ದೂರ ಸರಿದರು


 ಇದು   ಕಾದಂಬರಿಕಾರ ದಿವಂಗತ ಎಸ್. ಎಲ್.  ಭೈರಪ್ಪ ಅವರ ಮನೋವೈಜ್ಞಾನಿಕ ಕಾದಂಬರಿ. ಇದರಲ್ಲಿ ಕಾಲೇಜು ಕಲಿಕೆಯ ಅವಧಿಯಲ್ಲಿ ಸಾಹಿತ್ಯ, ತತ್ವಶಾಸ್ತ್ರ, ಮನೋವಿಜ್ಞಾನದ ವಿದ್ಯಾರ್ಥಿಗಳು ಆತ್ಮೀಯರಾಗಿ ಕಲಿಯುವುದು, ಚರ್ಚಾಕೂಟ, ಉಪನ್ಯಾಸ, ಸಂವಾದಗಳಲ್ಲಿ ಒಂದಾಗುವುದು, ಇಂಥ ಸಂದರ್ಭದಲ್ಲಿ ಪರಸ್ಪರರಲ್ಲಿ ಆಕರ್ಷಣೆಯ ಸೆಳೆತದಿಂದ ಪ್ರೀತಿ, ಪ್ರೇಮ ಮೊಳೆತು ಅದು ಮದುವೆಯ ಹಂತದವರಗೆ ಹೋಗುವುದು, ಇಂಥ ಸಂದರ್ಭದಲ್ಲಿ ಜಾತಿ, ವೈಯಕ್ತಿಕ ಮೊಂಡುತನ, ಬೌದ್ಧಿಕತೆ ಹೇಗೆ ಅವರನ್ನು ದೂರಸರಿಸುತ್ತದೆ ಎಂಬುದನ್ನು ಇದರಲ್ಲಿ ವಿವರಿಸಲಾಗಿದೆ.

 ಜೀವನದ ಪ್ರೀತಿಯಲ್ಲಿ ಸಮಾಜಕ್ಕೆ ಅಂಜುವುದು, ಕುಟುಂಬದವರಿಗೆ ಗೊತ್ತಾಗದಂತೆ ಒಬ್ಬರ ಮನೆಗೆ ಒಬ್ಬರು ತೆರಳುವುದು, ಪ್ರವಾಸಕ್ಕೆ ಹೋಗುವುದು, ಪ್ರೀತಿಯ ವಿಷಯವನ್ನು ಮುಚ್ಚಿಡುವುದು, ಅಂತ್ಯದಲ್ಲಿ ಅದು ಬೆಳಕಿಗೆ ಬಂದಾಗ ಸಮಸ್ಯೆ ಎದುರಾಗುವುದು ಇದರಲ್ಲಿ ಪ್ರಧಾನವಾಗಿ ಕಂಡುಬರುತ್ತದೆ. ಎರಡು ಜೋಡಿ ಪ್ರೇಮಿಗಳು, ಅವರ ತಾಕಲಾಟ, ಒಂದು ಜೋಡಿಗೆ ಮನೆಯಲ್ಲೊಪ್ಪದ ಪ್ರೀತಿ, ಮತ್ತೊಂದು ಜೋಡಿ ಗೆ ಒಪ್ಪಿಗೆ ಸಿಕ್ಕರೂ ಮದುವೆ ನಿಶ್ಚಯ ಮುಂದೂಡುವುದು. ಕೊನೆಯಲ್ಲಿ ಎಲ್ಲರೂ ಮದುವೆಯಾದರೆ? ಯಾರು ಯಾರನ್ನು ಮದುವೆಯಾದರು, ಒಂಟಿಯಾದವರ ಕಥೆ ಏನಾಯಿತು, ಇವರೆಲ್ಲ ಕೆಲಸಕ್ಕೆ ಸೇರಿದರೇ? ಯಾವ ಊರಿನಲ್ಲಿ ನೆಲೆಗೊಂಡರು ಎನ್ನುವುದನ್ನು ಈ ಕಾದಂಬರಿಯ ಅಂತ್ಯದಲ್ಲಿ ಗಮನಿಸಬಹುದು. ಹೀಗೆ ಊಹಿಸಲಾಗದ ರೀತಿಯ ಬೆಳವಣಿಗೆಯಲ್ಲಿ ಅವರು ಹೈರಾಣಾಗುತ್ತಾರೆ. ಮುಖ್ಯವಾಗಿ ವಿದ್ಯಾರ್ಥಿಗಳಾದ ಸಚ್ಚಿದಾನಂದ ಅಥವಾ ಆನಂದ ಮತ್ತು ವಿನತೆ ಇಲ್ಲಿ ಒಂದು ಜೋಡಿ. ಇನ್ನೊಂದು ವಸಂತ- ಉಮಾ.  ರಮಾ, ಜಗದಂಬಾ ಇಲ್ಲಿನ ಪ್ರಮುಖ  ಪಾತ್ರಗಳು.

