ಜೀವನಕ್ಕೆ ದಾರಿದೀಪ
‘ಅರಸು ಅನುಸರಿಸು’
‘ಅರಸು ಅನುಸರಿಸು’ ಇದು ಉದಾತ್ತ ಸಾಮಾಜಿಕ ಕಳಕಳಿಯನ್ನು ಪ್ರತಿಬಿಂಬಿಸುವುದರ ಜೊತೆಗೆ ಅಪಾರವಾದ ಜ್ಞಾನ, ಅನುಭವ, ಚಿಂತನೆಗಳಿಂದ ಶ್ರೀಮಂತವಾದ ಕೃತಿಯಾಗಿದೆ. ಇದರ ಲೇಖಕರು ಉಡುಪಿ ಜಿಲ್ಲೆಯ ಐರೋಡಿ ಸದಾಶಿವ ಅಲ್ಸೆಯವರು. ಕಾಲೇಜಿನ ನಿವೃತ್ತ ಪ್ರಾಂಶುಪಾಲರಾಗಿ ಅಪಾರ ಅನುಭವದೊಂದಿಗೆ ಇಲ್ಲಿ ಅನುಭವದ ರಸಧಾರೆಯನ್ನು ಹರಿಸಿದ್ದಾರೆ. ಆತಂಕ, ಭಯ, ಲೋಭ, ಮತ್ಸರ, ದ್ವೇಷ, ಸ್ವಾರ್ಥ ಮೊದಲಾದ ನಕಾರಾತ್ಮಕ ಗುಣಗಳನ್ನು ತೊರೆದು ಸಹಕಾರ, ಸರಳತೆ, ಸತ್ಯ, ನ್ಯಾಯ, ನೀತಿ, ಧರ್ಮ ಮೊದಲಾದ ಸಕಾರಾತ್ಮಕ ಗುಣಗಳನ್ನು ರೂಢಿಸಿಕೊಂಡು ಸಮೃದ್ಧವಾದ ಸಾರ್ಥಕ ಜೀವನವನ್ನು ನಡೆಸಲು ಈ ಕೃತಿ ಪ್ರೇರಣೆ ನೀಡುತ್ತದೆ. ಸುಮರು ೩೦ ಲೇಖನಗಳು ಇದರಲ್ಲಿವೆ.
ಸರಳವಾದ ಭಾಷೆ, ಸಮರ್ಪಕವಾದ ವಿವರಣೆ, ವಿಷಯಗಳನ್ನು ಪುಷ್ಟಿಕರಿಸಲು ಪೂರಕವಾದ ಕಥೆಗಳು, ಶ್ರೇಷ್ಠ ಸಾಧಕರ ಜೀವನದ ಪ್ರಮುಖ ಘಟನಾವಳಿಗಳು ಹಾಗೂ ಹಿತಮಿತವಾದ ಹಾಸ್ಯ ಭರಿತವಾದ ತುಣುಕುಗಳು ನಮ್ಮನ್ನು ಮುಂದಕ್ಕೆ ಓದಿಸಿಕೊಂಡು ಹೋಗುವಂತೆ ಮಾಡುತ್ತವೆ. ಕೃತಿಯಲ್ಲಿ ಎಲ್ಲಾ ಚಿಂತನೆಗಳ ಮಹತ್ವವನ್ನು ವಿಷದಪಡಿಸುವ ಲೇಖಕರ ಶೈಲಿ ನಿಜಕ್ಕೂ ಅನುಪಮವಾದದ್ದು. ಮೌಲ್ಯಾಧಾರಿತ, ಅಮೂಲ್ಯ ಲೇಖನಗಳು ಇದರಲ್ಲಿವೆ. ಕೃತಿಯಲ್ಲಿ ಸುಮಾರು ಮೂವತ್ತು ಕಿರುಲೇಖನಗಳಿವೆ ಇವೆಲ್ಲವೂ ನಮ್ಮ ಜ್ಞಾನಭಂಡಾರಕ್ಕೆ ಅತ್ಯಂತ ಅವಶ್ಯಕವಾಗಿವೆ ಮತ್ತು ಹೊಸ ಚಿಂತನೆಯನ್ನು ಮೂಡಿಸುವಂಥವು. ಆದ್ದರಿದಂಲೇ ಈ ಕೃತಿಗೆ ‘ಅರಸು ಅನುಸರಿಸು’ ಎಂಬ ಹೆಸರನ್ನು ಲೇಖಕರು ಇಟ್ಟಿದ್ದಾರೆ.
