿ ಅವರ ಕೃತಿ. ಅವರು ತಾನು ಆಪ್ತವಾಗಿ ಕಂಡಂತೆ ನಟನ ಚಿತ್ರಣವನ್ನು ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.
ದಂತ ಕಥೆಗಳಲ್ಲಿಯೇ ಜೀವಂತವಾಗಿರುವ ನಟರು ಜನಮಾನಸದಲ್ಲಿ ಶಾಶ್ವತವಾಗಿ ನೆಲೆಯಾಗುತ್ತಾರೆ. ಆದರೆ ಅಂಥವರು ತೀರಾ ವಿರಳ. ನಟ ದಿವಂಗತ ವಿಷ್ಣುವರ್ಧನ್ ಅಂತಹವರಲ್ಲಿ ಒಬ್ಬರು. ವಿಷ್ಣುವರ್ಧನ ಅವರ ನಿಷ್ಕಳಂಕ ನಗು, ಬೇಷರತ್ ಪ್ರೀತಿ ಮತ್ತು ಗಾಢ ಮೌನ ಒಬ್ಬ ಪರಿಪೂರ್ಣ ನಟನಲ್ಲಿ ಮಾತ್ರ ಕಂಡುಬರುವ ಪ್ರಮುಖ ಅಂಶಗಳು. ಕಲಾವಿದ ಮೂಲತಃ ಅಂತರ್ಮುಖಿ ಆಗಿರುತ್ತಾನೆ. ಏನನ್ನು ಗಳಿಸಿದರೂ, ಏನನ್ನು ಉಳಿಸಿದರೂ ಅದನ್ನು ಸಮಾಜದ ಕೈಯಲ್ಲಿ ಕೊಟ್ಟು ತೆರಳುತ್ತಾನೆ. ಅವನ ಕಾಣಿಕೆಯನ್ನು ಮೆಚ್ಚಿ ಜನರು ಅಥವಾ ಅಭಿಮಾನಿಗಳು ಹುಟ್ಟಿಕೊಳ್ಳುತ್ತಾರೆ. ಒಬ್ಬ ಪರಿಪೂರ್ಣ ನಟನಾಗಬೇಕಾದರೆ ಇಂಥ ಗುಣಗಳು ಪ್ರಮುಖವಾಗುತ್ತವೆ.
ವಿಷ್ಣು ಅವರನ್ನು ಮೆಚ್ಚಿಕೊಳ್ಳಲು ಪ್ರಮುಖವಾದ ಕಾರಣವೆಂದರೆ, ಅವರು ನಟಿಸುತ್ತಿದ್ದ ವೈವಿಧ್ಯಮಯ ಸಿನಿಮಾಗಳು, ಕಾಣಿಸಿಕೊಳ್ಳುತ್ತಿದ್ದ ರೀತಿ, ಯಾರ ಜೊತೆಗೂ ಭಿನ್ನಾಭಿಪ್ರಾಯವನ್ನು ಮಾಡಿಕೊಳ್ಳದೆ ಹಿರಿಯ ಮತ್ತು ಕಿರಿಯ ನಟರನ್ನು ಅತ್ಯಂತ ಗೌರವದಿಂದ ಕಾಣುತ್ತಾ, ಕಷ್ಟಕಾಲದಲ್ಲಿ ಅವರಿಗೆ ನೆರವಾಗುತ್ತಾ, ಅವರನ್ನು ಪ್ರೋತ್ಸಾಹಿಸುವ ವಿಶೇಷ ಗುಣಗಳಿಂದ. ಜೊತೆಗೆ ಬಹಳ ಅಕ್ಕರೆಯಿಂದ ಅವರು ಅಂಟಿಕೊಳ್ಳುತ್ತಿದ್ದರು. ಯಾವತ್ತೂ ಎಷ್ಟು ಹಣ ಸಿಗುತ್ತದೆ ಎಂದು ತಿಳಿದು ಸಿನಿಮಾ ಒಪ್ಪಿಕೊಂqವರು ಅವರಲ್ಲ. ಅವರು ಒಪ್ಪಿಕೊಂಡ ಸಿನಿಮಾಗಳು ಹಾಗಂತ ಶ್ರೇಷ್ಠ ಗುಣಮಟ್ಟದ್ದು ಅಲ್ಲ, ಸುಮ್ಮನೆ ಎಲ್ಲರೂ ಎಲ್ಲರ ಸಿನಿಮಾವನ್ನು ಒಪ್ಪಿಕೊಳ್ಳುವ ಗುಣವೂ ಇತ್ತು. ಆತ್ಮೀಯತೆ, ಮಿತ್ರತ್ವಕ್ಕೆ ಅಪಾರವಾದ ಬೆಲೆಯನ್ನು ಕೊಡುತ್ತಿದ್ದುದೇ ಇದಕ್ಕೆ ಕಾರಣವಾಗಿತ್ತು.
