ಮೋಡದ ತೆರೆ ಮತ್ತು ಆನಂದ ಭೈರವಿ’ 



‘ಮೋಡದ ತೆರೆ ಮತ್ತು ಆನಂದ ಭೈರವಿ’ ಇದು ಎರಡು ಪ್ರತ್ಯೇಕ ಕಾದಂಬರಿಗಳ ಸಂಗಮ. ಇದರ ಲೇಖಕಿ ಚಿತ್ರ್ರಲೇಖಾ ಅವರು. 

ಇವೆರಡೂ ಕೌಟುಂಬಿಕ ಕಾದಂಬರಿ. ಹೆಣ್ಣಿನ-ಗಂಡಿನ  ಪ್ರೀತಿ, ಅದರಿಂದ ಅನುಭವಿಸುವ ಸುಖ- ಕಷ್ಟ, ಮದುವೆಯಾದ ಮೇಲೆ ಗಂಡನ ಮನೆಯವರು ಕಾಣುವ ರೀತಿ, ವರ್ಣಭೇಧ ಮಾಡುವುದು, ಪ್ರೀತಿಸಿ ಕೈಕೊಟಾಗ್ಟ ಹೆಣ್ಣಿನ ಸ್ಥಿತಿ... ಹೀಗೆ ಹೆಣ್ಣೊಬ್ಬಳ ಜೀವನ ಸಂಕಷ್ಟವನ್ನೇ ಈ ಎರಡೂ ಕಾದಂಬರಿ ಹೊಂದಿದೆ. ಸರಳವಾಗಿ, ಅಷ್ಟೇ ಸೌಂದರ್ಯದಿಂದ ಇಲ್ಲಿ ಕಥೆಗಳನ್ನು ಲೇಖಕಿ ಹೆಣೆದಿದ್ದಾರೆ. ಓದುಗರಿಗೆ ಆಪ್ತವಾಗುವುದರ ಜೊತೆಗೆ ಕೆಲವು ಸಂದೇಶಗಳನ್ನು ಕಾದಂಬರಿ ನೀಡುವಲ್ಲಿ ಯಶಸ್ವಿಯಾಗಿದೆ.      

ಮೋಡದ ತೆರೆ

ಅನುಕಂಪದಿಂದ ಕೈಹಿಡಿದ ಎರಡನೆಯ ಹೆಂಡತಿಯನ್ನು  ಸ್ವಾರ್ಥಕ್ಕಾಗಿ ಬಳಸಿಕೊಳ್ಳುವುದು, ಅವಳಿಗೆ ಕೊಟ್ಟ ಬಾಳು ಒಂದು ತರಹದ ಭಿಕ್ಷೆ ಎನ್ನುತ್ತಾ ಅವಳನ್ನು ಆದರಿಸದೆ ಇರುವುದು, ಅವರಲ್ಲಿರುವ ಸೂಕ್ಷ್ಮ ಮನಸ್ಸನ್ನು ಅರಿಯದೆ ಅವಳೊಂದಿಗೆ ಹೊಂದಿಕೊಂಡು ನಡೆಯದೆ ದೂರ ಇಡುವುದು, ಮಾನಸಿಕವಾಗಿ ಆಕೆ ಖಿನ್ನತೆಗೊಳಗಾಗುವಂತೆ ಮಾಡುವ ಅವಳ ಮಗಳೇ ಅವಳನ್ನು ಪ್ರೀತಿಸಿ, ಮುಂದೆ ನಿಂತು ಚಿಕಿತ್ಸೆ ಕೊಡಿಸಿ, ಮತ್ತೆ ಗುಣಮುಖಳನ್ನಾಗಿಸುವುದು, ನಂತರ ತಂದೆ ಮತ್ತೆ ಎರಡನೆಯ ಪತ್ನಿಯೊಂದಿಗೆ ಒಂದಾಗುವುದು ಈ ಕಾದಂಬರಿಯ ತಿರುಳು. 

