ಮಕ್ಕಳನ್ನು ಮನರಂಜಿಸುವ 


ಹನುಮಂತಣ್ಣ  ಕಥೆ ಹೇಳು



 ಮಕ್ಕಳಿಗೆ ಮಾನವ, ಪ್ರಾಣಿ -ಪಕ್ಷಿಗಳ ಮೈತ್ರಿ ಬಗ್ಗೆ ರಂಜನೀಯವಾಗಿ ಕಥೆ ಹೇಳುವುದು ಶಿವಮೊಗ್ಗದ ಮಕ್ಕಳ ಕಥೆಗಾರ ಮತ್ತೂರು ಸುಬ್ಬಣ್ಣ ಅವರ ವಿಶೇಷತೆ. ‘ಹನುಮಂತಣ್ಣ ಕಥೆ ಹೇಳು’ ಇದು ಅವರ ಮಕ್ಕಳ ಕೃತಿಗಳಲ್ಲಿ ಒಂದು. ರಾಮಾಯಣದ ಸುಂದರಕಾಂಡದಲ್ಲಿ ಬರುವ ಕಥೆಯನ್ನು ಇಲ್ಲಿ ಮಕ್ಕಳ ಕಥೆಯನ್ನಾಗಿ ಅವರು ಬರೆದಿದ್ದಾರೆ.

 ರಾವಣ ಸೀತೆಯನ್ನು ಲಂಕೆಗೆ ಕದ್ದೊಯ್ದ ನಂತರ ಅವಳನ್ನು ಹುಡುಕುತ್ತಾ ಹನುಮಂತ ಲಂಕೆಗೆ ತೆರಳುತ್ತಾನೆ. ಹಲವು ಪ್ರಯತ್ನಗಳ ನಂತರ ಅಲ್ಲಿ ಸೀತೆಯನ್ನು ಕಾಣುತ್ತಾನೆ. ಲಂಕೆಯಿಂದ ವಾಪಸ್ ಆಗಿ ತನ್ನ ಶೌರ್ಯದ ಬಗ್ಗೆ ಇತರ ವಾನರರಿಗೆ ಕಥೆಯನ್ನು ಹೇಳುತ್ತಾನೆ. ಈ ಕಥೆಯನ್ನೇ ಇಲ್ಲಿ ಮಕ್ಕಳ ಕಥೆಯನ್ನಾಗಿ ಪರಿವರ್ತಿಸಲಾಗಿದೆ. ಹನುಮಂತ ತನ್ನ ಸಾಹಸದ ಕಥೆಗಳನ್ನು ಹೇಳುವುದು, ಕಣ್ಣಾರೆ ಕಂಡು ಹಿಂತಿರುಗುವವರೆಗೂ ತಾನು ಅನುಭವಿಸಿದ ಕಷ್ಟ್- ನಷ್ಟಗಳನ್ನು ವಿವರಿಸುವುದು, ಹನುಮಂತನೇ ಕಥಾನಾಯಕನಾಗಿ ಆತನೇ ತನ್ನ ಬಾಯಿಂದಲೇ ವಿಷಯವನ್ನು ತಿಳಿಸುವುದು ಇಲ್ಲಿ ಬಹಳ ಪ್ರಾಮುಖ್ಯವಾಗಿ ಕಂಡುಬರುತ್ತದೆ.

ಇಲ್ಲಿನ ಕತೆ ಮಕ್ಕಳದ್ದಾದ್ದರಿಂದ, ಕೇಳುವರು ಚಿಕ್ಕ ಮಕ್ಕಳಾಗುವುದರಿಂದ ಎಷ್ಟು ಬೇಕೋ ಅಷ್ಟೇ ಕಥೆಯನ್ನು ಇಲ್ಲಿ ಲೇಖಕರು ವಿವರಿಸಿದ್ದಾರೆ. ಒಬ್ಬನೇ ಕಥೆ  ಹೇಳುತ್ತಾ ಹೋಗುವುದರಿಂದ ಬೇಸರ ಬರುವುದನ್ನು ತಪ್ಪಿಸಲು ಮಧ್ಯೆ ಇತರ ವಾನರರು ಪ್ರಶ್ನೆಗಳನ್ನು ಕೇಳುವಂತೆ ಇಲ್ಲಿ ಮಾಡಿದ್ದಾರೆ. ಇದು ಬಹಳ ಆಕರ್ಷಣೀಯ ಮತ್ತು ಹೊಸತನದ್ದು.  ಹಾಗಾಗಿ ಹನುಮಂತನ ಸಾಹಸದ ಕಥೆ ಮಕ್ಕಳಿಗೆ ತುಂಬಾ ಇಷ್ಟವಾಗುತ್ತದೆ.

