ಗಾಲಿಬ್‌ನ ತವಕ, ತಲ್ಲಣ, ದುರಂತದ 


 ‘ಮಿರ್ಜಾ ಗಾಲಿಬ್ ಕಥನ ಮತ್ತು ಕಾವ್ಯ’ 



‘ಮಿರ್ಜಾ ಗಾಲಿಬ್’  ಉರ್ದು ಮತ್ತು ಪರ್ಶಿಯನ್ ಸಾಹಿತ್ಯದಲ್ಲಿ ಬಹುದೊಡ್ಡ ಹೆಸರು. ಕನ್ನಡ ಸಾಹಿತ್ಯದ ಓದುಗರಿಗೆಲ್ಲ ಆತನ  ಗಜಲ್ ಕವನಗಳೆಂದರೆ  ಇಷ್ಟ. ಗಾಲಿಬ್  ಕೇವಲ ವ್ಯಕ್ತಿಯೊಬ್ಬನ ಹೆಸರು ಮಾತ್ರವಲ್ಲ, ಅದು ಒಂದು ಅಚ್ಚಳಿಯದ ಹೆಸರು. ಆತ ನಮ್ಮನ್ನು ಅಗಲಿ ಒಂದೂವರೆ ಶತಮಾನ ಕಳೆದರೂ ಅವನ ಗಜಲ್‌ಗಳು ಮತ್ತು ಕಸಿದಾ ಎಂಬ ಉರ್ದು ಕಾವ್ಯ ಪ್ರಕಾರಗಳು ಇಂದಿಗೂ ಸಾಹಿತ್ಯಪ್ರಿಯರ, ವಿದ್ವಾಂಸರ ನಾಲಿಗೆ ಮೇಲೆ ನಲಿದಾಡುತ್ತಿವೆ.

‘ಮಿರ್ಜಾ ಗಾಲಿಬ್ ಕಥನ ಮತ್ತು ಕಾವ್ಯ’ ಈ ಕೃತಿಯನ್ನು  ಬರೆದವರು ಎನ್. ಜಗದೀಶ್ ಕೊಪ್ಪ. ತಾನು ಗಾಢವಾಗಿ ಪ್ರೀತಿಸಿದ, ತನ್ನನ್ನು ತೀವ್ರವಾಗಿ ಪ್ರಭಾವಿಸಿದ ಕವಿ ಗಾಲಿಬ್ ಎಂದು ಅವರು ಹೇಳಿಕೊಂಡಿದ್ದಾರೆ.  ಕಾವ್ಯದ ರಸಾನುಭವದ ಸೊಗಡನ್ನು ತನ್ನ ಕವಿತೆಯ ಮೂಲಕ ಕಟ್ಟಿಕೊಟ್ಟ ಅಪ್ರತಿಮ ಕವಿ ಮಿರ್ಜಾ ಗಾಲಿಬ್ ಬಣ್ಣನೆಗೆ ನಿಲುಕದ ವ್ಯಕ್ತಿತ್ವದ ಗಾಲಿಬ್ ಒಬ್ಬ ತುಂಬು ರಸಜ್ಞ ಗಾಲಿಬ್ ಉರ್ದು, ಪರ್ಶಿಯನ್ ಭಾಷೆಯ ಪಂಡಿತ. ಬದುಕಿನ ರಂಜನೆಯೊಡನೆ  ಅಸಹಾಯಕತನ, ತಲ್ಲಣ ಅನುಭವಿಸಿದವನು. ತನ್ನ ಕಾವ್ಯದಲ್ಲಿ ಇವೆರಡನ್ನೂ ಹದವಾಗಿ ಬೆರೆಸಿ ಕಟ್ಟಿದ ಕಾವ್ಯದ ಗಂಭೀರತೆ ಮತ್ತು ಸಾಹಿತ್ಯಕ್ಕೆ ಧಕ್ಕೆ ಬರದಂತೆ ಸಹಜವಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ.  ಈ ಕಥನ  ಓದಿದಾಗ  ಇತಿಹಾಸ ಲೋಕಕ್ಕೆ ಅದು ನಮ್ಮನ್ನು ಕೊಂಡೊಯ್ಯುತ್ತದೆ.  ದಿಲ್ಲಿಯ ಪತನ, ಮೊಘಲ್ ಆಳ್ವಿಕೆ, ಸಿಪಾಯಿ ದಂಗೆ,  ಬ್ರಿಟೀಷರು ಮೊಘಲರನ್ನು ನೇಣಿಗೇರಿಸಿದ್ದು, ಅನೇಕರನ್ನು ಹಿಂಸಿಸಿದ್ದನ್ನು ಪರಿಣಾಮಕಾರಿ ಶೈಲಿಯಲ್ಲಿ ಲೇಖಕರು ಇಲ್ಲಿ ಕಟ್ಟಿಕೊಟ್ಟಿದ್ದಲ್ಲದೆ, ಮಧುಶಾಲೆ, ದಿಲ್ಲಿಯ ಮಾಯೆಯ ವಿಶಿಷ್ಟ ಅನುಭವವು ನಮಗಾಗುತ್ತದೆ.  ಇಲ್ಲಿನ ಗದ್ಯಕ್ಕೆ ಕಾವ್ಯದ ಸ್ಪರ್ಶ ಕೊಡುವ ಮೂಲಕ ಕೃತಿಗೆ ಇನ್ನಷ್ಟು ಮೆರುಗನ್ನು ತಂದಿದ್ದಾರೆ. ಒಟ್ಟಿನಲ್ಲಿ, ಪರಿಣಾಮಕಾರಿ ಶೈಲಿಯಲ್ಲಿ ಗಾಲಿಬ್‌ನನ ಇಲ್ಲಿ ತೋರಿಸಿದ್ದಾರೆ. 