 ಮೊದಲ ಪತ್ನಿ ಕಲ್ಪನಾಳ ಅನಿರಿಕ್ಷಿತ ಸಾವಿನಿಂದ ತಲ್ಲ್ಲಣಿಸಿರುವಾಗಲೇ ಇಂಜಿನೀಯರ್ ರಾಜೀವ್ ಅನಿವಾರ್ಯವಾಗಿ ಶ್ವೇತಾ ಎನ್ನುವವಳನ್ನು ಎರಡನೇ ಮದುವೆಯಾಗುತ್ತಾನೆ. ಆಕೆ ಕಪ್ಪು ಎನ್ನುವ ಕಾರಣಕ್ಕೆ ಆಕೆಯನ್ನು ದೂರವಿಡುವುದು, ತನ್ನ ಮೊದಲ ಪತ್ನಿಯ ನೆನಪಿನಲ್ಲಿ ಸದಾ ಕಾಲ ಕಳೆಯುವುದು, ಎರಡನೆಯ ಪತ್ನಿಯನ್ನು ಪ್ರೀತಿಸದೆ, ಆಕೆಗೆ ಒಲವಿನ ನೋಟ, ಸ್ಪರ್ಶ, ಪರಿಚಯ ಏನನ್ನೂ ಪತಿ ಕೊಡುವುದಿಲ್ಲ. ಸವತಿಯ ಗುಣಗಾನವನ್ನು  ಸದಾ ಕೇಳುತ್ತ ನಿಲ್ಲುವ ದೌರ್ಭಾಗ್ಯದ ಎರಡನೆಯ ಪತ್ನಿಯದು. ರಾಜೀವ್ ಕುಟುಂಬದವರು ಈಕೆಯ ಬಗ್ಗೆ ಅಸೂಯೆ ವ್ಯಕ್ತಪಡಿಸುವುದೇಕೆ, ಶ್ವೇತಾಳಲ್ಲಿ ಯಾವ ರೀತಿ ಭಾವನೆ ಮೂಡುತ್ತದೆ? ಅವರ ನಿರ್ಲಕ್ಷ್ಯವನ್ನೆಲ್ಲಾ ಹೇಗೆ ಸಹಿಸಿಕೊಂಡಳು ಎನ್ನುವುದು ಮುಂದಿನ ಕಥಾ ವಸ್ತು.

  ಕುಟುಂಬಕ್ಕೆ ಒಂದು ಕುಡಿಬೇಕು ಎನ್ನುವ ಕಾರಣ ನಿನ್ನ ಮದುವೆಯಾದೆ ಎಂದು ಹಂಗಿಸುವುದು, ನಂತರ ಹೆಣ್ಣು ಮಗುವನ್ನು ಪಡೆಯುವುದು, ಆಕೆ ತನ್ನ ಮಗನಂತೆ ಬೆಳ್ಳಗಿರಬೇಕು ಕಪ್ಪಾಗಿರಬಾರದು ಎನ್ನುವ ವಿಚಿತ್ರ ನಿಲುವನ್ನು ಆತನ ತಂದೆ -ತಾಯಿ ಹೊಂದುತ್ತಾರೆ.  ಹೆಣ್ಣು ಮಗು ತಂದೆಯ ಬಣ್ಣದಲ್ಲೇ  ಜನಿಸಿದಾಗ ಸಂಭ್ರಮಿಸುತ್ತಾರೆ. ಮಗು ರಕ್ಷಿತಾ ಬೆಳೆದಂತೆ ತಾಯಿಯ ಒಡನಾಟದಿಂದ ದೂರವಿಟ್ಟು ಅಜ್ಜಿಯ ನೆರಳಲ್ಲಿ ಬೆಳೆಯುವಂತೆ ಮಾಡಲಾಗುತ್ತದೆ. ಗಂಡನಿಂದ ಪತ್ನಿಯ ಅಸಡ್ಡೆ,  ಕಾಣದ ಒಲವು, ಸ್ನೇಹ, ಹೊಕ್ಕ ಮನೆಯಲ್ಲಿ ಸಿಗದ ಪ್ರೀತಿ, ಇವೆಲ್ಲವನ್ನೂ ಅನುಭವಿಸುತ್ತಾ ನಿರಾಸೆಯ ಕಡಲಲ್ಲಿ ಸೊಸೆ ಜೀವನ ಸಾಗಿಸುತ್ತಾಳೆ.