ಶೂಟಿಂಗ್ ಸಂದರ್ಭದಲ್ಲಿ ಬಂದವರೊಂದಿಗೆ ಹರಟುತ್ತ ಕುಳಿತುಕೊಳ್ಳುತ್ತಿದ್ದರು. ದೊಡ್ಡ ನಟರಂತೆ ಪ್ರತ್ಯೇಕವಾಗಿ ಊಟ ಮಾಡದೆ, ಉಳಿದ ಕಲಾವಿದರ, ಕ್ಯಾಮೆರಾ ಮೆನ್‌ಗಳ, ಜೊತೆ ಕುಳಿತು, ಪ್ರತಿಯೊಬ್ಬರನ್ನೂ ವಿಚಾರಿಸಿ ಮಾತನಾಡುತ್ತ ಊಟ ಮಾಡುತ್ತಿದ್ದರು. ಈ ರೀತಿ ಇತರರನ್ನು ಪ್ರೀತಿಸುವ ಗುಣ ಕನ್ನಡದ ಬೇರಾವ ನಟನಲ್ಲೂ ವಿಶೇಷವಾಗಿ ಕಂಡುಬರುತ್ತಿಲ್ಲ. ಎಲ್ಲರೊಂದಿಗೂ ಮುಕ್ತವಾಗಿ ಮಾತನಾಡುತ್ತಿದ್ದರು. ಅದೇ ರೀತಿ ಜಗಳ ಮಾಡುವದಿದ್ದರೂ ಎಲ್ಲರೆದುರೇ ಮಾಡುತ್ತಿದ್ದರು. ಅದರಲ್ಲಿ ಪ್ರೀತಿ ಇರುತ್ತಿತ್ತು. ಗೆಳೆತನದಲ್ಲೂ ತುಂಟತನವನ್ನು ಅವರೆಂದೂ ಮರೆತವರಲ್ಲ.
ತಮ್ಮ ಸಿನಿಮಾ ಎಷ್ಟೇ ಜನಪ್ರಿಯತೆ ಗಳಿಸಲಿ, ನೆಲಕಚ್ಚಲಿ ಅವರು ಅದರಿಂದ ವಿಚಲಿತರಾಗುತ್ತಿರಲಿಲ್ಲ. ಚಿತ್ರ ಜನಪ್ರಿಯತೆಯನ್ನು ತಂದುಕೊಟ್ಟರೂ ಅವರು ಬದಲಾಗುತ್ತಿರಲಿಲ್ಲ. ‘ಚಿತ್ರರಂಗ ಎನ್ನುವುದು ಒಂದು ಬಣ್ಣದ ಬೆಳಕಿನ ಸಂತೆ. ಇಲ್ಲಿ ಯಾರೂ ಶಾಶ್ವತ ಅಲ್ಲ. ಬರುತ್ತಿರುತ್ತಾರೆ, ಹೋಗುತ್ತಿರುತ್ತಾರೆ. ಆದರೆ ಬಂದು ಹೋಗುವ ನಮಗೆ ಒಂದು ವಿಚಾರ ಸ್ಪಷ್ಟವಾಗಿ ಗೊತ್ತಿರಬೇಕು. ಕಾಲ ಯಾರನ್ನು ಎಲ್ಲಿಡಬೇಕೋ ಅಲ್ಲಿಡುತ್ತದೆ. ಯಾವತ್ತೂ ನಮ್ಮ ಎಂಟ್ರಿ ಡ್ಯಾಶಿಂಗ್ ಆಗಿರಬೇಕು. ಎಕ್ಸಿಟ್ ಗ್ರೇಸ್‌ಫುಲ್’ ಎಂದು ಅವರು ಹೇಳುತ್ತಿದ್ದರು.