ಆತನ ಒಂದೆರಡು ಕವಿತೆಗಳನ್ನು ಗಮನಿಸಿ.


ನಾನು ಕವಿತೆಗಳನ್ನು ಬರೆಯುವುದು

ಯಾರ ಹೊಗಳಿಕೆಗಾಗಿ ಅಲ್ಲ.

ನನ್ನ ಕವಿತೆಯಲ್ಲಿ ಅರ್ಥವಿಲ್ಲದಿದ್ದರೆ

ನನಗದು ಚಿಂತೆಯೇ ಅಲ್ಲ.


ಇನ್ನೊಂದು ಕವಿತೆ.


ನಿಗಿ ನಿಗಿ ಉರಿವ 

ಎದೆಯ ಕುಲುಮೆಯಿಂದ 

ಹೊರಬಿದ್ದ ಕವಿತೆಗಳಿವು.

ಪ್ರಖರ ಕಾವಿನ ಈ ಸಾಲುಗಳ

ಮೇಲೆ ಯಾರೂ ಕೈ ಇಡಲಾರರು.


   ೧೯ನೇ ಶತಮಾನದಲ್ಲಿ ದಿಲ್ಲಿಯ ಕೊನೆಯ ಮೊಘಲ್ ದೊರೆ ಬಹದ್ದೂರ್ ಶಾ ಆಸ್ಥಾನದಲ್ಲಿ ಕವಿಯಾಗಿದ್ದ ಗಾಲಿಬ್, ತನ್ನ ಸಮಕಾಲೀನ ಪ್ರತಿಭಾವಂತ ಕವಿಗಳ ಜೊತೆ ಬೌದ್ಧಿಕವಾಗಿ ಹೋರಾಡಿದವನು, ಇಷ್ಟು ಮಾತ್ರವಲ್ಲದೆ ಉರ್ದು ಮತ್ತು ಪರ್ಷಿಯನ್ ಭಾಷೆಯಲ್ಲಿ ತನ್ನ ಪ್ರಖರ ಪ್ರತಿಭೆಯನ್ನು ಅನಾವರಣಗೊಳಿಸಿದವನು. ೧೮೫೭ರ ಮೇ ತಿಂಗಳಲ್ಲಿ ಸಂಭವಿಸಿದ ಸಿಪಾಯಿ ದಂಗೆ ಕ್ರಾಂತಿಗೆ ಸಾಕ್ಷಿಯಾಗಿ ಅಲ್ಲಿನ ಘಟನೆಗಳನ್ನು ದಾಖಲಿಸುವ ಮೂಲಕ ಉರ್ದು ಸಾಹಿತ್ಯಕ್ಕೆ ಘನತೆ ತಂದವನು. ಬದುಕಿನ ಏರಿಳಿತಗಳ ನಡುವೆ ಒಬ್ಬ ಮಿನಿ ನವಾಬನಂತೆ  ಬದುಕಿದ ಈತನನ್ನು ಕವಿ, ಕುಡುಕ, ಪ್ರೇಮಿ, ರಸಿಕ, ಭಗ್ನ ಪ್ರೇಮಿ, ಧರ್ಮಭಂಜಕ, ಮಾತುಗಾರ, ಹಾಸ್ಯಗಾರ ಮೊದಲಾದ ಉಪಮೇಗಳನ್ನು ಬಳಸಿ ಬಣ್ಣಿಸಿದರೂ ವರ್ಣನೆಗೆ ಇವು ಸಾಲುವುದಿಲ್ಲ.

