‘ಭೂತಾರಾಧನೆ’
‘ಭೂತಾರಾಧನೆ’ ಇದು ಮಂಗಳೂರು ವಿಶ್ವವಿದ್ಯಾಲಯದ ಪ್ರೊ. ಚಿನ್ನಪ್ಪ ಗೌಡರ ಸಂಶೋಧನಾ ಕೃತಿ. ಇದರಲ್ಲಿ ಭೂತಾರಾಧನೆಯ ಜಾನಪದೀಯ ಅಧ್ಯಯನದ ವಿವರವಿದೆ. ಭೂತಗಳ ಪರಿಕಲ್ಪನೆಯನ್ನು ಕುರಿತು ಕಾವ್ಯ, ಶಾಸನ, ಪ್ರಾದೇಶಿಕ ಇತಿಹಾಸ ಇವುಗಳ ಮೂಲಕ ಪ್ರಸ್ತುತ ಕೃತಿ ‘ಭೂತಾರಾಧನೆ’ಯಲ್ಲಿ ವಿವರಣೆಯನ್ನು ಕೊಡುವುದರ ಜೊತೆಗೆ ಭೂತಾರಾಧನೆಯ ಎಲ್ಲಾ ಹಂತಗಳನ್ನು, ಬಗೆಗಳನ್ನು, ವಿವರಗಳನ್ನು ಮತ್ತು ಕಾರ್ಯಗಳನ್ನು ಸಂಗ್ರಹಿಸಿ ಅವನ್ನು ವ್ಯವಸ್ಥಿತವಾಗಿ ನಿರೂಪಿಸಿದ್ದಾರೆ. ಸಮಗ್ರ ಚಿತ್ರಣವನ್ನು ಕಟ್ಟಿ ಕೊಟ್ಟಿದ್ದಾರೆ.
ಇಲ್ಲಿ ಬೇರೆ ಬೇರೆ ಸಾಮಾಜಿಕ ಹಿನ್ನೆಲೆಗಳಿಂದ ಭೂತವನ್ನು ಶೋಧಿಸಿ ಅನಾವರಣ ಮಾಡಲಾಗಿದೆ. ಸಮಾಜದ ವ್ಯವಸ್ಥೆ, ಶ್ರೇಣಿಕೃತ ರಾಜಕೀಯ ಅಧಿಕಾರ ವ್ಯವಸ್ಥೆ, ವಂಶಪಾರಂಪರ್‍ಯವಾಗಿ ಮುಂದುವರೆಯುವ ಭೂಮಿಯ ಒಡೆತನದ ವ್ಯವಸ್ಥೆ ಹೇಗೆ ಸಂಬಂಧ ಹೊಂದಿದೆ ಎಂಬುದನ್ನು ಪ್ರಸ್ತುತ ಕೃತಿಯಲ್ಲಿ ಲೇಖಕರು ಬಹುಸುಂದರವಾಗಿ ಚಿತ್ರಿಸಿದ್ದಾರೆ. ಆಕರ್ಷಕವೂ, ಬಹುವರ್ಣಗಳ, ಬಹುವಿನ್ಯಾಸಗಳ ಛಾಯಾಚಿತ್ರಗಳನ್ನೂ ಸಹ ಆಯಾಯ ಸಂದರ್ಭದಲ್ಲಿ ಪ್ರಕಟಿಸಿದ್ದಾರೆ. ಆಭರಣ ವಸ್ತುಗಳ ವಸ್ತುಗಳಿಗೆ ಸಂಬಂಧಿಸಿದ ಆಕರ್ಷಕ ರೇಖಾ ಚಿತ್ರಗಳಿವೆ. ಭೂತಾರಾಧನೆಯ ಪಾರಿಭಾಷಿಕ ಪದಗಳ ವಿವರಣಾತ್ಮಕ ಟಿಪ್ಪಣಿಗಳನ್ನು ಸಹ ಇಲ್ಲಿ ಕೊಡಲಾಗಿದೆ. ಭೂತ ಕಟ್ಟುವ ಕಲಾವಿದರ ಜೀವನ, ಪೂಜಾರಿಗಳ ವೃತ್ತಿ- ಬದುಕು, ಭೂತ ಕಟ್ಟುವ ಜನಾಂಗಗಳ ಸಾಮಾಜಿಕ, ಸಾಂಸ್ಕೃತಿಕ ವಿವರ ಇತ್ಯಾದಿಗಳು ಪ್ರಸ್ತುತ ಕೃತಿಯಲ್ಲಿ ಅಡಕವಾಗಿವೆ.
