‘ಹೆಡ್ಡಪ್ಪ ಮತ್ತು ಸರ್ಕಾರಿ ಶಾಲೆ’
‘ ಹೆಡ್ಡಪ್ಪ ಮತ್ತು ಸರ್ಕಾರಿ ಶಾಲೆ’ ಇದು ಹಾಲಪ್ಪ ಬೆಳಗುತ್ತಿ ವಿರಚಿತ ಕಿರು ಕಾದಂಬರಿ. ಒಂದು ಕುಗ್ರಾಮದ ಮತ್ತು ನಾಗರಿಕ ಸಮಾಜದಿಂದ ದೂರವಿರುವ ಸರ್ಕಾರಿ ಶಾಲೆಗೆ ಮುಖ್ಯಾಧ್ಯಾಪಕನಾಗಿ ಬಂದ ಹೆಡ್ಡಪ್ಪ ಎಂಬಾತ ‘ದೇವಸ್ಥಾನದ ಗಂಟೆಗಿಂತ ಶಾಲೆಯ ಗಂಟೆ ಜೋರಾಗಿ ಕೇಳಬೇಕು’ ಎಂಬ ಉದ್ದೇಶ ಹೊಂದಿರುತ್ತಾನೆ. ಆದರೆ ಊರವರ ಮೌಢ್ಯ ಮತ್ತು ಅಜ್ಞಾನದಿಂದಾಗಿ ತನ್ನ ಸಮಸಮಾಜದ ಕನಸನ್ನು ನನಸು ಮಾಡಲು ಪ್ರಯತ್ನಿಸಿ ವಿಫಲತೆಯನ್ನು ಕಾಣುವುದು ಪ್ರಸ್ತುತ ಕೃತಿಯ ಸಾರಾಂಶ.
ಗ್ರಾಮೀಣ ಭಾರತದ, ವಿಶೇಷವಾಗಿ ಅಕ್ಷರ ಮತ್ತು ಅಜ್ಞಾನದ ನಡುವೆ ನಡೆಯುತ್ತಿರುವ ನಿರಂತರ ಸಂಘರ್ಷದ ಜೀವಂತ ಸಾಕ್ಷ್ಯಚಿತ್ರದಂತೆ ಈ ಕಾದಂಬರಿ ಕಂಡುಬರುತ್ತದೆ. ಜಾತಿಯ ಜಟಿಲತೆ ಹಳ್ಳಿಯಲ್ಲಿ ಮನೆಮಾಡಿಕೊಂಡಿರುವ, ವಿವಿಧ ಮೂಢನಂಬಿಕೆಗಳ ವಿವರ ಇದರಲ್ಲಿದೆ. ಮೌಢ್ಯದ ಕಪಿಮುಷ್ಠಿಯಲ್ಲಿರುವ ಮಂಗಾಪುರ ಎಂಬ ಒಂದು ಶಾಲೆಗೆ ಹೆಡ್ ಮಾಸ್ಟರ್ ಆಗಿ ಹಾಲಪ್ಪ ಎನ್ನುವವನು ವರ್ಗವಾಗಿ ಹೋಗುತ್ತಾನೆ. ಈತನಿಗೆ ತನ್ನ ಮೂಲವೇ ಗೊತ್ತಿರುವುದಿಲ್ಲ. ಏಕೆಂದರೆ, ಈತ ಅನಾಥ. ರಸ್ತೆಯಲ್ಲಿ ಸಿಕ್ಕ ಶಿಶುವಾಗಿರುತ್ತ್ತಾನೆ. ನಂತರ ಅನಾಥಾಶ್ರಮದಲ್ಲಿ ಬೆಳೆಯುತ್ತಾನೆ. ೪೦ರ ಆಸುಪಾಸಿನ ಯುವಕ ಹಾಲಪ್ಪ ಸಿಟಿಯಲ್ಲಿ ಸಿಕ್ಕಿದ್ದ ಶಿಕ್ಷಕ ಹುದ್ದೆಯನ್ನು ಬಿಟ್ಟು ಸಮಾಜದ ಕಟ್ಟಕಡೆಯ ಮಕ್ಕಳಿಗೆ ಶಿಕ್ಷಣ ನೀಡಿ ಅವರನ್ನು ಮುಂದೆ ತರಬೇಕು. ಸಮಾಜದಲ್ಲಿ ಹೊಸಗಾಳಿ ಬೀಸುವಂತೆ ಮಾಡಬೇಕೆಂಬ ಉದ್ದೇಶ ಹೊಂದಿ ಕುಗ್ರಾಮ, ಅಂಧಕಾರದಲ್ಲಿರುವ ಮಂಗಾಪುರಕ್ಕೆ ವರ್ಗಾವಣೆ ಮಾಡಿಸಿಕೊಂಡು ಬರುತ್ತಾನೆ.
