‘ಅರ್ಧ ಬಿಸಿಲು ಅರ್ಧ ಮಳೆ’ 



‘ಅರ್ಧ ಬಿಸಿಲು ಅರ್ಥ ಮಳೆ’ ಪ್ರಸ್ತುತ ಕೃತಿ ಕಥಾ ಸಂಕಲನವಾಗಿದ್ದು, ಹರಿಹರ ತಾಲೂಕಿನ  ಮಲೆಬೆನ್ನೂರು ಪ್ರೌಢಶಾಲಾ ಶಿಕ್ಷಕ ಸದಾಶಿವ ಸೊರಟೂರು ಇದರ ಲೇಖಕರು. ಪ್ರತಿಭಾನ್ವಿತ ಮತ್ತು ಉದಯೋನ್ಮುಖ ಬರಹಗಾರರು. ಇವರ ಹುಟ್ಟೂರು ಸೊರಟೂರು ಗ್ರಾಮ.  ಸಾವಿರಕ್ಕು ಹೆಚ್ಚು ಲೇಖನ ಬರೆದಿರುವ ಇವರು, ಪರಿಸರ ಪ್ರಜ್ಞೆ, ಸಾಮಾಜಿಕ ಕಾಳಜಿ ಮತ್ತು ಮನುಷ್ಯ ಸಂಬಂಧಗಳ  ಬಗ್ಗೆ  ಬೆಳಕನ್ನು ಹೆಚ್ಚು ಚೆಲ್ಲಿದ್ದಾರೆ. ಕವನ ಸಂಕಲವನ್ನೂ ಹೊರತಂದಿರುವ ಇವರಿಗೆ ಕಥೆ ಇಷ್ಟದ ಪ್ರಕಾರ. 


ಈ ಕೃತಿಯಲ್ಲಿ ಒಟ್ಟು ಹತ್ತು ಕಥೆಗಳಿವೆ. ಅವುಗಳಲ್ಲಿ ಬಹುತೇಕವು ಶಾಲೆ ಸುತ್ತಮುತ್ತ, ಮತ್ತೆ ಕೆಲವು ಹಳ್ಳಿಯ ಸುತ್ತಮುತ್ತ ತೆರೆದುಕೊಂಡಿವೆ. ತಾವು ಹೈಸ್ಕೂಲ್ ಶಿಕ್ಷಕರಾಗಿದ್ದರಿಂದಲೋ ಏನೋ ಶಾಲೆಯ ಮಕ್ಕಳ, ಶಿಕ್ಷಕರ, ಪಾಲಕರ ಮತ್ತು ಅವರ ಬಡತನದ ಜೀವನದ ಬಗ್ಗೆ ತುಂಬಾ ಆಪ್ತವಾಗಿ ಕಥೆಯಲ್ಲಿ ವಿವರಿಸಿದ್ದಾರೆ.

 ಈ ಕಥಾ ಸಂಕಲನದಲ್ಲಿ ಕರುಣೆ, ಪ್ರೀತಿ, ಆರ್ದ್ರತೆಯ ಮನೋಭಾವದ ಕಥೆಗಳೇ ಜಾಸ್ತಿ ಇವೆ. ವಿಶಿಷ್ಟ ಹಾಗೂ ಗಟ್ಟಿ ದ್ವನಿಯಿಂದ ಸಮಾಜದ ವ್ಯವಸ್ಥೆಗಳ ನಡುವೆ ಚಿಕಿತ್ಸಕ ನೋಟವನ್ನು ಮತ್ತು ಮಾನವೀಯ ಸಂಬಂಧಗಳ ಶೋಧನೆಯನ್ನು ತಮ್ಮದೇ ಆದ ವಿಭಿನ್ನ ನೆಲೆಗಳಲ್ಲಿ ಕಥೆಗಳ ಮೂಲಕ ಕಟ್ಟಿಕೊಟ್ಟಿದ್ದಾರೆ. ಚಂದದ ರೂಪಕಗಳು ಪತ್ರಿ ಕಥೆಯಲ್ಲೂ ಸಾಕಷ್ಟಿವೆ. ದ್ವಿಲಿಂಗಿಗಳ ಕಥೆ, ಹೆಣ್ಣಿನ ಬೇಗುದಿ, ಎಳೆ ಮನದ ತೊಳಲಾಟ, ಮನೋವೈದ್ಯಕೀಯ ಒಳನೋಟ, ಹಿರಿಯರ ನೋವು ಹೀಗೆ ವಿವಿಧ ವಸ್ತುಗಳ ಎಳೆ ಹಿಡಿದು ಇಲ್ಲಿ ಕಥೆಗಳನ್ನು ಹೆಣೆದಿದ್ದಾರೆ.

 ಸುಲಲಿತವಾದ ಭಾಷೆ ಮತ್ತು ಬಹುತ್ವದ ಪದರಗಳು ಕಥೆಯಲ್ಲಿ ಅನಾವರಣಗೊಂಡಿವೆ. ತಮ್ಮ ಕಣ್ಣಳತೆಯಲ್ಲಿ ಕಂಡ ಚಿತ್ರಗಳನ್ನು ಕಥನ ಕಲೆಗೆ ಒಗ್ಗಿಸುವ ಮೂಲಕ ಅತ್ಯುತ್ತಮ ಕಥೆಗಳನ್ನು ಈ ಸಂಕಲನದ ಮೂಲಕ ನೇಯ್ದು ಕೊಟ್ಟಿದಾರೆ. ಕತೆಗಳ ವಿಷಯಗಳು ಇಂತಿವೆ.  

 ನೀಲಿ 

  ಗಂಡ ಬಿಟ್ಟು ಹೋದ, ಊರಿನವರಲ್ಲರ ಮನಸೆಳೆದ, ಹಲವರು ಕಣ್ಣಿಟ್ಟಿದ್ದ, ಆಕೆಯ ಮನೆ ಬಾಗಿಲುಬಡಿದಿದ್ದ  ಕೆಲವರು ಆಕೆ ಸತ್ತಾಗ ಕನಿಷ್ಠ ಸೌಜನ್ಯಕ್ಕು ಹೆಣ ನೋಡಲು ಹೋಗದೇ ಇರುವುದು, ಆದರೆ ಊರ ಹೆಂಗಸರೆಲ್ಲ ಅವಳ ಮನೆಗೆ ದೌಡಾಯಿಸುವುದು ಕಥಾ ವಿಷಯ. ಪ್ರತಿನಿತ್ಯ ಆಕೆಯತ್ತ ನೋಟ ಬೀರುತ್ತಿದ್ದ, ಮನಸಲ್ಲೇ ಆಕೆಯ ಸೌಂದರ್ಯ ಸವಿಯುತ್ತಿದ್ದವರು ಆಕೆ ಸತ್ತ ದಿನ ಹೋದರೆ ತಮ್ಮ ಬಗ್ಗೆ ಏನೆಲ್ಲ ಅನುಮಾನ ಬರಬಹುದು ಎನ್ನುವುದನ್ನು ಗಮನಿಸಿ  ದೂರ ಸರಿಯುವುದನ್ನು  ಪ್ರಸ್ತಾಪಿಸುತ್ತಾರೆ. 

 ಬಿಸಿಲು ಕೋಲು

 ಬಹುಮಾನವಾಗಿ ಬಂದ ಪೆನ್ಸಿಲ್ ಅನ್ನು ಚೂಪು ಮಾಡಿಕೊಳ್ಳಲಾಗದೆ ಪರದಾಡುವ, ಸಿಕ್ಕ ಆನಂದ ಅನುಭವಿಸಲಾಗದ ಪುಟ್ಟ ಬಾಲಕನ ಕಥೆ ಇದು. ರನ್ನಿಂಗ್ ರೇಸಿನಲ್ಲಿ ಮೊದಲ ಬಹುಮಾನ ಬಂದಾಗ ಬಾಲಕನಿಗೆ ಪೆನ್ಸಿಲ್ ಅನ್ನು ಬಹುಮಾನವಾಗಿ ಕೊಟ್ಟಾಗ ಆನಂದದಿಂದ ಅದನ್ನು ನೋಡುತ್ತಾನೆ. ಜೋಪಾನವಾಗಿ ಮನೆಗೆ ತಂದು ತನ್ನ ಅಪ್ಪನ ಗಡ್ಡ ಹೆರೆಯುವ  ಬ್ಲೇಡ್ ಮೂಲಕ ಕೆತ್ತಲು ಯತ್ನಿಸುತ್ತಾನೆ. ಸಾಧ್ಯವಾಗದಿದ್ದಾಗ  ಇದರಿಂದ ಬಹಳ ಬೇಸರವಾಗುತ್ತದೆ. ಶಾಲೆಯಲ್ಲಿ ಶಿಕ್ಷಕರ ಹತ್ತಿರ ಇದನ್ನು ಒಯ್ದಾಗ ಅವರು ಗಮನಿಸುವುದೇ ಇಲ್ಲ. ಉಳಿದ ಮಕ್ಕಳೆಲ್ಲ ಪೆನ್ಸಿಲ್‌ನ್ನು ಶಾರ್ಪ್ ಮಾಡಿಕೊಂಡು  ಕುಣಿದಾಡುವಾಗ ಆತನಿಗೆ ತಾನು ಬೆಳಗಿನ ಬಿಸಿಲಕೋಲು ಮೂಲಕ ಮನೆಯಲ್ಲಿ, ಶಾಲೆಯಲ್ಲಿ  ಆಟವಾಡುತ್ತಿರುವಂತೆ ಪೆನ್ಸಿಲ್ ಕಂಡುಬಂದಿದ್ದನ್ನು ಲೇಖಕರು ಇಲ್ಲಿ ಸಾಂಕೇತಿಸಿದ್ದಾರೆ. 

ಹಾರಿದ ಪುಟ್ಟ ಹಕ್ಕಿಯ ಜಾಡು  

  ಅಮ್ಮನಿಲ್ಲದ ಬಾಲಕ ತನ್ನ ಅಮ್ಮನನ್ನು ಅಪ್ಪ ತಿರುಪತಿಗೆ ಹೋದಾಗ ಬಿಟ್ಟು ಬಂದಿದ್ದನ್ನು, ಊರಿನವರು ಜಾತ್ರೆಯಲ್ಲಿ ಕಂಡಳೆಂದು ಹೇಳುವುದನ್ನು ಕೇಳಿಸಿಕೊಂಡು ಜಾತ್ರೆಗೆ ಹಡುಕುತ್ತಾ ಹೋಗುವುದು,  ದೂರದಲ್ಲಿ ಆಕೆ ಬೇಡುತ್ತಿರುವುದು ಕಂಡುಬರುವುದು, ಆಕೆ ಮಗನನ್ನು ನೋಡಿ ತನ್ನ ಮಗ ಎಂದು ಓಡಿ ಬಂದಾಗ ಈತ ಹೆದರಿ ಓಡುವುದು, ಅಲ್ಲಿಯವರು ಹುಚ್ಚಿ ಎಂದು ಆಕೆಯನ್ನು ಹಿಡಿಯುವುದು... ಹೀಗೆ ಒಟ್ಟಿನಲ್ಲಿ ಅಮ್ಮನ ಹುಡುಕಾಟದ ಜಾಡನ್ನು  ಇಲ್ಲಿಬಿಂಬಿಸಿದ್ದಾರೆ 

 ಕನಸಿನಲ್ಲಿ ಸುರಿದ ಕೆಂಪು ಮಳೆ

 ಮುಟ್ಟಾಗದ ವಿದ್ಯಾರ್ಥಿನಿಯೊಬ್ಬಳು ಇತರ ಸಹಪಾಠಿಗಳಿಂದ ಅನುಭವಿಸಿದ ಅವಮಾನದ ಕಥೆ ಇದು. ವಿದ್ಯಾರ್ಥಿನಿ ಹಲವು ವರ್ಷದವರೆಗೆ ಮುಟ್ಟಾಗದೇ ಇದ್ದಾಗ ಕ್ಲ್ಲಾಸಿನಲ್ಲಿ  ಆಕೆಯ ಸಹಪಾಠಿಗಳು ಮಾಡುವ ಅವಮಾನ, ಶಿಕ್ಷಕಿಯ ಚುಚ್ಚುಮಾತು, ವ್ಯಂಗ್ಯದಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬರುತ್ತಾಳೆ. ಮನೆಯಲ್ಲಿ ಆಕೆ ತಾಯಿಯ ಸಂತೈಸುತ್ತಾಳೆ. ವೈದ್ಯರಲ್ಲಿ ತೋರಿಸಿದಾಗ ಕೆಲವರಿಗೆ ಮುಟ್ಟು ತಡವಾಗಿ ಆಗುತ್ತದೆ ಎಂಬ ಸಮಾಧಾನದ ಉತ್ತರ ಕೊಡುತ್ತಾರೆ. ಇದರಿಂದ ಬೇಸತ್ತ ವಿದ್ಯಾರ್ಥಿನಿ ಒಂದು ದಿನ ಕೆಂಪು ಬಣ್ಣವನ್ನು ಸ್ವಲ್ಪ ನೀರಿಗೆ ಸುರುವಿ ಬಾಟಲಿಗೆ ಹಾಕಿಕೊಂಡು ತರಗತಿಗೆ ತಂದು ತಾನು ಕೂತಲ್ಲಿ ನಾಲ್ಕಾರು ಹನಿಗಳನ್ನು ಚೆಲ್ಲುತ್ತಾಳೆ. ಇದನ್ನು ಗಮನಿಸಿದ ಸಹಪಾಠಿಗಳು ಮತ್ತು ಶಿಕ್ಷಕಿ ಆಕೆಯನ್ನು ಮನೆಗೆ ಕಳಿಸುತ್ತಾರೆ. ಆಕೆ ಮುಂದೇನು ಮಾಡುತ್ತಾಳೆನ್ನುವುದು ಈ ಕಥೆಯಲ್ಲಿದೆ. 

ಬಯಲು

 ಶಾಲೆಯ ಜಗುಲಿಯೇ ಮನೆಯಾದ, ಗಂಡ ಬಿಟ್ಟು ಹೋದ ಅಲೆಮಾರಿಯೊಬ್ಬಳ ಕಥೆ ಇದು. ಹಳ್ಳಿಗೆ ಹೋಗಿ ಪಿನ್ನು, ಕೂದಲನ್ನು ಮಾರುವ ಹುಡುಗಿಯೊಬ್ಬಳಿಗೆ ಗಂಡ ಗಂಡು ಮಗುವನ್ನು ದಯಪಾಲಿಸಿ ನಾಪತ್ತೆಯಾಗುವುದು, ಆಕೆ ಏಕಾಂಗಿಯಾಗಿ ಶಾಲೆ ಜಗುಲಿಯಲ್ಲಿ ಮಲಗುವುದು,  ಒಂದು ರಾತ್ರಿ ಯಾರೋ ಈಕೆಯನ್ನು ಬಳಸಿಕೊಳ್ಳುವುದು, ಊರು ಬಿಡಲು ನಿರ್ಧರಿಸುವುದು, ಮುಂದೆ ಆಕೆಯ ನಿರ್ಧಾರ ಏನೆನ್ನುವುದು ಇದರಲ್ಲಿದೆ. 

