ಗ್ರಾಮೀಣ ಬದುಕಿನ ಕಥಾಹಂದರದ
‘ತೊಂಡೆ ಚಪ್ಪರ’
ಇದು ಅಪ್ಪಟ ಹಳ್ಳಿಯಲ್ಲಿನ ಜೀವನ, ಅಲ್ಲಿನ ಬಡಕುಟುಂಬಗಳ ಕಥೆ, ಅಕ್ಕಪಕ್ಕದ ಮನೆಗಳಲ್ಲಿನ ಹರಕುಬಾಯಿಯವರಿಂದ ನಡೆಯುವ ಅಪಪ್ರಚಾರ, ಇದರಿಂದ ನಿರಪರಾಧಿಗಳು ತಲೆತಗ್ಗಿಸುವಂತೆ, ಊರಿನಲ್ಲಿ ಓಡಾಡದಂತೆ ಆಗುವುದು, ಒಬ್ಬರ ಮೇಲೆ ಇನ್ನೊಬ್ಬರು ಆರೋಪ ಮಾಡುವುದು, ಯಾರೋ ಮಾಡಿದ ಕೃತ್ಯವನ್ನು ಇನ್ನೊ ಬ್ಬರ ತಲೆಗೆ ಕಟ್ಟುವುದು, ಒಟ್ಟಿನಲ್ಲಿ ಸುಭಗರಾಗಿ ಬಾಳುವುದಕ್ಕೆ ಒಬ್ಬರೋ, ಇಬ್ಬರಿಂದ ತೊಂದರೆಯಾಗುವುದು, ಊರಿನ ವಾತಾವರಣ ಕಾಪಾಡಲು ಪಂಚಾಯ್ತಿ ನಡೆಯುವುದು,ಸತ್ಯ ನಿರೂಪಿಸಲಾಗದ ಸ್ಥಿತಿ, ಮತ್ತೊಂದೆಡೆ ವಿಜೃಂಭಣೆಯ ಗಣೇಶೋತ್ಸವ, ಎಂದೂ ನಡೆಯದಂತಹ ಅದ್ದೂರಿಯ ನಾಟಕ, ಗಣೇಶೋತ್ಸವ ಸಮಿತಿಯವರ ಯಶಸ್ವಿ ಕೆಲಸಕ್ಕೆ ಸನ್ಮಾನ .... ಹೀಗೆ ಕಥೆಯ ಹಂದರ ಹೊಂದಿರುವ ಸುಂದರ ಕಾದಂಬರಿ.
ಇದರ ಲೇಖಕರು ಪ್ರಮೋದ್ ಮರವಂತೆ. ಮೂಲತಃ ಕುಂದಾಪುರದ ಮರವಂತೆಯವರಾದ ಇವರು ಈಗ ಶಿಕಾರಿಪುರದ ಗುಡ್ಡದಹೊಸಳ್ಳಿಯಲ್ಲಿ ವಾಸಿಯಾಗಿದ್ದಾರೆ. ಕಾಂತಾರ ಸಹಿತ ವಿವಿಧ ಚಿತ್ರಗಳಿಗೆ ಈವರೆಗೆ ೪೦೦ಕ್ಕೂ ಹೆಚ್ಚು ಗೀತೆ ರಚಿಸಿ ಚಂದನವನದಲ್ಲೂ ಹೆಸರು ಮಾಡಿದವರು. ಟ್ಯೂನುಗಳಿಗೆ ಪದ ಜೋಡಿಸಿ ಹಾಡು ಹೊಸೆದಂತೆಯೇ ಮನದಲ್ಲಿದ್ದ ಟ್ಯೂನಿಗೂ ಪದ, ವಾಕ್ಯ ಜೋಡಿಸಿ ಸುಂದರ ಕಥೆಯ ಈ ಕಾದಂಬರಿಯನ್ನು ನೇಯ್ದಿದ್ದಾರೆ.
ಇದರಲ್ಲಿ ೧೧ ಕಥೆಗಳಿವೆ. ಎಲ್ಲವೂ ನಮ್ಮನ್ನು ಓದಿಸಿಕೊಂಡು ಹೋಗುವ ಕೌತುಕವನ್ನು ಹೊಂದಿವೆ. ‘ಊರಿದ್ದಲ್ಲಿ ಹೊಲಗೇರಿ ಇದ್ದೇ ಇರುತ್ತದೆ’ ಎನ್ನುವ ಗಾದೆಮಾತನ್ನು ಪುಷ್ಠೀಕರಿಸುವಂತಹ ಕಥೆ ಇದು. ತಮ್ಮ ಬದುಕಿನ ಅನುಭವಗಳಿಂದ ಸುಂದರವಾಗಿ ಇಲ್ಲಿ ಲೇಖಕ ಕಥೆಯನ್ನು ಕಟ್ಟಿಕೊಟ್ಟಿದ್ದಾರೆ.
