ಬುದ್ಧ ಉಪದೇಶಿಸಿದ ಸತ್ಯದರ್ಶನಗಳ ಸಾರಸಂಗ್ರಹದ

ಬುದ್ಧನ ಧಮ್ಮಪದಗಳು



  ಧಮ್ಮಪದ  ಎಂದರೆ ಬುದ್ಧ ತೋರಿಸಿದ ಧರ್ಮದ ಮಾರ್ಗ, ೪೨೩ ಪದ್ಯಗಳಲ್ಲಿ ಸುವ್ಯಕ್ತಗೊಂಡಿದೆ. ಧಮ್ಮಪದ ಬೌದ್ಧ ಸಾಹಿತ್ಯದಲ್ಲಿ   ಪ್ರಸಿದ್ಧವಾದುದು. ಇದರಲ್ಲಿ ೨೬ ಅಧ್ಯಾಯಗಳಿವೆ. ಪ್ರತಿಯೊಂದು ಧಮ್ಮಪದವು ಒಂದೊಂದು ಉತ್ತಮ ವಿಷಯವನ್ನು ನಮಗೆ ತಿಳಿಸುತ್ತದೆ. ಈ ಧರ್ಮಪದವು ಆರೆಂಟು, ಹತ್ತು ಸಾಲುಗಳಲ್ಲಿ ಚಿಕ್ಕ ಕವನದಂತೆ ಇದೆ.  
‘ಬುದ್ಧನ ಧಮ್ಮಪದಗಳು’ ಈ ಕೃತಿಯನ್ನು ಕನ್ನಡಕ್ಕೆ ತಂದಿರುವವರು ಡಾ|| ಪ್ರದೀಪ್‌ಕುಮಾರ್ ಹೆಬ್ರಿ. ವಿದ್ವತ್‌ಪೂರ್ಣ ಪ್ರತಿಭೆಯ ಅವರು, ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಪ್ರಯೋಗಗಳನ್ನು ಮಾಡಿ ಅಚ್ಚರಿ ಮತ್ತು ಮೆಚ್ಚುಗೆಗೆ ಪಾತ್ರರಾದವರು. ಪಾಲಿ ಭಾಷೆಯಿಂದ ಇದನ್ನು ಕನ್ನಡಕ್ಕೆ ಹೆಬ್ರಿ ಅವರು ತಂದಿದ್ದು ಒಂದು ಸಾಹಸವೇ ಸರಿ.
 ಭಗವಾನ್ ಬುದ್ಧ ಸುಮಾರು ೨ ಸಾವಿರ ವರ್ಷಗಳ ಹಿಂದೆ ಉಪದೇಶಿಸಿದ ಸತ್ಯದರ್ಶನಗಳ ಸಾರಸಂಗ್ರಹವೇ ಧಮ್ಮಪದ, ಬುದ್ಧದೇವರ ಹೃದಯಕ್ಕೆ ಗೋಚರಿಸಿದ ಪರಿಶುದ್ಧ ಜ್ಞಾನದ ಹೊಳಪು. ಈ ಧಮ್ಮಪದಗಳ ಬಂಧದಲ್ಲಿ ಬೆಳಕಿನ ಕುಡಿಗಳಾಗಿವೆ. ಸತ್ಯದರ್ಶನದಿಂದ ಸುಟಗೊಂಡಿವೆ. ಅನುಭವಪಾಕದಿಂದೊಡಗೂಡಿವೆ. ಇವು ಪರಿಪೂರ್ಣ ಜೀವನ ನಡೆಸಲು ಸಾಧಕನಿಗೆ ದಾರಿದೀಪವಾಗಿವೆ. ಸರಳ ಜೀವನ ನಡೆಸುವವರಿಗೆ ಮಾನಸಿಕ ಶಾಂತಿಗಳಿಸಲು ಮಾರ್ಗದರ್ಶಿ, ಬುದ್ಧಿವಾದಿ ಮತ್ತು ತರ್ಕವಾದಿಗಳಿಗೆ ನಿಖರತೆಯ ನಿಚ್ಚಳತೆಯ ಸತ್ಯದರ್ಶಿ, ಯತ್ನಶೀಲ ಸಾಧಕನಿಗೆ ಧರ್ಮದರ್ಶಿ ಮಾರ್ಗವನ್ನು ತೋರಿಸುತ್ತವೆ.