 ಟರ್ಕಿ ದೇಶದ ಮೂಲದವನಾದ  ಗಾಲಿಬ್, ಕುದುರೆಯ ಸಿಪಾಯಿಗಳ ಮನೆತನದವನು. ೧೭೯೭ರ ಡಿ. ೨೭ ರಂದು ಆಗ್ರಾದಲ್ಲಿ ಜನಿಸಿದನು. ದೆಹಲಿಗೆ ಬಂದ ನಂತರ ನಿಜವಾದ ಹೋರಾಟದ ದರ್ಶನ ಆತನಿಗಾಗುತ್ತದೆ. ತನ್ನ ಬದುಕಿನ ಅಸ್ತಿತ್ವ ಹಾಗೂ ಸಾಹಿತ್ಯದ ಹೋರಾಟಕ್ಕೆ ಅಣಿಯಾಗುತ್ತಾನೆ. ಇಸ್ಲಾಂ ಧರ್ಮದ ಯಾವುದೇ ಸಂಪ್ರದಾಯಗಳನ್ನು ಆಚರಿಸಲು ನಿರಾಕರಿಸಿದ ಗಾಲಿಬ್ ಧರ್ಮಕ್ಕೆ ವಿರೋಧವಾದ ಕುಡಿತವನ್ನು ತನ್ನ ಬದುಕಿನ ನಿತ್ಯಕರ್ಮಗಳಂತೆ ಭಾವಿಸಿದ್ದನು. ರಂಜಾನ್ ಸಂದರ್ಭದಲ್ಲಿ ಉಪವಾಸ  ಮತ್ತು ಪ್ರಾರ್ಥನೆಗೆ ತಿಲಾಂಜಲಿ ನೀಡಿದ್ದನು.

 ಇದನ್ನು ಆಕ್ಷೇಪಿಸಿದ ಮೌಲ್ವಿಯೊಬ್ಬನಿಗೆ ಕೆಳಗಿನ ಕವನದ ಮೂಲಕ  ಈ ರೀತಿ ಉತ್ತರಿಸುತ್ತಾನೆ.


 ಮದದ ಅಂಗಡಿಯ ಬಾಗಿಲಲಿ

 ನಾ ಕಂಡ ದೃಶ್ಯ

 ನಾನು ಅಂಗಡಿಯಿಂದ ಹೊರಟಾಗ 

ಮೌಲ್ವಿ ಒಳಹೋಗುವುದನ್ನು ಕಂಡೆ.


 ದೇವರು, ಧರ್ಮಗಳ ಬಗೆಗಿನ ಕೋಪಕ್ಕಿಂತ ಅವುಗಳ ಆಚರಣೆಯ ಬಗ್ಗೆ ಆತನಿಗೆ ಜಿಗುಪ್ಸೆ ಇತ್ತು.


ದೇವರು ಒಬ್ಬನೇ ಅದು ನನ್ನ ನಂಬಿಕೆ

ಎಲ್ಲಾ ಆಚರಣೆಗಳ ತ್ಯಜಿಸಿದ್ದೇನೆ.

