ಮಾನವೀಯ ಆದರ್ಶಗಳ

‘ನಿರಂಜನರ ಕೆಲವು ಸಣ್ಣ ಕಥೆಗಳು’ 




ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿರುವ ಬರಹಗಾರ ನಿರಂಜನ ಅವರ ಆಯ್ದ ಪ್ರಮುಖ ಸಣ್ಣ ಕಥೆಗಳ ಸಂಕಲನವೇ ‘ನಿರಂಜನ ಕೆಲವು ಸಣ್ಣ ಕಥೆಗಳು’. ಇದರಲ್ಲಿ  ೧೦ ಕಥೆಗಳಿವೆ. ನಿರಂಜನ ಬರೆದ ಸಣ್ಣ ಕಥೆಗಳು ಅಪಾರ. ಕನ್ನಡದಲ್ಲಿ ಇವರಷ್ಟು ಸಣ್ಣ ಕಥೆಗಳನ್ನು ಬರೆದ ಬರಹಗಾರರು ಇನ್ನೊಬ್ಬರು ಇರಲಾರರು. ಇಲ್ಲಿನ ಸಂಕಲನದಲ್ಲಿನ ಕಥೆಗಳು ವೈವಿಧ್ಯಮಯವಾಗಿವೆ. ವಿವಿಧ ವರ್ಗ, ಜಾತಿ, ಸ್ವಭಾವದ ಜನರನ್ನು ಕಾಣಬಹುದು. ಪರಿಶಿಷ್ಟರು, ಮುಸ್ಲಿಮರು, ಕ್ರಿಶ್ಚಿಯನ್ನರು, ಶಿಷ್ಟರು, ದುಷ್ಟರು, ಹರಾಮ್‌ಕೋರರರು ಎಲ್ಲರೂ ಇದರಲ್ಲಿ ಇದ್ದಾರೆ. ಎಲ್ಲರೂ ಒಳ್ಳೆಯವರೂ ಅಲ್ಲ, ಕೆಟ್ಟವರೂ ಅಲ್ಲ. ಮನುಷ್ಯನ ಸ್ವಭಾವವೇ ಅಂತದ್ದು. 

ಇಲ್ಲಿನ ವಿಶಿಷ್ಟ ಕಥೆಗಳು ನಿರ್ದಿಷ್ಟ ಸಂದರ್ಭಗಳಲ್ಲಿ ನಮ್ಮ ಮುಖಕ್ಕೆ ಹಿಡಿದ ಕನ್ನಡಿಯಂತೆ ಕಂಡುಬರುತ್ತವೆ. ಆತ್ಮೀಯತೆ ಮತ್ತು ಪ್ರಸನ್ನತೆ ಇದೆ. ರಂಜಕ ಶೈಲಿ, ನಿರಂಜನರ ಕಥೆಯ ಸೊಗಸು, ಸರಳತೆ ಅದರ ಜೀವಾಳ. ಶೈಲಿಯೂ ಸೊಗಸು. 

 ಇನ್ನೊಂದು ವಿಶೇಷವೆಂದರೆ, ಇಲ್ಲಿನ ಎಲ್ಲಾ ಕಥೆಗಳಲ್ಲಿ ಬಿರುಕು ಬಿಡುತ್ತ ಮನುಷ್ಯತ್ವ ಕುಸಿಯುತ್ತಿರುವ ಈ ಸಂದರ್ಭದಲ್ಲಿ ದಟ್ಟವಾದ ನಿಟ್ಟುಸಿರೊಂದು    ಕಂಡುಬರುತ್ತದೆ. ಮನುಷ್ಯ ಸಂಬಂಧಗಳು ಹಳಸಿಕೊಂಡು ಬದುಕುವುದು ಅಸಹ್ಯವಾಗುತ್ತಿದೆ. ಈ ಕಂದರಗಳು ಎಲಿಂದ ಬಂದವು? ಪ್ರೀತಿಯ ಸೆಲೆ ಮಾಯವಾಗುತ್ತಿದೆ? ಸುಖ-ಸೌಹಾರ್ದ  ಎಲ್ಲಿ ಮಾಯವಾಯಿತು?, ಪ್ರೀತಿಯ ಸೆಲೆ ಬತ್ತಿದ್ದಾದರೂ ಹೇಗೇ? ಜಿನುಗುವ ಅಂತ:ಕರಣ ನಿಂತಿದ್ದಾದರೂ ಏಕೆ ? ಒಣಗಿದ ಎದೆಗಳ ನಡುವೆ ಬಾಳುವುದು ಹೇಗೆ ? ಕಣ್ಣರಳಿಸುವ ಕಡೆ ಬದುಕಿನ ಕ್ರೂರ ಮುಖ ಕಾಣಿಸುತ್ತಿದೆ ಎನ್ನುವುದನ್ನು ಇಲ್ಲಿನ ಕಥೆಗಳು ಪ್ರಬಲವಾಗಿ ಬಿಂಬಿಸಿವೆ.

