‘ಸುದರ್ಶನ ಹಾಸ್ಯ ಚಕ್ರಾಯಣ’


‘ಸುದರ್ಶನ ಹಾಸ್ಯ ಚಕ್ರಾಯಣ’ ಹೆಸರೇ ಹೇಳುವಂತೆ  ಹಾಸ್ಯ ಬರೆಹಗಾರ ಸುದರ್ಶನ ಅವರ ಸಮಗ್ರ ನಗೆಲೇಖನಗಳ ಸಂಚಯ. ಪುಟಪುಟಗಳಲ್ಲಿಯೂ ವಿಡಂಬನೆಯ ಹಾಸ್ಯಚಕ್ರವೇ ಇದರಲ್ಲಿದೆ. ಸಮಾಜದ ಡೊಂಕುಗಳನ್ನು ಅನಾಯಾಸವಾಗಿ ಇದರಲ್ಲಿ ಬರೆದಿದ್ದಾರೆ. ಇಲ್ಲಿರುವ ಚಟಾಕಿಗಳು ಬಹುಹಿಂದೆಯೇ ವಿವಿಧ ಪತ್ರಿಕೆ ಮತ್ತು ಫೇಸ್‌ಬುಕ್‌ನಲ್ಲಿ  ಪ್ರಕಟವಾದವು. ಇಲ್ಲಿ ಲೇಖಕರು ವ್ಯಕ್ತಿ ಮತ್ತು ವಸ್ತು, ಸ್ಥಳಗಳನ್ನು  ತಮ್ಮ ಹಾಸ್ಯಕ್ಕೆ ಬಹು ಚೆನ್ನಾಗಿ ಬಳಸಿಕೊಂಡಿದ್ದಾರೆ.

  ನಗುವಿನ ಜೊತೆಗೆ ಜೀವನಶೈಲಿ, ಗೆಳೆಯರೊಂದಿಗಿನ ರಜಾ ಮೋಜು, ಹೆಂಡತಿಯ ಮುನಿಸು, ಮಕ್ಕಳ ಪೆದ್ದುತನ, ಜೀವನ, ಮೊದಲಾದವುಗಳ ಬಗ್ಗೆಯೂ ಬರೆದಿದ್ದಾರೆ. ಇವು ಮನಸ್ಸಿಗೆ ಮುದ ನೀಡುವಂತಹವು. ಬೇಸರವಾದಾಗ ಆಗಾಗ ಇಂತಹ ನಾಲ್ಕಾರು ಬರೆಹಗಳನ್ನು ಓದಿದರೆ ಅದನ್ನು ಮೆಲುಕು ಹಾಕುತ್ತ ದಿನ ಕಳೆಯಬಹುದು. ಇಲ್ಲಿರುವ ಬರೆಹಗಳೆಲ್ಲ ದಿನನಿತ್ಯದ ಅನುಭವಗಳೇ ಆಗಿವೆ. ಆದ್ದರಿಂದ ಎಂತಹವರೂ ಕೂಡ ನಗಲೇಬೇಕು. ನಮ್ಮ ಸುತ್ತಮುತ್ತ ನಡೆಯುವ ವಿಷಯಗಳಲ್ಲೇ ಹಾಸ್ಯವನ್ನು ಹುಡುಕಿ  ತಾವೂ ನಕ್ಕು, ಅವರನ್ನು ನಗಿಸುವ ಕೆಲಸ ವಿಶೇಷವಾದುದು. ಅದು ಸುದರ್ಶನ್ ಅವರಿಗೆ ಸಿದ್ಧಿಸಿತ್ತು.  ವಿವಿಧ ಇಲಾಖೆಗಳ ವಿಚಾರ, ರಾಜಕೀಯ,  ಚಲನಚಿತ್ರ, ಶೋಷಣೆ,  ಢೋಂಗಿ ಜನರು, ಗೋಲ್‌ಮಾಲ್ ಸಹಿತ ಸಾಮಾಜಿಕ ಸಮಸ್ಯೆಗಳ ಬಗ್ಗೆ ನಗೆಯ ಬೆಳಕನ್ನು ಕೃತಿಯಲ್ಲಿ ಚೆಲ್ಲಿರುವುದನ್ನು ಕಾಣಬಹುದು.  