ಕೃತಿಯು ೧೨ ಅಧ್ಯಾಯಗಳನ್ನು ಒಳಗೊಂಡ ಬೃಹತ್ ಗ್ರಂಥವಾಗಿದೆ. ಮೊದಲ ಅಧ್ಯಾಯದಲ್ಲಿ ಭೂತಗಳ ಪರಿಕಲ್ಪನೆ, ಪ್ರಾಚೀನ ಉಲ್ಲೇಖ, ಶಬ್ದಾರ್ಥ ವಿಚಾರಗಳಿವೆ. ಭೂತಗಳ ಸಂಖ್ಯೆ, ವರ್ಗೀಕರಣ, ಭಾಷೆ, ಪ್ರದೇಶ, ಜಾತಿ ಇವು ಎರಡನೆಯ ಅಧ್ಯಾಯದ ವಸ್ತು. ಭೂತರಾಧನೆಯ ಸ್ವರೂಪ, ಪ್ರಭೇದ, ಪ್ರಸರಣ ಮೂರನೇ ಅಧ್ಯಾಯದಲ್ಲಿದೆ. ಈ ಆರಾಧನೆಯನ್ನು ಧಾರ್ಮಿಕ ಜನಪದ ರಂಗಭೂಮಿಯನ್ನಾಗಿ ಕಂಡ ಬಗೆಯನ್ನು ನಾಲ್ಕನೇ ಅಧ್ಯಾಯದಲ್ಲಿ ಚರ್ಚಿಸಲಾಗಿದೆ. ಭೂತಾರಾಧನೆ ಮತ್ತು ಪಾಡ್ದನಗಳ ವಿಚಾರ ಅಧ್ಯಾಯ ೫ರಲ್ಲಿದೆ. ಆರರಲ್ಲಿ ಸಾಮಾಜಿಕ ಸಂಬಂಧಗಳ ನಿರೂಪಣೆ ಇದೆ. ಭೂತಾರಾಧನೆಯ ವೈದ್ಯಕೀಯ ಹಾಗೂ ನ್ಯಾಯಾಂಗಗಳ ಪಾತ್ರವನ್ನು ಇಲ್ಲಿ ವಿವರಿಸಲಾಗಿದೆ. ಎಂಟನೇ ಅಧ್ಯಾಯದಲ್ಲಿ ಇಂದಿನ ಬದಲಾವಣೆಯ ಪ್ರಭಾವ ಮತ್ತು ಪರಿಣಾಮ ದ ಬಗ್ಗೆ ಇದೆ. ೯ರಲ್ಲಿ ಭೂತಾರಾಧನೆ ಮತ್ತು ಸಮಾಜ, ೧೦ರಲ್ಲಿ ವಿದ್ವಾಂಸರ ಅಭಿಪ್ರಾಯವಿದೆ. ೧೧ರಲ್ಲಿ ಸಾಮಾಜಿಕ ಹಾಗೂ ಆಡಳಿತ ವ್ಯವಸ್ಥೆಯ ಬದಲಾವಣೆ ಮತ್ತು ಭೂತಾರಾಧನೆಯ ಬಗ್ಗೆ ಹಾಗೂ ಕೊನೆಯ ಅಧ್ಯಾಯದಲ್ಲಿ ಭೂತಗಳ ಪರಿಕಲ್ಪನೆ, ಇದುವರೆಗೆ ನಡೆದು ಬಂದಿರುವ ಅಧ್ಯಯನಗಳ ಒಂದು ಸ್ಥೂಲ ಸಮೀಕ್ಷೆಯನ್ನು ಲೇಖಕರು ಕಟ್ಟಿಕೊಟ್ಟಿದ್ದಾರೆ.
