‘ಕಿಷ್ಕಿಂಧಾಯಣ’ 

ಪ್ರೊ. ಲಕ್ಷ್ಮಣ್ ಕೌಂಟೆ ಇವರ ಕಾದಂಬರಿ 



‘ಕಿಷ್ಕಿಂಧಾಯಣ’ ಕಲಬುರಗಿಯ ಪ್ರೊ. ಲಕ್ಷ್ಮಣ್ ಕೌಂಟೆ ಇವರ ೪೧೬ ಪುಟಗಳ ಬೃಹತ್ ಕೃತಿ. ವಾಲಿ, ಸುಗ್ರೀವ, ರಾಮ, ರಾವಣರಿಗೆ ಸಂಬಂಧಿಸಿದ ಕಾದಂಬರಿ ರೂಪದ ಕಥಾನಕ. ಇದರಲ್ಲಿ ಅಯೋಧ್ಯಾ ಕಾಂಡವಿಲ್ಲ. ಕಿಷ್ಕಿಂಧೆ ಮತ್ತು ಲಂಕೆಗೆ ಸಂಬಂಧಿಸಿದ ಕಥಾ ವಸ್ತು ಮಾತ್ರ ಇದೆ. ಮನುಷ್ಯ- ಮನುಷ್ಯರ ನಡುವಿನ ಮನಸ್ಸುಗಳ, ವೈಮನಸ್ಸುಗಳ, ಸ್ನೇಹ, ವಿಶ್ವ್ವಾಸ, ದ್ವೇಷ, ವಿದ್ವೇಷಗಳ ಕಥೆಯಾಗಿದೆ. ಮಾನವ ತುಡಿತಗಳ ಒಳನೋಟದ ಮನಸ್ಸುಗಳ ತೊಳಲಾಟದ, ಇದೆ. ನಾಗರಿಕ- ಅನಾಗರಿಕ, ಆರ್ಯ- ಅನಾರ್ಯರ ನಡುವಿನ ಸಂಘರ್ಷದ ಕಥೆ ಇದು. 

ಕಿಷ್ಕಿಂಧೆ, ಪಂಪಾ ಸರೋವರ, ಋಷ್ಯಮೂಕ ಪರ್ವತ, ದಂಡಕಾರಣ್ಯ, ಪಂಚವಟಿ, ಋಷಿಮನಿಗಳ ಪರ್ಣಕುಟೀರ, ಲಂಕೆಯಲ್ಲಿನ ಕಥೆ ಇದು.  ವಾನರರು ಮತ್ತು ರಾಕ್ಷಸರ ಮದ್ಯೆಯ ಸಂಘರ್ಷ, ವಾನರರು ಮತ್ತು ರಾವಣನ ಲಂಕಾ ಸೈನ್ಯದ ನಡುವಿನ ಸಮರ, ದಂಡಕಾರಣ್ಯದಲ್ಲಿದ್ದ ಋಷಿಗಳ ಹೋಮ- ಹವನಕ್ಕೆ, ತಪಸ್ಸಿಗೆ ಸದಾ ಭಂಗವುಂಟು ಮಾಡುತ್ತಿದ್ದ ಅನಾರ್‍ಯರ ಹತ್ಯೆ, ಇದಕ್ಕಾಗಿಯೇ ಆ ಆರಣ್ಯಕ್ಕೆ ರಾಮ- ಲಕ್ಷ್ಮಣರು ಬಂದಂತೆ ಎನಿಸುವುದು, ಸಹೋದರರಾದ ವಾಲಿ- ಸುಗ್ರೀವರ ಕದನ, ತನ್ನ ತಂಗಿ ಶೂರ್ಪನಖಿಗೆ ಅವಮಾನ ಮಾಡಿದ್ದಕ್ಕೆ ಪ್ರತಿಯಾಗಿ ರಾವಣ ಸೀತೆಯನ್ನು ಹೊತ್ತೊಯ್ಯುವುದು, ಇದನ್ನರಿತ ರಾಮ-;ಲಕ್ಷ್ಮಣ ಲಂಕೆಗೆ ದಾಳಿ ಇಟ್ಟು ನಾಶಪಡಿಸುವುದು, ಸುಗ್ರೀವ ಮತ್ತು ವಿಭೀಷಣ ರಾಮ- ಲಕ್ಷ್ಮಣರಲ್ಲಿ ವಿಶ್ವಾಸವಿಟ್ಟು ಅವರಿಗೆ ನೆರವಾಗುವುದು, ವಾಲಿ- ಸುಗ್ರೀವರ ದ್ವೇಷ, ವಿಭೀಷಣ ತನ್ನ ಸಹೋದ ರಾವಣನನ್ನೇ ಎದುರು ಹಾಕಿಕೊಂಡು ಲಂಕೆಯ ನಾಶಕ್ಕೆ  ಕಾರಣನಾಗಿ ಆತನೇ ಅಲ್ಲಿನ ಅರಸನಾಗುವುದು, ಸುಗ್ರೀವನೂ ವಾಲಿಯನ್ನು ರಾಮನ ಮೂಲಕ ಕೊಲ್ಲಿಸಿ ಪಟ್ಟಕ್ಕೇರುವುದು... ಹೀಗೆ ಹತ್ತ್ತಾರು ಕಥೆಗಳ ಮೂಲಕ ಓದುಗರನ್ನು ತುದಿಗಾಲಲ್ಲಿ ನಿಲ್ಲಿಸುವುದು ಈ ಕೃತಿಯ ವಿಶೇಷತೆ. 

ಇದರಲ್ಲಿ ವಿಶೇಷವಾಗಿ ಗಮನ ಸೆಳೆಯುವುದು ಅರಣ್ಯಗಳ, ಪರ್ವತಗಳ, ಲತೆ- ತರುಗಳ, ನದಿಗಳ, ಸಂಜೆ, ಮುಂಜಾವಿನ ಮನಸೆಳೆಯುವ ಅದ್ಭುತ, ಮನಮೋಹಕ ವರ್ಣನೆ. ಉದಾಹರಣೆಗೆ- ಬಾನ ಭಾಸ್ಕರ ಸಂಧ್ಯಾಚಲದೆಡೆಗೆ ಉರುಳತೊಡಗಿದ್ದ. ಇತ್ತ ರಜನಿದೇವಿ ಭುವಿಯ ತುಂಬ ತನ್ನ ಕಾಳ ವರ್ಣದ ಸೀರೆಯನ್ನು ಹಾಸತೊಡಗಿದ್ದಳು.  ಇಂತಹ ವರ್ಣನೆಗಳಿಂದಲೇ ಓದುಗರು ಕಥೆಯ ಆಕರ್ಷಣೆಗೊಳಗಾಗುತ್ತಾರೆ. ಕಾದಂಬರಿಯಲ್ಲಿ ಅಯೋಧ್ಯಾ ಕಾಂಡವಿಲ್ಲ. ಕಿಷ್ಕಿಂಧೆ ಮತ್ತು ಲಂಕೆಗೆ ಸಂಬಂಧಿಸಿದ ಕಥಾ ವಸ್ತು ಮಾತ್ರ ಇದೆ.

ಕಥಾ ಸಾರಾಂಶ: 

ಸ್ವಬಂಧು ಕಲಹಕ್ಕೆ ಬಲಿಯಾಗಿ ೧೪ ವರ್ಷಗಳ ವನವಾಸಕ್ಕೆ ರಾಮ, ಲಕ್ಷ್ಮಣ, ಸೀತೆ ದಂಡಕಾರಣ್ಯಕ್ಕೆ ಬರುವಾಗ  ೧೩ ವರ್ಷದ ವನವಾಸ ಮುಗಿದಿರುತ್ತದೆ.  ಕಾಡಿನಲ್ಲಿರುವಾಗ  ಆಶ್ರಮವೊಂದಕ್ಕೆ ಬಂದಾಗ ಬಾಗಿದ ಬೆನ್ನಿನ ಮುದುಕಿ ಶಬರಿ ಭೇಟಿಯಾಗುತ್ತಾಳೆ. ಸಾಯುವ ಮುನ್ನ ನಿಮ್ಮನ್ನು ಕಣ್ತುಂಬ ನೋಡಬೇಕೆಂಬ ಆಸೆ ಇತ್ತು ಎನ್ನುತ್ತಾಳೆ. ಕಳೆದುಕೊಂಡ ರಾಮನ ಪತ್ನಿಯನ್ನು ಹುಡುಕಲು ಕಾಡಿನಿಂದ ಕಾಡಿಗೆ ಅಲೆಯುತ್ತಿದ್ದೇವೆ ಎಂದಾಗ  ಅಣ್ಣ ವಾಲಿಯೊಂದಿಗೆ ವಿರಸ ಕಟ್ಟಿಕೊಂಡು ಸುಗ್ರೀವ ಋಷ್ಯಮೂಕ ಪರ್ವತದ ತುದಿಯಲ್ಲಿ ವಾಸ ಮಾಡಿದ್ದಾನೆ. ನೀವು ಅವನನ್ನು ಭೇಟಿಯಾದರೆ ಸಹಾಯ ಸಿಗಬಹುದು ಎನ್ನುತ್ತಾಳೆ. 

ಹೀಗೆ ಮುಂದೆ ಸಾಗಿದಾಗ ತಾಪಸನೊಬ್ಬ ಭೇಟಿಯಾಗುತ್ತಾನೆ. ಅವನು ಪರಿಚಯ ಮಾಡಿಕೊಂಡು, ಮಾತಾಪಿತೃರ ಆಜ್ಞೆಯನ್ನು ಪಾಲಿಸುವುದಕ್ಕಾಗಿ ನಿಮ್ಮನ್ನು ಇಲ್ಲಿಗೆ ಕಳುಹಿಸಿದಂತಿದೆ ಎನ್ನುತ್ತಾ ಕಾಡಿನಲ್ಲಿ ರಾಕ್ಷಸರ ಉಟಪಳ ಇರುವ ಬಗ್ಗೆ ಮಾಹಿತಿ ಕೊಡುತ್ತಾನೆ. ಅನಾರ್ಯರನ್ನು ಕೊಲ್ಲುವುದು ಆರ್ಯ ಶ್ರೇಷ್ಠ ಕ್ಷತ್ರಿಯರ ಧರ್ಮವಾಗಿದೆ ಎಂದು ರಾಮ ಹೇಳುತ್ತಾನೆ. ಈ ಅರಣ್ಯವು ದಂಡಕ ಎನ್ನುವನಿಗೆ ಸೇರಿದಾಗಿತ್ತು. ಶುಕ್ರಾಚಾರ್ಯ ಈತನ ಪುರೋಹಿತನಾಗಿದ್ದ. ಒಮ್ಮೆ ಶುಕ್ರಾಚಾರ್‍ಯ ಇಲ್ಲದಿದ್ದ ವೇಳೆ  ಅವರ ಹಿರಿಯ ಮಗಳ ಮಾನಭಂಗ ಮಾಡುತ್ತಾನೆ. ಇದನ್ನು ಅರಿತ ಶುಕ್ರಾಚಾರ್ಯ ದಂಡಕ ಮತ್ತು ಅವನ ನಗರ ನಾಶವಾಗಲಿ ಎಂದು ಶಾಪವಿಡುತ್ತಾನೆ. 