ಮುಗಿಲ ದುಃಖ 

  ಆಸ್ತಿಗಾಗಿ ತಂದೆ -ತಾಯಿಯನ್ನು ಕಾಡುವ ಮತ್ತು ಅವರನ್ನು ಚೆನ್ನಾಗಿ ನೋಡಿಕೊಳ್ಳದೆ ಅವರ ದುರಂತಕ್ಕೆ ಕಾರಣವಾಗುವ ಮಕ್ಕಳ ಕಥೆ ಇದು. ಒಂದೇ ಸಮನೆ ಮಳೆ ಸುರಿಯುತ್ತಿರುತ್ತದೆ. ಆ ದಿನ ನಿರೂಪಕರ ದೊಡ್ಡಪ್ಪ  ತಮ್ಮನ ಮಗನ ಮನೆ (ನಿರೂಪಕರ ಮನೆ)ಗೆ ಬರುತ್ತಾನೆ.  ಮಾರನೆಯ ದಿನ ವಾಪಸಾಗುತ್ತಾರೆ. ಎರಡು ದಿನದಿಂದ ಎಡೆಬಿಡದೆ ಮಳೆ ಸುರಿಯುತ್ತಾ ಮುಗಿಲ ದುಃಖ ಕೆಳಗಿಳಿಯುತ್ತಿರುತ್ತದೆ. ಅವರ ದೊಡ್ಡಪ್ಪನ ದುಃಖವೂ ಮುಗಿಲ ದುಃಖದಂತೆಯೇ ಇರುತ್ತದೆ. ಆ ದುಃಖದ ಕಥೆ ಏನೆನ್ನುವುದನ್ನು ಈ ಕಥೆಯಲ್ಲಿ ವಿವರವಾಗಿ ಕಟ್ಟಿಕೊಟ್ಟಿದ್ದಾರೆ.  

ಅರ್ಧ ಬಿಸಿಲು ಅರ್ಧ ಮಳೆ

 ೧೦ನೇ ತರಗತಿಯ ವಿದ್ಯಾರ್ಥಿ  ಮತ್ತು ಆ ತರಗತಿಗೆ ಕಲಿಸುವ ಶಿಕ್ಷಕರ ಸಹೋದರ ಇಬ್ಬರೂ ದ್ವಿಲಿಂಗಿಗಳಾಗಿರುತ್ತ್ತಾರೆ. ವಿದ್ಯಾರ್ಥಿ ಶಾಲೆಯಲ್ಲಿ ಹೆಣ್ಣುಮಕ್ಕಳ ಸಂಗಡ ಜಾಸ್ತಿ ಸಲುಗೆ ಬೆಳೆಸುತ್ತಾನೆ. ಗಂಡು ಮಕ್ಕಳ ಜೊತೆ ವಿಚಿತ್ರ ವರ್ತನೆ ಮಾಡುತ್ತಾನೆ. ಇದನ್ನರಿಯದ ಮಕ್ಕಳು ದೂರುತ್ತಾರೆ. ಒಮ್ಮೆ ಶಾಲೆಗೆ ಮನೆಯಿಂದ ಹೆಂಗಸರ ಉಡುಪು ತರುತ್ತಾನೆ. ಇದನ್ನು ಗಮನಿಸಿದ ಸಹಪಾಠಿಗಳು ಶಿಕ್ಷಕರಿಗೆ ತಿಳಿಸಿದಾಗ ಅವಮಾನವಾಯಿತು ಎಂದು ಮೂರ ದಿನ ಶಾಲೆಗೆ ಬರುವುದಿಲ್ಲ. ಶಿಕ್ಷಕರು ಅವನ  ಮನೆಗೆ ಹೋಗುವ ನಿರ್ಧಾರ ಮಾಡುತ್ತಾರಾದರೂ ಹೋಗಲಾಗುವುದಿಲ್ಲ. ಇದಾದ ಮೂರನೆಯ ದಿನ ಶಿಕ್ಷಕರಿಗೆ ಪತ್ರ ಬರುತ್ತದೆ.  ಅದು ಅವರ ನಾಪತ್ತೆಯಾದ ಸಹೋದರನದ್ದಾಗಿರುತ್ತದೆ. ಅದರಲ್ಲಿ ನಾನು ಜೋಗತಿ ಜೊತೆ ಇದ್ದೇನೆ. ಊರಿಗೆ ಬರುವುದಿಲ್ಲ. ಹುಡುಕಿ ಬರಬೇಡಿ ಎಂದು ಬರೆದಿರುತ್ತಾನೆ. ಪತ್ರ ಓದುತ್ತಿರುವಾಗಲೇ ಶಿಕ್ಷಕರಿಗೆ ಇನ್ನೊಂದು ಕರೆ ಬರುತ್ತದೆ. ಕರೆ ಮಾಡಿದವರು ಆ ವಿದ್ಯಾರ್ಥಿ ಬಗ್ಗೆ ಹೇಳುತ್ತಾರೆ. ಅದರ ವಿವರ ಈ ಕಥೆಯಲ್ಲ್ಲಿದೆ.