 ಇದರಿಂದ ಆಕೆ ಮಾನಸಿಕವಾಗಿ  ನೊಂದು, ಬೆಂದು, ಮಾನಸಿಕ ರೋಗಕ್ಕೆ ತುತ್ತಾಗುತ್ತಾಳೆ. ನಂತರ  ಮನಃಶಾಸ್ತ್ರವನ್ನು ಓದಿ ವಿದ್ಯಾವಂತಳಾದ ಆಕೆಯ ಮಗಳು ತಾಯಿಯನ್ನು ಪರೀಕ್ಷಿಸಿ, ತಜ್ಞ ವೈದ್ಯರ ಸಹಾಯದಿಂದ  ಸೂಕ್ತ ಚಿಕಿತ್ಸೆ ಮೂಲಕ ಆಕೆಗಾದ ಮಾನಸಿಕ ನೋವನ್ನು ಸರಿಪಡಿಸಲು ಯತ್ನಿಸುತ್ತಾಳೆ. ಆಕೆ ಇದರಲ್ಲಿ ಸಫಲಳಾದಳೇ? ತಾಯಿ ಗುಣಮುಖಳಾದಳೇ? ತಂದೆಯ ಬಗ್ಗೆ ಯಾವ ಭಾವನೆ ಮಗಳಲ್ಲಿ ಮೂಡಿತು ಎನ್ನುವುನ್ನು ಇಲ್ಲಿ ಓದಿಯೇ ತಿಳಿಯಬೇಕು.

 ‘ಎಲ್ಲರೂ ಸೇರಿ ಮಾಡಿದ ಘೋರ ಅಪರಾಧದಿಂದ ಆಕೆ ಕತ್ತಲೆಯ ಕೋಣೆಯಲ್ಲಿ ಕಾಲ ಕಳೆಯುವಂತಾಯಿತು. ಇಲ್ಲಿ ಒಂದು ವ್ಯಕ್ತಿತ್ವದ ಕೊಲೆಯಾಗಿದೆ. ಹೆಣ್ಣಿನ ಮೇಲೆ ನಡೆದ ದೌರ್ಜನ್ಯಕ್ಕೆ ಇದು ಸಾಕ್ಷಿ. ಒಂದು ಹೆಣ್ಣು ಸ್ಥಾನಮಾನಗಳನ್ನು ಸ್ಥಾಪಿಸಲಾರದಂತಹ ಸ್ಥಿತಿಯಲ್ಲಿ ನಡೆಸಿದ ದೀರ್ಘವಾದ ಮೌನ ಹೋರಾಟವಿದು. ಬಡವರ ಮನೆಯಲ್ಲಿ ಜನ್ಮತಾಳಿದ ತನ್ನ ತಾಯಿಗೆ ಇಲ್ಲಿಯ ಪ್ರೀತಿಯ ನೆರಳು ಸಿಗಲಿಲ್ಲ. ದೊಡ್ಡಮ್ಮನನ್ನು ಮೆರೆಸಿದರು. ನನ್ನ ತಾಯಿಯನ್ನು ಕಾಲಕಸದಂತೆ ತಾತ್ಸಾರ ಮಾಡಿದ್ದಾರೆ. ಅದರ ಪರಿಣಾಮವೇ ಈ ಸ್ಥಿತಿ’ ಎಂದು ಮಗಳು ಮರುಗುತ್ತಾಳೆ.