ಇನ್ನೊಂದು ಋಷ್ಯಾಶ್ರಮವೊಂದಕ್ಕೆ ರಾಮ-ಲಕ್ಷ್ಮಣ ಅಲ್ಲಿದ್ದ  ಬಂದಾಗ ತಾಪಸನೊಬ್ಬ,  ಅಧಿಕಾರ ದಾಹ ಒಂದು ದೊಡ್ಡ ಪೀಡೆ. ಅದು ಅಣ್ಣ-ತಮ್ಮಂದಿರನ್ನು ಒಟ್ಟಿಗೆ ಬಾಳ ಕೊಡುವುದಿಲ್ಲ. ಒಂದೇ ವಂಶದ ರೆಂಬೆ -ಬೊಂಬೆಗಳ ಮಧ್ಯೆ ಅದು ವಿರಸವನ್ನು ತಂದಿಕ್ಕುತ್ತದೆ. ದೈವವೇ ನಿಮ್ಮನ್ನು ವನವಾಸಕ್ಕೆ ಕರೆತಂದಂತೆ ಕಾಣುತ್ತದೆ. ಈ ದಂಡಕಾರಣ್ಯದಲ್ಲಿ ರಾಕ್ಷಸರು ಬ್ರಾಹ್ಮಣರನ್ನು ನಾಶ ಮಾಡುತ್ತಿದ್ದಾರೆ. ಅವರ ಹೋಮ ಹವನಗಳನ್ನು ಕೆಡಿಸುತ್ತಿದ್ದಾರೆ. ಇಂಥವರ ನಾಶಕ್ಕಾಗಿ ನೀವು ಬಂದಂತಿದೆ ಎನ್ನುತ್ತಾನೆ. ಆಶ್ರಮದಿಂದ ಹೊರಟ ನಂತರ ಅವರು ಪಂಚವಟಿ ಎಂಬಲ್ಲಿಗೆ ಬರುತ್ತಾರೆ. ನಂತರ ಜಟಾಯುವನ್ನು ಭೇಟಿಯಾಗುತ್ತಾರೆ.  ಅವರೊಂದಿಗೆ ಜಟಾಯು ಪಂಚವಟಿಕೆ ಹೊರಡುತ್ತಾನೆ. ಪಂಚವಟಿಯ ಪರ್ಣಶಾಲೆಯಲ್ಲಿ ಹುಲ್ಲಿನ ಹಾಸಿಗೆ ಮೇಲೆ ಮಲಗಿದಾಗ ರಾಮನು ‘ಅಪ್ಪ ಚಿಕ್ಕಮ್ಮನ ಕೈ ಗೊಂಬೆ. ಅವಳ ಆಗ್ರಹಕ್ಕೆ ಮಣಿದು ನಮ್ಮನ್ನು ವನವಾಸಕ್ಕೆ ಕಳುಹಿಸಿದ್ದಾನೆ. ಚಿಕ್ಕಮ್ಮ ನಮ್ಮ ಸಂತೋಷಕ್ಕೂ ಕಲ್ಲು ಹಾಕಿದ್ದಾಳೆ. ಭsರತ ಸಿಂಹಾಸನಾಗ್ರಹಣ ಮಾಡಲು ನಾನು ಬಹುಶಃ ಅಡ್ಡಿಯಾಗುತ್ತೇನೆ. ನಾನು ಅಯೋಧ್ಯೆಯಲ್ಲಿ ಆಳಿದರೆ ಅಧಿಕಾರ ವ್ಯಾಮೋಹದಿಂದ ಭರತನನ್ನು ಕುತಂತ್ರದಿಂದ ಇಲ್ಲವಾಗಿಸಿ ಸಿಂಹಾಸನವನ್ನು ದಕ್ಕಿಸಿಕೊಳ್ಳಬಹುದು ಎಂದು ಈ ವನಕ್ಕೆ ದೂಡಿದಂತೆ ಕಾಣುತ್ತದೆ’ ಎನ್ನುತ್ತಾನೆ.

 

 ಒಂದು ದಿನ ಮೂವರು ಮಾತನಾಡುತ್ತ ಇದ್ದಾಗ ಲಂಕಾಧೀಶ್ವರನ ತಂಗಿ ಶೂರ್ಪನಖಿಯ ಆಗಮನವಾಗುತ್ತದೆ. ರಾಮ -ಲಕ್ಷ್ಮಣನ ವರ್ಣನೆ ಮಾಡುತ್ತಾ ‘ನಿಮ್ಮಿಬ್ಬರಲ್ಲಿ ಒಬ್ಬರಿಗೆ ಸಂಗಾತಿ ಇಲ್ಲವೆಂದು ಕೇಳಿದ್ದೇನೆ. ನನ್ನನ್ನು ವರಿಸಿ. ವರಿಸಿದರೆ ನಿಮಗೆ ಅಪೂರ್ವಕವಾದ ಸುಖ ಸಿಗುತ್ತದೆ’ ಎನ್ನುತ್ತಾಳೆ ತಾರುಣ್ಯದ ಮದದಿಂದ ಶೂರ್ಪಖಿ ಅಡಿದ ಮಾತನ್ನು ನಿರಾಕರಿಸಿದರೂ ಆಕೆ ಮತ್ತೆ ಮತ್ತೆ ಕಾಡಲಾರಂಭಿಸಿದಾಗ ರಾಮನು ಲಕ್ಷ್ಮಣನಿಗೆ ಇವಳ ಕಿವಿ- ಮೂಗುಗಳನ್ನು ಕೊಯ್ಯಲು ಸೂಚಿಸುತ್ತಾನೆ. ಅದೇ ರೀತಿ ಲಕ್ಷ್ಮಣ ಮಾಡಿದಾಗ ಆಕೆ ವಿಕಾರವಾಗಿ ಕಿರುಚುತ್ತ ಓಡಿ ಹೋಗುತ್ತಾಳೆ. ಇನ್ನು ಇವಳಿಂದ ಏನು ಅನಾಹುತ ಎದುರಾಗುತ್ತದೆಯೋ ಎಂಬ ಚಿಂತೆಯಲ್ಲಿ ರಾಮ ಲಕ್ಷ್ಮಣ ಇರುತ್ತಾರೆ.

 ಶೂರ್ಪನಖಿ  ಸಹೋದರರ ಬಳಿ ಬರುತ್ತಾಳೆ. ಕತ್ತರಿಸಿದ ಕಿವಿಗಳನ್ನು ನೋಡಿದ ಅವರು, ‘ಇದನ್ನು ಮಾಡಿದವರು ಯಾರು? ಅವಮಾನಿಸಿಕೊಂಡು ಏಕೆ ಬಂದೆ? ಈ ವಿರೂಪಗೊಳಿಸಿದವರ ವಿರುದ್ಧ ನಾವು ಹೋರಾಡಬೇಕು’ ಎನ್ನುತ್ತಾರೆ. ರಾಮ ಲಕ್ಷ್ಮಣರ ವಿರುದ್ಧ ಹೋರಾಡಲು ೧೪ ಜನರನ್ನು ಕಳಿಸುತ್ತಾರೆ ಆದರೆ ಶಬ್ದವೇಧಿ ಪರಿಚಿತ ರಾಮ ಲಕ್ಷ್ಮಣರು ದೂರದಿಂದಲೇ ಬಾಣಬಿಟ್ಟು ಅವರನ್ನು ಕೊಲ್ಲುತ್ತಾರೆ. ಇದರಿಂದ ಮತ್ತೆ ಹೆದರಿ ಓಡಿ ಹೋದ ಶೂರ್ಪನಖಿ ತನ್ನ ಸಹೋದರರಲ್ಲಿ ರಾಮ -ಲಕ್ಷ್ಮಣರು ಅವರನ್ನು ಮುಗಿಸಿದರು ಎಂದು ಹೇಳುತ್ತಾಳೆ. ಜೀವ ಭಯದಿಂದ ಓಡಿ ಬಂದ ತಂಗಿಯನ್ನು ನೋಡಿದ ಅವರು ಇನ್ನಷ್ಟು ಜನರನ್ನು ಕಳುಹಿಸುತ್ತಾರೆ. ಆದರೆ ಅವರೂ ಸಹ ರಾಮ- ಲಕ್ಷ್ಮಣರ ಬಾಣಪ್ರಯೋಗದಿಂದ ಹತರಾಗುತ್ತಾರೆ. ಜೀವಭಯದಿಂದ ಶೂರ್ಪನಖಿ ಕಾಡಿನೊಳಗೆ ಓಡಿ ಹೊಗಿ ಲಂಕೆಗೆ ತೆರಳುತ್ತಾಳೆ. 