ಅಂಬರೀಶ್ ಜೊತೆಗಿನ ಅವರ ಸ್ನೇಹ ಅಪೂರ್ವವಾದುದು. ಅವರಿಬ್ಬರಿದ್ದರೆ ನೂರಾನೆಯ ಬಲ ಬಂದಂತಿರುತ್ತಿತ್ತು. ಸ್ನೇಹದ ಸರಪಳಿಯಲ್ಲಿ ವಿಷ್ಣುವರ್ಧನ್ ಅನೇಕರನ್ನು ಬಂಧಿಸಿದ್ದರು. ಸ್ನೇಹಲೋಕ ಎಂಬ ಕ್ರಿಕೆಟ್ ತಂಡವನ್ನೇ ಕಟ್ಟಿ ಜಯನಗರದ ಕ್ರಿಕೆಟ್ ಮೈದಾನದಲ್ಲಿ ಪ್ರತಿವರ್ಷ ಪಂದ್ಯಗಳನ್ನು ಏರ್ಪಡಿಸುತ್ತಿದ್ದರು. ಎಲ್ಲರನ್ನೂ ಒಟ್ಟಿಗೆ ಸೇರಿಸಿದ ಮೊದಲ ಪ್ರಯತ್ನವೇ ವಿಷ್ಣುವರ್ಧನ್ ಅವರ ಸ್ನೇಹಲೋಕ. ವಿಷ್ಣುವರ್ಧನ್ ಅವರಿಗೆ ಮೌನವೇ ಪರಮಪ್ರಿಯವಾಗಿತ್ತು. ಆದರೆ ಅದಕ್ಕೆ ಕಾರಣ ಭsಯವಲ್ಲ.
‘ಚಿತ್ರ ನಿರ್ದೇಶಕ ಹೇಳಿದಂತೆ ಮಾಡುವುದಷ್ಟೇ ತನ್ನ ಕೆಲಸ. ನನ್ನನ್ನು ಚೆನ್ನಾಗಿ ಬಳಸಿಕೊಂಡರೆ ನಾನು ಚೆನ್ನಾಗಿ ನಟಿಸುತ್ತೇನೆ’ ಎಂದು ಹೇಳುತ್ತಿದ್ದ ಅವರು, ಯಾವತ್ತೂ ತನ್ನ ಬಳಿಗೆ ಬಂದ ನಿರ್ದೇಶಕರ ಬಳಿ ಚಿತ್ರದ ಕಥೆ ಏನು? ಹೇಗೆ ಮಾಡುತ್ತೀರಿ? ಸಂಭಾಷಣೆ ಏನು, ಸಂಭಾವನೆ ಎಷ್ಟು ಎನ್ನುವುದನ್ನು ಕೇಳುತ್ತಿರಲಿಲ್ಲ. ಇಷ್ಟವಾದರೆ ಒಪ್ಪಿಕೊಂಡು ಶೂಟಿಂಗ್‌ಗೆ ಹೋಗುತ್ತಿದ್ದರು. ಏಕೆಂದರೆ ತಮ್ಮೆದುರು ಬಂದ ನಿರ್ದೇಶಕರ ಪ್ರತಿಭೆ ಬಗ್ಗೆ ಅವರಿಗೆ ಅಪಾರವಾದ ಗೌರವವಿರುತ್ತಿತ್ತು. ತಾನು ಒಬ್ಬ ಮಹಾನ್ ನಟ ಎಂದವರು ಯಾವತ್ತೂ ಅಂದುಕೊಂಡಿರಲಿಲ್ಲ. ತುಂಬಾ ಸಂಕೋಚದಿಂದಲೇ ತಮ್ಮ ಚಿತ್ರ ಮತ್ತು ಪಾತ್ರಗಳ ಬಗ್ಗೆ ಮಾತನಾಡುತ್ತಿದ್ದರು.
