ಕಾವ್ಯ ಸೌಷ್ಠವ ಕಟ್ಟಿಕೊಡುವ
‘ಜಿ. ಎಸ್. ಶಿವರುದ್ರಪ್ಪ ಮತ್ತು ಚೆನ್ನವೀರ ಕಣವಿಯರ
ಕಾವ್ಯ ಮೀಮಾಂಸೆ ಮತ್ತು ತೌಲನಿಕ ವಿವೇಚನೆ’
‘ಡಾ. ಜಿ. ಎಸ್. ಶಿವರುದ್ರಪ್ಪ ಮತ್ತು ಚೆನ್ನವೀರ ಕಣವಿಯರ ಕಾವ್ಯ ಮೀಮಾಂಸೆ ಮತ್ತು ತೌಲನಿಕ ವಿವೇಚನೆ’ ಈ ಕೃತಿಯನ್ನು ರಚಿಸಿದವರು ಭದ್ರಾವತಿಯ
ಸರ್ ಎಂ ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ. ಜಿ. ಎಸ್. ಅಶೋಕ್ ಅವರು. ಸಂಶೋಧನಾತ್ಮಕವಾಗಿ ರಚಿಸಿರುವ ಈ ಕೃತಿಯಲ್ಲಿ ಗಂಭೀರವಾದ ಅಧ್ಯಯನವಿದೆ. ತುಂಬಾ ಒಳನೋಟವಿದೆ. ಇದನ್ನು ಆಕರ ಗ್ರಂಥವಾಗಿ ಬಳಸಬಹುದು. ಸಾಹಿತ್ಯಾಧ್ಯಯನಕ್ಕೆ ಇಂತಹ ಕೃತಿ ಸಿಗುವುದು ವಿರಳ. ಸರಳ ಶೈಲಿಯಲ್ಲಿ ತಿಳಿಯಾದ ವಿವರಣೆ ಇಲ್ಲಿನ ವಿಶೇಷ.
ಸಮಕಾಲೀನ ಸಾಹಿತ್ಯದ ಶ್ರೇಷ್ಠ ಸೃಜನಶೀಲ ಬರಹಗಾರರಾದ ಡಾ ಜಿ. ಎಸ್. ಶಿವರುದ್ರಪ್ಪ ಮತ್ತು ಚೆನ್ನವೀರ ಕಣವಿಯರ ಆಧುನಿಕ ಕನ್ನಡ ಸಾಹಿತ್ಯದ ಕ್ರಿಯಾಶೀಲ ಕವಿಗಳಾಗಿದ್ದಾರೆ. ಇಬ್ಬರೂ ಕವಿಗಳ ಕಾವ್ಯಗಳಲ್ಲಿನ ತೌಲನಿಕ ವಿಮರ್ಶೆ ಮತ್ತು ವಿಶ್ಲೇಷಣೆ ಇಲ್ಲಿದೆ. ತೌಲನಿಕ ವಿಮರ್ಶೆ ಎಂದರೆ ಸಮಾನ ಕಾಲಘಟ್ಟದ, ಸಮಾನ ಮನೋಧರ್ಮದ ಕವಿಗಳನ್ನು ತುಲನಾತ್ಮಕವಾಗಿ ಗಮನಿಸುವುದು. ಕನ್ನಡದಲ್ಲಿ ಇಂತಹ ವಿಮರ್ಶೆಗಳು ತೀರಾ ಕಡಿಮೆ. ಪ್ರತಿ ಕವಿಯ ವೈಶಿಷ್ಟ್ಯವನ್ನು ಅದೇ ವೈಶಿಷ್ಟ್ಯವಿರುವ, ಭಿನ್ನವಾದ ಹಿನ್ನೆಲೆ ಹೊಂದಿರುವ ಇನ್ನೊಂದು ವ್ಯಕ್ತಿಗೆ ತೌಲನಿಕವಾಗಿ ಹೋಲಿಸಿ ನೋಡಬೇಕು. ಆಗ ಒಬ್ಬ ಕವಿ ಇನ್ನೊಬ್ಬ ಕವಿಗಿಂತ ಹೇಗೆ ಹೆಚ್ಚು ಮುಖ್ಯವಾಗುತ್ತಾನೆ, ಅವರ ಸಾಹಿತ್ಯದ ಆಳ, ವೈಶಾಲ್ಯತೆ, ಪಕ್ವತೆ, ವಸ್ತು, ಆಶಯ, ಧೋರಣೆ, ಭಾಷಾ ಶೈಲಿ, ಸಾಮ್ಯತೆ- ಭಿನ್ನತೆ ಮುಂತಾದವುಗಳನ್ನು ಕಾಣಲು ಸಾಧ್ಯವಿದೆ. ಜೊತೆಗೆ ಎಷ್ಟು ಸಮಾನ ಗುಣಧರ್ಮ, ವಿವಿಧ ಅಲೋಚನೆಗಳಿವೆ ಎನ್ನುವುದನ್ನೂ ಅರಿಯಬಹುದು. ‘ಒಬ್ಬನ ಸಾಧನೆಯ ಬೆಳಕಿನಲ್ಲಿ ಇನ್ನೊಬ್ಬರ ಸಾಧನೆಯನ್ನು ಒರೆ ಹಚ್ಚಿ ನೋಡುವುದೇ ವಿಮರ್ಶೆ. ನೂರು ವರ್ಷಗಳಿಗೊಮ್ಮೆ ವಿಮರ್ಶೆ ಮರು ಹುಟ್ಟು ಪಡೆಯುತ್ತದೆ’ ಎಂದು ವಿಮರ್ಶಕ, ಬರಹಗಾರ ಟಿ ಎಸ್ ಎಲಿಯೆಟ್ ಹೇಳಿರುವುದನ್ನು ಇಲ್ಲಿ ಸ್ಮರಿಸಬಹುದು.
ಈ ಹಿನ್ನೆಲೆಯಲ್ಲಿ ಪ್ರಸ್ತುತ ಕೃತಿಯನ್ನು ಇಲ್ಲಿ ಗಮನಿಸಬಹುದು.
ಇಬ್ಬರೂ ಪ್ರಕೃತಿ ಕವಿಗಳು. ಪ್ರಾರಂಭದ ಕವನಗಳಲ್ಲಿ ಹಗಲು, ಸಂಜೆ, ರಾತ್ರಿ, ಮಲ್ಲಿಗೆ, ಹೂವು, ನದಿ, ಬೆಟ್ಟ, ಕಾಡು, ಮಳೆ, ಇಬ್ಬನಿ, ತೆಂಗು, ಬಾಳೆ, ಒಟ್ಟಾರೆ ಪ್ರಕೃತಿಯ ಪ್ರತಿಯೊಂದನ್ನು ಪರಿಕರವಾಗಿಸಿಕೊಂಡಿದ್ದಾರೆ. ಈ ಇಬ್ಬರು ಕವಿಗಳ ಕಾವ್ಯ ಕುರಿತ ತತ್ವಗಳು, ಪ್ರಕೃತಿ, ನಿಸರ್ಗ, ಪ್ರೀತಿ, ಪ್ರೇಮ, ಪ್ರಣಯ, ವಾತ್ಸಲ್ಯಭಾವ, ನಾಡು, ನುಡಿ, ತಾತ್ವಿಕ ಮತ್ತು ಸಾಮಾಜಿಕ ವಿಚಾರಗಳನ್ನು ಹಲವು ಹೋಲಿಕೆ ಮೂಲಕ ತೌಲನಿಕವಾಗಿ ವಿಮರ್ಶಿಸಬಹುದು. ಕಾವ್ಯ ವಸ್ತು ವಿಚಾರದಲ್ಲಿ ಮತ್ತು ಕೆಲವು ವ್ಯಕ್ತಿಗಳಿಗೆ ಸಂಬಂಧಿಸಿದ ವಿಚಾರಗಳಲ್ಲಿ ಇಬ್ಬರು ಕವಿಗಳು ಸಮಾನ ಅಭಿಪ್ರಾಯ ಬಿಂಬಿಸಿದ್ದಾರೆ. ಕಾವ್ಯದ ವಸ್ತು, ವಿಷಯ ಧೋರಣೆ ಮತ್ತು ವಸ್ತುವಿನ ಸಾಮ್ಯತೆ ಮತ್ತು ಭಿನ್ನತೆಯಲ್ಲಿ ಇಬ್ಬರ ವಿಚಾರಗಳನ್ನು ನಾವು ಅವರ ಸಾಕಷ್ಟು ಕವನಗಳಲ್ಲಿ ಗಮನಿಸಬಹುದು.