ಇದರಲ್ಲಿನ ಕೆಲವು ಲೇಖನಗಳನ್ನು ಓದಿದಾಗ ಅನಿಸಿದ ಅಭಿಪ್ರಾಯಗಳು ಇಲ್ಲಿವೆ. ‘ಪುಸ್ತಕ ಬದುಕಿಗೆ ಪ್ರೇರಕ’ ಎಂಬ ಬರಹದಲ್ಲಿ ಪುಸ್ತಕ ನೂರು ಒಳ್ಳೆಯ ಸ್ನೇಹಿತರಿಗೆ ಸಮ ಎನ್ನುವ ಹಿರಿಯರ ಮಾತನ್ನು ಪ್ರಸ್ತಾಪಿಸುವ ಲೇಖಕರು, ಕಲಿಕೆ ನಿರಂತರವಾದುದು. ತೆಗೆದುಕೊಳ್ಳುವ ಅಂಕಗಳಿಗಿಂತ ಸಂಪಾದಿಸುವ ಜ್ಞಾನ ಮುಖ್ಯ. ಇಂದು ಇಂಟರ್ನೆಟ್ ಯುಗದಲ್ಲಿ ಪುಸ್ತಕಕಕ್ಕಿಂತ ಮೊಬೈಲ್ ಖರೀದಿ ಮಾಡುವವರು ಜಾಸ್ತಿಯಾಗಿದ್ದಾರೆ. ಪ್ರಯಾಣ ಮಾಡುವಾಗ ಇಯರ್ ಫೋನ್ ಬದಲು ಕೈಯಲ್ಲಿ ಒಂದು ಪುಸ್ತಕವಿರಲಿ. ಇದರಿಂದ ಜೀವನದಲ್ಲಿ ಕೊಂಚ ಬದಲಾವಣೆ ಆಗಬಹುದು ಎಂದು ಹೇಳುತ್ತಾರೆ.
‘ಬದುಕು ಅರಸು ಜೀವನ ಮುಂದುವರೆಸು’ ಇದರಲ್ಲಿ ಬದುಕು ಇರುವುದು ಬಾಳಲು ವಿನಾ ಬಳಲಲು ಅಲ್ಲ, ಸವಿಯಲು ವಿನಾ ಸವೆದು ಹೋಗಲು ಅಲ್ಲ, ಏನನ್ನಾದರೂ ಸಾಧಿಸಲು ವಿನಾ ರೋಧಿಸಲು ಅಲ್ಲ, ಸಂತಸಪಡಲು ವಿನಾ ಸಂಕಟಪಡಲು ಅಲ್ಲ ಎಂಬ ಧೋರಣೆಯನ್ನು ಬೆಳೆಸಿಕೊಂಡು ಬದುಕನ್ನು ಸಂಭ್ರಮವಾಗಿಸಬೇಕು. ಅದು ಸಂಗ್ರಾಮವಾಗಿರಬಾರದು ಎನ್ನುತ್ತಾ, ಭವಿಷ್ಯವನ್ನು ರೂಪಿಸಿಕೊಳ್ಳುವವರು ನಾವೇ ಆಗಿರುವುದರಿಂದ ಬದುಕು ಹಾರಾಟವಲ್ಲ, ಹೋರಾಟವೂ ಅಲ್ಲ, ವಿಜಯವೂ ಅಲ್ಲ, ಅದು ಒಂದು ಜೋಕಾಲಿ. ಹಿಂದಕ್ಕೂ ಮುಂದಕ್ಕೂ ಹೋಗಬೇಕಾಗುತ್ತದೆ ಎನ್ನುವುದನ್ನು ಅರ್ಥೈಸಿಕೊಳ್ಳಬೇಕು ಎನ್ನುತ್ತಾರೆ.
‘ಗುರಿ ಅದುವೇ ಬದುಕಿನ ದಾರಿ’ ಎಂಬಲ್ಲಿ ಜೀವನದಲ್ಲಿ ಗುರಿಯೇ ಇಲ್ಲದಿರುವುದು ದುರಂತದ ವಿಷಯವಾಗಿದೆ. ಗುರಿ ತಲುಪದೇ ಇರುವುದು ದುರಂತವಲ್ಲ, ಗುರಿಯನ್ನು ಹೊಂದದಿರುವುದು ದೊಡ್ಡ ದುರಂತ. ನಮ್ಮ ಮುಂದೆ ಗುರಿ ಇರಬೇಕು ಎನ್ನುತ್ತಾರೆ. ‘ನಗುವೆಂಬ ಆಭರಣ ಧರಿಸಿ ಬದುಕು ಬದಲಾಯಿಸೋಣ’ ಎಂಬ ಬರೆಹದಲ್ಲಿ ನಗು ಎನ್ನುವ ಎರಡು ಅಕ್ಷರ ಬರೆದಷ್ಟು ಸುಲಭವಲ್ಲ ಧರಿಸೋಕೆ ಎನ್ನುತ್ತಾರೆ. ಒಂದು ನಗು ವ್ಯಕ್ತಿತ್ವವನ್ನೇ ಬದಲಿಸುತ್ತದೆ. ಇಂದಿನ ದಿನನಿತ್ಯದ ಜಂಜಾಟದಲ್ಲಿ ನಗು ಮರೆತೇ ಹೋಗಿದೆ. ನಗುವಿಗೆ ನಗುವನ್ನು ಪಸರಿಸುವ ಗುಣವಿದೆ. ನಗು ಮನುಷ್ಯರಿಗೆ ದೇವರಿತ್ತವರ ಎನ್ನುತ್ತಾರೆ.
