ವರ್ತಮಾನಕ್ಕೆ ಮುಖಾಮುಖಿಯಾಗುವ
‘ಕತ್ತಲೆಯ ಪಿಸುಮಾತು’
‘ಕತ್ತಲೆಯ ಪಿಸುಮಾತು’ ಇದು ಕುವೆಂಪು ವಿಶ್ವವಿದ್ಯಾಲಯದ ಕನ್ನಡ ನಿವೃತ್ತ ಪ್ರಾಧ್ಯಾಪಕ ಸಣ್ಣರಾಮ ಅವರ ಕಿರುಕಥೆಗಳ ಸಂಕಲನ.
ಸಮಾಜದ ವಿವಿಧ ಸ್ತರಗಳನ್ನು ಲೇಖಕ ಇಲ್ಲಿ ನೋಡಿ ಅವರ ಮನಸ್ಸಿನ ಮಿಡಿತವನ್ನು ಅಭಿವ್ಯಕ್ತಿಗೊಳಿಸಿದ್ದಾರೆ. ಸರಳ ಮತ್ತು ನಿರಾಡಂಬರ ಮಾತುಗಳು ಇದರಲ್ಲಿವೆ. ಸಹಜ ನಿರೂಪಣೆಯೊಂದಿಗೆ ಕಥೆಗಳು ಮನಸೆಳೆಯುತ್ತವೆ. ನಮ್ಮ ಕಣ್ಣೆದುರೇ ಈ ದಿನಗಳಲ್ಲಿ ನಡೆಯುವ ಘಟನೆಗಳೇ ಪುನಃ ಸೃಷ್ಟಿಯಾಗಿ ಇಲ್ಲಿ ದಾಖಲಾದಂತೆ ಕಂಡುಬರುತ್ತದೆ. ಮಹಿಳಾ ಬದುಕು, ನಿವೃತ್ತರ, ವಯಸ್ಕರ ಸಮಸ್ಯೆಗಳು, ಯುವಮನಸುಗಳ ಆದರ್ಶ, ಆತಂಕಗಳು, ಯೋಧರ ಅರ್ಪಣೆಯಲ್ಲಿ ಸಂಬಂಧಿಕರ ಶೋಕ- ಆತಂಕ, ಮಂಗನಾಟದಂತಾದ ರಾಜಕಾರಣ, ಭ್ರಷ್ಟತೆ, ಕುಡಿತದ ದುಷ್ಪರಿಣಾಮ, ಗುಳೆ ಹೋದವರ ಕರುಳು ಕಿವುಚುವ ಕಥೆಗಳು ಇಲ್ಲಿವೆ. ಇವೆಲ್ಲ ಸಮಕಾಲೀನ ತೀವ್ರ ಸ್ಪಂದನೆಗಳಿಂದ ಹುಟ್ಟಿದವಾಗಿವೆ. ವರ್ತಮಾನಕ್ಕೆ ಮುಖಾಮುಖಿಯಾಗುವಂತಹವೂ ಹೌದು. ಯುವ ಮನಸ್ಸುಗಳಿಗೆ ಇವು ತಲುಪಬೇಕಿದೆ.
ಇದರಲ್ಲಿ ೧೬ ಸಣ್ಣ ಕಥೆಗಳಿವೆ. ವೈವಿಧ್ಯಮಯ ಕಥಾ ವಸ್ತುಗಳ ವಿಶಾಲವಾದ ತಳಹದಿಯ ಮೇಲೆ ಇದು ರೂಪಿತವಾಗಿದೆ. ಶೋಷಣೆಯ ವಿವಿಧ ಮುಖಗಳನ್ನು ತೋರಿಸುವುದರ ಜೊತೆಗೆ ಕೊರೊನಾದ ಸಂಕಟದವರೆಗಿನ ಘಟನೆಗಳನ್ನು ಕಥೆಗಳ ಮೂಲಕ ಚಿತ್ರಿಸಿದ್ದಾರೆ.