 ಆನಂದ ಮತ್ತು ವಿನತೆ ಆತ್ಮೀಯ ಸಹಪಾಠಿಗಳು, ಸಾಹಿತ್ಯ ಅಭ್ಯಾಸಿಗಳು. ಮೈಸೂರಿನ ಕಾಲೇಜಿನಲ್ಲಿ ಓದಿ ವಿಶ್ವವಿದ್ಯಾಲಯದಲ್ಲೂ ಜೊತೆಗೂಡುತ್ತಾರೆ.  ಗೆಳೆತನದಲ್ಲಿಯೇ ಪ್ರೀತಿ, ಪ್ರೇಮ ಹುಟ್ಟುತ್ತದೆ. ಸ್ನೇಹಿತರಾದ ಮೇಲೆ ಇಬ್ಬರ ಕಲ್ಪನೆಗೂ ಸ್ಫೂರ್ತಿ ಸಿಗುತ್ತದೆ. ಇಬ್ಬರ ಮನಸ್ಸು ಸಾಹಿತ್ಯದಲ್ಲೂ, ಕಲೆಯಲ್ಲೂ ತನ್ನ ಗತಿಯನ್ನು ಹೆಚ್ಚಿಸಿ ಗುರುತಿಸಿಕೊಳ್ಳಲು ಯತ್ನಿಸುತ್ತಿತ್ತು. ಕುಕ್ಕರಹಳ್ಳಿ ಕೆರೆ ದಾಟಿ ಸುಂದರ ಪರಿಸರದ ತೋಪಿನಲ್ಲಿ ಇಬ್ಬರು ಕುಳಿತು ಅಧ್ಯಯನದ ವಿಚಾರವಾಗಿ  ಚರ್ಚೆ, ಸಂವಾದ ನಡೆಸುತ್ತಾರೆ. ಕೆಲವೊಮ್ಮ ಇಬ್ಬರಲ್ಲೂ ತಾತ್ವಿಕವಾದ ಭಿನ್ನಾಭಿಪ್ರ್ರಾಯ ಮೂಡುತ್ತದೆ, ಸಿಟ್ಟುಗೊಳ್ಳುತ್ತಾರೆ. ಆದರೆ ಇದೆಲ್ಲ ಕ್ಷಣಿಕ. ಅಧ್ಯಯನ ಸಂಬಂಧ ಇಬ್ಬರೂ ವಾಚನಾಲಯ, ಒಬ್ಬರ ಮನೆಗೆ ಇನ್ನೊಬ್ಬರು ಬರುತ್ತಾರೆ, ಹೋಗುತ್ತಾರೆ. ಇದರಿಂದ ಅವರ ಮನೆಯವರಿಗೂ ಗೆಳೆತನದ ಸಂಬಂಧ ತಿಳಿದಿರುತ್ತದೆ.  

ಈ ಮಧ್ಯೆ ವಿನತೆಯ ಅಕ್ಕ ವಿಜಯಕುಮಾರಿಯನ್ನು ಬಿಇ ಪದವೀಧರ ವಾಸನ್ ವಿವಾಹವಾಗಲು ತೀರ್ಮಾನಿಸುತ್ತಾರೆ. ಆದರೆ ವಾಸನ್ ಬ್ರಾಹ್ಮಣ. ಅವರ ಮನೆಯಲ್ಲಿ ಇನ್ನೊಂದು ಜಾತಿಯ ಹುಡುಗಿಯನ್ನು ಮದುವೆಯಾಗಲು ಒಪ್ಪಿಗೆ ಸಿಗುವುದಿಲ್ಲ. ಇದನ್ನರಿತ ವಿನತೆ ಮತ್ತು ಆಕೆಯ ತಾಯಿ ಹೇಗಾದರೂ ಇವರ ವಿವಾಹ ಮಾಡಿಸುವಂತೆ ಆನಂದ್‌ಗೆ ಮನವಿ ಮಾಡುತ್ತಾರೆ. ಆಗ ನೋಂದಣಿ ಮೂಲಕ ವಿವಾಹ ಮಾಡಲು ಯೋಚಿಸಿ ಹಾಗೆಯೇ ಮಾಡುತ್ತಾರೆ. 

