ಬಣ್ಣದ ಬದುಕಿನ ಬಾನಾಡಿಗಳ
‘ರಂಗ ಕರ್ಪೂರ’
‘ರಂಗಕರ್ಪೂರ’ ಇದು ಪತ್ರಕರ್ತ, ಬರಹಗಾರ ಗಣೇಶ ಅಮೀನಗಡ ಅವರ ಕೃತಿ. ಕರ್ಪೂರ ತನ್ನನ್ನು ತಾನು ಸುಟ್ಟುಕೊಂಡು ಬೆಳಕಿನೊಂದಿಗೆ ಸುವಾಸನೆಯನ್ನು ಕೊಡುತ್ತದೆ. ರಂಗಭೂಮಿ ಕಲಾವಿದರು ತಮ್ಮ ಕಷ್ಟಗಳ ಜೊತೆಗೆ ನೋವುಗಳನ್ನು ನುಂಗಿ, ನಲಿವನ್ನು ಹಂಚುವ ಕರ್ಪೂರದಂತೆ. ಕರ್ಪೂರದಂತಹ ಕಲಾವಿದರ ಬದುಕಿನ ಅನಾವರಣವನ್ನು ಈ ಕೃತಿಯಲ್ಲಿ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ.
ರಂಗಭೂಮಿ ಎನ್ನುವುದು ಹಚ್ಚಿಟ್ಟ ಕರ್ಪೂರದಂತೆ. ಅದರಲ್ಲಿ ಇದ್ದಿಲು ಹುಡುಕಬಾರದು ಎಂದು ರಂಗಕರ್ಮಿ ಎಚ್ ಕೆ ಯೋಗಾನರಸಿಂಹ ಹೇಳಿದ ಮಾತಿದೆ. ಇದ್ದಿಲು ಎಂದರೆ ಕಪ್ಪು. ರಂಗಭೂಮಿಯಲ್ಲಿ ಸುವಾಸನೆ ಆಸ್ವಾದಿಸಬೇಕು ಎನ್ನುವುದು ಈ ಮಾತಿನ ತಾತ್ಪರ್ಯ. ‘ರಂಗಕರ್ಪೂರ’ ಸುಮಾರು ೨೮ ಕಿರು ಲೇಖನಗಳ ಸಂಕಲನ. ಇದರಲ್ಲಿ ಬರುವ ಬಹುತೇಕ ಕಲಾವಿದರು ನಮಗೆಲ್ಲ ಚಿರಪರಿಚಿತರು. ಜೊತೆಗೆ ಕೆಲವು ನಾಟಕಗಳ ಬಗ್ಗೆಯೂ ಇದರಲ್ಲಿ ಲೇಖಕರು ವಿವರಿಸಿದ್ದಾರೆ. ಹಲವು ರಂಗಕರ್ಮಿಗಳ ಬದುಕನ್ನು, ಕಲಾವಿದೆಯರು ನಾಟಕವಾಡುವಾಗ ಅನುಭವಿಸುವ ಸಮಸ್ಯೆಯನ್ನು ಇಲ್ಲಿ ತೆರೆದಿಟ್ಟಿದ್ದಾರೆ.
ಸುಭದ್ರಮ್ಮ ಮನ್ಸೂರ್ ರಂಗಗೀತೆಗಳ ಗಾಯಕಿಯಾಗಿ, ನಟಿಯಾಗಿ ಹೆಸರಾದವರು. ಉಸಿರು ಇರುವವರೆಗೂ ರಂಗಗೀತೆಗಳ ಕಾರ್ಯಕ್ರಮಗಳನ್ನು ನೀಡುತ್ತಾ ಸಂಚರಿಸುತ್ತಿದ್ದರು. ೧೧ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚಿದವರು. ಮುಖ್ಯವಾಗಿ ಪೌರಾಣಿಕ ನಾಟಕಗಳಿಗೆ ಬಣ್ಣ ಹಚ್ಚುತ್ತಿದ್ದರು. ದ್ರೌಪದಿ, ಕುಂತಿ, ಉತ್ತರೆ, ಮಂಡೋದರಿ, ಸೀತೆ, ಅಕ್ಕಮಹಾದೇವಿ, ಸೇರಿದಂತೆ ಅವರು ಹಲವು ಪಾತ್ರಗಳಲ್ಲಿ ಅಭಿನಯಿಸಿದವರು. ಈ ನಾಟಕಗಳಿಗೆಲ್ಲ ಚಪ್ಪಾಳೆ ಸಿಕ್ಕುತ್ತಿತ್ತು. ತೆಲುಗು ನಾಟಕಗಳಿಗೂ ಬಣ್ಣ ಹಚ್ಚಿರುವುದನ್ನು ಲೇಖಕರು ಇಲ್ಲಿ ಉಲ್ಲೇಖಿಸಿದ್ದಾರೆ.
ರಂಗನಟಿ ಉಮಾಶ್ರೀ ಅವರ ಸಂದರ್ಶನ ಇದರಲ್ಲಿದೆ. ೨೦೨೫ರ ಸಾಲಿನ ಶಿವಕುಮಾರ ಪ್ರಶಸ್ತಿ ಪುರಸ್ಕೃತ ಉಮಾಶ್ರೀ ೧೯೭೭ ರಲ್ಲಿ ‘ರುಕ್ಮಿಣಿ ಸ್ವಯಂವರ’ ಎಂಬ ಪೌರಾಣಿಕ ನಾಟಕಕ್ಕೆ ಮೊದಲು ಬಣ್ಣ ಹಚ್ಚಿದವರು. ನಂತರ ಸಾಮಾಜಿಕ ನಾಟಕಕ್ಕಿಳಿದು, ಒಡಲಾಳ, ಚೋಮನದುಡಿ, ಸಂಗ್ಯಾಬಾಳ್ಯಾ, ಯಯಾತಿ, ಹರಕೆಯ ಕುರಿ ಸಹಿತ ವಿವಿಧ ನಾಟಕಗಳಲ್ಲಿ ಪಾತ್ರ ನಿರ್ವಹಿಸಿದರು. ೧೯೮೪ ರಲ್ಲಿ ‘ಅನುಭ’ ಸಿನಿಮಾದ ಮೂಲಕ ಸಿನಿಮಾರಂಗಕ್ಕೆ ಕಾಲಿಟ್ಟು ಈಗ ಎರಡೂ ಕ್ಷೇತ್ರಗಳಲ್ಲಿ ಉತ್ತಮ ಹೆಸರು ಗಳಿಸಿದ್ದಾರೆ. ಏಕವ್ಯಕ್ತ್ತಿ ಕಲಾವಿದೆಯಾಗಿಯೂ ಪ್ರಸಿದ್ಧರು. ನಾಟಕಗಳಲ್ಲಿ ಕಲಾವಿದರ ನಡುವೆ ಸ್ಪರ್ಧೆ ಇರುತ್ತದೆ. ನಾನು ಚೆನ್ನಾಗಿ ಪಾತ್ರ ಮಾಡಬೇಕು, ಹಾಡಬೇಕು ಎನ್ನುವ ತುಡಿತವಿರುತ್ತದೆ ಎನ್ನುವುದನ್ನು ಒಡಲಾಳದ ಸಾಕವ್ವ, ಖಾನಾವಳಿ ಚೆನ್ನಿ, ಪುಟ್ಟಮಲ್ಲಿಯಾದ ಉಮಾಶ್ರೀ ವಿವರಿಸುತ್ತಾರೆ. ಕೊನೆಯ ದಿನದವರೆಗೂ ಕಲಾವಿದೆಯಾಗಿರಲು ಬಯಸುವೆ ಎನ್ನುವುದು ಅವರ ಒಡಲಾಳದ ಮಾತು.
ಇಲ್ಲಿ ಹಲವು ರಂಗ ನಟಿಯರ ಬಾಳು ಬದುಕನ್ನು ಇದರಲ್ಲಿ ಚಿತ್ರಿಸಿದ್ದಾರೆ. ರಂಗಾಯಣದ ಗೀತಾ ಮೋಂಟಡ್ಕ, ಮರಿಯಮ್ಮನಹಳ್ಳಿ ರಂಗತಾರೆ ನಾಗರತ್ನಮ್ಮ, ಪುಷ್ಪಮಾಲಾ, ಅಪೂರ್ವ ಸಹೋದರಿಯರಾದ ರಾಧಾ - ರುಕ್ಮಿಣಿ, ಗಟ್ಟಿಗಿತ್ತಿ ಸರಸ್ವತಿ ಜುಲೈಖಾ ಖಾನಂ ಅವರ ಬಗ್ಗೆ ಬರೆದಿದ್ದಾರೆ. ಅಪೂರ್ವ ರಂಗ ಸಹೋದರಿಯಾದ ರಾಧಾ- ರುಕ್ಮಿಣಿ ಹಾಲಿ ಚಿತ್ರನಟಿ ಶ್ರುತಿ ಮತ್ತು ನಟ ಚರಣ್ ಅವರ ತಾಯಿಯಾಗಿದ್ದಾರೆ.
‘ಬಣ್ಣ ನಂಬಿ ಬದುಕು ಕಟ್ಟಿಕೊಂಡ ಕಲಾವಿದೆಯರು’ ಎಂಬ ಬರಹದಲ್ಲಿ ಮೈಸೂರಿನಲ್ಲಿ ರಂಗ ಕಲಾವಿದರ ಸಂಘ ಎನ್ನುವುದಿದ್ದು ಸುಮಾರು ೮೦ಕ್ಕೂ ಹೆಚ್ಚು ಜನರು ಇದರ ಸದಸ್ಯರಿರುವುದನ್ನು ವಿವರಿಸುತ್ತಾರೆ.