 ಮೊದಲ ಕಥೆ ‘ಬಾಪೂಜಿ ಬಾಪು’. ಬಾಪೂಜಿ ಬದುಕಿದ್ದಾಗಲೇ ಅಂದರೆ ೧೯೪೧ ರಲ್ಲಿ ಅವರು ಸತ್ತಂತೆ ಕಲ್ಪಿಸಿ ಬರೆದ ಕಥೆ ಇದು. ಸ್ವಾತಂತ್ರ್ಯ ಪಡೆದ ಕೆಲವೇ ವರ್ಷಗಳಲ್ಲಿ ಸ್ವಾತಂತ್ರ್ಯ ಹೇಗೆ ವಿಫಲವಾಯಿತು ಎನ್ನುವುದನ್ನು ಇದರಲ್ಲಿ ತೋರಿಸಿದ್ದಾರೆ. ಕಾರ್ಖಾನೆಯ ಮಾಲೀಕನ ತಲೆಯ ಮೇಲೆ ಖಾದಿ ಟೋಪಿ ಇದೆ. ಆದರೆ ನಮ್ಮವನಲ್ಲ. ಸತ್ಯ, ಅಹಿಂಸೆ, ಗ್ರಾಮೋದ್ಧಾರ, ಸ್ವಾತಂತ್ರ್ಯದ ಮಂತ್ರಗಳು ಹೇಗೆ  ಅರ್ಥ ಕಳೆದುಕೊಂಡಿವೆ. ಆಯಕಟ್ಟಿನ ಜಾಗಗಳಲ್ಲಿ ಕುರಿತ ಪ್ರಮುಖರು ವ್ಯವಸ್ಥೆಯೊಂದಿಗೆ ಶಾಮೀಲಾಗಿ ಜವಾಬ್ದಾರಿಗಳಿಂದ ಹೇಗೆ ನುಣುಚಿಕೊಳ್ಳುತ್ತಿದ್ದಾರೆನ್ನುವುದು ಇಲ್ಲಿ ಚಿತ್ರತವಾಗಿದೆ. ಕೊನೆಯಲ್ಲಿ ಒಂದು ಬರುವ ಮಾತು ‘ಇಲ್ಲ, ಜಗತ್ತು ಇನ್ನೂ ಎಚ್ಚೆತ್ತಿಲ್ಲ’ ಇಲ್ಲ ಎಂಬ ಮಾತು ಬಹಳವಾಗಿ ನಮ್ಮನ್ನು ಕಾಡುತ್ತದೆ.