ವಿಷ್ಣುವರ್ಧನ್ ನಿರ್ದೇಶಕರ ನಟ ಎಂದು ಕರೆಯಲ್ಪಡುತ್ತಾರೆ ನಿಜ. ಆದರೆ ಅವರ ಪ್ರತಿಭೆಯನ್ನು ಅರ್ಥ ಮಾಡಿಕೊಂಡ ನಿರ್ದೇಶಕರ ಸಂಖ್ಯೆ ಹೆಚ್ಚಿರಲಿಲ್ಲ. ಅವರ ವೃತ್ತಿ ಜೀವನದಲ್ಲಿ ಅವರಿಗೆ ಅತ್ಯುತ್ತಮ ಸಿನಿಮಾಗಳನ್ನು ಕೊಟ್ಟವರ ಪಟ್ಟಿಯಲ್ಲಿ ಪುಟ್ಟಣ್ಣ ಕಣಗಾಲ್ ಮೊದಲಿಗರು. ನಂತರ ಕಾಣಿಸುವ ಹೆಸರು ರಾಜೇಂದ್ರ ಸಿಂಗ್ ಬಾಬು, ಕೆ ಎಸ್ ಎನ್ ಸ್ವಾಮಿ, ಕೆ ಎಸ್ ಆರ್ ದಾಸ್, ಎಚ್ ಆರ್ ಭಾರ್ಗವ, ದಿನೇಶ್ ಬಾಬು, ಪಿ ವಾಸು, ಎಸ್ ನಾರಾಯಣ್ ಮುಂತಾದವರು. ‘ನನಗೆ ನಾನು ಎಲ್ಲಿ ಚೆನ್ನಾಗಿ ನಟಿಸಿದ್ದೇನೆ ಎನ್ನುವುದು ಗೊತ್ತಿರುತ್ತದೆ. ತಪ್ಪು ಮಾಡಿದ್ದೇನೆ ಎನ್ನುವುದನ್ನು ಬೇರೆಯವರಿಂದ ಕೇಳಿ ತಿಳಿದುಕೊಳ್ಳಬೇಕಾಗುತ್ತದೆ’ ಸಿನಿಮಾದ ಸಂಪಾದನೆ ನಿರ್ಮಾಪಕರಿಗೆ ಸಂಬಂಧಿಸಿದ ಗೆಲುವು. ನಿರ್ದೇಶಕರಿಗೆ ಸಲ್ಲಬೇಕು. ಸೋಲಿನ ಜವಾಬ್ದಾರಿ ಮಾತ್ರ ನಟನದ್ದು’ ಎಂದು ಅವರು ನಂಬಿದ್ದರು.
ಪ್ರಶಸ್ತಿ ವಿಚಾರದಲ್ಲಿ ಕಟ್ಟುನಿಟ್ಟು:
ಪ್ರಶಸ್ತಿ ವಿಚಾರದಲ್ಲೂ ಬಹಳ ಕಟ್ಟುನಿಟ್ಟಿನ ಮನುಷ್ಯ ಅವರಾಗಿದ್ದರು. ಪ್ರಶಸ್ತಿ ಅರ್ಹರಿಗೆ ಬರಬೇಕೇ ಹೊರತು ಯಾರದ್ದೋ ಶಿಫಾರಸಿನಿಂದ ಬರಬಾರದು. ಶಿಫಾರಸ್ಸಿನಿಂದ ಬಂದರೆ ಆ ವ್ಯಕ್ತಿ ತಾನು ಸಾಯುವ ತನಕ ನಾನೇ ಪ್ರಶಸ್ತಿ ಕೊಡಿಸಿದೆ ಎಂದು ಹೇಳಿಕೊಂಡು ಓಡಾಡುತ್ತಿರುತ್ತಾನೆ. ಅಂತಹ ಪ್ರಶಸ್ತಿಯನ್ನು ಪಡೆಯುವುದು ಸಲ್ಲದು. ಯಾರೋ ಹೇಳಿ ಕೊಡಿಸುವ ಪ್ರಶಸ್ತಿಗಳಲ್ಲಿ ತನಗೆ ಆಸಕ್ತಿ ಇಲ್ಲ ಎನ್ನುವ ಮೂಲಕ ತಮಿಳುನಾಡಿನ ಪ್ರತಿಷ್ಠಿತ ‘ಸಿನಿಮಾ ಎಕ್ಸ್‌ಪ್ರೆಸ್’ ಪತ್ರಿಕೆಯ ಪ್ರಶಸ್ತಿಯನ್ನು ತಿರಸ್ಕರಿಸಿದ್ದರು. ಜೊತೆಗೆ ವಿರೋಧಿಸುತ್ತಿದ್ದರು. ಒಮ್ಮೆ ವಾರ್ಷಿಕ ಚಲನಚಿತ್ರ ಪ್ರಶಸ್ತಿಯನ್ನು ವಾರ್ತಾ ಇಲಾಖೆ ವಿಷ್ಣುವರ್ಧನ್ ಮತ್ತು ರಮೇಶ್‌ಗೆ ಹಂಚಿಬಿಟ್ಟಿತ್ತು. ಇದನ್ನು ತಿರಸ್ಕರಿಸಿದ ವಿಷ್ಣುವರ್ಧನ್ ರಮೇಶ್‌ಗೆ ಈ ಪ್ರಶಸ್ತಿಯನ್ನು ಕೊಟ್ಟುಬಿಡಿ. ಇಬ್ಬರನ್ನೂ ಅವಮಾನಿಸಬೇಡಿ ಎಂದು ಹೇಳಿ, ತಾವು ಪ್ರಶಸ್ತಿ ಪಡೆದಿರಲಿಲ್ಲ.
ಅವರು ಸಾಮಾನ್ಯ ಜನರೊಂದಿಗೆ ಬೆರೆಯಬಲ್ಲ ಗುಣದವರು. ತಾನು ಮೇರು ನಟ ಎಂಬ ಭಾವನೆ ಇರಲಿಲ್ಲವಾಗಿತ್ತು. ತಮಗಿಷ್ಟ ಇಲ್ಲದವರನ್ನು ಅವರ ನಿಷ್ಠ್ಠುರವಾಗಿ ದೂರಸರಿಸುತ್ತಿದ್ದರು. ಸಾಮಾನ್ಯವಾಗಿ ಯಾರಿಂದಲೂ ಪ್ರಭಾವಿತರಾಗುತ್ತಿರಲಿಲ್ಲ. ಸಿದ್ಧಾಂತ ಮತ್ತು ವೇದಾಂತ ಎರಡು ಬೇರೆ ಬೇರೆ. ಸಿದ್ಧಾಂತ ಜೀವನದು, ವೇದಾಂತ ಬದುಕಿನ ನಂತರದ್ದು ಎಂದು ನಂಬಿದ್ದರು. ಅವರನ್ನು ಬದಲಾಯಿಸಿದವರು ಇಬ್ಬರು ಮಹಾನೀಯರು ಮಾತ್ರ -ಒಬ್ಬರು ವಿದ್ಯಾನಂದ ಶೆಣೈ ಮತ್ತೊಬ್ಬರು ಬನ್ನಂಜೆ ಗೋವಿಂದಾಚಾರ್ಯ. ಇವರ ಪ್ರಭಾವ ವಿಷ್ಣುವರ್ಧನ್ ಮೇಲೆ ದಟ್ಟವಾಗಿತ್ತು. ಅವರ ಉಪನ್ಯಾಸದ ಕೆಸೆಟ್‌ಗಳನ್ನು ಮನೆಯಲ್ಲಿದ್ದಾಗ ಆಲಿಸುತ್ತಿದ್ದರು. ಮನಮುಟ್ಟುವಂತೆ ಇದ್ದ ಈ ಇಬ್ಬರು ಮಹಾನೀಯರ ಪ್ರವಚನಗಳನ್ನು ಪಡೆಯುತ್ತಿದ್ದರು. ತಮ್ಮ ಜೀವನದ ಕೊನೆಯ ದಿನಗಳಲ್ಲಿ ಹೆಚ್ಚು ಮೌನಿಯಾಗಿರುತ್ತಿದ್ದರು. ಏನೋ ಗುಟ್ಟನ್ನು ಬಚ್ಚಿಟ್ಟುಕೊಂಡವರಂತೆ ಕಾಣಿಸುತ್ತಿದ್ದರು. ನಾನು ಹೇಳುವ ಸತ್ಯವನ್ನು ಯಾರೂ ಅರಗಿಸಿಕೊಳ್ಳುವುದಿಲ್ಲ. ತುಂಬಾ ಮಂದಿಗೆ ನೋವಾಗುತ್ತದೆ. ನನ್ನ ರಹಸ್ಯ ನನ್ನೊಂದಿಗೇ ನಾಶವಾಗಲಿ ಎನ್ನುತ್ತಿದ್ದರು. ಕೊನೆಗೂ ಹಾಗೆಯೇ ಆಯಿತು.
- ದತ್ತಾತ್ರೇಯ ಹೆಗಡೆ, ಶಿವಮೊಗ್ಗ
.......................

Comments
Post a Comment