ಪ್ರೀತಿಯಿಂದ ಓದುಗನನ್ನು ಕರಗಿಸುವ 

‘ಪ್ರೀತಿಯ ಚಿಟ್ಟೆಯ ಬೆನ್ನೇರಿ’ 



‘ಪ್ರೀತಿಯ ಕಿಟ್ಟೆಯ ಬೆನ್ನೇರಿ’ ಇದು ಕವಯತ್ರಿ ಮಂಗಳಾ ಎಂ. ನಾಡಿಗ್ ರಚಿಸಿರುವ  ಭಾವ ಕವಿತೆಗಳ ಸಂಕಲನ. ಇದರಲ್ಲಿ ಮೃದು ಮತ್ತು ಮಧುರವಾದ ಭಾವನೆಗಳ ಕವನಗಳಿವೆ. ಹೂವು, ಕಾಡು, ಪ್ರಕೃತಿ, ನದಿ, ಚಂದ್ರ, ಸೂರ್ಯ, ನೀಲಾಕಾಶ, ಮಗು, ಬೆಳದಿಂಗಳುಗಳಿಂದ ತುಂಬಿದ ರಮ್ಯಲೋಕವನ್ನು ತಮ್ಮದೇ ಭಾವನಾ ಲಹರಿಯಲ್ಲಿ ಸುಂದರವಾಗಿ ಚಿತ್ರಿಸಿದ್ದಾರೆ.

 ಇಲ್ಲಿ ಮಗುವಿದೆ, ಮೊಮ್ಮಗು ಇದೆ, ಅವರ ನಗುವಿದೆ, ಕೌಟುಂಬಿಕ ಮೌಲ್ಯವನ್ನು ನಿಷ್ಕಲ್ಮಶ ಪ್ರೀತಿಯಿಂದ ಉಳಿಸುವ, ಉಳಿಸುತ್ತಿರುವ ಹೆಣ್ಣುಮಕ್ಕಳ ಹೃದಯವಂತಿಕೆ ಇದೆ. ಸರಳ ಹೃದಯದ ತಾಯಂದಿರ ಪ್ರೇಮ, ಮಮತೆ, ಲಾಲನೆ -ಪಾಲನೆಗಳಿಂದ ಕೂಡಿದ ಕುಟುಂಬ ವ್ಯವಸ್ಥೆ ಇದೆ.  ಯಾವುದೇ ಕಾವ್ಯ ಸಿದ್ಧಾಂತಗಳು ಇಲ್ಲಿ ಕಂಡುಬರುವುದಿಲ್ಲ. ತನ್ನ ಪ್ರೀತಿಯಿಂದ ಓದುಗನನ್ನು ಕರಗಿಸುವ ಕವನಗಳು ಇಲ್ಲಿವೆ. ಸಹಜವಾದ ನಿಸರ್ಗದ ಕವನಗಳಿವೆ. ಈ ಕೃತಿಯಲ್ಲಿ ಒಟ್ಟು ೫೦ ಕವನಗಳಿವೆ.

 ತನ್ನ ನಲ್ಲನಿಗೆ ಒಲವಧಾರೆಯನ್ನು ತೆರೆಯುತ್ತ, ಸುತ್ತಮುತ್ತಲಿನ ಕತ್ತಲನ್ನು ಕಳೆದು ಬೆಳಕನ್ನು ನೀಡುವ ಹಣತೆಯ ಬೆಳಗನ್ನು, ಅದರ ಹೊಳಪನ್ನು ತನ್ನ ಇನಿಯನ ಕಣ್ಣಲ್ಲೇ ಕಾಣುವ ನಲ್ಲೆಯ ಕವನ ‘ಒಲವ ದಾರಿ’. ಇದರಲ್ಲಿ ಕವಯತ್ರಿ, ನಲ್ಲನ ಕಣ್ಣಿನ ಹೊಳಪು ಹಣತೆಯ ಬೆಳಕಿನಷ್ಟೇ ಪ್ರಖರವಾಗಿ ಆಕೆಗೆ ಕಾಣುತ್ತಿದೆ . ಅದಕ್ಕಾಗಿ ಆಕೆ ಹೇಳುತ್ತಾಳೆ ‘ನಿನ್ನ ಕಣ್ಣ ಹೊಳಪಿನಲ್ಲಿ ಹಣತೆಯು ತಾ ಬೆಳಗಿದೆ’ ಎಂದು.