 ‘ಹೆಣ್ಣಿನ ಮಾನಸಿಕ ಕೊಲೆ ಇದು. ಜೀವಂತ ಶವದಂತೆ ಬಿದ್ದಿರುವ ನನ್ನ ಅಮ್ಮನ ಬಾಳಿನಲ್ಲಿ ಬೆಳಕು ತುಂಬುತ್ತೇನೆ’ ಎಂದು ತಂದೆಗೆ ಹೇಳುತ್ತಾಳೆ ಯೌವ್ವನ ಮತ್ತು ಸೌಂದರ್ಯ ಶಾಶ್ವತವಲ್ಲ ಎನ್ನುತ್ತಾ ತಂದೆಯ ಮನಸ್ಸನ್ನು ತಿವಿಯುತ್ತಾಳೆ. ಇತ್ತ ತಾಯಿಯನ್ನು ಪ್ರೀತಿಸುತ್ತಾಳೆ. ಹೆಣ್ಣ್ಣಿಗೂ ಹೃದಯವಿದೆ, ಅದರಲ್ಲಿ ನಿರೀಕ್ಷೆ ಇದೆ ಎಂದು ಹೇಳುತ್ತಾಳೆ. ‘ನೀನು ಬೇಕಾದರೆ ನಿನ್ನ ಮೊದಲ ಹೆಂಡತಿ ಕಲ್ಪನಾಳ ನೆನೆಪಲ್ಲೇ ಕಾಲ ಕಳೆ. ನನಗೆ ಅಪ್ಪ, ಅಮ್ಮ ಬೇಕು. ನಿಮ್ಮ ಕಣ್ಣಿಗೆ ಏನು ಅಲ್ಲದ ಕುರೂಪಿ ಹೆಣ್ಣು ನನಗೆ ರಕ್ತ, ಮಾಂಸ ಹಂಚಿದ ತಾಯಿ. ನನಗೆ ಸುಂದರವಾದ ಆಂಟಿ ಬೇಡ, ಕುರೂಪಿಯಾದ ಅಮ್ಮ ಬೇಕು’ ಎಂದು ಹೇಳುತ್ತಾ, ಮನುಷ್ಯರಾಗಿ ಮೊದಲು ಎಂದು ಚುಚ್ಚುತ್ತಾಳೆ. 

ತಂದೆ ರಾಜೀವ್ ಮಗಳ ಮಾತನ್ನು ಒಪ್ಪಿ ತನ್ನ ಪತ್ನಿಯಾಗಿ ಆಕೆಯನ್ನು ಕಂಡನೇ? ಆಕೆಯೊಡನೆ ಮತ್ತೆ ಸಂಸಾರ ಸಾಗಿಸಿದನೇ? ಮಗಳು ಮತ್ತು ಎರಡನೇ ಪತ್ನಿ ಶ್ವೇತಾ ತಾಯಿ-ಮಗಳಂತೆ ಬಾಳಿದರೇ? ಎನ್ನುವುದನ್ನು ಈ ಭಾಗದಲ್ಲಿ ಚಿತ್ರಿಸಲಾಗಿದೆ. 

 ಅಲ್ಲಿಗೆ ದಟ್ಟವಾಗಿ ಮೋಡ ಕರಗಿ ಮಳೆಯಾಗಿ ಬಿದ್ದ ಕಾರಣ ಮುಗಿಲು ಚಳಿಯಾಗುತ್ತದೆ. ಮೋಡದ ತೆರೆ ಸೆರೆಯುತ್ತದೆ 