ಕತ್ತಲೆಯ ಪಿಸುಮಾತು
ಕತ್ತಲೆ ಇದ್ದಾಗಲೇ ಬೆಳಕಿನ ಮಹತ್ವ ನಮಗೆ ಅರಿವಾಗುತ್ತದೆ. ಬರಿ ಕತ್ತಲಲ್ಲಿ ಜೀವನ ನಡೆಯಲಾರದು. ಬರಿ ಬೆಳಕೇ ಇದ್ದರೂ ಜೀವನ ಸಾಗದು. ಬದುಕಿನಲ್ಲಿ ಬರುವ ದುಃಖ- ಸುಖಗಳು ಬೆಳಕು ಮತ್ತು ಕತ್ತಲಂತೆ ಸಾಮರಸ್ಯದ್ದಾಗಿರಬೇಕು. ಆಗ ಬದುಕು ಸ್ವಾರಸ್ಯವಾಗುತ್ತದೆ, ಬಹುಮುಖದ ವಿಕಾಸಕ್ಕೆ ಕಾರಣವಾಗುತ್ತದೆ ಎನ್ನುವುದು ಕಥೆಯ ಹಂದರ.
ಮಂಜು ಮುಸುಕಿದ ಸೂರ್ಯ
ಸೂರ್ಯನಿಗೂ, ಗಾಳಿಗೂ ಉತ್ತರಾಧಿಕಾರಿ ಯಾರು? ಹಾಗೆಯೇ ನಮ್ಮೊಂದಿಗಿರುವ ಸಕಲ ಕಲಾಕೃತಿ, ವಸ್ತುಗಳಿಗೂ ಉತ್ತರಾಧಿಕಾರಿ ಯಾರೂ ಅಲ್ಲ. ನಮ್ಮ ನಂತರವೂ ಅವು ಹಾಗೆಯೇ ಇರುತ್ತವೆ. ಜಗದಲ್ಲಿ ಯಾರೂ ಶಾಶ್ವತವಲ್ಲ, ಯಾವುದೂ ಸ್ಥಿರವಲ್ಲ ಎನ್ನುವುದನ್ನು ಚಾರಣ ಮತ್ತು ಕಲಾವಿದನೊಬ್ಬನ ಮೂಲಕ ಇಲ್ಲಿ ಕಟ್ಟಿಕೊಡಲಾಗಿದೆ.
ಗುಪ್ತಗಾಮಿ
ಕಾಮದ ಒತ್ತಡ ಯಾವ ಕಾರಣಕ್ಕೆ ಮತ್ತು ಹೇಗೆ ಅನಾವರಣಗೊಳ್ಳುತ್ತದೆ ಎನ್ನುವುದನ್ನು ಹೇಳಲಾಗುವುದಿಲ್ಲ. ಮದುವೆಯಾದ ಮೇಲೂ ಹೆಣ್ಣು ಅವಿವಾಹಿತನೊಂದಿಗೆ ಕಾಣೆಯಾಗುವ ಘಟನೆ ಸಮಾಜದಲ್ಲಿ ನಡೆಯುತ್ತದೆ. ಊರಿನ ಶ್ರಮಜೀವಿಯ ಜೊತೆ ಮೂರು ಮಕ್ಳಳ ತಾಯಿ ಓಡಿಹೋಗುವ ಕತೆ ಒಂದಾದರೆ, ಗ್ರಾಮೀಣ ಭಾಗದಲ್ಲಿ ಸಿಲಿಂಡರ್ ಕೊಳ್ಳಲಾಗದೆ ಹೆಣ್ಣುಮಕ್ಕಳು ಕಾಡಿಗೆ ಕಟ್ಟಿಗೆ ಆಯಲು ಹೋಗುವ, ಜನಪ್ರಿಯ ಯೋಜನೆಗಳು ಕೇವಲ ಪ್ರಚಾರಕ್ಕಾಗಿ ಎನ್ನುವುದನ್ನು ಈ ಕಥೆ ಬಿಂಬಿಸುತ್ತದೆ.
