ವಿಶಾಲ ದೃಷ್ಟಿ ಬೆಳೆಸುವ  

‘ಬೆಳುದಿಂಗಳು’


 ನವೋದಯ ಯುಗದ ಪ್ರಮುಖ ಪ್ರಬಂಧಕಾರರಲ್ಲಿ ವಿದ್ವಾಂಸರಾಗಿದ್ದ  ದಿವಂಗತ  ವಿ. ಸೀ. (ವಿ. ಸೀತಾರಾಮಯ್ಯ) ಒಬ್ಬರು. ಅವರ ಪ್ರಬಂಧಗಳು ಕೊಡುವ ಸಂತೋಷ ಅಪರಿಮಿತವಾದದ್ದು, ಸೊಗಸಾದದ್ದು. ಅದರ ಶೈಲಿಯೇ ನಮ್ಮನ್ನು ಆಕರ್ಷಿಸುತ್ತದೆ. ಪ್ರಸ್ತುತ ಪ್ರಬಂಧ ‘ಬೆಳುದಿಂಗಳು’ ಇದರಲ್ಲಿ ಹೊಸ ದೃಷ್ಟಿಯಿಂದ ನಮ್ಮ ಸುತ್ತಲಿನ ಬದುಕನ್ನು ಮತ್ತು ಚಿರಪರಿಚಿತ ಎಂದುಕೊಂಡ ವಸ್ತ್ತುಗಳನ್ನು ಚಿತ್ರಿಸಿದ್ದಾರೆ. ಇದರಲ್ಲಿ ಯಾವುದೇ ಕ್ರಾಂತಿಕಾರಿ ಮನೋಭಾವವಿಲ್ಲ. ನಾವು ನಮ್ಮನ್ನು ನಾವೇ ನೋಡಿಕೊಂಡು ನಗಬಲ್ಲ, ಬದುಕನ್ನು ಗಾಢವಾಗಿ ಪ್ರೀತಿಸುವ, ಸುಸಂಸ್ಕೃತ ಚೇತನದ ಸಹವಾಸದಲ್ಲಿರುವ ವಿಷಯಗಳನ್ನು  ಕಾಣಬಹುದು.

 ಇಲ್ಲಿರುವ ಎಲ್ಲಾ ೧೦ ಪ್ರಬಂಧಗಳು ನಮ್ಮನ್ನು ಓದಿಸಿಕೊಂಡು ಹೋಗುವುದಲ್ಲದೆ ಮುಗುಳ್ನಗುವಂತೆ ಮಾಡುತ್ತವೆ. ನಮಗೆ ಗೊತ್ತಿರುವ ವಿಷಯಗಳೇ ಇಲ್ಲಿನ ಕಥಾವಸ್ತು. ಅವುಗಳನ್ನು ವಿನೋದಮಯವಾಗಿ, ಚೆಂದವಾಗಿ,  ನವಿರಾದ ಹಾಸ್ಯ, ಸರಳ ಶೈಲಿಯಲ್ಲಿ ನೇಯ್ದಿದ್ದಾರೆ. ಇದರ ಓದಿನಿಂದ ಮನಸ್ಸು ನಮ್ರತೆಯನ್ನು, ವಿಶಾಲ ದೃಷ್ಟಿಯನ್ನು ಪಡೆದುಕೊಳ್ಳುತ್ತದೆ. 