ಕೆಲವು ಹೆಸರಾಂತ ನಾಟಕಗಳಾದ ಕೌದಿ, ರಸೀದಿ ಟಿಕೆಟ್, ಸದಾರಮೆ, ಸಕ್ಕುಬಾಯಿ, ಕಾಣೆಯಾದವರು, ದಕ್ಲಕಥಾ ಮಹಾಕಾವ್ಯ, ಪ್ರತಿ ಗಂಧರ್ವ, ಒಮ್ಮೆ ಹೆಣ್ಣಾಗು, ಅಧಿನಾಯಕಿ ಮೊದಲಾದವುಗಳ ಬಗ್ಗೆ ಇಲ್ಲಿ ವಿವರಣೆ ಇದೆ.
ತಮ್ಮ ರಚನೆಯ ‘ಕೌದಿ’ ನಾಟಕ ಯಶಸ್ವಿ ೫೦ ಪ್ರದರ್ಶನ ಕಂಡ ಬಗ್ಗೆ ವಿವರಿಸುತ್ತಾ, ರಾಜ್ಯದಲ್ಲಿ ನಾಟಕವನ್ನು ಆಡುವಾಗ ಆದ ಅನುಭವವನ್ನು ವಿವರಿಸುತ್ತಾರೆ ಕೊಪ್ಪಳದ ಭಾಗ್ಯನಗರದಲ್ಲಿ ದಲಿತ ಮಹಿಳೆಯರು ಕೌದಿ ಹೊಲೆಯುತ್ತಾರೆ. ಅವರಿಗೆ ಸಿಗುವುದು ಗರಿಷ್ಠ ೪೦೦ ರೂ. ಅವರು ಎದುರಿಸುವ ಸಮಸ್ಯೆ, ಸವಾಲು, ಆತಂಕಗಳನ್ನು ಎತ್ತಿ ಹಿಡಿಯುವ ಕೆಲಸವನ್ನು ಈ ನಾಟಕದ ಮೂಲಕ ಆಧ್ಯಾತ್ಮಿಕವಾಗಿ ತಾನು ಕಟ್ಟಿಕೊಟ್ಟಿರುವುದನ್ನು ವಿವರಿಸುತ್ತಾರೆ.
‘ರಸೀದಿ ಟಿಕೆಟ್’ ನಾಟಕ ಅಮೃತ ಪ್ರೀತಮ್ ಅವರ ಆತ್ಮಕಥೆ. ಇದನ್ನು ಕನ್ನಡಕ್ಕೆ ಅನುವಾದ ಮಾಡಿದವರು ಹಸನ್ ನಯೀಂ ಸುರಕೋಡ. ಅದನ್ನು ಏಕವ್ಯಕ್ತಿಯಾಗಿ ಶಾಲೋಮ್ ಸುನ್ನತ್ ಪ್ರಸ್ತುತಪಡಿಸುತ್ತಿದ್ದಾರೆ. ‘ಸದಾರಮೆ’ ನಾಟಕ ಬೆಳ್ಳಾವಿ ನರಹರಿ ಶಾಸ್ತ್ರಿಗಳದು. ಬಿ ಜಯಶ್ರೀ ಅದನ್ನು ನಿರ್ದೇಶಿಸಿ ಪ್ರಸ್ತುತಪಡಿಸಿದ್ದಾರೆ. ೧೯೮೭ರಲ್ಲಿ ಹೆಗ್ಗೋಡಿನ ನೀನಾಸಂ ಈ ನಾಟಕವನ್ನು ‘ಮಿಸ್ ಸದಾರಮೆ ಎಂಬ ಹೆಸರಿನಲ್ಲಿ ಆಡಿದೆ. ಸದಾರಮೆ ಪಾತ್ರವನ್ನು ಸರೋಜಾ ಹೆಗಡೆ, ಲೀಲಾವತಿ ಮೊದಲಾ
ದವರು ಯಶಸ್ವಿಯಾಗಿ ಮಾಡುತ್ತಿದ್ದರು.