ಇದನ್ನು ಅರಿತ ರಾವಣನ ಗೂಢಚಾರ ಅಕಂಪನ ರಾವಣ ಈ ವಿಷಯವನ್ನು ತಿಳಿಸುತ್ತಾನೆ. ಆಗ ರಾವಣ ‘ಅವರನ್ನು ಸಹಜವಾಗಿ ಸೋಲಿಸಲು ಸಾಧ್ಯವಿಲ್ಲ. ಅವರಲ್ಲಿರುವ ದೌರ್ಬಲ್ಯಗಳನ್ನು ಅರಿತು ಹೋರಾಡಬೇಕು. ಅವರ ಜೊತೆ ಸೀತೆ ಇದ್ದಾಳೆ. ಅವರು ಅವಳನ್ನು ಬಹಳ ಪ್ರೀತಿಸುತ್ತಾರೆ. ತುಂಬು ಶರೀರದ, ಯೌವ್ವನದ ಆಕೆಯೇ ಅವರ ದೌರ್ಬಲ್ಯ. ಅವಳನ್ನು ಅಪಹರಿಸಿ ತರಬಹುದು’ ಎಂದು ಯೋಚಿಸುತ್ತಾನೆ. ಆದರೂ ರಾವಣನಿಗೆ ಆತಂಕ ಕಾಡುತ್ತದೆ. ತಾಪಸಿ ಮಾರೀಚನ ಬಳಿ ರಾವಣ ಸಲಹೆ ಕೇಳುತ್ತಾನೆ ಆಗ ಆತ, ‘ನೀನಿನ್ನೂ ತಲೆಗೆ ಯೋಚಿಸುವ ಅವಕಾಶವನ್ನೇ ಕೊಟ್ಟಿಲ್ಲ’ ಎನ್ನುತ್ತಾ ‘ಅವರು ಮೈ ಬೆಳೆಸಿಕೊಂಡು ಮೆದುಳಿಗೆ ಕೆಲಸ ಕೊಟ್ಟಿದ್ದಾರೆ. ಅವರ ಶರೀರ, ಶಕ್ತಿಗೆ ಒಂದು ಮಿತಿ ಇದೆ. ಅವರ ಗೊಡವೆಗೆ ಹೋಗಬೇಡ. ದಾರಿಯಲ್ಲಿ ಹೋಗುವ ಮಾರಿಯನ್ನು ಮನೆಯಲ್ಲಿ ಬಿಟ್ಟುಕೊಂಡರು ಎನ್ನುವ ಹಾಗೆ ವರ್ತಿಸಬೇಡ. ಲಂಕೆಗೆ ತೆರಳಿ ಆಳಿಕೊಂಡಿರು. ನಿನ್ನ ತಲೆಯಲ್ಲಿ ಏಕೆ ಇಂಥ ವಿಚಾರ ಹೊಳೆಯಿತು, ಯಾರು ಹೇಳಿಕೊಟ್ಟರು’ ಎಂದು ಪ್ರಶ್ನಿಸಿ ‘ಹೋಗು, ಪ್ರಜೆಗಳಿಗೆ ಹಿತವಾಗುವಂತೆ ರಾಜ್ಯವನ್ನಾಳು’ ಎಂದು ಹೇಳುತ್ತಾನೆ. ಮರು ಮಾತನಾಡದೆ ಅಲ್ಲಿಂದ ರಾವಣ ಎದ್ದು ಹೋಗುತ್ತಾನೆ. 

ರಾವಣನ ಅರಮನೆಗೆ ಶೂರ್ಪನಖಿ ಗೋಳಾಡಿಕೊಂಡು ಅಳುತ್ತಾ ಧಾವಿಸುತ್ತಾಳೆ.  ರಾವಣ ಕಳಾಹೀನವಾಗಿ ಮಾರೀಚ ಹೇಳಿದ್ದನ್ನು ನೆನಪಿಸಿಕೊಳ್ಳುತ್ತಾನೆ. ಶೂರ್ಪನಖಿತು, ‘ಅವಳನ್ನು ಅಪಹರಿಸಿ ತಂದರೆ ನಿನ್ನ ಅಂತಃಪುರಕ್ಕೆ ಶೋಭೆ ಬರುತ್ತದೆ. ಎರಡನೆಯದಾಗಿ, ತನ್ನ ಪ್ರಾಣ ಎಂದು ಬಗೆದಿರುವ ಗಂಡನನ್ನು ಕಳೆದುಕೊಂಡಿದ್ದಕ್ಕಾಗಿ ಮರುಗುತ್ತಾಳೆ. ಆ ಸ್ತ್ರೀರತ್ನವನ್ನು ಎತ್ತಿಕೊಂಡು ಬಾ. ನನ್ನ ಸೇಡು ತೀರುತ್ತದೆ, ನಿನ್ನ ಹಸಿವು ಇಂಗುತ್ತದೆ ಎಂದು ಸಲಹೆ ಕೊಡುತ್ತಾಳೆ.  ಇದು ಸರಿಯಾದ ಮಾರ್ಗ ಎನಿಸಿ ಅವಳನ್ನು ಅಪಹರಿಸಿ ತರಬೇಕೆಂದು ಯೋಚಿಸಿ ಮಾರನೆ ದಿನ ಮತ್ತೆ ಮಾರೀಚನಲ್ಲಿಗೆ ತೆರಳಿ ಮತ್ತೆ ಸಲಹೆ ಕೇಳಿದಾಗ ಸಹಾಯ ಮಾಡಲು ಸಿದ್ಧನಾಗುತ್ತಾನೆ. 

 ರಾವಣ ಕಷಾಯ ವಸ್ತ್ರ ಧರಿಸಿ ಮುನಿವೇಷದೊಂದಿಗೆ ಪಂಚವಟಿಯತ್ತ ತೆರಳುತ್ತಾನೆ. ರಾಮ- ಲಕ್ಷ್ಮಣರು ಬೇಟೆಗೆ ತೆರಲಿರುವ ಸಮಯವದು. ಸುವರ್ಣ ಶರೀರದ ಜಿಂಕೆಯೊಂದು ಸೀತೆಯನ್ನು ನೋಡುತ್ತಿರುತ್ತದೆ. ಅದು ಬೇಕು ಎಂದು ಸೀತೆ ಹಠ ಹಿಡಿದಾಗ ರಾಮ ಅದರ ಬೇಟೆಗೆ ಹೋದಾಗ ಹೆದರಿ ಓಡುತ್ತದೆ. ರಾಮ ಅದರ ಹಿದೆಮ ಓಡಿ ಕೊಲ್ಲುವಾಗ, ಯಾರೋ ಕಾವಿಧಾರಿಗಳು ‘ಹಾ ಲಕ್ಷ್ಮಣ. ಹಾ ಸೀತೆ’ ಎಂದು ಕೂಗಿದಂತಾಗುತ್ತದೆ. ಇತ್ತ ರಾವಣ ಸೀತೆ ಇದ್ದಲ್ಲಿಗೆ ಬಂದು ಕುಟೀರದೆದುರು ಬಂದು ‘ಭವತಿ ಭಿಕ್ಷಾಂದೇಹಿ’ ಎನ್ನುತ್ತಾನೆ. ಸೀತೆ ಒಳಗೆ ಕರೆದಾಗ ಅನುಸರಿಸಿ ಹೋಗಿ, ನನಗೆ ನೀನು ಬೇಕು, ಸದ್ದು ಮಾಡದೆ ನನ್ನನ್ನು ಅನುಸರಿಸು ಎನ್ನುತ್ತಾ ಕರೆದೊಯ್ಯುತ್ತಾನೆ. 

 

  ರಾಮ ಜಿಂಕೆಯ ದೇಹವನ್ನು ತಂದು ಒಗೆದು ‘ಸೀತೆ’ ಎಂದು ಕರೆದಾಗ ಮರು ದನಿ ಕೇಳಿ ಬರಲಿಲ್ಲ. ಕುಟೀರಲ್ಲಿ ಹುಡುಕಾಡುತ್ತಾನೆ. ಕಂಡುಬರುವುದಿಲ್ಲ.   ಕುಸಿದುಬೀಳುತ್ತಾನೆ. ಲಕ್ಷ್ಮಣ ಅವಳ ಅಪಹರಣವಾಗಿರಬಹುದು ಎಂದು  ಹೇಳುತ್ತಾನೆ. ಇಬ್ಬರೂ ಸೀತಾ ಅನ್ವೇಷಣೆಯನ್ನು ಆರಂಭಿಸುತ್ತಾರೆ. ಕಾಡಿನಲ್ಲಿ ಹೋಗುವಾಗ ಜಟಾಯು ನೆತ್ತರದ ಮಡುವಿನಲ್ಲಿ ಒರಗಿದ್ದು ಕಂಡುಬರುತ್ತದೆ. ಅಲ್ಲಿಯೇ ಮುರಿದುಬಿದ್ದ ಕತ್ತಿ ಕಂಡುಬರುತ್ತದೆ. ಆಗ ಯಾವನೋ ರಾಕ್ಷಸ ಅವರ ಅಪಹರಿಸಿರಬಹುದು ಎನ್ನುವುದು ಅವರ ಗಮನಕ್ಕೆ ಬರುತ್ತದೆ. ಜಟಾಯು ತೇಲುಗಣ್ಣು ಮಾಡುತ್ತಾ ದಕ್ಷಿಣದ ಕಡೆ ಕೈ ಮಾಡಿ ತೋರಿಸುತ್ತಾ, ಅಂತಿಮ ಉಸಿರನ್ನೆಳೆಯುತ್ತಾನೆ.

ಮುಂದೆ ಸಾಗುವಾಗ ರಾಕ್ಷಸನೊಬ್ಬ ಎದುರಾಗುತ್ತಾನೆ. ಆತ ‘ಲಂಕೆಯ ರಾವಣಾಧೀಶ್ವರ ನಿಮ್ಮ ಪತ್ನಿಯನ್ನು ಅಪರಿಸಿಕೊಂಡು ಹೋಗಿದ್ದಾನೆ. ಇಲ್ಲಿ ಪಂಪಾ ಸರೋವರ ಇದೆ. ಅಲ್ಲಿಯೇ ಋಷ್ಯಮೂಕ ಮುಖಪರ್ವತದಲ್ಲಿ ಮಹಾವೀರನಾದ ಸುಗ್ರೀವ ಎನ್ನುವ ವಾನರನಿದ್ದಾನೆ. ವಾಲಿಯ ಭಯದಿಂದ ಅವನು ರಾಜ್ಯ ತೊರೆದು ಇಲ್ಲಿ ವಾಸವಾಗಿದ್ದಾನೆ. ಅವನ ಸಹಾಯ ಪಡೆದು ನೀವು ಮುಂದೆ ಸಾಗಬಹುದು’ ಎನ್ನುತ್ತಾನೆ. ಇಬ್ಬರೂ ಸುಗ್ರೀವನಲ್ಲಿಗೆ ತೆರಳುತ್ತಾರೆ. ಅಲ್ಲಿ ಪರಿಚಯ ಮಾಡಿಕೊಂಡು, ಮಾತುಕತೆಯಾದ ನಂತರ ‘ಅಪರಹಣಕ್ಕೊಳಗಾದ ಸೀತೆಯನ್ನು ಹಿಂದಿರುಗಿಸಲು ಸಹಾಯ ಮಾಡಬಹುದೇ’ ಎಂದು ಕೇಳುತ್ತಾರೆ. ‘ನನಗೆ ಸಹಾಯ ಮಾಡುವುದಾದರೆ ನಾನು ನಿಮಗೆ ಸಹಾಯ ಮಾಡುತ್ತೇನೆ’ ಎಂದು ಸುಗ್ರೀವ ಪ್ರತಿಯಾಗಿ ನುಡಿಯುತ್ತಾನೆ. ‘ಯಾವ ರೀತಿಯ ಸಹಾಯ’ ಎಂದು ರಾಮ ಕೇಳುತ್ತಾನೆ. ‘ನೀನು ಪ್ರೀತಿಯ ಹೆಂಡತಿಯನ್ನು ಹೇಗೆ ರಾವಣನಿಂದ ಕಳೆದುಕೊಂಡಿದ್ದೀಯೋ ಹಾಗೆ ನಾನು ಸ್ವಬಂಧು ವಾಲಿಯಿಂದ ಸತಿಯನ್ನು ಕಳೆದುಕೊಂಡು ಹಂಬಲಿಸುತ್ತಿದ್ದೇನೆ’ ಎನ್ನುತ್ತಾನೆ.

