ಅಮ್ಮನ ಮಹತ್ವ ಸಾರುವ
‘ಅಮ್ಮ ನಿನ್ನ ಎದೆಯಾಳದಿಂದ’
ಮನುಷ್ಯ ವೈಜ್ಞಾನಿಕವಾಗಿ, ತಾಂತ್ರಿಕವಾಗಿ ಎಷ್ಟೇ ಸಾಧನೆ ಮಾಡಿದರೂ ಮನುಷ್ಯ ಸಂಬಂಧಗಳ ಬೆಲೆಯನ್ನು ಕಟ್ಟಲು ಸಾಧ್ಯವಾಗಿಲ್ಲ. ಕುಟುಂಬ ಸಂಬಂಧಗಳಿಗೆ ಅಂತಹ ದೊಡ್ಡ ಶಕ್ತಿ ಇದೆ. ಅಣ್ಣ, ತಮ್ಮ, ಅಜ್ಜ, ಅಜ್ಜಿ, ಅಮ್ಮ, ಅಪ್ಪ ಮೊದಲಾದವರ ವಾತ್ಸಲ್ಯಗಳನ್ನು ಯಾವುದಕ್ಕೂ ಸರಿಸಮವಲ್ಲ.
ಇಂತಹ ಸಂಬಂಧಗಳಲ್ಲಿ ‘ತಾಯಿಯೇ ದೇವರು’ ಎನ್ನುವ ಮಾತು ಮಹತ್ವದ್ದು. ಯಾವಾಗ ನಾವು ಅಮ್ಮನಿಂದ ದೂರದಲ್ಲಿರುತ್ತೇವೆಯೋ ಆಗ ಅವಳ ನೆನಪು ಅತಿಯಾಗಿ ಕಾಡುತ್ತದೆ.
ಪ್ರಸ್ತುತ ಕೃತಿ ‘ಅಮ್ಮ ನಿನ್ನ ಎದೆಯಾಳದಿಂದ’ ಇದರಲ್ಲಿ ಲೇಖಕ ಕಿರಣ್ ಪಿ. ಕೌಶಿಕ್ ಅಮ್ಮ ಎಂದರೆ ಮೊಗೆದಷ್ಟು ಪ್ರೀತಿ ಎನ್ನುವುದನ್ನು ವಿವರಿಸಿದ್ದಲ್ಲದೆ, ಕೃತಿಗೆ ಇದೇ ಅಡಿಬರಹ ಹಾಕಿದ್ದಾರೆ. ಮೈಸೂರು ಸಮೀಪದ ಕೃಷ್ಣರಾಜಸಾಗರ (ಕೆಎಆರೆಸ್)ನವರಾದ ಕೌಶಿಕ್ ತಾನು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಕೇರಳಕ್ಕೆ ಹೋದಾಗ ಅಮ್ಮನನ್ನು ಮಿಸ್ ಮಾಡಿಕೊಂಡಿದ್ದನ್ನು ಬರೆದಿದ್ದಾರೆ.
ಜಗತ್ತಿನ ಎಲ್ಲ ನೋವುಗಳನ್ನು, ತಿರಸ್ಕಾರಗಳನ್ನು, ಅವಮಾನಗಳನ್ನು ಮೀರಿ ಬದುಕುವ ಜೀವ ಇದ್ದರೆ ಅದು ಹೆತ್ತ ಕರುಳು ಮಾತ್ರ. ಪ್ರೀತಿ, ವಿಶ್ವಾಸ, ತ್ಯಾಗ, ಕಾಳಜಿ, ಕಲಿಸಿದ ಪಾಠವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅದಕ್ಕಾಗಿ ತಾಯಿಯೇ ದೇವರು ಎಂದು ಲೇಖಕರು ಕೃತಿಯಲ್ಲಿ ಹೇಳುತ್ತಾರೆ. ಎರಡು ವರ್ಷ ಅಮ್ಮನನ್ನು ಮಿಸ್ ಮಾಡಿಕೊಂಡ ಕ್ಷಣ, ಅಮ್ಮನ ಭಾವನೆಗಳು, ತನಗೆ ಅಮ್ಮನ ಬಗ್ಗೆ ಇರುವ ಕಾಳಜಿ ಈ ಕೃತಿಯ ವಿಷಯ.