 ‘ಮೈಸೂರು ರುಮಾಲು’ ಪ್ರಬಂಧದಲ್ಲಿ ಅದರ ವಿಶೇಷತೆ, ಅದರಿಂದ ಸಿಗುವ ಗತ್ತು, ಗೈರತ್ತು ವಿವರಿಸಿದ್ದಾರೆ.  ಬೇರೆ ಬೇರೆ ರಾಜ್ಯಗಳಲ್ಲಿನ ರುಮಾಲಿಗೂ ಮೈಸೂರಿನ ಪೇಟಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಮೈಸೂರು ಪೇಟ ಧರಿಸುವುದರಿಂದ ಸಿಗುವ ಸ್ಥಾನಮಾನ ಮಹತ್ತರದ್ದು. ಈ ಪೇಟವನ್ನು ಕೆಡಿಸದೆ ಯಾವಾಗಲೂ ಸರಿಯಾಗಿ ಕಟ್ಟುತ್ತೇನೆ ಎನ್ನುವುದು ಅಸಾಧ್ಯ. ಹಾಗೆಯೇ, ಕಟ್ಟುತ್ತೇನೆ ಎಂದು ಹೇಳಬಲ್ಲ ಗಂಡನ್ನು ತಾನು ಇದುವರೆಗೆ ನೋಡಿಲ್ಲ. ಮೈಸೂರು ರುಮಾಲನ್ನು ಕಟ್ಟುವವನು ಕೈ ಪಳಗಿಸಿಕೊಂಡಿರಬೇಕು. ತಲೆಯ ಮೇಲೆ ಈ ರುಮಾಲು ಇದ್ದರೆ ಎಲ್ಲರೂ ಹತ್ತಿರ ಬನ್ನಿ ಎನ್ನುತ್ತಾರೆ. ಅಂಗಡಿ, ಬ್ಯಾಂಕಿನಲ್ಲಿ ಸಾಲ ಹುಟ್ಟುತ್ತದೆ ಎಂದು ಚಟಾಕಿ ಹಾರಿಸುತ್ತಾರೆ. ಜಿಲೇಬಿಯ ಪಾಕಕ್ಕೆ ಹೇಗೆ ಒಂದು ಹದವಿದೆಯೋ, ಪಕ್ವಾನ್ನಕ್ಕೆ ಹೇಗೆ ಪಾಕವಿದೆಯೋ ಹಾಗೆಯೇ ಮೈಸೂರು ಪೇಟಾಕ್ಕೂ ಒಂದು ಹದವಿದೆ ಎಂದು ವಿವರಿಸುತ್ತಾರೆ. 

‘ಕಾಯಿಲೆಗಳು’  ಪ್ರಬಂಧದಲ್ಲಿ ಕಾಯಿಲೆಗಳು ನಮ್ಮ ಸೌಜನ್ಯವನ್ನು ರಕ್ಷಿಸುತ್ತವೆ. ಕಚೇರಿಗೆ ಹೋಗಿ ದುಡಿದು ಸಂಬಳ ತರುವುದು ತಪ್ಪುತ್ತದೆ. ನಾಲ್ಕು ದಿನ  ಮಲಗಿರುವವರ ವಿಷಯದಲ್ಲಿ ಜನರು ಆದರ ತೋರಿಸುತ್ತಾರೆ.  ಕಾಯಿಲೆಗಳಿಂದ ನಿಮ್ಮ ಮನಸ್ಸು ನೋಯುವುದೆಂದು ನಿಮ್ಮೆದುರಿಗೆ ಸಂತೋಷದ ಮಾತನಾಡಿ ಹೊಂದಿಕೊಂಡು ಹೋಗುತ್ತಾರೆ. ಕಾಯಿಲೆ ಮೂಲಕ ವಿಶೇಷವಾಗಿ ಲೋಕದ ಜನರ ನಿಜವಾದ ಪ್ರೀತಿ, ವಿಶ್ವಾಸ ದೊರೆಯುತ್ತದೆ. ಕಾಯಿಲೆ ಬಂದು ಮಲಗಿದಾಗ ಜನರು ನಮ್ಮನ್ನು ನೋಡಲು ಬರುವಾಗ ಹಣ್ಣು ಹಂಪಲುಗಳ ರಾಶಿ ತಂದು ಕೊಡುವುದು ವಿಶೇಷವೆನಿಸುತ್ತದೆ. ಮೃದುವಾಗಿ ಪ್ರೀತಿಯಿಂದ ಮಾತನಾಡುತ್ತಾರೆ. ‘ಕೆಲವರ ಮನೆಯಲ್ಲಿ ಕಾಯಿಲೆಯು ಮನೆಯ ಮನುಷ್ಯರಂತೆ ಬದುಕಿರುತ್ತದೆ’ ಎಂದು ವಿನೋದವಾಗಿ ವಿವರಿಸುತ್ತಾರೆ

