ಸತ್ಯ ದರ್ಶನ ಮಾಡಿಸುವ
‘ಮಾತ್ರೆಗಳು’
ಇದು ಹಾಸ್ಯ ಸಾಹಿತಿ ಬೀಚಿಯವರ ನಗೆ ಬರಹಗಳ ಕೃತಿ. ಇದರಲ್ಲಿ ಸುಮಾರು ೩೭ರಷ್ಟು ಸಣ್ಣ ಹಾಸ್ಯ ಚಟಾಕಿ ಬರಹ (ಮಾತ್ರೆ)ಗಳಿವೆ. ಸತ್ಯದ ವಿರಾಟ್ ರೂಪವು ಭಯಾನಕವೂ, ಕ್ರೂರವಾಗಿಯೂ ಕೆಲವೊಮ್ಮೆ ತೀಕ್ಷ್ಣವಾಗಿಯೂ, ಸಿಡಿಲಾಗಿಯೂ, ಬಂದೆರಗುವುದನ್ನೂ ಇಲ್ಲಿನ ಬರೆಹಗಳಲ್ಲಿ ಕಾಣಬಹುದು. ಆಗ ನಗೆಯುಕ್ಕಿ ಬರುವುದು ಸಾಮಾನ್ಯ.
ಮನುಷ್ಯನ ಆಸೆಗಳ ಬಗ್ಗೆಯೂ ನಗೆಬುಗ್ಗೆ ಇದೆ. ಇವೆಲ್ಲ ಅವರವರ ದೃಷ್ಟಿಕೋನವನ್ನು ಅವಲಂಬಿಸಿದೆ. ಇಲ್ಲಿನ ನಗುವಿನ ಮಾತ್ರೆಗಳನ್ನು ನಾವು ಪ್ರತಿ ಬರಹದಲ್ಲೂ ನುಂಗುತ್ತೇವೆ. ಮಾತುಗಳು ಕಹಿಯೂ ಎನಿಸಬಹುದು, ಸಿಹಿಯೂ ಎನಿಸಬಹುದು, ಸಪ್ಪೆಯೂ ಇರಬಹುದು. ಆದರೆ ಒಟ್ಟಿನಲ್ಲಿ ವ್ಯಕ್ತಿಗಳಿಂದಲೇ ರಚಿಸಲ್ಪಟ್ಟ ಸಮಾಜದ ಲೋಪದೋಷಗಳನ್ನು ಭೂತಗನ್ನಡಿಯಲ್ಲಿ ಒಡ್ಡಿದಾಗ ವ್ಯಕ್ತಿಯು ಮಾತ್ರ ಉಳಿಯುವುದಿಲ್ಲ. ಗುಣಗಳಿಗೆ ವ್ಯಕ್ತಿಯು ನಿಮಿತ್ತ ಮಾತ್ರ. ವ್ಯಕ್ತಿಯ ಮೇಲೆ ದೋಷ ಹೊರಿಸಬೇಕೆಂದಾಗಲಿ, ತಿಡಿಗೇಡಿತನದಿಂದ ಕೆಣಕಬೇಕೆಂಬ ಉದ್ದೇಶವೂ ಇದರಲ್ಲಿಲ್ಲ. ಲೋಪ ದೋಷಗಳನ್ನು ಸ್ವತ:ಹಚ್ಚಿಕೊಳ್ಳುವ ದಡ್ಡತನಕ್ಕೆ ಯಾರೂ ಇಳಿಯುವುದಿಲ್ಲ. ತಪ್ಪುತನ ತಿದ್ದಿಕೊಳ್ಳುವ ಜಾಣತನ ಒದಗಿಸಿಕೊಳ್ಳಬೇಕು.
ಇದು ಈ ಕೃತಿಯ ಒಟ್ಟೂ ಸಾರಾಂಶ. ಇದನ್ನು ನಗೆಬರಹಗಳ ಮೂಲಕ ಬೀಚಿ ನಮಗೆ ಕಟ್ಟಿಕೊಟ್ಟಿದ್ದಾರೆ. ಕೆಲವು ಪ್ರಮುಖ ಸ್ವಾರಸ್ಯಕರ ಬರಹ (ಮಾತ್ರೆ)ಗಳನ್ನು ಗಮನಿಸುವುದಾದರೆ, ಕಾನೂನುಬಾಹಿರವಾಗಿ ದರೋಡೆ ಮಾಡಿದರೆ ನಮ್ಮನ್ನು ಪೊಲೀಸರು ಬಂಧಿಸುತ್ತಾರೆ. ಆದ್ದರಿಂದ ದುಡಿಯದೇ ದೊಡ್ಡ ಮನುಷ್ಯರು ತಮ್ಮ ವೃತ್ತಿಯಲ್ಲಿ ಕಾಯ್ದೆಯ ರಕ್ಷಣೆಯಲ್ಲೇ ದರೋಡೆ ಮಾಡುತ್ತ ಸುಖವಾಗಿ ಬಾಳುತ್ತಾರೆ. ಮಾಡುವ ಕಸುಬೆಲ್ಲವೂ ಒಂದೇ. ಆದರೆ ವಿಧಾನ ಹೊಸತಷ್ಟೆ ಎಂದು ತೋರಿಸಿಕೊಡುತ್ತಾರೆ.