 ಕೃತಿಯಲ್ಲಿ  ಹಲವಾರು ತಿಳಿಹಾಸ್ಯ  ಬರೆಹಗಳು ಓದುಗನನ್ನು ನಗೆಗಡಲಲ್ಲಿ ತೇಲಿಸುತ್ತವೆ. ಒಂದಷ್ಟು ಕವನಗಳ ಮೂಲಕವೂ ನಗೆಯ ಹೂರಣವನ್ನು ಬಡಿಸಿದ್ದಾರೆ. ಜೊತೆಗೆ ಚಿತ್ರಕವನಗಳಿವೆ. 

ಕೆಲವು ಹಾಸ್ಯದ ತುಣುಕುಗಳನ್ನು ಗಮನಿಸುವುದಾದರೆ- 

ಮಗುವನ್ನು  ಶಿಶುವಿಹಾರಕ್ಕೆ ಹಾಕಿದಾಗ ಅದು ಟೀಚರ್ ಬಳಿ ‘ಅಮ್ಮಿ ಕೊಡ್ತಿಯಾ, ಮನೆಗೆ ಬರ್‍ತಿಯಾ’  ಎಂದು ಕೇಳುವುದು, ಅವಿವಾಹಿತೆ  ಟೀಚರ್ ನಾಚಿ ನೀರಾಗುವುದು, ಮೆಳ್ಳೆಗಣ್ಣಿನ ಶಿಕ್ಷಕಿಯೊಬ್ಬಳು ಮರಿತಿಪ್ಪನ  ಟೀಚರ್. ಅವನ ಪಕ್ಕ ಕೂಡ್ರುತ್ತಿದ್ದವನಿಗೆ ‘ನಿಮ್ಮಪ್ಪನ ಕರಕೊಂಡು  ಬಾ’ ಎಂದಾಗ ಮರಿತಿಪ್ಪ ತನಗೆ ಹೇಳುತ್ತಿದ್ದಾರೆ ಎಂದು ತಿಳಿಯುವುದು, ಅಪ್ಪನನ್ನು  ಶಾಲೆ ಕರೆದೊಯ್ದಾಗ ‘ನಿಮ್ಮ ಮಗನಿಗಲ್ಲ. ಅವನ ಪಕ್ಕ ಕೂಡ್ರೋ ಹುಡುಗನಿಗೆ ಹೇಳಿದ್ದು ಎನ್ನುವುದು, ಅದೇ ಟೈಮಲ್ಲಿ ನಿಮ್ಮ ಮಗ  ಚಡ್ಡಿ ಏರಿಸುತ್ತಾ ಏಳುತ್ತಿದ್ದ. ಬಹುಶಃ ಎರಡಕ್ಕೆ ಹೋಗಬೇಕೆನೋ ಅಂತ ಮನೆಗೆ ಕಳಿಸುತ್ತಿದ್ದೆ ಎಂದಾಗ ಆತ, ‘ನಿಂತಕೋತಾ ಇದ್ದಾಗ ಚಡ್ಡಿ ಲೂಸಾಗಿತ್ತು. ಅದಕ್ಕೆ ಮೇಲೆತ್ತುತ್ತಿದ್ದೆ’ ಎಂದಾಗ ನಗದಿರಲು ಸಾಧ್ಯವೇ ಇಲ್ಲ.