‘ಬೆಳುದಿಂಗಳು’ ನಲ್ಲಿ ಬೆಳುದಿಂಗಳು ಒಂದೊಂದು ಋತುವಿನಲ್ಲಿ ಒಂದೊಂದು ಬಗೆಯಲ್ಲಿ ಚೆಂದವಾಗಿರುತ್ತದೆ. ಅದಕ್ಕೆ  ಸಮನಾದ ಶಾಂತಿ, ಸುಖ, ಚೆಲುವು, ಸವಿಗಳನ್ನು ಕೊಡುವವರು ಇನ್ಯಾವುದೂ ಇಲ್ಲ. ಕೆರೆ, ಕಾಲುವೆ, ಬೆಟ್ಟ ಎಲ್ಲದರ ಮೇಲೂ ಬೆಳುದಿಂಗಳು ಬಿದ್ದಾಗ ಉತ್ಸವದಂತೆ ಕಾಣುತ್ತದೆ. ಪ್ರತಿ ಬೆಳುದಿಂಗಳ ದಿನವೂ ಜನರ ಕಣ್ಣಿಗೆ ಚಂದ್ರನ ಮೆರವಣಿಗೆ ಕಣ್ಣಿಗೆ ಕಟ್ಟುತ್ತದೆ. ರಾತ್ರಿಯ ಕತ್ತಲೆಯನ್ನು ನಗಿಸಿ ಅರಳಿಸುವ ಮಹಾಸತ್ವ ಚಂದ್ರನಿಗೆ ಮಾತ್ರ ಇದೆ. ತಿಂಗಳನ್ನು ಕಣ್ಣಾರೆ ನೋಡುವವರಿಗೆ  ಅದು ಒಂದು ಅಮೃತಧಾರೆಯ ಬೆಳಕು ಸೂಸುವ ಅಮೃತಾವರಣ. ಇದು ಸಾವಿರಾರು ಜನರ ಹೃದಯವನ್ನು ತೆರೆಸುತ್ತದೆ  ಎಂದು ವರ್ಣಿಸುತ್ತಾರೆ. 

‘ಯಾವಾಗಲೂ ಓದೇ?’ ಪ್ರಬಂಧದಲಿ, ಓದುವುದು ತಪ್ಪಲ್ಲ. ಮನುಷ್ಯನಾಗಿ ಬಾಳಬೇಕಾದರೆ ತಕ್ಕಷ್ಟು ಓದು ಬೇಕು. ಇನ್ನೇನನ್ನೂ ಮಾಡದೆ ಓದುವುದೇ ಕೆಲಸ ಆಗಬಾರದು. ಅದು ಯೋಗ್ಯವಾದುದಲ್ಲ. ಕೆಲವರು ಸದಾ ಕೈಯಲ್ಲಿ ಪುಸ್ತಕ ಹಿಡಿದಿರುತ್ತಾರೆ. ಹೋದಲ್ಲಿ ಬಂದಲ್ಲಿ ಓದುತ್ತಾರೆ.  ಅವರನ್ನು ಕಂಡರೆ ಎಲ್ಲರಿಗೂ ಗೌರವ ಉಂಟಾಗುತ್ತದೆ. ಆದರೆ ಓದಿನ ಜೊತೆಗೆ ಯೋಚನೆಯೂ ಕುದುರಬೇಕು. ಓದುತ್ತ ಕುಳಿತು ಕರ್ತವ್ಯ ಮರೆಯಬಾರದು ಎಂಬ ಸಲಹೆ ಕೊಡುತ್ತಾರೆ.  ‘ದೋಸೆ’ ಎಂಬ ಪ್ರಬಂಧದಲ್ಲಿ ಮೆಚ್ಚಿನ ಹೋmಲಿಗೆ ಹೋಗಿ ದೋಸೆ ತಿನ್ನುವುದೇ ನಿಜವಾದ ಸಂಭ್ರಮ. ಬಿಸಿಯಾದ ಹದದಲ್ಲಿ ಅದನ್ನು ತಿನ್ನಬೇಕು. ಮನೆಯಲ್ಲಿ ಮಾಡಿದ ದೋಸೆ ಹೋಟೆಲ್ ದೋಸೆಯ ರುಚಿಗೆ ಸಮವಲ್ಲ. ‘ದೋಸೆ ಮಾಡಲು ಬಾರದ ಹೆಣ್ಣಿನ ಕೈ ಯಾವ ಸಂಸಾರಕ್ಕೂ ಬರುವುದಿಲ್ಲ’. ಅಡುಗೆ ಮನೆಯಲ್ಲಿ ದೋಸೆ ಹೊಯ್ದ ‘ಚೊಂಯ್’ ಎಂಬ ಶಬ್ದ ಜಗುಲಿಯಲ್ಲಿ ಕೂತರೂ ಮೂಗು ಅರಳಿಸುತ್ತದೆ. ಮೈಯೆಲ್ಲಾ ಪುಳಕವಾಗುವಂತೆ ಮಾಡುತ್ತದೆ. ಅದಕ್ಕೆ ಚಟ್ನಿಪುಡಿ, ತೆಂಗಿನಕಾಯಿ ಚಟ್ನಿ, ಆಲು ಪಲ್ಯ ಇದ್ದರೆ ಇನ್ನಷ್ಟು ರುಚಿ ಹೆಚ್ಚು. ಬೇಸರ, ವೈರಾಗ್ಯ, ಸಿಟ್ಟು ಮೊದಲಾದ  ಮನೋರೋಗಕ್ಕೆ ಮಸಾಲೆ ದೋಸೆಯ ಮದ್ದು ಎಂದು ಹಾಸ್ಯವಾಗಿ ಹೇಳುತ್ತಾರೆ.