ಮನುಷ್ಯನ ಪಾಲಿಗೆ ಧರ್ಮಗಳ

 ಚಹರೆಗಳು ನಶಿಸಿಹೋದಾಗ 

ಉಳಿಯುವ ನಂಬಿಕೆ ಮಾತ್ರ ಪರಿಶುದ್ಧ

 ಎನ್ನುವುದನ್ನು ತನ್ನ ಪರ್ಶಿಯನ್ ಕವಿತೆಯೊಂದರಲ್ಲಿ  ದಾಖಲಿಸಿದ್ದಾನೆ. ಆತನ ಇಂತಹ ಪ್ರಖರ ವೈಚಾರಿಕತೆ ಸಮಕಾಲಿನ ಕವಿಗಳ ಜೊತೆ ಸಂಘರ್ಷಕ್ಕೀಡು ಮಾಡುತ್ತದೆ. ಕೊನೆಯ ಮೊಘಲ್ ದೊರೆ ಬಹಾದ್ದೂರ್ ಶಾ ಅವಧಿಯಲ್ಲಿ ಆಸ್ಥಾನ ಸಾಹಿತ್ಯ ಸಲಹೆಗಾರನಾಗಿ, ಮಾರ್ಗದರ್ಶಕನಾಗುವ ಯೋಗ ಬರುತ್ತದೆ.  ಉರ್ದು ಭಾಷೆಯಲ್ಲಿ ತನ್ನ ‘ದಿವಾನ್’ ಕೃತಿಯನ್ನು ಪ್ರಕಟಿಸುವ ಮೂಲಕ ಹೆಸರುವಾಸಿಯಾಗುತ್ತಾನೆ.ಆತನ ಕವಿತೆಗಳು ಸಂಕೀರ್ಣತೆಯಿಂದ ಕೂಡಿವೆ, ಅರ್ಥವಾಗುವುದಿಲ್ಲ ಎಂದು ಜನರು ಹೇಳಿದಾಗ  ಆತ ಆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಅದಕ್ಕಾಗಿ ಆತ ಹೇಳುತ್ತಾನೆ -ನಾನು ಕವಿತೆಗಳನ್ನು ಬರೆಯುವುದು ಯಾರ ಹೊಗಳಿಕೆಗಾಗಿ ಅಲ್ಲ, ನನ್ನ ಕವಿತೆಯಲ್ಲಿ ಅರ್ಥವಿಲ್ಲದಿದ್ದರೆ ನನಗದು ಚಿಂತೆಯೇ ಅಲ್ಲ ಎಂದು.

 ಕುಡಿಯುವುದು ಗಾಲಿಬ್‌ನ ನಿತ್ಯದ ಹವ್ಯಾಸವಾಗಿತ್ತು. ಆತನ ದುಂದುಗಾರಿಕೆ ಮತ್ತು ಆತನ ಹವ್ಯಾಸಗಳು ಭವಿಷ್ಯದ ಬದುಕಿನಲ್ಲಿ ಆತನನ್ನು ಸಂಕಷ್ಟಕ್ಕೆ ಗುರಿ ಮಾಡುತ್ತವೆ. ದುರಂತವೆಂದರೆ, ಆತನಿಗೆ ಹುಟ್ಟಿದ ಏಳು ಮಕ್ಕಳು ಸಹ ವರ್ಷ ಕಾಣುವ ಮೊದಲೇ ಇಹಲೋಕ ತ್ಯಜಿಸುತ್ತವೆ. ಇದರಿಂದ ಮಕ್ಕಳ ಚಿಂತೆಯು ಆತನನ್ನು ಕಾಡುತ್ತಿತ್ತು. ವಿಶೇಷವಾಗಿ ಕವಿಗಳು, ಕಲಾವಿದರು ಕುಡಿಯುವ ಮಧುಶಾಲೆಗೆ ದಿನನಿತ್ಯ ಭೇಟಿ ನೀಡುವುದು, ನಿತ್ಯವೂ ನೃತ್ಯಗೃಹಗಳಿಗೆ ತೆರಳುವುದು ಹವ್ಯಾಸವಾಗಿ ಬಿಟ್ಟಿತ್ತು. ಇವೆಲ್ಲವೂ ಆತನ ಕಾವ್ಯದಲ್ಲಿ ಬಿಂಬಿತವಾಗಿವೆ. ಈತ ೨೩ನೇ ವಯಸ್ಸಿನಲ್ಲಿ ಪ್ರೀತಿಸಿದ್ದ ಗಾಯಕಿ ಮುಘಲ್ ಜಾನ್ ಎನ್ನುವವಳು ಆತ್ಮಹತ್ಯೆಗೆ ಶರಣಾಗಿದ್ದಳು. ಇದರಿಂದ ಜೀವನಪೂರ್ತಿ ಅವನ ಹೃದಯ ಘಾಸಿಗೊಂಡಿತು. ಅವಳ ನೆನಪಿನಲ್ಲಿ ಅನೇಕ ಗಜಲ್‌ಗಳನ್ನು, ಕವಿತೆಗಳನ್ನು ಬರೆದಿದ್ದಾನೆ.

