ವ್ಯಕ್ತಿಗೆ ಶಾಂತಿ, ಆನಂದಗಳನ್ನು ಕಲ್ಪಿಸುವ
‘ಕಲಾ ಸಿದ್ಧಾಂತ’
ವಿ. ಕೃ. ಗೋಕಾಕ್ ಅವರ ಮಹತ್ವದ ಕೃತಿಗಳಲ್ಲಿ ‘ಕಲಾ ಸಿದ್ಧಾಂತ’ ವೂ ಒಂದು. ಈ ಕೃತಿಯು ಕಲೆಗೆ ಮತ್ತು ಅದರ ರಸಾಸ್ವಾದನೆ, ಕಲೆಯಿಂದಾಗವ ಉಪಯೋಗ, ಅದು ಸಾಮಾನ್ಯ ಮನುಷ್ಯನ ಮೇಲೆ ಬೀರುವ ಪ್ರಭಾವಗಳ ಕುರಿತಾದದ್ದು. ಸಾಹಿತ್ಯಾಭ್ಯಾಸಿಗಳಿಗೆ ಮಾರ್ಗದರ್ಶಿ ಕೃತಿ. ಕಲಾ ಸಿದ್ಧಾಂತದಲ್ಲಿ ಜೀವನ ಅನುಭವದಿಂದ ಪ್ರಜ್ಞೆಯು ಪರಿಶುದ್ಧವಾಗಿ, ಸ್ವಾರ್ಥವನ್ನೆಲ್ಲ ಅಳಿದು, ವ್ಯಕ್ತಿಯು ಶಾಂತಿ, ಆನಂದಗಳನ್ನು ಅನುಭವಿಸುವುದರ ಕುರಿತಾಗಿ ಇದೆ.
ಜನರ ಅಂತಃಪ್ರಜ್ಞೆಗೆ ಉಚಿತ ಸಂಸ್ಕಾರಗಳನ್ನು ಕೊಡುವುದೇ ಕಲಾಕಾರನ ಕಾರ್ಯವಾಗಿದೆ. ವಿವಿಧ ಪ್ರಕಾರಗಳ ಕಲೆ ಮತ್ತು ಸಾಹಿತ್ಯವನ್ನು ಓದಿದಾಗ ಅವನ ಪ್ರಜ್ಞೆಗೆ ವಿವಿಧ ಸಂಸ್ಕಾರಗಳು ಒದಗಿ ಬರುತ್ತವೆ. ಈ ಪ್ರಜ್ಞೆಯು ಅದ್ಭುತವಾಗಿ ವಿಕಾಸಗೊಳ್ಳಲು ಅನುಕೂಲವಾಗಲು ಬೇರೆ ದೇಶ, ಜನಾಂಗಗಳನ್ನಾಗಲಿ, ಆ ಕುರಿತು ಬರೆದ ನಾಟಕ, ಕಾದಂಬರಿಗಳನ್ನು ಜನರು ಓದುತ್ತಾರೆ. ಭಾರತೀಯ ಮತ್ತು ವಿದೇಶೀಯ ಕಾವ್ಯಗಳನ್ನು ಓದಿದರೂ ಈ ಚಿತ್ತವಿಕಾಸ ಸಾಮಾಜಿಕನಿಗೆ ಸಾಧ್ಯವಾಗುತ್ತದೆ. ಒಟ್ಟಿನಲ್ಲಿ, ಕಲಾಕಾರ ಬೆಳಗುವ ಹೊಸ ಪ್ರಕಾಶವನ್ನು ಅನುಭವಿಸಿ ವ್ಯಕ್ತಿಯು ಉದ್ದೀಪ್ತನಾಗುತ್ತಾನೆ. ಇದನ್ನು ಈ ಕೃತಿಯಲ್ಲಿ ಮನೋಹರವಾಗಿ ಲೇಖಕರು ಚಿತ್ರಿಸಿದ್ದಾg.