ಆನಂದ- ವಿನತೆ ಮಧ್ಯೆ ಪ್ರೀತಿ ಚಿಗುರಿದ್ದರೂ ವಿಜಯಕುಮಾರಿ ಮದುವೆಯಾಗದೆ ವಿನತೆಯ ಮದುವೆ ಸಹ ಸಾಧ್ಯವಿರಲಿಲ್ಲ. ಜೊತೆಗೆ ವಿನತೆಯ ತಾಯಿ ಮೊಂಡು ಬುದ್ಧಿಯವಳು. ಜಾತಿ, ರೀತಿ ನೋಡುತ್ತಾ ಕುಳಿತವಳು. ಇದರಿಂದ ಆನಂದ್‌ಗೆ ವಿನತೆ ಜೊತೆ ಮದುವೆ ಸಾಧ್ಯವಿಲ್ಲವೇ ಎಂದೆನಿಸುತ್ತದೆ. ತನ್ನ ಮಗಳು ಆನಂದ ಹಿಂದೆ ಬಿದ್ದುದನ್ನು ಅರಿತು ಆಕೆಯ ಮೇಲೆ ಕಣ್ಣಿಡುತ್ತಾಳೆ. ಆಕೆ ಆತನ ಜೊತೆ ಕಾಲೇಜಿನಲ್ಲಿ ಸುತ್ತ್ತಾಡದಂತೆ, ಕಾಣಿಸಿಕೊಳ್ಳದಂತೆ ಗಮನಿಸುತ್ತಾಳೆ. ಕಾಲೇಜು ಮಗಿದಿತ್ತು. ಪರೀಕ್ಷೆಯು ನಡೆಯುತ್ತಿತ್ತು. ಕಾಲೇಜಿನಿಂದ ಆನಂದ ಜೊತೆ ವಿನತೆ ಕುಕ್ಕರಹಳ್ಲಿ ಕರೆ ಬಳಿ ಕುಳಿತು ಮಾತನಾಡುತ್ತಿರುವಾಗ ಏಕಾಏಕಿ ಆಗಮಿಸುವ ತಾಯಿ ‘ಪರೀಕ್ಷೆ ಎಂದು ಸುಳ್ಳು ಹೇಳಿ ಬಂದು ಇವನೊಡನೆ ಚೆಕ್ಕಂದ ಆಡುತ್ತೀಯ’ ಎಂದು ಕೈ ಹಿಡಿದು, ಹೊಡೆದು ಕರೆದೊಯ್ಯುತ್ತಾಳೆ. ನಂತರ ಮುಂದಿನ ಪರೀಕ್ಷೆಗಳಿಗೆಲ್ಲ ಆಕೆಯೇ ಕರೆತಂದು ವಾಪಸ್ ಕರೆದೊಯ್ಯುತ್ತಿದ್ದಳು. ಇದರಿಂದ  ಅವರಿಬ್ಬರೂ ಬೇರ್ಪಡುವಂತಾಗುತ್ತದೆ. ಒಂದು ದಿನ ವಿನತೆ ತನ್ನ ಗೆಳತಿ  ಜಗದಂಬಾ ಕೈಲಿ  ಒಂದು ಚೀಟಿಕೊಟ್ಟು ಅದರಲ್ಲಿ ‘ದೇವರೇ ನಮ್ಮನ್ನು ಕಾಪಾಡಬೇಕು. ನಾನು ಸತ್ತರೂ ಬೇರೆ ಜನ್ಮವೆತ್ತಿ ನಿಮ್ಮ ಸೇರುವುದು. ಸತ್, ಚಿತ್, ಆನಂದ ಎಲ್ಲ ನೀವೇ. ಅವು ನನ್ನಿಂದ ದೂರ ಆಗಿವೆ. ನೀವು ನನ್ನಿಂದ ವಿಮುಖರಾಗಬೇಡಿ. ನೀವು ದೂರ ಹೋದರೆ ನಾನು ಬದುಕುವುದಾದರೂ ಹೇಗೆ’ ಎಂದು ಪ್ರಶ್ನಿಸಿ ಬರೆದಿರುತ್ತಾಳೆ. 