ನಿಂಗ, ಬೇಬಿ ಮತ್ತು ಗುಂಡ ಒಂದೆಡೆಯಾದg, ಇನ್ನೊಂದೆಡೆ ನಾಗಿ, ತಿಪ್ಪ ಈ ಕಥೆಯಲ್ಲಿ ಬರುವ ಪ್ರಮುಖ ಪಾತ್ರಗಳು. ನಿಂಗ ಕುಡುಕನಾದರೂ ಕುಟುಂಬ ನೆಮ್ಮದಿಯಿಂದ ಬದುಕುತ್ತಿತ್ತು. ಬೇಬಿ ಮರವಂತೆಯವಳಾದರೆ ನಿಂಗ ಘಟ್ಟದ ಮೇಲಿನವ. ಇವರ ಪುತ್ರ ಗುಂಡ ಕಥೆಯಲ್ಲಿ ಚಾಲಾಕಿ ಹುಡುಗನಾಗಿ ಮಿಂಚುತ್ತಾನೆ. ಇವರ ಕುಟುಂಬಕ್ಕೆ ಶನಿಯಂತೆ ಕಾಡುವವಳು ನಿಂಗಿ. ಈಕೆ ಬಣವೆ ಹನುಮಂತ ಎನ್ನುವವನ್ನು ಮದುವೆಯಾಗಿದ್ದರೂ ಮಕ್ಕಳಿರಲಿಲ್ಲ. ಆತ ಕುಡಿದು ಬಿದ್ದು, ಎದೆನೋವಿನಿಂದ ಸತ್ತಿದ್ದ. ಮನೆಯಲ್ಲಿ ಒಂಟಿ ಹೆಂಗಸು. ಪಕ್ಕದ ಮನೆಯಲ್ಲಿ ತಿಪ್ಪ ಎಂಬಾತ ಒಬ್ಬಂಟಿ ವಾಸ. ತಾನು ಕೆರೆಬೇಟೆಯ ಮೂಲಕ ಹಿಡಿದು ತಂದಿದ್ದ ಮೂರು ಗೌರಿಮೀನನ್ನು ಆಕೆಗೆ ಕೊಟ್ಟು ಸಾರು ಮಾಡಿಸಿ ಉಣ್ಣುವ ಮೂಲಕ ಇಬ್ಬರ ಮಧ್ಯೆ ಸರಸ, ಮಿಲನ ಆರಂಭವಾಗುತ್ತದೆ.
ಗುಂಡ ಸಾಕಿದ್ದ ಹುಂಜನನ್ನು ದೇವರಿಗೆ ಕೊಯ್ಯಲು ನಿರ್ಧರಿಸಿದ ಮಾರನೆ ದಿನ ಬೆಳಗ್ಗೆ ಅದು ಹಾರಿಹೋಗಿ ಊರ ತುಂಬ ಓಡಿ, ಯಾರ್‍ಯಾರದೋ ಮನೆಯೊಳಕ್ಕೆ ನುಗ್ಗಿ ಗುಂಡ, ನಿಂಗ ಮತ್ತು ಆತನ ಮಿತ್ರರೆಲ್ಲ ಅಲೆಯುವಂತೆ ಮಾಡುತ್ತದೆ. ನಾಗಿಯ ಮನೆಯೊಳಕ್ಕೂ ಇದು ಹೋಗಿ ಅಡಗಿದ್ದಾಗ, ನಿಂಗ ಅದು ಕೊಟ್ಟಿಗೆ ಎಂದು ತಿಳಿದು ಕಾಲಿಟ್ಟಾಗ ಅದಲ್ಲಿ ನಾಗಿ ಅರೆಬೆತ್ತಲೆಯಾಗಿ ಸ್ನಾನದಲ್ಲಿರುವುದು, ಆತನನ್ನು ನೋಡಿ ಕೂಗಾಡುವುದು, ತಪ್ಪಾಯ್ತು , ಕೊಟ್ಟಿಗೆ ಎಂದು ಬಂದೆ ಹೇಳಿ ನಿಂಗ ಹೊರಬರುವುದು ಇದರಲ್ಲಿದೆ. ಹುಂಜದ ಆಟದಿಂದ ದೇವರ ಹರಕೆ ತೀರಿಸುವುದು ಅಂದು ನಿಲ್ಲುತ್ತದೆ.