 ವಿಪರೀತ ಚಟಗಳಿಂದ ಸಾಲಗರನಾಗಿದ್ದರಿಂದ ಅನೇಕರು ನ್ಯಾಯಾಲಯದ ಮೆಟ್ಟಿಲೇರುತ್ತ್ತಾರೆ. ಮೊಕದ್ದಮೆ ಎದುರಿಸಿ  ಗೃಹಬಂಧನ ಶಿಕ್ಷೆಗೊಳಗಾಗುವ ಗಾಲಿಬ್, ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿ ಬಸವಳಿದು ಹೋಗುತ್ತಾನೆ. ಎಲ್ಲಾ ಸ್ನೇಹಿತರು, ಬಂಧು -ಬಾಂಧವರು ದೂರವಾಗುತ್ತಾರೆ. ಕವಿ ವಿದ್ವಾಂಸ, ಬುದ್ಧಿಜೀವಿ ಎನಿಸಿಕೊಂಡಿದ್ದ ಗಾಲಿಬ್‌ನನ್ನು  ಬ್ರಿಟಿಷರು ಸೆರೆಮನೆಯಲ್ಲಿ ಸಾಮಾನ್ಯ ಕೈದಿಯಂತೆ ನಡೆಸಿಕೊಳ್ಳುತ್ತಾರೆ. ಇದರಿಂದ ನೊಂದು ತೀವ್ರ ಮುಜುಗರಕ್ಕೆ ಒಳಗಾಗಿ ಜಗತ್ತೇ ಬೇಡವಾದ ಸ್ಥಿತಿಗೆ ಆತ ತಲುಪುತ್ತಾನೆ.

ತಾನು ಅನುಭವಿಸಿದ ಯಾತನೆಗಳನ್ನೆಲ್ಲ ಮತ್ತು ಎಂದೋ ಸತ್ತು ಹೋಗಿದ್ದ ತನ್ನ ಪ್ರೇಯಸಿಯನ್ನು ನೆನೆಯುತ್ತಾ ಅನೇಕ ಕವಿತೆಗಳನ್ನು ಆತ ಬರೆದಿದ್ದಾನೆ. ಸೆರೆಮನೆವಾಸ ಮತ್ತು ಬಿಡುಗಡೆಯ ನಂತರ ಆತನ ಬದುಕಿನಲ್ಲಿ  ಬದಲಾವಣೆಗಳು ಕಂಡುಬಂದಾಗ ಬಹದ್ದೂರ್ ಶಾ ದೊರೆಗೆ ಧರ್ಮಗುರುವಾಗಿ ನೇಮಕಗೊಳ್ಳುತ್ತಾನೆ. ೧೮೫೭ರ ಸಿಪಾಯಿ ದಂಗೆಯಲ್ಲಿ ಸಾಮ್ರಾಜ್ಯದ ಎಲ್ಲರನ್ನೂ ಬ್ರಿಟಿಷರು ನೇಣುಗಂಬಕ್ಕೇರಿಸಿದಾಗ ತನ್ನ ಸಾವನ್ನು ತಪ್ಪಿಸಿಕೊಳ್ಳಲು ಬ್ರಿಟೀಷರನ್ನು ಓಲೈಸುವಂತೆ ದಿನಚರಿ ಬರೆಯುತ್ತಾನೆ. ಇದೇ ವೇಳೆ ದಿಲ್ಲಿಯ ಆಳ್ವಿಕೆ ಸಂಪೂರ್ಣವಾಗಿ ಬದಲಾಗಿ ಹೋಗುತ್ತದೆ.  ಗಾಲಿಬ್ ಸಹ ಸಂಪೂರ್ಣವಾಗಿ ಸೋತುಹೋಗುತ್ತಾನೆ.

