ಸಾಮಾಜಿಕ, ಕೌಟುಂಬಿಕ ಸಂಗತಿಗಳ

‘ಜೀವನ ರಾಗ’


 ಆದರ್ಶ, ಮಾನವೀಯತೆ, ಪ್ರೀತಿ, ವಿಶ್ವಾಸ, ನಂಬಿಕೆಗಳನ್ನು ಜೀವ ದ್ರವ್ಯವಾಗಿಸಿಕೊಂಡು ಬರೆದಿರುವ ಕಥೆಗಳ ಸಂಕಲನವೇ ‘ಜೀವನ ರಾಗ’. ನಂಜನಗೂಡಿನ ಬರಹಗಾರ್ತಿ ಎಸ್. ಎಲ್. ವರಲಕ್ಷ್ಮಿ ಮಂಜುನಾಥ್ ಈ ಕೃತಿಯಲ್ಲಿ ಸೊಗಸಾದ ನವಿರು ನಿರೂಪಣೆಯೊಂದಿಗೆ ಕಥೆಗಳನ್ನು ರಚಿಸಿದ್ದಾರೆ. ತಮ್ಮ ಆಲೋಚನೆಗಳಿಗೆ ತಕ್ಕಂತೆ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಕಥಾ ನಿರೂಪಣೆಯ ಶೈಲಿ  ಓದುಗರಿಗೆ ಇಷ್ಟವಾಗುತ್ತದೆ.
ಇಲ್ಲಿ  ಪಾತ್ರಗಳೇ ತಮ್ಮ ಲೋಕವನ್ನು ನಮ್ಮೆದುರು ಅನಾವರಣಗೊಳಿಸುತ್ತಾ ಹೋಗುತ್ತವೆ. ಕಥೆಗಳು ಮುಖ್ಯವಾಗಿ ಸಾಮಾಜಿಕ ಮತ್ತು ಕೌಟುಂಬಿಕ ಸಂಗತಿಗಳನ್ನು ಆಧರಿಸಿ ರಚಿಸಲ್ಪಟ್ಟಿವೆ. ತಮ್ಮ ಮನಸ್ಸಿನಲ್ಲಿ ಗಾಢವಾಗಿ ಪ್ರಭಾವಿಸಿದ ವಿಚಾರಗಳನ್ನು ಮಂಥನವಾಗಿಸಿದ ಲೇಖಕಿ, ಆದರ್ಶಗಳನ್ನು, ಮೌಲ್ಯಗಳನ್ನು ಕಥೆಗಳ ಸವಿ ಹೂರಣವಾಗಿಸುವ ಪ್ರಯತ್ನ ಮಾಡಿದ್ದಾರೆ. ಜಗತ್ತಿನ ತಲ್ಲಣ, ಹತಾಶೆ, ಭಾವ, ಉದ್ವೇಗ, ರಸಾಸ್ವಾದನೆಗೆ ಇರುವ ಎಲ್ಲ ಅವಕಾಶಗಳನ್ನು ಬಳಸಿಕೊಂಡಿದ್ದಾರೆ. ಕಥೆಗಳು ವಿಭಿನ್ನ ಜಾಡಿನಲ್ಲಿ ಸಾಗುವುದನ್ನು ಇಲ್ಲಿ ಕಾಣಬಹುದು. ಕೃತಿಯಲ್ಲಿನ ಕಥೆಗಳಿಗೆ ಬಂಧನದ ಹಂಗಿಲ್ಲ. ಕಥೆ ಬೆಳೆಯುತ್ತಾ   ಹೋದಂತೆ ನಾಟಕವಾಗಿ ಮುಂದುವರೆಯುವುದನ್ನು, ತಿರುವು ತೆಗೆದುಕೊಳ್ಳುವುದು ಇಲ್ಲಿನ ವಿಶಿಷ್ಟತೆ. ಸಾಮಾಜಿಕ ಸ್ಥಿತಿಗತಿಗಳಿಗೆ ಅದು ಹಿಡಿದ ಕನ್ನಡಿ ಎನ್ನುವುದನ್ನು ನಾವು ಮರೆಯಬಾರದು. ಈ ಕೃತಿ ಒಟ್ಟಾರೆ ನಮ್ಮ ಸುತ್ತಮುತ್ತಲಿನ ವಿಷಯದಿಂದಲೇ ಕೂಡಿದೆ. ಮತ್ತು ಸರಳ ಭಷೆಯಾಗಿ ನಮ್ಮ ಗಮನ ಸೆಳೆಯುತ್ತದೆ.
ಇದರಲ್ಲಿ ಒಟ್ಟು ೨೩ ಕಥೆಗಳಿವೆ. ಅವುಗಳಲ್ಲಿ ಸುಮಾರು ಆರೆಂಟು ಕಿರು ಕಥೆಗಳಾಗಿವೆ. ಮಣ್ಣಿನ ಮಗಳಾಗಿ ಹುಟ್ಟಿದ ದೇಶಕಾಯ್ದ ವೀರಯೋಧನ ಮಗಳು ತನ್ನ ಗಂಡನ ಅಕ್ರಮ ಚಟುವಟಿಕೆಗಳಿಂದ ಯುವಕರು ಜೀವ ಕಳೆದುಕೊಳ್ಳುವಂತಹ ಕೆಲಸ ಮಾಡುತ್ತಿದ್ದುದರಿಂದ ತಾನು ನೊಂದು ಪಾಪಪ್ರಜ್ಞೆ ಇಲ್ಲದೆ ಆತನನ್ನು ಕೊಲ್ಲುವ ಮೂಲಕ ಈ ‘ಮಣ್ಣಿನ ಋಣ’ವನ್ನು ತೀರಿಸುವುದು ಮೊದಲ ಕಥೆಯ ಸಾರಾಂಶ. ಸಾಮಾಜಿಕ ಕಾಳಜಿಯೇ ಇಲ್ಲಿ ಪ್ರಧಾನವಾಗಿ ಕಾಣುತ್ತದೆ.  ‘ಕರಿ ನೆರಳು’ ಕಥೆ ಮನಕಲಕುವಂತದ್ದು. ಆಸ್ತಿ ವಿಷಯದಲ್ಲಿ ನ್ಯಾಯಾಲಯದಲ್ಲಿ ಸೋಲಾಗಿದ್ದರಿಂದ ಸೋತ ವ್ಯಕ್ತಿಯ ಮಗನಿಂದ  ಗೆದ್ದವನ ಸುಂದರ ಮಗಳು ಆಸಿಡ್ ದಾಳಿಗೊಳಗಾಗಿ ಕುರೂಪಿಯಾಗುತ್ತಾಳೆ.  ನಾವು ಹತ್ತ್ತಾರು ಕಡೆ ಆಸಿಡ್ ದಾಳಿಯ ಬಗ್ಗೆ ಕೇಳಿದ್ದೇವೆ. ಓದಿದ್ದೇವೆ. ಅಂತಹ ಘಟನೆಯೇ ಈ ಕಥೆ ಓದುವಾಗ ನಮ್ಮ ಕಣ್ಮುಂದೆ ನಿಲ್ಲುತ್ತದೆ.
