ಇಂದಿನ ತಲೆಮಾರಿಗೆ ಅತ್ಯಗತ್ಯ ಕೃತಿ
‘ಮನುಷ್ಯ ಜಾತಿ ತಾನೊಂದೆ ವಲಂ’
ಕನ್ನಡ ಸಾಂಸ್ಕೃತಿಕ ಲೋಕದ ಸೋಜಿಗದ, ತಾವು ನಂಬಿದ್ದನ್ನು ಬರೆಯುತ್ತ, ಬದುಕುತ್ತ ಬಂದ ವ್ಯಕ್ತಿ ಬರಗೂರು ರಾಮಚಂದ್ರಪ್ಪ ಅವರ ಕೃತಿ ‘ಮನುಷ್ಯ ಜಾತಿ ತಾನೊಂದೆ ವಲಂ’. ಇದು ಸಾಮಾಜಿಕ ಪ್ರಜ್ಞೆಗೆ ಪೂರಕ ಚಿಂತನೆಯನ್ನೊದಗಿಸುವ ಪುಸ್ತಕ. ಪಂಪ ಮಹಾಕವಿ ಹೇಳಿದಂತೆ ‘ಮನುಷ್ಯ ಜಾತಿ ತಾನೊಂದೆ ವಲಂ’ ಸಾರ್ವಕಾಲಿಕ ಆದರ್ಶದ ಮೌಲ್ಯದ ಮಾತು. ಇದನ್ನೇ ಇಟ್ಟುಕೊಂಡು ಮಾನವೀಯ ಮೌಲ್ಯಾಧಾರಿತ ಲೇಖನಗಳನ್ನು ಬರೆದಿದ್ದಾರೆ.
ಜಾತಿ ಮತ್ತು ಧರ್ಮಗಳ ಮುನ್ನೆಲೆಯಲ್ಲಿ ಸಮಾಜವನ್ನು ಒಡೆದು ಆಳುವ ಮೂಲಭೂತವಾದಿ ಮನೋಧರ್ಮವು ಮುನ್ನೆಲೆಗೆ ಬಂದಿರುವ ಇವತ್ತಿನ ಸಂದsದಲ್ಲಿ ಪಂಪನ ಈ ಮಾತು ಪ್ರಸ್ತುವಾಗಿದೆ. ಎಲ್ಲಾ ಜಾತಿ-ಧರ್ಮದವರು ನಾವೆಲ್ಲರೂ ಮನುಷ್ಯರೆಂಬ ಆದರ್ಶವನ್ನು ಅಂತರ್ಗತ ಮಾಡಿಕೊಳ್ಳಬೇಕಿದೆ.
ಈ ಕೃತಿಯಲ್ಲಿ ಒಟ್ಟೂ ೧೫ ಲೇಖನಗಳಿವೆ. ಇದರಲ್ಲಿ ಮನುಷ್ಯತ್ವ ಬೆಳೆಸಿಕೊಳ್ಳುವುದು, ಮಾನವೀಯತೆ ಮರೀಚಿಕೆಯಾಗುತ್ತಿರುವುದು, ಮಹಿಳೆ ದೇಹ ರಾಜಕಾರಣಕ್ಕೆ ಬಳಕೆಯಾಗುತ್ತಿರುವುದು, ದೇಶ ಬೆಸೆಯುವ ಬಗೆ, ಧರ್ಮ, ಸಮಾಜ, ದ್ವೇಷರಹಿತ ದೇಶ ಕಟ್ಟುವುದು, ರಾಷ್ಟ್ರೀಯತೆ, ಜಾತ್ಯತೀತತೆ, ಮತೀಯತ್ವ ಮೊದಲಾದ ವಿಷಯಗಳ ಕುರಿತ ಪ್ರಾಜ್ಞ ಲೇಖನಗಳಿವೆ. ಇವೆಲ್ಲವೂ ಇಂದಿನ ತಲೆಮಾರಿಗೆ ಅತ್ಯಗತ್ಯ ಬರೆಹಗಳಾಗಿವೆ. ಇಲ್ಲಿ ಕೆಲವು ಲೇಖನಗಳ ಅತರಾಳವನ್ನಷ್ಟೇ ವಿವರಿಸಲಾಗಿದೆ.