 ವಿನತೆ  ಊರಲ್ಲಿ ಅಮ್ಮನ, ಸಹೋದರರ ಜೊತೆ ಇದ್ದಳು. ಅವಳ ಸಹೋದರರು ಓದುತ್ತಿರುತ್ತಾರೆ. ಅಮ್ಮನ ಪ್ರೀತಿಯೇ ತನ್ನ ಹೇಡಿತನಕ್ಕೆ ಕಾರಣವಾಯಿತು. ಇದರಿಂದ ಮದುವೆಯಾಗದೆ ಉಳಿದೆ ಎಂದು ಚಿಂತಿಸುತ್ತಾಳೆ. ಆನಂದ್ ಈಕೆಯನ್ನು ಮದುವೆಯಾಗಲು ಸಾಕಷ್ಟು ಯತ್ನಿಸುತ್ತಾನೆ. ವಿನತೆಯೂ ಇನ್ನಿಲ್ಲದ ಯತ್ನ ಮಾಡುತ್ತಾಳೆ. ಆದರೆ ತಾಯಿಯ ಜಾತಿವಾದ, ಮೊಂಡು ಹಠದಿಂದ ಇದು ನಡೆಯದು, ನಡೆಯುವುದಿಲ್ಲ.  ಆಗ ವಿನತೆಯು ಆನಂದ್‌ಗೆ ‘ಜಗದಂಬಾಳನ್ನು ಮದುವೆಯಾಗು. ನಮ್ಮ ಮದುವೆಗೆ ತಾಯಿಯ ಜಾತಿ ಅಭಿಮಾನ ಅಡ್ಡ ಬರುತ್ತಿದೆ. ಆಕೆ ಒಪ್ಪುತ್ತಿಲ್ಲ. ಹುಡುಗ ನಮ್ಮವನಲ್ಲದಿದ್ದರೆ ಪ್ರಾಣ ಹೋದರೂ  ಬಿಡುವುದಿಲ್ಲ ಎನ್ನುತ್ತಿದ್ದಾಳೆ. ಮನುಷ್ಯನನ್ನು ಪ್ರೀತಿಸುವುದಕ್ಕಿಂತ ನಿಸರ್ಗ ಪ್ರೀತಿಸುವುದೇ ಮೇಲು’ ಎನ್ನುತ್ತಾಳೆ.

 ‘ಹಿರಿಯರ ತುಕ್ಕು ಹಿಡಿದ ದೃಷ್ಟಿಗೆ ಪ್ರೇಮ ಅರ್ಥವಾಗುವುದಿಲ್ಲ. ತಮಗೊಬ್ಬರಿಗೆ ಮಾತ್ರ ಆ ಬಗ್ಗೆ ಗೊತ್ತೆಂಬ ಅಹಂಕಾರವಿದೆ’ ಎಂದು ವಿನತೆ ತಾಯಿಯ ಬಗ್ಗೆ ಆನಂದ್ ಹೇಳುತ್ತಾನೆ. ‘ಅವಳ ತಾಯಿಗೆ ಡಿಗ್ನಿಟಿ ಇದೆ. ಮನೆತನದ ಗೌರವ, ಸಾಮಾಜಿಕ ಮಟ್ಟಕ್ಕೆ ಬೆಲೆ ಕೊಡುವವರು ತಮ್ಮ ಜಾತಿಯೇ ಶ್ರೇಷ್ಠ ಎನ್ನುತ್ತಾರೆ.    ನೀವು ವಿನುತೆ ಒತ್ತಾಸೆ ಮೇರೆಗೆ  ಕ್ರಮೇಣ ಧೈರ್ಯ ತಂದುಕೊಳ್ಳಿ. ಪ್ರೀತಿ ಹೆಂಗಸಿಗೆ ಇಡೀ ಜೀವನ’ ಎಂದು ಜಗದಂಬಾ ಆತನಿಗೆ ಹೇಳುತ್ತಾಳೆ. ಇಬ್ಬರೂ ನೊಂದಣಿ ಮೂಲಕ ವಿವಾಹ ಮಾಡಿಕೊಳ್ಳಿ. ಇದರಿಂದ ಯಾರೂ ಏನೂ ಮಾಡಲಾಗದು ಎಂದು ಮಿತ್ರ ವಸಂತ್ ಮತ್ತು ಜಗದಂಬಾ ಇಬ್ಬರಿಗೂ ಸೂಚಿಸುತ್ತಾರೆ. ಆದರೆ ಇದಕ್ಕೆ ವಿನತೆ ಒಪ್ಪುವುದಿಲ್ಲ. ಇಬ್ಬರ ಜೀವನ ಒಂದಾಗುವುದು ಸಾಧ್ಯವೇ ಎಂಬ ಪ್ರಶ್ನೆ ಮಿತ್ರರದ್ದಾಗಿತ್ತು.

