ಮಹಿಳೆಯರಿಗಿರುವ ತೊಡರು ಸರಿಸುವ ಸೊಡರು
‘ಹರಿವ ತೊರೆಗೆ ನೂರು ತೊಡರು’
ಮೂಡಬಿದ್ರೆಯ ಉಪನ್ಯಾಸಕಿ ಸುಲತಾ ವಿದ್ಯಾಧರ ಸಂಪಾದಿಸಿದ ಮಹಿಳಾ ವೈಚಾರಿಕ ಲೇಖನಗಳ ಸಂಕಲನ ‘ಹರಿವ ತೊರೆಗೆ ನೂರು ತೊಡರು. ಇದರಲ್ಲಿ ಸುಮಾರು ೨೦ ಲೇಖಕಿಯರಿಂದ ಬರೆಯಿಸಿದ ಲೇಖನಗಳಿವೆ. ಸಾಂಪ್ರದಾಯಿಕ ಒಲವುಗಳಿಗಿಂತಲೂ ಅವಳ ಭಿನ್ನ ಅಭಿವ್ಯಕ್ತಿ, ಸಾಮರ್ಥ್ಯದ ಬಗೆಗಿನ ಚರ್ಚೆ ಹೆಚ್ಚು ಪ್ರಸ್ತುತ ವಾಗುತ್ತಿರುವಾಗ ಸಮಕಾಲೀನ ತಲ್ಲಣಗಳಿಗೆ ಅವಳು ಹೇಗೆ ಮುಖಾಮುಖಿಯಾಗುತ್ತಿದ್ದಾಳೆ, ಅವಳ ಅರಿವು, ತಳಮಳ ಯಾವ ರೀತಿ ಉತ್ತರವನ್ನು ನೀಡುತ್ತಿದೆ, ನಿಜವಾಗಿಯೂ ಆಕೆ ತನ್ನ ಸಮಸ್ಯೆಗಳಿಂದ ಮುಕ್ತಳಾಗಿದ್ದಾಳೆಯೇ ಎಂಬೆಲ್ಲ ಪ್ರಶ್ನೆಗಳಿಗೆ ಇದರಲ್ಲಿ ಉತ್ತರವಿದೆ.
ಈ ಕೃತಿಯಲ್ಲಿ ಸಾಹಿತ್ಯ, ಕಲೆ, ಧರ್ಮ, ರಾಜಕೀಯ, ವೈದ್ಯಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಮಹಿಳೆಯರು ಎದುರಿಸುತ್ತಿರುವ ತವಕ ತಲ್ಲಣಗಳೊಂದಿಗೆ ಅವರು ಎದುರಿಸಬೇಕಾದ ಸವಾಲುಗಳ ಕುರಿತಾಗಿಯೂ ಇದೆ. ಬಾಹ್ಯವಾಗಿ ಕಾಣುವ ಕ್ರೌರ್ಯ ಮತ್ತು ತಣ್ಣಗಿನ ಕ್ರೌರ್ಯಗಳ ಬಗೆಗಿನ ಇಲ್ಲಿನ ಲೇಖನಗಳು ಮನಮುಟ್ಟುವಂತೆ, ನಿಡುಸುಯ್ಯುವಂತೆ ಸಾಮಾಜಿಕ ವ್ಯವಸ್ಥೆಯ ಬಗ್ಗೆ ಸಿಡಿದೇಳುವಂತೆ ನಮ್ಮನ್ನು ಪ್ರೇರೇಪಿಸುತ್ತದೆ.
ವಿಜ್ಞಾನ-ತಂತ್ರಜ್ಞಾನದಿಂದಾಗಿ ಮಂಗಳನ ಅಂಗಳಕ್ಕೆ ಜಿಗಿದರೂ ನೆಲದ ಮೇಲೆ ಒಟ್ಟಿಗೆ ಜೀವಿಸುವ ಸಹಜೀವಿಗಳ ಬಗ್ಗೆ ಗೌರವದ ಮನೋಭಾವ ಮೂಡಿಸಲು ನಮ್ಮಿಂದ ಇನ್ನೂ ಸಾಧ್ಯವಾಗಿಲ್ಲ. ಮಹಿಳೆಗೆ ಸಮನಾದ ದುಡಿಮೆ, ರಾಜಕೀಯದ ಅಧಿಕಾರ ಸಿಕ್ಕಿಲ್ಲ. ಜಾಗತೀಕರಣ, ಉದಾರೀಕರಣ ನೀತಿಗಳು ಮಹಿಳೆಯ ಪಾಲಿಗೆ ಕಂಟಕವಾಗಿವೆ. ಇಂದಿಗೂ ಮಹಿಳಾ ಸುರಕ್ಷತೆಯ ಬಗ್ಗೆ ಮಾತನಾಡಬೇಕಾಗಿ ಬಂದಿರುವುದು ವಿಷಾದದ ಸಂಗತಿಯಾಗಿದೆ.