 ‘ಹೆಣ್ಣು’  ಪ್ರಬಂಧದಲ್ಲಿ ಹೆಣ್ಣಿಲ್ಲದ ಮನೆ ಮನೆಯೇ ಅಲ್ಲ.  ಹೆಣ್ಣಿನಿಂದಲೇ ಮನೆ. ತಾಯಿ, ಹೆಂಡತಿ, ತಂಗಿ, ಮಗಳು ಇರಬೇಕು. ಇವರೇ ಸಂಸಾರದ ಪ್ರಾಣ. ಹೆಂಡತಿ ಇದ್ದರೂ ಹೆಂಡತಿಯೇ ಸಂಸಾರ. ಇದನ್ನು ನಿಭಾಯಿಸಿದರೆ ಸುಖ ಸಂಸಾರ. ಹೆಣ್ಣೆಂದರೆ ಅಡಿಗೆಯವಳು ಎಂದರ್ಥವಲ್ಲ. ಆದರೆ ಆಕೆ ಮಾಡಿದ ಅಡಿಗೆ ಪಕ್ವವಾದುದು. ತಾಳಿ ಕಟ್ಟಿದ ಹೆಣ್ಣಿನ ತಂಟೆಗೆ ಯಾರೂ ಹೋಗುವುದಿಲ್ಲ. ಹೆಣ್ಣೆಂದರೆ ಚೆಲುವು, ಸಂಸ್ಕಾರ, ನಯ, ಮೃದು ಮತ್ತು ಲಲಿತತೆ. ಹೆಣ್ಣು ಅಬಲೆ ಎನ್ನುವುದನ್ನು ಒಪ್ಪಲಾಗದು ಎಂದು ವಿವರಿಸುತ್ತಾರೆ.

 ‘ಮಳೆ’  ಪ್ರಬಂಧದಲ್ಲಿ ಮೇ ತಿಂಗಳ ಮೂರನೇ ವಾರದ ಸುಮಾರಿಗೆ ದೊಡ್ಡ ಮೋಡ ಕಟ್ಟಿ, ಕೆರಳಿ ಮಳೆ ಅಬ್ಬರಿಸುತ್ತದೆ. ಎಲ್ಲರ ಬಯಕೆ ಹಣ್ಣಾಗಿ ಮಳೆ ಸುರಿಯುತ್ತದೆ. ಮತ್ತೆ ಮೂರು ನಾಲ್ಕು ಮಳೆ ಹದವಾಗಿ ಹೊಡೆಯುತ್ತದೆ. ಆಮೇಲೆ ತುಂತುರು ಮಳೆ. ಇದು ವಾಯು ಸೇವನೆಗೆ ಹೋಗುವವರಿಗೆ ಅಪಾಯಕರ. ಒಮ್ಮೊಮ್ಮೆ ಆರಂಭsವಾದ ಮಳೆ ಸಂಜೆಯವರೆಗೂ ನಿಲ್ಲುವುದಿಲ್ಲ. ದೊಡ್ಡದಾಗಿ ಸುರಿದು ಕೆರೆ ಕಾಲುವೆಗಳಿಗೆ ನೀರು ತುಂಬುವ ಮಳೆ ಇದಲ್ಲ. ಮನೆಯಿಂದ ಹೊರ ಬೀಳಲು ಅವಕಾಶ ಕೊಡುವುದಿಲ್ಲ. ಮನೆಯಲ್ಲಿ ಕುಳಿತು ಹರಟೆ ಹೊಡೆಯುವುದು, ಬರೆಯುವುದು, ಓದುವುದು ಕೆಲಸವಾಗುತ್ತದೆ. ಮನೆಯಲ್ಲಿಯೇ ಕುಳಿತು ಬಿಸಿಯಾದ ದೋಸೆ, ಬೋಂಡಾ, ಅಂಬಡೆ ಮೊದಲಾದವುಗಳನ್ನು ಮಾಡಿಸಿಕೊಂಡು ತಿನ್ನುತ್ತಿದ್ದರೆ ಮಳೆಯ ಸುಖವೇ ಬೇರೆ ಎನ್ನುತ್ತಾರೆ ಲೇಖಕರು. 