ಮಕ್ಕಳಿಗೆ ವಿಚಿತ್ರವಾಗಿ ಹೆಸರನ್ನು ಇಡುವ ಬಗ್ಗೆ ಪ್ರಸ್ತಾಪಿಸುತ್ತಾ, ಸರಿಯಾದ ಹೆಸರನ್ನು ಇಟ್ಟರೂ ಅರೆಬರೆಯಾಗಿ ಮತ್ತು ಅಪಭ್ರಂಶವಾಗಿ ಕರೆದು ನಗೆಪಾಟಲಿಗೀಡಾಗುತ್ತಿರುವುದನ್ನು ಹೀಗೆ ವಿವರಿಸುತ್ತಾರೆ. ಮೃತ್ಯುಂಜಯನನ್ನು ‘ಮೃತ್ಯು’ ಎಂದು, ನಿರ್ಮಲಾರನ್ನು ‘ನಿರ್ಮೂಲ’ ಎಂದು ಕರೆಯುತ್ತಾರೆ. ರಾವಣ, ಮಾರೀಚ ಎಂದು ಯಾಕೆ ಹೆಸರು ಇಡುವುದಿಲ್ಲ ಎಂದು ಪ್ರಶ್ನಿಸುತ್ತಾರೆ. ಪತ್ರಿಕೆಯಲ್ಲಿ ಹೆಸರು ಬರುತ್ತದೆ ಎಂಬ ದೃಷ್ಠಿಯಿಂದ ೫೦೦ ರೂಪಾಯಿಯನ್ನು ದಾನ ಮಾಡುತ್ತಾರೆ. ಆದರೆ ಅದೇ ಭಿಕ್ಷೆ ಕೊಡಿ ಎಂದು ಕೇಳಿಕೊಂಡು ಬಂದ ವ್ಯಕ್ತಿಗೆ ಒಂದು ಕಾಸನ್ನು ಸಹ ಕೊಡದೆ ಗದರಿಸಿ ಕಳಿಸುತ್ತಾರೆ ಎಂದು ವಿವರಿಸುವ ಮೂಲಕ ಜನರ ಮುಖವಾಡವನ್ನು ತೆರೆದಿಡುತ್ತಾರೆ. ಮನುಷ್ಯ ಧರ್ಮ ಎಂಬ ವಿಷಯದ ಮೇಲೆ ಸ್ವಾಮೀಜಿಯೊಬ್ಬರು ಉಪನ್ಯಾಸ ಕೊಡುತ್ತಿದ್ದರು. ಉಪನ್ಯಾಸದಲ್ಲಿ ಕುಳಿತಿದ್ದ ಮುದುಕನೊಬ್ಬ ಕೆಮ್ಮಿದ್ದಕ್ಕೆ, ಹುಡುಗರು ನಕ್ಕಿದ್ದಕ್ಕೆ ಸಿಡಿಮಿಡಿಗೊಂಡು ಸ್ವಾಮೀಜಿ ಬಯ್ಯುತ್ತಾರೆ. ಅದೇ ಉಪನ್ಯಾಸಕರು ಮನೆಗೆ ಹೋದ ನಂತರ ಅಡುಗೆ ಆಗಿಲ್ಲವೆಂದು ಪತ್ನಿಗೆ ಬೈಯುತ್ತಾರೆ. ಇದು ಮನುಷ್ಯ ಧರ್ಮವೇ ಎಂದು ಪ್ರಶ್ನಿಸುತ್ತಾ, ತಾನು ಆಚರಣೆ ಮಾಡಿ ಇನ್ನೊಬ್ಬರಿಗೆ ಮಾದರಿಯಾಗಬೇಕೆಂಬ ಸಂದೇಶ ಕಟ್ಟಿಕೊಡುತ್ತಾರೆ.