ಮೊದಲ ಲೇಖನ ‘ಮನುಷ್ಯರು ಬೇಕಾಗಿದ್ದಾರೆ ಹುಡುಕೋಣ ಬನ್ನಿ’ ಇದರಲ್ಲಿ ಲೇಖಕರು ದೇಶದಲ್ಲಿ ಈಗ ಮನುಷ್ಯರನ್ನು ಜಾತಿ, ವರ್ಣ, ವರ್ಗಗಳು ಮೂಲೆಗೆ ತಳ್ಳುತ್ತಿವೆ. ಈ ತಾರತಮ್ಯದ ಸಂಕಟದಲ್ಲಿ, ಸಾವು- ನೋವಿನ ನಡುವೆ ಬದುಕುತ್ತಿರುವ ಮನುಷ್ಯ ಮನಸ್ಸಿನ ಜೊತೆ ಮಾತನಾಡುವವರು ಕಡಿಮೆಯಾಗುತ್ತಿದ್ದಾರೆ. ಜನರು ತಮ್ಮಲ್ಲಿ ಮನುಷ್ಯ ನೆಲೆಯನ್ನು ಹುಡುಕಿಕೊಳ್ಳಬೇಕಾಗಿದೆ ಎನ್ನುತ್ತಾ, ಮನುಷ್ಯತ್ವದ ಮಾರಣಹೋಮ ನಡೆಯುತ್ತಿದೆ. ಕೋಮು ಸಂಘರ್ಷ ಸಂದರ್ಭದಲ್ಲಿ ಜಾತಿವಾರು ಜನ ಸತ್ತಿದ್ದನ್ನು ಹೇಳಲಾಗುತ್ತದೆಯೇ ವಿನಾ ಎಷ್ಟು ಮನುಷ್ಯರು ಸತ್ತರು ಎನ್ನುವುದನ್ನು ಯಾರೂ ಲೆಕ್ಕ ಕೊಡುವುದಿಲ್ಲ. ನಮ್ಮ ಒಳ -ಹೊರಗೆ ಮನುಷ್ಯರನ್ನು ಹುಡುಕಬೇಕಿದೆ ಎಂದು ಹೇಳುತ್ತಾರೆ.
ಎರಡನೇ ಲೇಖನ ‘ಮಾನವೀಯತೆ ಎಂಬ ಮರೀಚಿಕೆ’ ಇದರಲ್ಲಿ ಮಾನವೀಯತೆ ಎಂಬುದು ಒಂದು ಆದರ್ಶ ಮೌಲ್ಯ. ಮನುಷ್ಯ ದಕ್ಕಿಸಿಕೊಳ್ಳಬೇಕಾದ ರೂಢಿಸಿಕೊಳ್ಳಬೇಕಾದ, ಮನಸ್ಸಿನಲ್ಲಿ ಅಂತರ್ಗತ ಮಾಡಿಕೊಳ್ಳಬೇಕಾದ ಅಮೂರ್ತ ಮೌಲ್ಯ ಇದಾಗಿದೆ. ಮಾನವೀಯತೆ ಎನ್ನುವುದು ಇದಮಿತ್ಥಮ್ ಎಂಬ ಅರ್ಥ ವಿವರಣೆಗೆ ದಕ್ಕುವ ಪರಿಕಲ್ಪನೆಯಲ್ಲ. ಅದೊಂದು ಅನ್ಯರಿಗೆ ಹಾನಿಕರಕವಲ್ಲದ ಅನುಭವ ಮತ್ತು ಅಭಿವ್ಯಕ್ತಿ ಎಂದು ಸ್ಥೂಲವಾಗಿ ಹೇಳಬಹುದೆಂದು ವಿವರಿಸುತ್ತಾರೆ.
ಮೂರನೇ ಬರಹ ‘ದೇಹ ರಾಜಕಾರಣದ ದಾಳವಾಗಿ ಮಹಿಳೆ’ ಇದರಲ್ಲಿ ಮಹಿಳೆಯನ್ನು ಎರಡನೇ ದರ್ಜೆಯವರನ್ನಾಗಿ ಕಾಣುತ್ತಿರುವ ವ್ಯವಸ್ಥೆಯ ಬಗ್ಗೆ ವಿವರಿಸುತ್ತಾರೆ. ಪುರಾಣೇತಿಹಾಸದಲ್ಲಿ ಮಹಿಳೆಯರನ್ನು ಬಳಸಿಕೊಂಡ ರೀತಿ ಕೂಡ ಇಲ್ಲಿ ಉದಾಹರಿಸುತ್ತಾರೆ. ದೇಹ ರಾಜಕಾರಣದ ಭಾಗವಾಗಿಯೇ ಮಹಿಳೆಯರ ಮಾರಾಟ ಪದ್ಧತಿಯನ್ನು ಕೂಡ ಕಾಣಲಾಗುತ್ತಿದೆ. ಅಕ್ಕಮಹಾದೇವಿ ಮಹಿಳಾ ಪ್ರತಿರೋಧದ ಪ್ರತಿಕ. ರಾಜಪ್ರಭುತ್ವ, ಪುರುಷ ಪ್ರಧಾನ ಸಮಾಜಕ್ಕೆ ಎದುರಾಗಿ ನಿಂತ ಅಸಾಧಾರಣ ಮಹಿಳೆ. ದೇಹ ರಾಜಕಾರಣವನ್ನು ಧಿಕ್ಕರಿಸಿದ ಪ್ರತೀಕವಾಗಿ ಎಂದಿಗೂ ಪ್ರಗತಿಪರ ಸ್ತ್ರೀ ಸಂವೇದನೆಯ ಸಾಕ್ಷಿಪ್ರಜ್ಞೆಯಾಗಿದ್ದಾರೆ. ಇಂದಿಗೂ ಮಹಿಳೆಯರ ಸ್ಥಿತಿಗತಿಗಳು ಸಂಪೂರ್ಣ ಸ್ಥಿತ್ಯಂತರ ಹೊಂದಿಲ್ಲ ಎನ್ನುವುದನ್ನು ವಿವರಿಸುತ್ತಾರೆ.