ಜಿ ಎಸ್ ಎಸ್ ಮತ್ತು ಕಣವಿಯರ ಕಾವ್ಯ ವೀಕ್ಷಿಸಿದಾಗ ಕೆಲವು ಸಮಾನ ಅಂಶಗಳು ಕಂಡುಬರುತ್ತವೆ, ಯಾವುದೇ ಸಾಹಿತ್ಯ ಪಂಥದೊಂದಿಗೆ ಗುರುತಿಸಿಕೊಳ್ಳದೆ ಇವರ ಕಾವ್ಯ ವಿಶಿಷ್ಟಸ್ಥಾನ ಪಡೆದಿವೆ. ಇದರೊಂದಿಗೆ ಇಬ್ಬರೂ ಕವಿಗಳ ಕಾವ್ಯಗಳಲ್ಲಿನ ಸಾಮ್ಯತೆ, ಭಿನ್ನತೆ, ವಿಶಿಷ್ಟತೆ ಮತ್ತು ಸಮನ್ವಯತೆ ನಿಲುವುಗಳನ್ನು ಕವಿಯ ಕಾವ್ಯದಲ್ಲಿನ ವಸ್ತು, ಆಶಯ, ಧೋರಣೆಯ, ಅಂಶಗಳನ್ನು ಸಂಕ್ಷಿಪ್ತವಾಗಿ ಗಮನಿಸಿದಾಗ ಇಬ್ಬರೂ ಸಾಮಾನ್ಯ ಆಡು ನುಡಿಯ ಭಾಷೆ, ಶೈಲಿ, ಗಾದೆ ಮಾತುಗಳು, ನುಡಿಗಟ್ಟುಗಳನ್ನು ತಮ್ಮ ಕಾವ್ಯದಲ್ಲಿ ಬಳಸಿರುವುದನ್ನು ಲೇಖಕರು ಇಲ್ಲಿ ತೋರಿಸಿಕೊಡುತ್ತಾರೆ.
ಶಿವರುದ್ರಪ್ಪ ಅವರು ಸರಳ ನುಡಿಯ ಶೈಲಿಯನ್ನು ಬಳಸಿದರೆ, ಕಣವಿಯವರು ಜನರಾಡುವ ಭಾಷೆಯನ್ನು ತಮ್ಮ ಕಾವ್ಯದಲ್ಲಿ ಬಳಸಿದ್ದಾರೆ. ಅಲ್ಲಲ್ಲಿ ಸಂಸ್ಕೃತ ಭಾಷೆಯ ಪ್ರಭಾವ, ಪ್ರೇರಣೆ ಇರುವುದನ್ನು ಗಮನಿಸಬಹುದಾಗಿದೆ. ಈ ಹಿನ್ನೆಲೆಯಲ್ಲಿ ಅವರ ಕಾವ್ಯ ಅಧ್ಯಯನ ಮಾಡಿದಾಗ ವಿಭಿನ್ನ ಭಾಷಾ ಶೈಲಿಗಳನ್ನು ಗಮನಿಸಬಹುದು. ಶಿವರುದ್ರಪ್ಪ ತಮ್ಮ ಅನಿಸಿಕೆಗಳನ್ನು, ಭಾವದ ಹೊಳಹುಗಳನ್ನು ನೇರವಾಗಿ ನಿವೇದಿಸುತ್ತಾರೆ. ಓದುಗರೊಂದಿಗೆ ಸಂವಾದ ನಡೆಸುತ್ತಾರೆ. ಯಾವುದೇ ವಾದ -ಸಿದ್ಧಾಂತ, ಹಮ್ಮು -ಬಿಮ್ಮು ತಮಗಿಲ್ಲ ಎಂಬ ಮಾತನ್ನು ಸಹ ಮನಸ್ಸು ಬಿಚ್ಚಿ ಹೇಳಿಬಿಡುತ್ತಾರೆ. ಈ ಕಾರಣದಿಂದ ಕಣವಿಯರಲ್ಲಿ ಇಲ್ಲದ ಒಂದು ಬಗೆಯ ವಿಶೇಷತೆ ಜಿಎಸ್‌ಎಸ್ ಅವರಲ್ಲಿ ಕಾಣಸಿಗುತ್ತದೆ. ಸಾಮಾನ್ಯ ಓದುಗ ಹಾಗೂ ಕಾವ್ಯಾಸಕ್ತರನ್ನು ಈ ಗುಣದಿಂದಾಗಿ ಜಿಎಸ್‌ಎಸ್ ಅವರು