  ‘ಎಣ್ಣೆ ಚಿಮಿಣಿ ಎಣ್ಣೆ’ ಕಥೆಯಲ್ಲಿ  ಯುದ್ಧದ ಕರಾಳ ಹಸ್ತ ಎಷ್ಟೊಂದು ಕ್ರೂರ ಎನ್ನುವುದನ್ನು ಬಣ್ಣಿಸಿದ್ದಾರೆ.  ಸೋಮ ಎನ್ನುವವನ ಬಾಳನ್ನು ಚಿತ್ರಿಸುವ ಮೂಲಕ ಕಟ್ಟಿಕೊಟ್ಟಿದ್ದಾರೆ. ಸೋಮನ ಮನೆಗೆ ಚಿಮಿಣಿ ಎಣ್ಣೆಯೇ ಗತಿ. ಅಂಗಡಿಗೆ ಹೋಗಿ ಚಿಮಣಿ ಎಣ್ಣೆ ಕೇಳಿದಾಗ ಅಂಗಡಿಯ ಸದಾ ಇದನ್ನು ಕೊಡುವ ರಾಯರು ಈಗ ಖಾಲಿಯಾಗಿದೆ ಎಂದಾಗ ಹತಾಶ ತಲುಪಿ ಆತನಿಗೆ ಸಿಟ್ಟು ಬರುತ್ತದೆ. ಚಿಮಣಿ ಎಣ್ಣೆ ಇದ್ದರೆ ಮಾತ್ರ ಮನೆಯಲ್ಲಿ ದೀಪ ಉರಿಯುತ್ತದೆ. ಸೋಮ ‘ಎಣ್ಣೆ’ ಎಂದು ಕೂಗುತ್ತಾ ಹೊರಡುತ್ತಾನೆ. ಸಮಾಜ ಆತನನ್ನು ಹುಚ್ಚ ಎಂದು ಬಿಂಬಿಸುತ್ತದೆ. ಸಾಮಾನ್ಯ ಜನರ ನಿತ್ಯ ಜೀವನ ನಿರ್ವಹಣೆಗೆ ಬೇಕಾಗುವ ಸೀಮೆಎಣ್ಣೆಯ ವಿಚಾರದಲ್ಲೂ ಜನ ಹೇಗೆಲ್ಲ  ಚಕ್ಕಂದವಾಡಬಲ್ಲರು ಎನ್ನುವುದನ್ನು ಬಹಳ ಅದ್ಭುತವಾಗಿ ನಿರೂಪಿಸಿದ್ದಾರೆ.

‘ ರಕ್ತ ಸರೋವರ’ ಎಂಬ ಕತೆ ಜಮ್ಮು -ಕಾಶ್ಮೀರದ ಶ್ರೀನಗರದಲ್ಲಿರುವ ದಾಲ್ ಸರೋವರ ಕೇಂದ್ರೀಕರಿಸಿಕೊಂಡು ಬರೆದ ಕಥೆ. ಕಾಶ್ಮೀರದಲ್ಲಿ ಜೈನಾಬಿ ಮತ್ತು ಶೇಖ ಎನ್ನುವವರ ಕುಟುಂಬ ಹೊಲ ಕಳೆದುಕೊಂಡು ಕಂಗಾಲಾಗಿರುತ್ತಾರೆ. ಇವರ ದುಃಖ- ದುಮ್ಮಾನ ಕುದಿದು ಹೊರಬರಲು ಅಣಿಯಾಗುತ್ತದೆ. ಡೋಗ್ರಾ ಅರಸು ಮನೆತನದ ವಿರುದ್ಧ ಶ್ರೀನಗರದಲ್ಲಿ ಕ್ರಾಂತಿ ಆರಂಭವಾಗುತ್ತದೆ.  ಸಾವಿಗೆ ಹೆದರದೆ ಮುನ್ನುಗ್ಗುವ ೭೬ ಜನರು ಒಂದು ರಾತ್ರಿ ದಂಡಯಾತ್ರೆ ಹೊರಡುತ್ತಾರೆ.  ಕಾಶ್ಮೀರದ ಮಹಾರಾಜನನ್ನು ಕಂಡು ಪರಿಸ್ಥಿತಿಯ ಅರಿವು ಮಾಡಿಕೊಡುವುದು, ಹೃದಯ ಪರಿವರ್ತನೆಗೆ ಪ್ರಯತ್ನಿಸುವುದು. ಇನ್ನೇನು ಕೂಗಳತೆಯಲ್ಲಿ ಅರಮನೆ ತಲುಪುವಷ್ಟರ ಹೊತ್ತಿಗೆ ಗುಂಡಿನ ಸುರಿಮಳೆ ಇವರ ಮೇಲಾಗುತ್ತದೆ. ಬಂದೂಕಿನ ಘರ್ಜನೆಯಲ್ಲಿ ದಂಡಯಾತ್ರೆ ಕರಗಿ ಹೋಗುತ್ತದೆ. ಮಡಿದ ೨೬ ಜನರಲ್ಲಿ ಶೇಖನೂ ಒಬ್ಬ. ಜನರ ಭಾವನೆಗಳು ರಕ್ತಸಿಕ್ತವಾಗಿದ್ದವು. ರಕ್ತ ಸರೋವರವಾಗಿತ್ತು. ಈ ಕಥೆಯು ಹಿಂದೂ - ಮುಸ್ಲಿಂ ಅಂತರಗಳಿಲ್ಲದೆ ಸೌಹಾರ್ದಯುತ ಪರಿಸರದ ಗಮನ ಪಡೆಯುತ್ತದೆ. ಬೇರುಬಿಟ್ಟ ಕಪಿಮುಷ್ಠ್ಠಿಯ ವ್ಯವಸ್ಥೆಯನ್ನು ಬಿಡಿಸುವುದು  ಎಷ್ಟು ಕಷ್ಟ ಎನ್ನುವುದು ಇದರ ಸಾರಾಂಶ.  .