ಸಮಾಜದಲ್ಲಿನ ಮಹಿಳೆಯರ ಸಮಸ್ಯೆಗಳು ಆಲದ ಬಿಳಲುಗಳಂತೆ ವಿಸ್ತಾರವಾಗಿ ಹರಡಿಕೊಂಡಿವೆ. ಇಂತಹ ಬೇರುಗಳನ್ನು ಕತ್ತರಿಸಿ ಬಿಸಾಡುವ ಸಾಮಾಜಿಕ ವ್ಯವಸ್ಥೆ ನಮಗೆ ಬೇಕಾಗಿದೆ ಎನ್ನುವುದನ್ನು ಕೃತಿ ತೋರಿಸಿಕೊಡುತ್ತದೆ. ಡಾ|| ಎಚ್. ಎಸ್. ಅನುಪಮಾ, ಮಾಧವಿ ಎಸ್. ಭಂಡಾರಿ, ಪ್ರೊ. ಸಬಿಹಾ ಭೂಮಿಗೌಡ, ಬಿ ಎಂ ರೋಹಿಣಿ, ಪಾರ್ವತಿ ಐತಾಳ, ಸಾರಾ ಅಬೂಬಕರ್, ಯು. ಶೈಲಾ, ಜ್ಯೋತಿ ಚೇಳೈರು, ರೂಪಾ ಹಾಸನ್, ಜ್ಯೋತಿ ಗುರುಪ್ರಸಾದ್, ಪ್ರೊ. ಶುಭಾ ಮರುವಂತೆ, ಜಾನಕಿ ಬ್ರಹ್ಮಾವರ, ದೇವಿಕಾ ನಾಗೇಶ್, ಅತ್ರಾಡಿ ಅಮೃತಾ ಶೆಟ್ಟಿ, ಯು. ಮಹೇಶ್ವರಿ, ರೂಪಶ್ರೀ ನಾಗರಾಜ್, ರೂಪಕಲಾ ಆಳ್ವಾ, ಗುಲಾಬಿ ಬಿಳಿಮಲೆ ಮತ್ತು ವಿಜಯಶ್ರೀ ಹಾಲಾಡಿ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರು ಮತ್ತು ಹೋರಾಟಗಾರ್ತಿಯರು ಇದರಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಡಾ|| ಎಚ್. ಎಸ್. ಅನುಪಮಾ ಅವರು ‘ಹೆಣ್ತನವೆಂಬ ಕಾಲನಿ’ ಎಂಬ ತಮ್ಮ ಬರೆಹದಲ್ಲಿ, ಸಾಮಾಜಿಕ ಮತ್ತು ಧಾರ್ಮಿಕ ವ್ಯವಸ್ಥೆಗಳು ಮೂಲದಲ್ಲಿಯೇ ಲಿಂಗ ತಾರತಮ್ಯವನ್ನು, ಲಿಂಗಅಸಮಾನತೆಯ ಬೇರುಗಳನ್ನು ಹೊಂದಿರುವುದರಿಂದ ಮಹಿಳೆ ಯಾವತ್ತೂ ಶೋಷಿತಳೇ ಆಗಿದ್ದಾಳೆ. ಹುಟ್ಟಿನಿಂದ ಹಿಡಿದು ಸಾವಿನ ತನಕ ಲಿಂಗ ತಾರತಮ್ಯ ತೋರಿಸುತ್ತದೆ. ಭ್ರೂಣ ಹತ್ಯೆಯನ್ನಷ್ಟೇ ವೈದ್ಯಕೀಯ ಲಿಂಗರಾಜಕಾರಣಕ್ಕೆ ಜೋಡಿಸಲಾಗುತ್ತಿದೆ. ಸೌಂದರ್ಯ, ಹೆಣ್ತನ ಮತ್ತು ಹೆಣ್ಣು ಈ ಪರಿಕಲ್ಪನೆಗಳನ್ನು ಮರುವ್ಯಾಖ್ಯಾನಿಸಿಕೊಳ್ಳುವ ಅಗತ್ಯವಿದೆ ಎನ್ನುವುದನ್ನು ತಮ್ಮ ಲೇಖನದಲ್ಲಿ ವಿವರಿಸಿದ್ದಾರೆ.
