ತುಂಟ ಕಿರುನಗೆ ಮೂಡಿಸುವ
‘ಸೆಲ್ಫೀ’
ಸಹಜ ಹಾಸ್ಯದ, ವಿನೋದ ಶೈಲಿಯ, ವಿಶಿಷ್ಟ ಜೀವಂತಿಕೆಯ ಲೇಖನಗಳ ಗುಚ್ಛ ಸೆಲ್ಫೀ. ಬರಹಗಾರ್ತಿ ನಳಿನಿ ಭೀಮಪ್ಪ ಸ್ಫಟಿಕ ಶುದ್ಧ ಹಾಸ್ಯದ ಮೂಲಕ ಜೀವನದಲ್ಲಿನ ದಿನನಿತ್ಯದ ಆಗುಹೋಗುಗಳನ್ನು, ಅನುಭವಿಸಿದ ಸಂಗತಿಗಳನ್ನು ವಕ್ರನೋಟದ ಮೂಲಕ ನಿರೂಪಿಸಿದ್ದಾರೆ. ಅವರ ಸರಳ ಶಬ್ದದ, ಬರವಣಿಗೆಯ ಕೌಶಲ್ಯ ಅಚ್ಚರಿ ಮತ್ತು ಸಂತಸವನ್ನುಂಟು ಮಾಡುತ್ತದೆ.
‘ನಮ್ದೇ ಪ್ರಪಂಚ’ ಎಂಬ ಅಡಿಬರಹವನ್ನು ಕೃತಿಗೆ ಕೊಟ್ಟಿದ್ದಾರೆ. ನಿಜಕ್ಕೂ ಇದು ಹೌದು. ನಮ್ಮ ಸುತ್ತಮುತ್ತಲಿನ ಪ್ರಪಂಚಲ್ಲಿ ನಡೆಯುವ ವಿವಿಧ ಘಟನೆಗಳನ್ನು ಸಹಜ ಹಾಸ್ಯದ ಮೂಲಕ ಕಟ್ಟಿಕೊಟ್ಟಿದ್ದಾರೆ. ಬಹುತೇಕ ಎಲ್ಲರೂ ಇಂತಹ ಘಟನೆಗಳನ್ನು ಅನುಭವಿಸಿರುತ್ತಾರೆ. ಅದನ್ನೇ ಹಾಸ್ಯದ ಮೂಲಕ, ಕಿರುನಗೆ, ತುಂಟನಗೆ ಮೂಡುವಂತೆ ಬರೆದಿದ್ದಾರೆ.
ಕೃತಿಯಲ್ಲಿ ೩೨ ಕಿರು ನಗೆಬರಹಗಳಿವೆ. ಇವು ಒಂದಕ್ಕಿಂತ ಛೊಲೊ ಇವೆ. ಪುಸ್ತಕವನ್ನು ಓದಲು ಆರಂಭಿಸಿದರೆ ಒಂದೇ ಸಲಕ್ಕೆ ಎಲ್ಲವನ್ನೂ ಓದಿಸಿಕೊಂಡು ಹೋಗುತ್ತವೆ. ಧಾರವಾಡ ಶೈಲಿಯ ಕನ್ನಡದಲ್ಲಿ ಲೇಖನಗಳು ಇವೆ.
ಪಟ ತೆಗೆಯೋಣ ಬಾರಾ, ಮಾತಾಡ್ ಮಾತಾಡ್ ಮಲ್ಲಿಗೆ, ನೀ... ರಿರಲು ಮನೆಯಲ್ಲಿ..., ಟ್ರಯಲ್ ರೂಂ, ಮುಖವಾಡಗಳ ಕಳಚುವ ಮುಖಪುಸ್ತಕ, ತೆಲಿ ಇರೋ ಮಟ, ಅಂತೂ ಇಂತೂ... ಮೊದಲಾದ ಬರಹಗಳು ವಿಶಿಷ್ಟವಾಗಿವೆ. ನಾವು ಅನುಭವಿಸಿದ್ದೆಲ್ಲಾ ಅವುಗಳಲ್ಲಿದೆ.
ಕೃತಿಯ ಹೆಸರಿರುವ ಸೆಲ್ಫೀ ಬಗ್ಗೆ ಇರುವ ಪಟ ತೆಗೆಯೋಣ ಬಾರಾ ಅಧ್ಯಾಯದಲ್ಲಿ ಸೆಲ್ಫಿಯ ಹುಚ್ಚನ್ನು ನಿರೂಪಿಸಿದ್ದಾರೆ. ಯಾವುದೇ ಕೆಲಸಕ್ಕೆ ಹೋದರೂ (ಶಾಪಿಂಗ್, ಹೊಸ ಬಟ್ಟೆ ಧರಿಸಿದರೆ, ಹುಟ್ಟಿದ್ದು, ವಿದ್ಯಾಭ್ಯಾಸ, ಮದುವೆ, ಮಕ್ಕಳನ್ನು ಹಡೆದಿದ್ದು, ಆ ಮಕ್ಕಳು ತೆವಳಿದ್ದು., ಅಂಬೆಗಾಲಿಕ್ಕಿದ್ದು) ಎಲ್ಲವನ್ನೂ ಫೋಟೊದ ಹುಚ್ಚಿನಲ್ಲಿ ತೆಗೆದು ಮೊಬೈಲಿಗೆ ಅಪ್‌ಲೋಡ್ ಮಾಡುವುದನ್ನು ಮರೆಯುವುದೇ ಇಲ್ಲ. ದಸರಾದಲ್ಲಿ ೯ ದಿನ ಒಂದೊಂದು ಬಣ್ಣದ ಸೀರೆ ಉಟ್ಟು ಅದನ್ನೇ ಮಕ್ಕಳ ಹತ್ತಿರ ಫೋಟೊ ತೆಗೆಸಿಕೊಳ್ಳುವ, ಅವರು ಇದನ್ನು ವಿಶ್ಲೇಷಿಸುವ ಪರಿಯನ್ನು ಮನಸೆಳೆಯುವಂತೆ ವಿವರಿಸಿದ್ದಾರೆ.
