ಖ್ಯಾತನಾಮರ ಪ್ರೀತಿಯೇ ಹರಿದಿರುವ
‘ನಾಡ ವರ್ಗಳ್’
ಇದು ಕನ್ನಡದ ಸಂವೇದನಾಶೀಲ ಬರಹಗಾರ ಅಗ್ರಹಾರ ಕೃಷ್ಣಮೂರ್ತಿಯವರ ಕೃತಿ. ಈ ಕೃತಿಯಲ್ಲಿ ಲೇಖಕರು ತಮ್ಮ ಸಮಕಾಲಿನ ಸಂದರ್ಭದ, ವಾರಗೆಯಲ್ಲಿ ಹಿರಿಯರಾದ ಮತ್ತು ಪ್ರಭಾವಿಸಿದ, ಮಾರ್ಗದರ್ಶಿಸಿದ, ನೆರವು ನೀಡಿದ ಹಲವಾರು ಖ್ಯಾತನಾಮರ ಜೊತೆಗಿನ ಒಡನಾಟದ ನೆನಪುಗಳನ್ನು ಬರೆದಿದ್ದಾರೆ. ಇದರಲ್ಲಿ ಯಾವುದೇ ಉತ್ಪೇಕ್ಷೆಗಳು, ಹೊಗಳಿಕೆಗಳು, ತೆಗಳಿಕೆಗಳು, ಯಾರನ್ನಾದರೂ ಹಂಗಿಸುವ ಅಥವಾ ಟೀಕಿಸುವ ಕೆಲಸವನ್ನು ಮಾಡಿಲ್ಲ. ಯಾವುದೇ ಪೂರ್ವಗ್ರಹಗಳಿಲ್ಲದ ಬರೆಹಗಳಿವೆ. ಇವುಗಳ ತುಂಬಾ ಪ್ರೀತಿಯೇ ಹರಿದಿದೆ. ಸಮಕಾಲೀನರ ಬಗ್ಗೆ ಬರೆಯುವಾಗ ಇರಬೇಕಾದ ವಿಮರ್ಶಾತ್ಮಕ ಅಂತರವನ್ನು ಉಳಿಸಿಕೊಂಡು ಮೆಚ್ಚುಗೆಯನ್ನು ದಾಖಲಿಸಿದ್ದಾರೆ.
ಪ್ರಸ್ತುತ ಕೃತಿಯಲ್ಲಿ ೨೭ ಹಿರಿಯರ ಕುರಿತಾದ ಬರಹಗಳಿವೆ. ಈ ಕೃತಿಗೆ ‘ಸಂಪನ್ನರ ನಡೆನುಡಿ’ ಎಂಬ ಅಡಿಬರಹವನ್ನು ಲೇಖಕರು ನೀಡಿದ್ದಾರೆ. ಇದರಲ್ಲಿ ಬರಗೂರು ರಾಮಚಂದ್ರಪ್ಪ, ಡಿ.ಎಸ್. ನಾಗಭೂಷಣ, ಜಿ. ಎಸ್. ಶಿವರುದ್ರಪ, ಕೆ. ವಿ. ತಿರುಮಲೇಶ್, ಸಿದ್ದಲಿಂಗಯ್ಯ, ಕೆ. ಮರುಳಸಿದ್ದಪ್ಪ, ಸಚ್ಚಿದಾನಂದನ್, ಪ್ರಭುಶಂಕರ್, ಪೂರ್ಣಚಂದ್ರ ತೇಜಸ್ವಿ, ಜಿ.ಕೆ. ಗೋವಿಂದರಾವ್, ಎಂ. ಡಿ. ನಂಜುಂಡಸ್ವಾಮಿ, ಲಂಕೇಶ್, ವೈಕಂ ಮಹಮ್ಮದ್ ಬಶೀರ್, ಮಾಜಿ ಮುಖ್ಯಮಂತ್ರಿಗಳಾದ ದೇವರಾಜ ಅರಸು, ಎಸ್ ಬಂಗಾರಪ್ಪ ಅವರ ಕುರಿತಾದ ಬರಹಗಳಿವೆ.