 ಸುಗ್ರೀವನು ‘ವಾಲಿ ಮಲ್ಲವೀರ, ಮುಷ್ಟಿ ಯುದ್ಧ ಪ್ರವೀಣ. ನೇರ ಹೋರಾಟದಲ್ಲಿ ಆತನನ್ನು ಸೋಲಿಸುವುದು ಕಷ್ಟ. ಆತನನ್ನು ವಾನರ ಪಡೆಯಿಂದ ಹೊರತುಪಡಿಸಿ ನೇರವಾಗಿ ಆಹ್ವಾನಿಸಿ ಹೊಡೆಯಬೇಕು’ ಎಂದು ಸಲಹೆ ಕೊಡುತ್ತಾನೆ. ‘ಇದು ಸರಿಯಾದ ಉತ್ತರ’ ಎಂದು ನಿರ್ಧರಿಸಿ ಮಾಡುವಾಗ ಆತನನ್ನು ಕೊಲ್ಲುವ ಯೋಚನೆಯನ್ನು ಮಾಡುತ್ತಾರೆ. ಸುಗ್ರೀವ ಕಿಷ್ಕಿಂಧೆಗೆ ತೆರಳಿ ವಾಲಿಯನ್ನು ರೋಷಾವೇಶದಿಂದ ನಿಂದಿಸುತ್ತಾ, ಕೂಗಾಡುತ್ತಾ ಕಾದಾಟ ಮಾಡಲು ಬಂದಿದ್ದೇನೆ ಎನ್ನುತ್ತಾ ಮಾತುಗಳಿಂದ ಕೆಣಕುತ್ತಾನೆ. ಕಾದಾಟಕ್ಕೆ ಮುಂದಾದಾಗ ಪತ್ನಿ ತಾರೆ ಅವನನ್ನು ತಡೆಯುತ್ತಾಳೆ. ಹೀಗೆ ಅಣ್ಣ ತಮ್ಮರ ಮಧ್ಯೆ ಕಾದಾಟ ಆರಂಭವಾದಾಗ ರಾಮ ಬಿಟ್ಟ ಬಾಣ ವಾಲಿಯ ಬೆನ್ನಿನಿಂದ ನುಗ್ಗಿ ಹೊಟ್ಟೆ ಒಳಗಿಂದ ಹೊರಗೆ ಬರುತ್ತದೆ. ಆಕ್ರಂದನ ಮುಗಿಲು ಮುಟ್ಟುತ್ತದೆ. ‘ನೀನೇಕೆ ಮೋಸದಿಂದ ಬಾಣ ಪ್ರಯೋಗಿಸಿದೆ’ ಎಂದು ರಾಮನನ್ನು ಪ್ರಶ್ನಿಸುತ್ತಾನೆ ಹೀಗೆ ಕಿಷ್ಕಿಂಧೆಯ ದೊರೆತನವನ್ನು ಮತ್ತೆ ಸುಗ್ರೀವನಿಗೆ ಒದಗಿಸಿಕೊಡುತ್ತಾರೆ. ಸುಗ್ರೀವ ಕಿಷ್ಕಿಂಧೆಯ ಪ್ರವೇಶ ಮಾಡುತ್ತಾನೆ.  ಹನುಮಂತ ಪ್ರಧಾನಮಂತ್ರಿಯಾಗಿ ಕಿಷ್ಕಿಂಧೆಯ ಎಲ್ಲ ಉಸ್ತುವಾರಿಯನ್ನು ಹೊತ್ತಿರುತ್ತಾನೆ. ಇದು ನಂತರ ಸುಗ್ರೀವ ಸೀತೆಯನ್ನು ರಾವಣನಿಂದ ಬಿಡಿಸಿಕೊಂಡು ಬರಲು ಕಾರ್ಯತತ್ಪರವಾನುವುದನನ್ನು ಮರೆತು ಹೆಂಡ ಮತ್ತು ಹೆಂಡತಿಯರಲ್ಲಿ ಮುಳುಗುತ್ತಾನೆ. ಆತನಿಗೆ  ಸೀತಾನ್ವೇಷಣೆ ಜ್ಞಾಪಿಸಲು ಹನುಮಂತ ಮುಂದಾಗಿ ‘ವಾಲಿಯನ್ನು ನಿವಾರಿಸಿ ನಿನಗೆ ಅಧಿಕಾರ ಕೊಟ್ಟ ಮೇಲೆ ನೀನು ಕೆಲಸವನ್ನು ಮಾಡಬೇಕಿತ್ತು’ ಎಂದಾಗ ಸುಗ್ರೀವನಿಗೆ ಏರಿದ ಮತ್ತು ನಶೆ ಕೂಡಲೇ ಇಳಿಯುತ್ತದೆ. ಸುಗ್ರೀವ ತನ್ನಲ್ಲಿಗೆ ನೆನಪಿಸಲು ಬಂದಿದ್ದ ಲಕ್ಷ್ಮಣನಲ್ಲಿ ದೀರ್ಘಕಾಲದ ನಿರ್ಲಕ್ಷ್ಯಕ್ಕೆ ಕ್ಷಮೆ ಕೋರಿ ಅವನನ್ನು ಆಲಂಗಿಸಿಕೊಳ್ಳುತ್ತಾನೆ. ಸೀತಾನ್ವೇಷಣೆಯ ಕಾರ್ಯ ಆರಂಭಗೊಳ್ಳುತ್ತದೆ

ಸುಗ್ರೀವ ಆಜ್ಞೆ ಹೊರಡಿಸಿ (ಸುಗ್ರೀವನ ಆಜ್ಞೆ ಎಂದರೆ ಅದು ಶಾಸನವೇ ಸರಿ) ಹನುಮಂತ, ನೀಲ, ನಳ ಮೊದಲಾದವರೊಂದಿಗೆ ತಂಡ ರಚಿಸಿ, ಸೀತಾದೇವಿಯ ಕುರಿತಾದ ವಾರ್ತೆಯನ್ನು ತರಬೇಕು. ಸರಿಯಾಗಿ ಒಂದು ಮಾಸದ ಅವಧಿಯಲ್ಲಿ ವಾರ್ತೆಯೊಂದಿಗೆ ಹಿಂದಿರುಗದಿದ್ದರೆ ನಿಮಗೆಲ್ಲರಿಗೂ ಮರಣದಂಡನೆ ಶಿಕ್ಷೆ ತಪ್ಪಿದ್ದಲ್ಲ ಎಂದು ಎಚ್ಚರಿಸುತ್ತಾನೆ. ಇದಕ್ಕಾಗಿ ವಾಲಿಯ ಮಗ ಅಂಗಧನನ್ನು ಮುಖಂಡನನ್ನಾಗಿಸುತ್ತಾನೆ. ಕಾಡಿನಲ್ಲಿ ಎಷ್ಟು ತಿಂಗಳು ಹುಡುಕಿದರೂ ಸೀತೆ ಸಿಗದಿದ್ದಾಗ ಆತಂಕಿತನಾಗಿ ಅಂಗದ ಪ್ರಾಯೋಪವೇಶ.................. ಧಾರಿಯಾಗಿ (ಬಹುಕಾಲ ಅನ್ನ, ನೀರು ಬಿಟ್ಟು ಆತ್ಮಹತ್ಯೆ ಮಾಡಿಕೊಳ್ಳುವುದು) ಯೋಚಿಸುತ್ತಾನೆ. ಜಟಾಯುವಿನ ಹಿರಿಯ ಸಹೋದರ ಸಂಪಾದಿ ಭೇಟಿಯಾಗುತ್ತಾನೆ ಲಂಕೆ ಎಲ್ಲಿದೆ ಎನ್ನುವುದು ಆತನಿಗೆ ತಿಳಿದಿದ್ದರಿಂದ ಲಂಕೆಯ ಮಾಹಿತಿಯನ್ನು ನೀಡುತ್ತಾನೆ. ಸಮುದ್ರವನ್ನು ದಾಟಿ ಲಂಕೆಯನ್ನು ಪ್ರವೇಶಿಸಬೇಕು ಎಂದು ಮಾಹಿತಿ ಕೊಡುತ್ತಾನೆ ಮಹೇಂದ್ರ ಪರ್ವತ, ಮೈನಾಕ ಪರ್ವತ, ತ್ರಿಕೂಟಾಚಲ ಮತ್ತು ಅರಿಷ್ಟ ಪರ್ವತ ಇವುಗಳನ್ನು ದಾಟಿ ಹೋಗಬೇಕು. ಲಂಕಾ ಪಟ್ಟಣಕ್ಕೆ  ಜಲಮಾರ್ಗವೂ ಇದೆ, ಗಿರಿ ಮಾರ್ಗವೂ ಇದೆ ಎಂದಾಗ ಆಗ ಅಂಗದ ತಾನೇ ಹೊರಡುವುದಾಗಿ ಹೇಳಿದರೂ ಜಾಂಬವಂತ ಮಾತ್ರ ಹನುಮಂತ ಲಂಕೆಯನ್ನು ಕಂಡು ದೇವಿ ಇರುವ ನೆಲೆಯನ್ನು ಶೋಧಿಸಿ ಸುರಕ್ಷಿತವಾಗಿ ಹಿಂದಿರುಗಬಲ್ಲನು ಎಂದು ಹೇಳುತ್ತಾನೆ. ಆ ಪ್ರಕಾರ ಅಂಗದ ಹನುಮಂತ ಲಂಕೆಗೆ ತೆರಳಲು ಒಪ್ಪಿಗೆ ಕೊಡುತ್ತಾನೆ. ಎಲ್ಲರೂ ಹನುಮಂತನನ್ನು ಆಶೀರ್ವದಿಸಿ ಕಣ್ಣೀರು ತುಂಬಿಕೊಂಡು ಲಂಕೆಗೆ ಬೀಳ್ಕೊಡುತ್ತಾರೆ.