 ‘ತಿರುಕಣ್ಣನ ಮತದಾನ’ ಇದರಲ್ಲಿ ಬಡ ಕೂಲಿ ಕಾರ್ಮಿಕ ತಿರುಕಣ್ಣ ಕುಡುಕ. ಕೆಲಸವಿಲ್ಲದವ.  ಚುನಾವಣೆಯ ಖುಷಿ ಆಶ್ವಾಸನೆಗಳ ಸುರಿಮಳೆ, ಕೃತಕ ಅಭಿನಯಗಳಿಂದ ಹೇಗೆ ಮೋಸ ಹೋಗುತ್ತಾನೆ ಎನ್ನುವುದನ್ನು ವಿವರಿಸಲಾಗಿದೆ. ಅಭ್ಯರ್ಥಿಗಳು ಬಂದು ಬಣ್ಣದ ಆಮಿಷ ಒಡ್ಡ್ಟಿ ಮತ ಕೇಳುತ್ತಾರೆ.  ಪ್ರಾಮಾಣಿಕತೆಯ ಪತನ ಹೆಪ್ಪುಗಟ್ಟಿರುವ ಈ ಕಥೆಯಲ್ಲಿ ಪ್ರಜಾಸತ್ತೆಯಲ್ಲಿ ಚುನಾವಣೆ ನಿರ್ವಹಿಸಬೇಕಾದ ಮುಖ್ಯ ಪಾತ್ರ, ತನ್ನ ಪಾವಿತ್ರ್ಯತೆ ಮತ್ತು ಮೌಲ್ಯವನ್ನು, ಅರ್ಥವಂತಿಕೆಯನ್ನು ಕಳೆದುಕೊಳ್ಳುತ್ತಾ ಮತದಾನ ಹೇಗೆ ಕುಸಿಯುತ್ತಿರುವುದನ್ನು ಮನತಟ್ಟುವಂತೆ ಚಿತ್ರಿಸಿದ್ದಾರೆ. ವ್ಯವಸ್ಥೆಯ ಭಾಗವಾದ ಮತದಾರ  ಆಮಿಷದಿಂದ ಕರಗುತ್ತಾನೆ. ‘ಈ ಸಾರಿ ಓಟು ಪೋ(ಲ್)ಲು ಮಾಡಲಿಲ್ಲ’ ಎನ್ನುವ ವಾಕ್ಯದಲ್ಲಿ ಇಡೀ ಕಥೆಯಿದೆ.  