ಕೃತಿಯಲ್ಲಿನ ಕೆಲವು ಬರೆಗಹಗಳ ಬಗ್ಗೆ ಗಮನಿಸುವುದಾದರೆ, ‘ಒಂದು ಜನಾಂಗದ ಕಣ್ಣು ತೆರೆಸಿದ ಬಿ. ಬಸವಲಿಂಗಪ್ಪ’ ಅವರನ್ನು ನೆನಪು ಮಾಡಿಕೊಳ್ಳುವ ಲೇಖಕರು, ಅವರ ವಕೀಲ ವೃತ್ತಿ ಮತ್ತು ರಾಜಕೀಯ ಜೀವನದ ವಿವರಗಳ ಬಗ್ಗೆ ಬರೆಯದೆ ಕರ್ನಾಟಕದ ವರ್ಣರಂಜಿತ ರಾಜಕಾರಣಿ ಎಂದಷ್ಟೇ ಹೇಳಿದ್ದಾರೆ. ೧೯೭೩ರ ಅವಧಿಯಲ್ಲಿ ‘ಬೂಸಾ’ ಪ್ರಕರಣದ ಮೂಲಕ ಹೆಸರಾದ ಬಸವಲಿಂಗಪ್ಪ ಅಂಬೇಡ್ಕರ್ ವಿಚಾರವಂತಿಕೆಯನ್ನು ಒಪ್ಪಿದವರು. ತಲೆಯ ಮೇಲೆ ಮಲ ಬರುವ ಪದ್ಧತಿಯನ್ನು ಕಾಯ್ದೆಯ ಮೂಲಕ ನಿಷೇಧಿಸಿದರು. ಇದು ದೇಶಕ್ಕೆ ಮಾದರಿಯಾಗಿತ್ತು ಎನ್ನುತ್ತಾರೆ.
‘ಅನುದಿನ ಹಾಡುತಿರಲಿ’ ಎಂಬ ಬರಹದಲ್ಲಿ ಬಾನಂದೂರು ಕೆಂಪಯ್ಯ ಕುರಿತಾದ ಲೇಖನದಲ್ಲಿ ಪ್ರಸಿದ್ಧ ಮತ್ತು ಜನಪ್ರಿಯ ಗಾಯಕರ ಹಿರಿಯಣ್ಣನಂತೆ ಕೆಂಪಯ್ಯ ಇದ್ದರು. ಅವರಿಗೆ ದಕ್ಕಿರುವ ಕಲೆ ತರಬೇತಿಯಿಂದ ಬಂದದ್ದಲ್ಲ. ತನ್ನ ಸಮುದಾಯದಿಂದ ಮತ್ತು ತನ್ನ ವಂಶದ ಹಿರಿಯರಿಂದ ಬಂದ ನಿಸರ್ಗದ ಕಲೆ ಎನ್ನುತ್ತಾ, ‘ಬದ್ಧತೆಯ ಪ್ರತಿರೂಪ’ ಎಂಬ ಬರಹದಲ್ಲಿ ಬರಗೂರು ರಾಮಚಂದ್ರಪ್ಪ ಅವರ ಬಗ್ಗೆ ಬರೆಯುವ ಲೇಖಕರು, ಬರಗೂರು ಅಪ್ಪಟ ಹಳ್ಳಿ ಮನುಷ್ಯ ಮತ್ತು ಬದಲಾಗದ ಹಳ್ಳಿ ಮನುಷ್ಯ. ವೈಯುಕ್ತಿಕ ಮತ್ತು ಬದುಕಿನ ಆದರ್ಶಗಳ ಜೊತೆಗೆ ಸಾಮಾಜಿಕ ಆದರ್ಶಗಳನ್ನು ಬೆಳೆಸಿಕೊಂಡವರು. ಸಾಮಾಜಿಕ ವಲಯಕ್ಕೆ ತೆರೆದುಕೊಳ್ಳುವ ವ್ಯಕ್ತಿಯಾಗಿದ್ದಾರೆ. ಪ್ರಜಾಪ್ರಭುತ್ವದ ಮೌಲ್ಯಗಳಿಗೆ, ಸಂವಿಧಾನ ನಿಯಮಗಳಿಗೆ ಧಕ್ಕೆ ಆದ ಸಂದರ್ಭದಲ್ಲಿ ಬರಗೂರು ಹೋರಾಟ ಮಾಡಿದವರು ಎಂದು ಸ್ಮರಿಸುತ್ತಾರೆ.