 

 ಹನುಮಂತ ದಕ್ಷಿಣ ಸಮುದ್ರದ ನೀರಿಗೆ ಹಾರಿ, ಈಜಿ,  ಹಲವು ದಿನಗಳ ನಂತರ ಲಂಕಾ ನಗರ ಪ್ರವೇಶಿಸುತ್ತಾನೆ. ಎಲ್ಲವನ್ನೂ ಗಮನಿಸಿ ಅಲ್ಲಿರುವ ದೇವಾಲಯ ಒಂದನ್ನು ಪ್ರವೇಶಿಸುತ್ತಾನೆ. ಅಲ್ಲಿರುವ ದೇವಿಯು ರಾಕ್ಷಸಿಯತರ ಇದ್ದು ಕುಲದೇವತೆ ಇರಬಹುದೆಂದು ಯೋಚಿಸುತ್ತಾನೆ. ನಂತರ ಲಂಕಾ ನಗರದ ಪ್ರದಕ್ಷಿಣೆಗೆ ತೆರಳುತ್ತಾನೆ. ಒಂದು ಸುತ್ತು ತಿರುಗಾಟದ ನಂತರ ಹನುಮಂತನಿಗೆ ಲಂಕಾ ನಗರದ ಕುರಿತು ಅಸ್ಪಷ್ಟವಾದ ಮಾಹಿತಿ ಸಿಗುತ್ತದೆ. ಇರುವ ಭಟರನ್ನು ಗಮನಿಸಿ ಅವರ ಗಮನಕ್ಕೆ ಬಾರದಂತೆ ಗೋಡೆಯನೇರಿ ಒಳಕ್ಕೆ ನೆಗೆಯುತ್ತಾನೆ. ಅಲ್ಲಿ ಇರುವ ಅರಮೆನಯ ಶಯ್ಯಾಗೃಹದ ಹೆಂಗಸರನ್ನು ಕಂಡು ಅಜನ್ಮ ಬ್ರಹ್ಮಚಾರಿ ಆದ ತನ್ನಂತಹವನು ಇಂಥವರನ್ನು ನೋಡಬಾರದು ಎಂದು ವಾಪಸಾಗುತ್ತಾನೆ.

ಮರುದಿನ ಮತ್ತೆ ಸೀತಾನ್ವೇಷಣೆಯನ್ನು ಆರಂಭಿಸಿ ಕುಂಭಕರ್ಣನ ಅರಮನೆಗೆ ತೆರಳುತ್ತಾನೆ. ಅಂದು ರಾತ್ರಿ ದೇವಾಲಯದಲ್ಲಿ ಮಲಗಿದ್ದಾಗ ಕನಸಿನಲ್ಲಿ ಆತನಿಗೆ ವಿಕಾರರೂಪಿಣಿಯಾದ ರಾಕ್ಷ್ಷಸಿ ಎದುರಾಗುತ್ತಾಳೆ. ಹನುಮಂತನಲ್ಲಿ ‘ಇಲ್ಲಿಗೆ ಬಂದ ಕಾರಣವೇನು ಎಂದು ಪ್ರಶ್ನಿಸುತ್ತಾಳೆ. ಹೇಳದಿದ್ದರೆ ಮುಷ್ಟಿ ಪ್ರಹಾರ ಮಾಡುವೆ’ ಎಂದು ಎಚ್ಚರಿಸುತ್ತಾಳೆ. ಆ ಪ್ರಕಾರ ಹನುಮಂತನಿಗೆ ಹೊಡೆತ ಕೊಡುತ್ತಾಳೆ. ಇದರಿಂದ ಸಿಟ್ಟಿಗೆದ್ದ ಹನುಮಂತ ಭೀಮಕಾಯದವನಾಗಿ ಎದ್ದುನಿಂತು ಆಕೆಯ ತಲೆಗೊಂದು ಬಲವಾದ ಹೊಡೆತ ಕೊಡುತ್ತಾನೆ. ಇದರಿಂದ ಆಕೆ ತಲೆಸುತ್ತು ಬಂದು ಕೆಳಕ್ಕೆ ಬೀಳುತ್ತಾಳೆ. ನಂತರ ಎದ್ದು ನಿಂತು ‘ತನ್ನಿಂದ ಏನು ಸಹಾಯವಾಗಬೇಕೆಂದು ಕೇಳುತ್ತಾಳೆ. ಸೀತೆ ಇರುವ ನೆಲೆಯನ್ನು ಗುರುತಿಸುವುದಕ್ಕಾಗಿ ನೀನು ಬಂದೆ ಅಲ್ಲವೇ ಎಂದು ಕೇಳುತ್ತಾಳೆ. ನೀನೇ ಅದನ್ನು ಗುರುತಿಸಬೇಕು’ ಎಂದು ಹೇಳುತ್ತಾಳೆ. ಹನುಮಂತನನ್ನು ದೇವಸ್ಥಾನದ ಅರ್ಚಕರು ಎಬ್ಬಿಸುತ್ತ ‘ನೀನು ಯಾರು, ಎಲ್ಲಿಂದ ಬಂದೆ’ ಎಂದು ಪ್ರಶ್ನಿಸುತ್ತಾರೆ.

 ನಂತರ ಅವರೊಂದಿಗೆ ಆತ್ಮೀಯತೆ ಬೆಳೆದಾಗ ಅವರು ಮನೆಗೆ ಕರೆದೊಯ್ಯುತ್ತಾರೆ. ಅರ್ಚಕ ವಾಮನಾಚಾರ್ಯರು ಪತ್ನಿ ಬ್ರಾಹ್ಮಿಣಿಯನ್ನು ಪರಿಚಯಿಸುತ್ತಾನೆ. ಅವಳಿಂದ ಹನುಮಂತ ಇನ್ನಷ್ಟು ಮಾಹಿತಿಯನ್ನು ಪಡೆಯುತ್ತಾನೆ. ಆಗ ಬ್ರಾಹ್ಮಿಣಿ ‘ಆಕೆಯನ್ನು ರಾವಣ ಒಂದು ರೀತಿಯಲ್ಲಿ ಬಂಧಮುಕ್ತ ಮಾಡಿದ್ದಾನೆ. ಇಚ್ಛಿಸಿದರೆ ಅವಳು ತೆರಳಬಹುದು.  ಸೀತೆ ಇರುವಲ್ಲಿ ಪುರುಷರಿಗೆ ಪ್ರವೇಶವಿಲ್ಲ. ಹಾಗಾಗಿ ನಾನು ನಿನಗೆ ಸಹಾಯ ಮಾಡಲು ಸಾಧ್ಯವಾಗುವುದಿಲ್ಲ’ ಎನ್ನುತ್ತಾ ಎಲ್ಲ ವಿವರ ಹೇಳುತ್ತಾಳೆ. ಇದರಿಂದ ಹನುಮಂತನಿಗೆ ಸೀತಾದೇವಿ ಇರುವ ಸ್ಥಳ ತಿಳಿದಂಯತಾಗುತ್ತದೆ. ಕಿಷ್ಕಿಂಧೆಗೆ ತೆರಳಿ ಇಲ್ಲಿನ ಸ್ಥಿತಿಗತಿಯನ್ನು ರಾಮಲಕ್ಷ್ಮಣರಿಗೆ ವಿವರಿಸಲು ನಿರ್ಧರಿಸುತ್ತಾನೆ.

 

ಅಶೋಕ ವನದಲ್ಲಿ ಸೀತೆಯನ್ನು ಇರಿಸಲಾಗಿದೆ ಎಂದು ತಿಳಿಯುತ್ತಲೇ ಹನುಮಂತನ ಮನಸ್ಸು ಅತ್ತ ತೆರಳಲು ತವಕಿಸುತ್ತದೆ. ಆದರೆ ಅಲ್ಲಿ ಗಂಡಸರಿಗೆ ಪ್ರವೇಶವಿಲ್ಲ ಎಂದು ಬ್ರಾಹ್ಮಿಣಿ ಹೇಳಿದ್ದಳು. ಆದರೂ ಅಲ್ಲಿಗೆ ತೆರಳಿ ಪರಿಶೀಲನೆ ನಡೆಸುತ್ತಾನೆ. ಅಶೋಕವನದ ಸೌಂದರ್ಯ ಸವಿದು, ಸೀತೆಗಾಗಿ ಕಣ್ಣುಗಳು ಹುಡುಕಾಡುತ್ತಿದ್ದಾಗ ಅರಮನೆಯ ಮುಂಭಾಗದಲ್ಲಿ ಊರ್ವ ಸ್ತ್ರೀ ಮಂಡಿ ಊರಿ ಮಂಕು ಬಡಿದವಳಂತೆ ಕುಳಿತಿರುವುದು ಕಂಡುಬರುತ್ತದೆ. ಹರಡಿದ ಕೂದಲುಗಳು, ಎತ್ತಲೋ ದೃಷ್ಟಿ ಇಟ್ಟು ನೋಡುತ್ತಿರುವುದು, ಮಾಸಿದ ವಸ್ತ್ರ ಧರಿಸಿರುವುದು ಕಂಡುಬರುತ್ತದೆ. ಅದೇ ವೇಳೆ  ಪರಿಚಾರಿಕೆ ಆಹಾರ ಕೊಟ್ಟರೂ ಆಕೆ ತಿನ್ನುವುದೇ ಇಲ್ಲ. ಒತ್ತಾಯ ಮಾಡಿದಾಗ ನಾಲ್ಕು ತುತ್ತು ತಿನ್ನುತ್ತಿದ್ದಳು. ಇವಳೇ ಸೀತಾದೇವಿ ಎಂದುಕೊಂಡು ಆಕೆಯತ್ತ ನಡೆದಾಗ ಆಕೆ ಎದ್ದು ನಿಲ್ಲುತ್ತಾಳೆ. ‘,ಭಯಪಡಬೇಡ. ನಾನು ನಿನ್ನ ಪ್ರಿಯ ರಾಮನ ದೂತ ಹನುಮಂತ. ನಿನ್ನನ್ನು ಹುಡುಕಿಕೊಂಡು ಬಂದಿದ್ದೇನೆ. ನಿನ್ನ ಸ್ಥಿತಿಗತಿ ಅರಿಯಲು ನನ್ನನ್ನು ಇಲ್ಲಿಗೆ ಕಳುಹಿಸಿದ್ದಾರೆ’ ಎನ್ನುತ್ತಾ ಮಾತನಾಡಲಾರಂಭಿಸುವನು. ಆದರೆ ಆಕೆಗೆ ನಂಬಿಗೆ ಬರುವುದಿಲ್ಲ. ರಾಮ ಕೊಟ್ಟಿದ್ದ ಮುದ್ರೆ ಉಂಗುರವನ್ನು ಅವಳಿಗೆ ಕೊಟ್ಟಾಗ ನಂಬಿಕೆ ಬರುತ್ತದೆ. ಸೀತಾದೇವಿ ಅಳ ತೊಡಗುತ್ತಾಳೆ. 