‘ಕಾತರ’ ಎಂಬ ಕವನದಲ್ಲಿ ತನ್ನ ನಲ್ಲೆಗಾಗಿ ಆತ ಕಾದು ನಿಂತಿದ್ದಾನೆ. ಕೊಳದೊಳಗೆ ಕಲ್ಲೆಸೆಯುತ್ತಾ ಕುಳಿತಿದ್ದಾನೆ. ಬಹಳ ಹೊತ್ತಾದರೂ ಆಕೆ ಬಾರದೇ ಇದ್ದಾಗ ಅವನೊಳಗೇ ನೋವು ಕಾಣಿಸುತ್ತದೆ. ಅವನ ಮನವು ಉರಿವ ಸೂರ್ಯನ ತೆರದಲ್ಲಿ ಕೆಂಪಾಗುತ್ತದೆ. ಆತನಿಗೆ ತಾಳ್ಮೆಯಿಲ್ಲ, ಅವನ ಕೋಪನ್ನು ಹೇಗೆ ಸಹಿಸಿಕೊಳ್ಳಲಿ ಎಂದು ಯೋಚಿಸುತ್ತಾ ಬರುತ್ತಾಳೆ. ನಲ್ಲೆ ಬಂದಾಗ ಚಂದಿರನ ತಂಪು ಆತನಲ್ಲಿ ಕಂಡುಬರುತ್ತದೆ ಮತ್ತು ಆಕೆ ಆಡುವ ಮಾತುಗಳು ಸವಿ ಜೇನಿನ ಇಂಪಿನಂತೆ ಅನುಭವ ಕೊಡುತ್ತವೆ. 

‘ಸಾರ್ಥಕ’ ಕವನದಲ್ಲಿ ಮಳೆಯು ಭೂಮಿಗೆ ಬಿದ್ದಾಗ ಅದರ ಹನಿ ಸಾರ್ಥಕವಾಗುತ್ತದೆ. ಭೂಮಿ ಶುಚಿಯಾಗಿ, ತಂಪಾಗುತ್ತದೆ. ಬೆಂದಿದ್ದ ಭೂತಾಯಿಯ ಒಡಲು ಮುತ್ತಿನ ಸಿಂಚನದಿಂದ ನಳನಳಿಸುತ್ತದೆ. ಬಾಡಿದ್ದ ಎಲೆಗಳೆಲ್ಲ ಮೈಕೊಡವಿ ಎದ್ದು ನಿಂತು, ಹೊಸತನವನ್ನು ತುಂಬಿಕೊಳ್ಳುತ್ತವೆ. ಮಲೀನವನ್ನೆಲ್ಲಾ ತನ್ನೊಳಗಡಗಿಸಿ ಹೊಸ ನೀರನ್ನು ಹರಿಸುತ್ತದೆ. ಹೀಗೆಯೇ ನಮ್ಮ ಜೀವನವು ಮಲೀನವನ್ನೆಲ್ಲ ತೊಳೆದುಕೊಂಡು ಹೊಸ ಗುರಿಯ ಕಡೆಗೆ ಸಾಗಬೇಕು ಎಂಬ ಸಂದೇಶವನ್ನು ಈ ಕವನದ ಮೂಲಕ ಕಟ್ಟಿಕೊಡುತ್ತಾರೆ.

 ಮುದ್ದು ಮಗುವಿನ ತುಂಟಾಟ ಜೀವನವನ್ನು  ಸುಂದರವಾಗಿ ಚಿತ್ರಿಸಿರುವ ಕವನ ‘ಮುದ್ದು ಮಗಳು’  ಮಗುವನ್ನು  ದೇವನಿತ್ತ ವರವೆಂದು ಕರೆಯುವ ಕವಯತ್ರಿ, 

 ನಿದ್ದೆಯಲ್ಲು ನಗುವವಳು

ಎದೆಯನೊದ್ದು ನಿಲ್ಲುವವಳು

ಕಥೆಯ ಕೇಳಿ ಮಲಗುವವಳು

ಕನಸಿನಲೂ ಕನವರಿಸುವಳು

ನನ್ನ ಬಾಳ ಬೆಳಗಿದವಳು 

ಮನದ ನೋವ ಮರೆಸಿದವಳು

ಎಂದು ವರ್ಣಿಸುತ್ತಾರೆ. ಮಗುವಿನ ಮುಗ್ಧತೆ, ತುಂಟ ನಗೆ, ಕಿಲಾಡಿತನ ಈ ಕವನ ಸಂಕಲನದ ಅತ್ಯುತ್ತಮ ಕವನಗಳಲ್ಲೊಂದಾಗಿದೆ.  