‘ಮಾತಿನ ‘ಮಾನ’ ನಾಗಭೂಷಣ’ ಎಂಬ ಲೇಖನದಲ್ಲಿ ಡಿ. ಎಸ್. ನಾಗಭೂಷಣ್ ಕುರಿತು ಬರೆಯುತ್ತಾ, ಸದಾ ಸಮಾಜದ ನೈತಿಕ ಎಚ್ಚರವನ್ನು ಕಾಪಾಡುವಂತಹ ವ್ಯಕ್ತಿ ನಾಗಭೂಷಣ. ಲೋಹಿಯಾ ಅವರ ಸಾಮಾಜಿಕ ಸಾಂಸ್ಕೃತಿಕ ಬರಹಗಳಿಂದ ಆಕರ್ಷಿತರಾದವರು. ರಾಜಕೀಯ ವಲಯದ, ಸಮಾಜವಾದಿ ಗೆಳೆಯರ ಸಂಪರ್ಕ ಇತ್ತು. ಸಮಾಜವಾದಿ ಅಧ್ಯಯನ ಶಿಬಿರಗಳಲ್ಲಿ ಭಾಗವಹಿಸುತ್ತಿದ್ದರು. ಲೋಹಿಯಾ ಪ್ರಣಿತ ಸಮಾಜವಾದದ ಕಟ್ಟಾ ಪ್ರತಿಪಾದಕರಾಗಿದ್ದರು. ಅವರ ಕಾರ್ಯಗಳಿಗೆ ಹೆಗಲೆಣೆಯಾಗಿ ನಿಂತವರು ಅವರ ಪತ್ನಿ, ಕವಯತ್ರಿ ಸವಿತಾ ಎನ್ನುತ್ತಾರೆ.
‘ಹಾಮಾನಾ ನಮನ’ ಇದರಲ್ಲಿ ಹಾ ಮಾ. ನಾಯಕರ ಬರೆಯುತ್ತಾ ಖ್ಯಾತ ಅಂಕಣಕಾರರಾಗಿದ್ದವರು. ಅಂಕಣ ಬರಹಗಳಿಗಾಗಿಯೇ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದುಕೊಂಡಿದ್ದರು. ಇವರ ಪಾಠ ಪ್ರವಚನಗಳು ಕಾಲೇಜಿನಲ್ಲಿ ಅಚ್ಚುಕಟ್ಟಾಗಿದ್ದವು. ಅವರ ಎಲ್ಲ ಎದುರು ಎಲ್ಲರೂ ಭಯಗ್ರಸ್ಥರಾಗುತ್ತಿದ್ದರು. ಅವರ ಪುಸ್ತಕ ಪ್ರೇಮ ಅಪಾರ ಮತ್ತು ಅನುಪಮವಾಗಿತ್ತು ಎಂದು ಮನದುಂಬಿ ನುಡಿಯುತ್ತಾರೆ.
‘ಜಿಎಸ್‌ಎಸ್ ನನ್ನ ಮೇಷ್ಟು’ ಎಂಬ ಬರಹದಲ್ಲಿ ಪಕ್ಷ ಜಿ. ಎಸ್. ಶಿವರುದ್ರಪ್ಪ ಅವರ ಬಗ್ಗೆ ಬರೆಯುವ ಲೇಖಕರು, ಅವರ ಅಪ್ಪಟ ಜೀವನ ಸೌಂದರ್ಯ ತನ್ನನ್ನು ಸೆಳೆದಿದೆ ಎನ್ನುತ್ತಾ, ಅವರ ವಿದ್ಯಾರ್ಥಿಯಾಗಿದ್ದಾಗ ನಡೆದ ಕೆಲವು ಘಟನೆಗಳನ್ನು ಸ್ಮರಿಸುತ್ತಾರೆ. ‘ಕವಿಮನಸ್ಸಿನ ಕನಸುಗಾರ, ಸುಖ ಜಾಣ’ ಎನ್ನುವ ಮೂಲಕ ಕಾಳೇಗೌಡ ನಾಗವಾರ ಅವರ ಬಗ್ಗೆ ಬರೆಯುವ ಲೇಖಕರು, ಇಡೀ ಇಂಡಿಯಾದ ಯಾವ ವಿಶ್ವವಿದ್ಯಾಲಯಗಳಲ್ಲೂ ಕಾಣದಷ್ಟು ಪ್ರಾಮುಖ್ಯತೆಯನ್ನು ಮೈಸೂರು ವಿಶ್ವವಿದ್ಯಾಲಯ ಇವರ ಅವಧಿಯಲ್ಲಿ ಜಾನಪದ ಅಧ್ಯಯನಕ್ಕೆ ನೀಡಿತ್ತು. ಅವರ ಬರೆಹಗಳು ಸೃಜನಶೀಲವಾದುವು ಎಂದು ಸ್ಮರಿಸುತ್ತಾರೆ.