‘ ನೆಮ್ಮದಿ ಸಾರ್ಥಕ ಬದುಕಿನ ತಳಹದಿ’: ಈ ಲೇಖನದಲ್ಲಿ ಸಂತೋಷವಾಗಿರುವುದೇ ಎಲ್ಲರ ಜೀವನದ ಗುರಿ. ಬೆಲೆಬಾಳುವ ವಸ್ತುಗಳನ್ನು ಹೊಂದಿರುವವರು ಶ್ರೀಮಂತರಲ್ಲ. ಅವೆಲ್ಲ ಇಲ್ಲದಿದ್ದರೂ ಸಂತಸದಿಂದಿರುವವನೇ ನಿಜವಾದ ಶ್ರೀಮಂತ. ಸಂತಸ, ಸಮಾಧಾನ, ನೆಮ್ಮದಿಗಿಂತ ದೊಡ್ಡ ಶ್ರೀಮಂತಿಕೆ ಬೇರೊಂದು ಇಲ್ಲ ಎನ್ನುವದನ್ನು ನೆನೆಪಿಸುತ್ತಾರೆ. ‘ಸಮಯ ಅರಿತು ಅನುಸರಿಸಿದರೆ ಬದುಕು ಅಕ್ಷಯ’ ಇದರಲ್ಲಿ ಸಮಯಕ್ಕೆ ತನ್ನದೇ ಆದ ಮಹತ್ವವಿದೆ. ಸಮಯದ ಬಗ್ಗೆ ಗೊತ್ತಿದೆ ಎಂದರೆ ಸಾಲದು. ಅದನ್ನು ಬಹಳ ಎಚ್ಚರಿಕೆಯಿಂದ ಬಳಸಿಕೊಳ್ಳುವ ಮಾರ್ಗವು ಮುಖ್ಯ. ಸಮಯದ ಸಮರ್ಪಕ ನಿರ್ವಹಣೆ ಒಂದು ಕೌಶಲ್ಯ ಎಂದು ವಿವರಿಸುತ್ತಾರೆ
‘ಖುಷಿಯೇ ಬದುಕು ನಿನ್ನಲ್ಲಿ ಹುಡುಕು’ ಎಂಬ ಬರೆಹದಲ್ಲಿ, ಜೀವನದಲ್ಲಿ ಯಾರೂ ಪರಿಪೂರ್ಣರಲ್ಲ. ಇದ್ದದ್ದನ್ನು ಇದ್ದ ಹಾಗೆ ಒಪ್ಪಿಕೊಳ್ಳುವುದರಲ್ಲಿ ಖುಷಿಯಿದೆ. ಇರುವ ಜೀವನದಲ್ಲಿ ಸಂತೋಷ ಕಂಡುಕೊಳ್ಳಬೇಕು. ಖುಷಿ ಮಾರುಕಟ್ಟೆಯಲ್ಲಿ ಸಿಗುವ ವಸ್ತುವಲ್ಲ. ಖುಷಿ ಕೊಡಬೇಕಾದರೆ ನಾವು ಎಲ್ಲವುಗಳ ಮೇಲಿನ ವ್ಯಾಮೋಹವನ್ನು ಬಿಟ್ಟು ಇರುವುದನ್ನು ಒಪ್ಪಿಕೊಂಡು ಪ್ರೀತಿಸಬೇಕು ಎನ್ನುತ್ತಾರೆ.
‘ಸೋಲು ಅರಿತರೆ ಅದುವೇ ಯಶಸ್ವಿ ಬದುಕಿನ ಮೆಟ್ಟಿಲು’ ಈ ಲೇಖನದಲ್ಲಿ ಲೇಖಕರು ಸೋಲು- ಗೆಲುವು ಎಲ್ಲರ ಬದುಕಿನಲ್ಲಿಯೂ ಇದೆ. ಯಶಸ್ಸು ಕಂಡ ವ್ಯಕ್ತಿಗಳೆಲ್ಲರೂ ಸೋಲನ್ನೇ ಕಾಣದವರಲ್ಲ ಎಂದರ್ಥವಲ್ಲ. ಅವರು ಸೋಲನ್ನು ಸ್ವೀಕರಿಸುವ ರೀತಿ ಉಳಿದವರಿಗಿಂತ ಭಿನ್ನಾರ್ಥವಾಗಿದೆ. ಸೋಲೇ ಗೆಲುವಿನ ಸೋಪಾನ. ಒಬ್ಬ ವ್ಯಕ್ತಿಯ ಬೆಳವಣಿಗೆಯಲ್ಲಿ ಗೆಲುವಿಗಿಂತ ಸೋಲು ಸಹಕಾರಿಯಾಗುತ್ತದೆ ಎನ್ನುತ್ತಾರೆ.
