ಗ್ರಾಮಜೀವನದ ಚಿತ್ರಣದ


ಉಕ್ಕಿದ ನೊರೆ



ಇದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಶಿವರಾಮ ಕಾರಂತರ ಕಾದಂಬರಿ. ತಮ್ಮ ಊರಾದ ಉಡುಪಿ ಜಿಲ್ಲೆಯ ಕೋಟ ಮತ್ತು ಅಕ್ಕಪಕ್ಕದ ಬ್ರಹ್ಮಾವರ, ಕುಂದಾಪುರ, ಬಾರ್ಕೂರು, ಭದ್ರಗಿರಿ  ಮೊದಲಾದ ಗ್ರಾಮಗಳಲ್ಲಿ  ಆವರಿಸಿದ್ದ ಸಾಮಾಜಿಕ, ರಾಜಕೀಯ, ಆರ್ಥಿಕ ಮತ್ತು ನೈತಿಕ ಆವರಣವನ್ನು ಇದರಲ್ಲಿ ಚಿತ್ರಿಸಿದ್ದಾರೆ. ೧೯೩೦ ರಿಂದ ೧೯೫೫ ರವರೆಗೆ ಅವಧಿಯಲ್ಲಿ ಆ ಭಾಗದಲ್ಲಿ ನಡೆದ ಚಳವಳಿಗಳು, ಸಾಮಾಜಿಕ ಬೆಳವಣಿಗೆಗಳು, ಚುನಾವಣೆ, ಆರ್ಥಿಕ ಏರಿಳಿತ ಮುಂತಾದವುಗಳು ತಮ್ಮನ್ನು ಕಲಕಿ ನಿತ್ಯ ಜೀವನ ಯಾವೆಲ್ಲ ಬಗೆಗಳಿಂದ ರೂಪುಗೊಂಡಿತು ಎನ್ನುವುದನ್ನು ಇಲ್ಲಿ ತೋರಿಸಿದ್ದಾರೆ.
 ಸಾಮಾನ್ಯ ಜನರಿಂದ ತುಂಬಿದ ಹಳ್ಳಿಗಳು ಮತ್ತು ಜನರು ಯುದ್ಧ, ಆರ್ಥಿಕ ಮತ್ತು ನೈತಿಕ ಸಮಸ್ಯೆಯಿಂದ ಹೇಗೆ ಬಳಲಿದರು, ಅವರು ಕಂಡಿದ್ದ ಗ್ರಾಮೀಣ ಉನ್ನತಿ ಹೇಗೆ ಮೇಲು-ಕೆಳಗೆ ಆಯಿತು, ಜನಜೀವನದ ಒಳಿತು -ಕೆಡಕುಗಳ ಚಿತ್ರಣ ಈ ಕಾದಂಬರಿಯಲ್ಲಿ ಕಂಡುಬರುತ್ತದೆ. ಜೀವನದಲ್ಲಿ ತೋರಿಕೆಯ ಯಶಸ್ಸಿಗೆ ಮತ್ತು ಹಣಗಳಿಕೆಗೆ, ಅಧಿಕಾರಕ್ಕೆ ಜನಸಾಮಾನ್ಯರ ಮನಸ್ಸು ಯಾವ ರೀತಿ ಚಡಪಡಿಸುತ್ತದೆ, ಅದಕ್ಕಾಗಿ ಆತ ಏನೆಲ್ಲ ಮಾಡುತ್ತಾನೆ. ಅದರಲ್ಲಿ ಅವರಿಗೆ ಯಶಸ್ಸು ಸಿಕ್ಕಿತೆ? ಸಿಕ್ಕಿದರೂ ಅದರ ಪರಿಣಾಮವೇನು, ಸಾಮಾನ್ಯ ಜನರು ಇದನ್ನೆಲ್ಲ ಹೇಗೆ ಅನುಭವಿಸಿದರು, ನೀರ ಮೇಲಿನ ಗುಳ್ಳೆಯಂತೆ ಬಂದು ಹೋದ ಈ ಶ್ರೀಮಂತಿಕೆಯ ಬಗ್ಗೆ ಉಳಿದವರು ಯಾವ ರೀತಿ ಮಾತನಾಡಿಕೊಂಡರು, ಇದರಿಂದ ಮನ್ನಣೆ ಸಿಕ್ಕಿದ ಕೆಲವು ಸಮುದಾಯಗಳ ಮುಖಂಡರ ಹೆಸರಿನೊಂದಿಗೆ ಹಾಗೂ ಅವರ ಕೌಟುಂಬಿಕ ವ್ಯವಹಾರಗಳನ್ನು ಇಲ್ಲಿ ಕಟ್ಟಿಕೊಟ್ಟಿದ್ದಾರೆ. ಒಟ್ಟು ೧೫ ಅಧ್ಯಾಯಗಳ ಕೃತಿ ಇದಾಗಿದೆ.