ಸಲೂನ್‌ನಲ್ಲಿ ಕಟಿಂಗ್ ಮುಗಿದ ನಂತರ ಕನ್ನಡಿಯಲ್ಲಿ ನೋಡಿಕೊಂಡಾಗ ಬೋಳಮ್ಮನ ಮುಖ, ಮುಂಭಾಗ ಸಾಧನ ಕಟ್, ಹಿಂಭಾಗ  ಮಿಲಿಟ್ರಿ ಕಟ್, ಸೈಡ್ ಲಾಕ್ ಬಿಟ್ಟು ಭರ್ಜರಿ ಬಿಟ್ಟು ಹಮಾಲಿ ಕಟ್ ಮಾಡುತ್ತಾನೆ. ಮರುದಿನ ಅಫಿಸ್‌ಗೆ ಹೋದಾಗ ಎಲ್ಲರೂ ನಕ್ಕು, ‘ಡೋಲು ತಂದಿದ್ದರೆ ಚೆನ್ನಾಗಿತ್ತು, ಡೋಲ್ ಬಾರಿಸುತ್ತಾ ಚಪ್ಪಾಳೆ ಹಾಕುತ್ತಾ ಹಾಡಬಹುದಿತ್ತು’ ಎಂದು ಅಣಕಿಸುತ್ತಾರೆ.  

‘ದೋಸೆ’ ಕುರಿತಾದ ಹಾಸ್ಯದಲ್ಲಿ ಅಕ್ಕಿ ನೆನೆಹಾಕಿದ ನಂತರ ರುಬ್ಬುವುದರೊಳಗೆ ಮನೆಯಾಕೆ ಹೊರಗಾಗುವಳು. ಗಂಡ ಅನಿವಾರ್ಯವಾಗಿ ರುಬ್ಬುತ್ತಾನೆ. ಅದರ ಹಿಡಿತ ಸಿಗದೆ ಹಿಟ್ಟು ಮೈ, ಉಟ್ಟ  ಬಟ್ಟೆ ಮತ್ತು ಸುತ್ತಲೆಲ್ಲ ಸ್ಪ್ರೇ ಆರ್ಟ್‌ನಿಂದ ಕಂಗೊಳಿಸುವುದನ್ನು ವರ್ಣಿಸುತ್ತಾ, ‘ತೆಂಗಿನ ಪೊರಕೆ ನೋಡಿದೆಯಾ’ ಎಂದು ಮಡದಿಯಲ್ಲಿ ಕೇಳಿದಾಗ ಆಕೆ  ನೀವು ಗುಡಿಸೋದು ಬೇಡ, ಕೆಲಸದವಳು ಬರ್‍ತಾಳೆ’ ಎಂದಾಗ  ಅದಕ್ಕಲ್ಲ, ‘ದೋಸೆ ಹೆಂಚಿಗೆ ಎಣ್ಣೆ  ಹಚ್ಚೋಕೆ ಬೇಕಲ್ಲಾ ಅದಕ್ಕೆ’  ಎಂದಾಗ ‘ನಿಮ್ಮ  ದೋಸೆ ವಿಷಯವೇ ಬೇಡಾ. ಹೆಂಚು ಕಾದಿದೆಯೋ ಇಲ್ಲವೋ ಎಂದು ನೋಡೋಕೆ ಹಣೆ ಬೆವರು ಚಿಮುಕಿಸಬೇಡಿ’ ಎನ್ನುತ್ತಾಳೆ.