ನೀ.. ರಿರಲು ಮನೆಯಲ್ಲಿ ಎಂಬ ಬರಹದಲ್ಲಿ ಮನೆಯಲ್ಲಿ ನೀರಿನ ಸಮಸ್ಯೆಯನ್ನು, ನೀರು ಹಿಡಿದಿಟ್ಟುಕೊಳ್ಳಲು ಹರಸಾಹಸಪಡುವುದು, ಪಕ್ಕದ ಮನೆಯವರು ನಲ್ಲಿಗೆ ಬರುವುದು, ಮನೆಯಲ್ಲಿನ ಎಲ್ಲಾ ಪಾತ್ರೆಗಳಲ್ಲೂ ತುಂಬಿಡುವುದು, ಕುಡಿಯುವ ನೀರು ವಾರ, ಹದಿನೈದು ದಿನಕ್ಕೊಮ್ಮೆ ಬರುವುದು, ಅದನ್ನು ಹಿಡಿಯಲು ಕಾಯುವುದು... ಇದನ್ನು ಓದಿದಾಗ ನಮ್ಮ ಮನೆಯಲ್ಲೇ ನಡೆದಂತೆ ಭಾಸವಾಗುತ್ತದೆ. ಲೇಖಕಿ ಚಿತ್ರದುರ್ಗದಲ್ಲಿದ್ದಾಗ ಅನುಭವಗಳನ್ನು ಅದರಲ್ಲಿ ಬರೆದಿದ್ದಾರೆ.
ತಲೆನೋವಿನ ವಿಚಾರವಾಗಿ ನಗೆ ಬರಿಸುವ ‘ತೆಲಿ ಇರೋ ಮಟ’ವನ್ನು ಸುಂದರವಾಗಿ ನೇಯ್ದಿದ್ದ್ದಾರೆ. ತಮಗೆ ಬರುತ್ತಿದ್ದ ತಲೆ ನೋವನ್ನು ಕುಟುಂಬದವರೆಲ್ಲಾ ಗಂಭೀರವಾಗಿ ತೆಗೆದುಕೊಂಡಿದ್ದು, ಆಗ ಖೋಲಿಯಲ್ಲಿ ಮಲಗುವುದು, ಗಂಡ ಆಗಾಗ ಬಂದು ಇಣುಕುವುದು, ಮಕ್ಕಳು, ಗಂಡ ಗುಳಿಗೆ ಹಿಡಿದುಕೊಂಡು ಬರುವುದವಿವರಿಸುತ್ತಾ, ತಲೆ ನೋವು ಬಂದ ದಿನ ರಾಜಮರ್‍ಯಾದೆ ಸಿಗುತ್ತದೆ. ಅಡಿಗೆ ಮನೆಯಿಂದ ಅವತ್ತು ಮುಕ್ತಿ ಸಿಗುತ್ತದೆ ಎಂದು ಹೇಳಿ ನಗು ಬರಿಸುತ್ತಾರೆ. ಎಲ್ಲಿಗೆ ಹೋಗುವುದಿದ್ದರೂ ಮಾತ್ರೆಗಳನ್ನು ಇಟ್ಟುಕೊಳ್ಳುವುದು ರೂಢಿಯಾಗಿದೆ. ತಲೆನೋವಿಗೆ ಯಾರಾದರೂ ಮದ್ದು ಕಂಡುಹಿಡಿದರೆ ಅವರ ಫೋಟೊ ಇಟ್ಟು ಪೂಜೆ ಮಾಡುವೆ ಎನ್ನುವ ಗಂಡನ ಪರಿಸ್ಥಿತಿಯನ್ನು ತಿಳಿಹಾಸ್ಯದ ಮೂಲಕ ಸುಂದರವಾಗಿ ತೆರೆದಿಟ್ಟಿದ್ದಾರೆ.
ಕೃತಿಯ ತುಂಬಾ ಇಂತಹುದೇ ಬರಹಗಳಿವೆ. ಮುನ್ನುಡಿ ಬರೆದಿರುವ ಹಾಸ್ಯ ಬರಹಗಾರ ಎನ್ ರಾಮನಾಥ, ಲೇಖಕಿ ಮುಂದಿನ ಪೀಳಿಗೆಯ ಭರವಸೆಯ ಹಾಸ್ಯ ಲೇಖಕಿ ಎಂದಿದ್ದಾರೆ.
ಒಟ್ಟಿನಲ್ಲಿ, ಅನೇಕ ವಿಶೇಷ ಹೊಳಹುಗಳ ಮೂಲಕ ಕೃತಿಯನ್ನು ಶ್ರೀಮಂತಗೊಳಿಸಿದ್ದಾರೆ. ಬರವಣಿಗೆಯ ಕ್ಷೇತ್ರಕ್ಕೆ ಆಕಸ್ಮಿಕವಾಗಿ ಇಳಿದೆ ಎಂದು ಲೇಖಕಿಯೇ ಹೇಳಿಕೊಂಡಿದ್ದಾರೆ. ಅದು ಅವರ ಕೈಯನ್ನು ಚೆನ್ನಾಗಿ ಹಿಡಿದಿದೆ ಎನ್ನುವುದನ್ನು ಕೃತಿಯೇ ನಿರೂಪಿಸುತ್ತದೆ.
-ದತ್ತಾತ್ರೇಯ ಹೆಗಡೆ, ಶಿವಮೊಗ್ಗ
.............................

Comments
Post a Comment