ಶ್ರೀಮಂತ ಅನುಭವಗಳ
‘ನನ್ನ ನೆನಪಿನ ಸಂಚಿ’
ಬಾಲ್ಯದ ಶ್ರೀಮಂತ ಅನುಭವಗಳ ಕಥನವೇ ‘ನನ್ನ ನೆನಪಿನ ಸಂಚಿ’. ಕಾರ್ಕಳದ ನಿವೃತ್ತ ಶಿಕ್ಷಕಿ ಅನುಪಮಾ ಚಿಪ್ಳೂಣಕರ್ ಅವರು ಇದರ ಕರ್ತೃ. ತಮ್ಮ ಬಾಲ್ಯದ ಸಿಹಿ ನೆನಪುಗಳನ್ನು ಇದರಲ್ಲಿ ಕಟ್ಟಿಕೊಟ್ಟಿದ್ದಾರೆ. ಸವಿ ನೆನಪುಗಳು ಬೇಕು, ಸವಿಯಲಿ ಬದುಕು ಎನ್ನುವ ಗೀತೆಯ ಸಾಲಿನಂತೆ ಬದುಕಿನ ಬಾಲ್ಯದ ನೆನಪುಗಳು ಬೆಲ್ಲದ ಅಚ್ಚಿನಂತೆ ಸಿಹಿ ಅನುಭವ ನೀಡುತ್ತವೆ. ಬಾಲ್ಯವನ್ನು ಮೆಲುಕು ಹಾಕುವುದರಿಂದ ನಮ್ಮ ಮೈಮನಸ್ಸಿಗೆ ಅಗಾಧ ಸಂತಸ ಸಿಗುತ್ತದೆ. ಮನಸ್ಸು ಉಲ್ಲಸಿತಗೊಳ್ಳುತ್ತದೆ. ಚಿಂತೆಗಳನ್ನು ನಿಯಂತ್ರಣದಲ್ಲಿಡಲು ಸಾಧ್ಯವಾಗುತ್ತದೆ.
ಈ ಕೃತಿಯಲ್ಲಿ ಲೇಖಕಿ ತಾನು ಕಂಡ ವಿಶಿಷ್ಟ ವ್ಯಕ್ತಿಗಳು, ಆಗಿನ ಪರಿಸರ, ತನ್ನೂರು, ತನ್ನಪ್ಪ, ಅಮ್ಮ, ವಿದ್ಯಾ ಗುರುಗಳಲ್ಲಿದ್ದ ಆದರ್ಶ ಗುಣ, ಬಾಲ್ಯದಲ್ಲಿನ ಆಟೋಟ, ನಾಟಕ, ಕುಟುಂಬದವರೊಡನೆ ಕಾಲಕಳೆದಿದ್ದು, ಯಕ್ಷಗಾನ, ಕೃಷಿ ಮೊದಲಾದವನ್ನೆಲ್ಲ ಯಾವುದೇ ಉತ್ಪೇಕ್ಷೆ ಇಲ್ಲದೆ ದಾಖಲಿಸಿದ್ದಾರೆ. ಕೃತಿಯಲ್ಲಿ ಒಟ್ಟು ೨೪ ಕಿರು ಲೇಖನಗಳಿವೆ.