 ವಸಂತ್ ಶಿವಮೊಗ್ಗದವನು. ಈತನು ಉಮೆಯನ್ನು ಪ್ರೀತಿಸುತ್ತಿದ್ದನು. ಇಬ್ಬರೂ ವಿವಾಹವಾಗಲು ನಿರ್ಧರಿಸಿದ್ದಾಗ ಮನೆಯವರು ಒಪ್ಪುವರು. 

ಪರೀಕ್ಷೆಯ ಫಲಿತಾಂಶದ ನಂತರ ವಿನುತಾ ಟಿ. ನರಸಿಪುರದಲ್ಲಿ ಶಾಲಾ ಶಿಕ್ಷಕಿಯಾಗಿ ಕೆಲಸಕ್ಕೆ ಸೇರಿಕೊಳ್ಳುತ್ತಾಳೆ.  ಅವಳ ಜೊತೆ  ತಮ್ಮ ಸಹ ಇರುತ್ತಾನೆ.  ಆಕೆ ಪ್ರತಿದಿನ ಆನಂದ್‌ನನ್ನು ನೆನೆಸಿಕೊಳ್ಳುತ್ತಾಳೆ. ಒಂದು ದಿನ ಇದ್ದಕ್ಕಿದ್ದಂತೆ ಆಕೆಯ ಮನೆಗೆ ಆನಂದ ತೆರಳುತ್ತಾನೆ. ಪಾಯಸ ಮಾಡಿ ಆತನಿಗೆ ಬಡಿಸುತ್ತಾಳೆ. ‘ಇಲ್ಲೇ ಇದ್ದು ಬಿಡು’ ಎಂದು ಆತನಿಗೆ ಹೇಳುತ್ತಾಳೆ. ‘ಹಿಂದಿನ ಜನ್ಮದಲ್ಲಿ ಯಾವ ದಂಪತಿ ಅಗಲಿಸಿದ್ದಕ್ಕೆ ತನಗೆ ಈ ಶಿಕೆ’ ಎಂದು ಆಕೆ ಕಣ್ಣೀರು ಹರಿಸುತ್ತಾಳೆ. ಇದಕ್ಕೆ ಮುರುಗಿದ ಆತ ನಾಲ್ಕು ದಿನ ಆಕೆಯ ಸಂಗಡ ಇದ್ದು ನಂತರ ಮೈಸೂರಿಗೆ ತೆರಳುತ್ತಾನೆ. 

ಒಂದು ದಿನ ಆನಂದನ ಅಮ್ಮ ಆತನಿಗೆ ಮದುವೆ ಪ್ರಸ್ತಾಪ ಮಾಡುತ್ತಾಳೆ. ‘ಮದುವೆ ಆಗಲೇಬೇಕು. ನನಗೆ ಸಮಾಧಾನವಿಲ್ಲ’ ಎಂದು ಹೇಳುತ್ತಾಳೆ. ‘ಯಾವುದಾದರೂ ಹೆಣ್ಣಿದ್ದರೆ ನೋಡು’ ಎನ್ನುತ್ತಾನೆ. ಅರಕಲಗೂಡಿನ ಸೀತಾಲಕ್ಷ್ಮಿ ಯನ್ನು ಅವಳ ಜೊತೆ ಮಗನ ಮದುವೆಯನ್ನು ಮಾಡುತ್ತಾಳೆ. ಮಗುವೂ ಆಗುತ್ತದೆ. ಆನಂದನಿಗೆ ಧಾರವಾಡದಲ್ಲಿ ಉಪನ್ಯಾಸಕ ಹುದ್ದೆ ದೊರೆಯುತ್ತದೆ. ಆತನ ಸಹಪಾಠಿ ರಮಾಳಿಗೆ  ಜೋಧಪುರದಲ್ಲಿ ಇಂಗ್ಲಿಷ್ ಉಪನ್ಯಾಸಕ್ಕೆ ಹುದ್ದೆ ಸಿಗುತ್ತದೆ. ಆಕೆ ಜೋಧಪುರಕ್ಕೆ ಹೋಗುವ ಮುನ್ನ ಆನಂದನ ಮನೆಗೆ ಧಾರವಾಡಕ್ಕೆ ಬರುತ್ತಾಳೆ. ಆತನಲ್ಲಿ ತಾನು ಪ್ರೊ. ನರೋತ್ತಮ ತನ್ನನ್ನು ಪ್ರೀತಿಸಿ ವಂಚಿಸಿದ ಬಗ್ಗೆ ಕಣ್ಣೀರಿಡುತ್ತಾಳೆ. ಆನಂದನ ಅಮ್ಮ ಅವಳಿಗೊಂದು ಗಂಡು ಹುಡುಕಿ ಮುಂದೆ ನಿಂತು ಮದುವೆ ಮಾಡು ಎನ್ನುವರು.