‘ಜನಮಾನಸದ ಮೂಲಕ ಬುದ್ಧ ಪ್ರಜ್ಞೆ ’ ಎಂಬಲ್ಲಿ ಸಾವಿಲ್ಲದ ಮನೆಯ ಸಾಸಿವೆ ತಾ ಎಂದು ಕಿಸಾಗೋತಮಿಗೆ ಬುದ್ಧ ಹೇಳುವ ಮೂಲಕ ಬುದ್ಧ ಪ್ರಜ್ಞೆಯ ಬೆಳಗಿರುವುದನ್ನು ಕಾಣಬಹುದು. ನೀರಿಗಾಗಿ ಶಾಕ್ಯರು ಮತ್ತು ಕೊಲಿಯ ವಂಶಸ್ಥರ ನಡುವೆ ನಡೆದ ಸಭೆಯಲ್ಲಿ ಯುದ್ಧ ನಡೆಸುವ ಬಗ್ಗೆ ನಿರ್ಣಯವಾಗುತ್ತದೆ. ಬುದ್ಧ ಯುದ್ಧವನ್ನು ವಿರೋಧಿಸುತ್ತಾನೆ. ರಾಜ್ಯ, ಕೋಶಾದಿಗಳನ್ನು ತ್ಯಜಿಸಿ ಸ್ವಾತಂತ್ರ್ಯದ ಶೋಧಕ್ಕೆ ಪ್ರಯಾಣ ಬೆಳೆಸುತ್ತಾನೆ. ಈ ಮೂಲಕ ಯುದ್ಧ ವಿರೋಧಿ ಬುದ್ಧ ಪ್ರಜ್ಞೆಯು ಜನಮಾನಸವನ್ನು ತಲುಪುವುದನ್ನು ವಿವರಿಸಿದ್ದಾರೆ. ಅಂಬೇಡ್ಕರ್ ಸಂವಿಧಾನದ ಅಂತಿಮ ಕರಡು ಸಂದರ್ಭದಲ್ಲಿ ಮಾಡಿದ ಭಾಷಣದಲ್ಲಿ ಸ್ವಾತಂತ್ರ್ಯ, ಸಮಾನತೆ, ಸೋದರತೆಯ ತತ್ವ ಆದರ್ಶಗಳನ್ನು ಬುದ್ಧ ಬೋಧನೆಯಿಂದ ಪಡೆದಿದ್ದೇನೆ ಎನ್ನುವುದನ್ನು ನೆನೆಪಿಸುತ್ತಾರೆ. ಬುದ್ಧ ಪ್ರಜ್ಞೆ ಸರ್ವಾಧಿಕಾರದ ಬದಲು ಈ ಮೂರು ಗುಣಗಳನ್ನು ಬಯಸುತ್ತದೆ ಎಂದಿದ್ದಾರೆ.