ಆನಂದ ಭೈರವಿ 


ಆನಂದ್ ಎಂಬ ಸಿರಿವಂತನನ್ನು ಪ್ರೀತಿಸಿದ ಭೈರವಿ ಆತನ ಮಾತಿಗೆ ಮರುಳಾಗಿ, ಪ್ರೇಮಪಾಶದಲ್ಲಿ ಸಿಲುಕಿ ಗರ್ಭಿಣಿಯಾಗುವುದು, ನಂತರ ಆತ ಈಕೆಗೆ ಕೈಕೊಟ್ಟು ಬೇರೆ ಯುವತಿಯೊಡನೆ ವಿವಾಹವಾಗುವುದು, ತನ್ನ ಗೆಳತಿ ಹಾಗೂ ಕ್ಲಾಸ್ಮೇಟ್ ಮತ್ತು ಆನಂದನ ಸಹೋದರಿಯಾದ ಭವಾನಿಯಿಂದ ಈ ವಿಷಯ ಅರಿತು ಇದನ್ನು ಪ್ರಶ್ನಿಸಲು ಆನಂದನ ಕೈಗಾರಿಕಾ ಘಟಕಕ್ಕೆ ಹೋದಾಗ ಅಲ್ಲಿ ಆತನೊಡನೆ ಜಗಳವಾಡುವುದು, ಮತ್ತೆ ಆತ ಈಕೆಯನ್ನು ದೈಹಿಕವಾಗಿ ಬಳಸಿಕೊಳ್ಳುವುದು, ನಂತರ ಸಿಟ್ಟಿಗೆದ್ದು ಆಕೆ ಅಲ್ಲಿಯೇ ಇದ್ದ ಕಬ್ಬಿಣದ ಚೂಪಾದ ಆಯುಧದಿಂದ ಆತನನ್ನು ಚುಚ್ಚಿ ಸಾಯಿಸುವುದು ಈ ಕಥೆಯ ಸಾರಾಂಶ. 

 ಶಾಲೆಯ ಮದರ್ ಸುಸಾನ್ ಬಳಿ ಬಂದು ತಪ್ಪೊಪ್ಪಿಕೊಂಡು ಕೆಲವು ತಿಂಗಳು ಆಶ್ರಯ ಪಡೆದು ಹೆರಿಗೆಯಾಗುವವರೆಗೆ ಮಂಗಳೂರಿಗೆ ತೆರಳುವುದು, ಹೆಣ್ಣು ಮಗು ಹೆರಿಗೆಯಾದ ಕೆಲವೇ ದಿನದಲ್ಲಿ ವಾಪಸ್ ಬಂದು ಪೊಲೀಸರಿಗೆ ಶರಣಾಗುತ್ತಾಳೆ. ಅಲ್ಲಿಗೆ ಕೊಲೆಯಾಗಿ ಏಳು ತಿಂಗಳಾಗಿರುತ್ತದೆ. ಪೊಲೀಸರು ಆಕೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ೨೫ ವರ್ಷಗಳ ಶಿಕ್ಷೆಯಾಗುತ್ತದೆ. ಶಿಕ್ಷೆ ಮುಗಿಸಿ ಮತ್ತೆ ತಾನು ಓದಿದ ಶಾಲೆಯ ಮದರ್ ಅವರಲ್ಲಿ ಬರುತ್ತಾಳೆ. ಉಟ್ಟ ಬಟ್ಟೆಯಲ್ಲಿ, ಸ್ವಲ್ಪ ಹಣವನ್ನು ಹಿಡಿದು, ಹಳೆಯ ನೆನಪಿನಲ್ಲಿ ಬಂದ ಭೈರವಿಗೆ ಕೊಚ್ಚಿ ಹೋಗುತ್ತಿರುವ ಭವಿಷ್ಯವನ್ನು ಕಟ್ಟಿಕೊಳ್ಳುವುದು ಕಷ್ಟವಾಗುತ್ತದೆ. ಓದಿದ ಆಶ್ರಮಕ್ಕೆ ಬಂದು ಕೆಲಸಕ್ಕೆ ಕೋರುತ್ತಾಳೆ. ಆಗ ಮದರ್ ಮೈಸೂರಿನಲ್ಲಿರುವ ದಂಪತಿಗೆ ಮಗು ನೋಡಿಕೊಳ್ಳಲು ಒಬ್ಬ ಮಹಿಳೆ ಬೇಕಾಗಿದ್ದಾರೆ. ಅಲ್ಲಿಗೆ ಹೋಗು.  ಆತನ ಹೆಸರು ಗೌತಮ್ ಎನ್ನುತ್ತಾರೆ. ಈ ಗೌತಮ್ ಯಾರು, ಮದರ್‌ಗೆ ಈತನ ಪರಿಚಯ ಹೇಗೆ ಎನ್ನುವುದು ಈ ಭಾಗದಲ್ಲಿದೆ. 