ಹನುಮಂತ ಬುದ್ದಿವಂತರಲ್ಲಿ ಅತಿ ಶ್ರೇಷ್ಠ ಎನ್ನುವ ಮಾತಿದೆ. ಮಾತಿನಲ್ಲಿ ಚತುರನು. ಅವನಿಂದಲೇ ಕಥೆ ಹೇಳಿಸುವಲ್ಲಿ ಎಲ್ಲೂ ವಾದ, ಅರ್ಥ, ಧ್ವನಿ, ಭಾವದ ಲೋಪವಾಗದಂತೆ ಲೇಖಕರು ಹೆಚ್ಚು ಗಮನವಹಿಸಿದ್ದನ್ನು ಇಲ್ಲಿ ಗಮನಿಸಬಹುದು. ಒಳ್ಳೆಯ ಕಾರ್ಯಕ್ಕೆ ಹೊರಟಾಗ ಅಡೆತಡೆಗಳು ಎದುರಾಗುತ್ತವೆ. ಸಂಕಲ್ಪ ಹಿರಿದಾದಷ್ಟು ಧೈರ್ಯ ದೂರದೃಷ್ಟಿ ಸಿದ್ಧವಾಗುತ್ತದೆ. ನಮ್ಮ ಯಶಸ್ಸಿನ ಗುರಿಯನ್ನು ತಲುಪಿದಾಗ ಆದ ತೃಪ್ತಿ ಶ್ರಮವನ್ನು ಮರೆಸುತ್ತದೆ. ಶುದ್ಧ ಸಂಕಲ್ಪಕ್ಕೆ ದೈವ ಕೃಪೆ ಇದೆ. ನಮ್ಮ ಸಂಕಲ್ಪ ದೃಢವಾಗಿದ್ದರೆ ಅದಕ್ಕಾಗಿ ಮಾಡುವ ಪ್ರಾರ್ಥನೆಗಳು ಸಫಲವಾಗುತ್ತವೆ ಎನ್ನುವುದು ಈ ಕಥೆಯ ತಾತ್ಪರ್ಯವಾಗಿದೆ.

 ಹನುಮಂತ ಲಂಕೆಗೆ ಹಾರುತ್ತಿರುವಾಗ ದಾರಿ ಮಧ್ಯೆ ಸಮಸ್ಯೆಗಳು ಎದುರಾಗುತ್ತವೆ. ಪರ್ವತಗಳ ರಾಜ ಮೈನಾಕ, ವಿಕಾರ ರಾಕ್ಷಸಿ, ನೆರಳು ಹಿಡಿಯುವ  ರಾಕ್ಷಸಿಗಳಿಂದ ಚತುರೋಪಾಯದ ಮೂಲಕ ಪಾರಾಗುತ್ತಾನೆ.  ಲಂಕೆಯನ್ನು ಸೇರುವಾಗ ಬೆಕ್ಕಿನ ಮೈಯಷ್ಟೇ ತನ್ನ ದೇಹವನ್ನು ಕುಗ್ಗಿಸಿ ಸೇರಿದ್ದು, ಅಲ್ಲಿನ ಅರಮನೆ, ವೈಭವ, ಪುಷ್ಪಕ ವಿಮಾನ ನೋಡಿ ಆಶ್ಚರ್ಯಚಕಿತನಾದದ್ದು, ರಾವಣನ ವೈಭೋಗ, ಲಂಕೆಯ ಕಲಾ ಸಿರಿವಂತಿಕೆ, ನಿದ್ದೆಯಲ್ಲಿದ್ದ ರಾವಣನನ್ನು, ಮಂಡೋದರಿಯನ್ನು ನೋಡಿದ್ದು, ಎಷ್ಟು ಹುಡುಕಿದರೂ ಸೀತೆ ಕಾಣದಿರುವುದು, ಅಶೋಕವನಕ್ಕೆ ಹಾರಿದಾಗ ಅಲ್ಲಿ ಸೀತೆ ಗಿಡದ ಬುಡದಲ್ಲಿ ಕುಳಿತು ಯೋಚನಾಮಗ್ನಳಾಗಿರುವುದು, ಸುತ್ತಮುತ್ತ ರಾಕ್ಷಿಸಿಯರ ಕಾವಲು, ಅವರು ಪದೇ ಪದೇ ಸೀತೆಯನ್ನು ಮಾತಿನಿಂದ ಚುಚ್ಚುವುದು, ಹಿಂಸಿಸುವುದು, ಅದಕ್ಕೆ ಸೀತೆಯ ಪ್ರತ್ಯುತ್ತರ, ಅಸ್ತಿತ್ವಕ್ಕಾಗಿ ಭಯಪಡುವುದು, ವಿಭೀಷಣನ ಮಗಳು ತ್ರಿಜಟೆ ಬಂದು ಸೀತೆ ಪರ ಮಾತನಾಡುವುದು, ತನಗೆ ಬಿದ್ದ ಕನಸನ್ನು ಹೇಳುವುದು, ಅದರಲ್ಲಿ ರಾಮ, ಲಕ್ಷ್ಮಣ, ಸೀತೆಯ ಕನಸು ಕಾಣುವುದು, ಲಂಕೆಯನ್ನು ಸುಟ್ಟಂತೆ ಕಾಣುವುದು ಕನಸಿನಲ್ಲಿ ಕಂಡುಬರುತ್ತದೆ.