ಪ್ರಪಂಚದ ಇಲ್ಲವೇ ಒಂದು ವಸ್ತುವಿನ ಅನಂತತೆಯನ್ನು ಕಲಾಕಾರ ತೋರಿಸಿದಾಗ ವ್ಯಕ್ತಿಯ ಪ್ರಜ್ಞೆಯು ಪ್ರಕಾಶದಿಂದ ತುಂಬುತ್ತದೆ. ಹೀಗೆ ವ್ಯಕ್ತಿಯ ಹೃದಯದಲ್ಲಿ ವಿವಿಧ ರಸಸ್ಥಿತಿಗಳು ಬೆಳೆಯುವುದನ್ನು ಇಲ್ಲಿ ವಿವರಿಸಿದ್ದಾರೆ. ಕಲೆಯು ಕಾಲದ ಗರ್ಭವನ್ನು ಸೀಳಿ ಅದರೊಳಗಿಂದ ಅನಂತತೆಯ ದರ್ಶನವನ್ನು ಪಡೆದು, ಮತ್ತೆ ಕಾಲಕ್ಕೆ ಅಧೀನವಾದ ವಸ್ತು, ಸನ್ನಿವೇಶಗಳ ದ್ವಾರವಾಗಿಯೇ ಕಾಣಿಸಿಕೊಂಡ ಅನಂತತೆಯನ್ನು ಹೆಚ್ಚಿಸಲು ಹವಣಿಸುತ್ತದೆ. ಚಿತ್ತವೃತ್ತಿಯಲ್ಲಿ ಸ್ಥೈರ್ಯ ಹಾಗೂ ಶಾಂತಿ ಇರದೆ ಉತ್ತಮ ಕಲೆಯು ಹುಟ್ಟಲಾರದು. ಕಲಾಪುರುಷನು ಪಡೆದ ಸೂಕ್ಷ್ಮ ಅನುಭವ, ಅವನು ಕಂಡ ಹೊಸ ನೋಟ, ಅವನು ಶೋಧಿಸಿದ ಹೃದಯವಂತಿಕೆ, ಚಲನವಲನಗಳು, ಭಾವನೆಗಳನ್ನು ಮತ್ತು ಅವನು ಚಿತ್ರಿಸಿರುವ ರೀತಿಯು ಸಾಮಾಜಿಕ ಅಂತಃಕರಣವನ್ನು ಮುಟ್ಟಿದಾಗ ಹೊಸದೊಂದು ಬೆಳಕನ್ನು ಅದು ನೀಡುತ್ತದೆ. ಇದೇ ಕಲೆಯ ಶೈಕ್ಷಣಿಕ ಪ್ರಕ್ರಿಯೆ ಆಗಿರುತ್ತದೆ.
ಕಲೆಯ ಇನ್ನೊಂದು ಕಾರ್ಯವೆಂದರೆ, ಜೀವನದೆಡೆಗೆ ಸಾಮಾಜಿಕ ವ್ಯಕ್ತಿಯನ್ನು ಒಯ್ಯುವುದು. ಅವನ ಅಂತಃಕರಣವನ್ನು ಮುಟ್ಟಿ ಅದನ್ನು ಮೇಲೆ ಎತ್ತುವಂತೆ ಮಾಡುವುದು. ಜೀವನದ ಚಿತ್ರಣದಿಂದ ಆಗಲಿ, ಸೂಚನೆಯಿಂದ ಆಗಲಿ, ಭಾವನಾಮಯ ನಿರೂಪಣೆಯಿಂದಾಗಲಿ, ಹಿರಿಯ ಜೀವನದ ಅನುಭವವನ್ನು ತಂದು ಕೊಡುವುದೇ ಕಲೆಯ ಮುಖ್ಯ ಕಾರ್ಯವಾಗಿದೆ. ಕಲೆಯ ಮತ್ತೊಂದು ಪ್ರಮುಖ ಕೆಲಸವೆಂದರೆ- ಪ್ರಚಾರ. ರಸ, ಅಲಂಕಾರ, ಅರ್ಥ, ಧ್ವನಿ, ಪ್ರಚಾರ ಇವು ಕಲೆಯ ಐದು ಅಂಗಗಳು. ಇದು ಐದು ದೇವತೆಗಳ ವಾಹನವಿದ್ದಂತೆ. ಆನಂದದಿಂದ ರಸ ಉತ್ಪತ್ತಿಯಾದರೆ ಅವಳಿ -ಜವಳಿಯಾದ ಸೌಂದರ್ಯದ ಮೂಲಕ ರಸನಿರೂಪಣೆಯನ್ನು ಯಶಸ್ವಿಯಾಗಿ ಮಾಡಲು ಅಲಂಕಾರವು ಅವಕಾಶ ಕೊಡುತ್ತದೆ. ಜೀವನ ಅನುಭವಕ್ಕೆ ಇದು ವಿಸ್ತಾರವನ್ನು ತಲುಪಿಸಿಕೊಡುತ್ತದೆ. ಪ್ರತಿಯೊಂದು ಕಲೆಯಲ್ಲಿಯೂ ಈ ಐದು ಅಂಗಗಳು ಬೆರೆತುಕೊಂಡಿರುತ್ತವೆ. ಆಗ ವ್ಯಕ್ತಿಯ ಮನಸ್ಸು ಕಲೆಯ ಮೂಲಕ ಮನಸ್ಸಿನ ಒಲವನ್ನು ಸೆಳೆದುಕೊಳ್ಳುತ್ತದೆ. ಅದು ಸತ್ಯದರ್ಶನವಾಗುತ್ತದೆ.
ಯಾವುದೇ ಒಂದು ಕಲಾಕೃತಿಯಲ್ಲಿ ತಾತ್ವಿಕ ಅಂಶವು ನಮಗೆ ಗ್ರಾಹ್ಯವಾಗದಿದ್ದರೂ ಅದನ್ನು ಬದಿಗಿಟ್ಟು ಆಕೃತಿಯ ತಿರುಳನ್ನು ನಾವು ಆಸ್ವಾದಿಸಬಹುದು. ಕಲಾಕೃತಿಯ ತಿರುಳು ಅದರ ತಾತ್ವಿಕ ಅಂಶದಲ್ಲಿ ಇರುವುದಿಲ್ಲ. ಅದು ಕರುಣಿಸುವ ವ್ಯಕ್ತಿತ್ವ ದರ್ಶನದಲ್ಲಿ ಇರುತ್ತದೆ. ಇಂತಹ ದರ್ಶನ ಬೆಳಕಿನಂತೆ ಅರಗಿಸಿಕೊಳ್ಳುವುದು. ಯಾವುದೇ ಸ್ಥಿತಿಯಲ್ಲಿದ್ದರೂ ನಮಗೆ ಬೇಕೆನಿಸುತ್ತದೆ. ಶಿಲ್ಪಿಯು ಒಮ್ಮೆ ಕೆಲವು ಭಾವನೆಗಳನ್ನು ಅನುಭವಿಸಿದ ಮೇಲೆ ಅವುಗಳನ್ನು ಶಾಂತಚಿತ್ತನಾಗಿ ನೆನೆಯುತ್ತಾನೆ, ಪರೀಕ್ಷಿಸುತ್ತಾನೆ. ತಾನು ಕಂಡ ಜೀವನದ ಸಾಮ್ಯವೂ ಎಷ್ಟರಮಟ್ಟಿಗೆ ತನ್ನ ಕೃತಿಯಲ್ಲಿ ಇಳಿದು ಬಂದಿದೆ ಎಂಬುದನ್ನು ನೋಡಿ ಆನಂದಪಡುತ್ತಾನೆ. ಜೀವನದ ಅನುಭವವನ್ನು ಕಲೆಯಲ್ಲಿ ನಿರೂಪಿಸುತ್ತಾನೆ. ಇಂಥ ನಿರೂಪಣೆಯಲ್ಲಿ ಸಾಂದ್ರತೆ ಇದೆ, ಏಕಾಗ್ರತೆ ಇದೆ. ಶಾಶ್ವತತೆಯನ್ನು ಕಂಡುಹಿಡಿಯುವ ಮತ್ತು ಬೇರ್ಪಡಿಸುವ ಗುಣವಿದೆ. ಜೀವನವನ್ನು ಸತತವಾಗಿಯೂ ಪೂರ್ಣವಾಗಿಯೂ ನೋಡಿದಾಗ ಇಂತಹ ಕಲಾಸಿದ್ಧಿ ಸಾಧಿಸುತ್ತದೆ ಎಂದು ಲೇಖಕರು ಕಲೆಯ ಸಾಧಿಸುವಿಕೆಯ ಕುರಿತು ವಿವರಿಸುತ್ತಾರೆ.