ಆಕೆಯನ್ನು ಹೇಗೆ ಸಮಾಧಾನಿಸಬೇಕೆಂದು ಹನುಮಂತನಿಗೆ ಅರ್ಥವಾಗುವುದಿಲ್ಲ. ‘ನನ್ನನ್ನು ಹುಡುಕಿಕೊಂಡು ರಾಮ ಲಕ್ಷ್ಮಣ ಬರುತ್ತಾರೆ ಎಂದು ನಿರೀಕ್ಷಿಸಿದ್ದೆ. ಆದರೆ ಬರಲೇ ಇಲ್ಲ’ ಎಂದು ವ್ಯಥೆ ಪಡುತ್ತಾಳೆ.  ‘ನನ್ನ ಹೆಗಲ ಮೇಲೆ ಕುಳಿತುಕೋ. ನಿನ್ನನ್ನು ಹೊತ್ತು ಪಯಣಿಸುವೆ’ ಎಂದು ಹನುಮಂತ ಹೇಳಿದಾಗ ಆಕೆ ಒಪ್ಪುವುದಿಲ್ಲ. ‘ನೀನು ಹಿಂದಿರುಗು’ ಎಂದು ಸೀತೆ ಹೇಳಿದಾಗ ಅಲ್ಲಿಂದ ಹೊರಟು ಅಲ್ಲಿಯೇ ಬಾಗಿಲಲ್ಲಿ  ಬಿದ್ದ ಕತ್ತಿಯೊಂದನ್ನು ಎತ್ತಿಕೊಂಡು ಬರುವಾಗ ರಾವಣನ  ಪಡೆ ಈತನ ವಿರುದ್ದ ತಿರುಗಿ ಬೀಳುತ್ತದೆ. ಕತ್ತಲಿನಲ್ಲಿಯೇ ಅಲ್ಲಿದ್ದ ಅಂಗರಕ್ಷಕರು ವಿರುದ್ಧ ಹೋರಾಟ ಆರಂಭಿಸುತ್ತಾನೆ. ‘ರಾಮನಿಗೆ ಜಯವಾಗಲಿ, ಲಕ್ಷ್ಮಣನಿಗೆ ಜಯವಾಗಲಿ, ಸುಗ್ರೀವನಿಗೆ ಜಯವಾಗಲಿ’ ಅನ್ನುತ್ತಾ ರಾವಣನ ನೂರಾರು ಭಟರನ್ನು ಕೊಚ್ಚಿ ಹಾಕುತ್ತಾನೆ.

 ಆಗ ಬಂದ ಇಂದ್ರಜಿತು ಆತನನ್ನು ಸೆರೆ ಹಿಡಿಯಲು ಯೋಚಿಸಿದರೂ ನಂತರ  ಮೋಹನಾಸ್ತ್ರದಿಂದ ಹನುಮಂತನನ್ನು ನೆಲಕ್ಕುರುಳಿಸುತ್ತಾನೆ. ನಂತರ ಹಗ್ಗದಿಂದ ಕಟ್ಟಿ ರಾವಣನ ಎದುರು ಕರೆತಂದಾಗ, ‘ನಾನು ರಾಮನ ಆದೇಶ ಹೊತ್ತು ಬಂದಿದ್ದೇನೆ. ನಿಮ್ಮ ಪಡೆ ನನ್ನ ಮೇಲೆ ದಾಳಿ ಮಾಡಿತು. ಸ್ವರಕ್ಷಣೆಗೆ ನಾನು ದಾಳಿ ಮಾಡಿದೆ’ ಎಂದು ಹೇಳಿಕೊಳ್ಳುತ್ತಾನೆ. ಹನುಂತನನ್ನು ಕೊಲ್ಲಲು ರಾವಣ ಯೋಚಿಸಿದಾಗ ವಿಭೀಷಣ ‘ರಾಜ್ಯ ವೈರಮುಕ್ತ ಆಗಬೇಕೆಂದರೆ ಶತ್ರುಗಳನ್ನು ಹುಡುಕಿಕೊಲ್ಲಬೇಕೆ ವಿನಾ ಅವರು ಕಳುಹಿಸಿದ  ದೂತನನ್ನಲ್ಲ’ ಎಂದು ಬುದ್ಧಿ ಹೇಳುತ್ತಾನೆ. ಹಾಗಾದರೆ ಏನು ಮಾಡಬೇಕೆಂದಾಗ, ಹನುಮಂತನನ್ನು ಊರಲ್ಲಿ ಮೆರವಣಿಗೆ ಮಾಡಿ ಆತನ ಎದೆಗೆ ಸುಡು ಠಸ್ಸೆಯನ್ನು ಒತ್ತಲು ಸೂಚಿಸುತ್ತಾನೆ. ಆ ಪ್ರಕಾರ ಸೈನಿಕರು ಮಾಡುತ್ತಾರೆ. ಹನುಮಂತ ನೋವಿನಿಂ ಬಳಲಿ ಸಮುದ್ರದೊಳಗೆ ಮುಳುಗುತ್ತಾನೆ. ನಂತರ ಅಲ್ಲಿಂದ ಹೊರಟು ವಿಂಧ್ಯ ಪರ್ವತಕ್ಕೆ ಮರಳುತ್ತಾನೆ. ಹನುಮಂತನನ್ನು ಎಲ್ಲರೂ ಕಂಡು ಜಿಗಿದಾಡುತ್ತಾರೆ, ಕುಣಿದಾಡುತ್ತಾರೆ, ಲಂಕೆಯ ಘಟನೆಗಳನ್ನೆಲ್ಲ ಸವಿವರವಾಗಿ ಹೇಳುತ್ತಾನೆ. ಸೀತಾದೇವಿಯ ಕುರಿತು ಹೇಳುವಾಗ ಶೂರ್ಪನಖಿಗೆ ಮಾಡಿದ ಅವಮಾನದ ಸೇಡಿಗಾಗಿ ಸೀತಾದೇವಿಯನ್ನು ರಾವಣ ಅಪಹರಿಸಿದ್ದಾನೆ. ರಾಮ- ಲಕ್ಷ್ಮಣರು ಬಂದು ತನ್ನನ್ನು ಕರೆದೊಯ್ಯುತ್ತಾರೆಂಬ ನಿರೀಕ್ಷೆಯಲ್ಲಿದ್ದಾಳೆ.  

ಕಿಷ್ಕಿಂಧೆಗೆ ವಾನರ ಯಾತ್ರೆ ಆರಂಭಗೊಳ್ಳುತ್ತದೆ. ರಾಮನಿಗೆ ‘ಸೀತೆ ಬದುಕಿದ್ದರೂ ಪುನ: ಗೆದ್ದು ತರುವುದು ಅಸಾಧ್ಯ’ ಎಂಬ ಚಿಂತೆ ಎದುರಾಗುತ್ತದೆ. ನಂತರ ಸಮುದ್ರವನ್ನು ದಾಟುವುದು ಹೇಗೆ? ಎಂಬ ಯೋಚನೆಯಾತ್ತದೆ. ಸುಗ್ರೀವ ಮತ್ತು ಅಂಗದ ಸಮುದ್ರದಲ್ಲಿ ತೇಲುವ ಮರದ ತಟ್ಟೆಗಳನ್ನು ಮಾಡಿ ಜೋಡಿಸಿ ಇಡಲಾಗಿದೆ. ಯೋಜನೆ ರೂಪಿಸಲಾಗಿದೆ ಎಂದು ಹೇಳುತ್ತಾರೆ.  ವಾನರ ಪಡೆ ಲಂಕೆಯತ್ತ ಹೆಜ್ಜೆ ಹಾಕುತ್ತದೆ.

ರಾಮ, ಲಕ್ಷ್ಮಣ, ಸುಗ್ರೀವ ಮತ್ತಿತರ ಪ್ರಮುಖರು ಸೈನ್ಯದೊಂದಿಗೆ ಸುರಕ್ಷಿತವಾಗಿ ಲಂಕೆ ತಲುಪುತ್ತಾರೆ. ಸಮುದ್ರ ತೀರದ ವನದಲ್ಲಿ ವಾನರ ಸೈನ್ಯ ಬೀಡು ಬಿಟ್ಟಿರುತ್ತದೆ. ರಾವಣನ ಗುಪ್ತಚರ ವಿಭಾಗ ಆತನಿಗೆ ಕಿಷ್ಕಿಂಧೆಯ ಸೈನ್ಯ ಬಂದಿರುವ ವಿಷಯವನ್ನು ತಿಳಿಸಿದಾಗ, ತಳಮಳ ಹೆಚ್ಚಾಗಿ, ತನ್ನ ಸಹೋದರರನ್ನು, ಮಂತ್ರಿಗಳನ್ನು, ಸೇನಾ ನಾಯಕರನ್ನು ಆಹ್ವಾನಿಸಿ ಸಭೆ ನಡೆಸಿ ‘ಇಷ್ಟು ಬೇಗ ಆಪತ್ತು ಎದುರಾಗುತ್ತದೆ ಎಂದು ನಾನೊಂದುಕೊಂಡಿರಲಿಲ್ಲ’ ಎನ್ನುತ್ತಾನೆ. ರಾವಣನ ಮಂತ್ರಿ ಪ್ರ್ರಹಸ್ತ, ‘ಬಲಾಢs ರಾಕ್ಷಸರ  ಸೈನ್ಯಕ್ಕೆ ಹೆದರದ ನಾವು ಈ ಗುಡ್ಡಗಾಡು, ಮರ-ಗಿಡ ವಾಸಿ ಕೋತಿಗಳ ದಂಡಿಗೆ ಹೆದರಬೇಕೇ’ ಎಂದು ಅಹಂಕಾರದಿಂದ ಮಾತನಾಡುತ್ತಾನೆ. ವಿಭೀಷಣನು ‘ನಮ್ಮ ಸೈನಿಕರು ಹೋರಾಡಲು ಮಾನಸಿಕವಾಗಿ ಸಿದ್ಧಗೊಂಡಿಲ್ಲ. ಎಲ್ಲ ಮರ್ಯಾದೆಗಳೊಂದಿಗೆ ಸೀತಾದೇವಿಯನ್ನು ಅವರಿಗೆ ಒಪ್ಪಿಸಿ ಬಿಡೋಣ’ ಎನ್ನುತ್ತಾನೆ. ಆದರೆ ಆತನನ್ನು ಬಿಟ್ಟರೆ ಉಳಿದವರ್ಯಾರೂ ಯುದ್ಧ ಬೇಡ ಎನ್ನುವುದಿಲ್ಲ.  ರಾವಣ ಒಪ್ಪುವುದಿಲ್ಲ.   ನಂತರ ಹೊರಬಂದ ಆತ ತನ್ನ ಮಂತ್ರಿಯಲ್ಲಿ ‘ರಾವಣನನ್ನು ಸೋಲಿಸಿ ಲಂಕೆಯ ಸಿಂಹಾಸನವನ್ನು ನಾನೇಕೆ ದಕ್ಕಿಸಿಕೊಳ್ಳಬಾರದು. ನಾಳೆ ಅಂಗರಕ್ಷಕ ಪಡೆಯಯೊಂದಿಗೆ ಅವರ ಪಕ್ಷವನ್ನು ಕೂಡಿಕೊಳ್ಳುತ್ತೇನೆ. ಸಾಧ್ಯವಾದಷ್ಟು ಬೇಗ ಸೈನ್ಯವನ್ನು ಹೊರಡಿಸಿಕೊಂಡು ಲಂಕೆಯ ಕೋಟೆಯನ್ನು ದಾಟುವೆ. ನೀವು  ಒಳ ಪ್ರವೇಶಕ್ಕೆ ಅನುಕೂಲ ಮಾಡಿಕೊಡಿ. ಕೋಟೆಯ ಮೇಲೆ ಕಾವಲಿರುವರಲ್ಲಿ ನಮ್ಮವರು ಹೆಚ್ಚಿನ ಸಂಖ್ಯೆಯಲ್ಲಿ ಇರುವಂತೆ ನೋಡಿಕೊಳ್ಳಿ’ ಎಂದು ಹೇಳುತ್ತಾನೆ.