 ‘ಹಮಾಲ ಇಮಾಮ್ ಸಾಬಿ’  ಕಥೆಯು ಅಜ್ಞಾತನೊಬ್ಬನ ಅಚ್ಚುಕಟ್ಟಾದ ಆತ್ಮಕಥೆಯಂತಿದೆ. ಸರಿಯಾಗಿ ತನ್ನ ವಯಸ್ಸನ್ನೂ ತಿಳಿಯದ, ನೀತಿ, ನಿಯತ್ತು ಮತ್ತು ನಿಯಮದ ಮನುಷ್ಯ ಇಮಾಮ್ ಸಾಬಿ  ನಮ್ಮಲ್ಲಿನ ಲಕ್ಷಾಂತರ ಹಮಾಲರನ್ನು ಪ್ರತಿನಿಧಿಸುತ್ತಾನೆ. ರೈಲು ನಿಲ್ದಾಣದಲ್ಲಿ ಒಮ್ಮೆ ಸಂಭವಿಸಿದ ಸೇತುವೆ ಕುಸಿತದಲ್ಲಿ  ಜಲವರ ಜೀವ ಉಳಿಸುತ್ತಾನೆ. ಕೆಲವರು ಅವನಿಗೆ ಹಣ ಕೊಡಲು ಬಂದರೂ ಅದನ್ನು ಒಪ್ಪಿರಲಿಲ್ಲ. ಈತ ವ್ಯವಹಾರಿ ಅಲ್ಲ.  ಸ್ವ ಇಚ್ಛೆಯಿಂದ ಹಣ ಕೊಡಲು ಬಂದರೂ ಬೇಡ ಎನ್ನುತ್ತಾನೆ. ಈ ನೆಲೆಯಲ್ಲಿ ಆತ ದೊಡ್ಡವನಾಗಿ ಗೌರವಕ್ಕೆ ಪಾತ್ರನಾಗುತ್ತಾನೆ. ಆದರೆ ಮೊಮ್ಮಗನ ಜನನ ಪ್ರಸಂಗ ಈತನನ್ನು ಬಲಿ ಪಡೆಯುತ್ತದೆ. ಅದು ಹೇಗೆ ಎನ್ನುವುದು ಇದರಲ್ಲಿದೆ.    ಮನೆಯಲ್ಲೊಂದು ಹೊಸ ಜೀವ ಉದಿಸಿದಂತೆ ಹಳೆಯ ಜೀವ ಅವಸಾನವಾಗುತ್ತದೆ.  ಜೀವನ ನಿರಂತರ. ಜೀರ್ಣವಾದ ಶರೀರ ಬಿದ್ದಲ್ಲೇ ಹೊಸ ಚಿಗುರೊಡೆಯುತ್ತದೆ ಎನ್ನುವುದನ್ನೂ ಇಲ್ಲಿ ಕಾಣಬಹುದು. 

 ‘ಹರಕೆಯ  ಖಡ್ಗ’ ಇದು ಐತಿಹಾಸಿಕ ಕಥೆ. ಸ್ವಾಭಿಮಾನದ ಕಿಚ್ಚು ಕತೆಯ ಕೇಂದ್ರಬಿಂದು. ಮೈಸೂರು ಚರಿತ್ರೆಯಲ್ಲಿ ಉಸಿರು ನಿಲ್ಲುವ ಕಡೆಯ ಗಳಿಗೆಯಲ್ಲೂ ತನ್ನ ವ್ಯಕ್ತಿತ್ವವನ್ನು ಬಿಟ್ಟುಕೊಡದ ಧೋಂಡಿಯಾನ ಪಾತ್ರ ಇಲ್ಲಿ ಬೆಳಗಿದೆ. ಕರ್ನಾಟಕದ ಇತಿಹಾಸದ ನಿಕ್ಷೇಪದಿಂದ ಹೊರತೆಗೆದ ಅಪರೂಪದ  ಒಂದು ರತ್ನ ಈ ಕಥೆ ಎನ್ನಬಹುದು. 