ಆ ಊರಿನ ಗೌಡನ ಹೆಸರು ಹಾಲಪ್ಪ ಗೌಡ. ಅವನ ಸಮ್ಮುಖದಲ್ಲೇ, ಒಪ್ಪಿಗೆಯಲ್ಲೇ ಎಲ್ಲ ಕೆಲಸಗಳು ನಡೆಯಬೇಕು. ಇದು ಅಲ್ಲಿನ ನಿಯಮ. ಕೆಲವು ವರ್ಷಗಳವರೆಗೆ ಅಲ್ಲಿ ಸಕಲವೂ ಚೆನ್ನಾಗಿ ನಡೆಯುತ್ತದೆ. ಜೊತೆಗೆ ಹುಟ್ಟಿದ ವಾರದೊಳಗೆ ತಂದೆ- ತಾಯಿ ಕಳೆದುಕೊಂಡ, ಮದುವೆಯಾಗಿ ೧೦ ದಿನಕ್ಕೆ ಗಂಡನನ್ನು ಕಳೆದುಕೊಂಡ ಸೌಮ್ಯಾ ಎನ್ನುವವಳು ಗೌಡನ ತಂಗಿ. ವಿಧವೆಯಾದ ಈಕೆಯನ್ನು ಒಪ್ಪಿಗೆಯ ಮೂಲಕ ಸರಳವಾಗಿ ಕೈ ಹಿಡಿಯುವ ಮೂಲಕ ಸಮಾಜದ ಮೂಢನಂಬಿಕೆಗಳ ಕಪಾಳಕ್ಕೆ ಹೊಡೆಯುವಂತೆ ಜಾತಿ ಪದ್ಧತಿಯ ಕ್ರೌರ್ಯವನ್ನು ತೊಡೆದು ಹಾಕಲು ಯತ್ನಿಸುತ್ತಾನೆ.
ಊರಿನ ಶಾಲೆಯಲ್ಲಿ ಮಕ್ಕಳ ಹಾಜರಾತಿ ಹೆಚ್ಚಿಸುತ್ತಾನೆ. ಅಭಿವೃದ್ಧಿಯಾಗುತ್ತಿರುವಂತೆಯೇ, ಶಿಕ್ಷಿತರ ಸಂಖ್ಯೆ ಹೆಚ್ಚುತ್ತಿರುವಂತೆಯೇ ಈತನ ಬಗ್ಗೆ ಎಲ್ಲರಿಗೂ ಪ್ರೀತಿ, ವಿಶ್ವ್ವಾಸ ಹೆಚ್ಚತೊಡಗುತ್ತದೆ. ಈ ಮಧ್ಯೆ ಊರಿನ ಕೊನೆಯಲ್ಲಿದ್ದ ಮಾದಿಗ ಮರಿಯಣ್ಣನ ಮಗನನ್ನು ಕೊಲೆ ಮಾಡಿ ಶಾಲೆಯ ಬಳಿ ತಂದು ಹಾಕುತ್ತಾರೆ. ಈತ ತಾನು ಕೆಲಸ ಮಾಡುತ್ತಿದ್ದ ಮೇಲ್ಜಾತಿಯವನ ಮನೆಯ ಮಗಳನ್ನು ಪ್ರೀತಿಸಿದ್ದಕ್ಕಾಗಿ ಕೊಲೆ ಮಾಡಲಾಗುತ್ತದೆ. ಕುತ್ತಿಗೆ ಬಿಗಿದು, ವಿಷವನ್ನು ಕುಡಿಸಿ ಸಾಯಿಸುತ್ತಾರೆ. ಮೇಲ್ನೋಟಕ್ಕೆ ವಿಷ ಕುಡಿದು ಸತ್ತವರಂತೆ ಬಿಂಬಿಸುತ್ತಾರೆ. ಈ ಶವ ಹೂಳಲು ಊರೊಳಗೆ ಬಿಡುವುದಿಲ್ಲ. ಇದರಿಂದ ಊರ ಗಡಿಯಾಚೆಗೆ ಒಯ್ದು ಸುಟ್ಟು ಹಾಕಲಾಗುತ್ತದೆ. ನಂತರ ಕೊಲೆಗಾರರು ಈತನ ಸಾವು ಆಕಸ್ಮಿಕವೆಂದು, ಅದು ದೆವ್ವದ ಕಾಟವೆಂದು ಬಿಂಬಿಸಿ, ಇದರಿಂದ ಶಾಲೆಯ ಮಕ್ಕಳಿಗೆ ಮೈಮೇಲೆ ಬರುವಂತಾಗಿದೆ ಎಂದು ವದಂತಿ ಹಬ್ಬಿಸುತ್ತಾರೆ. ಇದನ್ನು ತಪ್ಪಿಸಲು ಶಾಲೆಯ ಪಕ್ಕದಲ್ಲಿರುವ ಮಂಗವ್ವನ ದೇವಸ್ಥಾನವನ್ನು ವಿಶಾಲವಾಗಿ ಕಟ್ಟಿಸಬೇಕು. ಮೈಮೇಲೆ ಬಂದಾಗ ಇದನ್ನೇ ಹೇಳಿದ್ದಾಗಿ ನಂಬಿಸುತ್ತಾರೆ. ಇದಕ್ಕೆ ಪಕ್ಕದ ಶಾಲೆಯ ಜಾಗವನ್ನು ಬಳಸಿಕೊಳ್ಳಬೇಕೆಂದು ಊರವರು ತೀರ್ಮಾನಿಸುತ್ತಾರೆ. ಇದನ್ನು ಹೆಡ್ಡಪ್ಪ ವಿರೋಧಿಸಿ ಶಾಲೆಯ ಜಾಗವನ್ನು ದೇವಸ್ಥಾನಕ್ಕೆ ಕೊಡಲಾಗದು. ಇದು ಸರ್ಕಾರಿ ಜಾಗ. ರಾಜ್ಯಪಾಲರ ಹೆಸರಿನಲ್ಲಿದೆ ಎಂದು ನಿರಾಕರಿಸುತ್ತಾನೆ
ಮೊದಮೊದಲು ಸಹಕಾರ ನೀಡಿದ ಊರವರು ದೇವರ, ದೇವಸ್ಥಾನದ ವಿಷಯ ಬಂದಾಗ ಈತನ ನಿಲುವು ವಿರೋಧಿಸುತ್ತಾರೆ. ಜೊತೆಗೆ ಶಾಲೆಯನ್ನು ಕೆಡವಿ ಅಲ್ಲಿ ಊರಿನ ಮಂಗವ್ವನ ದೇವಸ್ಥಾನವನ್ನು ವಿಶಾಲವಾಗಿ ಕಟ್ಟಿಸಲು ನಿರ್ಧರಿಸುತ್ತಾರೆ. ಹೆಡ್ಡಪ್ಪನ ಮೇಲೆ ಆರೋಪಗಳ ಸರಮಾಲೆ ಕಟ್ಟಿ, ದೂರು ನೀಡಿ ಊರಿನಿಂದಲೇ ವರ್ಗಾಯಿಸುವಂತೆ ಶಿಕ್ಷಣಾಧಿಕಾರಿಗೆ ಪತ್ರ ಬರೆಯುತ್ತಾರೆ.