   ‘ನಿನ್ನ ಮಗಳು ಪುನೀತಾ ಈಗ  ಮೈಸೂರಿನಲ್ಲಿದ್ದಾಳೆ. ಗಂಡ-ಇಬ್ಬರೂ ಕೆಲಸದಲ್ಲಿದ್ದಾರೆ. ಅವರಿಗೆ ಮಕ್ಕಳನ್ನು ನೋಡಿಕೊಳ್ಳಲು ನೀನು ಹೋಗು’ ಎನ್ನುತ್ತಾರೆ. ‘ಹೆತ್ತ ಮಗುವನ್ನು ಕಡೆಗಣಿಸಿದೆ. ಈಗಲಾದರೂ ಅವಳಿಗೆ ಸಹಾಯಕಳಾಗಿ ತನ್ನ ಕರ್ತವ್ಯವನ್ನು ತೋರಿಸುತ್ತೇನೆ’ ಎಂದುಕೊಂಡು ಮೈಸೂರಿಗೆ ತೆರಳುತ್ತಾಳೆ. ಮೈಸೂರಿಗೆ ನಂತರ ಅಲ್ಲಿ ತನ್ನ ಹೆಸರನ್ನು ಅಮ್ಮಣ್ಣಿ ಎಂದು ಅವರಲ್ಲಿ ಪರಿಚಯಿಸಿಕೊಳ್ಳುತ್ತಾಳೆ.ಯೇ ವಿನಾ ಪುನೀತಾಗೆ ನಿನ್ನ ಅಮ್ಮ ಎಂದು ಹೇಳಲ್ಲ. ದಿನಗಳಂತೆ ಗೌತಮ್ ಆಕೆಯನ್ನು ಅತ್ಯಂತ ಕರುಣೆಯಿಂದ ಕಂಡರೆ ಪುನೀತಾ ಮಾತ್ರ ಕೆಲಸದವಳು ಎಂಬಂತೆ ಕಾಣುತ್ತಿದ್ದಳು. ‘ಮಕ್ಕಳು ಕೆಲಸದವರನ್ನು ಅತಿಯಾಗಿ ಹಚ್ಚಿಕೊಳ್ಳಬಾರದು, ಎಲ್ಲಾ ಕೆಲಸದವರನ್ನು ಇಂದಿನ ಕಾಲದಲ್ಲಿ ನಂಬುವಂತೆ ಇಲ್ಲ’ ಎಂಬ ಮುಂತಾದ ಚುಚ್ಚು ಮಾತುಗಳನ್ನು ಆಡುತ್ತಾಳೆ. ಮಗಳ ಚುಚ್ಚುಮಾತು ತಾಗಿದರೂ ಅದನ್ನೇಕೆ ಭೈರವಿ ತೊರಗೋಡುವುದಿಲ್ಲ, ಅವಳಿಗೆ ಮಗಳ ಬಗ್ಗೆ ಪ್ರೀತಿಯಿತ್ತೇ? ಎನ್ನುವುದು ಇದರ ಮುಂದಿನ ಭಾಗದಲ್ಲಿದೆ. 

 ಗೌತಮ್ ಪತ್ನಿಯನ್ನು ಸಮಾಧಾನಿಸುತ್ತಾನೆ. ಬೆಳೆಯುವ ಮಕ್ಕಳೊಂದಿಗೆ ನೆಮ್ಮದಿಯಿಂದ, ಅವರನ್ನು ಚೆನ್ನಾಗಿ, ಪ್ರೀತಿಯಿಂದ ಬೆಳೆಸುತ್ತಾ ಇರುವಾಗ ಗೌತಮನ ಚಿಕ್ಕಪ್ಪ ನಿವೃತ್ತ ಎಸ್ಪಿ ಅರುಣ್‌ಕುಮಾರ್ ಗೌತಮನ ಮನೆಗೆ ಬರುತ್ತಾರೆ. ಅಲ್ಲಿ ಭೈರವಿಯನ್ನು ಕಂಡ ಅವರು, ಏನು ಹೇಳುತ್ತಾರೆ. ಅವರಿಗೆ ಗೌತಮಿಯ ಪರಿಚಯ ಹೇಗೇ? ಗೌತಮ್- ಪುನೀತಾಗೆ ಅವರು ಹೇಳಿದ್ದೇನು ಎನ್ನುವುದು ಈ ಕಾದಂಬರಿಯ ಒಂದು ತಿರುವು. 

