ಮಾನವ ಸಂವೇದನೆಯ ಪ್ರೀತಿಯ  

‘ಕಾಲಚಕ್ರ’


‘ಕಾಲಚಕ್ರ’ ಇದು  ಕನ್ನಡ ಸಾರಸ್ವತ ಲೋಕದಲ್ಲಿ  ಉದಯೋನ್ಮುಖ, ಸಶಕ್ತ ಬರಹಗಾರರಾಗಿ ಗುರುತಿಸಿಕೊಳ್ಳುತ್ತಿರುವ ಕಲಬುರಗಿಯ ಡಾ. ಶ್ರೀದೇವಿ ರಾಠೋಡ್ ಅವರ ಕಾದಂಬರಿ. ಈಗಾಗಲೇ ಆರೇಳು ಕಾದಂಬರಿಗಳನ್ನು ಬರೆದು ಪ್ರಕಟಿಸಿ ಯಶಸ್ವಿ  ಕಾದಂಬರಿಕಾರ್ತಿಯಾಗಿದ್ದಾರೆ. ಜೊತೆಗೆ  ಜನಪರ, ಸ್ತ್ರೀಪರ ಕಾಳಜಿಯ ಮತ್ತು ಬಂಜಾರ ಸಮಾಜದ ಕುರಿತು ಹಲವು  ಕೃತಿಗಳನ್ನು ರಚಿಸಿದ್ದಾರೆ. 

ಕಾಲೇಜಿನಲ್ಲಿ ಆರಂಭವಾಗುವ ಪ್ರೀತಿಯ ಪಯಣ  ದಾಂಪತ್ಯದವರೆಗೆ ಹೋದರೂ ಅದು ಈಡೇರದೆ ಸಿಡಿದು ಹೋಗಿ, ಅಪರಂಜಿಯಾಗಿ ಅರಳುವ ಕಥೆ ಇದು. ಈ ಕಥೆಯನ್ನು ಸಹಜತೆಯಲ್ಲಿ, ಆವೇಗಕ್ಕೆ, ಉದ್ವೇಗಕ್ಕೆ, ಅಹಂಕಾರ, ಅಟ್ಟಹಾಸಕ್ಕೆ ಎರವಾಗದೆ ತೂಕಬದ್ಧವಾಗಿ ಲೇಖಕಿ ಇಲ್ಲಿ ಕಟ್ಟಿಕೊಟ್ಟಿದ್ದಾರೆ. ಹೆಣ್ಣು - ಗಂಡು ಪ್ರೀತಿಯು ಬಿತ್ತಿದ ವಿಕಾಸಕ್ಕೆ ಸಮಸ್ಥಿತಿಯನ್ನು ಪಡೆದುಕೊಂಡು, ಇಬ್ಬರೂ ಒಪ್ಪಿ ಗೌರವದ ಬಾಳ್ವೆ ಮಾಡಲು ಹೊರಟರೂ ಅದಕ್ಕೆ ಸಮ್ಮತಿ ಸಿಗದಿದ್ದರೂ ಪ್ರಥಮ ದೃಷ್ಟಿಯಲ್ಲಿ ಬೆರೆತ ಪ್ರೀತಿಯ ದ್ವನಿ ಹಾಗೆಯೇ ಇರುತ್ತದೆ. ಈ ಒಡಲುಗಳು ಬೇರೆ ಬೇರೆ ಕಡೆ ಅರ್ಪಿತವಾದರೂ ಆ ಮಾನಸ ಸರೋವರಗಳ ಒಳಗಿರುವ ಪ್ರೀತಿಯ ಜಲವು ಆರಂಭದಲ್ಲಿದ್ದಂತೆಯೇ ನಿವ್ವಳ, ನಿಚ್ಚಳ, ನಿರ್ಮಲವಾಗಿಯೇ ಇದ್ದು ಉಭಯತರ ಕ್ಷೇಮವನ್ನೇ ಬಯಸುತ್ತದೆ ಎನ್ನುವುದನ್ನು ಸುಂದರವಾಗಿ ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. 