ಬೇಗನೆ ತಣಿಸುತ್ತಾರೆ. ಕಣವಿಯರು ಹೀಗಲ್ಲ. ಅವರನ್ನು ಮತ್ತೆ ಮತ್ತೆ ಓದಬೇಕಾಗುತ್ತದೆ. ಇಂತಹ ಪ್ರಯತ್ನ, ಪರಿಶ್ರಮದ ಪ್ರತೀಕಗಳ ರಚನೆಯಿಂದ ದೂರ ಉಳಿದು ಇವರು ಬರೆದ ಭಾವಗೀತೆಗಳು, ಸೌಂದರ್ಯ ಆರಾಧನೆ ಕವನಗಳು ಹಾಗೂ ಸಮಾಜ ಸ್ಥಿತಿಗಳಿಗೆ ಸ್ಪಂದಿಸಿದ ಚಿತ್ರಗಳು ಹೆಚ್ಚು ಆಕರ್ಷಕವೆನಿಸುತ್ತದೆ, ಅಪ್ಯಾಯಮಾನವಾಗುತ್ತದೆ.
ತಮ್ಮ ಅನುಭವಗಳಿಗೆ ಕಾವ್ಯ ಶರೀರ ನೀಡುವ ವಿಷಯದಲ್ಲಿ ಇಬ್ಬರೂ ಕವಿಗಳಿಗೆ ಸಾಕಷ್ಟು ಪ್ರೀತಿ, ಶ್ರದ್ಧೆ, ಕಳಕಳಿ ಇದೆ. ಇಬ್ಬರಲ್ಲಿಯೂ ಆದರ್ಶ ಹಾಗೂ ಆಶಾವಾದಗಳು ಮೂಲ ಸಂವಿಧಾನಗಳಾಗಿ ವಿಜೃಂಭಿಸಿರುವುದನ್ನು ಕಾಣಬಹುದು. ‘ಶಿವರುದ್ರಪ್ಪ ಹಾಗೂ ಕಣವಿ ಒಂದೇ ನಾಣ್ಯದ ಎರಡು ಮುಖಗಳು. ಚೆನ್ನ-ವೀರ ಹಾಗೂ ಶಿವ -ರುದ್ರಗಳಲ್ಲಿ ಅಂತರವಿಲ್ಲ ಎಂದು ಹೇಳುವ ಇನ್ನೊಬ್ಬ ಬರಹಗಾರ, ವಿಮರ್ಶಕ ಕೀರ್ತಿನಾಥ ಕುರ್ತುಕೋಟಿ, ಅವರಿಬ್ಬರನ್ನು ಸೃಜಶೀಲ (ಸಮನ್ವಯ) ಕವಿಗಳು’ ಎಂದು ಕರೆಯುತ್ತಾರೆ. ಇಬ್ಬರ ಕಾವ್ಯವು ಪರಸ್ಪರ ಪ್ರೀತಿಯಿಂದ ಬೆಳೆದು ಅನುಕರಣೆಯ ಮಾರ್ಗವನ್ನು ಹೊಂದಿರುವುದನ್ನು ಕವನಗಳ ಒಳದನಿಯಲ್ಲಿ ಕಾಣಬಹುದು. ಕವಿಗಳ ತಾತ್ವಿಕ ನಿಲುವು ವಿಭಿನ್ನವಾಗಿದ್ದರೂ, ತಾತ್ವಿಕತೆ ಒಂದೇ ಆಗಿದೆ. ಕಣವಿಯವರ ಮೇಲೆ ಮಧುರ ಚೆನ್ನರ ತಾತ್ವಿಕ ನಿಲುವು ಪ್ರಭಾವ ಬೀರಿದರೆ, ಜಿಎಸ್‌ಎಸ್‌ಗೆ ರಾಮಕೃಷ್ಣರು, ವಿವೇಕಾನಂದರು, ವಚನ ಸಾಹಿತ್ಯದ ಪ್ರಭಾವ ಬೀರಿದೆ. ಇಬ್ಬರು ತಮ್ಮ ಕವನಗಳಲ್ಲಿ ಆತ್ಮದ ಹುಡುಕಾಟ, ತಾತ್ವಿಕತೆ ಹುಡುಕಾಟವನ್ನು ಮಾಡುವುದನ್ನು ಲೇಖಕರು ಇಲ್ಲಿ ವಿವರಿಸಿದ್ದಾರೆ.