 ನರಸೀಪುರಕ್ಕೆ ಆನಂದ ಒಮ್ಮೆ ಹೋದಾಗ ‘ಈಗಲೂ ನಾನೇಕೆ ನಿನ್ನನ್ನು ಮದುವೆಯಾಗಬಾರದು’ ವಿನತೆಯನ್ನು ಪ್ರಶ್ನಿಸುತ್ತಾನೆ. ಕಾನೂನು ತೊಡಕು ಎದುರಾಗುತ್ತದೆ ಎಂದು ಆಕೆ ಹೇಳಿದಾಗ ಆತ ವಕೀಲರನ ಕಂಡು ವಿಚಾರಿಸಿದಾಗ ಮೊದಲನೆಯ ಪತ್ನಿ, ಮಗು ಇದ್ದಾಗ ಎರಡನೆಯ ಮದುವೆ ಕಷ್ಟ ಎನ್ನುತ್ತಾರೆ. ‘ಬರಿದಾದ ಮನಸ್ಸಿನಲ್ಲಿ, ಜೀವನದಲ್ಲಿ ಏನಿದೆ, ಯಾಕೆ ಬದುಕಬೇಕು ಎಂದು ಆನಂದನನ್ನು ಪ್ರಶ್ನಿಸುತ್ತಾಳೆ. ಇದೇ ವೇಳೆ ಆಕೆಗೆ ಜ್ವರ ಆರಂಭವಾಗುತ್ತದೆ. ಅದು ವಿಪರೀತಗೊಂಡು ತಾನು ಬದುಕುವುದಿಲ್ಲ ಎಂದು ಆಕೆಗೆ ಗೊತ್ತಾಗುತ್ತದೆ. ಅಕ್ಕಪಕ್ಕದವರು ಚಿಕಿತ್ಸೆ ಕೊಡಿಸುತ್ತಾರೆ. ಸಂಜೆ ಜಗದಂಬಾ ಬಂದು ಭೇಟಿಯಾಗುತ್ತಾಳೆ ಮತ್ತು ಚಿಕಿತ್ಸೆಗೆ ವೈದ್ಯರನ್ನು ಕರೆಸುತ್ತಾಳೆ. ವೈದ್ಯರು ಆಕೆಗೆ ‘ಟೈಫಾಯಿಡ್’ ಆಗಿದೆ ಎನ್ನುವರು. ಸಂಬಂಧಿಕರು ಮನೆಗೆ ಬರುವರು. ೧೩ನೇ ದಿನ ಇದ್ದಕ್ಕಿದ್ದಂತೆ ಜ್ವರ ಮತ್ತೆ ಹೆಚ್ಚಾಗಿ ಆಕೆ ಜೀವ ಬಿಡುತ್ತಾಳೆ. 

ಜಗದಂಬಾ ಆನಂದನಿಗೆ ಕಾಗದ ಬರೆದು ತಿಳಿಸಿದಾಗ ಅದಕ್ಕೆ ಉತ್ತರವಾಗಿ ಆನಂದ್, ‘ನಾನು ಮದುವೆ ಮಾಡಿಕೊಂಡಿದ್ದರೆ’ ಎಂದು ಪ್ರಲಾಪಿಸುತ್ತಾ, ‘ಎಲ್ಲರ ನ್ನೂ ಒಂದುಗೂಡಿಸಬೇಕಾದ ಜೀವನ ಶಕ್ತಿಯ ನಡುವೆ ಭಿನ್ನತೆಯನ್ನು ಬೆಳೆಸಿ ಒಂದಾಗಬೇಕೆಂದು ಯತ್ನಿಸುತ್ತಿರುವ ವ್ಯಕ್ತಿಗಳನ್ನು ದೂರಸರಿಸುತ್ತಿರುವ ಶಕ್ತಿ ಯಾವುದು ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತಿದ್ದೇನೆ’ ಎನ್ನುತ್ತಾನೆ.