ಮಾಧವಿ ಭಂಡಾರಿಯವರು ‘ಮಹಿಳೆ ಮತ್ತು ಸಮಾಜ’ ಎಂಬ ತಮ್ಮ ಲೇಖನದಲ್ಲಿ, ಮಹಿಳೆಯ ಬದುಕು ಪುರುಷ ನಿರ್ಮಿತ ಚೌಕಟ್ಟಿನೊಳಗೆ ರೂಪಗೊಳ್ಳುತ್ತದೆ. ಷ್ಟೇ ಸಾಧನೆ ಮಾಡಿದರೂ ಕಾಲಕಾಲಕ್ಕೆ ಅವಳ ಬದುಕಿನಲ್ಲಿ ಏನೇನು ನಡೆಯಬೇಕು ಎನ್ನುವುದನ್ನು ಸಮಾಜ ಹೇಗೆ ಬಯಸುತ್ತದೆಯೋ ಅದರಲ್ಲಿ ಬದಲಾವಣೆಗೆ ಅವಕಾಶ ಇಲ್ಲ ಎಂದು ಅಭಿಪ್ರಾಯಪಡುತ್ತಾರೆ.
ಪ್ರೊ. ಸಬಿಹಾ ಭೂಮಿಗೌಡ ಅವರು ‘ಆಧುನಿಕ ಮಹಿಳಾ ಸಾಹಿತ್ಯ’ ಎಂಬ ಬರೆಹದಲ್ಲಿ, ಮಹಿಳಾ ಹೋರಾಟ ಮಾತ್ರವಲ್ಲ, ಪ್ರತಿಯೊಂದು ಹೋರಾಟವೂ ಇಂದು ತನ್ನ ಅಸ್ಮಿತೆ ಮತ್ತು ಹಕ್ಕುಗಳಿಗಾಗಿ ಹೋರಾಡಬೇಕಿದೆ ಲೇಖಕಿಯರು ತಮ್ಮ ಬರಹಗಳ ಮೂಲಕ ತಾವೇ ವಿಧಿಸಿಕೊಂಡ ಕುಟುಂಬ, ಜಾತಿ, ವರ್ಗ ಮತ್ತು ಒಟ್ಟಾಗಿ ಸಮಾಜ ವಿಧಿಸುವ ನಿಯಂತ್ರಣದ ಬಗ್ಗೆ ಮುಕ್ತವಾಗಿ ಮಾತನಾಡಬೇಕಾಗಿದೆ. ತಮ್ಮ ಬದ್ಧತೆ ಮತ್ತು ಬರಹದ ಕೌಶಲ್ಯಗಳ ಬಗ್ಗೆ ಅಲ್ಪ ತೃಪ್ತಿ ಎಂಬುದು ಬರಹಗಾರರಿಗೆ ನಿಧಾನ ವಿಷವಿದ್ದಂತೆ ಎಂದು ಹೇಳುತ್ತಾರೆ.
‘ ಅವಿವಾಹಿತೆಯರ ತಲ್ಲಣಗಳು’ ಬರಹದಲ್ಲಿ ಬಿ ಎಂ ರೋಹಿಣಿಯವರು, ಸ್ವಾತಂತ್ರ್ಯಪೂರ್ವದಲ್ಲಿ ಹುಟ್ಟಿದ ಅವಿವಾಹಿತರೆಲ್ಲರೂ ಆರ್ಥಿಕ ಸ್ವಾಲಂಬಿಗಳಾದರೂ ಸಮಾಜ ಅವರನ್ನು ವಿಚಿತ್ರ ದೃಷ್ಟಿಯಿಂದ ನೋಡಿತು. ಹೊರಗೆ ದುಡಿಯುವ ಮಹಿಳೆ ಎಂದು ನಿಂದಿಸಿದರೂ ಅವೆಲ್ಲವನ್ನೂ ಎದುರಿಸುವ ಗಟ್ಟಿತನ ಅವರಲ್ಲಿತ್ತು. ಸ್ವಾತಂತ್ರ್ಯ ನಂತರದಲ್ಲಿ ಹುಟ್ಟಿದವರು ಈ ಮಧ್ಯ ವಯಸ್ಸನ್ನು ದಾಟಿ ಈಗ ಕೆಲವರು ವೃದ್ಧಾಪ್ಯತೆಯತ್ತ ಹೆಜ್ಜೆ ಇಡುತ್ತಿದ್ದಾರೆ ಎನ್ನುತ್ತಾರೆ.