‘ದ್ವೇಷಾತೀತ ಭಾರತವನ್ನು ಒಟ್ಟಾಗಿ ಕಟ್ಟೋಣ’ ಎಂಬ ಲೇಖನಲ್ಲಿ ಧರ್ಮವು ಮೂಲಭೂತವಾಗಿದೆ. ಜಾತಿಗಳು ಜೈಲಾಗಬಾರದು. ಧರ್ಮಗಳು ದೀಪವಾಗಬೇಕು ಎನ್ನುವ ಲೇಖಕರು, ಕ್ರಿ.ಶ ೮೫೦ ರಲ್ಲಿ ರಚಿತವಾದ ಕವಿರಾಜಮಾರ್ಗ ಕೃತಿಯಲ್ಲಿ ಪರವಿಚಾರ ಮತ್ತು ಪರಧರ್ಮಗಳನ್ನು ಸಹಿಸುವುದೇ ನಿಜವಾದ ಬಂಗಾರ ಎಂದು ಹೇಳಿರುವುದನ್ನು ಪ್ರಸ್ತಾಪಿಸುತ್ತಾರೆ. ಗಾಂಧೀಜಿಯವರ ಧಾರ್ಮಿಕತೆಯಲ್ಲಿ ಸಿದ್ಧಾಂತ ಪ್ರಧಾನವಾಗಿತ್ತು. ಅದಕ್ಕಾಗಿ ಜೀವನವನ್ನೇ ಮುಡುಪಾಗಿಟ್ಟರು. ದ್ವೇಷ ಬಿತ್ತುವವರು ಯಾವುದೇ ಧರ್ಮ, ಜಾತಿಯವರಾದರೂ ಎಲ್ಲರೂ ಅವರನ್ನು ವಿರೋಧಿಸಬೇಕು ಎಂದು ಕರೆಕೊಡುತ್ತಾರೆ.
‘ರಾಷ್ಟ್ರೀಯತೆ ಮತ್ತು ಜಾತ್ಯತೀತತೆ ಪ್ರತ್ಯೇಕವೇ’ ಎಂಬ ಲೇಖನದಲ್ಲಿ, ರಾಷ್ಟ್ರೀಯತೆಯನ್ನು ಬಹುಸಂಖ್ಯಾತರ ನೆಲೆಯಿಂದಲೂ, ಜಾತ್ಯತೀತತೆಯನ್ನು ಅಲ್ಪಸಂಖ್ಯಾತರ ನೆಲೆಯಿಂದಲೂ ನಿರ್ವಹಿಸುವ ಹುಸಿನೋಟ ವಿಜೃಂಭಿಸುತ್ತಿದೆ. ಇದರ ಮರುಪರಿಶೀಲನೆ ಮಾಡಿಕೊಳ್ಳದಿದ್ದರೆ ದೇಶವನ್ನು ಹಾದಿ ತಪ್ಪಿಸುವ ಕುಟಿಲ ಉಪಾಯಗಳಿಗೆ ಪಾಯತೋಡಿದಂತಾಗುತ್ತದೆ ಎನ್ನುತ್ತಾರೆ. ಸುಭಾಷ್‌ಚಂದ್ರ ಬೋಸ್‌ರಲ್ಲಿ ಜಾತ್ಯತೀತತೆ ಅಂತರ್ಗತವಾಗಿದೆ. ಮಾಜಿ ಪ್ರಧಾನಿ ವಾಜಪೇಯಿ ಸಹ ಜಾತ್ಯತೀತತೆಯನ್ನು ಸರ್ವಧರ್ಮ ಸಮಭಾವವೆಂದು ಹೇಳಿದ್ದನ್ನು ನೆನೆಪಿಸುತ್ತಾರೆ.
‘ಒಳ ವಿಮರ್ಶಕರು ಬೇಕಾಗಿದ್ದಾರೆ’ ಎಂಬ ಬರಹದಲ್ಲಿ ಹೊರಗಿನಿಂದ ಬರುವ ವಿಮರ್ಶೆಯನ್ನು ಪರಿಶೀಲಿಸುವ ಮತ್ತು ಒಳಗಿನ ವಿಮರ್ಶೆಯಿಂದ ಪರಿವರ್ತಿಸಿಕೊಳ್ಳುವ ಪ್ರಕ್ರಿಯೆಗೆ ನಮ್ಮನ್ನು ನಾವು ಒಡ್ಡಿಕೊಳ್ಳಬೇಕು. ಸೈದ್ಧಾಂತಿಕ ಜೀವಶಕ್ತಿಯನ್ನು ಉಳಿಸುವ, ಬೆಳೆಸುವ ಸೃಜನಾತ್ಮಕ ದೃಷ್ಟಿಕೋನ ಬೇಕು. ಈ ಅಂಶವನ್ನು ಅಂತರ್ಗತ ಮಾಡಿಕೊಳ್ಳಬೇಕು. ವಚನ ಚಳವಳಿಯಲ್ಲಿ ಒಳ ವಿಮರ್ಶಕರಿದ್ದರು. ಸ್ವಾಮಿ ವಿವೇಕಾನಂದ ಮತ್ತು ಗಾಂಧೀಜಿಯವರು ಒಳ ವಿಮರ್ಶಕರಾಗಿದ್ದರು. ಸಂತ ಜಲಾಲುದ್ದೀನ್ ರೂಮಿ ತಮ್ಮ ನಡೆ, ನುಡಿ, ಚಿಂತನೆ ಎಲ್ಲದರಲ್ಲೂ ಒಳವಿಮಶಕರಾಗಿದ್ದರು ಎನ್ನುತ್ತಾರೆ.