 ತಮ್ಮತ್ತ ವಿಭೀಷಣನ ಲಂಕೆಯ ಸೈನ್ಯ ಬರುತ್ತಿರುವುದನ್ನು ಗುರುತಿಸಿದ ಹನುಮಂತ, ಸುಗ್ರೀವನಿಗೆ ವಿಭೀಷಣನ್ನು ತೋರಿಸಿ ತನ್ನನ್ನು ಲಂಕೆಯಿಂದ ಹೊರಹೋಗಲು ಅವಕಾಶ ಮಾಡಿಕೊಟ್ಟವನು ಈತ. ಬಹುಶ: ಸಂಧಾನಕ್ಕೆ ಬಂದಿರಬಹುದು ಅಥವಾ ತಿಳಿಹೇಳಲು ಬಂದಿರಬಹುದು ಎನ್ನುತ್ತಾನೆ. ಪರಿಚಯದ ನಂತರ ‘ನಿಮ್ಮನ್ನು ಮಿತ್ರರನ್ನಾಗಿ ಮಾಡಿಕೊಳ್ಳಲು ನಾನು ಬಂದಿದ್ದೇನೆ’ ಎಂದು ಸುಗ್ರೀವನಲ್ಲಿ ಹೇಳಿದಾಗ ಹನುಮಂತನ ಮೂಲಕ ರಾಮ- ಲಕ್ಷ್ಮಣರ ಭೇಟಿ ಮಾಡಿಸುತ್ತಾನೆ. ಅವರೊಂದಿಗೆ ಮಾತನಾಡಿದ ವಿಭೀಷಣ, ‘ಕುಲ ಸ್ತ್ರೀಯನ್ನು ಗೌರವಯುತವಾಗಿ ಹಿಂದಿರುಗಿಸುವಂತೆ ಮನವಿ ಮಾಡಿದರೂ ರಾವಣ ಒಪ್ಪಲಿಲ್ಲ. ನಾನು ಎಲ್ಲ ಮಾಹಿತಿಗಳನ್ನು ನಿಮಗೆ ಕೊಡುತ್ತೇನೆ. ರಾವಣನ ಬಳಗ ನಾಶವಾಗುತ್ತದೆ. ಆದರೆ ಲಂಕೆಯನ್ನು ಗೆದ್ದು ಅದರ ಪರಮಾಧಿಕಾರವನ್ನು ಕೊನೆಗೆ ನನಗೆ ಹಸ್ತಾಂತರಿಸಬೇಕು’ ಎಂದು ಬೇಡಿಕೆ ಇಡುತ್ತಾನೆ. ಇದಕ್ಕೊಪ್ಪಿದ ನಂತರ ಲಂಕೆಯಲ್ಲಿ ರಣಕಹಳೆಗಳು ಮೊಳಗುತ್ತವೆ. ಉಭಯ ಸೈನ್ಯಗಳು ಹೋರಾಟಕ್ಕೆ ಸಜ್ಜುಗೊಳ್ಳುತ್ತವೆ.

ಮೊದಲ ದಿನವೇ  ಸುಗ್ರೀವ ಮುನ್ನುಗ್ಗಿ ಯುದ್ಧ ಮಾಡಲು ಹೋಗಿ ಗಾಯಗೊಳ್ಳುತ್ತಾನೆ. ಇನ್ನು ಮುಂದೆ ಹೀಗೆ ದುಡುಕುವುದಿಲ್ಲ ಎಂದು ರಾಮನಿಗೆ ಭರವಸೆ ಕೊಡುತ್ತಾನೆ.  ಕೆಲವು ದಿನ ಯುದ್ಧ ನಡೆದ ಲಂಕೆ ಸೈನ್ಯ ಇಬ್ಭಾಗವಾಗುತ್ತದೆ. ಜಂಬುಮಾಲಿ,  ಧೂಮ್ರಾಕ್ಷ, ವಜ್ರದಂಷ್ಟ್ರ, ಅಕಂಪನ, ಕಂಪನ, ಪ್ರಹಸ್ತ, ನರಾತಂಕ, ಕುಂಭಹ, ಮಹಾನಾದ, ಸಮುನ್ನತ, ತಿಕಾಯ, ತ್ರಿಶಿರಸ್ ಮೊದಲಾದವರು ವೀರಮರಣವನ್ನು ಅಪ್ಪುತ್ತಾರೆ. ಇಂದ್ರಜಿತು ಜೊತೆ ಲಕ್ಷ್ಮಣ  ಕಾದಾಡುವಾಗ ತೀವ್ರವಾಗಿ ಗಾಯಗೊಳ್ಳುತ್ತಾನೆ. ‘ಲಕ್ಷ್ಮಣ ಸತ್ತ’ ಎಂದು ಘೋಷಿಸಿಕೊಂಡು ವಾಪಸ್ ಹೋಗುತ್ತಾನೆ. ಲಕ್ಷ್ಮಣನನ್ನು ಬದುಕಿಸುವ ಕೆಲಸವನ್ನು ಹನುಮಂತ ಮಾಡುತ್ತಾನೆ. ಆತನ ಎದೆಗೆ ನಾಟಿದ್ದ  ಬಾಣವನ್ನು ತೆಗೆದು ಮುದ್ದು ಕೊಡುತ್ತಾನೆ.

 ಮಾರನೇ ದಿನ ವಿಭೀಷಣನ ಪತ್ನಿ ಸುರಮೆ ಸುರಕ್ಷಿತವಾದ ಸ್ಥಳಕ್ಕೆ ಸೀತೆಯನ್ನು ಕರೆದೊಯ್ಯುತ್ತಾಳೆ. ಭೀಕರ ಯುದ್ಧದಲ್ಲಿ  ಎಲ್ಲ ಸೇನಾಧಿಪತಿಗಳು ಸತ್ತ ಮೇಲೆ ರಾವಣ ಯುದ್ಧಕ್ಕೆ ಬರುತ್ತಾನೆ. ರಾವಣನ ಬಾಣದಿಂದ ಲಕ್ಷ್ಮಣ ವಿಸ್ಮೃತಿಗೊಳಗಾಗುತ್ತಾನೆ. ಹನುಮಂತ ಮತ್ತೆ ಆತನಿಗೆ ಶುಶ್ರೂಷೆ  ಮಾಡುತ್ತಾನೆ. ರಾಮನ ಶರಾವರ್ಷದಿಂದ ರಾವಣನ ರಥ ಮುರಿಯುತ್ತದೆ. ರಕ್ತ ಸಿಕ್ತ ಶರೀರಿಯಾಗಿ ರಾವಣ ತೆರಳುತ್ತಾನೆ. ‘ಶಸ್ತ್ರಹೀನನಾದ ರಾವಣನ ಮೇಲೆ ಶರಪ್ರಯೋಗ ಮಾಡುವುದಿಲ್ಲ’ ಎಂದು ರಾಮ ಅಲ್ಲಿಂದ ನಿರ್ಗಮಿಸುತ್ತಾನೆ. ನಂತರ ಕುಂಭಕರ್ಣನನ್ನು ಎಬ್ಬಿಸಿ ಎನ್ನುತ್ತಾನೆ ರಾವಣ. ಕುಂಭಕರ್ಣ ಆಯುಧ ಹಿಡಿದು ಮುನ್ನುಗ್ಗಿ ಹೊಡೆದಾಗ  ರಾಮನ ಮತ್ತೆರಡು ಬಾಣಗಳಿಂದ ನೆಲಕ್ಕೆ ಬೀಳುತ್ತಾನೆ. ಇಂದ್ರಜಿತು ಯುದ್ಧಕ್ಕೆ ಬರುತ್ತಾನೆ. ರಾಮ -ಲಕ್ಷ್ಮಣರನ್ನು ಗುರಿಯಾಗಿಸಿಕೊಂಡು ಬಾಣಪ್ರಯೋಗಿಸುತ್ತಾನೆ. ರಾಮ -ಲಕ್ಷ್ಮಣರನ್ನು ನೆಲಕ್ಕೆ ಉರುಳಿಸುತ್ತಾನೆ.  ಅವರು ಸ್ಮೃತಿ ತಪ್ಪಿ ಬಿದ್ದಾಗ ವಾನರ ಸೈನ್ಯ ಹೆದರುತ್ತದೆ. ಹನುಮಂತ ಅವರಿಗೆ ಪ್ರಾಥಮಿಕ ಚಿಕಿತ್ಸೆಗೆ ಕೊಡುತ್ತಾನೆ. ಗಳಿಗೆಯಲ್ಲಿ ಅವರು ಎಚ್ಚರಗೊಳ್ಳುತ್ತಾರೆ. ಅತ್ತ್ತ ವಾನರ ಸೈನ್ಯ ಲಂಕೆಯೊಳಕ್ಕೆ ನುಗ್ಗಿ ಅರಮನೆಯನ್ನು ನಾಶ ಮಾಡಲು ಮುಂದಾಗುತ್ತದೆ. ಸೀತೆಯ ಶೋಧನೆಗೆ ಪ್ರಯತ್ನಿಸುತ್ತದೆ. 