ಕಣವಿಯವರ ಕವನಗಳಲ್ಲಿ ಪ್ರೀತಿಯೂ ಹೆಚ್ಚು, ವಿರಸವೂ ಹೆಚ್ಚು. ಆದರೆ ವಿರಹದಲ್ಲಿ ಪ್ರೀತಿಯು ವಿರಹಗೀತೆಯಾಗಿ ಕಾಡಿ ನಿವೇದನೆಯಾಗಿರುವುದು ವ್ಯಕ್ತವಾಗುತ್ತದೆ. ಈ ಕವನಗಳು ಕನ್ನಡದ ಸರಸ ಕವಿ ಕೆ ಎಸ್ ನರಸಿಂಹಸ್ವಾಮಿ ಅವರ ಕೆಲವು ಕವನಗಳನ್ನು ನೆನಪಿಸುತ್ತವೆ. ಜಿಎಸ್‌ಎಸ್ ಕವನಗಳಲ್ಲಿ ಪರಿಚಯವಿಲ್ಲದವರು ಗಂಡ ಹೆಂಡತಿಯಾಗಿ, ಪ್ರೀತಿ ಹೆಚ್ಚಾಗಿ, ಪ್ರಣಯಕ್ಕೆ ತಿರುಗಿ ಒಬ್ಬರಿಗೊಬ್ಬರು ಆಸರೆಯಾಗಿದ್ದವರು ಬೇರೆಯಾದಾಗ ಉಂಟಾದ ವಿರಹವು ಹೇಗೆ ಕೊನೆಗಾಣುತ್ತದೆ ಅಥವಾ ಗಂಡ ಹೆಂಡತಿ ಜಗಳ ಒಮ್ಮೊಮ್ಮೆ ಎಷ್ಟರಮಟ್ಟಿಗೆ ವಿಕೋಪಕ್ಕೆ ಹೋಗುತ್ತದೆ ಎನ್ನುವುದನ್ನು ತೋರಿಸಿಕೊಡುತ್ತದೆ.