‘ನನ್ನೂರು ಅದೆಷ್ಟು ಸುಂದರ’ ಎಂಬ ಕೃತಿಯಲ್ಲಿ ನಮ್ಮ ಬಾಲ್ಯದ ದಿನಗಳನ್ನು ನೆನಪಿಸುವ ಅದೆಷ್ಟೋ ಘಟನೆಗಳು ಸಹ ಕಣ್ಣೆದುರು ಹಾದುಹೋಗುತ್ತವೆ. ತನ್ನೂರು ಕಡಿರುದ್ಯಾವರ ಎಂಬ ಹಳ್ಳಿ. ಅಕ್ಷರಶಃ ದ್ವೀಪವಾಗಿತ್ತು. ಮಳೆಗಾಲದಲ್ಲಂತೂ ರೈತರ ಗದ್ದೆ- ತೋಟಗಳಿಗೆ ಹೊಳೆಯ ನೀರು ನುಗ್ಗಿ ನಷ್ಟವಾಗುತ್ತಿತ್ತು. ಹೊರ ಪ್ರಪಂಚದ ಮಾತಿರಲಿ ಪಕ್ಕದ ಹಳ್ಳಿಯಲ್ಲಿ ಏನು ನಡೆಯುತ್ತಿದೆ ಎನ್ನುವುದು ಗೊತ್ತಾಗಲಾರದ ಸ್ಥಿತಿ ಇತ್ತು. ಯಾವುದೇ ರೀತಿಯ ಸಂಪರ್ಕ ಸಾಧನಗಳಿರಲಿಲ್ಲ. ಕೂಪ -ಮಂಡೂಕಗಳಂತೆ ಜನರು ಇರುತ್ತಿದ್ದರು. ಮಲೇರಿಯಾ ರೋಗದ ತವರು ಮನೆ ತಮ್ಮ ಹಳ್ಳಿಯಾಗಿತ್ತು ಎನ್ನುವ ಮೂಲಕ ಮಲೆನಾಡಿನ ರಮ್ಯ ಚಿತ್ರಣ ಕಟ್ಟಿಕೊಡುತ್ತಾರೆ.
‘ಚೀಂಕ್ರ್ರ ಎಂಬ ನಂಬಿಗಸ್ಥ ಆಳು’ ಬಹು ಸುಂದರವಾದ ಬರೆಹ. ಮನೆಯಾಳನ್ನು ಕೇವಲ ಆಳು ಆಗಿ ಕಾಣದಿರುವುದನ್ನು ಬಹುತೇಕ ಹಳ್ಳಿಗಳಲ್ಲಿ ಇಂದಿಗೂ ಕಾಣಬಹುದು. ಆಳು ಮನೆಯೊಡೆಯನ, ಮನೆಯವರ ವಿಶ್ವ್ವಾಸವನ್ನು ಅಷ್ಟರ ಮಟ್ಟಿಗೆ ಗಳಿಸಿರುತ್ತಾರೆ. ಈ ಲೇಖನದಲ್ಲೂ ಸಹ ಲೇಖಕಿ ಅದನ್ನು ಚಿತ್ರಿಸಿದ್ದಾರೆ. ಚೀಂಕ್ರ ಎಂಬ ಮಲೆಕುಡಿಯ ವ್ಯಕ್ತಿ ಲೇಖಕಿಯ ಮನೆಯ ನಂಬಿಗಸ್ಥ ಆಳಾಗಿ ಲೇಖಕಿಯ ಅಮ್ಮನ ಕೈ ತುತ್ತು ತಿಂದು ಬೆಳೆದವನು. ಮನೆಯ ಎಲ್ಲರೂ ಬಹುವಾಗಿ ಪ್ರೀತಿಸುತ್ತಾ, ಪುಟ್ಟ ಮಕ್ಕಳನ್ನು ಹೆಗಲ ಮೇಲೆ ಏರಿಸಿಕೊಂಡು ಮೈಲುಗಟ್ಟಲೆ ದಣಿವರಿಯದೆ, ನಸುನಗುತ್ತ, ಕಥೆಗಳನ್ನು ಹೇಳುತ್ತಾ ಒಯ್ಯುತ್ತಿದ್ದನು. ಸ್ನೇಹಜೀವಿಯಾಗಿ ಎಲ್ಲರನ್ನೂ ಪ್ರೀತಿಯಿಂದ ಅಕ್ಕ, ಅಣ್ಣ ಎಂತಲೇ ಕರೆಯುತ್ತಿದ್ದನು. ಕಪಟರಹಿತ, ಪ್ರೀತಿ, ನಿಯತಿ ಆತನಿಂದ ಕಲಿಯುವಂತಿತ್ತು. ಆತನ ಪ್ರೀತಿಯನ್ನು ಮರೆಯಲು ಸಾಧ್ಯವೇ ಇಲ್ಲ. ಕುಟುಂಬದ ಬಗ್ಗೆ ಅಪಾರವಾದ ಶ್ರದ್ಧೆ ಮತ್ತು ನಿಷ್ಠೆ ಇತ್ತು ಎನ್ನುವುದನ್ನು ಸ್ಮರಿಸಿದ್ದಾರೆ.