ಭೂತಾರಾಧನೆ ಒಂದು ಸಾಮಾಜಿಕ ವ್ಯವಸ್ಥೆಯೂ ಹೌದು:
ಭೂತಾರಾಧನೆಯ ಬಗ್ಗೆ ಬಹಳಷ್ಟು ಕೃತಿಗಳು ಇಲ್ಲಿಯವರೆಗೆ ಪ್ರಕಟವಾಗಿದ್ದರೂ ಈ ಕೃತಿಯಲ್ಲಿ ಇರುವ ಹಾಗೆ ಎಲ್ಲಾ ಆಯಾಮಗಳಲ್ಲೂ ದೈವಾರಾಧನೆಯ ವಿಷಯವನ್ನು ಪದರ ಪದರವಾಗಿ ವಿವರಿಸಿದ ಕೃತಿ ಬೇರೊಂದು ಇಲ್ಲ. ದಕ್ಷಿಣ ಕನ್ನಡದ ಮೂರು ಮುಖ್ಯ ವೈಶಿಷ್ಟ್ಯಗಳಲ್ಲಿ ಒಂದು ಭೂತಾರಾಧನೆ. ಇದರ ಸ್ವರೂಪ ಸರಳವಾದದ್ದಲ್ಲ. ಅದು ಬಹು ಮುಖ್ಯವಾದ ಒಂದು ಸಾಮಾಜಿಕ ವ್ಯವಸ್ಥೆಯೂ ಹೌದು. ಭೂತರಾಧನೆಯ ಪ್ರಭೇದಗಳಾಗಿರುವ ಕೋಲ, ಬಂಡಿ, ನೇಮ ಮತ್ತು ಅಗೆಲು ತುಂಬಿಗಳನ್ನು ಪ್ರಸ್ತಾಪ ಮಾಡಿ ಸಾಂಸ್ಕೃತಿಕವಾಗಿ ಅವುಗಳ ನಡುವೆ ಇರುವ ವ್ಯತ್ಯಾಸಗಳನ್ನು ಇಲ್ಲಿ ಲೇಖಕರು ತೋರಿಸಿದ್ದಾರೆ.
ಮೊದಲ ಅಧ್ಯಾಯದಲ್ಲಿ ಮಾಯದ ನಡೆ ಎನ್ನುವುದು ಒಂದು ತುಳುವರ ನಂಬಿಕೆ. ಭೂತಗಳು ಮಾಯ ಅಥವಾ ಮಾಯಕ ಎಂಬ ಅಗೋಚರ ಜಗತ್ತಿನಲ್ಲಿ ವಾಸಿಸುತ್ತವೆ. ಕಾರಣಿಕಗಳ ಮೂಲಕ ತಮ್ಮ ಅಸ್ತಿತ್ವವನ್ನು ತೋರಿಸುತ್ತವೆ. ತುಳುವರ ಬದುಕು, ಜೀವನ ದೃಷ್ಟಿ ಇತ್ತೀಚಿನ ವರ್ಷಗಳಲ್ಲಿ ಬದಲಾಗಿರುವುದರಿಂದ ಅವರ ಭೂತಾರಾಧನೆಯಲ್ಲಿಯು ಸಾಕಷ್ಟು ಬದಲಾವಣೆಗಳಾಗಿರುವುದನ್ನು ವಿವರಿಸಿದ್ದಾರೆ.
ಸಾಮಾಜಿಕ ಅಸಮಾನತೆ ಇರುವ ಎಲ್ಲ ಬಗೆಯ ಸಂಕಟಗಳಿಗೆ ಭೂತಾರಾಧನೆ ಒಂದು ವೇದಿಕೆಯಾಗಿದೆ. ಸಾಮಾಜಿಕ ಅವಮಾನ ತರುವ ಸಿಟ್ಟು, ಅಸಹನೆ, ನೋವು, ಪ್ರತಿಭಟನೆ ಇವುಗಳನ್ನು ಇಲ್ಲಿ ಕಾಣಬಹುದು. ಭೂತ ಕಟ್ಟುವ ವರ್ಗದವರನ್ನು ನಿತ್ಯನಿರಂತರ ಕಾಡುವ ಹಸಿವು, ಜೊತೆಗೆ ಸಾಮಾಜಿಕ ವ್ಯವಸ್ಥೆಯಲ್ಲಿ ಇರುವ ಪ್ರತ್ಯೇಕಿಸುವ ಮತ್ತು ಜೋಡಿಸುವ ಪದ್ಧತಿಯನ್ನು ಬೆಂಕಿ ಮತ್ತು ನೀರು ಮೂಲಕ ಭೂತಕೋಲ ಸಂಕೇತಿಸುತ್ತದೆ. ಅನ್ಯಾಯದ ದಾರಿಯಲ್ಲಿ ನಡೆದರೆ ಬೆಂಕಿಯಾಗಿ ಸುಡಬಲ್ಲದು ಎಂಬ ಎಚ್ಚರಿಕೆ ಇದರಲ್ಲಿದೆ. ಭೂತಾರಾಧನೆಗಳಲ್ಲಿ ಸಾಮಾಜಿಕ ಧ್ವನಿ ಮತ್ತು ಪ್ರತಿಭಟನೆಯ ಅಂಶಗಳಿವೆ ಎಂಬುದು ಬಹು ಮುಖ್ಯವಾದ ಮಾತು.