ಕಥಾ ಸಾರಾಂಶ: 

ರೈತ ಕುಟುಂಬದಲ್ಲಿ ಯುವಕ ರಾಜೇಶನಿಗೆ ಕಾಲೇಜಿನಲ್ಲಿ  ಯುವತಿಯೊಬ್ಬಳು ಈತನ ಮನಸೂರೆಗೊಳ್ಳುತ್ತಾಳೆ. ಮಲ್ಲಿಗೆ ಹೂವು ಮುಡಿದು, ಕಾಲ್ಗೆಜ್ಜೆ ಬರುತ್ತಿದ್ದ ಆಕೆಯ ಹಿಂದೆ ಇವನ ಮನಸು ಹೋಗುತ್ತಿತ್ತು.  ಈ ಮಧ್ಯೆ ರಾಜೇಶ ಸಂಬಂಧಿಯೂ, ಗೆಳೆಯನೂ ಆದವನೊಬ್ಬ ಹುಡುಗಿ ನೋಡಲು ತನ್ನೊಡನೆ ಬರಬೇಕೆಂದು ಕರೆದೊಯ್ಯುತ್ತಾನೆ.  ಅವರು ಬಂದಿದ್ದು ತನ್ನ ಕ್ಲಾಸ್‌ಮೇಟ್ ಮಲ್ಲಿಗೆ ಸುಂದರಿಯ ಮನೆಗೆ. ಅವಳ ಹೆಸರು ಮಲ್ಲಿಕಾ ಎನ್ನುವುದು, ಆಕೆ ತನ್ನದೇ ಜಾತಿಯವಳೆನ್ನುವುದು  ಆಗ ಗೊತ್ತಾಗುತ್ತದೆ. ಆತನ ಮಿತ್ರನೊಂದಿಗಿನ ಈ ವಿವಾಹಕ್ಕೆ ಆಕೆ ಒಪ್ಪುವುದಿಲ್ಲ. ನಂತರ ರಾಜೇಶನ ಜೊತೆ ಅವಳ ಗೆಳೆತನ ಆಪ್ತವಾಗುತ್ತದೆ. ರಾಕೇಶನ ಪರಿಸ್ಥಿತಿ ಅರಿತಿದ್ದ ಆಕೆ ಆತ ತರಗತಿಗೆ ಬಾರದೆ ಇದ್ದಾಗ ನೋಟ್ಸ್ ಕೊಡುತ್ತಾಳೆ. ಕಾಲೇಜಿನಲ್ಲಿ ಹುಡುಗರು ಹುಡುಗಿಯರ ಜಡೆ ಕಟ್ಟುವ ಸ್ಪರ್ಧೆ ಕಾರ್ಯಕ್ರಮದಲ್ಲಿ ಈ ಜೋಡಿ ಗೆಲುವು ಸಾಧಿಸುತ್ತದೆ. ಹೀಗೆ ಅವಳಿಂದಾಗಿ  ಬರಡು ಭೂಮಿಯಂತಿದ್ದ ಆತನ ಮನಸ್ಸು ಹಚ್ಚ ಹಸುರಿನ, ಸುಂದರ ಹೂವಿನ ತೋಟವಾಗುತ್ತದೆ. 