ಉದ್ಯೋಗ ಭಡ್ತಿ ಎಂಬ ಬರೆಹದಲ್ಲಿ ಜನರು ತಮ್ಮ ಉದ್ಯೋಗ ಭಡ್ತಿಗೆ ಮತ್ತು ಉದ್ಯೋಗ ಸಿಗಲೆಂದು ದೇವರಿಗೆ ಯಾವ ರೀತಿ ಹರಕೆ ಹೊತ್ತುಕೊಳ್ಳುತ್ತಾರೆ ಎನ್ನುವುದನ್ನು ವಿವರಿಸುವ ಲೇಖಕರು, ‘ಪ್ರ್ರೊಬೆಷನರಿ ಅವಧಿ ಮುಗಿಯೋದರೊಳಗೆನೇ  ಪ್ರಮೋಷನ್ ಕೇಳ್ತಾರೆ,  ಕೈತುಂಬಾ ಸಂಬಳ ತಂದು ಹೆಂಡ್ತಿಗೆ ಕೊಟ್ಟರೂ  ನನ್ನ ಗಂಡ ಕೆಡಲು ಜಾಗವಿಲ್ಲದಷ್ಟು ಹಾಳಾಗಿದ್ದಾನೆ. ಅವನಿಂದ ಸೋಡಾ ಚೀಟಿ ಕೊಡಿಸು’ ಎಂದು ಬೇಡುವುದನ್ನು  ಚಿತ್ರಿಸಿದ್ದಾರೆ.   

ಆಫೀಸ್ ಟೈಮ್‌ನಲ್ಲಿ ವಾಲಿಬಾಲ್ ಆಡುತ್ತ್ತಾರೆಂದು ಮೇಲಧಿಕಾರಿಗೆ ದೂರ ಅರ್ಜಿಯನ್ನು ಯಾರೋ  ಬರೆಯುತ್ತಾರೆ. ವಿಚಾರಣೆಗೆ  ಬಂದ ಅಧಿಕಾರಿ ಆಫೀಸ್ ನಂತರ ಆಡಿ ಎನ್ನುತ್ತಾನೆ. ಆದರೆ ಕಚೇರಿಯಲ್ಲಿ ಮಧ್ಯಾಹ್ನದ ನಂತರ ಕೆಲಸ ಇಲ್ಲದ ಕಾರಣ ಕೆಲವರು ಮನೆಗೆ ಹೋಗುತ್ತಿದ್ದರು, ಇದನ್ನು ತಪ್ಪಿಸಲು ವಾಲಿಬಾಲ್ ಆಡುವ ಕೆಲಸ ನಡೆಸುತ್ತಾರೆ. 

ಹೆಂಡತಿ ಬಸುರಿಯಾದಾಗ ಕೆಂಪು ಕಲ್ಲುಸಕ್ಕರೆ ಬೇಕೆಂಬ ಬಯಕೆ ಇಟ್ಟಾಗ ಅದನ್ನು ಹುಡುಕಾಡಿ ಸುಸ್ತಾಗಿದ್ದು, ಟ್ರೆಜರಿ ಇಲಾಖೆ ಕೆಲಸಕ್ಕೆ ಬುದ್ಧಿ ಇರೋರಿಗಿಂತ ಏನೂ ಪ್ರಯೋಜನ ಇಲ್ಲದವರೇ ಸಾಕು ಎನ್ನುವುದು, ಶಿಕ್ಷಕರ ದಿನಾಚರಣೆಗೆ ಸಾರ್ವಜನಿಕರಿಗೆ ಇಂಟರೆಸ್ಟ್ ಇಲ್ಲದಿದ್ದರೂ ಶಿಕ್ಷಕರೇ ಒತ್ತಾಯಿಸಿ ಆಚರಿಸಿಕೊಳ್ಳುವುದು ಒಂದು ರೀತಿಯಲ್ಲಿ ಶ್ರಾದ್ಧದ ದಿನ ಎಂದು ಹಾಸ್ಯ ಮಾಡುವುದು, ‘ಪರೋಪಕಾರಾರ್ಥಂ ಇದಂ ಶರೀರಂ’ ಎನ್ನುವ ತಿಪ್ಪಿ ಪರೋಪಕಾರ ಮಾಡಲು ಹೋಗಿ ಎಡವಟ್ಟಾಗುವುದು, ಒಂದಕ್ಕೆರಡು ಎಂದು ಕೂಗುತ್ತ ಮಾರಾಟ ಮಾಡುತ್ತಿದ್ದುದನ್ನು ಕಂಡು ತಂದ ಪ್ಯಾಂಟ್ ಪೀಸ್  ಮತ್ತು ಶರ್ಟ್  ಪೀಸ್ ಹೊಲಿಸಿ ನೀರಿಗೆ ಹಾಕಿದಾಗ ಅದು  ಅದು ಚಡ್ಡಿ ಮತ್ತು ಬ್ಲೌಸ್ ಪೀಸ್ ತರಹ ಆಗಿದ್ದು, ಒಂದು ನೋಟಿಗೆ ಎರಡು ನೋಟು ಎಂದು ಮಾರುತ್ತಿದ್ದಾಗ ನಂಬಿ ಖರೀದಿಸಿ ಮನೆಗೆ ತಂದಾಗ ನೋಟಿನ ಪ್ಯಾಡ್ ಮಧ್ಯೆ ಖಾಲಿ ಹಾಳೆ ಇದ್ದುದು.... ಹೀಗೆ ಜನರನ್ನು ಹೇಗೆಲ್ಲ ಮೋಸ ಮಾಡುತ್ತಾರೆ ಎನ್ನುವುದನ್ನು ವಿವರಿಸಿದ್ದಾರೆ.