‘ಸಕಾರಾತ್ಮಕ ಚಿಂತನೆಯಿಂದ ಬದುಕು ಪರಿವರ್ತನೆ’ ಎಂಬ ಬರೆಹದಲ್ಲಿ ನಕಾರಾತ್ಮಕ ಚಿಂತನೆ ಮಾಡಿದರೆ ನೆಮ್ಮದಿ ಕಡಿಮೆಯಾಗುತ್ತದೆ. ಎಲ್ಲವನ್ನೂ ಸಕಾರಾತ್ಮಕ ದೃಷ್ಟಿಕೋನದಿಂದ ನೋಡುವ ಗುಣ ಬೆಳೆಸಿಕೊಳ್ಳಬೇಕು. ಚಿಂತನೆ, ವಿಚಾರ, ಮನೋಬಲ ಬದಲಾಯಿಸಿಕೊಳ್ಳಬೇಕೆಂಬ ಸಲಹೆ ಕೊಡುತ್ತಾರೆ. ‘ನಂಬಿಕೆ ಬದುಕಿನ ಹೊಂದಾಣಿಕೆ’ ಎಂಬಲ್ಲಿ ನಂಬಿಕೆ ಬದುಕಿನ ನಾವಿಕ. ನಂಬಿಕೆ ಇಲ್ಲದ ಜೀವನ ದುಸ್ತರ. ಜನರನ್ನು ನಂಬುವ ಮೊದಲು ಅವರನ್ನು ಅರ್ಥ ಮಾಡಿಕೊಳ್ಳಬೇಕು. ನಂಬಿಕೆಗೆ ಅದರದ್ದೇ ಆದ ಮಿತಿಯಿದೆ ಎನ್ನುತ್ತಾರೆ. ‘ಪ್ರೀತಿ ಉಕ್ಕಿದರೆ ಸಂತೋಷದ ಬದುಕು’ ಎಂಬ ಲೇಖನದಲ್ಲಿ ಪ್ರೀತಿಸುವ ಅವಕಾಶ ಜೀವನದಲ್ಲಿ ಪದೇ ಪದೇ ಬರುವುದಿಲ್ಲ. ಬಂದಾಗ ಬಿಡಬಾರದು. ದುರಂತವೆಂದರೆ, ನಮ್ಮನ್ನು ಪ್ರೀತಿಸುವುದನ್ನು ನಾವೇ ಮರೆತುಬಿಟ್ಟಿದ್ದೇವೆ. ನೋವು ಕೊಟ್ಟವರನ್ನೇ ನೆನೆಪಿಸಿಕೊಳ್ಳುತ್ತೇವೆ. ಪ್ರೀತಿಯನ್ನು ಸದಾ ಸ್ಮರಿಸಬೇಕೆನ್ನುತ್ತಾರೆ. ‘ತಾಯಿಯ ಪ್ರೀತಿ’ ಎಂಬ ಬರೆಹದಲ್ಲಿ ಅಮ್ಮನ ತ್ಯಾಗ, ಸಹನೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನಾವು ಈ ಜನ್ಮದಲ್ಲಿ ಸಂಪಾದಿಸಿದ್ದನ್ನೆಲ್ಲಾ ಅವಳಿಗೆ ಬರೆದುಕೊಟ್ಟರೂ ಅಮ್ಮನ ತ್ಯಾಗಕ್ಕೆ ಬೆಲೆ ಕಟ್ಟಲಾಗದು ಎನ್ನುವುದನ್ನು ನೆನೆಪಿಸುತ್ತಾರೆ.
ಒಟ್ಟಿನಲ್ಲಿ, ಜೀವನದಲ್ಲಿ ನೆಮ್ಮದಿ, ಶಾಂತಿ, ಯಶಸ್ಸು, ಶ್ರೇಯಸ್ಸು ಬಯಸುವವರಿಗೆ ದಾರಿ ದೀಪದಂತಿದೆ ಈ ಕೃತಿ.
-ದತ್ತಾತ್ರೇಯ ಹೆಗಡೆ, ಶಿವಮೊಗ್ಗ
............................

Comments
Post a Comment