ಇಬ್ಬರಲ್ಲೂ ಪರಸ್ಪರ ಪ್ರೀತಿ ಇತ್ತಾದರೂ ಹೇಳಿಕೊಂಡಿರಲಿಲ್ಲ.  ಪರೀಕ್ಷೆ ಮುಗಿದು ಫಲಿತಾಂಶ ಬಂದಾಗ ಇಬ್ಬರೂ ಫಸ್ಟ್ ಕ್ಲಾಸ್‌ನಲ್ಲಿ ಪಾಸ್ ಆಗಿರುತ್ತಾರೆ ಆತ ಬೆಂಗಳೂರಿಗೆ ಉದ್ಯೋಗ ನಿಮಿತ್ತ ಹೋಗುತ್ತಾನೆ.  ಅಲ್ಲಿ ಆಕೆ ಮದುವೆಯಾಗಲು ಸಾಧ್ಯವಿಲ್ಲ,  ನಾವಿಬ್ಬರೂ ಸ್ನೇಹಿತರಾಗಿ ಇರೋಣ ಎಂದು ಹೇಳುತ್ತಾಳೆ. ಇದರಿಂದ ಬೇಸತ್ತು ಆತ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸುತ್ತಾನೆ. ಆದರೆ ಅಪರಿಚಿತನೊಬ್ಬ ಇದನ್ನು ತಪ್ಪಿಸುತ್ತಾನೆ.  ಕೆಲವೇ ದಿನಗಳಲ್ಲಿ ಅಂಬಿಕಾ ವಿವಾಹ ನಿಶ್ಚಯವಾಗಿ ನಡೆಯುತ್ತದೆ. ರಾಜೇಶ್ ಮದುವೆಗೆ ಹೋಗಿ ಅಕ್ಷತೆ ಹಾಕಿ ಮರಳುತ್ತಾನೆ. ನಂತರ ರಾಜೇಶ್ ಗೆ ಕೆಪಿಎಸ್‌ಸಿ ಮೂಲಕ ಕೆಲಸ ಊರ ಸಮೀಪವೇ ಸಿಗುತ್ತದೆ. ಊರಲ್ಲಿಯೇ ನೆಲೆಗೊಂಡು ಸಹೋದರಿಯರ, ಸಹೋದರರ ಮದುವೆ ಮಾಡಿ  ಮನೆ ಕಟ್ಟುತ್ತಾನೆ. ಹೊಲ ಅಭಿವೃದ್ಧಿ ಮಾಡುತ್ತಾನೆ.  ತಾನು ಸಹ ನಮೃತಾ ಎನ್ನುವವಳನ್ನು ವಿವಾಹವಾಗಿ ಮಗುವನ್ನು ಪಡೆಯುತ್ತಾನೆ.

  ಈ ಮಧ್ಯೆ ತಮ್ಮಂದಿರು ತಮ್ಮ ಪಾಲು ಕೊಡಲು ಜಗಳ ಮಾಡುತ್ತ್ತಾರೆ. ಈ ಮಧ್ಯೆ ಅಮೃತಾಳಿಗೆ ವಿಪರೀತ ಹೊಟ್ಟೆ ನೋವು ಆರಂಭವಾಗುತ್ತದೆ. ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದಾಗ ಆಕೆಗೆ ಯೂಟ್ರಿಸ್ ಕ್ಯಾನ್ಸರ್ ಇರುವುದು ಪತ್ತೆಯಾಗುತ್ತದೆ. ನಂತರ ಅದಕ್ಕೆ ಆಪರೇಷನ್ ಮಾಡಿ ಅವಳ ಆರೋಗ್ಯ ಸುಧಾರಣೆಗೊಳ್ಳುತ್ತದೆ . ಕೆಲವು ತಿಂಗಳ ನಂತರ ಮತ್ತೆ ಅವಳು ಅನಾರೋಗ್ಯ ಉಲ್ಬಣಿಸಿ  ಸಾಯುತ್ತಾಳೆ. ರಾಜೇಶ್‌ಗೆ ಮನೆಯವರು ಇನ್ನೊಂದು ಮದುವೆಯಾಗು ಎಂದು ಒತ್ತಾಯ ಮಾಡತೊಡಗುತ್ತಾರೆ. ಆದರೆ ಅದಕ್ಕೆ ಒಪ್ಪದೆ ತನ್ನ ಮಗಳು ಸನ್ನಿಧಿಯನ್ನು ಉನ್ನತ ವ್ಯಾಸಂಗಕ್ಕೆ ಅಮೆರಿಕಗೆ ಕಳಿಸುತ್ತಾನೆ.   ಅಮೆರಿಕದಲ್ಲಿ ಭಾರತೀಯನೊಬ್ಬನನ್ನು ಮದುವೆಯಾಗುತ್ತಾಳೆ ಎಲ್ಲವೂ ಇದ್ದರೂ ಆತನಿಗೆ ನೆಮ್ಮದಿರುವುದಿಲ್ಲ.