ಇತ್ತ ಇಂದ್ರಜಿತು ತನ್ನ ರಥದಲ್ಲಿ ಸೀತೆ ಎಂದುಕೊಂಡು ಅಶೋಕವನದಲ್ಲಿ ಮಹಿಳೆಯನ್ನು ರಥದಲ್ಲಿ ಕೂಡ್ರ್ರಿಸಿಕೊಂಡು ಯುದ್ಧಕ್ಕೆ ಬರುತ್ತಾನೆ. ಆರ್ಭಟಿಸಿ ಯುದ್ಧ ಮಾಡುತ್ತಿರುವಾಗ ಸೀತಾಮಾತೆಯ ಕತ್ತನ್ನು ಕತ್ತರಿಸಿ ಕೊಲ್ಲುತ್ತಾನೆ. ‘ಸೀತಾದೇವಿಯನ್ನು ಕೊಲ್ಲಲಾಯಿತು’ ಎಂಬ ವಾರ್ತೆಯನ್ನು ಹಬ್ಬಿಸುತ್ತಾನೆ. ಆದರೆ ರಾಮ ಇದನ್ನು ನಂಬುವುದಿಲ್ಲ. ಎಲ್ಲರನ್ನೂ ಭ್ರಮೆಯಲ್ಲಿ ಮುಳುಗಿಸಿ ದುಃಖ-ದುಮ್ಮಾನ ಸೃಷ್ಟಿಸಲು ಇಂಥ ಆಟ ಆಡುತ್ತಿದ್ದಾನೆ ಎಂದು ರಾಮ ಹೇಳುತ್ತಾನೆ. ಯುದ್ಧ ಮಾಡುತ್ತಾ ವಿಭೀಷಣನನ್ನು ಗಾಯಗೊಳಿಸುತ್ತಾನೆ. ಲಕ್ಷ್ಮಣ ಐಂದ್ರ್ರಾಸ್ತ್ರ ಎಂಬ ಮಾರಣಾಂತಿಕವಾದ ಅಸ್ತ್ರವನ್ನು ಬಳಸಿ ಇಂದ್ರಜಿತುವಿನ ತಲೆಯನ್ನು ಹಾರಿಸುತ್ತಾನೆ. ‘ಇಂದ್ರಜಿತು ಸತ್ತ’  ಎಂದು ಸಾರುತ್ತಾರೆ. ಅವನ ಯೋಧರೆಲ್ಲ ತಮಗೆ ಉಳಿಗಾಲವಿಲ್ಲ ಎಂದು ಓಡತೊಡಗುತ್ತಾರೆ. 

ಇದರಿಂದ ಭಯಗೊಂಡ ರಾವಣ ‘ಯಾರ ನೆರವೂ ಬೇಡ’ ಎಂದು ಯುದ್ಧಕ್ಕೆ ಬರುತ್ತಾನೆ. ಇಬ್ಬರ ಮಧ್ಯೆ ಶರಪ್ರ್ರಯೋಗ ಆರಂಭವಾಗುತ್ತದೆ. ವಿಭೀಷಣನನ್ನು ಕೊಲ್ಲಲು ಉದ್ಯುಕ್ತನಾಗಿ ರಾವಣ ಬಾಣ ಬಿಡುತ್ತಾನೆ. ಆದರೆ ಲಕ್ಷ್ಮಣ ಅವನನ್ನು ಉಳಿಸುತ್ತಾನೆ. ಲಕ್ಷ್ಮಣ ವಿಸ್ಮೃತಿಗೊಂಡು ನೆಲಕ್ಕುರುಳುತ್ತಾನೆ. ಎಚ್ಚೆತ್ತ  ರಾಮ ರಾವಣನತ್ತ ಬಿಲ್ಲು ಬಾಣಗಳನ್ನು ಹಿಡಿದು ಹೂಂಕರಿಸುತ್ತಾ ಇನ್ನಷ್ಟು ಘೋರವಾಗಿ ಕಾದಾಡುತ್ತಾನೆ. ಭರ್ಜರಿ ಕಾಳಗ ನಡೆಯುತ್ತದೆ. ರಾವಣನ ಬತ್ತಳಿಕೆ ಬರಿದಾಗುತ್ತದೆ. ಇನ್ನೊಂದು ಅಸ್ತ್ರದ ಮೂಲಕ ಆತನ ತಲೆಯನ್ನು ಕತ್ತರಿಸಿದಾಗ ಅದು ಮಣ್ಣಿನಲ್ಲಿ ಹೋಗಿ ಉರುಳುತ್ತದೆ. ರಾಮ -ಲಕ್ಷ್ಮಣರನ್ನು ಹೊತ್ತು ವಾನರ ಪಡೆ ಕುಣಿಯುತ್ತಾರೆ.

 

 ಈ ವಿಷಯವನ್ನು ಸುರಮೆ ಸೀತೆಗೆ ತಿಳಿಸುತ್ತಾಳೆ. ಗೆದ್ದ ನಂತರ ರಾಮ ತನ್ನ ಬಳಿ ಬಾರದಿದ್ದಾಗ ಸೀತೆಯು, ‘ಈ ಗಂಡಸರೇ ಹೀಗೆ. ಭೋಗಕ್ಕೆ ಸುಂದರಿ ಹೆಂಗಸರು ಒದಗುತ್ತಾರೆ ಎಂದರೆ ಇವರು ಒಲ್ಲೆ ಎನ್ನರು. ಒಂದೊಮ್ಮೆ ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದ ಮನದನ್ನೆಯನ್ನು ಇವರು ಮರೆತು ಬಿಡುವುದರಲ್ಲಿ ಪ್ರವೀಣರು’ ಎನ್ನುತ್ತಾ. ವಿಭೀಷಣನಿಗೆ ಪಟ್ಟಾಭಿಷೇಕವಾಗುತ್ತದೆ. ವಿಭೀಷಣನು ನಾಲ್ವರು ದೂತರ ಮೂಲಕ ಪಲ್ಲಕ್ಕಿ ಎತ್ತಿಕೊಂಡು ಬಂದು ಸೀತೆಯನ್ನು ಪಲ್ಲಕ್ಕಿಯಲ್ಲಿ ಕರೆದೊಯ್ಯುತ್ತಾನೆ. ರಾಜಭವನಕ್ಕೆ ಬಂದಾಗ ಅಲ್ಲಿ ರಾಮ- ಲಕ್ಷ್ಮಣರಿರುತ್ತಾರೆ. ‘ಆರ್ಯ ಶ್ರೇಷ್ಠ’ ಎಂದು ನುಡಿಯುತ್ತಾಳೆ. ಅಪರಿಚಿತ ಸ್ತ್ರೀಯೊಂದಿಗಿನ ವರ್ತನೆಯಂತೆ ರಾಮನ ನಡೆ ಇರುತ್ತದೆ. ‘ಪರಪುರುಷನ ಅಧೀನಕ್ಕೆ ಒಳಪಟ್ಟ ಸ್ತ್ರೀಯನ್ನು ಪುರುಷ ಮತ್ತೆ ಸ್ವೀಕರಿಸಲು ಹೇಗೆ ಸಾಧ್ಯ’ ಎಂದು ಕೇಳುತ್ತಾನೆ. ‘ಹಾಗಿದ್ದರೆ ಯುದ್ಧ ಮಾಡುವ ಅನಿವಾರ್ಯತೆ ಏನಿತ್ತು’ ಎಂದು ಸೀತೆ ಪ್ರಶ್ನಿಸುವಳು. ‘ನಾನು ನಿನ್ನನ್ನು ಪಡೆಯುವ ಉದ್ದೇಶದಿಂದ ಯುದ್ಧ ಮಾಡಿಲ್ಲ. ನನ್ನ ಉನ್ನತಿಯನ್ನು ಮತ್ತೆ ಸಂಪಾದಿಸಲು. ನಾನು ನಿನ್ನನ್ನು ನನ್ನ ವೈವಾಹಿಕ ಬಂಧನದಿಂದ ಮುಕ್ತಗೊಳಿಸಿದ್ದೇನೆ. ವಿಭೀಷಣನನ್ನೋ, ಸುಗ್ರೀವನನ್ನೋ ಅಥವಾ ಲಕ್ಷ್ಮಣನನ್ನೋ ನೀನು ವರಿಸಬಹುದು. ನನಗೆ ನಿನ್ನ ಅಗತ್ಯವಿಲ್ಲ’ ಎನ್ನುತ್ತಾನೆ.

 ‘ಬಹುಕಾಲ ಪರಪುರುಷನ ಸ್ವಾಧೀನದಲ್ಲಿದ್ದ ಕಾರಣ ನಿನ್ನ ಚಾರಿತ್ರ್ಯ ಸಂದೇಹದಿಂದ ಕೂಡದೇ ಇರಲು ಹೇಗೆ ಸಾಧ್ಯ’ ಎಂದಾಗ ಸೀತೆ, ‘ರಾವಣ ಹೆಂಗಸನ್ನು ಬಯಸಿಲ್ಲ. ಕಾಮದ ಕಣ್ಣುಗಳಿಂದ ನೋಡಿಲ್ಲ. ನನ್ನನ್ನು ಅಪಹರಿಸಿದ್ದು ಅವನ ಬಂಧುಗಳ ಹತ್ಯೆಯ ಸೇಡಿಗಾಗಿ ಎನ್ನುವಳು. ‘ಹೆಂಗಸರು ನಂಬಿಕೆಗೆ ಅನರ್ಹರು. ನನ್ನೊಂದಿಗೆ ಬಾಳ್ವೆ ಮಾಡಲೇಬೇಕು ಎಂದಾದರೆ ನೀನು ನಿನ್ನ ಪಾತಿವೃತ್ಯದ ಪವಿತ್ರವನ್ನು ರುಜು ಮಾಡಬೇಕಾಗುತ್ತದೆ. ಅದು ಸಾಧ್ಯವಾದರೆ ಮಾತ್ರ ನಿನ್ನನ್ನು ಸ್ವೀಕರಿಸುತ್ತೇನೆ’ ಎಂದು ತನ್ನ ಅಂತಿಮ ನಿರ್ಧಾರವನ್ನು ಪ್ರಕಟಿಸುತ್ತಾನೆ. ಅದನ್ನು ಕೇಳಿದ ಸೀತೆ ಸ್ಮೃತಿ  ತಪ್ಪಿ ಕುಸಿಯುತ್ತಾಳೆ. 

ಒಟ್ಟಿನಲ್ಲಿ, ಒಂದು ಸುಂದರ ಕಥಾನಕವನ್ನು ‘ಕಿಷ್ಕಿಂಧಾಯಣ’ದ ಮೂಲಕ ಲೇಖಕರು ಕಟ್ಟಿಕೊಟ್ಟಿದ್ದಾರೆ. ಇಲ್ಲಿನ ವರ್ಣನೆಗಳು, ಸಕಾಲಿಕ ಮಾತುಗಳು ಮನಸೆಳೆಯುತ್ತವೆ ಮತ್ತು ಮನದಲ್ಲಿ ಅಚ್ಚಳಿಯದೆ ಉಳಿಯುತ್ತವೆ.

- ದತ್ತಾತ್ರೇಯ ಹೆಗಡೆ, ಶಿವಮೊಗ್ಗ

,,,,,,,,,,,,,,,,,,,,,,,

Comments

Popular posts from this blog