‘ಭಾರತವನ್ನು ಬೆಸೆಯುವ ಬಗೆ ಹೇಗೆ’ ಎಂಬ ಲೇಖನದಲ್ಲಿ ರಾಹುಲ್ ಗಾಂದಿ, ಮಹಾತ್ಮ ಗಾಂದಿ, ಚಂದ್ರಶೇಖರ್ ಮೊದಲಾದವರು ನಡೆಸಿದ ಪಾದಯಾತ್ರೆಯನ್ನು ವಿವರಿಸುವ ಲೇಖಕರು, ಪಾದಯಾತ್ರೆಯನ್ನು ಶುಭೋದ್ಧೇಶದಿಂದ ಯಾರೇ ನಡೆಸಲಿ, ಯಾವ ಪಕ್ಷವೇ ನಡೆಸಲಿ, ಬದ್ಧತೆಯ ಕಾರಣಕ್ಕೆ ಅದು ಸ್ವಾಗತವಾಗುತ್ತದೆ. ಭಾರತದಲ್ಲಿ ಒಡೆದ ಮನಸ್ಸುಗಳನ್ನು ಬೆಸೆಯಲು ಈ ಪಾದಯಾತ್ರೆ ಒಳ್ಳೆಯದೇ ಆಗಿದೆ. ನಮ್ಮ ಶ್ರೇಣಿಕೃತ ಸಮಾಜದಲ್ಲಿ ಜಾತಿ ತಾರತಮ್ಯವಿದೆ, ಆರ್ಥಿಕ ಅಸಮಾನತೆಗಳಿವೆ ಇವುಗಳ ಒಡಕನ್ನು ಬೆಸೆದು ಸಮಾನತೆಯ ಸಮಾಜವನ್ನು ನಿರ್ಮಿಸಲು ಸೂಕ್ತ ಚಿಂತನೆ ಅಗತ್ಯವಾಗಿದೆ. ಎಲ್ಲಾ ನಿಲುವುಗಳನ್ನು ಒಂದಾಗಿಸಿಕೊಂಡು ಪಾದಯಾತ್ರೆಯು ಫಲ ನೀಡುವಂತಹ ಆಗಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
‘ಧರ್ಮ ಸಮಾಜ ಮತ್ತು ಮನಸ್ಸು’ ಎಂಬ ಲೇಖನದಲ್ಲಿ ಧರ್ಮ ಮತ್ತು ದೇವರು ಭಕ್ತರ ಮಾನಸಿಕ ಲೋಕದಲ್ಲಿ ಸಾಕ್ಷಾತ್ಕಾರಗೊಳ್ಳುವ ಶಕ್ತಿ ಆಗಿರಬೇಕು. ಆಗ ಆರೋಗ್ಯಕರ ವಾತಾವರಣವಿರುತ್ತದೆ. ಧರ್ಮ ಮತ್ತು ದೇವರು, ಆಚರಣೆ ಖಾಸಗಿ ಆಗಿರಬೇಕು. ಜನಸಾಮಾನ್ಯರ ಒಳಿತಿನಲ್ಲಿ ಧರ್ಮ ದೇವರನ್ನು ಕಾಣಬೇಕು ಪಂಪ ಮಹಾಕವಿ ಹೇಳಿದಂತೆ ‘ಮನುಷ್ಯ ಜಾತಿ ತಾನೊಂದೇ ವಲಂ’ ಎನ್ನುವುದನ್ನು ಮನಗಾಣಬೇಕಾಗಿದೆ ಎನ್ನುತ್ತಾರೆ.
ಹೀಗೆ ಈ ಕೃತಿಯು ನಮ್ಮ ಪರಂಪರೆಯ ಕೆಲವು ಸಾರ್ವತ್ರಿಕ ಮೌಲ್ಯಗಳನ್ನು ಕಟ್ಟಿಕೊಟ್ಟಿದೆ. ಇವೆಲ್ಲವನ್ನೂ ನಾವು ಆಚರಿಸುವುದರ ಜೊತೆಗೆ ಬೆಳೆಸಬೇಕಿದೆ.
,,,,,,,,,,,,,,,,,,,,,,

Comments
Post a Comment