ಅಮ್ಮ ನನಗಾಗಿ ಮಾಡಿದ ತ್ಯಾಗ ಒಂದೆರಡಲ್ಲ. ಹೇಳಿದ್ದನ್ನೆಲ್ಲ ಕೊಡಿಸುವುದು, ಅಪರೂಪಕ್ಕೆ ಗದರಿಸುವುದು ಅವಳ ಗುಣ. ಬೇಸಿಗೆ ರಜೆಯಲ್ಲಿ ಚಾನೆಲ್ ಅಥವಾ ಕಾಲುವೆಗಳಿಗೆ ಈಜಲು ಹೋದಾಗ ಬಂದ ನಂತರ ಅಮ್ಮನಿಂದ ಪೆಟ್ಟು ತಿಂದಿದ್ದು, ಅಪ್ಪ ದೂರದೂರಿಗೆ ವರ್ಗಾವಣೆಗೊಂಡಾಗ ಇಡೀ ಕುಟುಂಬವನ್ನು ಅಮ್ಮ ನಿಭಾಯಿಸಿದ್ದು, ದೂರದೂರಿಗೆ ತಾನು ಹೋದಾಗ ಮನೆಗೆ ಬರಲು ಸಂಜೆಯಾದರೆ ಅಥವಾ ರಾತ್ರಿಯಾದರೆ ಬಸ್ ನಿಲ್ದಾಣಕ್ಕೆ ಬಂದು ನಿಂತು ಕಾಯುವುದು, ತನ್ನನ್ನು ಹೆಚ್ಚು ಹೆಚ್ಚು ಪ್ರಶ್ನೆ ಮಾಡಿದರೆ ‘ಸುಮ್ಮನೆ ತಲೆ ತಿನ್ನಬೇಡ, ಹೋಗಿ ಓದಿಕೋ’ ಎಂದು ಗದರಿಸಿದ ಎಲ್ಲಾ ನೆನಪುಗಳನ್ನು ತಮ್ಮ ಬಾಲ್ಯದಿಂದ ಹಿಡಿದು ಈಗಿನವರೆಗೆ ಕಂಡುಬಂದಿದ್ದನ್ನು ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.
ಅಮ್ಮ ಹೆಚ್ಚು ಓದು-ಬರಹ ಕಲಿತವಳಲ್ಲ. ಆದರೆ ಮಕ್ಕಳು ಹೆಚ್ಚು ಓದಬೇಕೆಂಬ ಕನಸನ್ನು ಕಂಡವಳು. ಅದಕ್ಕಾಗಿ ತಾಳ್ಮೆ, ಜಾಣ್ಮೆ, ಮತ್ತು ಬುದ್ಧಿವಾದದಿಂದ ಮಕ್ಕಳನ್ನು ಸರಿದಾರಿಗೆ ತಂದಳು. ಬದುಕಿನ ದೃಷ್ಟಿಕೋನ, ಜೀವನಶೈಲಿಯನ್ನು ಕಲಿಸಿದವಳು. ಇದೆಲ್ಲ ತನ್ನ ಇಂದಿನ ಹೆಜ್ಜೆಗೆ ಕಾರಣವಾಗಿದೆ. ಅಪ್ಪ ದೂರದೂರಿನಲ್ಲಿ ನೌಕರಿಯಲ್ಲಿದ್ದುದರಿಂದ, ರಜೆ ಇದ್ದಾಗ ಮಾತ್ರ ಮನೆಗೆ ಬರುತ್ತಿದ್ದುದರಿಂದ ಅವನು ಕಳುಹಿಸಿದ ಹಣದಲ್ಲಿ ಅಚ್ಚುಕಟ್ಟಾಗಿ ಮನೆಯನ್ನು ಸಾಗಿಸುತ್ತಿದ್ದಳು. ಯಾವುದಕ್ಕೂ ಕಡಿಮೆ ಮಾಡಲಿಲ್ಲ. ಮಕ್ಕಳಿಗೂ ಅವಶ್ಯವಿದ್ದುದನ್ನು ಕೊಡಿಸಿದವಳು. ಹಣಕಾಸಿನ ವ್ಯವಹಾರದಲ್ಲೂ ಅಷ್ಟೇ ಅಚ್ಚುಕಟ್ಟುತನವಿತ್ತು. ಹಾಗಾಗಿ ಅಮ್ಮನನ್ನು ‘ಟಿಪಿಕಲ್ ಫೈನಾನ್ಸ್ ಮಿನಿಸ್ಟರ್’ ಎಂದು ಲೇಖಕರು ಇಲ್ಲಿ ಕರೆದಿದ್ದಾರೆ.