  ‘ನಾಳೆಗೊಂದು  ಹಾಳೆ’ಯು  ಬದುಕನ್ನು ಸಂಭ್ರಮಿಸಲು ನಾಳೆಯನ್ನು ಉಳಿಸಿಕೊಳ್ಳಬೇಕು ಎನ್ನುವ ನೀತಿಯನ್ನು ಸಾರುತ್ತದೆ. ಹಿಂದಿನ ದಿನಗಳಲ್ಲಿ, ವರ್ಷದಲ್ಲೇ ಕಾಲ ಕಳೆಯದೆ ಈ ದಿನದ ನೆನಪನ್ನು ಹೊತ್ತು ನಾಳೆಯ ಚಿತ್ರಗಳನ್ನು ಬರೆಯಲು ಒಂದು ಹಾಳೆ ಇರಬೇಕು. ಹೊಸ ಕನಸನ್ನು ಜೀವಂತವಾಗಿಡಬೇಕು. ಅದನ್ನು ಸದಾ ಸ್ಮರಿಸುತ್ತಿರಬೇಕು. ಇದರಿಂದ ಮನಸ್ಸು ಹರುಷಕ್ಕಿಳಿಯುತ್ತದೆ ಎನ್ನುವುದು ಕವಯತ್ರಿಯ ಹೇಳಿಕೆ.

 ‘ನಗುತಲಿಹುದು ಕತ್ತೆ’ ಇದರಲ್ಲಿ ಪೆದ್ದುತನಕ್ಕೆ ಹೆಸರಾಗಿರುವ ಮತ್ತು ಬಯ್ಯಲು ಬಳಸಿಕೊಳ್ಳುವ ಕತ್ತೆಯು, ಮನುಷ್ಯ ಪ್ರತಿದಿನ ತನ್ನನ್ನೇ ಜರಿಯುವನು. ಇಂಥವನನ್ನು ನೋಡಿ ತಾನು ನಗಬೇಕಿತ್ತು, ಆದರೆ ತನ್ನನ್ನೇ ಪೆದ್ದು ಎಂದು ಕರೆಯುವುದರ ಬಗ್ಗೆ ಮಾತನಾಡುತ್ತದೆ.  

 ‘ಜಗಳಗಂಟಿ’ ಸ್ವಭಾವವನ್ನು ತೋರುವವಳ ಬಳಿ ಯಾರೂ ಎದುರಾಡಬಾರದು, ಸುಮ್ಮನಿದ್ದುಬಿಡಬೇಕು, ಏಕೆಂದರೆ ಅವಳ ಕೆಲಸವೇ ಜಗಳವಾಡುವುದು ಎನ್ನುವುದನ್ನು ವಿವರಿಸಿದ್ದಾರೆ. ‘ಜೇಡರ ಬಲೆ’ಯಲ್ಲಿ ತನ್ನ ಆಹಾರಕ್ಕಾಗಿ ಬಲೆ ನೇಯ್ದು, ಇನ್ನೊಂದು ಕೀಟವನ್ನು ಸಿಕ್ಕಿಬೀಳುವಂತೆ ಮಾಡುವ ಜೇಡ ಆ ಬಲೆಯಲ್ಲಿ ತಾನೇ ಸಿಕ್ಕಿಬಿದ್ದು ಉಸಿರು ಬಿಡುವುದನ್ನು ಚಿತ್ರಿಸಿದ್ದಾರೆ. ತನ್ನ ಕಲೆಯ ಬಲೆಯಲ್ಲಿ ತಾನೇ ಕೊನೆಗೊಮ್ಮೆ ಬಲಿಯಾಗುವುದರ ಸಂದೇಶವಿದೆ. . 

