ಗ್ರಾಮ ಜೀವನದ ಚಿತ್ರಣದ
‘ಹಳ್ಳಿಯ ಹತ್ತು ಸಮಸ್ತರು’
ಜ್ಞಾನಪೀಠ ಪುರಸ್ಕೃತ ಕೋಟ ಶಿವರಾಮ ಕಾರಂತರ ಪ್ರಮುಖ ಕೃತಿಗಳಲ್ಲೊಂದು ‘ಹಳ್ಳಿಯ ಹತ್ತು ಸಮಸ್ತರು’. ೧೧ ನೆಯ ಮುದ್ರಣವನ್ನು ಇದು ಕಂಡಿದೆ. ಇದು ಗ್ರಾಮ ಜೀವನದ ಚಿತ್ರಣವನ್ನು ಕಟ್ಟಿಕೊಡುತ್ತದೆ. ಸಮಾಜದಲ್ಲಿ, ಜೀವನದಲ್ಲಿ ಕಾಣುವ ವಿವಿಧ ಜಾತಿಗಳ ಸಂಬಂಧ, ಸಂಘರ್ಷಣೆ, ಪರಂಪರೆ, ವಿವಿಧ ಧರ್ಮೀಯರ ವ್ಯಕ್ತಿತ್ವ, ವೃತ್ತಿಗಳನ್ನು ಇದರಲ್ಲಿ ಚಿತ್ರಿಸಲಾಗಿದೆ. ಇಲ್ಲಿನ ಬರಹಗಳು ಸಮಾಜದ ಎಲ್ಲರಲ್ಲೂ ಹಾಸುಹೊಕ್ಕಾದ ಗುಣಗಳು ಎನ್ನುವುದನ್ನು ತಿಳಿಯಬಹುದು. ಸಮಾಜ ಸುಧಾರಕರು, ಗ್ರಾಮೋದ್ಧಾರಕರು ಇದನ್ನು ತಿಳಿಯಬೇಕು. ಪರಸ್ಪರರಲ್ಲಿನ ಆತ್ಮವಿಶ್ವಾಸ, ಅವಿಶ್ವಾಸ, ಜೀವನದ ಸ್ಪರ್ಧೆಗಳು ಯಾವ್ಯಾವ ರೀತಿಯಲ್ಲಿ ಸಮಾಜದಲ್ಲಿ ತಾಂಡವ ವಾಡುತ್ತಿದೆ ಎನ್ನುವುದನ್ನು ಇಲ್ಲಿ ಲೇಖಕರು ಎತ್ತಿ ತೋರಿಸಿದ್ದಾರೆ.
ಗ್ರಾಮದಲ್ಲಿನ ವಿವಿಧ ಪಂಗಡಗಳನ್ನು ರಾಜಕೀಯದವರು ಹೇಗೆ ಒಡೆಯುತ್ತಾರೆ, ಬೆಸೆಯುತ್ತಾರೆ. ಈ ಮೂಲಕ ಜನರಲ್ಲಿ ಜಾತೀಯತೆಯ ಮತ್ತು ಬಡತನದಿಂದ ಬರುವ ಯುಕ್ತಿ, ಬಂಡವಾಳಗಾರಿಕೆ, ಮಾನವ ಸಹಜವಾದ ಸ್ಪರ್ಧೆಯನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಾರೆ. ಇವೆಲ್ಲವೂ ಸಮಾಜ ಮತ್ತು ಜೀವನವನ್ನು ಹೇಗೆ ಕಲಕಿಸುತ್ತವೆ ಎನ್ನುವುದನ್ನು ಅರ್ಥಪೂರ್ಣವಾಗಿ ವಿವರಿಸಿದ್ದಾರೆ. ಇಲ್ಲಿ ಕೊನೆಗೆ ಉಳಿಯುವುದು ಮಾನವೀಯತೆ. ಇದು ಇರುವವರೆಗೆ ನಾವು ಸಮಾಜವನ್ನು ಸರಿಪಡಿಸಬಹುದು. ಇದನ್ನು ಕಲಿಸದೆ ಯಾವ ಕಟ್ಟಡ ಕಟ್ಟಿದರೂ ಅದು ಗಟ್ಟಿಯಾಗಿ ನಿಲ್ಲದು ಎನ್ನುವುದು.