‘ಶಿಸ್ತು’  ಪ್ರಬಂಧದಲ್ಲಿ, ಶಿಸ್ತು ಎಂದರೆ ಅಲಂಕಾರ. ಸಜ್ಜು ಎಂಬ ಅರ್ಥವೂ ಇದೆ. ಶಿಸ್ತಿಗೆ ಖಚಿತತೆ ಎನ್ನುವುದು ಇಲ್ಲ. ಒಂದೊಂದು ರೀತಿ ಒಂದೊಂದು ದಿನ. ಪೇಟೆಗೆ ಹೋಗುವಾಗ ಒಂದು ಶಿಸ್ತು, ಸಿನಿಮಾಕ್ಕೆ ಹೋಗುವಾಗ ಇನ್ನೊಂದು ಶಿಸ್ತು, ಗಂಡನ ಜೊತೆ ಹೋಗುವಾಗ ಮತ್ತೊಂದು ಶಿಸ್ತು. ಯಾವುದು ಅಲಂಕಾರ ಎನ್ನುವುದು ವ್ಯಕ್ತಿಶಃವಾದ ಒಂದು ಸಿಂಗಾರದ ಕೆಲಸ. ನಮ್ಮ ರೂಪಮ ವೇಷ ಚೆನ್ನಾಗಿರಲು, ಇತರರಿಗೆ ಚೆನ್ನಾಗಿ ಕಾಣಲು, ನಾವು ಮಾಡಿಕೊಳ್ಳುವ ಒಂದು ಸಂಸ್ಕರಣ. ನಾಟಕದವರು, ಸಿನಿಮಾದವರು, ಆಟಗಾರರು ಅವರದೇ ಆದ ಶಿಸ್ತನ್ನು ಅಳವಡಿಸಿಕೊಳ್ಳುತ್ತಾರೆ. ಅಲಂಕಾರದಿಂದ ಚೆಲುವಲ್ಲ. ಚೆಲುವಿಗೆ ಹದವಾದ ಅಲಂಕಾರ ದೊರೆತರೆ ಹಸುವಿನ ಹಾಲಿಗೆ ಕೇಸರಿ, ಸಕ್ಕರೆ ಬೆರೆಸಿದಂತಾಗುತ್ತದೆ ಎಂದು ವರ್ಣಿಸುತ್ತಾರೆ.

ಹೀಗೆ ಈ ಪ್ರಬಂಧs ಓದುವಾಗ ನಮ್ಮನ್ನು ಮೈಮರೆಸುತ್ತದೆ. ನಮ್ಮಷ್ಟಕ್ಕೆ ನಾವೇ ನಗುವಂತೆ ಮಾಡುತ್ತದೆ. ಪ್ರತಿ ಪ್ರಬಂಧದಲ್ಲೂ ಕೆಲವು ಹಾಸ್ಯೋಕ್ತಿ ತರದ ಸಾಲುಗಳಿವೆ. ಅವುಗಳೆಲ್ಲ ನೋಡಲಷ್ಟೇ ವಿನೋದ, ಆದರೆ ಅಷ್ಟೇ ಅರ್ಥಗರ್ಭಿತವಾದುವು. ಸುಂದರ ವಿಷಯದೊಂದಿಗೆ ಹಾಸ್ಯ, ಮುಗುಳುನಗುತ್ತಲೇ ಇಡೀ ಸಂಕಲನ ಓದಿ ಮುಗಿಯುತ್ತದೆ.

-ದತ್ತಾತ್ರೇಯ ಹೆಗಡೆ, ಶಿವಮೊಗ್ಗ 

.....................  



Comments

Popular posts from this blog