ಹೊಟೆಲ್ ಉದ್ಯಮದ ಬೆನ್ನತ್ತಿ ಮುಂಬೈ, ಬೆಂಗಳೂರು, ಶಿವಮೊಗ್ಗ ಮೊದಲಾದೆಡೆ ಹೋದ ಈ ಭಾಗದ ಜನರು ಕ್ರಮೇಣ ಯಶಸ್ಸನ್ನೇನೋ ಗಳಿಸಿದರು. ಬರಬರುತ್ತ ಅವರ ಸಾಮಾನ್ಯ ಬದುಕು ಶ್ರೀಮಂತವಾಗತೊಡಗಿತು. ವರ್ಷಕ್ಕೊಂದೋ, ಎರಡೋ ಬಾರಿ ಊರಿಗೆ ಬರುವುದು, ಇಲ್ಲೊಂದು ತಿಂಗಳು ಇದ್ದು ಹೋಗುವುದು, ಊರಿನ ಮಹಾಲಿಂಗೇಶ್ವರನ ಜಾತ್ರೆಗೆ ಬಂದು ಇದ್ದು ಮನೆಯವರಿಗೆ, ಸಂಬಂಧಿಕರೆಲ್ಲ ಬಟ್ಟೆ ಕೊಡಿಸುವುದು ಸಾಮಾನ್ಯವಾಗಿ ನಡೆದುಬಂದಿತ್ತು. ಕೆಲವರು ಸಾಕಷ್ಟು ಹಣ ಗಳಿಸಿ ಊರಿನಲ್ಲಿ ಮಾರಾಟಕ್ಕಿದ್ದ ಜಮೀನುಗಳನ್ನು ಕೊಳ್ಳತೊಡಗಿದರು. ಮತ್ತೆ ಕೆಲವರು  ಬೆಂಗಳೂರು ಸೇರಿ ಮತ್ತೊಂದು ಹೋಟೆಲ್ ತೆರೆಯುವುದು ಹಲವು ವರ್ಷಗಳ ಬಿಟ್ಟು ಊರಿಗೆ ಬರುವಾಗ ಚಿನ್ನದ ಪದಕ, ಚಿನ್ನದ ಸರ, ಬೆರಳು ತುಂಬಾ ಉಂಗುರ, ಶರ್ಟಿಗೂ ಚಿನ್ನದ ಗುಂಡಿಗಳನ್ನು ತೊಟ್ಟು ಬರುವ ಮೂಲಕ ಶ್ರೀಮಂತಿಕೆ ತೋರಿದರಲ್ಲದೆ ಇದೆಲ್ಲ ನಮ್ಮೂರಿನ ಪಂಚಲಿಂಗೇಶ್ವರನ ಕೃಪೆ ಎಂದು ಹೇಳುತ್ತಿದ್ದರು. ಇನ್ನೂ ಕೆಲವರು ತಮ್ಮದೇ ಅತಿ ಬಡತನದ ಮನೆ, ಮುರಿದುಬೀಳುವಂತಿದ್ದ ಮನೆಯನ್ನು ಇನ್ನಷ್ಟು ಉನ್ನತಿಗೇರಿಸಿದರು. ಕೆಲವರು ಹೆಂಚಿನ ಮನೆ ಮಾಡಿದರು. ಇನ್ನೂ ಕೆಲವರು ಮನೆಯ ಬಂದೋಬಸ್ತ್‌ಗಾಗಿ  ಆವರಣ ಗೋಡೆ ಹಾಕಿಸಿದರು.  