ಈ ಮಧ್ಯೆ ಮಳೆಗಾಲ ಆರಂಭಕ್ಕೆ ಮುನ್ನ ಊರವರೆಲ್ಲ ಕಾಡಿನಿಂದ ಕಟ್ಟಿಗೆ ಕಡಿದು ತರಲು ಅರಣ್ಯ ಇಲಾಖೆ ಅನುಮತಿ ಕೊಟ್ಟಾಗ ನಿಂಗ ಕುಟುಂಬ ಸಹಿತ ತನ್ನ ಎತ್ತಿನಗಾಡಿಯಲ್ಲಿ ಹೋಗಿ ಕಟ್ಟಿಗೆ ಕಡಿಯುವಾಗ ಅಲ್ಲಿ ನಾಗಿ ಮತ್ತು ತಿಪ್ಪ ಕಂಡುಬರುತ್ತ್ತಾರೆ. ಅವರು ಸಹ ಕಟ್ಟಿಗೆಗೆ ಬಂದವರು. ಆದರೆ ಅಡುಗೆಯನ್ನೇ ಮಾಡದ ತಿಪ್ಪ ನಾಗಿ ಪರ ಬಂದಿರುವುದಾಗಿ ಹೇಳುತ್ತಾನೆ.
ತಿಪ್ಪ- ನಿಂಗಿ ಕಳ್ಳಾಟ ರಾತ್ರಿ ನಡೆದಿರುತ್ತದೆ. ಪಕ್ಕದ ಮನೆಯ ರುದ್ರಪ್ಪ ಎಂಬಾತ ಇದನ್ನು ಗಮನಿಸುತ್ತಾನೆ. ರಾತ್ರಿ ಶಬ್ದವಾದಾಗ ಹಂದಿ ಬಂದಿರಬಹುದೆಂದು ಬ್ಯಾಟರಿ ಬಿಟ್ಟಾಗ ತಿಪ್ಪ ಅಡಗಿ ನಿಲ್ಲುತ್ತಾನೆ. ಹೀಗೆ ಒಂದು ದಿನ ರಾತ್ರಿ ಒಮ್ಮೆ ಆತ ಬೇಲಿ ದಾಟುವಾಗ ಪಂಚೆ ಬೇಲಿಗೆ ಸಿಕ್ಕುಬಿದ್ದಿದ್ದನ್ನು ರುದ್ರಪ್ಪ ಗಮನಿಸಿ ತನ್ನ ಮಿತ್ರನಿಗೆ ‘ಇಬ್ಬರ ಮಧ್ಯೆ ಏನೋ ಇದೆ’ ಎಂದು ಹೇಳುತ್ತಾನೆ. ಇದು ಊರ ತುಂಬಾ ಹರಿದಾಡುತ್ತದೆ. ಇದನ್ನು ಗಮನಿಸಿದ ನಾಗಿ, ಕಟ್ಟಿಗೆ ಕಡಿಯಲು ತಿಪ್ಪನೊಂದಿಗೆ ತಾನು ಹೋಗಿದ್ದಕ್ಕೆ ನಿಂಗನೇ ವದಂತಿ ಹುಟ್ಟಿಸಿದ್ದಾನೆ ಎಂದು ಆತನ ವಿರುದ್ಧ ಸಿಡಿದೇಳುತ್ತಾಳೆ.
ಈ ಮಧ್ಯೆ ಆಕೆ ಚೆನ್ನಾಗಿ ಬೆಳೆಸಿದ್ದ ತೊಂಡೆಯ ಚಪ್ಪರದ ಒಂದು ಕಂಬಕ್ಕೆ ರಾತ್ರಿ ತಿಪ್ಪ ಡಿಕ್ಕಿ ಹೊಡೆದು ಕೆಡವುತ್ತಾನೆ. ಇದಕ್ಕೂ ನಿಂಗನೇ ಕಾರಣ. ಅವತ್ತು ಕೋಳಿ ಹುಡುಕಲು ಬಂದಾಗ ಕೆಡವಿದ್ದಾನೆ ಎಂದು ಆತನ ಮನೆಗೆ ಬಂದು ಕೂಗಾಡಿ ರಾದ್ಧಾಂತ ಎಬ್ಬಿಸಿ, ಅವಾಚ್ಯವಾಗಿ ಬೈಯ್ಯುತ್ತಾಳೆ. ತನಗೂ ಇದಕ್ಕ್ಕೂ ಸಂಬಂಧ ಇಲ್ಲ ಎಂದು ಎಷ್ಟು ಹೇಳಿದರೂ ಕೇಳುವುದಿಲ್ಲ. ಇವಳ ಸಹವಾಸವೇ ಬೇಡ ಎಂದು ಮಗ ಗುಂಡನಿಂದ ಕಂಬ ನೆಟ್ಟು ಸರಿ ಮಾಡಿಸುತ್ತಾನೆ. ಹೀಗೆ ಬಡಪಾಯಿಯಾದ ನಿಂಗನನ್ನೇ ಎಲ್ಲದಕ್ಕೂ ಗುರಿ ಮಾಡುತ್ತಾಳೆ. ತಾನು ಸ್ನಾನ ಮಾಡುವಾಗ ನುಗ್ಗಿ ಬಂದಿದ್ದ, ತಾನು ಏಕಾಂಗಿ ಎಂದು ತನ್ನ ಮೇಲೆ ಆತನಿಗೆ ಕಣ್ಣಿದೆ ಎಂದು ಆರೋಪ ಹೊರಿಸುತ್ತಾಳೆ.