‘ಒಂಟಿ ಬಾನ ಹಕ್ಕಿ’ ಕವನ ನಂಬಿ ಮೋಸ ಹೋದವವರ ಕುರಿತಾಗಿದೆ. ಮೋಸ ಹೋದವರು ರೆಕ್ಕೆ ಮುರಿದ ಹಕ್ಕಿಯಂತೆ ಆಗಿದ್ದಾರೆ. ಕನಸು ಕಾಣಬಹುದು. ಹಾರುವ ಕನಸು ಕಾಣಬಹುದು, ಆದರೆ ಹಾರಲಾಗುವುದಿಲ್ಲ. ಯಾರನ್ನೂ ನಂಬುವ ಧೈರ್ಯವಿಲ್ಲ. ಹಾರಾಡಬೇಕೆಂದರೂ  ಆಳ, ಅಗಲ, ಜಗವನರಿತು ಮರುಗುತ್ತಿದೆ. ಈ ನೋವುಗಳೆಲ್ಲ ಸೆರಗಲ್ಲಿ ಅಡಗಿ ಕುಳಿತಿವೆ. ಕೊಡವಿ ಮೇಲೆಳಲಾಗದಷ್ಟು ನೋವು ಸೇರಿಕೊಂಡಿದೆ. ಆದರೂ ಚಿಗುರಬೇಕು, ಬದುಕಬೇಕು ಎಂಬ ಛಲದ ಸಾರಾಂಶ ಹೊಂದಿದೆ.

ಹಣತೆ’ಯಲ್ಲಿ  

‘ಹಚ್ಚಬೇಕು ಹಣತೆಯನ್ನು

ಜಗವು ಮೆಚ್ಚುವಂತೆ

ಉರಿಯಬೇಕು ದಿನವು ಅದು

ದಿಕ್ಕು ತೋರುವಂತೆ

ಎನ್ನುವ ಮೂಲಕ ಜೀವನ ಎಂಬ ಹಣತೆಯನ್ನು ಎಣ್ಣೆ-ಬತ್ತಿ ಎಷ್ಟೇ ಗಾಳಿ ಬೀಸಿದರೂ ಹೊಂದಿಕೊಂಡು ಉರಿಯುವಂತೆ ಮಾಡಬೇಕು. ಗಂಡ- ಹೆಂಡತಿ ಎಂಬ ಜೋಡಿ ಹಣತೆ ಮಸಿಯ ಹಂಗು ತೊರೆದು ಸಮತೆಯಲ್ಲೇ, ಆರದೆ, ಅನವರತ ಬೆಳಗಬೇಕೆನ್ನುವ ಸಂದೇಶ ಕೊಡುತ್ತಾರೆ.  

ಒಟ್ಟಿನಲ್ಲಿ ಈ ಕವನ ಸಂಕಲನದಲ್ಲಿ, ಸತತ ಅತ್ಯಾಚಾರಕ್ಕೊಳಗಾಗುತ್ತಿರುವ ಭೂತಾಯಿ,  ಪ್ರಕೃತಿಯ ನಿತ್ಯ ವಿದ್ಯಮಾನ, ತಾಯಿ- ಮಕ್ಕಳ ನವಿರು ಪ್ರೀತಿ, ಹೆಣ್ಣುಮಕ್ಕಳ ಸೀರೆಯ ಪ್ರೀತಿ, ಹೊಸಬಗೆಯ ಬಟ್ಟೆ ಧರಿಸಲು ಹವಣಿಸುವ ತರುಣಿಯರು, ಸುಂದರವಾದ ಪ್ರಕೃತಿ ವರ್ಣನೆ, ಸಂಜೆಯ ರಂಗು,  ಹದಿಹರಯದ ಹುಡುಗಿಯರನ್ನು ಕೋಲ್ಮಿಂಚಿನಂತಹ ನೋಟದಿಂದ ಸೆಳೆಯುವುದು, ಒಲಿದ ಹೃದಯಗಳ ಮಧುರ ಭಾವ, ಹೆಂಡತಿಯ ಮುನಿಸು, ಒಲವಿನವರ ನಡುವೆ ಒಡಕು ಮೂಡುವುದು.... ಹೀಗೆ ಹತ್ತಾರು ವಿಷಯಗಳ ಕುರಿತು ಮನಗೆಲ್ಲುವ ಕವಿತೆಗಳಿವೆ.

-ದತ್ತಾತ್ರೇಯ ಹೆಗಡೆ, ಶಿವಮೊಗ್ಗ  

....................................

 



 


Comments

Popular posts from this blog