‘ದುರಾಸೆ’ ಎಂಬಲ್ಲಿ ಮನುಷ್ಯ ತಾನು ಎಷ್ಟು ವರ್ಷ ಬದುಕುತ್ತೇನೆ ಎನ್ನುವುದನ್ನು ಗೊತ್ತಿಲ್ಲದಿದ್ದರೂ ದೇವರ ಬಳಿ ಹೋಗಿ ಇನ್ನಷ್ಟು ವರ್ಷ ಆಯುಷ್ಯ ಕೊಡು ಎಂದು ಬೇಡುತ್ತಾನೆ. ತನ್ನ ಜೀವಮಾನದಲ್ಲಿ ಕನಿಷ್ಠ ೧೦ ವರ್ಷವನ್ನೂ ಸಹ ಅವನು ಮನುಷ್ಯನಾಗಿ ಬಾಳುವುದಿಲ್ಲ. ಆದರೂ ಹೆಚ್ಚು ವರ್ಷ ಬದುಕಬೇಕೆಂಬ ದುರಾಸೆಯನ್ನು ಬಿಡುವುದಿಲ್ಲ ಎಂದು ಹೇಳುತ್ತಾರೆ. ‘ಕನ್ಯಾನ್ವೇಷಣೆ’ ಎಂಬ ಬರಹದಲ್ಲಿ ಮದುವೆಗೆ ಹುಡುಗಿ ನೋಡಲು ಹೋದವರು ಆಕೆಗೆ ಡಾನ್ಸ್ ಬರುತ್ತದೆಯೇ, ಹಾಡಲು ಬರುತ್ತದೆಯೇ ಎಂದು ಕೇಳುತ್ತ್ತಾರೆಯೇ ವಿನಾ ಚೆನ್ನಾಗಿ ಅಡುಗೆ ಮಾಡಲು ಬರುತ್ತದೆಯೇ ಎಂದು ಕೇಳುವುದಿಲ್ಲ ಎನ್ನುತ್ತಾ ಮನುಷ್ಯ ಬೇಡವಾದ ವಿಷಯಗಳಿಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಾನೆ. ಮುಖ್ಯವಾದುದನ್ನೇ ಮರೆತುಬಿಡುತ್ತಾನೆ ಎನ್ನುತ್ತಾರೆ.
‘ತುಂಡು ರೊಟ್ಟಿ’ ಎಂಬಲ್ಲಿ ಬೇಡಿದರೆ ಯಾರೂ ಅರ್ಧ ರೊಟ್ಟಿಯನ್ನೂ ಕೊಡುವುದಿಲ್ಲ, ಬೈದು ಕಳುಹಿಸುತ್ತಾರೆ, ಅದೇ ಕಳ್ಳತನ ಮಾಡಿ ಜೈಲಿಗೆ ಹೋದರೆ ಹೊಟ್ಟೆ ತುಂಬಾ ರೊಟ್ಟಿ ಕೊಡುತ್ತಾರೆ. ಪ್ರ್ರಾಮಾಣಿಕವಾಗಿ ಕೇಳಿದರೆ ಯಾರೂ ಸಹಾಯ ಮಾಡುವುದಿಲ್ಲ. ಕಳ್ಳತನ ಮಾಡಿದರೆ ಹೊಟ್ಟೆ ತುಂಬಿಸಿಕೊಳ್ಳಬಹುದು ಎಂದು ಸಮಾಜದಲ್ಲಿನ ಮುಖವನ್ನು ತೋರಿಸುತ್ತಾರೆ. ಇಂದಿನ ರಾಜಕಾರಣಿಗಳ ಬಗ್ಗೆ ‘ನಮ್ಮ ಅಧ್ಯಕ್ಷರು’ ಎಂಬ ಬರಹದಲ್ಲಿ- ಇಂದಿನ ರಾಜಕಾರಣಿಗಳಿಗೆ ತಮ್ಮ ಕೆಳಗಿನ ಅಧಿಕಾರಿಗಳಿಗೆ ಏನು ಸೂಚನೆ ಕೊಡಬೇಕೆನ್ನುವುದೇ ಗೊತ್ತಿರುವುದಿಲ್ಲ. ಏಕೆಂದರೆ ಅವರು ಊರು- ಕೇರಿ ಅಲೆದಾಡಿ ಸಮಸ್ಯೆ ಅರಿತವರಲ್ಲ. ಜಾತಿ, ಸರಾಯಿ, ಆಮಿಷವೊಡ್ಡಿ ