ಅಜ್ಞಾತದ ಆಕರ್ಷಣೆಯ
‘ಇಮ್ಮಡಿ ಮಡಿಲು’
‘ಇಮ್ಮಡಿ ಮಡಿಲು’ ಇದರಲ್ಲಿ ಮೂರು ನೀಳ್ಗ್ಗತೆಗಳಿವೆ. ಮೊದಲನೆಯದು, ೭ನೇ ಶತಮಾನದಲ್ಲಿ ಬಾದಾಮಿಯನ್ನು ಆಳಿದ ಚಾಲುಕ್ಯರ ಮತ್ತು ಅವರ ವಿರುದ್ಧ ಕಾದಾಡಿದ ಪಲ್ಲವರ ಕುರಿತಾದದ್ದು, ಇನ್ನೊಂದು ಅಕ್ಕಮಹಾದೇವಿ ರೀತಿಯಲ್ಲಿ ಬದುಕಿದ ಕಾಶ್ಮೀರದ ಶಿವಭಕ್ತೆ ಲಲ್ಲೇಶ್ವರ ಬಗ್ಗೆ, ಮೂರನೆಯದು ಇಸ್ರೇಲ್‌ನ ಮಸಾದ ಬೆಟ್ಟದ ಇತಿಹಾಸ. ಈ ಮೂರು ಘಟನೆಗಳ ಬಗ್ಗೆ ಚಾರಿತ್ರಿಕವಾಗಿ ಇದರಲ್ಲಿ ಕಟ್ಟಿಕೊಡಲಾಗಿದೆ.
ಈ ಕೃತಿಯ ಲೇಖಕರು ವಿಜ್ಞಾನಿ, ಇತಿಹಾಸಕಾರ ಮತ್ತು ಸಾಹಿತಿ ಆಗಿರುವ ಡಾ| ಕೆ ಎನ್. ಗಣೇಶಯ್ಯ. ಅಜ್ಞಾತದ ಆಕರ್ಷಣೆ ಮತ್ತು ಚರಿತ್ರೆಯಲ್ಲಿನ ಬಿರುಕುಗಳ ಹಿನ್ನೆಲೆಯಲ್ಲಿ ಈ ಕೃತಿ ಬರೆದಿದ್ದಾಗಿ ಅವರು ಹೇಳಿಕೊಂಡಿದ್ದಾರೆ. ಬಾದಾಮಿ ಚಾಲುಕ್ಯರ ಇತಿಹಾಸದಲ್ಲಿ ನಡೆದ ಯುದ್ಧದಲ್ಲಿ ಅಜ್ಞಾತ ವ್ಯಕ್ತಿಯಾಗಿ ಕಾಡಿದ ಪರಂಜ್ಯೋತಿಯ ಕುರಿತಾಗಿ ಇನ್ನೊಬ್ಬ ಇತಿಹಾಸ ಸಂಶೋಧಕರು ಹಂಪಿಯಲ್ಲಿ ಭೇಟಿಯಾದಾಗ ಹೇಳಿದ ಕುತೂಹಲದ ವಿಷಯದ ಆಧಾರದಲ್ಲಿ ಮೊದಲ ಕಥೆ ಮೈದಳೆದಿದೆ. ರಾಜರು ತಮ್ಮ ಅರಮನೆಯಲ್ಲಿ ದಂಡನಾಯಕರ ಮತ್ತು ಇತರ ಆಡಳಿತಗಾರರ ಪತ್ನಿಯರನ್ನು ಹೇಗೆ ಬಳಸಿಕೊಳ್ಳುತ್ತಿದ್ದರೆನ್ನುವುದನ್ನು ಇಲ್ಲಿ ಸೂಚ್ಯವಾಗಿ ತೋರಿಸಿದ್ದಾರೆ. ಅಕ್ಕಮಹಾದೇವಿಯಂತೆ ಇದ್ದ ಇನ್ನೊಬ್ಬ ಶಿವಯೋಗಿನಿಯ ಬಗ್ಗೆಯೂ ಶ್ರೀಶೈಲದಲ್ಲಿ ಭೇಟಿಯಾದ ಸಂಶೋಧನಾರ್ಥಿಯೊಬ್ಬರು ನೀಡಿದ ಮಾಹಿತಿಯನ್ನು ಆಧಾರದವಾಗಿಟ್ಟುಕೊಂಡು ‘ಪರ್ಯಾಯ’ ಕಥೆ ರಚನೆಯಾದರೆ, ಇಸ್ರೇಲ್‌ಗೆ ಭೇಟಿ ನೀಡಿದಾಗ ಲೇಖಕರ ಮಗಳು ಅಲ್ಲಿನ ಪ್ರಸಿದ್ಧ ‘ಮಸಾದ ಬೆಟ್ಟ್ಟ’ವನ್ನು ನೋಡಲು ಕರೆದೊಯ್ದದ್ದರಿಂದ ಅದರ ಬಗ್ಗೆ ಚಿತ್ರಣ ನೀಡಿದ್ದಾರೆ. ಹೀಗೆ ಈ ಮೂರು ಸೇರಿ ‘ಇಮ್ಮಡಿ ಮಡಿಲು’ ಕೃತಿ ರಚನೆಯಾಗಿದೆ.
ಇಮ್ಮಡಿ ಮಡಿಲು:
ಚಾಲುಕ್ಯರ ಇಮ್ಮಡಿ ಪುಲಿಕೇಶಿ ವಾತಾಪಿಯಿಂದ ಉತ್ತರದ ಹರ್ಷನ ರಾಜ್ಯದತ್ತ ದಂಡೆತ್ತಿ ಹೊರಟಾಗ ಇದರ ಸುದ್ದಿ ತಿಳಿದ ಕಂಚಿಯ ಪಲ್ಲವರು ಬಾದಾಮಿಯ ಮೇಲೆ ದಾಳಿ ನಡೆಸಲು ಮುಂದಾಗುತ್ತಾರೆ. ಪರಂಜ್ಯೋತಿ ಎಂಬ ಅಪರೂಪದ ದಂಡನಾಯಕ ಪಲ್ಲವರ ಸೈನ್ಯದ ಮುಂದಾಳುವಾಗಿರುತ್ತಾನೆ. ಪುಲಿಕೇಶಿ ಮುಂದೆ ಹೋಗುತ್ತಿರುವಂತೆಯೇ ಇತ್ತ ಸೈನಿಕರೆಲ್ಲ ದಾಳಿ ನಡೆಸಿ ಬಾದಾಮಿಯನ್ನು ಸುಲಭವಾಗಿ ಆಕ್ರಮಿಸಿಕೊಳ್ಳುತ್ತಾರೆ. ಬಾದಾಮಿಯಲ್ಲಿ ತನ್ನ ರಕ್ಷಣಾ ಕ್ರಮವನ್ನು ಪರಿಶೀಲಿಸುತ್ತಿರುವಾಗ ಕಲ್ಲಿನಲ್ಲಿ ಕೆತ್ತಿದ್ದ ಗಣೇಶನ ವಿಗ್ರಹ ಆತನಿಗೆ ಕಂಡುಬರುತ್ತದೆ. ಯುದ್ಧದ ಸಂದರ್ಭದಲ್ಲಿ ಇಲ್ಲಿ ದಿನನಿತ್ಯ ಪೂಜೆ ಮಾಡಿದ್ದು ಕಂಡುಬರುತ್ತದೆ. ಇದನ್ನು ನೋಡುತ್ತಿರುವಾಗ ಆತನ ಮೇಲೆ ಬಾಣಗಳ ಮಳೆ ಸುರಿಸಲಾಗುತ್ತದೆ. ಆದರೆ ಅದರಿಂದ ಆತ ಪಾರಾಗುತ್ತಾನೆ.
ಗಣಪತಿಯ ವಿಗ್ರಹವೇ ತನಗೆ ರಕ್ಷೆಯಾಗಿ ನಿಂತಿತು ಎಂದುಕೊಳ್ಳುತ್ತಾನೆ. ಇಲ್ಲಿ ಪೂಜೆ ಸಲ್ಲಿಸಿದವರ ಬಗ್ಗೆ ಮಾಹಿತಿ ಕಲೆ ಹಾಕುವಾಗ ಮಹಿಳೆಯೊಬ್ಬಳು ಅಲ್ಲಿಗೆ ಬಂದು ಪೂಜೆ ಸಲ್ಲಿಸಿದ್ದನ್ನು ಯಾರೋ ಹೇಳುತ್ತಾರೆ. ಇಲ್ಲಿ ಪೂಜೆ ಸಲ್ಲಿಸಿದ ಮಹಿಳೆ ಅತಿಸುಂದರಿಯಾಗಿದ್ದು, ಬೆಲೆಬಾಳುವ ಅಮೂಲ್ಯ ಕಂಠಹಾರವನ್ನು ಧರಿಸಿದ್ದಳೆಂಬ ಮಾಹಿತಿ ಬರುತ್ತದೆ. ಕೆಲವು ಸೈನಿಕರನ್ನು ಅರಮನೆಗೆ ನುಗ್ಗಿಸಿ ಅಲ್ಲಿನ ಸೇವಕಿಯರನ್ನು ಹೆದರಿಸುತ್ತ ಕಂಠಹಾರದ ಮಹಿಳೆಯ ಬಗ್ಗೆ ವಿಚಾರಿಸಿದಾಗ ಅಲ್ಲಿದ್ದವರೆಲ್ಲ ಪುಲಕೇಶಿರಾಜನ ಉಪಪತ್ನಿಯರು ಎಂದು ತಿಳಿದುಬರುತ್ತದೆ.
ನಂತರ ಪರಂಜ್ಯೋತಿ ತಾನು ದಂಡೆತ್ತಿ ಬಂದ ರಾಜನ ಉಪಪತ್ನಿಯನ್ನು ತನ್ನ ರಾಜನಿಗೆ ಉಪ ಪತ್ನಿಆಗುವಂತೆ ಉಡುಗೊರೆ ನೀಡಿದರೆ ತನ್ನ ದಂಡಯಾತ್ರೆಗೆ ಮೆರುಗು ಬಂದಿತು ಎಂದುಕೊಂಡು ಆಕೆಯನ್ನು ರಕ್ಷಣಾ ವ್ಯವಸ್ಥೆಯಲ್ಲಿ ಬಂಧಿಯಾಗಿಸುತ್ತಾನೆ. ಆದರೆ ಅವನಿಗೆ ಇದು ತನ್ನ ಜೀವನವನ್ನೇ ಬದಲಾಯಿಸುತ್ತದೆ ಎನ್ನುವ ವಿಚಾರ ಇರಲಿಲ್ಲ. ಈ ಯುದ್ಧದಲ್ಲಿ ಪುಲಕೇಶಿಯು ಸಹ ಹೆಚ್ಚು ಕಾದಾಡಲಾಗದೆ ಅಸುನೀಗುತ್ತಾನೆ. ನಂತರ ಬಾದಾಮಿಯು ಅಗಸ್ತ್ಯರ ಶಾಪದಂತೆ ಸುಟ್ಟು ಕರಗಲಾಗುತ್ತದೆ. ಕೊಳ್ಳೆ ಹೊಡೆದ ನಂತರ ಹಲವು ಉಡುಗೊರೆಗಳನ್ನು ಪಲ್ಲವರ ರಾಜ ನರಸಿಂಹವರ್ಮನಿಗೆ ಪರಂಜ್ಯೋತಿ ಕಳಿಸುತ್ತಾನೆ. ಅದರಲ್ಲಿ ಕಂಠಹಾರದ ಸುಂದರಿಯೂ ಒಬ್ಬಳು. ತನ್ನ ಪ್ರಾಣ ಉಳಿಯಲು ಕಾರಣವಾದ ಗಣೇಶನ ವಿಗ್ರಹವನ್ನು ಗೋಡೆಯಿಂದ ತೆಗೆದು ಪೆಟ್ಟಿಗೆಯಲ್ಲಿ ಭದ್ರವಾಗಿ ತುಂಬಿಸಿಟ್ಟಿದ್ದನ್ನು ತನ್ನ ಮನೆಗೆ ಪರಂಜ್ಯೋತಿ ಕಳುಹಿಸುತ್ತಾನೆ.
ಕಂಚಿಗೆ ಮರಳಿದ ನಂತರ ಆತನ ಪತ್ನಿಯ ಕತ್ತಿನಲ್ಲಿ ಕಂಠಾಭರಣವಿರುವುದು ಗಮನಸೆಳೆಯುತ್ತದೆ. ತಾನು ಯುದ್ಧದಲ್ಲಿ ಸೋಲಿಸಿದ ಶತ್ರುವಿನ ಉಪಪತ್ನಿಯ ಕೊರಳಿನಲ್ಲಿದ್ದ ಕಂಠಹಾರ ತನ್ನ ಪತ್ನಿಯ ಕತ್ತಿಗೆ ಹೇಗೆ ಬಂತು ಎಂಬ ಯೋಚನೆಗೆ ಬೀಳುತ್ತಾನೆ. ಮನೆಯಲ್ಲಿದ್ದ ಪೆಟ್ಟಿಗೆಗಳನ್ನು ನೋಡಿದಾಗ ಅದನ್ನು ಒ
ಡೆದಿದ್ದು ಕಂಡುಬರುತ್ತದೆ. ಪತ್ನಿಯ ಕತ್ತಿಗೆ ಸರ ಬರುವಂತೆ ಮಾಡಿದವರಾರು, ನಿಜಕ್ಕೂ ಆ ಸುಂದರಿ ಯಾರು, ಆಕೆ ಪರಂಜ್ಯೋತಿಗೆ ತಿಳಿಸಿದ ವಿಚಾರಗಳೇನು, ಯುದ್ಧಲ್ಲಿ ಉಪಪತ್ನಿಯರೆಲ್ಲ ಹೇಗೆ ರಕ್ಷಣೆ ಪಡೆದರು, ಆಕೆ ಹೇಳಿದ ಕಟುಸತ್ಯವೇನು, ಕಂಠಹಾರ ಪರಂಜ್ಯೋತಿಯ ಪತ್ನಿಯ ಕತ್ತಿಗೆ ಬಂದಿದ್ದು ಹೇಗೆ, ವಿಷಯವರಿತ ಪರಂಜ್ಯೋತಿ ಮುಂದೇ ಏನಾದ, ಬಾದಾಮಿಯಿಂದ ತಂದಿದ್ದ ಗಣೇಶನ ವಿಗ್ರಹ ಏನಾಯಿತೆನ್ನುವುದರ ಸವಿವರ ಈ ಕಥೆಯಲ್ಲಿದೆ.
ಪರ್ಯಾಯ
ಅಕ್ಕಮಹಾದೇವಿಯಂತೆ ಬದುಕಿದ ಕಾಶ್ಮೀರದ ಲಲ್ಲೇಶ್ವರಿ ಅಥವಾ ಲಲ್ಲಾದೇವಿಯ ಜೀವನವನ್ನು ಅಧ್ಯಯನ ಮಾಡಲು ಹೋದ ಸಂಶೋಧನಾ ವಿದ್ಯಾರ್ಥಿ ತಾನು ಕಂಡ ಸತ್ಯವನ್ನು ಹೊರಗಿಡಲು ಮುಂದಾದಾಗ ಅದು ಅವಳ ಜೀವನಕ್ಕೆ ಹೇಗೆ ಕಂಟಕವಾಗುತ್ತದೆ, ಆ ಮೂಲಕ ಆಚೆ ಬೇರೊಂದು ಪರ್ಯಾಯ ಸತ್ಯವನ್ನು ಹೇಗೆ ಕಂಡುಕೊಂಡಳು ಎನ್ನುವುದನ್ನು ಪ್ರಸ್ತುತ ಕಥೆಯಲ್ಲಿ ವಿವರಿಸಲಾಗಿದೆ.
ಶ್ರೀಶೈಲದ ಅಕ್ಕಮಹಾದೇವಿಯ ಗುಹೆಗೆ ನಿರೂಪಕರು ಭೇಟಿ ಕೊಟ್ಟಾಗ ಧ್ಯಾನಸ್ಥ ಸ್ಥಿತಿಯಲ್ಲಿ ಮಹಿಳೆಯೊಬ್ಬಳು ಕಂಡುಬರುತ್ತಾಳೆ. ಅಲ್ಲೇ ಹತ್ತಿರದಲ್ಲಿ ಇನ್ನೊಬ್ಬ ಯುವಕನಿರುತ್ತಾನೆ. ಅಲ್ಲಿಂದ ಲೇಖಕರು ತಂಗಿದ್ದ ಹೊಟೆಲಿಗೆ ಬಂದು ಊಟಕ್ಕೆ ಕುಳಿತಾಗ ಧ್ಯಾನಸ್ಥ ಮಹಿಳೆಯೂ ಅದೇ ಟೇಬಲ್‌ಗೆ ಬರುತ್ತಾಳೆ. ಅವರಿಬ್ಬರ ಪರಿಚಯವಾಗುತ್ತದೆ. ಆಕೆ ತಾನು ಹಂಪಿ ವಿಶ್ವವಿದ್ಯಾಲಯದಲ್ಲಿ ಕಾಶ್ಮೀರದ ಆಧ್ಯಾತ್ಮಿಕ ಕವಯತ್ರಿ ಲಲ್ಲೇಶ್ವರಿಯ ಕಾವ್ಯಗಳಲ್ಲಿ ಸೌಂದರ್ಯ ಪ್ರಜ್ಞೆಯ ಬಗ್ಗೆ ಪಿ ಎಚ್ ಡಿ ಮಾಡುತ್ತಿರುವುದಾಗಿಯೂ ಅದಲ್ಲೆ ಇಲ್ಲಿಗೆ ಬಂದಿದ್ದಾಗಿಯೂ ವಿವರಿಸಿದಾಗ ಲೇಖಕರು ಹಂಪಿಯಲ್ಲಿಯೇ ಈ ಕೆಲಸ ಮಾಡಬಹುದಿತ್ತಲ್ಲ ಎಂದಾಗ ಆಕೆ ಸುಧೀರ್ಘವಾದ ತನ್ನ ಕಥೆಯನ್ನು ವಿವರಿಸುತ್ತಾಳೆ. ಪ್ರಾಧ್ಯಾಪಕ ಸುಧಾಕರ್ ರೆಡ್ಡಿ ಪಿ ಎಚ್ ಡಿ ಮಾರ್ಗದರ್ಶಕರಾಗಿದ್ದಾರೆ. ಪ್ರೀತಿಯಿಂದಾಗಿ ಅವರ ಮೇಲೆ ಮೆಚ್ಚುಗೆ ಬೆಳೆದಿತ್ತು. ಅವರು ಮದುವೆಯ ವಿಚಾರವನ್ನು ಪ್ರಸ್ತಾಪಿಸಿದಾಗ ತಾನು ಒಪ್ಪಲಿಲ್ಲ. ಪಿಎಚ್ ಡಿ ಮಾಡಲು ತನಗೆ ಗೈಡ್ ಮಾಡಬೇಕೆಂದು ಕೇಳಿಕೊಂಡಾಗ ಅವರು ಒಪ್ಪಿದರು. ಇಲ್ಲಿ ಅಧ್ಯಯನಕ್ಕೆ ಬಂದೆ ಎನ್ನುತ್ತಾಳೆ.
ಲಲ್ಲೇಶ್ವರಿ ಬಗ್ಗೆ ಮಾಹಿತಿ ನೀಡುತ್ತಾ ಆಕೆ ೧೩೨೦ ರಿಂದ ೧೯೭೦ರ ವರೆಗೆ ಇದ್ದಳೆಂದು ನಂಬಲಾಗಿದೆ. ಅಕ್ಕಮಹಾದೇವಿ ಚೆನ್ನಮಲ್ಲಿಕಾರ್ಜುನನನ್ನೇ ಉದ್ದೇಶಿಸಿ ತನ್ನ ಗಂಡನೆಂದು ಸಂಬೋಧಿಸಿ ವಚನಗಳನ್ನು ಬರೆದಂತೆ, ಲಲ್ಲೇಶ್ವರಿ ಶಿವನ ಭಕೆ. ಆತನೇ ತನ್ನ ಗಮ್ಯ ಮತ್ತು ಸಂಗಾತಿಯೆಂದು ಸಂಬೋಧಿಸಿ ವಾಕ್‌ಗಳನ್ನು ರಚಿಸಿದ್ದಾಳೆ. ಕಾಶ್ಮೀರದ ಶೈವ ಪಂಥದ ಬ್ರಾಹ್ಮ ಕುಲದಲ್ಲಿ ಹುಟ್ಟಿದವಳು. ಗಂಡನ ಮನೆಯಲ್ಲಿ ಸೂಕ್ತವಾದ ವೈಚಾರಿಕ ಪರಿಸರ ಸಿಗದೇ ನಿರಾಶಳಾಗಿ ಶಿವನ ಪೂಜೆಯಲ್ಲಿ ತೊಡಗುತ್ತಾಳೆ. ಗಂಡನ ತೊರೆದು ಏಕಾಂಗಿಯಾಗಿ ದೇಶಾಂತರ ಹೊರಟು, ಧರಿಸಿದ್ದ ಬಟ್ಟೆ- ಬರೆ ತೊರೆದು ತನ್ನದೇ ದಾರಿ ಹುಡುಕಿಕೊಳ್ಳುತ್ತಾಳೆ ಎನ್ನುತ್ತಾಳೆ.
ಲಲ್ಲೇಶ್ವರಿ ನಿಜಕ್ಕೂ ಅಕ್ಕನಿಂದ ಪ್ರಭಾವಿತವಾಗಿದ್ದಳು ಎನ್ನುವುದಕ್ಕೆ ನೇರವಾದ ಮತ್ತು ಸ್ಪಷ್ಟವಾದ ಪುರಾವೆ ಒದಗಿಸಬೇಕಿತ್ತು. ನಾನು ಕಲೆ ಹಾಕಿದ ಮಾಹಿತಿಯಿಂದ ಆಕೆ ಅಕ್ಕನಿಂದ ಪ್ರೇರಣೆ ಪಡೆದಿದ್ದಳು ಎನ್ನಲು ಸ್ಪಷ್ಟವಾದ ಪುರಾವೆ ದೊರೆಯಲಿಲ. ಹಾಗಾಗಿ ತನ್ನ ಅಧ್ಯಯನ ದಿಕ್ಕು ಬದಲಾಯಿತು. ಆದರೆ ಈ ಅನಿಸಿಕೆಯನ್ನು ಡಾ. ರೆಡ್ಡಿ ತಿರಸ್ಕರಿಸಿ, ಇದು ವೃತ್ತಿಪರ ನಡೆಯಲ್ಲ. ಅನಿಸಿಕೆಯನ್ನು ಬಿಂಬಿಸುವುದು ದೊಡ್ಡ ತಪ್ಪು ಎಂದರು. ನೀವು ನಾನು ಪುರಾವೆ ಒದಗಿಸುವ ಮುನ್ನವೇ ಪುರಾವೆ ಸಿಕ್ಕಿದೆ ಎಂದು ಪ್ರಚುರಪಡಿಸಿದ್ದೀರಿ ಎಂದು ಬಹಿರಂಗ ಮಾಡಿದ್ದೀರಿ ಎಂದೆ ಎನ್ನುತ್ತಾಳೆ.