‘ಜೋಡಿ ಕೊಲೆಯ ಸುತ್ತ’ ಕಥೆಯೂ ಕುತೂಹಲಕಾರಿಯಾಗಿದೆ. ಮಗಳನ್ನು ಕೊಂದವರೇ ಪೊಲೀಸ್ ದೂರು ಕೊಡುವುದು, ಪೊಲೀಸರು ತಮ್ಮ ಸೂಕ್ಷ್ಮ ವಿಚಾರಣೆ ಮೂಲಕ ದೂರುದಾರರನ್ನೇ ಬಂಧಿಸುವುದು, ಆ ಮೂಲಕ ಮರ್ಯಾದಾ ಹತ್ಯೆಯ ನೆನಪು ಮರುಕಳಿಸುವಂತೆ ಲೇಖ ಮಾಡಿದ್ದಾರೆ. ಇದರಲ್ಲಿ ಮನೆಯಲ್ಲಿ ಬಾಡಿಗೆಗೆ ಇದ್ದ ಯುವತಿಯೊಡನೆ ಮನೆಯ ಮಾಲೀಕನ ಮಗಳು ಸಲಿಂಗ ಕಾಮ ಹೊಂದುವುದು, ಇದನ್ನು ಕಂಡ ಆಕೆಯ ತಂದೆ ಮತ್ತು ತಾಯಿ ಬಾಡಿಗೆಗೆ ಇದ್ದ ಯುವತಿಯನ್ನು ಕೊಲೆ ಮಾಡಿ ಬಿಸಾಡುವುದು, ಈ ವಿಷಯ ತಿಳಿದ ಯುವತಿ ಪ್ರೀತಿಯ ಗೆಳತಿ ಕೊಲೆಯಾದ ಬಗ್ಗೆ ತಮ್ಮ ವಿರುದ್ಧ ದೂರು ಕೊಡುವಳೆಂದು ತಿಳಿದು ಮಗಳನ್ನೇ ಸಾಯಿಸುವುದು ಈ ಕಥೆಯ ಸಾರಾಂಶ.
ಕಿರುಕತೆಗಳಲ್ಲಿ ‘ಹೆಣಕ್ಕೆ ದುಡ್ಡು’ ವಿನಲ್ಲಿ  ಹೆಣವನ್ನು ಸಂಬಂಧಿಕರು ಪಡೆಯಲು ದುಡ್ಡು ಕೊಡಬೇಕಾದ ಸ್ಥಿತಿ ವಿವರಿಸುತ್ತಾ, ಮನುಷ್ಯನ ಸ್ವಾರ್ಥ ಮತ್ತು ಭಷ್ಟತನವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದರೆ, ‘ನೀಲಾ’ ದಲ್ಲಿ ಕ್ಯಾನ್ಸರ್ ಪೀಡಿತ ಪ್ರಿಯಾ ಎಂ ಬಾಲಕಿಯ ತಲೆಕೂದಲನ್ನು ತೆಗೆದು ಬೋಳಾಗಿದ್ದರಿಂದ ತನ್ನ ನೀಳವಾದ ಕೂದಲನ್ನು ಕಟ್‌ಮಾಡಿ ಆಕೆಗೆ ವಿಗ್ ಮಾಡಿಕೊಟ್ಟು ಶಾಲೆಯಲ್ಲಿ ವರ್ಷದ ವಿದ್ಯಾರ್ಥಿನಿ ಎಂಬ ಪ್ರಶಸ್ತಿಗೆ ನೀಲಾ ಭಾಜನವಾಗುವುದರ ಜೊತೆಗೆ, ಗೆಳತಿಯ ಬಗ್ಗೆ ಇದ್ದ ಕಾಳಜಿ, ಅನುಕಂಪವನ್ನು ತೋರಿಸಿದ್ದಾರೆ. ‘ಕಾಂಚನಾ’ದಲ್ಲಿ ಕಾಂಚನಾ ಎನ್ನುವವಳು ಕೊರೊನಾ ಬಂದ ಸಮಯದಲ್ಲಿ ಊರಿನ ಜನರಲ್ಲಿ ಜಾಗೃತಿ ಮೂಡಿಸಿ,  ಭಯಮುಕ್ತರನ್ನಾಗಿಸಿ, ಲಸಿಕೆ ಹಾಕಿಸಿ, ಕೊರೊನಾ ಮುಕ್ತರನ್ನಾಗಿಸುವುದರ ಜೊತೆಗೆ ಈ ವೇಳೆ ಅನಾಥರಾದ ಮಕ್ಕಳ ಶಿಕ್ಷಣದ ಜವಾಬ್ದಾರಿ ಹೊತ್ತುಕೊಳ್ಳುವುದು, ವರ್ಷದ ವ್ಯಕ್ತಿ ಎಂಬ ಗೌರವಕ್ಕೆ ಪಾತ್ರಳಾಗುವುದರ ಬಗ್ಗೆ ಇದೆ.