ಇದಾದ ನಂತರ ಬದುಕಿನ ನಿರ್ವಹಣೆಗೆ ಹೆಣಗಾಡುವ ಸ್ಥಿತಿ ಅತನಿಗೆ ಎದುರಾಗುತ್ತದೆ.  ಆತನ ಕೃತಿ ‘ದಸ್ತಂಬು’ ನಲ್ಲಿ  ಆತನ ಸ್ಥಿತಿಯ ವಿವರಣೆ  ಇದೆ ನ್ನುತ್ತಾರೆ ಲೇಖಕರು. ಎಷ್ಟೇ ಜೀವ ಭಯವಿದ್ದರೂ ಅವನ ಎದೆಯೊಳಗೆ ಒಬ್ಬ ಕವಿ ಹಾಗೂ ದಾರ್ಶನಿಕನಿದ್ದನು. ಜೊತೆಗೆ ಎಲ್ಲವನ್ನೂ ಯಾವುದೇ ಪ್ರೀತಿ , ದ್ವೇಷವಿಲ್ಲದ ಸ್ಥಿತಪ್ರಜ್ಞೆಯಿಂದ ದಾಖಲಿಸುವ ಅಸಾಮಾನ್ಯ ಬರಹಗಾರ ಅವನಾಗಿದ್ದನು. ಮೊಘಲ್ ದೊರೆಗಳನ್ನು ಬ್ರಿಟಿಷರು ತಮ್ಮ ವಶಕ್ಕೆ ಪಡೆದ ನಂತರ ಹತಾಶ ಮನಃಸ್ಥಿತಿಗೆ ತಲುಪಿದ್ದನು.  ದಿಲ್ಲಿಯಲ್ಲಿ ಬದುಕಿ ನಗರದ ವೈಭವ ಮತ್ತು ಪತನವನ್ನು ಕಣ್ಣಾರೆ ಕಂಡ ಆತನ ತಳಮಳ- ತಲ್ಲಣಗಳೇ ಅವನಿಂದ ಶ್ರೇಷ್ಠ ಕಾವ್ಯ ಸೃಷ್ಟಿಯಾಗಲು ಕಾರಣವಾಗಿರುವುದು ವ್ಯಂಗ್ಯ ದುರಂತಗಳಲ್ಲಿ ಒಂದು  ಎಂದು  ಚಿತ್ರಣ ಕಟ್ಟಿಕೊಟ್ಟಿದ್ದಾರೆ. 

ಕೊನೆಗೆ ಬದುಕಿನ ನಿರ್ವಹಣೆಗೆ ಪರದಾಡುತ್ತಿದ್ದ ಗಾಲಿಬ್ ಮಧುಮೇಹ ಕಾಯಿಲೆಗೆ ತುತ್ತಾಗಬೇಕಾಗುತ್ತದೆ. ತನ್ನ ಸಾವು ಸಮೀಪವಾಗುತ್ತಿರುವುದನ್ನು ಖಚಿತಪಡಿಸಿಕೊಂಡವನಂತೆ ಪರ್ಷಿಯನ್ ಶಬ್ದಕೋಶದ ಮೇಲೆ ಬರೆದ ವಿಮರ್ಶಾತ್ಮಕ ಟಿಪ್ಪಣಿಯೊಂದನ್ನು ಉರ್ದು ಹಾಗೂ ಪರ್ಶಿಯನ್ ಕಾವ್ಯಗಳನ್ನು ಪ್ರಕಟಿಸುತ್ತಾನೆ. ೧೮೬೫ರ ಫೆ. ೧೫ರಂದು ಇನ್ನಿಲ್ಲವಾಗುತ್ತಾನೆ. ದೆಹಲಿಯ ನಿಜಾಮುದ್ದೀನ್ ದರ್ಗಾ ಬಳಿ ಆತನ ಅಂತ್ಯಕ್ರಿಯೆ ನಡೆಯುತ್ತದೆ.