ಭಗವಾನ್ ಬುದ್ಧ ಪಾಲಿಭಾಷೆಯಲ್ಲಿ ಉಪದೇಶಿಸಿದ ಸತ್ಯದರ್ಶನಗಳ ಸಾರಸಂಗ್ರಹವೇ ಧಮ್ಮಪದ. ಇದು ಗುರು-ಶಿಷ್ಯ ಪರಂಪರೆಯಲ್ಲಿ ಹಾದು ಬಂದು ಈಗ ಗ್ರಂಥರೂಪದಲ್ಲಿ  ದೊರಕಿದೆ. ಇದು ಗಾಥೆಗಳ ಬಂಧದಲ್ಲಿ ಬೆಳಕಿನ ಕುಡಿಗಳಾಗಿ ಮೂಡಿಬಂದಿವೆ. ಸತ್ಯದರ್ಶನದಿಂದ ಸ್ಫ್ಪುಟಗೊಂಡ ಅನುಭವದಿಂದ ಪುಟಗೊಂಡ ಈ ಮಾತುಗಳು ಸಮ್ಯಕ್ (ಉತ್ತಮ) ಜೀವನ ನಡೆಸಲು ಸಾಧಕನಿಗೆ ದಾರಿದೀಪವಾಗಿವೆ.
ಧಮ್ಮಪದದ ಸಂದೇಶವೆಂದರೆ, "ಇಂದು ಮಾನವನು ಭೋಗವಸ್ತುವನ್ನು ಪಡೆಯುವುದೇ, ಅದನ್ನು ಅನುಭವಿಸುವುದೇ ಪರಮಸುಖವೆಂದು ಭಾವಿಸಿದ್ದಾನೆ. ಆದರೆ ಮತ್ತೊಂದು ಮಾರ್ಗವು ಅವನಿಗೆ ಶಾಂತಿ, ತೃಪ್ತಿ, ಸೌಖ್ಯವನ್ನು ಕೊಡುತ್ತದೆ. ಮೊದಲನೆಯ ಮಾರ್ಗ ಬಹು ಆಕರ್ಷಕ, ಆದರದು ಅಪಾಯದ್ದು. ಆ ಅಪಾಯವೆಂದರೆ ರೋಷ, ಮೋಹ, ದ್ವೇಷಗಳ ಪ್ರಚೋದನೆ. ಆಕರ್ಷಣೆ ಇಲ್ಲದಿರುವ ಮಾರ್ಗ ತುಂಬ ಸುರಕ್ಷಿತವಾದುದು. ಎಚ್ಚರಿಕೆ, ಸಂಯಮಗಳೇ ಆ ಮಾರ್ಗದ ಹೆಸರು. ಧಮ್ಮಪದವು ಪರಿತಪಿಸುತ್ತಿರುವ ಮಾನವನು ಈ ಸುರಕ್ಷಿತ ಮಾರ್ಗವನ್ನು ಹಿಡಿಯಬೇಕೆಂದು ಬೋಧಿಸುತ್ತದೆ.
ಕೆಲವು ಧಮ್ಮಪದಗಳನ್ನು ಗಮನಿಸುವುದಾರೆ,  ಚಿಂತೆಯೆಂಬುದು ಇರದ/ಶಾಂತಿಯುತ ಮನದಲಿ/ ಆಡುತಿಹ ಮಾತುಗಳು/ ಶಾಂತಿಯುತ ರಿಂಗಣದಿ/ ಮಾಡುತಿಹ ಕಾರ್ಯಗಳು/ ಶಾಂತಿಯುತವಾಗಿರಲು/ ಯಾರೆಲ್ಲ ಲೋಕದಲಿ/ ಸತ್ಯದರ್ಶಿಯು ಎನಿಸಿ/ ಬಾಳುವನೊ ಮುಕ್ತನವ/ ಪರಮಶಾಂತನು ಅವನು/ಪರಮಜ್ಞಾನಿ/. ಅತಿ ಸುಲಭದಲ್ಲಿ ಅರ್ಥವಾಗುವಂತಹ ಪದ್ಯಗಳಿವು.