  ‘ಒಂಟಿನ ನಕ್ಷತ್ರ್ರ ನಕ್ಕಿತು’ ಇದರಲ್ಲಿ ಇಂದ ಬದಲಾವಣೆಗಳು ಎಲ್ಲರಿಗೂ ಪ್ರಿಯವಾಗುವುದಿಲ್ಲ. ಒಂದು ರೀತಿಯ ಜೀವನ ವಿಧಾನಗಳಿಗೆ ಒಗ್ಗಿದ ಮನಸ್ಸುಗಳಿಗೆ ಪರಿವರ್ತನೆಗೆ ಹೊಂದಿಕೊಳ್ಳುವುದಕ್ಕೆ ಹಿಂಜರಿಕೆಯಾಗುತ್ತದೆ. ಇಲ್ಲಿನ ಕಥಾನಾಯಕ ನಂಬಿಕೆಗಳಿಗೆ ಮುಗಿಬಿದ್ದು ಬದುಕಿದವನು. ಊರು ನೀರಿನಲ್ಲಿ ಮುಳುಗಿ ಹೋಗುತ್ತದೆ ಎಂದು ಸುದ್ದಿ ಬಂದಾಗ ಆತ ನಂಬುವುದಿಲ್ಲ. ಆದರೆ ಊರು ಮುಳುಗುತ್ತದೆ, ಹಿರಿಯಜ್ಜನ ಕಲ್ಪನೆ ಹೇಗೆ ತತ್ತರಿಸಿತು?  ವಿಚಾರ ಶಕ್ತಿಗೆ ಹಿಡಿದಿದ್ದ ತುಕ್ಕು ಕಳಚಿದ್ದು ಹೇಗೆ ಎನ್ನುವುದು ಇದರಲ್ಲಿದೆ. ಊರಲ್ಲಿ ಅಣೆಕಟ್ಟು ಧುತ್ತೆಂದು ಎದ್ದಾಗ ಎಲ್ಲರೂ ಸ್ವಾಗತಿಸುತ್ತಾರೆ. ಹೊಸ ಅರಿವಿನ ಬಾಗಿಲು ತೆರೆಯುತ್ತದೆ. ಚಲನಶೀಲ ಬದುಕಿನ ಸ್ಥಿತ್ಯಂತರ ಮತ್ತು ಹಳೆಯ ನಂಬಿಕೆಗಳಿಂದ ಬಿಡಿಕೊಳ್ಳುವುದರಲ್ಲಿ ಇರುವ ಮೌಢ್ಯದ ತೊಡರನ್ನು ಈ ಕಥೆ ಸೂಕ್ಷ್ಮವಾಗಿ ಸೆರೆಹಿಡಿದಿದೆ. 