ಸೆಕ್ಯುಲರ್ ಪಂಡಿತ ಗೆಳೆಯ ಮಲ್ಲೇಪುರಂ ಕುರಿತಾದ ಬರಹದಲ್ಲಿ ಸ್ನೇಹಶೀಲ, ಜನಾನುರಾಗಿ. ಅವರ ಗೆಳೆತನ ಎಂದಿಗೂ ಪ್ರೀತಿ -ವಿಶ್ವಾಸಗಳೊಂದಿಗೆ ಇರುತ್ತಿತ್ತು ಎಂದು ಸ್ಮರಿಸುತ್ತಾರೆ. ‘ತಿರುಮಲೇಶ್ ನಗುವ ದೀಪ’ ದಲ್ಲಿ ಕನ್ನಡ ನಾಡಿನಿಂದ ದೂರ ಇದ್ದುಕೊಂಡು ಕನ್ನಡವನ್ನು ಕಟ್ಟಿದ ಹಲವು ಮಹನೀಯರಲ್ಲಿ ತಿರುಮಲೇಶ್ ಒಬ್ಬರು. ಕನ್ನಡವನ್ನು ತಮ್ಮ ಭಾವಲೋಕದಲ್ಲಿ ಕಟ್ಟಿಕೊಂಡಿದ್ದರು. ಭಾಷಾಶಾಸ್ತ್ರ ಮತ್ತು ಭಾಷಾಂತರ ಶಾಸ್ತ್ರದ ಅತ್ಯಂತ ಮಹತ್ವದ ವಿದ್ವಾಂಸರಾಗಿದ್ದರು ಎನ್ನುತ್ತಾರೆ. ಕವಿ ಸಿದ್ದಲಿಂಗಯ್ಯ ಬಗ್ಗೆ ಬರೆಯುತ್ತ ಮಾರ್ಕ್ಸ್ ಮತ್ತು ಅಂಬೇಡ್ಕರ್ ಸಿದ್ಧಾಂತಗಳನ್ನು ಕಾಪಾಡಿಕೊಂಡಿದ್ದ ಅವರು ಕಾವ್ಯವನ್ನು ಗಟ್ಟಿಗೊಳಿಸಿದರು. ಇವರ ಕವನಗಳು ಇಂದಿಗೂ ಜನಜಾಗೃತಿಗೊಳಿಸಲು ಹಾಡಲ್ಪಡುತ್ತಿರುವುದನ್ನು ಸ್ಮರಿಸುತ್ತಾರೆ.