ಇನ್ನೊಂದು ಧಮ್ಮಪದ ಹೀಗಿದೆ-  ಮಾನವಗೆ ಜಗದಲ್ಲಿ/ ಹುಟ್ಟಿಹುದು ದುರ್ಲಭವು/ಮರಣಿಸುವ ಬದುಕದವು/ ಬಲುಕಷ್ಕರವಿರಲು/ ಸದ್ಧರ್ಮ ಕೇಳಿಕೆಯು/ ದುರ್ಲಭವು ಆಗಿರಲು/ ಬುದ್ಧರುದಯವು ನಿಜದಿ/ ದುರ್ಲಭವು ಖಚಿತ/.
 ಇದು ನಮಗೆ ಬುದ್ಧನ ಕಾಲದ ಸಾಮಾಜಿಕ, ರಾಜಕೀಯ, ‘ಧಮ್ಮಪದದ ಸೂಕ್ತಿಯನ್ನು ಅದರ ಐತಿಹಾಸಿಕ ಹಿನ್ನೆಲೆಯೊಡನೆಯ ಆರ್ಥಿಕ, ನೈತಿಕ ಹಾಗೂ ಧಾರ್ಮಿಕ ವ್ಯವಸ್ಥೆಗೆ ಸಂಬಂಧಿಸಿದ ವಿಷಯ ಮಹತ್ವವನ್ನೂ ಮನಗಾಣಿಸುತ್ತದೆ, ಇದರೊಡನೆ ವೈದ್ಯಕೀಯ, ಶಿಲ್ಪ, ಯಾಂತ್ರಿಕ ಜ್ಞಾನ, ವಿಷಯಗಳ ಕುರಿತೂ ವಿವರವಾಗಿ ತಿಳಿಸಿದೆ.
ಧಮ್ಮ ಪದದ ಸಾರವೆಂದರೆ, ಮಾನವಜನ್ಮವನ್ನು ಗಳಿಸುವುದು ಕಷ್ಟಕರ. ಆದ್ದರಿಂದ ಮಾನವನಾಗಿ ಜನಿಸಿದ ಪ್ರತಿಯೊಬ್ಬನೂ ಜನನದ ಸುಯೋಗದ ಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಬೇಕು. ಪಡೆದುದನ್ನು ತನ್ನ ಆಧ್ಯಾತ್ಮಿಕ ಪರಿಪೂರ್ಣ ಸಾಧನವಾಗಿ ರೂಪಿಸಿಕೊಳ್ಳಬೇಕು. ಇದಕ್ಕೆ ಶಕ್ತರಾದವರೇ ವಿವೇಕಿಗಳು, ಅವರು ಆಧ್ಯಾತ್ಮ ಚಿಂತಕರಾಗಿ ವರ್ಧಿಸುತ್ತಾರೆ ಮತ್ತು ಅದರ ಸಿಹಿಸುಖವನ್ನು ಅನುಭವಿಸುತ್ತಾರೆ ಎನ್ನುವುದು.
ಮಾನವನ ಉತ್ತಮ ಜೀವನಕ್ಕೆ ಅನ್ವಯಿಕವಾದ ಮಾರ್ಗದರ್ಶಿ ಉದ್ದೇಶವೇ ಸ್ವಯಂನಿಷ್ಟ ಬದುಕ ರೀತಿನೀತಿಗೆ ತಿರುಗಿಸಬಹುದಾದ ಅರ್ಥಪೂರ್ಣ ತಾತ್ವಿಕತೆಯಾಗಿದೆ. ನಮಗಿದನ್ನು ಧಮ್ಮಪದಗಳು ಅರಹುತ್ತವೆ. ಬದುಕಿನ ಅನಿವಾರ್ಯ ಆದ್ಯತೆಗಳಿಗೆ ಗಮನಕೊಡುವಂತೆ ನಮ್ಮ ಬದುಕ ಅಗತ್ಯ ಮತ್ತು ಅನಗತ್ಯಗಳ ನಡುವಿನ ಸತ್ಯ ಹಾಗೂ ಸುಳ್ಳುಗಳ ಭೇದಗಳನ್ನು ಗುರುತಿಸಬೇಕು. ಅಗತ್ಯತೆ ಹಾಗೂ ಋಜುತ್ವಗಳಿಗನುಸಾರ ವಾಸ್ತವತೆಗೆ ಅನುಗುಣದ ಸತ್ಯಜೀವನವನ್ನು ವ್ಯವಸ್ಥಿತವಾಗಿಸಿಕೊಳ್ಳಬೇಕು ಎನ್ನುವದನ್ನು ಈ ಧಮ್ಮಪದಗಳು ಸಾರುತ್ತವೆ.