‘ಭೂತಗಳ ಪರಿಕಲ್ಪನೆ’:
ಭೂತಗಳನ್ನು ದೈವಿಕ ಶಕ್ತಿ ಎಂದು ತುಳನಾಡಿನವರು ಆರಾಧಿಸುತ್ತಾರೆ ಆದರೆ ಇತ್ತೀಚಿನ ದಿನಗಳಲ್ಲಿ ದೇವಾಲಯಗಳ ಮಾದರಿಯಲ್ಲಿ ಭೂತದ ಗುಡಿಗಳ ರಚನೆಯಾಗಿ ವೈದಿಕ ರೀತಿಯ ಪೂಜೆ, ಮೂರ್ತಿ ಪ್ರತಿಷ್ಠಾಪನೆ ನಡೆಯುತ್ತಿದೆ. ಇದು ವೈದಿಕತೆ ಪ್ರವೇಶಿಸುವುದಕ್ಕೆ ಕಾರಣವಾಗಿದೆ ಎನ್ನುತ್ತಾರೆ. ನಂಬಿದವರಿಗೆ ಭೂತಗಳು ಒಳ್ಳೆಯದನ್ನು ಮಾಡುತ್ತವೆ ಎನ್ನುವ ಪ್ರತೀತಿ ಇದೆ. ಮಾನಸಿಕ ನಂಬಿಕೆಯನ್ನು ಮುಖ್ಯವಾಗಿಟ್ಟುಕೊಂಡು ಭೂತದ ಪರಿಕಲ್ಪನೆಯನ್ನು ನಿರೂಪಿಸಬೇಕಾಗುತ್ತದೆ. ಭೂತ, ಪ್ರೇತ, ಪಿಶಾಚಿ, ಕುಲೆ ಇವು ನಾಲ್ಕು ವಿಭಿನ್ನವಾದವು.
ಭೂತಗಳು ಈಶ್ವರನ ಗಣಗಳು ಮತ್ತು ಈಶ್ವರನೇ ಭೂತಗಳನ್ನು ಸೃಷ್ಟಿಸಿ ಭೂಲೋಕಕ್ಕೆ ಕಳುಹಿಸಿದ ಎಂಬ ಒಂದು ಪುರಾಣ ಪ್ರಚಾರದಲ್ಲಿದೆ. ಭೂತಾರಾದನೆಯ ಹೆಸರುಗಳನ್ನು ನೋಡಿದರೆ ಅನೇಕ ಭೂತಗಳು ವೈದಿಕ ಪುರಾಣಗಳ ಜಗತ್ತಿಗೆ ಸೇರಿದವೇನ್ನುವುದು ಗೊತ್ತಾಗುತ್ತದೆ. ಭೂತರಾಧನೆ ಒಂದು ಧಾರ್ಮಿಕ ರಂಗಭೂಮಿ. ಇದಕ್ಕೆ ಸಂಬಂಧಿಸಿದಂತೆ ಹಲವು ಆಚರಣೆಗಳಿವೆ. ವಿಧಿವಿಧಾನಗಳಿವೆ. ನಿರ್ದಿಷ್ಟ ನಿಯಮಗಳನ್ನು ಪಾಲಿಸಿ ವಿಧಿವಿಧಾನಗಳನ್ನು ನಡೆಸಿ ಆರಾಧಿಸುವುದನ್ನು ನೇಮ ಎನ್ನುತ್ತಾರೆ. ಭೂತದ ಬಣ್ಣಗಾರಿಕೆ ಮತ್ತು ವೇಷಭೂಷಣಗಳು ಸಹ ಮುಖ್ಯವಾದವು. ಸಾಮಾನ್ಯ ವ್ಯಕ್ತಿತ್ವ, ಸಾಹಸ ಪ್ರದರ್ಶನ ಭೂತಗಳ ಮುಖ್ಯ ಪ್ರವೃತ್ತಿ. ಅನ್ಯಾಯದ ವಿರುದ್ಧ ಸೆಟೆದು ನಿಂತು ಪ್ರತಿಭಟನೆ ನಡೆಸುತ್ತವೆ. ಒಟ್ಟಿನಲ್ಲಿ ಭೂತದ ಅಲಂಕಾರ, ವಸ್ತುಗಳ ಅಂದ- ಚಂದ, ಕಲಾಕೌಶಲ ಸೌಂದರ್ಯ ಪ್ರಜ್ಞೆ, ನಾನೀನ್ಯತೆ ಇವು ಭೂತ ಕಟ್ಟುವ ಕಲಾವಿದರ ಸೃಜನಶೀಲತೆಗೆ ಸಾಕ್ಷಿಯಾಗಿರುವುದನ್ನು ಇಲ್ಲಿ ಪ್ರಸ್ತಾಪಿಸಿದ್ದಾರೆ.