ಕಾರಂತರು ತಮ್ಮ ಗ್ರಾಮದ ಸುತ್ತಮುತ್ತಲಿರುವ ವಿವಿಧ ಜಾತಿ ಮತ್ತು ವೃತ್ತಿಯವರನ್ನು ಆಯ್ಕೆಮಾಡಿಕೊಂಡು ಅವರೆಲ್ಲರ ನಡೆ, ನುಡಿ, ಪ್ರವೃತ್ತಿ, ಶ್ರೀಮಂತಿಕೆ, ಬಡತನ, ಜಾತೀಯತೆ, ಅವರ ದಿರಿಸು, ಧಿಮಾಕು, ಶಿಸ್ತು, ಒಳ್ಳೆಯತನ, ದುರ್ಬುದ್ಧಿ, ಚಟ, ಸಹಾಯ- ಸಹಕಾರದ ಮನೋಭಾವ, ಹಣ ಗಳಿಸುವ ಮಾರ್ಗ, ತಮ್ಮ ವೃತ್ತಿಯ ಜೊತೆಗೆ ಪಕ್ಷ ರಾಜಕೀಯ ಮಾಡುವುದು, ಅಲ್ಲಿ ಇನ್ನೊಂದು ಜಾತಿಯವರು ಮೇಲೇರದಂತೆ ಕಾಲೆಳೆಯುವುದನ್ನು, ಗುಣಾವಗುಣಗಳನ್ನು ಮನೋಜ್ಞವಾಗಿ ನಿರೂಪಿಸಿದ್ದಾರೆ. ಆದರೆ ಮೇಲ್ನೋಟಕ್ಕೆ ಇವರೆಲ್ಲರೂ ಗೆಳೆಯರು. ದಿನನಿತ್ಯ ಭೇಟಿಯಾಗುವವರು, ಯಾರದೋ ಅಂಗಡಿ, ಮನೆ ಜಗುಲಿಯಲ್ಲಿ ಕುಳಿತು ಊರಲ್ಲಿನ ಸುದ್ದಿ ಬಿಚ್ಚುವವರು. ಇವೆಲ್ಲವೂ ದಿನನಿತ್ಯ ನಮ್ಮ ಸುತ್ತಮುತ್ತ ನಡೆಯುವಂತಹ ಘಟನೆಗಳೇ ಆದರೂ ಕಾರಂತರ ಕಾಲದಲ್ಲೇ ಹೇಗೆ ನಡೆಯುತ್ತಿದ್ದವು ಎನ್ನುವುದನ್ನು ಕಾಣಬಹುದು.