 ಅಶೋಕ ಮರದಲ್ಲಿ ಅಡಗಿ ಕುಳಿತು ಎಲ್ಲವನ್ನು ಗಮನಿಸುವ ವಾನರ ಕೊನೆಯಲ್ಲಿ ಸೀತೆಯನ್ನು ಕಂಡು ತಾನು ಶ್ರೀರಾಮನ ಬಂಟನೆಂದು ತನ್ನ ಪರಿಚಯ ಹೇಳಿಕೊಂಡರೂ ಸೀತೆಗೆ ನಂಬಿಕೆ ಬರುವುದಿಲ್ಲ. ಏಕೆಂದರೆ ರಾವಣ ಮೋಸದಿಂದಲೇ ಆಕೆಯನ್ನು ಕದ್ದುತಂದ ಕೆಟ್ಟ ನೆನಪು ಅವಳನ್ನು ಕಾಡುತ್ತಿತ್ತು. ಶ್ರೀರಾಮನು ನೆನಪಿಗಾಗಿ ಕೊಟ್ಟ ಉಂಗುರವನ್ನು ಕೊಡುತ್ತಾನೆ. ಆಗ ಅವಳಿಗೆ ನಂಬಿಕೆ ಬರುತ್ತದೆ. ರಾಮನ ನೆನಪು ಬರುವಂತೆ ಹನುಮಂತ ಕಾಗೆ ಕಾರುಣ್ಯದ ಕಥೆ ಹೇಳುವುದು, ಆನಂತರ ತನ್ನಲ್ಲಿರುವ ಚೂಡಾಮಣಿಯನ್ನು ಶ್ರೀರಾಮನಿಗೆ ನೆನಪಿನ ಕಾಣಿಕೆಯಾಗಿ ಕೊಡು ಎಂದು ಕೊಡುವುದು, ರಾವಣನನ್ನು ಕೆಣಕಿ ಅಲ್ಲಿ ಯುದ್ಧ ಮಾಡುವ ಮೂಲಕ ಶತ್ರುಸೇನೆಯ ಬಲಾಬಲ ಪರೀಕ್ಷಿಸುವುದು, ಕೊನೆಯಲ್ಲಿ ತನ್ನ ಬಾಲದ ಮೂಲಕ ಇಡೀ ಲಂಕೆಯನ್ನು ಸುಟ್ಟು ಬರುವುದು ಇಲ್ಲಿನ ಕಥಾ ಸಾರಾಂಶ.   

ಚಿಕ್ಕ ಮಕ್ಕಳಿಗೆ ಈ ಕಥೆ ಆಕರ್ಷಕವಾಗಿರುವಂತೆ, ಸವಿವರವಾಗಿ ಅರ್ಥವಾಗುವಂತೆ ವಿವರಿಸಲಾಗಿದೆ. ವಿಶೇಷವಾಗಿ ಆಂಜನೇಯನ ಸಹವಾಸ ಮತ್ತು ಸೀತಾಮಾತೆ ಅಪಹರಣ ಇವೆರಡೂ ಕಥೆಯನ್ನು ಜೋಡಿಸಲಾಗಿದೆ. 