೩೮೪ ಭೂತಗಳು:
ಪ್ರಾಂತ್ಯವಾರು ಭೂತಗಳ ಹೆಸರುಗಳು ಬೇರೆಬೇರೆಯಾಗಿವೆ. ತುಳುನಾಡಿನ ಕೆಲವು ಪ್ರದೇಶದಲ್ಲಿ ಕೆಲವು ಭೂತಗಳನ್ನು ಆರಾಧಿಸಿದರೆ ಕುಂದಾಪುರ ಕಡೆಯ ಭೂತಗಳು ಸ್ವಲ್ಪ ವಿಶೇಷವಾಗಿದೆ. ಈಗ ಮಾಡಲಾದ ಪಟ್ಟಿಯಲ್ಲಿ ಸುಮಾರು ೩೬೦ ಭೂತಗಳ ಜೊತೆಗೆ ೨೪ ಭೂತಗಳು ಹೊಸದಾಗಿ ಸೇರ್ಪಡೆಯಾಗಿವೆ. ಭೂತ ಕಟ್ಟುವ ಕಲಾವಿದರ ಜಾತಿ ನಲಿಕೆಯವರು ಮತ್ತು ಪರವ ಕೊಂಬದರು ಎನ್ನುವುದಾಗಿದೆ. ತಲೆಮಾರಿನಿಂದ ತಲೆಮಾರಿಗೆ ದಾಟಿಕೊಂಡು ಬಂದಿರುವ ಭೂತಾರಾಧನೆ ವರ್ಷಕ್ಕೆ ಒಂದು ಬಾರಿ ಉತ್ಸವದಂತೆ ನಡೆಯುತ್ತದೆ. ಆರಾಧನೆಯ ವಿಧಾನಗಳನ್ನು ವ್ಯತ್ಯಾಸವಾಗದ ರೀತಿಯಲ್ಲಿ ಉಳಿಸಿಕೊಂಡು ಆಚರಿಸಲಾಗುತ್ತದೆ. ಕೆಲವು ಭೂತಗಳಿಗೆ ಕೆಂಡಸೇವೆ ನಡೆಯುತ್ತದೆ. ಬೆಂಕಿಯ ಕೆಂಡದ ರಾಶಿಯ ಮೇಲೆ ಭೂತದ ಕಲಾವಿದರು ಓಡುವುದು ಇದರ ವೈಶಿಷ್ಟ್ಯ. ಬಂಟ್ವಾಳದ ಕೆಲವು ಕಡೆ ಇದನ್ನು ಬಂಡಿ ಜಾತ್ರೆ ಮತ್ತು ಮೆಚ್ಚಿ ಎಂದು ಕರೆದರೆ, ಬೆಳ್ತಂಗಡಿ, ಸುಳ್ಳದ ಕಡೆ ಜಾಲತಾ ಎಂದು ಕರೆಯಲಾಗುತ್ತದೆ. ಕೆಲವು ಕಡೆ ಬಂಡಿ ಜಾತ್ರೆ ಆರಾಧನೆಯನ್ನು ನಡೆಸುವುದನ್ನು ವಿವರಿಸಿದ್ದಾರೆ.