  ಸಮಾರಂಭವೊಂದರಲ್ಲಿ ಅಂಬಿಕಾ ಈತನನ್ನು ಭೇಟಿಯಾಗುತ್ತಾಳೆ. ರಾತ್ರಿ ಅಂಬಿಕಾಳಿಂದ ಕರೆ ಬರುತ್ತದೆ. ಆಕೆ ತನ್ನ ಗಂಡ ಮಿಲಿಟರಿಯಲ್ಲಿದ್ದಾಗ ಸೈನಿಕರೊಂದಿಗೆ ನಡೆದ ಕಾಳಗದಲ್ಲಿ ಸಾವನ್ನಪ್ಪಿದ್ದಾಗಿಯೂ, ಜೀವನ ನರಕವಾಗಿ ತವರಿಗೆ ಬಂದು ಟೀಚರ್ ಕೆಲಸಕ್ಕೆ ಸೇರಿಕೊಂಡಿದ್ದನ್ನು ವಿವರಿಸುತ್ತಾಳೆ. ಮಗಳು ಸನ್ನಿಧಿ ಫ್ರಾನ್ಸ್ ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರಿಂದ ಅಲ್ಲಿಗೆ ರಾಜೇಶ್ ಹೋದಾಗ ಅಪ್ಪನ- ಅಂಬಿಕಾಳ ವಿಷಯ ತಿಳಿದು ಆಕೆಯೊಂದಿಗೆ ಇರಲು ಒಪ್ಪಿಗೆ ಕೊಡುತ್ತಾಳೆ. ಊರಿಗೆ ಮರಳಿದ ನಂತರ ರಾಜೇಶ್ ಆಕೆಯೊಡನೆ ಇರುತ್ತಾನೆ.

 ಒಂದು ದಿನ ಹೊಲಕ್ಕೆ ಹೋದಾಗ ಆಸ್ತಿಗಾಗಿ ಸಹೋದರರು ಗಲಾಟೆ ಮಾಡಿ ಹೊಡೆದಾಟಕ್ಕೆ ಬರುತ್ತಾರೆ.  ರಾಜೇಶನಿಗೆ ಮುದಿ ವಯಸ್ಸಿನ ಹೆಂಗಸನ್ನು ನೀನು ಕಟ್ಟಿಕೊಂಡಿದ್ದೀಯ ಎಂದು ಹಿಯಾಳಿಸುತ್ತಾರೆ. ಅಂಬಿಕಾ ಇದರಿಂದ ನೊಂದು ಬೇರ ಇರುವ ಬಗ್ಗೆ ನಿರ್ಧರಿಸುತ್ತಾಳೆ ಆದರೆ ರಾಜೇಶ್ ದೂರ ಹೋಗದೆ ಒಟ್ಟಿಗೆ ಇರುವಂತೆ ಭಾಷೆ ಪಡೆಯುತ್ತಾನೆ. ಮತ್ತೊಂದು ದಿನ ಹೊಲದಿಂದ ಆಕೆಯನ್ನು ಕಾರಿನಲ್ಲಿ ಕೂರಿಸಿಕೊಂಡು ಮನೆಗೆ ಬಿಡಲು ಹೋಗುವಾಗ ಸಹೋದರರು  ಸುಪಾರಿ ಕಿಲ್ಲರ್‌ಗಳ ಮೂಲಕ ಕಾರು ಅಡ್ಡಗಟ್ಟಿ ಬೆಂಕಿ ಹಚ್ಚಿ ಇಬ್ಬರನ್ನೂ ದಾರಿ ಮಧ್ಯೆ ಸಾಯಿಸುತ್ತಾರೆ. ಆರು ತಿಂಗಳ ಕಾಲ ಇದರ ವಿಚಾರಣೆ ನಡೆಸಿ ಅವರಿಬ್ಬರ ಫೋನ್ ಕಾಲ್ ರೆಕಾರ್ಡುಗಳನ್ನು ಪರಿಶೀಲಿಸಿ ಆರೋಪಿಗಳನ್ನು ಬಂಧಿಸುತ್ತಾರೆ. ವಿಷಯ ತಿಳಿದ ಮಗಳು ಸನ್ನಿಧಿ ಆಸ್ತಿಯನ್ನು ರಾಜೇಶನ ಹೆಸರಿನಲ್ಲಿ ಅನಾಥಾಶ್ರಮಕ್ಕೆ ಕೊಡುತ್ತಾರೆ.

-ದತ್ತಾತ್ರೇಯ ಹೆಗಡೆ

.............................


Comments

Popular posts from this blog