 ‘ಸ್ತ್ರೀ ಬುದ್ಧಿ ಪ್ರಳಯಾಂತಕವಾದರೆ, ಗಂಡಿನ ಬುದ್ಧಿ ಪ್ರಣಯಾಂತಕ’ ಎನ್ನುತ್ತಾ ನಗಿಸುತ್ತಾರೆ. ಶಾಲಾ ವಾರ್ಷಿಕೋತ್ಸವದಲ್ಲಿ ಮಕ್ಕಳ ಕಾರ್ಯಕ್ರಮ ನೋಡಲು ಹೋದರೂ ಅದನ್ನು ಬಿಟ್ಟು ಅಕ್ಕಪಕ್ಕ, ಸುತ್ತಮುತ್ತ  ನಡೆಯುವ ಅವಘಡ ನೋಡಿ ಅದರ ಮಜಾ ತೆಗೆದುಕೊಳ್ಳುವುದೇ ಖಷಿ ಎನ್ನುತ್ತಾರೆ. ‘ನಾನೊಬ್ಬ ಕ್ರ್ರಾಂತಿಕಾರಿ’ ಬರೆಹ ಸಮಾಜದಲ್ಲಿ ತುಂಬಿರುವ ನಕಲಿ ಕ್ರ್ರಾಂತಿಕಾರಿಗಳ ವಿಡಂಬನೆಯ ಬರೆಹವಾಗಿದೆ. ‘ಹೊಸ ಅಂಗಿ ಕೊಟ್ಟು ಹಳೆ ಅಂಗಿ ತಂದೆ’ ಎಂಬಲ್ಲಿ ಬೇಸಿಗೆ ರಜೆಯಲ್ಲಿ ಹಳ್ಳಕ್ಕೆ ಈಜಲು ಹೋಗಿ ತನ್ನ ಅಂಗಿಯನ್ನು ಬಿಟ್ಟು ಬೇರೆಯವನ ಅಂಗಿ ಹಾಕಿಕೊಂಡು ಬಂದು ಅಮ್ಮನಿಂದ ಉಗಿಸಿಕೊಂಡಿದ್ದಲ್ಲದೆ, ಮಾರನೆಯ ದಿನವೇ ಬೇಸಿಗೆ ಶಿಬಿರಕ್ಕೆ  ಹಾಕಿದ್ದು, ‘ವ(ಂ)ಚನಾ’ ದಲ್ಲಿ ಕಿವಿಗೆ ಹೂವಿಡುವ ಕಂಪನಿಗಳವರು ನಿಮಗೆ ಬಹುಮಾನ ಬಂದಿದೆ ಎಂದು ಹೇಳಿ ಹಣ ವಸೂಲು ಮಾಡುವ ಬಗ್ಗೆ ಎಚ್ಚರಿಸುತ್ತಾರೆ.  