 ಆನಂದ್ ಧಾರವಾಡ ಬಿಟ್ಟು ದ್ವಾರಕೆಯಲ್ಲಿ ಕೆಲಸ ಪಡೆಯುತ್ತಾನೆ. ಇತ್ತ ರಮೆಯೂ ಒಂದೇ ವರ್ಷದಲ್ಲಿ ಜೋಧಪುರವನ್ನು ಬಿಡುತ್ತಾಳೆ.  ವಸಂತ ಕೇಂಬ್ರಿಜ್ ನಿಂದ ಡಾಕ್ಟರೇಟ್ ಪದವಿ ಪಡೆಯುತ್ತಾನೆ. ಉಮಾಳು ಹೊಸದಾಗಿ ಸ್ಥಾಪಿತವಾಗಿರುವ ಶಿಶುವಿಹಾರಕ್ಕೆ ಮುಖ್ಯೋಪಾಧ್ಯಾಯಿನಿ ಆಗುತ್ತಾಳೆ. ಅಲ್ಲಿನ ಪುಟಾಣಿಗಳನ್ನು ಕಂಡು ‘ಇವರೆಲ್ಲ ನನ್ನ ಮಕ್ಕಳೇ ಆಗಿದ್ದರೆ..’ ಎಂದು ಯೋಚಿಸುತ್ತಾಳೆ. ವಸಂತನ ನೆನಪಾಗುತ್ತದೆ.  ತಕ್ಷಣ ಎಚರ್‍ಚಗೊಂಡು ಮಕ್ಕಳೊಡನೆ ಸೇರುತ್ತಾಳೆ. ಇತ್ತ ಜಗದಂಬಾ ಮದುವೆಯಾಗಿ ಹೈಸ್ಕೂಲಿನಲ್ಲಿ ಶಿಕ್ಷಕಿಯಾಗುತ್ತಾಳೆ. 

ಹೀಗೆ ಕಾಲೇಜಿನಲ್ಲಿ ಒಟ್ಟಿಗೆ ಕಾಲಕಳೆದು, ಆತ್ಮೀಯರಾದರೂ, ಪ್ರೀತಿ-ಪ್ರೇಮ ಬೆಳೆದರೂ  ದೂರವಾದದ್ದು, ಬೇರೆ ಉದ್ಯೋಗವನ್ನು ಹುಡುಕಿಕೊಂಡಿದ್ದು,  ಅವರವರ ಜೀವನ ಕಟ್ಟಿಕೊಂಡಿದ್ದನ್ನು ಈ ಕಾದಂಬರಿ ಮನಮುಟ್ಟುವಂತೆ ಚಿತ್ರಿಸಿದೆ. ಮಿತ್ರರನ್ನು ಅಗಲೇಲೇಬೇಕಾದ ಸ್ಥಿತಿ ವಿದ್ಯಾಭ್ಯಾಸದ ನಂತರ ಎದುರಾಗುತ್ತದೆ. ಆದರೆ ಇಲ್ಲಿ ಎಲ್ಲರೂ ಪ್ರೀತಿ-ಪ್ರೇಮದ ಬಲೆಯಲ್ಲಿ ಸಿಲುಕಿದ್ದರೂ ಅದು ಅವರನ್ನು ಒಂದುಗೂಡಿಸದೆ ದೂರ ಸರಿಯುವಂತೆ  ಮಾಡಿದ್ದು ಮಾತ್ರ ನಿಜಕ್ಕೂ ವಿಪರ್ಯಾಸ.  ಈ ಸರಳ, ಸುಂದರ ಕಾದಂಬರಿ ನಮ್ಮನ್ನು ಓದಿಸಿಕೊಂಡು ಹೋಗುವಲ್ಲಿ ಯಶಸ್ವಿಯಾಗಿದೆ. 

- ದತ್ತಾತ್ರೇಯ ಹೆಗಡೆ, ಶಿವಮೊಗ್ಗ 

......................................


Comments

Popular posts from this blog