‘ಗಡಿ’ಯಲ್ಲಿ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿರುವ ಯುವಕ-ಯುವತಿ ಇಬ್ಬರೂ  ಹಲವರ ಜೊತೆ ಇದ್ದುಬಂದು ಮತ್ತೆ ಪರಸ್ಪರ ಕೈಕೊಡುವುದು, ಭೌತಿಕ ಸುಖ-ಲಾಲಸೆಗಳಿಗೆ ಮಾರು ಹೋಗಿ ಸ್ವೇಚ್ಛೆಯಾಗಿ ಬದುಕಿದರೆ ಏನಾಗುತ್ತದೆ ಎನ್ನುವುದಕ್ಕೆ ಉತ್ತಮ ಉದಾಹರಣೆಯಾಗಿದೆ. ‘ಕಲಾವಿದೆ’ಯಲ್ಲಿ  ಕಲಿತ ವಿದ್ಯೆ, ನೃತ್ಯದಿಂದ ಬದುಕ ಹಸನಾಗುವುದು ಕುರಿತಾಗಿದೆ. ‘ಬೆಳಕು’ ಕಥೆ ನಮ್ಮ ಜೀವನವನ್ನು ನಾವೇ ನೋಡಿಕೊಳ್ಳಬೇಕೆಂಬ ನೀತಿ ಹೇಳುತ್ತದೆ.   
‘ನಾನೇ ತಂದೆ’ ಎಂಬಲ್ಲಿ  ಮಕ್ಕಳಿಲ್ಲದ ದಂಪತಿ ಐವಿಎಫ್ ಮೂಲಕ ಮಗು ಪಡೆದಿದ್ದು, ನಂತರ ಪತ್ನಿಗೆ ನಿಜ ವಿಚಾರ ಏನೆಂದು ಗೊತ್ತಾಗುವುದು,  ‘ಅಗ್ಗಿಷ್ಟಿಕೆ’ಯಲ್ಲಿ ಗಂಡ ಸತ್ತ ನಂತರ ಒಬ್ಬಂಟಿಯಾದವಳನ್ನು ಸೊಸೆಯು ತನ್ನ ಮನೆಗೆ ಕರೆಸಿಕೊಳ್ಳುವುದು, ಮೊದಲು ಚೆನ್ನಾಗಿ ನೋಡಿಕೊಳ್ಳುವುದು, ಅತ್ತೆ ಮನೆ ಮಾರಿ ಹಣವನ್ನು ಮೊಮ್ಮಗನ ಹೆಸರಲ್ಲಿ ಠೇವಣಿ ಇಟ್ಟ ನಂತರ ಆಕೆಯನ್ನು ಮನೆಯ ಕೆಲಸದವಳಂತೆ ಇಡೀ ಕುಟುಂಬದವರು ಕಾಣುವುದು, ಕಣ್ಣೀರಲ್ಲಿ ಕಾಲ ಕಳೆಯುತ್ತಾ ಆಕೆ ಮುಂದಿ ನಡೆಯನ್ನು ಯಾವ ರೀತಿ ನಿರ್ಧರಿಸಿದಳೆನ್ನುವುದರ ಕುರಿತಾಗಿದೆ. ‘ಕರ್ತವ್ಯ’ದಲ್ಲಿ ಗಂಡ- ಹೆಂಡತಿಯ ವಿರಸವನ್ನು ಲಾಭ ಮಾಡಿಕೊಂಡ ಅವಿವಾಹಿತ ಆಕೆಯನ್ನು ಲಪಟಾಯಿಸುವುದು, ಆದರೆ ಆಕೆಯ ಮಗು ಮಾತ್ರ ತನಗೆ ಬೇಡ ಎನ್ನುವುದು, ಆಗ ಆಕೆ ಏನೆನ್ನುತ್ತಾಳೆ, ಯಾವ ಮಾರ್ಗ ಅನುಸರಿಸುತ್ತಾಳೆ ಎನ್ನುವುದನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ.