ಜನಪದ ರಂಗಭೂಮಿಯಾಗಿ ವಿಕಾಸ :
ಭೂತಾರಾಧನೆ ಧಾರ್ಮಿಕ, ಜನಪದ ರಂಗಭೂಮಿಯಾಗಿ ವಿಕಾಸ ಹೊಂದಿದೆ. ಆರಾಧನೆಯು ಈ ಧಾರ್ಮಿಕ ಜನಪದ ರಂಗಭೂಮಿಯ ಮುಖ್ಯ ಉದ್ದೇಶವಾಗಿದೆ. ಭೂತಗಳನ್ನು ತೃಪ್ತಿಗೊಳಿಸುವ ದೃಷ್ಟಿಯಿಂದ ಆರಾಧನೆಯನ್ನು ನಡೆಸುತ್ತಾರೆ. ಆರಾಧನೆಯ ಸಂದರ್ಭದಲ್ಲಿ ಭೂತಗಳು ಕುಣಿತ ಮತ್ತು ಮಾತುಗಳ ಮೂಲಕ ತೃಪ್ತಿ ವ್ಯಕ್ತಪಡಿಸುತ್ತವೆ. ಇದನ್ನು ನೋಡಿ ಜನರು ತೃಪ್ತಿ ಪಡೆಯುತ್ತಾರೆ. ಭೂತದ ವೇಷ -ಭೂಷಣಗಳಲ್ಲಿ ಮುಖವರ್ಣಿಕೆಗಳು ಮಹತ್ವದ್ದಾಗಿವೆ. ಈ ವೇಷ ಭೂಷಣಗಳನ್ನು ಆಭರಣಗಳು, ಮುಖವಾಡಗಳು, ಆಯುಧಗಳು, ಬಟ್ಟೆ ತಿರಿ ಹಾಳೆಯಿಂದ ಮಾಡಿದ ಶಿರೋಭೂಷಣಗಳು ಎಂದು ವರ್ಗೀಕರಿಸಲಾಗುತ್ತದೆ. ಆರಾಧನೆಯ ಸಂದರ್ಭದಲ್ಲಿ ವಾದ್ಯ ಪರಿಕರಗಳನ್ನು ಅಂದರೆ ತೆಮ್ಮರೆ, ಡೋಲು, ದುಡಿ, ತಾಸೆ, ಶೃತಿ, ನಾಗಸ್ವರ, ಬ್ಯಾಂಡ್, ವಾಲಗ ಬಳಸುವುದನ್ನು ಪ್ರಸ್ತಾಪಿಸಿದ್ದಾರೆ.
ಭೂತಾರಾಧನೆಯು ವಿಜಯನಗರ ಅರಸರ ಕಾಲದಲ್ಲಿ ಉಗಮ ಹೊಂದಿ, ಸ್ಥಳೀಯ ಅರಸು ಮನೆತನಗಳ ನಿರಂತರ ಬೆಂಬಲದಿಂದ ಉಳಿದುಕೊಂಡು ಬಂದಿದೆ. ಸಾಮಾಜಿಕ ಪ್ರೇರಣೆಯಿಂದ ಭೂತಾರಾಧನೆ ಒಂದು ವ್ಯವಸ್ಥೆಯಾಗಿ ರೂಪುಗೊಂಡಿರುವುದನ್ನು ಕಾಣಬಹುದು. ನ್ಯಾಯಾಂಗ ಪದ್ಧತಿಯಾಗಿ ಭೂತಾರಾಧನೆ ನಡೆಯುವುದನ್ನು ಕಾಣಬಹುದು. ಭೂಮಿ, ನೀರು, ಸಸ್ಯ ಸಂಪತ್ತಿನ ಒಡೆತನದ ಬಗ್ಗೆ ಒಪ್ಪಿಕೊಂಡ ವ್ಯಾಜ್ಯಗಳನ್ನು ಪರಿಹರಿಸುವುದು, ಆಸ್ತಿ -ಹಣದ ಕಾರಣದಿಂದ ಉಂಟಾದ ಕುಟುಂಬ ಕಲಹ ಪರಿಹರಿಸುವುದು, ಕಾಯಿಲೆಗಳನ್ನು ನಿವಾರಿಸುವುದು, ಕಳ್ಳತನವಾದಾಗ ಕಳ್ಳತನ ಮಾಡಿದ ವ್ಯಕ್ತಿಗೆ ಶಿಕ್ಷೆ ಕೊಡುವುದು, ಸಾಲ ಮರಳಿ ಸಿಗದೇ ಇದ್ದಾಗ, ಅಪಹರಣ ಆದಾಗ ಅವರ ಶೋಧ ಮಾಡುವುದನ್ನು ವಿವರಿಸಿದ್ದಾರೆ.