 ಆತನ ಯಾತನಾಮಯ ಬದುಕಿನಲ್ಲಿ ತನ್ನ ಅಂದಿನ ಯೌವ್ವನ ಮತ್ತು ಉತ್ಸಾಹದ ದಿನಗಳನ್ನು ನೆನೆದ ಕವಿತೆ ಈ ಕೆಳಗಿನಂತಿದೆ.

 ಮಧುಬಟ್ಟಲನು ತುಟಿಗಿಟ್ಟ ಕ್ಷಣ

 ರಾತ್ರಿಗಳಿಗೆ ಇದ್ದ ಸೊಬಗುಗಳೆಲ್ಲಿ?

 ಸಂತೋಷಗಳೆಲ್ಲ ಎಲ್ಲಿ ಹೋದವು?

 ನನ್ನ ಪಾಲಿಗೆ ಮುಂಜಾನೆ ಎಂಬುದು 

ಕಳೆದೇ  ಹೋಯಿತಲ್ಲ

 ಎಂದು ಬರೆಯುತ್ತಾನೆ.

ಗಾಲಿಬ್‌ಗೆ  ಕಾವ್ಯವೆನ್ನುವುದು ಹವ್ಯಾಸವಾಗಿರಲಿಲ್ಲ, ಅನಿವಾರ್ಯವಾಗಿತ್ತು. ನೋವಿನ ಕ್ಷಣಗಳಲ್ಲೂ ಅವನಿಂದ ಹಾಸ್ಯಗಳು ಉಕ್ಕಿ ಬರುತ್ತಿದ್ದವು. 

ಸಾವು ಎಂಬುದು ಇದ್ದರೆ 

ಅದು ಗಾಲಿಬನಿಗೆ ಮಾತ್ರ 

ಆತನ ಕವಿತೆಗಳಿಗಲ್ಲ

 ಎಂದು ಬರೆದುಕೊಂಡಿದ್ದಾನೆ. ಇಂದಿಗೂ ಗಜಲ್‌ಗಳ ಮೂಲಕ ಉರ್ದು ಭಾಷಿಕರು ಬಳಸುವ ನುಡಿಗಟ್ಟುಗಳ ಮೂಲಕ ಗಾಲಿಬ್ ನಲಿದಾಡುತ್ತಿದ್ದಾನೆ.

ಆತ ಹೇಳಿಕೊಂಡ ಮಾತು ಹೀಗಿದೆ.


ಸುಳ್ಳಲ್ಲ ಗಾಲಿಬ್ ನಿನ್ನ ಶಬ್ದ ಜಗತ್ತು

ನಿನ್ನ ನೋಟದ ಶಕ್ತಿ, ಇವುಗಳ ತುಂಬೆಲ್ಲಾ

ಸಂತನ ನೋಟವಿದೆ. ಇದು ಈ ಜಗತ್ತಿಗೆ

 ಅರ್ಥವಾಗಬೇಕಾದರೆ ಮೊದಲು ನೀನು 

ಇಲ್ಲಿಂದ ನಿರ್ಗಮಿಸಬೇಕು. 

ಅಂದು ಗಾಲಿಬ್ ಹೇಳಿದ ಈ ಮಾತು ಇಂದು ನಮ್ಮೆದುರು ಸತ್ಯವಾಗಿದೆ. 

,,,,,,,,,,,,,,,,,,,, 

Comments

Popular posts from this blog