ಧಮ್ಮಪದವು ಮೂಲತಃ ಪಾಲಿ ಭಾಷೆಯಲ್ಲಿದೆ. ಬುದ್ಧ ಭಗವಾನರು ತಮ್ಮ ೪೫ ವರ್ಷಗಳ ದೀರ್ಘ ಪರ್ಯಟನದಲ್ಲಿ ಮಾಡಿದ ಪ್ರವಚನಗಾಥೆಗಳಿವು. ಮಾನವರ ನಿಜಸ್ವಭಾವವನ್ನು ಚೆನ್ನಾಗಿ ಅರಿತಿದ್ದ ಭಗವಾನ ಬುದ್ಧರು ತನ್ನ ಸುತ್ತಲಿನವರ ಸಂಸ್ಕಾರ ಹಿನ್ನೆಲೆ, ಸಾಂಸಾರಿಕ- ವ್ಯಾವಹಾರಿಕ ಹಿನ್ನೆಲೆಯ ಇತಿಮಿತಿಗಳನ್ನರಿತು ಅವರವರ ಮನೋಧರ್ಮಕ್ಕನುಸಾರವಾಗಿ ಅರಹುತ್ತಿದ್ದರು. ಇವು ಸರಳವೂ ಸುಂದರವೂ, ಎಲ್ಲರೂ ಸುಲಭದಲ್ಲಿ ತಿಳಿಯಬಹುದಾದುದೂ ಆಗಿವೆ.
ಭಗವಾನ್ ಬುದ್ಧರ ಧಮ್ಮಪದಗಳು ಬದುಕ ಆಸೆ, ಆಮಿಶ, ಆಕ್ರೋಶಾದಿ ಭಯದಿಂದ ಪರಿತಪಿಸುತ್ತಿರುವ ಮಾನವನು ತನ್ನ ಬದುಕ ಪರಿಪೂರ್ಣತೆಗೆ ಹಿಡಿಯಬೇಕಾದ ಸುರಕ್ಷಿತ ಮಾರ್ಗವನ್ನು ಅರುಹಿವೆ. ಇವು ಯಾವುದೂ ಹೊಸತಲ್ಲ, ಆದರೆ ಬದುಕಿನುನ್ನತಿಗೆ ಅನಿವಾರ್ಯ ಎಂಬುದನ್ನು ಸಾದರಪಡಿಸಿದ್ದು. ಧಮ್ಮಪದ ಎನುವ ಮೃದುವಾಣಿಗೆ ನಾವು ಕಿವಿಯಾಗಬೇಕಿದೆ. ಈ ಧಮ್ಮಪದವನ್ನು ನಾವು  ಆಲಿಸಬೇಕಿದೆ, ಅನುಭವಿಸಬೇಕಿದೆ, ಆ ಮೂಲಕ  ಬದುಕಿನ ಪುನೀತತೆಯನ್ನು ಪಡೆಯಬೇಕಿದೆ. ಸದ ನಮ್ಮವನದ ಬುದ್ಧನ ಬದುಕಿನಾದರ್ಶಗಳನ್ನು ಅಳವಡಿಸಿಕೊಳ್ಳುವ ಕೆಲಸ ನಮ್ಮಿಂದಾಗಬೇಕಿದೆ.
......................


 

Comments

Popular posts from this blog