‘ನಾನು ಶಾಲೆಗೆ ಸೇರಿದೆ’ ಇದರಲ್ಲಿ ಲೇಖಕಿ ತಾನು ಶಾಲೆಗೆ ಸೇರಿದ ದಿನಗಳನ್ನು ನೆನೆಪಿಸುತ್ತಾ ದೊಡ್ಡ ಅಕ್ಕ ಮತ್ತು ಅಣ್ಣನ ಜೊತೆಗೆ ತಾನು ಶಾಲೆಗೆ ಹೋಗುತ್ತಿದ್ದುದು, ಎರಡು ಜಡೆ ಇಲ್ಲವೇ ಎರಡು ಜುಟ್ಟು ಧರಿಸುತ್ತಿದ್ದುದು ಮಾಸ್ತರರು ತುಂಬಾ ಅಕ್ಕರೆಯಿಂದ ತನ್ನನ್ನು ನೋಡಿಕೊಳ್ಳುತ್ತಿದರೆನ್ನುವುದನ್ನು ವಿವರಿಸುತ್ತಾರೆ.
ಆದರ್ಶ ಶಿಕ್ಷಕನೊಬ್ಬ ನೆನನಪಲ್ಲಿ ಹೇಗೆ ಉಳಿಯುತ್ತಾನೆ ಎನ್ನುವುದನ ಇನ್ನೊಂದು ಬರೆಹದಲ್ಲಿ ತೋರಿಸಿದ್ದಾರೆ. ಲೇಖಕಿ ಪ್ರ್ರಾಥಮಿಕ ಶಾಲೆಗೆ ಹೋಗುವಾಗ ವಾಸುದೇವ ನಾಯಕರು ಎನ್ನುವ ಶಿಕ್ಷಕರಿದ್ದರು. ಶಾಲೆಯ ಸ್ಥಾಪನೆಗೆ ಹೆಣಗಿ, ಊರವರ ಮುಖಂಡತ್ವದಲ್ಲಿ ಶಾಲೆಗೆ ಏನೆಲ್ಲ ಬೇಕು ಅದೆಲ್ಲವನ್ನೂ ಕಲ್ಪಿಸುತ್ತಿದ್ದರು. ಬಹುಮುಖ ಪ್ರತಿಭಾನ್ವಿರಾಗಿದ್ದ ಅವರು, ಹರಿಕಥೆ, ಯಕ್ಷಗಾನ, ನಾಟಕ ಎಲ್ಲದರಲ್ಲೂ ಪ್ರಾವೀಣ್ಯರಾಗಿದ್ದರು. ಪಾಠ ಪ್ರವಚನ, ಬೋಧನಾ ಕ್ರಮ ಬಹುಕಾಲ ನೆನಪಿನಲ್ಲಿ ಉಳಿಯುವಂತದ್ದು. ಸುತ್ತಲ ಜಗದ ಎಲ್ಲ ವಿಷಯಗಳನ್ನು ಕ್ಲಾಸಿನಲ್ಲಿ ವಿವರಿಸುತ್ತಿದ್ದರು. ವಾಚನಾಲಯದ ಪುಸ್ತಕ ಓದಲು ಹೇಳಿ ನಂತರ ಅದರ ಬಗ್ಗೆ ಪ್ರಶ್ನೆ ಕೇಳುತ್ತಿದ್ದರು. ಹೀಗಾಗಿ ಮಕ್ಕಳ ತಿಳುವಳಿಕೆ ವಿಸ್ತಾರವಾಗುವಂತೆ ಮಾಡಿದವರು ಎಂದು ಸ್ಮರಿಸುತ್ತಾರೆ.