ಕೃತಿಯಲ್ಲಿ ವಿವಿಧ ಸಮಾಜದ ೧೫ ವ್ಯಕ್ತಿಗಳ ಚಿತ್ರಣ ಈ ಕೃತಿಯಲ್ಲಿದೆ. ಅವುಗಳಲ್ಲಿ ಕೆಲವರನ್ನು ಗಮನಿಸುವುದಾರೆ- ವೈದಿಕರಾದ, ಕೋರ್ಟ್ ವ್ಯವಹಾರಲ್ಲಿ ಬ್ಯುಸಿ ಇರುವ, ದಿನಕ್ಕೆರಡು ಬಾರಿ ಸ್ನಾನ, ದೇವರ ಮೇಲೆ ಅಸಾಧ್ಯ ನಂಬಿಕೆ, ಸಮಸ್ಯೆ ಎಂದು ಬಂದವರಿಗೆಲ್ಲಾ ಬೂದಿ ಮಂತ್ರಿಸಿಕೊಟ್ಟು ಅವರ ವಿಶ್ವಾಸ ಗಳಿಸಿದ ಸೀತೈತಾಳರು, ಶ್ರೀಮಂತಿಕೆ ಮತ್ತು ಧಿಮಾಕಿನ ವ್ಯಕ್ತಿತ್ವದ, ವ್ಯಾಪಾರದಿಂದಲೇ ಸಿರಿವಂತನಾಗಿ ಹೆಚ್ಚಿನ ಸಮಯವನ್ನು ಕೋಳಿಪಡೆ, ಕಂಬಳ, ತಾಳಮದ್ದಲೆಯಲ್ಲಿ ಕಳೆಯುತ್ತ, ಪ್ರಾಯದಿಂದ, ಶೋಕಿಯಿಂದ ತೇಲಾಡುತ್ತಿದ್ದ ಕಾಂಗ್ರೆಸ್ ಮುಖಂಡ ನಾಗಯ್ಯ ಶೆಟ್ಟರು, ಅಂಗಡಿ ಮಾಡಿಕೊಂಡು ವ್ಯಾಪಾರ ಆರಂಭಿಸಿ ಸಾಹುಕಾರರಾಗಿ, ನಾಲ್ಕು ಮಂದಿ ನೌಕರರು, ಒಬ್ಬರು ಗುಮಾಸ್ತರನ್ನಿಟ್ಟುಕೊಂಡು ಹೆಸರು ಗಳಿಸಿದ್ದ ಜನ್ನ ಪೈ, ದಾಂಡಿಗ ಆಳು, ಊರಿನ ಮಾರಿಬಲೆಗೆ ಯಜಮಾನ. ಬಲೆಯಿಂದಲೇ ಆತ ಉದ್ಧಾರವಾದ ಮೊಗೇರ ಅಣ್ಣು, ಚಿನ್ನದ ಕೆಲಸದವನಾದರೂ ಯಾರ ಆಭರಣವನ್ನೂ ಸಮಯಕ್ಕೆ ಸರಿಯಾಗಿ ಮಾಡಿಕೊಡದೆ ಹತ್ತಾರು ಬಾರಿ ಅಲೆದಾಡಿಸುವ, ಬಿಡುವಿದ್ದಾಗ ಆಭರಣ ಮಾಡುವುದನ್ನು ಬಿಟ್ಟು ಮನೆಯಲ್ಲಿ ಮದ್ದಲೆ ಬಾರಿಸುವ, ಅಕ್ಕಸಾಲಿ ತಿಮ್ಮಪ್ಪ, ಗಾಣದ ವೃತ್ತಿಯಲ್ಲಿ ಹುಟ್ಟಿದರೂ ಅದನ್ನು ಬಿಟ್ಟು ಗಾಡಿ ಸಂಕಪ್ಪನಾದವನ ಚಿತ್ರಣವಿದೆ.
ಶ್ಯಾನುಭೋಗಿಕೆ ಕಸುಬನ್ನು ಹಕ್ಕಿನ ಮೂಲಕ ಪಡೆದುಕೊಂಡು, ಊರಿನವರ ಅಭಿಮಾನಕ್ಕೆ ಪಾತ್ರರಾಗಿದ್ದ, ಲಂಚ ತಿಂದರೆಂದು ಮೂಗರ್ಜಿಗೆ ಒಳಗಾದ, ssವಾನಿರಾಯರು, ತುಂಬಿದ ಯೌವ್ವನೆಯಾಗಿದ್ದಾಗಲೇ ಮೆರೆದು, ಮಪ್ಪು ಎದುರಾದರೂ ಕೀರ್ತಿಗೆ ಮುಪ್ಪಿಲ್ಲ ಎಂಬಂತೆ ಹೆಸರನ್ನು ಕಾಪಾಡಿಕೊಂಡು, ಊರಿನ ಹಲವು ವೃದ್ಧರನ್ನು ತನ್ನ ಬುಟ್ಟಿಗೆ ಹಾಕಿಕೊಂಡಿದ್ದ ಅಕ್ಕಣಿ ಹೆಂಗಸಿನ ಹಾರಾಟ, ಬಡತನದಲ್ಲೇ ಬೆಳೆದು ಕಂಬಳಿ ವ್ಯಾಪಾರಿಯ ಕೊಲೆಯ ಅರೋಪದಲ್ಲಿ ಜೈಲಿಗೆ ಹೋಗಿ ಬಂದ ಕೂಸ ಮುಡೂರ, ಹೊರಗಿನಿಂದ ಬಂದು ವ್ಯಾಪಾರ ಮಾಡಿ, ನಂತರ ಊರಲ್ಲಿ ಒಂದು ಅಂಗಡಿಯನ್ನು ತೆರೆದು, ಇಗರ್ಜಿ ಸ್ಥಾಪಿಸಿ, ನಂತರ ಜವಳಿ ಅಂಗಡಿ ತೆರೆದು, ಕಾಂಗ್ರೆಸ್ ಸೇರಿ, ರಾಜಕೀಯಕ್ಕೆ ಧುಮುಕಿದ ಕ್ರಿಶ್ಚಿಯನ್ ಮುಖಂಡ ಜುವಾಂ ಸೋಜಾ, ಹೊಗೆ ಸೊಪ್ಪಿನ ವ್ಯಾಪಾರಿಯಾಗಿ ಕಾಸರಗೋಡು ಕಡೆಯಿಂದ ಬಂದು, ವ್ಯಾಪಾರಿ ಸಮುದಾಯದಲ್ಲಿ ಹೆಸರು ಗಳಿಸಿ, ಕಂಬಳಿ ವ್ಯಾಪಾರಿ ಒಬ್ಬನ ಕೊಲೆಯಲ್ಲಿ ಜೈಲು ಸೇರುವಂತಾದ ಮೂಸಾ ಬ್ಯಾರಿಯ ಬಗ್ಗೆ ಮನೋಹರವಾಗಿ ಚಿತ್ರಿಸಿದ್ದಾರೆ.
ಕಾಂಗ್ರೆಸಿಗರಾದ ವೈಕುಂಠ ಬಾಳಿಗರು ಊರಿಗೆ ಬಂದು ಭಾಷಣ ಮಾಡುವುದು, ಊರಲ್ಲಿ ಕಾಂಗ್ರೆಸ್ ಕಮಿಟಿ ರಚಿಸುವುದು, ಸದಸ್ಯರನ್ನು ನೇಮಕ ಮಾಡುವುದು, ಹೊಸ ಚುನಾವಣೆ ಎದುರಾದಾಗ ಟಿಕೆಟ್ ಸಿಗದವರು ಸ್ವತಂತ್ರರಾಗಿ ಸ್ಪರ್ಧಿಸಿದ್ದು, ಹೆಣ್ಣು, ಹಣ, ಸೇಡು, ದ್ವೇಷ, ದೇಶಭಕ್ತಿ ಎಲ್ಲವೂ ಕೆಲಸ ಮಾಡಿತು ಎಂದು ಬರೆಯುತ್ತಾರೆ.
ನಮ್ಮ ಗ್ರಾಮಗಳು ಪಂಗಡಗಳನ್ನು ಬೆಳಸುವ ಭೂತವಾಗಿವೆ. ಜನರಲ್ಲಿ ಜಾತೀಯತೆಯ ಮತ್ಸರ ಹೆಚ್ಚಿದೆ. ಬಡತನದವರ ಕುಯುಕ್ತಿ, ಶ್ರೀಮಂತರ ಸೊಕ್ಕು, ಸಣ್ಣಬುದ್ಧಿಯವರು ಎರಡೂ ಕಡೆ ಬೆರೆಯವುದು, ಮಾನವ ಸಹಜ ಪ್ರಣಯ ಸ್ಪರ್ಧೆ, ಚುನಾವಣಾ ರಾಜಕೀಯ ಇವೆಲ್ಲ ಸಮಾಜವನ್ನು ಹೇಗೆ ಕಲುಕುತ್ತಿವೆ ಎನ್ನುವುದನ್ನು ಕೃತಿ ಸುಂದರವಾಗಿ ಬಿಂಬಿಸಿದೆ.
.........................

Comments
Post a Comment