ರೆಡ್ಡಿ ಜೊತೆಗಿನ ಈ ವಿವಾದದಿಂದಾಗಿ ಅವರನ್ನು ಮದುವೆಯಾಗುವ ಆಸೆ ಮೇಲೆ ದೊಡ್ಡ ಬಂಡೆ ಬಿದ್ದಿತ್ತು. ಪಿಎಚ್‌ಡಿ ಮಾಡಲು ಹೊಸ ಹಾದಿಯನ್ನು ಆರಿಸಿಕೊಳ್ಳಬೇಕಿತ್ತು. ಸ್ವತಂತ್ರ ಚಿಂತನೆಯೇ ನನಗೆ ಮುಳ್ಳಾಯಿತು. ನಾನು ಮದುವೆಯ ಬಗ್ಗೆ ಗಟ್ಟಿಯಾದ ತೀರ್ಮಾನ ತೆಗೆದುಕೊಂಡೆ. ಅದೇನೆಂದರೆ ಏಕಾಂಗಿಯಾಗಿ ಉಳಿಯುವುದು ಮತ್ತು ಪಿ ಎಚ್ ಡಿ ಮಾಡಬೇಕೆನ್ನುವುದು ಅದಕ್ಕಾಗಿ ಹಂಪಿಗೆ ಹಿಂದಿರುಗಿದೆ ಎನ್ನುತ್ತಾಳೆ.
೩೨ನೆಯ ವಯಸ್ಸಿನಲ್ಲಿ ಪಿಎಚ್‌ಡಿ ಮುಗಿಸಿ ಅದೇ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕಿಯಾಗಿ ಸೇರಿಕೊಂಡೆ. ಜೊತೆಗಿದ್ದ ಯುವಕ ಕಾಶ್ಮೀರದವನು. ಆತನೂ ಸಂಶೋಧನಾರ್ಥಿ. ನಾನು ಏಕೆ ಮದುವೆಯಾಗಿಲ್ಲ, ತನ್ನೊಡನೆ ವಿವಾಹವಾಗು ಎಂದು ಕೋರಿದ್ದ. ಆದರೆ ತಾನು ನನ್ನ ಆರಾಧ್ಯ ದೇವತೆ ಅಕ್ಕ. ಆಕೆ ನನಗೊಂದು ಸೂಚನೆ ನೀಡಿದ್ದಾಳೆ. ನನ್ನ ನಿಲುವನ್ನು ನೀನು ಒಪ್ಪಿದರೆ ನನಗೆ ಅತೀವ ಆನಂದವಾಗುತ್ತದೆ ಎಂದೆ. ಅದೇನೆಂದು ಕೇಳಿದ. ಆ ಪ್ರಕಾರ ರೆಡ್ಡಿ ಮದುವೆಯಾಗಿ ವಿಚ್ಛೇದನಕೊಟ್ಟ ಶೋಭಿತಾಳನ್ನು ಆತನಿಗೆ ಮದುವೆ ಮಾಡಿಸಿದೆ. ತಾನು ಮಾತ್ರ ತೊರೆದು ಬಂದ ಅಥವಾ ತನ್ನನ್ನು ತಿರಸ್ಕರಿಸಿದ ಸಂಗಾತಿಗೆ ಸೆಡ್ಡು ನೆಮ್ಮದಿಯಿಂದ ಬಾಳಲು ಇಚ್ಛಿಸುವೆ ಎನ್ನುತ್ತಾಳೆ.
ಮಸಾದ
ಮಸಾದ ಬೆಟ್ಟ ಇರುವುದು ಇಸ್ರೇಲಿನ ಜುಡಿಯಾ ಮರುಭೂಮಿ ಅಂಚಿನಲ್ಲಿ. ಅದರ ಎತ್ತರ ಕೇವಲ ೪೩೦ ಮೀಟರ್. ತಿರುಪತಿ ಬೆಟ್ಟದ ಅರ್ಧದಷ್ಟೂ ಇಲ್ಲ. ಈ ಬೆಟ್ಟ ಹತ್ತುವುದು ಒಂದು ಧಾರ್ಮಿಕ ಯಾತ್ರೆ. ಇಲ್ಲಿಗೆ ನಿರೂಪಕರು ತಮ್ಮ ಮಗಳು ಮತ್ತು ಕುಟುಂಬದೊಂದಿಗೆ ತೆರಳುತ್ತಾರೆ. ಇದು ಯೆಹೂದಿಗಳ ಚರಿತ್ರೆಯಲ್ಲಿ ಅಮರವಾದ ಸ್ಥಳ. ಬೆಟ್ಟದ ತುದಿಗೆ ಅರಮನೆಯ ಅವಶೇಷ, ಬೆಟ್ಟದ ಬುಡದಲ್ಲಿ ಒಂದು ಪಾಳುಬಿದ್ದ ಚೌಕಾಕಾರದ ಕಲ್ಲಿನ ಗೋಡೆ, ಅವಶೇಷವಿದೆ. ರೋಮನ್ ಸೈನ್ಯವು ಜೆರುಸಲೇಮ್ ಮೇಲೆ ದಾಳಿ ಮಾಡಿ ಅಲ್ಲಿನ ಯೆಹೂದಿಗಳ ಮಾರಣಹೋಮ ಮಾಡುತ್ತದೆ. ಯೆಹೂದಿಗಳು ಸಂಪೂರ್ಣವಾಗಿ ಶರಣಾಗುವುದಿಲ್ಲ. ಆಗ ಹಲವು ಪಂಗಡಗಳು ರೋಮನ್ನರ ಅಧಿಪತ್ಯ ವಿರೋಧಿಸಿ ಎದ್ದುನಿಲ್ಲುತ್ತವೆ. ರೋಮನ್ನರು ದಾಳಿ ಮಾಡುತ್ತಲೇ ಇರುತ್ತಾರೆ. ಆದರೂ ಕೆಲವು ಕ್ರಾಂತಿಕಾರಿ ಗುಂಪುಗಳು ಉಳಿಯುತ್ತವೆ. ಅವರನ್ನು ಸಿಕಾರಿಗಳು ಎನ್ನುತ್ತಾರೆ. ಅವು ಈ ಬೆಟ್ಟದಲ್ಲಿದ್ದರು ಎನ್ನುವ ಐತಿಹ್ಯವಿದೆ.
ಮಸಾದ ಬೆಟ್ಟ ಸುಮಾರು ೨೦ ಎಕರೆಯಷ್ಟಿದೆ. ಕಲ್ಲಿನಲ್ಲಿ ಕಟ್ಟಿದ ದೇಸಿ ಕೋಟೆಯಿದೆ. ಇದು ಇಸ್ರೇಲಿನ ಪ್ರಜೆಗಳಲ್ಲಿ ದೇಶ ಪ್ರೇಮ ಹುಟ್ಟುಹಾಕುವ ಸ್ಥಳ. ಅವರಿಗೆ ಈ ಬೆಟ್ಟ ಹತ್ತುವುದು ಒಂದು ವ್ರತದಂತೆ. ಅಮೆರಿಕದ ಅಧ್ಯಕ್ಷರಾಗಿದ್ದ ಬರಾಕ್ ಒಬಾಮಾ ಮತ್ತು ಜಾರ್ಜ್ ಬುಶ್ ಇಲ್ಲಿಗೆ ಭೇಟಿ ಕೊಟ್ಟಿದ್ದರು. ಹಾಲಿ ಅಧ್ಯಕ್ಷ ಟ್ರಂಪ್‌ಗೆ ಭೇಟಿ ಕೊಡಲು ಆಗಲಿಲ್ಲ. ಏಕೆಂದರೆ ಇಲ್ಲಿ ಹೆಲಿಕಾಪ್ಟರ್ ಇಳಿಯಲು ಅವಕಾಶವಿಲ್ಲ.
ಒಟ್ಟಿನಲ್ಲಿ ಶೋಷಣೆಗೆ ಒಳಗಾಗಿದ್ದ ಯೆಹೂದಿಗಳಲ್ಲಿ ಒಗಟ್ಟು ಮೂಡಿಸುವ ಮಾಂತ್ರಿಕ ಶಕ್ತಿ ಹೊಂದಿರುವ ಸ್ಥಳ ಮಸಾದ ಬೆಟ್ಟ. ಈಗ ಇದು ರಾಷ್ಟ್ರಪ್ರೇಮ ಹುಟ್ಟುಹಾಕುವ ಚಾರಿತ್ರಿಕ ಸ್ಥಳವಾಗಿದೆ.
Comments
Post a Comment