ವಿವಿಧ ರಸಗಳಲ್ಲಿ ವ್ಯಕ್ತಿ ತನ್ಮಯನಾಗುವುದು ಸುಲಭದ ಕೆಲಸವಲ್ಲ. ಕಲಾಕಾರನಿಗೆ ಇದರ ಹದವು ಗೊತ್ತಿರುತ್ತದೆ. ಸಾಮಾನ್ಯನು ಇದನ್ನು ನೋಡಿ ಅರಿಯುತ್ತಾನೆ. ನವಿರಾಗಿ ಬಂದ ಆನಂದದಲ್ಲಿ ಆತ ಕಲೆಯನ್ನು ನೋಡಿ ಅದರಲ್ಲಿ ತಲ್ಲೀನಾಗುತ್ತಾನೆ. ಅವನ ಆನಂದ ಅವನ ಚಿತ್ತವನ್ನು ಪರಿಶುದ್ಧಗೊಳಿಸುತ್ತದೆ. ಒಬ್ಬ ಆಂಗ್ಲ ಕವಿ ಹೇಳುವಂತೆ ‘ಹೊಸ ಅನುಭವವು ಮನುಷ್ಯನನ್ನು ತನ್ಮಯಗೊಳಿಸುವುದರಿಂದ ಅವನ ಸ್ವಂತದ ವ್ಯಕ್ತಿತ್ವವೇ ನಕಾರಾತ್ಮಕ ಸ್ಥಿತಿಗೆ ಬರುತ್ತದೆ. ಪಾತ್ರದ ಸ್ಥಿತಿಯಿಂದ ಇನ್ನೊಂದು ಪಾತ್ರದ ಸ್ಥಿತಿಗೆ ಅನುಭವ ಸಂಚಾರದಲ್ಲಿ ಆತನಿರುತ್ತಾನೆ. ಅನಾಸಕ್ತ ಪ್ರಜ್ಞೆ ಅವನಲ್ಲಿ ಇರುವುದಿಲ್ಲ’.
ಜನಸಾಮಾನ್ಯರಿಗೆ ಕಲೆಯ ಸಂಸ್ಕಾರವಿರುತ್ತದೆ. ಆದ್ದರಿಂದ ಸುಂಸ್ಕೃತ ಸಮಾಜದಲ್ಲಿ ವ್ಯಕ್ತಿಗಳು ಕಾವ್ಯ ಪರಿಣತಮತಿಗಳಾಗಿರುತ್ತಾರೆ. ಕಾವ್ಯಶಾಸ್ತ್ರ ಅವರಿಗೆ ಸಹಜಸಿದ್ಧ್ದ ನೈಪುಣ್ಯವಾಗಿರುತ್ತದೆ. ವಿದ್ವಾಂಸರಾಗಿದ್ದ ಎ. ಆರ್ ಕೃಷ್ಣಶಾಸ್ತ್ರಿಯವರು ಹೇಳುವಂತೆ’ ಜನಸಾಮಾನ್ಯರಿಗೆ ವಿದೂಷಕ ಸಮ್ಮಿತವೂ ರುಚಿಸುತ್ತದೆ. ಗುಣಗಳು, ರೀತಿಗಳು, ಅಂಲಕಾರಗಳೂ ಅವರ ದಿನಬಳಕೆಯ ಸಂಪತ್ತಾಗಿರುತ್ತವೆ’. ಜನಸಾಮಾನ್ಯನು ಹುಣ್ಣಿಮೆಯ ಚಂದ್ರನಿಗೆ ಯಾವ ಕಲೆಯು ಎಲ್ಲೆಲ್ಲಿ ಇವೆ ಎಂಬುದನ್ನು ಕಾಣುತ್ತಾನೆ. ಮೌಲ್ಯಮಾಪನದಲ್ಲಿ ಲೋಪದೋಷಗಳಿಗೆ ಎಷ್ಟು ಬೆಲೆ ಕೊಡಬೇಕು ಎಂಬ ಅಭಿರುಚಿ ಸಹಜವಾಗಿ ಇರುತ್ತದೆ.
ಕಲಾ ಪ್ರಪಂಚದಲ್ಲಿಯೇ ಈ ಪ್ರಜ್ಞೆ ಅವನದಾಗಿರುವುದರಿಂದ ಪ್ರಪಂಚದಲ್ಲಿಯೂ ಅದರ ಪ್ರಯೋಜನವಿದೆ. ಯಾವ ಸಂದರ್ಭದಲ್ಲಿ ಹೇಗೆ ನಡೆದುಕೊಳ್ಳಬೇಕೆಂಬ ತಿಳಿವಳಿಕೆ ಅವನಲ್ಲಿ ಬೆಳೆದು ಬರುತ್ತದೆ. ವಿಚಾರ ಸಂಪತ್ತಿನಲ್ಲಿಯೂ, ಹೃದಯವಂತಿಕೆಯ ಐಶ್ವರ್ಯದಲ್ಲಿಯೂ, ಆಚಾರ ಮತ್ತು ವಿಚಾರದಲ್ಲಿಯೂ ವ್ಯಕ್ತಿಯು ಶ್ರೀಮಂತನಾಗುತ್ತಾನೆ.
ಒಟ್ಟಿನಲ್ಲಿ ಹೇಳುವುದಾದರೆ, ಕೋತಿ, ಕರಡಿಯಂತೆ ಅಡವಿಯಲ್ಲಿ ಬೆಳೆದ ಮನುಷ್ಯನಿಗೆ ಕ್ರಮೇಣ ಗ್ರಾಮೀಣನಾಗಿ, ನಾಗರಿಕನಾಗಿ, ಸಂಸ್ಕೃತಿವಂತನಾಗಿ ಬೆಳೆಯುತ್ತ ಬಂದಿರಲು ಕಲೆಯೇ ಕಾರಣ. ಅದು ಮನುಕುಲಕ್ಕೆ ಭೂಷಣಪ್ರಾಯವಾಗಿದೆ. ಸಂಸ್ಕೃತಿ ಮತ್ತು ಕಲೆಯ ಉಪಾಸನೆ ಬೆಳೆದು ಜಗತ್ತಿನ ತುಂಬೆಲ್ಲ ಮಾನವನು ಸಂಸ್ಕೃತಿವಂತನಾಗಿ, ಗುಣವಂತನಾಗಿ ಬೆಳೆಯುತ್ತಿದ್ದಾನೆ. ಸಾಹಿತ್ಯ ಮತ್ತು ಕಲೆಗಳಿಂದ ದೊರೆಯುವ ಪ್ರಯೋಜನವು ಅಷ್ಟಿಷ್ಟಲ್ಲ, ಇದು ಬ್ರಹ್ಮಾನಂದವನ್ನು ಕಲ್ಪಿಸುತ್ತದೆ. ಮನುಷ್ಯನ ದ್ವಿತಿಯ ಜನ್ಮವೇ ಕಲೆಯ ಮುಕ್ತಿ ಎಂದು ಲೇಖಕರು ಹೇಳುತ್ತಾರೆ.
- ದತ್ತಾತ್ರೇಯ ಹೆಗಡೆ, ಶಿವಮೊಗ್ಗ

Comments
Post a Comment