ಮಂಗಳೂರಿನ ಶೈಲಾ ಯು. ಅವರ ‘ಸಮಾನತೆ ಎಂಬ ಮಿಥ್ಯ’ ಬರೆಹದಲ್ಲಿ, ಮಹಿಳೆಯರು ಸಮಾನತೆಗಾಗಿ ಕೇವಲ ಪುರುಷರ ಜೊತೆ ಮಾತ್ರ
ಹೋರಾಡುವುದಲ್ಲ. ಮಹಿಳೆಯರ ಜೊತೆಗೂ ಹೋರಾಡಬೇಕಾಗಿದೆ ಎಂದು ವಿವರಿಸುತ್ತಾರೆ.
‘ಹತಾಶೆಯ ಅಂಚಿನಲ್ಲಿ ಮಹಿಳೆ’ ಎಂಬ ಬರಹದಲ್ಲಿ ಅತ್ರಾಡಿ ಅಮೃತಾ ಶೆಟ್ಟಿ, ಹೆಣ್ಣು ಹತಾಶೆ ಹಂಚಿಗೆ ಬಂದು ನಿಲ್ಲಲು ಗಂಡು ಮಾತ್ರ ಕಾರಣ ಅಲ. ಹೆಣ್ಣಿಗೆ ಹೆಣ್ಣು ದೊಡ್ಡ ಶತ್ರು. ಆದ್ದರಿಂದ ನಾವು ಸಾಮಾಜಿಕ ಮತ್ತು ಮೌಢ್ಯ ಕಾನೂನು ಕಟ್ಟಡಗಳು ಉಂಟು ಮಾಡಿದ ವ್ಯವಸ್ಥೆ ವಿರುದ್ಧ ಹೋರಾಡುವುದು ನಮ್ಮ ಕರ್ತವ್ಯವಾಗಬೇಕುಂದರೆ, ‘ಅಸ್ಮಿತೆಯ ಹುಡುಕಾಟದಲ್ಲಿ ಸಮಾನತೆಯತ್ತ ಒಂದು ಹೆಜ್ಜೆ’ ಎಂಬ ಬರಹದಲ್ಲಿ ದೇವಿಕಾ ನಾಗೇಶ್ ಅವರು, ಹೆಣ್ಣು ಸಮಾನತೆಯ ಕನಸು ಕಾಣುತ್ತಿದ್ದಾಳೆ. ವ್ಯವಸ್ಥೆಯಲ್ಲಿ ಅವಳ ಸ್ಥಿತಿ ಪುರುಷನ ವಿರುದ್ಧ ಈಜುವ ಕೆಲಸ. ಸ್ತ್ರೀಗೆ ಸಮಾನತೆ ದುಬಾರಿಯಾದದ್ದು. ಕ್ರೌರ್ಯವನ್ನು ಸಮರ್ಥವಾಗಿ ಪ್ರತಿಭಟಿಸಿ ತನ್ನ ರಕ್ಷಣೆಯ ದಾರಿಯನ್ನು ಆಕೆ ಕಂಡುಕೊಳ್ಳುವ ನೆಟ್ಟಿನಲ್ಲಿ ಯತ್ನಿಸಬೇಕಿದೆ ಎನ್ನುತ್ತಾರೆ.
‘ಸ್ಥಿತ್ಯಂತರಗಳ ನಡುವೆ ಹೆಣ್ಣು’ ಎಂಬ ಲೇಖನದಲ್ಲಿ ರೂಪಶ್ರೀ ನಾಗರಾಜ ಸುರತ್ಕಲ್ ಅವರು, ಶಿಕ್ಷಣ, ನೈರ್ಮಲ್ಯ, ಆರೋಗ್ಯ ಹೀಗೆ ವಿವಿಧ ಆಯಾಮಗಳಲ್ಲಿ ಮಹಿಳೆ ತನ್ನನ್ನು ತಾನೇ ಅರಿತುಕೊಂಡು ಬೆಳೆಯುತ್ತಾ ಸುತ್ತಲಿರುವವರನ್ನು ಬೆಳೆಸಬೇಕಿದೆ. ಮಹಿಳೆಯ ಎಲ್ಲಾ ಕಾರ್ಯಗಳನ್ನು ಕುಟುಂಬದವರ ಹಾಗೂ ಬಂಧು ಬಾಂಧವರ ಸಹಕಾರ ಅತಿ ಅವಶ್ಯಕ. ಗಾಂಧೀಜಿ ಹೇಳಿದಂತೆ ಪ್ರಪಂಚದಲ್ಲಿ ಅತ್ಯುತ್ತಮ ಕಲೆ ಮತ್ತು ಕಲಿಯಲು ಅತಿ ಕಠಿಣವಾದ ಕಲೆ ಎಂದರೆ ಜೀವನ. ಇದನ್ನು ಮಹಿಳೆ ಅರ್ಥಮಾಡಿಕೊಳ್ಳಬೇಕು ಎಂದು ವಿವರಿಸುತ್ತಾರೆ.