ಏಕವ್ಯಕ್ತಿ ನಾಟಕಗಳು:
ಇತ್ತೀಚೆಗೆ ಹೆಚ್ಚು ಜನಪ್ರಿಯವಾಗುತ್ತಿರುವ ಏಕವ್ಯಕ್ತಿ ನಾಟಕಗಳ ಬಗ್ಗೆ ಮತ್ತು ಅದನ್ನು ಅಭಿನಯಿಸುತ್ತಿರುವವರ ಬಗ್ಗೆ ಲೇಖಕರು ವಿವರವಾಗಿ ಬರೆದಿದ್ದಾರೆ. ಹೆಚ್ಚಾಗಿ ಮಹಿಳಾ ಕಲಾವಿದರು ಏಕವ್ಯಕ್ತಿ ನಾಟಕಗಳತ್ತ ವಾಲಿರುವುದು ಗಮನಾರ್ಹ. ಪೌರಾಣಿಕ ಕಥೆಗಳನ್ನು ಸಮಕಾಲೀನಗೊಳಿಸಿದ ನಾಟಕಗಳು ಏಕವ್ಯಕ್ತಿ ಪ್ರಯೋಗಗಳಿಗೆ ಹೆಚ್ಚು ಆಯ್ಕೆಯಾಗಿವೆ. ದ್ರೌಪದಿ, ಸೀತೆ, ಮಂಡೋದರಿ ಮುಂತಾದ ಪಾತ್ರಗಳು ಹೆಚ್ಚು. ೯೦ರ ದಶಕದ ನಂತರ ಏಕವ್ಯಕ್ತಿ ನಾಟಕಗಳ ಮೂಲಕ ಸಂವೇದನೆಯ ಅನಾವರಣ ಸಮರ್ಥವಾಗಿ ಸಾಧ್ಯವಾಗುತ್ತಿದೆ. ಕಲಾವಿದರ ಇತಿಮಿತಿಗಳು ಗೊತ್ತಾಗುತ್ತಿವೆ. ಪ್ರೇಕ್ಷಕರನ್ನು ಒಂದು ಗಂಟೆ ಇಲ್ಲವೇ ಅದಕ್ಕೂ ಹೆಚ್ಚು ಹೊತ್ತು ಹಿಡಿದಿಡಬೇಕಾಗುತ್ತದೆ. . ಸುಧಾ ಅಡುಕಳ ಅವರ ‘ಯತ್ರ ನಾರ್ಯಸ್ತು ಪೂಜ್ಯಂತೆ’ ‘ಗೆಲ್ಲಿಸಬೇಕು ಅವಳ’ ಕಥೆಗಳು ಕೂಡ ನಾಟಕಗಳಾಗಿವೆ. ಎಸ್ ಶೈಲಜಾ ಪ್ರಕಾಶ ಅಭಿನಯದ ‘ಸಾವಿತ್ರಿಬಾಯಿ ಫುಲೆ’, ಮೈಸೂರು ರಂಗಾಯಣದ ಕಲಾವಿದೆ ಬಿ ಎಂ ಶಶಿಕಲಾ ಅಭಿನಯದ ‘ಕಸ್ತೂರಬಾ’ ಪ್ರಸನ್ನ ಕೆರಗೋಡು ಅವರ ‘ಮಧುರ ಮಂಡೋದರಿ’ ಸೀತಾ ಕೋಟೆ ಅವರ ‘ಶಕುಂತಲೆ’ ಅಕ್ಷತಾ ಪಾಂಡವಪುರವರ ‘ಲೀಕ್ ಔಟ್’ಮುಂತಾದವು ಹೆಸರು ಗಳಿಸಿವೆ.
ಕನ್ನಡದ ಕಲಾವಿದೆಯರ ಮೊದಲ ಏಕವ್ಯಕ್ತಿ ನಾಟಕವೆಂದರೆ ಭಾಗಿರಥಿಬಾಯಿ ಕದಂ ಆಡಿದ ವೈದೇಹಿಯವರ ‘ಶಕುಂತಲೆಯೊಡನೆ ಒಂದು ಮಧ್ಯಾಹ್ನ’.
ಏಕವ್ಯಕ್ತಿ ನಾಟಕ ಒಂದು ಸವಾಲು. ಬೇರೆ ಬೇರೆ ಸಂಸ್ಕೃತಿಗಳನ್ನು ಅರಗಿಸಿಕೊಂಡು ಪ್ರೇಕ್ಷಕರನ್ನು ಹಿಡಿದಿಡುವ ಸವಾಲು. ಹೆಣ್ಣಾಗಿ ಹೆಣ್ಣಿನ ಅಂತರಂಗವನ್ನು ಅನಾವರಣಗೊಳಿಸಲು ಇದರಲ್ಲಿ ಸಾಧ್ಯವಾಗುತ್ತದೆ ಎನ್ನುತ್ತಾರೆ ಕಲಾವಿದೆ ಲಕ್ಷ್ಮೀ ಚಂದಶೇಖರ್.
-ದತ್ತಾತ್ರೇಯ ಹೆಗಡೆ, ಶಿವಮೊಗ್ಗ
..............................

Comments
Post a Comment