ಭೂತರಾಧನೆ ಮತ್ತು ಯಕ್ಷಗಾನ ಬಯಲಾಟ ಈ ರಂಗಸಂಪ್ರದಾಯಗಳು ಕರಾವಳಿಯಲ್ಲಿ ಪ್ರಚಾರದಲ್ಲಿವೆ. ಇಲ್ಲಿ ಕಂಡುಬರುವ ಬಣ್ಣಗಾರಿಕೆ, ವೇಷಭೂಷಣ, ಕುಣಿತಗಳನ್ನು ನೋಡಿದಾಗ ಇವುಗಳಲ್ಲಿ ಹೋಲಿಕೆ ಇರುವುದು ಕಂಡುಬರುತ್ತದೆ. ಆರಾಧನಾ ರಂಗಭೂಮಿಯಾಗಿರುವ ಭೂತಾರಾಧನೆಯು ಯಕ್ಷಗಾನದ ಮೇಲೆ ಪ್ರಭಾವ ಬೀರಿರುವ ಸಾಧ್ಯತೆಗಳಿವೆ ಎಂದು ಅಂದಾಜಿಸಲಾಗುತ್ತಿದೆ ಎನ್ನುತ್ತಾರೆ ಲೇಖಕರು.
ಆರಾಧನಾ ಭಾವ ಮತ್ತು ಕಲಾವಂತಿಕೆಗೆ ಭೂತಾರಾಧನೆಯ ಪ್ರಭಾವ ಕಾರಣವಾಗಿದೆ ಎಂದು ಶ್ರೇಣಿ ಗೋಪಾಲಕೃಷ್ಣ ಭಟ್ಟರು ಹೇಳಿರುವುದನ್ನಿಲ್ಲಿ ಪ್ರಸ್ತಾಪಿಸಲಾಗಿದೆ. ಭೂತಾರಾಧನೆಯು ಪ್ರಸ್ತುತ ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆ ಬದಲಾದಂತೆ ತನ್ನ ಸಾಮಾಜಿಕ- ಸಾಂಸ್ಕೃತಿಕ ಸ್ವರೂಪದಲ್ಲಿ ಬದಲಾವಣೆಗಳನ್ನು ಕಂಡಿದೆ. ತುಳುನಾಡಿನಿಂದ ವಿದೇಶಗಳಿಗೆ, ಮುಂಬಯಿಯಂತಹ ನಗರಗಳಿಗೆ ಹೋಗಿ ಉದ್ಯಮವನ್ನು ಮಾಡುತ್ತಿರುವ ಜನರ ದೊಡ್ಡ ಮೊತ್ತ ಭೂತಾರಾಧನೆ ಕ್ಷೇತ್ರಕ್ಕೆ ಹರಿದು ಬರುತ್ತಿದೆ. ಜಾತಿ ಮತ್ತು ಸಂಘಟನೆಗಳ ಮೂಲಕ ಭಾಗವಹಿಸುವ ಜನರ ಸಂಖ್ಯೆ ಹೆಚ್ಚುತ್ತಿದೆ. ಧಾರ್ಮಿಕತೆಯ ಮನೋಭಾವ ಜನರಲ್ಲಿ ಹೆಚ್ಚಾಗುತ್ತಿರುವುದು ಒಂದು ಕಾರಣವಾದರೆ ಸೇರುವಿಕೆ ಅವಕಾಶ ಮತ್ತೊಂದು ಕಾರಣವಾಗಿದೆ. ಈ ರೀತಿ ಬದಲಾದ ಸಾಮಾಜಿಕ ಸಂದರ್ಭದಲ್ಲಿ ಒಂದು ಜನಪ್ರಿಯ ಆರಾಧನಾ ಪದ್ಧತಿಯಾಗಿ ಭೂತಾರಾಧನೆ ಕ್ರಿಯಾಶೀಲವಾಗಿದೆ ಎಂದು ಲೇಖಕರು ಅಭಿಪ್ರಾಯಪಡುತ್ತಾರೆ.
- ದತ್ತಾತ್ರೇಯ ಹೆಗಡೆ
...................

Comments
Post a Comment