‘ಅಮ್ಮನ ಜೀವನಾನುಭವ ದೊಡ್ಡದು’ ಇದರಲ್ಲಿ ಲೇಖಕಿಯ ತನ್ನ ಅಮ್ಮನ ಬಗ್ಗೆ ಬರೆಯುತ್ತಾ, ಅತ್ಯಂತ ಚುರುಕಿನವರು. ಮೂರನೇ ತರಗತಿಯವರೆಗೆ ಮಾತ್ರ ಓದಿದ್ದರು. ಏನನ್ನಾದರೂ ಸಾಧಿಸುವಂತೆ ಕೆಲಸ ಮಾಡಬೇಕು ಎಂಬ ಮಹಾದಾಸೆ ಹೊಂದಿದ್ದರು. ಅದರಂತೆ ಕಷ್ಟಪಟ್ಟು ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದರು. ಅಮ್ಮನ ನೆನಪಿನ ಶಕ್ತಿ ಅಪಾರವಾಗಿತ್ತು. ಕಲ್ಮಶವಿಲ್ಲದ ನಿರ್ಮಲ ಮನಸ್ಸು ಅವರದಾಗಿತ್ತು. ಯಾವುದೇ ಜಾತಿ- ಮತಗಳ ಅಡ್ಡಗೋಡೆ ಇಲ್ಲವಾಗಿತ್ತು. ಕೆಲಸಗಾರರಿಂದ ಹಿಡಿದು ಅಕ್ಕಪಕ್ಕದ ಮನೆಯವರು ಎಲ್ಲರೊಂದಿಗೂ ಸಮನಾಗಿ ಬೆರೆಯುತ್ತಿದ್ದರು. ಕೃಷಿ ಕೆಲಸಗಳ ನಿಭಾವಣೆಯ ಜವಾಬ್ದಾರಿಯನ್ನು ವಹಿಸಿಕೊಂಡು ಕಾಲಕಾಲಕ್ಕೆ ಆಗಬೇಕಾದ ಎಲ್ಲಾ ಕೆಲಸಗಳನ್ನು ಮಾಡಿಸುತ್ತಿದ್ದರು. ತನ್ನಮ್ಮ ಕಷ್ಟಗಳನ್ನು ನುಂಗಿ ಸುಖದ ಕ್ಷಣಗಳನ್ನು ಹಂಚಿಕೊಂಡವರು ಎನ್ನುತ್ತಾರೆ.
ಬದುಕು ಕಲಿಸುವ ಪಾಠ ದೊಡ್ಡದು. ಅತ್ಯಂತ ಕಡಿಮೆ ಓದಿದ ಹಳ್ಳಿಗರು ಸಾಮಾನ್ಯ ಜ್ಞಾನ ಮತ್ತು ತಿಳುವಳಿಕೆ ವಿಚಾರದಲ್ಲಿ ಮುಂದಿರುತ್ತಾರೆ. ಪೇಟೆಯ ಮುಖ ಸಹ ನೋಡಿರಲಾರರು. ಆದರೂ ಅನುಭವ ಅವರಲ್ಲಿ ಇರುತ್ತದೆ. ಅವರ ಸಾಮಾನ್ಯ ಜ್ಞಾನ ಮತ್ತು ಚಿಂತನಾಶಕ್ತಿ ಬೆರಗು ಹುಟ್ಟಿಸುವಂತಿರುತ್ತದೆ. ಅನುಭವದ ಮೂಲಕವೇ ಎಲ್ಲವನ್ನೂ ಕಲಿಯುತ್ತಾರೆ ಎನ್ನುತ್ತಾರೆ.