 ‘ಕೊನೆಯ ಗಿರಾಕಿ’ ಎಂಬ ಕತೆಯಲ್ಲಿ ಶೋಷಿತೆಯೊಬ್ಬಳ, ಮನಹಿಂಡುವ ಬದುಕಿನ ಚಿತ್ರಣವಿದೆ. ತನ್ನದೇ ಆದ ಸಂವೇದನೆಗಳಿದ್ದರೂ ಅದನ್ನು ಹೇಳಿಕೊಳ್ಳಲಾಗದೆ ಕಾಣಿ ಎಂಬ ಮೂಕ ಮಹಿಳೆ ದುಸ್ಥಿತಿಗಾಗಿ ಮೂಕವೇದನೆಯೊಂದೇ ಉತ್ತರವಾಗಲಾರದು. ನಮ್ಮ ಸುತ್ತ ಒಂದು ಬದುಕಿದೆ. ಅದು ಹೇಗೆ ಸಾಗಿದೆ ಎಂಬುದರ ಅರಿವು ಇರಬೇಕು. ಕಾಣಿಯನ್ನು ತಮಿಳುನಾಡಿನಿಂದ ಬೆಂಗಳೂರಿಗೆ ಕರೆ ತಂದ ಯುವಕನೊಬ್ಬ ಕೆಲವು ದಿನ ಆಕೆಯೊಟ್ಟಿಗೆ ಇದ್ದು ಮಧ್ಯದಲ್ಲಿ ಆಕೆಯನ್ನು ಕೈಬಿಡುತ್ತಾನೆ. ಬೆಂಗಳೂರಿನಲ್ಲಿ ಯಾವ ನೆಲೆಯೂ ಇಲ್ಲದ ಆಕೆ ತನ್ನ ತಾರುಣ್ಯವನ್ನು ಮಾರಾಟಕ್ಕಿಡುತ್ತಾಳೆ. ಪಾಳಿಯಲ್ಲಿ ನಿಂತು ಆಕೆಯ ದೇಹದ ಮೇಲೆ ದಾಳಿ ಮಾಡಿ ಹಲವರು ಖುಷಿ ಪಡುತ್ತಾರೆ. ಇದರ ಲಾಭ ಪಡೆಯಲು  ದಲ್ಲಾಳಿ ಒಬ್ಬ ಬಂದು ಹೃದಯವನ್ನೇ ಅಂಗಡಿ ಮಾಡಿ ವ್ಯಾಪಾರಕ್ಕೆ ಇಳಿದು ದುಡ್ಡು ಸಂಪಾದಿಸುತ್ತಾನೆ. ಆದರೆ ಕಾಣಿಯ ಕೊನೆಯ ದಿನ ಹೇಗಾಯಿತು? ಆಕೆ ಹೇಗೆ ಎಲ್ಲರಿಂದ ವಂಚಿಸಲ್ಪಟ್ಟಳು? ಕೊನೆಯ ಗಿರಾಕಿ ಯಾರಾದರ ಎನ್ನುವುದಕ್ಕೆ ಉತ್ತರ ಇದರಲ್ಲಿದೆ.

ಇದರಂತೆ ‘ಮೈಖೆಲ್‌ಮಾಸ್  ಪಿಕ್‌ನಿಕ್’ ನಲ್ಲಿ ಲಿಲ್ಲಿ- ಮೇರಿ ಎನ್ನುವ ಶ್ರೀಮಂತೆ ಮತ್ತು ಬಡವಿ ಗೆಳೆತಿಯರ ಕಥೆ ಇದೆ. ಮತ್ತು ‘ಒಂದೇ ನಾಣ್ಯದ ಎರಡು ಮೈ’ ಕಥೆಯಲ್ಲಿ ಭ್ರಷ್ಟರು ಹೇಗೆ ಅಬಾಧಿತರಾಗಿ ವಿಜೃಂಭಿಸುತ್ತಾರೆ ಎನ್ನುವುದರ ಕುರಿತಾಗಿದೆ. ಇವು ಎರಡೂ  ಬಹಳ ಇಷ್ಟವಾಗುತ್ತವೆ. 

ಹೀಗೆ ಇಲ್ಲಿನ ಬಹುತೇಕ ಕಥೆಗಳು ಮನಕಲಕುವಂತಹವು.. ಅತ್ಯಂತ ಆಪ್ತವಾಗಿ ಇವು ನಮ್ಮನ್ನು ಸೆರೆಹಿಡಿಯುತ್ತವೆ. ಪುಸ್ತಕ ಹಿಡಿದರೆ ಒಮ್ಮೆಲೆ ಇವೆಲ್ಲವನ್ನೂ ಓದಿಬಿಡುವಂತಾಗುತ್ತದೆ. ಗಾತ್ರದಲ್ಲಿ ಕಿರಿದಾದದರೂ ನಿರಂಜನರ ಬರೆವಣಿಗೆ, ಶೈಲಿ, ಕಥಾ ವಸ್ತು ಎಂತಹವರನ್ನೂ ಸೆಳೆಯುತ್ತದೆ. ಇವರ ಇನ್ನಷ್ಟು ಕಥೆಗಳನ್ನು ಓದಬೇಕೆಂಬ ಆಸೆಯೂ ಎದುರಾಗುತ್ತದೆ.

- ದತ್ತಾತ್ರೇಯ ಹೆಗಡೆ, ಶಿವಮೊಗ್ಗ

........................


Comments

Popular posts from this blog