‘ಜನತಾ ವಿಶ್ವವಿದ್ಯಾಲಯದ ಮಹಾಗುರು ಎಂಡಿಎನ್’ದಲ್ಲಿ ರಾಜ್ಯಾಂಗ, ನ್ಯಾಯಾಂಗ ಮತ್ತು ಕಾರ್ಯಾಂಗ ನಾಗರಿಕರಿಗೆ ಉಪಕಾರಿಯಲ್ಲದ ತೀರ್ಮಾನ ಕೈಗೊಂಡರೆ ಜಾಗೃತರಾಗುತ್ತಿದ್ದರು. ಅದರಿಂದ ಎದುರಾಗುವ ಅಪಾಯವನ್ನು ತಡೆಯುವ ತಮ್ಮ ಯೋಜನೆ ರೂಪಿಸುತ್ತಿದ್ದರು. ತಮ್ಮ ವೈದ್ಯಕೀಯ ಶಿಕ್ಷಣ ನಿರ್ಲಕ್ಷಿಸಿ ಸಮಾಜವಾದಿ ಚಳವಳಿಗಿಳಿದವರು ಎನ್ನುತ್ತಾರೆ. ‘ಅರಸರ ಐತಿಹಾಸಿಕ ನಿರ್ಣಯ’ದಲ್ಲಿ ದಿವಂಗತ ಮುಖ್ಯಮಂತ್ರಿ ದೇವರಾಜ ಅರಸನ್ನು ನೆನೆಯುವ ಲೇಖಕರು, ಪುಟ್ಟ ಸಮುದಾಯದಿಂದ ಬಂದವರಾಗಿ ರಾಜಕಾರಣದಲ್ಲಿ ಬಹು ದೊಡ್ಡ ಯಶಸ್ಸು ಕಂಡವರು. ಬುದ್ಧಿಜೀವಿಗಳ ಬೆಂಬಲವಿಲ್ಲದೆ ಕರ್ನಾಟಕ ಎಂದು ನಾಮಕರಣ ಮಾಡಿದರು. ಇದು ಅವರಿಗೆ ಕನ್ನಡದ ಬಗ್ಗೆ ಇದ್ದ ಅದಮ್ಯ ಪ್ರೀತಿ, ಕಾಳಜಿ ತೋರಿಸುತ್ತದೆ. ಕನ್ನನಡದ ಚೈತನ್ಯವನ್ನು ಒಗ್ಗೂಡಿಸುವ ಕೆಲಸವನ್ನು ಅವರು ಮಾಡಿದರು. ಜಾತಿ, ಹಣ, ಪಕ್ಷದ ಬೆಂಬಲವಿಲ್ಲದೆ ರಾಷ್ಟ್ರ ರಾಜಕಾರಣದಲ್ಲಿಯೂ ಅವರ ಹೆಸರು ಓಡಾಡಿತು ಎಂದು ಬರೆಯುತ್ತಾರೆ. ‘ತುಂಗಾನದಿಯ ಜಾಡಿನಲ್ಲಿ ತೇಜಸ್ವಿ, ಲಂಕೇಶ್ ಜೊತೆಗೆ’ ಎಂಬ ಬರಹದಲ್ಲಿ ಲಂಕೇಶ್ ಜೊತೆಗೆ ಮೂಡಿಗೆರೆಗೆ ಹೋಗಿದ್ದು, ಅಲ್ಲಿ ಅಡವಿ ಸುತ್ತಾಡಿ, ತುಂಗಾನದಿ ನದಿ ದಡದಲ್ಲಿ ತೇಜಸ್ವಿ ಮೀನು ಹಿಡಿಯಲು ಹೊಗಿದ್ದು, ವಿದೇಶಿ ಮದ್ಯಗಳನ್ನು ಕುಡಿದಿದ್ದನ್ನು ನೆನೆಯುತ್ತ್ತಾ, ಅವರೊಬ್ಬ ಅಪರೂಪ ವ್ಯಕ್ತಿತ್ವದ ಅತಿವಿಶಿಷ್ಟ ಲೇಖಕ ಎಂದು ಬರೆಯುತ್ತಾರೆ.
ಹೀಗೆ ಕರ್ನಾಟಕದ ಅನೇಕ ಸಾಹಿತಿಗಳು, ಚಳವಳಿಯನ್ನು ನಡೆಸಿದವರು, ಬರೆಹಗಾರರನ್ನು ಅತಿ ಹತ್ತಿರದಿಂದ ಕಂಡು ಅವರ ಪ್ರೇರಣೆ, ಒಡನಾಟದ ಮೂಲಕ ನಾಯಕರು, ಸಾಹಿತಿಗಳು ಬೆಳೆದಿದ್ದನ್ನು ವಿವರಿಸಿದ್ದಾರೆ. ಅವರಿಂದಾಗಿ ಎಂತೆಂತಹ ಹೋರಾಟ ನಡೆಯಿತು, ಸಾಹಿತ್ಯ ರಚನೆಯಾಯಿತು ಎನ್ನುವುದನ್ನು ವಿವರಿಸಿದ್ದಾರೆ. ನಿಜಕ್ಕೂ ಈ ಕೃತಿಯು ಸಂಪನ್ನರ ನಡೆ-ನುಡಿಯಾಗಿದೆ.

Comments
Post a Comment