ವಿದಾಯ

 ಆಪರೇಷನ್ ಥಿಯೇಟರ್‌ನಲ್ಲಿದ್ದ ನಿರೂಪಕರನ್ನು ಶಸ್ತ್ರಚಿಕಿತ್ಸೆಗೆ ಕರೆದೊಯ್ದಾಗ ಅಲ್ಲಿ ಅವರು ಸಾವಿಗೀಡಾಗುತ್ತಾರೆ. ಆದರೆ ಅವರ ತಾಯಿ ಮಾತ್ರ ತನ್ನ ಮಗ ಬರುತ್ತಾನೆ ಎಂದು ಅಲ್ಲೇ ಪಕ್ಕದಲ್ಲಿ ಕುಳಿತು ಕಾತರದಿಂದ ನೋಡುತ್ತಿರುತ್ತಾರೆ. ಡಾಕ್ಟರ್ ಬಂದು ಮಾತನಾಡಬಹುದೆಂದು ಕಾಯುತ್ತಿರುತ್ತಾರೆ. ಇತ್ತ ಮಗನ ಶವ ವನ್ನು ತಾಯಿಯ ಎದುರೇ ಸಾಗಿಸಿದರೂ ಅವಳಿಗೆ ಗೊತ್ತಾಗುವುದಿಲ್ಲ.

ಹುಚ್ಚು

 ಹುಚ್ಚರು ಯಾರೆಂದು ತೀರ್ಮಾನಿಸುವವರೆಗೆ ಹುಚ್ಚು ಹಿಡಿದರೆ ಯಾರಲ್ಲಿ ಹುಚ್ಚುತನದ ವ್ಯಾಖ್ಯೆ ಕೇಳಬೇಕೆನ್ನುವುದು ಈ ಕಥೆಯ ಪ್ರಶ್ನೆ. ಇದನ್ನು  ಅಪ್ಪ- ಮಗ ಮತ್ತು ಅವರು ಸಾಕಿದ ನಾಯಿಯೊಂದಿಗೆ ವಿವರಿಸಿದ್ದಾರೆ. ಬೆಂಗಳೂರಿನಲ್ಲಿದ್ದ ಮಗ  ವಿದೇಶಕ್ಕೆ ನೌಕರಿ ಮೇಲೆ ತೆರಳುವಾಗ ತಾನು ಸಾಕಿದ್ದ ನಾಯಿ  ‘ಭಂಟಿ’ಯನ್ನು ಅಪ್ಪನಿಗೆ ವಹಿಸಿ ಹೋಗುತ್ತಾನೆ. ಅಪ್ಪ ಮನೆಯಲ್ಲಿ ಒಬ್ಬನೇ ಇರುತ್ತಿದ್ದುದರಿಂದ ತನ್ನ ಮಗನಂತೆ ಅದನ್ನು ಸಾಕುತ್ತಾನೆ. ಅಪ್ಪನ ಜೊತೆ ಕೆಲವು ಕಾಲ ಸಂಪರ್ಕದಲ್ಲಿದ ಮಗ ನಂತರ ಸಂಪರ್ಕ ಕಳೆದುಕೊಂಡಾಗ ತಂದೆಗೆ ಭಂಟಿ ಇನ್ನಷ್ಟು ಆಪ್ತವಾಗುತ್ತದೆ. ಭಂಟಿಗೆ ಹುಚ್ಚು ಹಿಡಿಯುತ್ತದೆ. ಮಾಲಕನನ್ನೇ ಕಡಿಯುತ್ತದೆ. ಇದರಿಂದ ಅವನಿಗೂ ಹುಚ್ಚು ಹಿಡಿಯುತ್ತದೆ. ಜನರೆಲ್ಲ ನಾಯಿಗೆ ಹುಚ್ಚು ಎಂದು ಹೇಳಿ ಊರಿಗೆ ಕರೆತಂದರೆ ಕೊಂದು ಹಾಕುವುದಾಗಿ ಎಚ್ಚರಿಸುತ್ತಾರೆ. ನಂತರ ನಾಯಿ ಮತ್ತು ಅದರ ಮಾಲಕ ಏನಾದರು ಎನ್ನುವುದನ್ನು ವಿವರಿಸುವ ಕಥೆ ಇದು.    