ಜಿಎಸ್‌ಎಸ್ ಅವರದು ಅನುಭವದ (ಅನುಭಾವ ಸಾಹಿತ್ಯ ) ಎದುರು ಮುಖಾಮುಖಿಯಾಗಿ ನಿಲ್ಲುವ ರೀತಿಯಾದರೆ, ಕಣವಿ ಅವರದು ಆರ್ದ್ರದಲ್ಲಿ ಒಳಗೊಳ್ಳುವ ಅನ್ಯೋನ್ಯತೆಯ ರೀತಿಯಾಗಿದೆ. ಮುಖಾಮುಖಿ ಎಷ್ಟರಮಟ್ಟಿಗೆ ಖಚಿತ ನಿರ್ದಿಷ್ಟತೆಯನ್ನು ನೀಡುತ್ತದೆಯೋ ಅಷ್ಟರಮಟ್ಟಿಗೆ ಸೀಮಿತತೆಯನ್ನು ನೀಡುತ್ತದೆ. ಅಂದರೆ ಅನನ್ಯತೆ ಗದ್ಯದ ನೇರ ವಾಕ್ಯವನ್ನು ಬದಿಗಿಟ್ಟು ಆತ್ಮೀಯ ಗಾಢತೆಗಳಿಂದ ಒಳಗೆ ಇಳಿಯುತ್ತದ. ಇಬ್ಬರು ತಮ್ಮ ಗುರು ಪರಂಪರೆ ಹಾಗೂ ನೇರ ಪ್ರಭಾವಕ್ಕೆ ಒಳಗಾಗಿದ್ದಾರೆ. ಈ ಪ್ರಭಾವದಿಂದ ಹೊರಬರಲು ಬಹಳವಾಗಿ ಶ್ರಮಿಸಿದ್ದಾರೆ. ಆರಂಭದ ಕವನಗಳ ಮೇಲೆ ಬಿ ಎಂ ಶ್ರೀ, ಕುವೆಂಪು, ಮಧುರಚೆನ್ನ, ಆನಂದ ಕಂದರ ಪ್ರಭಾವ ದಟ್ಟವಾಗಿದೆ. ಅತ್ಯಂತ ಹೆಚ್ಚು ಪ್ರಿಯವಾದ ಸುನೀತನಾದವನ್ನು ಶಿವಶರಣರ ವಚನಗಳಲ್ಲಿ ಮತ್ತು ಸರ್ವಜ್ಞ ತಿಪದಿಗಳಲ್ಲಿ ಭಾಷಾ ಸೌಷ್ಠವದೊಂದಿಗೆ ಸುನೀತದ ಪ್ರಭಾವಕ್ಕೆ ಕಣವಿಯವರು ಒಳಗಾಗಿದ್ದರು. ಮುಂದೆ ಸೃಜನಶೀಲತೆ ಬೆಳೆಸಿಕೊಳ್ಳಲು ಯತ್ನಿಸಿದ್ದಾರೆ. ಜಿಎಸ್‌ಎಸ್ ಅವರು ತಾತ್ವಿಕ ಕವಿಯಾದರೂ ಕಾವ್ಯೋದ್ಯೋಗವನ್ನು, ರಚನಾ ಪ್ರಕಾರವನ್ನು ಸುಲಭವಾಗಿ ಕಟ್ಟುವಲ್ಲಿ, ಕಾವ್ಯ ರಚನೆಗೆ ನೆಲೆಯೂರುವಲ್ಲಿ ಕಣವಿಯಂತೆ ಶ್ರಮ ವಹಿಸಿದವರಲ್ಲ ಎನ್ನುವುದು ಲೇಖಕರ ಅಭಿಮತ.
ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ ಪ್ರಕಾರ, ಕಣವಿಯರ ಕಾವ್ಯದಲ್ಲಿ ಸಂಘರ್ಷವಿಲ್ಲ, ಒಪ್ಪಂದವಿದೆ, ಶಿವರುದ್ರಪ್ಪನವರು ಸಮಾಜದ ಕೊಳಕುತನದಿಂದ ವ್ಯಗ್ರರಾಗುತ್ತಾರೆ, ಕಣವಿಯವರು ಮುಗುಳ್ನಗೆಯಲ್ಲಿ ಉತ್ತರಿಸುತ್ತಾರೆ. ಕಣವಿಯವರದು ಮೆಲುದನಿಯ ಕಾವ್ಯವಾದರೆ, ಜಿಎಸ್‌ಎಸ್ ಅವರ ಕಾವ್ಯದಲ್ಲಿ ಪ್ರಪಾತದ ನಾದವಿದೆ. ಕಾವ್ಯ ವಿಷಯದಲ್ಲಿ ಮಾತ್ರ ಇಬ್ಬರೂ ಸ್ವಾತಂತ್ರ್ಯವನ್ನು ಕಾಪಾಡಿಕೊಂಡಿದ್ದಾರೆ.