ಅಮ್ಮನನ್ನು ಕೊಂಡಾಡುತ್ತ ಅವಳ ಸಹಾಯದಿಂದಲೇ ತಾನು ಇಲ್ಲಿಯವರೆಗೆ, ಈ ಮಟ್ಟಕ್ಕೆ ಬೆಳೆದು ನಿಲ್ಲಲು ಸಾಧ್ಯವಾಗಿದೆ. ತನಗೆ ಪರೀಕ್ಷೆ ಬಂದರೆ ಅಮ್ಮ ಹರಕೆ ಕಟ್ಟಿಕೊಳ್ಳುತ್ತಿದ್ದರು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎನ್ನುವ ಹಂಬಲ ಅವಳದ್ದು. ಪ್ರಾಥಮಿಕ ಶಾಲೆಗೆ ಹೋಗುವಾಗಲೇ ಶಾಲೆಗೆ ಕಳಿಸಿಕೊಡುವುದು, ಅವಶ್ಯವಿರುವುದನ್ನೆಲ್ಲ ಶಾಲಾಚೀಲದಲ್ಲಿ ತುಂಬುವುದು, ವಾಪಸ್ ಬರುವಿಕೆಯನ್ನು ಕಾಯುವುದು, ಪರೀಕ್ಷೆ ಇದ್ದಾಗ ಮತ್ತು ಟ್ಯೂಶನ್‌ಗೆ ತಾನೇ ಕರೆದುಕೊಂಡು ಹೋಗಿ ಬಿಡುವುದು, ವಾಪಸ್ ಮನೆಗೆ ಕರೆತರುವುದು... ಹೀಗೆ ತನ್ನೆಲ್ಲ ಪ್ರೀತಿ -ಪ್ರೇಮ, ಕಾಳಜಿಯನ್ನು ಧಾರೆ ಎರೆದವಳು ಎನ್ನುವ ಲೇಖಕರು ತನ್ನ ಜೀವನವನ್ನು ಅದ್ಭುತವಾಗಿ ರೂಪಿಸಿದವರು ಅಮ್ಮ ಎನ್ನುವುದನ್ನು ಈ ಕೃತಿಯಲ್ಲಿ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ
ಅಮ್ಮನ ಉಪ್ಪಿಟ್ಟಿನ ರುಚಿ, ಅಡುಗೆ ರುಚಿ ಎಂದಿಗೂ ಮರೆಯಲಾಗದು. ಅಮ್ಮನ ಕೈ ರುಚಿಯ ಸವಿಯೇ ಬೇರೆ. ಪ್ರೀತಿ ಮತ್ತು ಕಾಳಜಿ, ಆರೈಕೆ ಆಕೆಯಿಂದ ದೂರವಿದ್ದಾಗ ಮಾತ್ರ ಗೊತ್ತಾಗುತ್ತದೆ ಎನ್ನುವ ಸತ್ಯವನ್ನು ಇಲ್ಲಿ ಬಿಚ್ಚಿಟ್ಟಿದ್ದಾರೆ. ಅಪ್ಪನಲ್ಲಿದ್ದ ಭಯ, ಅಜ್ಜಿಯಲ್ಲಿದ್ದ ಪ್ರೀತಿ, ತಾಯಿಯಲ್ಲಿದ್ದ ಮಮತೆ ವರ್ಣನೆಗೆ ಮೀರಿದ್ದು. ಇದನ್ನು ಅನುಭವಿಸಿದವರಿಗೇ ರುಚಿ ಗೊತ್ತು. ಈಗೆಲ್ಲ ಅಮ್ಮನನ್ನು ಮಿಸ್ ಮಾಡಿಕೊಂಡೆ ಎನ್ನುವವರೇ ಇಲ್ಲ. ಏಕೆಂದರೆ ವಿಡಿಯೋ ಕಾಲ್ ಮೂಲಕ ಮಾತನಾಡಬಹುದು.
ಅಮ್ಮನನ್ನು ಬಿಟ್ಟು ನಾವು ದೂರವಿದ್ದಾಗ ಅವಳ ಮೌಲ್ಯ, ಪ್ರೀತಿಯ ಬೆಲೆ ಗೊತ್ತಾಗುತ್ತದೆ ಎನ್ನುವುದನ್ನು ತಮ್ಮ ಅನುಭವದೊಂದಿಗೆ ಬಹುಸುಂದರವಾಗಿ ಕಟ್ಟಿಕೊಟ್ಟಿದ್ದಾರೆ. ಜೊತೆಗೆ ತಾಯಿಗೆ ಸ್ವಾರ್ಥವಿಲ್ಲ ಎನ್ನುವ ಮಾತನ್ನು ಇಲ್ಲಿ ಹಲವು ಸಂಧರ್ಭಗಳ ಮೂಲಕ ಚಿತ್ರಿಸಿದ್ದಾರೆ. ಈ ಕೃತಿ ಓದುವಾಗ ಬಾಲ್ಯದ ನೆನಪಾಗುವುದರ ಜೊತೆಗೆ ಅಮ್ಮನ ಮಹತ್ವ ಎಂತಹುದು ಎನ್ನುವುದರ ಅರಿವಾಗುತ್ತದೆ. ಆದ್ದರಿಂದ ಕೃತಿ ಅತ್ಯಾಪ್ತ ಎನಿಸುವುದಲ್ಲದೆ, ವೈವಿಧ್ಯಮಯವಾಗಿ ಅಮ್ಮನ ಬೆಳಕು ಚೆಲ್ಲುವಲ್ಲಿ ಯಶಸ್ವಿಯಾಗಿದೆ.
............................

Comments
Post a Comment