ಹೆಸರು ಬೇಡ, ಊರು ಬೇಡ

ಪತ್ರಿಕೆಯ ಆಪ್ತ ಮಾತು ಅಂಕಣಕ್ಕೆ ಹೆಸರು ಬೇಡ ಊರು ಬೇಡ ಎಂಬ ಹೆಸರಲ್ಲಿ ಅವಿವಾಹಿತೆಯ ಪತ್ರ ಬರುತ್ತದೆ. ಅದಕ್ಕೆ ಉತ್ತರಿಸಲು ಸಂಪಾದಕ ಮನೋವೈದ್ಯರಿಗೆ ಕೊಡುತ್ತಾನೆ. ವಿವಾಹ ಸಂಬಂಧ ಒಂದಷ್ಟು ಪ್ರಶ್ನೆಯನ್ನು ಕೇಳಿರುತ್ತಾಳೆ. ಅದಕ್ಕೆ ಉತ್ತರಿಸಿ ಕಳಿಸುತ್ತ್ತಾರೆ. ಇದೇ ವೇಳೆ ಅವಿವಾಹಿತ ಮನೋವೈದ್ಯನ ಮಿತ್ರ ಆತನಿಗೆ ಮದುವೆ ಮಾಡಿಸಲು ರೀನಾ ಎನ್ನುವವಳನ್ನು ಭೇಟಿ ಮಾಡಿಸುತ್ತಾನೆ. ಇಬ್ಬರೂ ಮದುವೆ ಬಗ್ಗೆ ಪ್ರಬುದ್ಧವಾಗಿ ಚರ್ಚಿಸುತ್ತಾರೆ. ಒಬ್ಬರಿಗೊಬ್ಬರು ಆಪ್ತವಾಗುತ್ತಾರೆ.  ಆ ಪತ್ರ ಯಾರದ್ದು, ಮುಂದಿನ ಬೆಳವಣಿಗೆ ಏನೆನ್ನುವುದನ್ನು ಈ ಕಥೆ ವಿವರಿಸುತ್ತದೆ.

ಹೀಗೆ ಅತ್ಯಂತ ಮನೋಜ್ಞವಾದ, ನಮ್ಮ ಸುತ್ತಮುತ್ತಲೇ ನಡೆಯುವ ವಿಷಯಗಳನ್ನಾಧರಿಸಿದ ಕೃತಿ ಇದು. ಇದನ್ನು ಓದುವಾಗ ನಮ್ಮ ಜೀವನದಲ್ಲಿ ಇಂತಹವುಗಳನ್ನು ಕಂಡ, ಅನುಭವಿಸಿದ ನೆನಪುಗಳ ಸುರುಳಿ ಬಿಚ್ಚುತ್ತ ಹೋಗುತ್ತದೆ.


- ದತ್ತಾತ್ರೇಯ ಹೆಗಡೆ   

.......................

Comments

Popular posts from this blog