ಬೆಳದಿಂಗಳ ರಾತ್ರಿ ಯಕ್ಷಗಾನ ನೋಡಲು ಎತ್ತಿನಗಾಡಿಯಲ್ಲಿ ಹೋದ ಸಂದರ್ಭವನ್ನು ಅವಿಸ್ಮರಣೀಯ ಎನ್ನುವ ಲೇಖಕಿ, ಈಗಿನಂತೆ ವಿವಿಧ ಬಗೆಗಳ ಮನರಂಜನೆ ಇರಲಿಲ್ಲ. ಟಿ ವಿ ಇರಲಿಲ್ಲ. ಯಕ್ಷಗಾನ ಮತ್ತು ನಾಟಕ ಇವು ಮಾತ್ರ ಜಾತ್ರೆಗಳಲ್ಲಿ ಇರುತ್ತಿದ್ದವು. ಕುಟುಂಬದೊಂದಿಗೆ ಮಾತ್ರ ಹೋಗಲು ಅವಕಾಶವಿತ್ತು. ಕುಟುಂಬದವರೊಂದಿಗೆ ರಾತ್ರಿ ಆಟ ನೋಡಿ ಬರುವುದು ಅಪರಿಮಿತ ಖುಷಿಯನ್ನು ಉಂಟುಮಾಡುತ್ತಿತ್ತು. ವಿಮಾನದಲ್ಲಿ ಇಂದು ಪ್ರಯಾಣಿಸಿದರೂ ಅಷ್ಟು ಖುಷಿ ಸಿಗುವುದಿಲ್ಲ ಎಂದು ಹೇಳುತ್ತಾರೆ.
ದೀಪಾವಳಿ ಸಂಭ್ರಮವನ್ನು ನೆನಪಿಸುವ ಲೇಖಕಿ, ದೀಪಾವಳಿ ಸಂದರ್ಭದಲ್ಲಿ ನರಕ ಚತುರ್ದಶಿಯ ದಿನ ಬೆಳಿಗ್ಗೆ ೪ ಗಂಟೆಗೆ ಎದ್ದು ಎಲ್ಲರೂ ಎಣ್ಣೆ ಹಚ್ಚಿ ಸ್ನಾನ ಮಾಡುವುದು, ಗೋಪೂಜೆಯ ದಿನ ಮನೆ ತುಂಬಾ ಸಾಕಲ್ಪಡುತ್ತಿದ್ದ ಎತ್ತು, ದನಕರುಗಳಿಗೆ ಸ್ನಾನ ಮಾಡಿಸಿ, ಹೂವಿನ ಮಾಲೆ ಹಾಕಿ, ತಿಲಕ ಇಟ್ಟು, ತಿನ್ನಲು ದವಸ ಧಾನ್ಯ, ದೋಸೆ ಇತ್ಯಾದಿಗಳನ್ನು ಕೊಟ್ಟು ಆರತಿ ಮಾಡುತಿದ್ದ ಸಂಭ್ರಮ ವರ್ಣನೀಯ. ಅದೇ ರೀತಿ ರೈತರ ಜೀವನದ ಅವಿಭಾಜ್ಯ ಅಂಗವಾದ ನೇಗಿಲು, ಕತ್ತಿ ಮುಂತಾದ ಪರಿಕರಗಳನ್ನು ಸುಂದರವಾಗಿ ಜೋಡಿಸಿ ಪೂಜೆ ಮಾಡುತ್ತಿರುವುದನ್ನು ವಿಶಿಷ್ಟ ಪದ್ಧತಿ ಎಂದು ಬಣ್ಣಿಸುತ್ತಾರೆ
ಹೀಗೆ ತಮ್ಮ ಬಾಲ್ಯದ ನೆನಪಿನ ಸಂಚಿಯನ್ನು ವಿವಿಧ ವಿಷಯಗಳ ಮೂಲಕ ಓದುಗರಿಗೆ ಬಡಿಸುವ ಮೂಲಕ ನಮ್ಮ ಬಾಲ್ಯವನ್ನೂ, ಅದರ ಸವಿಯನ್ನೂ ನಾವು ಮತ್ತೆ ಮತ್ತೆ ಅನುಭವಿಸುವಂತೆ ಮಾಡಿದ್ದಾರೆ.
- ದತ್ತಾತ್ರೇಯ ಹೆಗಡೆ
,,,,,,,,,,,,,,,,,,,,,,,,
.

Comments
Post a Comment