ಹೀಗೆ ಇಲ್ಲಿನ ಕಥೆಗಳೆಲ್ಲ ಓದುಗರನ್ನು ಸೆಳೆಯುವ  ಸೂಜಿಗಲ್ಲಿನಂತಿವೆ. ಒಮ್ಮೆಲೆ ಸಮಸ್ಯೆಯನ್ನು ಚಿತ್ರಿಸಿ, ಅದನ್ನು ಸ್ವಲ್ಪ ಬೆಳೆಸಿ, ಅದು ಮರೆಯುವ ಹಾಗೆ  ನಾಟಕೀಯವಾಗಿ ಅದಕ್ಕೆ ಅಂತ್ಯ ಕೊಟ್ಟಿದ್ದಾರೆ. ಸಾಮಾಜಿಕ ಸ್ಥಿತಿಗತಿ ಮತ್ತು ಸಮಸ್ಯೆಯ ವಿಚಾರಗಳೇ ಇಲ್ಲಿನ ಕಥೆಯ ವಿಷಯಗಳು. ವೇಶ್ಯಾವಾಟಿಕೆ, ಜೀವನ ಹಳಿ ತಪ್ಪುವುದು,  ಭೌತಿಕ ಸುಖ-ಲಾಲಸೆಗಳಿಗೆ ಮೊರೆ ಹೋಗುವುದು, ನೀಚತನ, ದುಡಿದ ಹಣ- ಆಸ್ತಿ ಮಕ್ಕಳಿಗೆ ಕೊಟ್ಟು ನಿರಾಶ್ರಿತರಾಗುವ ಪಾಲಕರು,       ಬಡಿಗೆ ತಾಯಿಯಾದ ಗೆಳತಿಗೆ ತನ್ನ ಗಂಡನೊಡನೆಯೇ ಮದುವೆ ಮಾಡಿಸಿ, ಕುಹಕದ ಮಾತಿನಿಂದ ಆಕೆಯನ್ನು ರಕ್ಷಿಸುವುದು, ಪ್ರೀತಿಯ ಬಲೆಯಲ್ಲಿ ಬಿದ್ದು, ಯುವತಿಗೆ ಮಗು ಕರುಣಿಸಿ, ತಾನು ತಂದೆಯ ಒತ್ತಾಯಕ್ಕೆ ಕಟ್ಟುಬಿದ್ದು ಸ್ವಾಮೀಜಿಯಾಗುವುದು, ಮಠದ ಅನಾಥ ಮಕ್ಕಳ ಶಾಲೆಗೆ ಆ ಮಗು ಬಂದಾಗ ಅದರ ಕುಟುಂಬದ ಹಿನ್ನೆಲೆ ಅರಿತು, ತನ್ನಿಂದಲೇ ಜನಿಸಿದ್ದು ಎಂದರಿತು ಸ್ವಾಮೀಜಿ ಪಟ್ಟವನ್ನು ತ್ಯಜಿಸಿ, ಆ ಮಗುವನ್ನು ತನ್ನ ಮಗು ಎಂದು ಓದಿಸುವುದು... ಹೀಗೆ ಅತ್ಯುತ್ತಮ ಸಂದೇಶಗಳನ್ನು ಸಾರುವ ಕೃತಿ ಇದಾಗಿದೆ.   
 

Comments

Popular posts from this blog