 ರಾವಣನು ತನ್ನ ಮಂತ್ರಿಗಳನ್ನು ಕರೆದು ಈ ಕಪಿಯನ್ನು ಸಾಯಿಸಬೇಡಿ, ಈ ಕೋತಿಯ ಬಾಲಕ್ಕೆ ಬೆಂಕಿ ಹಚ್ಚಿ ನಗರದ ಎಲ್ಲಾ ಬೀದಿಗಳಲ್ಲಿ ಕರೆದೊಯ್ಯಿರಿ. ಜನರು ಇದನ್ನು ನೋಡಿ ‘ಬಾಲ ಸುಟ್ಟುಕೊಂಡ ಕೋತಿ’ ಎಂದು ಅವಮಾನಿಸುವಂತೆ ಆಗಬೇಕು ಎಂದು ಹೇಳುತ್ತಾನೆ. ಇದರಂತೆ ರಾಕ್ಷಸರು ವಾನರನನ್ನು ಹಿಡಿದು ಬಾಲಕ್ಕೆ ಹಳೆಯ ಬಟ್ಟೆಯನ್ನು ಸುತ್ತಿ ಬೆಂಕಿ ಹಚ್ಚಿ ಬಿಡುತ್ತಾರೆ. ಆದರೆ ಮನಸ್ಸು ಗಟ್ಟಿಮಾಡಿಕೊಂಡ ವಾನರ ‘ನಾನು ಶ್ರೀರಾಮನಿಗಾಗಿ ಕಷ್ಟ ಯಾತನೆಯನ್ನು ಸಹಿಸುತ್ತಿದ್ದೇನೆ. ಅಸಹನೆಯ ಪರಿಸ್ಥಿತಿಯಿಂದ ವಿಚಲಿತನಾಗಬಾರದು. ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಬೇಕು’ ಎಂದು ತೀರ್ಮಾನಿಸುತ್ತಾನೆ. ಅದಕ್ಕಾಗಿ ಮನಸ್ಸನ್ನು ಗಟ್ಟಿ ಮಾಡಿಕೊಳ್ಳುತ್ತಾನೆ. ತನ್ನ ಬಾಲಕ್ಕೆ ಬೆಂಕಿ ಹಚ್ಚಿದ ಎಲ್ಲರಿಗೂ ಈ ಬೆಂಕಿಯಿಂದಲೇ ಬುದ್ಧಿ ಕಲಿಸುತ್ತೇನೆ ಎಂದು ಮನಸ್ಸಿನೊಳಗೆ ಹೇಳಿಕೊಳ್ಳುತ್ತಾನೆ. ಲಂಕೆ ಧಗಧಗಿಸಲಾರಂಭಿಸುತ್ತದೆ.  

  ಇಡೀ ಲಂಕೆಯನ್ನು ಸುಟ್ಟು ಹಾಕಿದ ಕಪಿ, ಅವಮಾನದಿಂದ ಬೆಂದ ರಾವಣ,  ಮುಂದೆ ಏನು ಯೋಚನೆ ಮಾಡುವಂತಾದ ಲಂಕಿಗರು, ಇನ್ನಷ್ಟು ಮುದುಡಿದ ಸೀತೆಯ ಸ್ಥಿತಿ, ಯೋಜನೆಯಂತೆ ಎಲ್ಲವನ್ನೂ ಮಾಡಿದನಾದರೂ ತನ್ನ iರ್ಕಟ ಬುದ್ಧಿಯ ಬಗ್ಗೆ ಆತನಿಗೆ ಏನನ್ನಿಸಿತು ಎನ್ನುವುದನ್ನು ವಿವರಿಸಿದ್ದಾರೆ ಕಥೆಯಲ್ಲಿ ಅಲ್ಲಲ್ಲಿ  ಕಂಡುಬರುವ ಹನುಮಾನ್‌ನ ಮಾತುಗಳು ಈ  ಹಂದರಕ್ಕೆ ಸಾತ್ವಿಕ ಬಲ ನೀಡುತ್ತವೆ.

ಒಟ್ಟಿನಲಿ, ಮಕ್ಕಳಿಗೆ ಇಂತಹ ಸಾಹಸಮಯ, ಅದರಲ್ಲೂ ಹನುಮಂತನ ಬಗ್ಗೆ ಕಥೆ ಕೇಳಿದಾಗ ಇನ್ನಷ್ಟು ಸ್ಫೂರ್ತಿ ಉಂಟಾಗುವುದರಲ್ಲಿ ಅನುಮಾನವೇ ಇಲ್ಲ. ಪ್ರಸ್ತುತ ಕಥೆ  ರಂಜನಿಯವೂ ಆಗಿ ಮನದಲ್ಲಿ ಸದಾ ನೆಲೆಸುವಂತಾಗಲಿದೆ.

-ದತ್ತಾತ್ರೇಯ ಹೆಗಡೆ, ಶಿವಮೊಗ್ಗ

.........................  


Comments

Popular posts from this blog