ಮದ್ವೆಯಾಗದವರು ಊರಿಗೆ ಬಂದು ಹೆಣ್ಣು ನೋಡಿ ಮದುವೆಯಾದರು. ಬೆಂಗಳೂರಲ್ಲೋ, ಮುಂಬೈನಲ್ಲೋ  ಒಂದು ಹೊಟೆಲ್ ಇದ್ದವರು ಇನ್ನೊಂದನ್ನು ಮಾಡಿಕೊಂಡರು. ಬೇರೆಡೆಗಳಲ್ಲೂ ಬ್ರಾಂಚ್ ತೆರೆದರು. ಹೀಗೆ  ಒಂದಷ್ಟು ಜನ ಹೊಟೆಲ್ ದಂಧೆಯಿಂದ ಆಸ್ತಿ-ಪಾಸ್ತಿ ಮಾಡಿಕೊಂಡರು. ಊರಿಗೂ ಒಂದಷ್ಟು ಹಣ ತಂದು ಹಾಕಿ ಕುಟುಂಬವನ್ನು ನೆಮ್ಮದಿಯಲ್ಲಿರಿಸಿದರು. ಮತ್ತೊಂದಿಷ್ಟು ತಾನು ಉದ್ದಾರವಾಗಿದ್ದಲ್ಲದೆ, ಈ ಊರಿನ, ಸಂಬಂಧಿಕರಿಗೆ  ಕೆಲವರಿಗೆ ತಮ್ಮದೇ ಹೊಟೆಲಿನಲ್ಲಿ ಕೆಲಸ ಕೊಡಿಸಿ ಅವರನ್ನೂ ಮೇಲೆತ್ತಿದರು. ಊರಿನಲ್ಲಿ ಕಲ್ಯಾಣಮಂಟಪ ಕಟ್ಟಿಸಿದರು. ಊರಿನ ಅಭಿವೃದ್ಧಿಗೆ ಮುಂದಾದರು ಎನ್ನುವುದರ ಸುಂದರ ಚಿತ್ರಣ ಇದರಲ್ಲಿದೆ.
ಪ್ರಮುಖವಾಗಿ ಕೃತಿಯಲ್ಲಿ ಇದರಲ್ಲಿ ನಾಲ್ಕಾರು ಪಾತ್ರಗಳು ಕಂಡುಬರುತ್ತವೆ. ಅವೆಂದರೆ, ಬ್ರಹ್ಮಾವರದಲ್ಲಿ ಬಟ್ಟೆ ಅಂಗಡಿ ಇಟ್ಟುಕೊಂಡಿದ್ದ ಗೋವಿಂದ ಶ್ಯಾನುಬೋಗರು, ವಿನಾಯಕ ಪ್ರಭುಗಳು, ಪಾಟಾಳಿ  ಶಂಭಯ್ಯ, ಬಿಲ್ಲಾಡಿ ಮೋನಪ್ಪ, ಚನ್ನಕ್ಕ, ಗುಲಾಬಿ, ವೆಂಕ ಮೊದಲಾದವರು. ಇವರೆಲ್ಲರ ಸುತ್ತ ಕಾಂದಬರಿ ಸುತ್ತುತ್ತದೆ. ಊರಿನಲ್ಲಿದ್ದ ಏಕೈಕ ಬಟ್ಟೆ ಅಂಗಡಿಯಲ್ಲಿ ಎಲ್ಲರೂ ಜಾತ್ರೆ ಎಂದರೆ ಮೊದಲು ಬಟ್ಟೆ ಖರೀದಿ ಮಾಡುತ್ತಿದ್ದುದು, ಮಕ್ಕಳು ಹೊಸ ಬಟ್ಟೆಗೆ ಚಾತಕ ಪಕ್ಷಿಯಂತೆ ಕಾಯುತ್ತಿದ್ದು, ಜಾತ್ರ್ರೆಯಲ್ಲಿ ಹೊಸ ಬಟ್ಟೆ ತೊಟ್ಟು ನಲಿದಾದಾಡುವುದು ಮಾಮೂಲಿಯಾಗಿತ್ತು. ಯಾವುದೇ ಊರಲ್ಲಿ ನೌಕರಿ, ಕೆಲಸದಲ್ಲಿದ್ದರೂ  ಶ್ಯಾನುಭೋಗರು ತಮ್ಮ ಅಂಗಡಿಗೆ ಬಂದಾಗ ಅವರನ್ನೆಲ್ಲ ನೆನಪಿಟ್ಟುಕೊಂಡು ಮಾತನಾಡಿಸುವ ಗುಣ ಹೊಂದಿದ್ದರು.