ಹೆಡ್ಡಪ್ಪನ ವಿರುದ್ದ ಏನೇನು ಆರೋಪಿಸಿದರು, ಶಿಕ್ಷಣಾಧಿಕಾರಿ ತನಿಖೆಗೆ ಬಂದು ಏನು ಮಾಡಿದ, ತಪ್ಪನ್ನೇ ಮಾಡದ ಹೆಡ್ಡಪ್ಪನ ಸ್ಥಿತಿ ಏನಾಯಿತು, ಊರಿನ ಅಭಿವೃದ್ಧಿಗಾಗಿ ಪಣತೊಟ್ಟಿದ್ದರೂ ಏನೆಲ್ಲ ಕಷ್ಟ ಎದುರಿಸುವಂತಾಯಿತು. ಮೂಢನಂಬಿಕೆ ಹೇಗೆ ಇಂದಿಗೂ ಗ್ರಾಮಗಳಲ್ಲಿ ನೆಲೆಸಿದೆ, ಮೈಮೇಲೆ ದೆವ್ವ ಬರುತ್ತದೆ ಎಂಬ ನಾಟಕವನ್ನು ಆಡಿ ಹೇಗೆ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಇದರಿಂದ ಗ್ರಾಮಗಳ ಭವಿಷ್ಯ ಏನಾಗುತ್ತಿದೆ ಎನ್ನುವುದು ಇದರ ಮುಂದಿನ ಕಥಾ ಭಾಗ.
ಕೆಲವು ವರ್ಷಗಳ ನಂತರ ಹೆಡ್ಡಪ್ಪ ಒಮ್ಮೆ ಆ ಊರನ್ನು ನೋಡಲು ಮಂಗಾಪುರಕ್ಕೆ ಬಂದಾಗ ಆತನಿಗೆ ಶಾಲೆ ಕಾಣುವುದಿಲ್ಲ. ಮಕ್ಕಳಲ್ಲಿ ಕಲಿಕೆ ಇರುವುದಿಲ್ಲ. ಎಲ್ಲರೂ ಅಂಧಕಾರದಲ್ಲಿ ಬೆಂದು ಹೋಗಿರುತ್ತಾರೆ. ಬುದ್ಧಿವಂತಿಕೆಯನ್ನು ಕಳೆದುಕೊಂಡ ಊರು ಬಡವಾಗಿರುತ್ತದೆ. ದೇವಸ್ಥಾನದ ಗಂಟೆ ಜೋರಾಗಿ ಬಾರಿಸುತ್ತಿರುತ್ತದೆ. ಊರ ಹೊರಗೆ ಹೊಸ ಶಾಲೆ ಕಟ್ಟಲಾಗುತ್ತದೆ. ಆದರೆ ದೆವ್ವದ ಭೀತಿಯ ಹಿನ್ನೆಲೆಯಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ. ಎಲ್ಲ ಹಿರಿಯರು ಸತ್ತುಹೋಗಿರುತ್ತಾರೆ. ಹೆಡ್ಡಪ್ಪನಿಗೆ ಊರು ಮಾಡಿದ ಮೋಸಕ್ಕೆ ಇಡೀ ಊರೇ ಹಾಳಾಗಿ ಹೋಗುತ್ತದೆ.
ಕೌಶಲ್ಯ ಮತ್ತು ಶಿಕ್ಷಣವಿಲ್ಲದ ಸಮಾಜ ಮತ್ತು ಸಮುದಾಯ ಮೂಢನಂಬಿಕೆಗಳ ದಾಸರಾಗಿ ಆರ್ಥಿಕವಾಗಿ ಮತ್ತು ಬೌದ್ಧಿಕವಾಗಿ ಹೇಗೆ ದಿವಾಳಿಯಾಗುತ್ತದೆ ಎನ್ನುವುದಕ್ಕೆ ಈ ಕಥೆ ಅತ್ಯುತ್ತ್ತಮ ಉದಾಹರಣೆ. ‘ಜ್ಞಾನಕ್ಕಿಂತ ದೊಡ್ಡ ದೇವರು ಇಲ್ಲ, ಮೌಢ್ಯಕ್ಕಿಂತ ದೊಡ್ಡ ರೋಗ ಇಲ್ಲ’ ಎನ್ನುವುದನ್ನು ಸಾರುವ ಮೂಲಕ ಅತ್ಯುತ್ತಮವಾದ ಸಂದೇಶದ ಕೃತಿಯನ್ನು ಲೇಖಕರು ಕಟ್ಟಿಕೊಟ್ಟಿದ್ದಾರೆ.
- ದತ್ತಾತ್ರೇಯ ಹೆಗಡೆ, ಶಿವಮೊಗ್ಗ
......................................

Comments
Post a Comment