ಡಾ. ವಾಮನ ಬೇಂದ್ರೆಯರ ಪ್ರಕಾರ, ಇಬ್ಬರ ಕಾವ್ಯದಲ್ಲಿ ಸಮಾನ ಅಂಶಗಳೇ ಹೆಚ್ಚು. ಪರಂಪರೆಯಲ್ಲಿ ಶ್ರದ್ಧೆ ಮತ್ತು ವಿಶ್ವಾಸ, ನಂಬುಗೆ ಭದ್ರವಿದೆ. ಸಮಾಜ ಜೀವನ ಮತ್ತು ರಾಷ್ಟ್ರ ಜೀವನದಲ್ಲಿ ಆಳ, ಎತ್ತರ, ಶಿವಕಾರಕ ದರ್ಶನವಿದೆ ಎನ್ನುತ್ತ್ತಾರೆ
ಸಂಕ್ಷಿಪ್ತವಾಗಿ ಹೇಳುವುದಾರೆ, ಕಣವಿ ಹಾಡುವ ಕವಿ ಕೂಡ. ಜಿ ಎಸ್ ಎಸ್ ಮತ್ತು ಕಣವಿಯವರು ವರ್ಣನೆಯಲ್ಲಿ ಮೇಲುಗೈ ಪಡೆದವರು. ಕಣವಿಯರ ಕಾವ್ಯ ಪ್ರಮುಖ ವೈಶಿಷ್ಟ್ಯವೆಂದರೆ, ಎಲ್ಲ ಸಮಕಾಲೀನ ಚಳವಳಿಗಳಿಗೆ ಸ್ಪಂದಿಸಿಯೂ ಯಾವುದಕ್ಕೂ ಅಂಟಿಕೊಳ್ಳದೆ ಇರುವುದು ಮತ್ತು ಅನೇಕ ಪ್ರಭಾವ, -ಪ್ರೇರಣೆಗೆ ಒಳಗಾಗಿ ಅವುಗಳನ್ನು ಅರಗಿಸಿಕೊಂಡು ಅನುಕೂಲಕರ ಅಂಶಗಳನ್ನು ಮಾತ್ರ ಸ್ವೀಕರಿಸುವುದು. ಜಿ ಎಸ್ ಎಸ್ ಮತ್ತು ಕಣವಿ ಅವರ ಕಾವ್ಯ ಅಭಿವ್ಯಕ್ತಿ, ಚಿಂತನ -ಮಂಥನ, ಪ್ರಭಾವ, ಪ್ರೇರಣೆ, ಧ್ವನಿ ವಿವರಣೆಗಳನ್ನು ಅವರ ಕಾವ್ಯಗಳ ಮೂಲಕ ಸಾದೃಶ -ವೈದೃಶ್ಯಗಳನ್ನು ತುಲನಾತ್ಮಕವಾಗಿ ಈ ಕೃತಿಯಲ್ಲಿ ಲೇಖಕರು ಈ ಎಲ್ಲ ಅಂಶಗಳನ್ನು ಮನದಟ್ಟಾಗುವಂತೆ ಚಿತ್ರಿಸಿದ್ದಾರೆ. ತೌಲನಿಕ ಸಾಹಿತ್ಯ ಕ್ಷೇತ್ರಕ್ಕೆ ವಿನೂತನ ಕೊಡುಗೆಗಳನ್ನು ನೀಡಬಲ್ಲ ಈ ಭಾವ- ಸಮನ್ವಯ ಕೃತಿಯು ಮೈಸೂರು ವಿ ವಿ ಪಿಹೆಚ್.ಡಿ ಸಂಶೋಧಾನಾ ಪ್ರಬಂಧದ ಒಂದು ಭಾಗ.
ಲೇಖಕ ಡಾ. ಅಶೋಕ್ ಜಿ ಎಸ್ ಅವರ ಈ ಕೃತಿ ಗಟ್ಟಿತನವನ್ನು ಪಡೆದುಕೊಂಡಿರುವುದು ಸ್ಪಷ್ಟವಾಗುತ್ತದೆ.
- ದತ್ತಾತ್ರೇಯ ಹೆಗಡೆ, ಶಿವಮೊಗ್ಗ
..............................

Comments
Post a Comment