ಈ ಮಧ್ಯೆ ನಾಗಿ ಗರ್ಭಿಣಿಯಾಗುತ್ತಾಳೆ. ಇದರಿಂದ ಆತಂಕಕ್ಕೀಡಾಗಿ, ಊರಿನವರಿಗೆ ಗೊತ್ತಾದರೆ ಎಲ್ಲರ ಬಾಯಿಗೆ ಆಹಾರವಾಗಬೇಕಾಗುತ್ತದೆ. ಅದರಲ್ಲೂ ವಿಧವೆ ಬೇರೆ. ಎಂದು ಯೋಚಿಸುವಾಗಲೇ ಪಕ್ಕದ ಮನೆ ಬಾಯಿಹರುಕ ರುದ್ರಪ್ಪ ಮತ್ತು ಗೌರಿಯಿಂದ ಪ್ರಚಾರವಾಗುತ್ತದೆ. ಊರಿಗೆಲ್ಲ ಇದು ಅವಮಾನ ಎಂದು ಪಂಚಾಯ್ತಿ ನಡೆಯುತ್ತದೆ. ಗರ್ಭಿಣಿಯಾಗಲು ಕಾರಣರಾರು?, ಆಕೆ ಯಾರ ಮೇಲೆ ಆರೋಪ ಮಾಡಿದಳು? ಊರ ಅಧ್ಯಕ್ಷರ ಸಮ್ಮುಖದಲ್ಲಿ ನಡೆದ ಪಂಚಾಯ್ತಿಯಲ್ಲಿ ಏನೇನು ಬೆಳವಣಿಗೆಯಾದವು, ಯಾರಾದರೂ ತಪ್ಪೊಪ್ಪಿಕೊಂಡರೇ, ನಾಗಿ ಯಾರನ್ನು ಮದುವೆಯಾದಳು, ನಂತರ ಆಕೆ ಏನಾದಳು, ಆರೋಪ ಹೊತ್ತವರ ಪರಿಸ್ಥಿತಿ ಏನಾಯಿತು, ಈ ಘಟನೆಯಿಂದ ಊರು ಬಿಟ್ಟವರಾರು?, ತೊಂಡೆ ಚಪ್ಪರದಲ್ಲಿ ಬೆಳೆದಿದ್ದ ತೊಂಡೆಕಾಯಿಗಳು ಯಾರ ಪಾಲಾದವು, ಅದನ್ನು ತಿಂದವರ ಬಾಯಿಂದ ಬಂದ ಮಾತುಗಳೇನು, ನಾಗನ ಮನೆಯ ಹುಂಜವನ್ನು ಕೊನೆಗೂ ದೇರಿಗೆ ಕೊಯ್ಯಲಾಯಿತೇ? ಮುಂತಾದವುಗಳನ್ನು ಸುಂದರವಾಗಿ ಚಿತ್ರಿಸಿದ್ದಾರೆ.
ಆದರೆ ಕಥೆಯಲ್ಲಿ ಬಳಸಿರುವ ಭಾಷೆ ಓದುಗರಿಗೆ ಮುಜುಗರವನ್ನುಂಟು ಮಾಡುತ್ತದೆ. ಕುಂದಾಪುರದ ಭಾಷೆ ಚೆನ್ನಾಗಿದೆ. ಘಟ್ಟದ ಮೇಲಿನ ಭಾಷೆಯಲ್ಲಿ ಅವಾಚ್ಯ , ಬೈಗುಳ, ಸೊಂಟದ ಕೆಳಗಿನ ಮಾತುಗಳು ಹೆಚ್ಚು ಬಳಸಲ್ಪಟ್ಟಿವೆ. ಅದು ಅಲ್ಲಿನವರ ಆಡುಭಾಷೆಯಾದರೂ ಕಾದಂಬರಿಯಲ್ಲಿ ಅದನ್ನು ತಪ್ಪಿಸಬಹುದಿತ್ತು, ಇಲ್ಲವೇ ಅತ್ಯಲ್ಪವಾಗಿ ಬಳಸಬಹುದಿತ್ತು. ಹೆಚ್ಚು ಬಳಸಿದ್ದು ಕಾದಂಬರಿಗೆ ಹಿತ ಎನಿಸುವುದಿಲ್ಲ.
......................

Comments
Post a Comment