ಉಳಿದಂತೆ ಪದ್ದತಿ, ಚಿಕನ್ ದೆವ್ವ,  ಉಪ್ಪಿಟ್ಟು, ,  ಒಂದು ಸಿನಿಮಾ ಕಥೆ,  ಭೀಮು ಮಂಗಳವಾಯ್ತು,  ಜಪ-ತಪ, ಕಾಗೆ, ಲೀವ್ ಕೇಸ್, ಫೇಸ್ ಇಲ್ಲದವರಿಗೆ ಫೇಸ್ ಕೊಡುವ ಫೇಸ್‌ಬುಕ್  ಮೊದಲಾದ ಬರೆಹಗಳು ನಮ್ಮನ್ನು ನಗಿಸುವಲ್ಲಿ ಯಶಸ್ವಿಯಾಗಿವೆ.  

ಲೇಖಕರ ಕವನಗಳಲ್ಲಿ ‘ಗುಳೆ’ ಗಮನ ಸೆಳೆಯುತ್ತದೆ.

  ಸ್ವಾಮಿ ದೇವನೆ ಲೋಕಪಾಲನೆ

 ಎಲ್ಲಾದರೂ ಒಯ್ದು ಒಗೆ, ಅಭ್ಯಂತರವಿಲ್ಲ

ಯಾವ ಊರಾದರೂ ಸರಿ

ಒಳ್ಳೆ ಮಳೆಯಾದ ಕಡೆ ಸೇರಿಸೆನ್ನ

ಎಂದು ಹೇಳುವ ಮೂಲಕ ನಗೆಗಡಲಲ್ಲಿ ತೇಲಿಸುತ್ತಾರೆ.  

‘ಆಶಾಕಿರಣ’ ಕವನದಲ್ಲಿ 

ಬಯುಸೀಮೆಯವರು ಮಳೆರಾಯನನ್ನು ಕರೆಯುವುದನ್ನು ವಿವರಿಸುತ್ತಾ,

ಕತ್ತೆ ಮದುವೆಯಾದರೂ ಸರಿ

ಕಪ್ಪೆ  ಮದುವೆಯಾದರೂ ಸರಿ

ಔತಣ ಪಡೆದು ಧಾರೆ ಎರೆ ನೀನು 

ಎಂದು ಬರೆಯುತ್ತಾರೆ.  

ಬುದ್ಧಿ ಕೊಡು ಪುಟ್ಟ ಮಂಗ ಕವನಗಳೂ ಸಹ ಮನಸೆಳೆಯುತ್ತವೆ. 

ಹೀಗೆ ಕವನ, ಲೇಖನ, ಹಾಸ್ಯಗಳ ಮೂಲಕ  ಓದುಗರನ್ನು ನಗೆಗೆಡಲಲ್ಲಿ ಒಂದಷ್ಟು ಹೊತ್ತು ತೇಲಿಸುವ ಸುಂದರ ಕೃತಿ ಇದಾಗಿದೆ. ಮನುಷ್ಯನ ಬೇಸರದ ಕಾಲದಲ್ಲಿ, ದುಃಖದಲ್ಲಿ ಇಂತಹ ತುಣುಕುಗಳನ್ನು ಒಮ್ಮೆ ಓದಿದರೆ ಮನಸ್ಸು ನಿರಾಳವಾಗುತ್ತದೆ. ಒಮ್ಮೆಯೇ ಓದಿ ಕೆಳಗಿಡುವ ಕೃತಿUಳಿಗಿಂತ ಬಿಡುವಿದ್ದಾಗಲೆಲ್ಲ ಓದಿ ಖುಷಿ ಪಡಬಹುದಾದ ಕೃತಿ ಇದು.

 

 -ದತ್ತಾತ್ರೇಯ ಹೆಗಡೆ, ಶಿವಮೊಗ್ಗ 


Comments

Popular posts from this blog