‘ಯಶಸ್ವಿ ಹೆಣ್ಣಿನ ಹಿಂದೆ ಗಂಡು ಇರುತ್ತಾನೆಯೇ’ ಎಂಬ ಲೇಖನದಲ್ಲಿ ರೂಪಕಲಾ ಆಳ್ವ ಅವರು, ಹೆಣ್ಣಿನ ಮನೋಭಾವದಲ್ಲಿ ಬದಲಾವಣೆ ಉಂಟಾದಲ್ಲಿ ಹೆಣ್ಣು ಬೆಳೆಯಬಲ್ಲಳು, ಉಳಿಯಬಲ್ಲಳು. ಆಗ ಮಾತ್ರ ಹೆಣ್ಣಿನ ಬೆನ್ನ ಹಿಂದೆ ಗಂಡು ಬೇಕಾಗಿಯೇ ಇಲ್ಲ. ಬಿ‘ಹೈಂಡ್ ಎವರಿ ಸಕ್ಸಸ್‌ಫುಲ್ ವುಮನ್ ದೇರ್ ಈಸ್ ಎ ವುಮನ್’ ಎಂದು ಹೆಮ್ಮೆಯಿಂದ ತಿರುಚಿ ಹೇಳಿಕೊಳ್ಳಬಹುದು ಎನ್ನುತ್ತಾರೆ.
‘ಮಹಿಳಾ ಸಮಾನತೆಗಿರುವ ತಡೆಗೋಡೆಗಳು’ ಇದರಲ್ಲಿ ವಿಜಯಶ್ರೀ ಹಾಲಾಡಿ, ಮಹಿಳೆಯನ್ನು ಸ್ವಾವಲಂಬಿ ಚಿಂತನೆಯ ವ್ಯಕ್ತಿಯಾಗಿ ರೂಪಿಸುವ ಶಿಕ್ಷಣ ಪ್ರಸ್ತುತ ಅಗತ್ಯವಾಗಿದೆ. ಮಹಿಳೆಯ ಶಿಕ್ಷಣ ತಡೆಗೋಡೆಗೆ ಮೂಲ ಕಾರಣವೆಂದರೆ ಆಕೆಯನ್ನು ಒಂದು ಸರಕು ಎಂದು ಕಾಣುತ್ತಿರುವುದು. ಶಿಕ್ಷಣ ಕಲಿತರೆ ಆಕೆ ಸ್ವತಂತ್ರ ವ್ಯಕ್ತಿಯಾಗಿ ಬದುಕುತ್ತಾಳೆ ಎಂಬ ಭಯ ದಿಂದ ಅವಳನ್ನು ಶಿಕ್ಷಣದಿಂದ ವಂಚಿಸಲಾಗಿದೆ ಎನ್ನುತ್ತಾರೆ.
ಹೀಗೆ ಈ ಕೃತಿಯಲ್ಲಿ ಮಹಿಳೆ ಸಮಾಜದಲ್ಲಿ ಮುಂದೆಬರಲು, ಶೋಷಣೆ ಮುಕ್ತಳಾಗಲು ಯಾವ ಹೆಜ್ಜೆ ಇಡಬೇಕೆನ್ನುವುದನ್ನು ಹಲವು ಲೇಖಕಿಯರು ಮನೋಜ್ಞವಾಗಿ ವಿಶ್ಲೇಷಿಸಿದ್ದಾರೆ. ಇದು ಮಹಿಳಾ ಹೋರಾಟಗಾರ್ತಿಯರಿಗೆ, ಅಧ್ಯಯನಕಾರರಿಗೆ ಉತ್ತಮ ಮಾರ್ಗದರ್ಶಿ ಕೃತಿಯೂ ಆಗಿದೆ.
- ದತ್ತಾತ್ರೇಯ ಹೆಗಡೆ, ಶಿವಮೊಗ್ಗ
.........................

Comments
Post a Comment