ಕಾಲಕಾಯ
ಇಂದಿನ ಯುವ ಜನಾಂಗದ ಆದರ್ಶಗಳೇನು ಎನ್ನುವುದನ್ನು ವಿವರಿಸುವ ಕಥೆ ಇದು. ಊರಲ್ಲಿ ತಂದೆ ತನ್ನ ಶ್ರಮದಿಂದ ಕಟ್ಟಿಸಿದ ಮನೆಯನ್ನು ಮಾರಾಟ ಮಾಡಿ ಮಕ್ಕಳು ಬೆಂಗಳೂರಲ್ಲಿ ಮನೆ ಕಟ್ಟಿಸುವಂತೆ ಒತ್ತಾಯ ಮಾಡುವುದು, ಮದುವೆಯಾಗುವವರೆಗೆ ಅಪ್ಪ- ಅಮ್ಮನ ಜೊತೆಗಿದ್ದರೂ ನಂತರ ಹೆಂಡತಿಯ ಆಸೆಯಂತೆ ತಂದೆ -ತಾಯಿಯನ್ನು ದೂರ ಮಾಡುವುದು, ಮನೆಯನ್ನು ತನ್ನ ಹೆಸರಿಗೆ ಬರೆದಕೊಡುವಂತೆ ಹಠ ಹಿಡಿಯುವುದು, ಅಪ್ಪ -ಅಮ್ಮನಿಗೆ ಮನೆಯಲ್ಲಿ ಅಡುಗೆಗೂ ಜನರಿಲ್ಲದಂತಾಗುವುದು,... ಹೀಗೆ ಹೃದಯದ ತುಂಬಾ ನೋವು ಅನುಭವಿಸುವುದನ್ನು ಚಿತ್ರಿಸುವ ಕಥೆ ಇದು.
ದಿಟ್ಟೆ
ತಾನು ಮದುವೆಯಾದ ಹುಡುಗ ಇನ್ನೊಂದು ಮದುವೆಯನ್ನು ಇದಕ್ಕೂ ಮೊದಲೇ ಮಾಡಿಕೊಂಡಿರುವುದು ಹೆಂಡತಿಗೆ ಗೊತ್ತ್ತಾದ ಬಳಿಕ ಗಂಡ ಮತ್ತು ಮೊದಲ ಹೆಂಡತಿಯಿಂದ ಕಿರುಕುಳ, ಬಯ್ಗುಳ ಅನುಭವಿಸುವುದು, ಧಿಮಾಕಿನ ಉತ್ತರ, ಡೈವರ್ಸ್ ಕೊಡುವಂತೆ ಗಂಡನಿಂದ ಪತ್ರ, ವಕೀಲನೊಬ್ಬ ಜೀವನಾಂಶ ಕೊಡಿಸುವೆ ಎಂದರೂ ಬೇಡ, ದುಡಿದು ಜೀವನ ಸಾಗಿಸುವೆ, ಆತನ ಹಂಗೇಕೆ ಎಂದು ಉತ್ತರ ಕೊಡುವ ಮೂಲಕ ದಿಟ್ಟೆ ಎನಿಸಿಕೊಳ್ಳುವ ಹೆಣ್ಣಿನ ಕತೆ ಇದು.
ಕಿಲ್ಲರ್
ಮಾಧ್ಯಮ ಕ್ಷೇತ್ರದ ಭ್ರಷ್ಟತೆಯನ್ನು ತೆರೆದಿಡುವ ಕಥೆ ಇದು. ಟಿವಿ ವಾಹಿನಿಯೊಂದರ ವರದಿಗಾರ ಸತ್ಯ ಮತ್ತು ಭ್ರಷ್ಟಾಚಾರದ ವಿರುದ್ಧ ವರದಿ ಮಾಡುತ್ತಾ ಭ್ರsಷ್ಟರಿಗೆ ಸಿಂಹಸ್ವಪ್ನನಾಗುತ್ತಾನೆ. ಇದಕ್ಕಾಗಿ ಅವನಿಗೆ ಪ್ರಶಸ್ತಿಗಳೂ ಬರುತ್ತವೆ. ಆದರೆ ಸಂಪಾದಕ ಮಾತ್ರ ಬೇರೆ ಹಾದಿ ತುಳಿಯುತ್ತಾನೆ. ಪಕ್ಷವೊಂದರ ಪರ ಚುನಾವಣೆಯಲ್ಲಿ ಪ್ರಚಾರಕ್ಕಾಗಿ ೧೦ ಕೋಟಿ ರೂ. ಪಡೆದಿರುತ್ತಾನೆ. ಈ ವಿಷಯ ಅರಿತ ವರದಿಗಾರ ಆತನಿಗೆ ಪಾಠ ಕಲಿಸಲು ಕೊರೊನಾ ಕಾಲದಲ್ಲಿ ಅತ್ಯಧಿಕ ಕೊರೊನಾ ಕಾಣಿಸಿಕೊಂಡಿದ್ದ ಇಟಲಿಗೆ ತೆರಳಿ ವರದಿ ಮಾಡುತ್ತಾನೆ. ವಾಪಸಾದ ನಂತರ ಸಮಪಾದಕನಿಗೆ ಹೇಗೆ ಪಾಠ ಕಲಿಸುತ್ತಾನೆ ಎನ್ನುವುದು ಇದರಲ್ಲಿದೆ.
ದಿಗಂತ
ಬದುಕಿನ ಸುಂದರ ಕನಸನ್ನು ಕುಳಿತಲ್ಲೇ ಕಟ್ಟಬಹುದು. ಆದರೆ ಆಯಾಯ ಕಾಲಘಟ್ಟದಲ್ಲಿ ಏನು ಸಂಭವಿಸುತ್ತದೆಯೋ ಅದನ್ನು ಎದುರಿಸಲೇಬೇಕು. ಕಾಲಗರ್ಭದಲ್ಲಿ ಏನಡಗಿದೆಯೋ ಯಾರಿಗೆ ಗೊತ್ತು. ಆಪ್ತ ಗೆಳೆಯರಿಬ್ಬರು ಬದುಕಿನಲ್ಲಿ ಎದುರಿಸುವ ಕಷ್ಟ- ಸಂಕೋಲೆಯ ಹಿನ್ನೆಲೆಯಲ್ಲಿ ಈ ಕಥೆ ಹೆಣೆಯಲಾಗಿದೆ.
ಕತ್ತಲದಾರಿ
ವಿದ್ಯಾರ್ಥಿಯಾಗಿರುವಾಗಲೇ ಇಬ್ಬರೂ ಲವರ್‌ಗಳು. ಯುವಕ ಮನೆಯವರ ಒತ್ತ್ತಾಯಕ್ಕೆ ಬೇರೆ ಯುವತಿಯನ್ನು ವಿವಾಹವಾಗುತ್ತಾನೆ. ಆದರೂ ಆಗಾಗ ಪ್ರೇಮಿ ಭೇಟಿಯಾಗುತ್ತಾನೆ. ದೇವಾಲಯದಲ್ಲಿ ಗುಟ್ಟಾಗಿ ಮದುವೆಯಾದ ನಂತರ ಪ್ರೇಮಿ ಯುವತಿ ಗರ್ಭಿಣಿಯಾಗುತ್ತಾಳೆ. ಈ ವೇಳೆ ಮನೆಯವರು ವಿಷಯ ಅರಿಯದೆ ಆಕೆಗೆ ಮದುವೆ ನಿಶ್ಚಯಿಸುತ್ತಾರೆ. ವಿಷಯ ಗೊತ್ತ್ತಾದಾಗ ಮನೆಯಿಂದ ಹೊರಹಾಕುವರು. ಮುಂದಿನ ಬಾಳ ದಾರಿ ಆಕೆಗೆ ಹೇಗೆ ಕತ್ತಲದಾರಿಯಾಯಿತೆನ್ನುವುದುನ್ನು ಈ ಕಥೆಯಲ್ಲಿ ವಿವರಿಸಲಾಗಿದೆ.
ಯೋಧ
ಇತ್ತೀಚಿನ ಸಮಾಜದಲ್ಲಿ ಹೆಣ್ಣುಮಕ್ಕಳ ಬಗ್ಗೆ ಮಿಡಿಯದ ಹೃದಯ ಯೋಧರ ಕುರಿತು ಏಕೆ ಅತಿಯಾಗಿ ಮಿಡಿಯುತ್ತದೆ ಎನ್ನುವುದನ್ನು ಈ ಕಥೆ ಹೇಳುತ್ತದೆ. ಬಡತನದಲ್ಲಿ ಬೆಳೆದು, ಓದಿ ಸೈನ್ಯಕ್ಕೆ ಸೇರಿದ ಯುವಕ ಮರಳಿ ಊರಿಗೆ ಬಂದಾಗ ಭವ್ಯ ಸ್ವಾಗತ ಸಿಗುತ್ತದೆ. ಮಗನ ವಿವಾಹಕ್ಕೆ ತಾಯಿ ಹುಡುಗಿ ನೋಡಿದರೂ ಮೊದಲು ಮನೆ ಕಟ್ಟಿ ಆಗಲಿ ಎನ್ನುತ್ತಾನೆ. ಆದರೆ ತಕ್ಷಣ ಮರಳುವಂತೆ ಆದೇಶ ಬರುತ್ತದೆ. ತೆರಳಿದಾಗ ಚೀನಾ ಸೈನಿಕರು ಗಡಿ ನುಗ್ಗುತ್ತಾರೆ, ಅವರನ್ನು ಹಿಡಿಯುವಾಗ ಹಿಮನದಿಗೆ ಬಿದ್ದು ಈತ ಸಾಯುತ್ತಾನೆ. ಸಾಯುವ ದಿನ ಆತ ಮದುವೆಯಾಗಲಿದ್ದ ಯುವತಿಗೆ ತನ್ನ ಗಂಡನಿಗೆ ಪರಮವೀರ ಚಕ್ರ ಪ್ರಶಸ್ತಿ ಬಂದಂತೆ ಕನಸು ಬೀಳುತ್ತದೆ. ಬೆಳಗ್ಗೆ ವಾಹಿನಿಗಳಲ್ಲಿ ಸೈನಿಕ ಸತ್ತ ಸುದ್ದಿ ಬಿತ್ತರವಾಗುತ್ತದೆ.
ಮಾದರಿ
ಶ್ರೀಮಂತ ಮನೆತನದ ವಕೀಲನೊಬ್ಬ ರಾಜಕೀಯದವರ ಒತ್ತಡಕ್ಕೆ ಮಣಿದು ರಾಜಕೀಯ ಸೇರಿ ಪ್ರಾಮಾಣಿಕ, ನಿಸ್ವಾರ್ಥ, ಜನಪರ, ಆದರ್ಶ ರಾಜಕಾರಣಿಯಾಗಿ ಮಾದರಿಯಾಗುವುದರ ವಿವರ ಇದರಲ್ಲಿದೆ. ಆದರೆ ಪ್ರಸ್ತುತ ದಿನಗಳಲ್ಲಿ ಇದು ಸುಲಭ ಸಾಧ್ಯವೇ ಎನ್ನುವುದನ್ನು ನಾವು ಪ್ರಶ್ನಿಸಿಕೊಳ್ಳುವಂತೆ ಮಾಡುತ್ತದೆ.
ಗುಳೆ
ಬಡತನದ ಕಾರಣಕ್ಕೆ ಗುಳೆ ಹೋಗುವ ಉತ್ತರ ಕರ್ನಾಟಕದ ಜನರು ಅಲ್ಲಿ ಸಂಕಷ್ಟಕ್ಕೆ ಸಿಲುಕುವ, ಕೊರೊನಾ ಕಾಲದಲ್ಲಿ ಪಟ್ಟಪಾಡುಗಳನ್ನು ಈ ಕತೆ ತೆರೆದಿಡುತ್ತದೆ. ಕೊರೊನಾ ನಂತರ ಕೆಲಸಕ್ಕಾಗಿ ಮುಂಬೈಗೆ ಹೋದ ಹಳ್ಳಿಯೊಂದರ ಜನರು ಮತ್ತೆ ಎರಡನೆ ಬಾರಿ ಲಾಕ್‌ಡೌನ್ ಹೇರಿದಾಗ ಕೆಲಸ, ಹೊಟ್ಟೆ, ಬಟ್ಟೆಗೆ ಗತಿ ಇಲ್ಲದೆ ಅಲ್ಲಿಂದ ಲಾರಿಯೊಂದರಲ್ಲಿ ಪಾರಾಗಿ ಬರುವುದು, ದಾರಿಮಧ್ಯೆ ಪೊಲೀಸರ ಹಿಡಿದು ಕ್ವಾರಂಟೈನ್ ಎಂದು ಹಿಂಸೆ ಕೊಡುವುದು, ಅವರಲ್ಲಿದ್ದ ಅನಾರೋಗ್ಯದವರು ಮತ್ತು ಮುದುಕರು ದಾರಿಯಲ್ಲೆ ಸಾಯುವುದು, .. ಹೀಗೆ ಲಾಕ್‌ಡೌನ್ ಜನರ ಪ್ರಾಣಕ್ಕೆ ಹೇಗೆ ಕುತ್ತಾಯಿತೆನ್ನುವುದನ್ನು ಕರುಳು ಮಿಡಿಯುವಂತೆ ಇಲ್ಲಿ ಚಿತ್ರಿಸಲಾಗಿದೆ.
ಮಂಗ್ಯಾನಾಟಾ
ಸ್ವತಂತ್ರನಾಗಿ ಚುನಾವಣೆಯಲ್ಲಿ ಗೆದ್ದವನೊಬ್ಬ ಅಧಿಕಾರದ ಆಸೆ ತೋರಿಸಿದರೆಂದು ಇನ್ನೊಂದು ಪಕ್ಷಕ್ಕೆ ಜಿಗಿಯುವುದು, ಅಲ್ಲಿಂದ ಮತ್ತೊಂದು ಪಕ್ಷಕ್ಕೆ ಹಾರುವುದರ ಕುರಿತಾಗಿದೆ ಈ ಕಥೆ. ಇದೇ ವೇಳೆ ಮನೆಯ ಎದುರಿನ ಬಾಳೆ ತೋಟಕ್ಕೆ ಮಂಗಗಳು ಬಂದಾಗ ಕೆಲಸದವರು ಅವುಗಳನ್ನು ಬೆದರಿಸುತ್ತಾರೆ. ಅವು ಮರದಿಂದ ಮರಕ್ಕೆ ಹಾರುವ ಕೆಲಸ ಮಾಡುವುದನ್ನು ಇಲ್ಲಿ ಲೇಖಕರು ಇಂತಹ ಮಂಗನಾಟವಾಡುವ ರಾಜಕಾರಣಿಯೊಬ್ಬರಿಗೆ ಹೋಲಿಸಿದ್ದಾರೆ.
ಚಟದಿಂದ ಚಟ್ಟಕ್ಕೆ
ಚಟಕ್ಕೆ ತುತ್ತ್ತಾದವನೊಬ್ಬನ ಕಥೆ ಇದು. ಕಷ್ಟಪಟ್ಟು ಓದಿಸಿದ ಮಗ ಶೀಮಂತ ಹುಡುಗರ ಸಹವಾಸಕ್ಕೆ ಸಿಲುಕಿ ಮೋಜಿಗಿಳಿಯುವುದು, ಕಾರು ಖರೀದಿಸಿ ತಿರುಗಾಡುವುದು, ವೇಶ್ಯೆಯ ಸಹವಾಸಕ್ಕಿಳಿಯುವುದು, ಆಕೆ ಈತನ ಹಣವನ್ನೆಲ್ಲಾ ಖಾಲಿ ಮಾಡುವುದು, ನಂತರ ಕುಡಿತದ ದಾಸನಾಗಿ ಸಾಲ ಹೆಚ್ಚಾದಾಗ ಮನೆಯವರು ಹೊರಹಾಕುವುದು, ಹೆಂಡದಂಗಡಿಯವನಿಗೆ ತನ್ನ ತೋಟವನ್ನು ಮಾರುವುದು... ಹೀಗೆ ಕಥೆ ಸಾಗುತ್ತದೆ.