  ಅಪರಾಧ ಮನುಷ್ಯನಿಂದ ಆಗುವ ಸಹಾಯ ಅವರೆಲ್ಲರೂ ಮನುಷ್ಯರೇ. ಒಮ್ಮೊಮ್ಮೆ ಅಪರಾಧಿಯಾದರೂ ಮತ್ತೆ ಒಳ್ಳೆಯದಾಗಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸುತ್ತಾನೆ. ‘ಮಕ್ಕಳ ಭವಿಷ್ಯವನ್ನು ಕೊಲೆಪಾತಕಿಯ ಕೈಗೆ ಕೊಟ್ಟು ನೋಡುವುದೇ’ ಎಂದು ಪುನೀತಾ ಹೇಳಿದಾಗ, ಇದರಿಂದ ಬೇಸತ್ತ ಭೈರವಿ ತನ್ನ ಪೆಟ್ಟಿಗೆಯೊಂದಿಗೆ ಹೊರಡಲು ನಿಲ್ಲುತ್ತಾಳೆ. ನೀವು ಮನೆ ಬಿಟ್ಟು ಹೋಗಬಾರದು ಎಂದು ಗೌತಮ್ ಮನವಿ ಮಾಡುತ್ತಾನೆ.  

  ತಾಯಿಯ ಮನಸ್ಸನ್ನು ನೋಯಿಸಬಾರದೆಂದು ಮದರ್ ನನಗೆ ಹೇಳಿದ್ದರು. ಈಗ ನಿಜವನ್ನು ಹೇಳದಿದ್ದರೆ ಅನಾಹುತವಾಗುತ್ತದೆ’ ಎಂದು ಗೌತಮ್ ಪುನೀತಾಳಿಗೆ ಹೇಳುತ್ತಾ, ಆಕೆಯ ಬಗ್ಗೆ ವಿವರಿಸುತ್ತಾನೆ. ‘ಈಕೆ ನಿನ್ನ ಹಡೆದ ತಾಯಿ ಭೈರವಿ. ಆನಂದ ಎನ್ನುವನಿಂದ ಪ್ರೇಮವಂಚಿತಳಾದವಳು. ಅವನಿಂದ ಆಕೆ ಪಟ್ಟ ವೇದನೆ ನಿನಗೆ ತಿಳಿಯದು. ಮೇರಿ ಮದರ್ ಸೂಸನ್ ತನಗೆ ಈ ಬಗ್ಗೆ ವಿವರವಾಗಿ ವಿವರಿಸಿದ್ದಾರೆ’ ಎಂದು ಅವರು ಬರೆದ ಪತ್ರವನ್ನು ಪತ್ನಿ ಕೈಗೆ ಕೊಡುತ್ತಾನೆ. ನಡುಗುವ ಕೈಗಳಿಂದ ಪುನೀತಾ ಅದನ್ನು ಓದುತ್ತಾಳೆ. 

 ನಂತರ ಎಲ್ಲರೂ ಒಂದಾದರೇ?  ಪುನೀತಾ ತಾಯಿಯನ್ನು ಹೇಗೆ ಕಂಡಳು? ಎನ್ನುವಲ್ಲಿಗೆ ಕಾದಂಬರಿ ಅಂತ್ಯವಾಗುತ್ತದೆ.  

-ದತ್ತಾತ್ರೇಯ ಹೆಗಡೆ, ಶಿವಮೊಗ್ಗ

........................


Comments

Popular posts from this blog