ಆಗ ಯುರೋಪ್‌ನಲ್ಲಿ ಯುದ್ಧದ  ಸಮಯ ಬೇರೆ. ಇಲ್ಲಿ ಎಲ್ಲ ವಸ್ತುಗಳ ಮೇಲೆ ಟ್ಯಾಕ್ಸು ಬೀಳುತ್ತಿತ್ತು. ವಸ್ತುಗಳ ಬೆಲೆ ಇದರ ಪ್ರಭಾವದಿಂದ ದುಬಾರಿ ಆಗಿತ್ತು.  ಅಕ್ಕಿ, ಎಣ್ಣೆ, ಸಕ್ಕರೆ, ಚಿಮಣಿ ಎಣ್ಣೆಯನ್ನು  ಹಳ್ಳಿಯಲ್ಲಿ ಕೆಲವರು  ಸಂಗ್ರಹಿಸಿಟ್ಟು ಕಳ್ಳಸಂತೆಯಲ್ಲಿ ಮಾರಾಟ ಮಾಡುವ ದಂಧೆ ಮಾಡುತ್ತಾರೆ. ಇದನ್ನು ಅರಿತ ತಹಶೀಲ್ದಾರರು ದಾಳಿ ನಡೆಸಿ ಕಳ್ಳಸಂತೆಯ ವಸ್ತುಗಳನ್ನೆಲ್ಲ ವಶಪಡಿಸಿಕೊಳ್ಳುತ್ತಾರೆ. ಇದರಿಂದ ಒಬ್ಬ್ಬರ ಮೇಲೆ ಇನ್ನೊಬ್ಬರು ದ್ವೇಷ ಸಾಧಿಸುತ್ತಾರೆ. ಹಳ್ಳಿಯ ಇಂತಹ ಚಿಲ್ಲರೆ ರಾಜಕೀಯವನ್ನೂ ಸಹ ಕಾರಂತರು ಮನಸೆಳೆಯುವಂತೆ ಚಿತ್ರಿಸಿದ್ದಾರೆ.    
 ಮೂಲತಃ ಭದ್ರಗಿರಿಯವಳಾದ ಚೆನ್ನಕ್ಕನ ಪಾತ್ರ ಕಾದಂಬರಿಯ ಪ್ರಮುಖ ಪಾತ್ರಗಳಲ್ಲೊಂದು. ಮದುವೆಯಾಗಿ ಗಂಡನೊಂದಿಗೆ ಮುಂಬೈಗೆ ಹೋಗಿ ನಂತರ ಅಲ್ಲಿ ಗಂಡನನ್ನು ಬಿಟ್ಟು ಗುಜರಾತಿಯನ್ನು ಕಟ್ಟಿಕೊಂಡು  ಹೇಗೋ ಚೆನ್ನಾಗಿ ಹಣ ಗಳಿಸುತ್ತಾಳೆ. ಸಾಕಷ್ಟು ವರ್ಷಗಳ ನಂತರ ಊರಿಗೆ ಮರಳಿಗೆ ಬರುತ್ತಾಳೆ.  ಬಂದ ನಂತರ ಊರಿನಲ್ಲಿ ಹೇಗೆ ತನ್ನ ಹೆಸರನ್ನು ಛಾಪಿಸುತ್ತಾಳೆ, ಊರಿಗಾಗಿ ಏನೇನು ಕೆಲಸ ಮಾಡಿಸಿದಳು, ಅವಳ ಬಂಟನಾಗಿದ್ದ  ವೆಂಕ ಊರಿನಲ್ಲಿ ಆಕೆಗೆ ಹೇಗೆ ಸಹಾಯ ಮಾಡಿದ, ಕೊನೆಯವರೆಗೂ ಅವಳೊಂದಿಗೆ ವಿಶ್ವಾಸಿಗನಾಗಿ ಉಳಿದ ಎನ್ನುವುದನ್ನು ಇಲ್ಲಿ ಕಾಣಬಹುದು.
 ಶಂಭಯ್ಯ ಚನ್ನಗಿರಿಯಲ್ಲಿ ಹೋಟೆಲ್ ಮಾಡುವುದು, ಊರಿನಲ್ಲಿ ಹಲವರೊಡನೆ ಸಂಬಂಧ ಇಟ್ಟುಕೊಂಡಿದ್ದ  ಗುಲಾಬಿ ಎನ್ನುವವಳನ್ನು ಕಟ್ಟಿಕೊಂಡು ಹೋಗುವುದು, ಆತನಿಗೆ ವಿಧುರಾಶ್ವತ್ಥದ ಅರಬಳ್ಳಿ ಸ್ವಾಮೀಜಿಯ ಪರಿಚಯವ ಆಗುವುದು, ಅವರ ಆಶೀರ್ವಾದದಿಂದ ಇನ್ನಷ್ಟು ಶ್ರೀಮಂತನಾಗುವುದು, ಆಶ್ರಮಕ್ಕೆ ಏನೇನು ಸಹಾಯ ಮಾಡಿದ, ಕಟ್ಟಿಕೊಂಡ ಗುಲಾಬಿಯನ್ನು ಅವಳಿಚ್ಛೆಯಂತೆ ಆಶ್ರಮಕ್ಕೆ ಕರೆದೊಯ್ದನೇ, ಸ್ವಾಮೀಜಿ ಇದನ್ನು ಒಪ್ಪಿದರೇ, ಆತನಲ್ಲಿದ್ದ ಸಂದೇಹಗಳೆಲ್ಲ ಪರಿಹಾರವಾದವೇ ಎನ್ನುವುದನ್ನು ಕೃತಿಯ ಕೆಲವು ಅಧ್ಯಾಯುಗಳು ವಿವರಿಸುತ್ತವೆ.
  ಬಿಲ್ಲಾಡಿ ಮೋನಪ್ಪ ಎನ್ನುವವನ ಚಿತ್ರಣವೂ ಕಾದಂಬರಿಯ ಪ್ರಮುಖ ಪಾತ್ರ.. ಶಾಲೆ ಕಲಿಯದೆ, ಹೊಡೆದಾಟದಲ್ಲೇ ಕಾಲ ತಳ್ಳಿ, ಕಂಡವರೊಡನೆ ಕಾದಾಡಿ, ಶ್ರೀಮಂತರನ್ನು ಎದುರು ಹಾಕಿಕೊಂಡು ಕೈ ಮುರಿದುಕೊಂಡು ಜೈಲಿಗೆ ಹೋಗಿ ಬಂದ ನಂತರ ಚಳವಳಿಗಿಳಿದು,  ಗಾಂಧಿ ಟೋಪಿ ಹಾಕಿಕೊಂಡು ಕಾಂಗ್ರೆಸ್ ಸೇರಿ ಯಾವ್ಯಾವ ಕೆಲಸ ಮಾಡಿದ, ಚುನಾವಣೆ ಹೇಗೆ ಎದುರಿಸಿದ, ವಿಧ್ವಂಸಕ ಕೃತ್ಯಗಳಿಗೆ ಏಕೆ ಮುಂದಾದ, ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಹೇಗೆ ಭಾಷಣಕಾರನಾದ, ನಂತರ ಕಾಂಗ್ರೆಸ್‌ನಲ್ಲಿ ಯಾವ ಹುದ್ದೆಗೇರಿದ ಮುಂತಾದುವುಗಳನ್ನು ವಿವರಿಸುತ್ತಾ ಹಳ್ಳಿಯ ರಾಜಕೀಯದಲ್ಲಿ ಬಲಾಢ್ಯರು, ಏನೂ ವಿದ್ಯೆ, ಹಣ ಇಲ್ಲದವರು, ಪುಂಡರು, ಫಟಿಂಗರು ಹೇಗೆ ರಾಜಕೀಯದಲ್ಲಿ ಮೆರೆಯುತ್ತಾರೆ, ಉನ್ನತ ಹುದ್ದೆ ಪಡೆಯುತ್ತಾರೆ ಎನ್ನುವುದನ್ನು ಕಣ್ಣಿಗೆ ಕಟ್ಟುವಂತೆ  ವಿವರಿಸಿದ್ದಾರೆ.
ಇದೇನೇ ಇದ್ದರೂ ಗಳಿಸಿದ ಹಣವನ್ನು ಹಳ್ಳಿಗೆ ತಂದು ಸುರಿಯುವ ಮೂಲಕ ಗ್ರಾಮಸ್ಥರಲ್ಲಿ ಬಹುತೇಕರು ಉಕ್ಕಿದ ನೊರೆಯಾದರು ಎಂದು ಸುಂದರವಾಗಿ ವರ್ಣಿಸುತ್ತಾರೆ.
...........................

 

 

Comments

Popular posts from this blog