ಒಂದು ಪೊಲೀಸ್ ಕೇಸಿನ ಸುತ್ತ
ತಮ್ಮದಲ್ಲದ ತಪ್ಪಿಗೆ ಹಳ್ಳಿಯ ಮುಗ್ಧರು ಹೇಗೆ ಬಲಿಯಾಗುತ್ತಾರೆ, ಪೊಲೀಸರು ಇನ್ನೊಬ್ಬನು ಕೊಟ್ಟ ದೂರನ್ನು ಹೇಗೆ ದುರುಪಯೋಗ ಮಾಡಿಕೊಂಡು ನಿರಪರಾಧಿಯನ್ನು ಠಾಣೆಗೆ ಕರೆಸುತ್ತಾರೆ, ಕಿರುಕುಳ ಕೊಡುತ್ತಾರೆ, ಸತ್ಯವನ್ನು ಭ್ರಷ್ಟತನದಿಂದ ಹೇಗೆ ಮುಚ್ಚಿಹಾಕುತ್ತಾರೆ ಎನ್ನುವುದನ್ನು ಈ ಕಥೆ ಬಿಂಬಿಸುತ್ತದೆ.
ಸೀತೆ
ಪೌರಾಣಿಕ ಸಂಧರ್ಭವನ್ನು ಈ ಕಥೆಯಲ್ಲಿ ಹೊಸ ದೃಷ್ಟಿಕೋನದ ಮೂಲಕ ಕಾಣಲಾಗಿದೆ. ಭೂಮಿಯಲ್ಲಿ ಐಕ್ಯಳಾಗುವ ಸೀತೆ ಭೂತಾಯಿಯಲ್ಲಿ ತನ್ನ ನೋವನ್ನು ನಿವೇದಿಸಿಕೊಳ್ಳುವುದನ್ನು ಇಲ್ಲಿ ಮಹಿಳಾವಾದದ ಹಿನ್ನೆಲೆಯಲ್ಲಿ ನೋಡಲಾಗಿದೆ. ಪುರುಷರು ಸ್ತ್ರೀಯಲ್ಲಿ ಮಾತ್ರ ಬದಲಾವಣೆ ಬಯಸುತ್ತಾರೆ. ತಾವು ಮಾತ್ರ ಸರಿಯಾಗಿಯೇ ಇದ್ದೇವೆಂದುಕೊಳ್ಳುತ್ತಾರೆ. ಆದರೆ ಪುರುಷರೆಂದೂ ಬದಲಾಗುವುದಿಲ್ಲ ಎಂಬ ಸಂದೇಶ ಇದರಲ್ಲಿದೆ.
ಒಂದು ಚಿಕ್ಕ ಕಥೆ
ಮೌಢ್ಯ ತೊರೆದ ವಿನಾ ಈ ದೇಶ, ಭೂಮಿ ಬದಲಾಗದು. ನಮ್ಮ ಮೆದುಳು ಮೊದಲು ಸ್ವಚ್ಛವಾಗಬೇಕು. ಅಸ್ಪೃಶ್ಯತೆ, ಅಸಮಾನತೆ, ಲಿಂಗತಾರತಮ್ಯ, ಭ್ರಷ್ಟಾಚಾರ, ಸಮಾನತೆ, ಶಾಂತಿ- ನೆಮ್ಮದಿ ಎಲ್ಲವೂ ಇಲ್ಲಿಯೇ ಇದೆ. ಅದನ್ನು ಬೇರೆಡೆ ಹುಡುಕುವುದು ಬೇಡ ಎನ್ನುವುದನ್ನು ಬ್ರಹ್ಮನ ದರ್ಶನದ ಕಥೆಯ ಮೂಲಕ ಇಲ್ಲಿ ಪ್ರಸ್ತಾಪಿಸಲಾಗಿದೆ.

Comments
Post a Comment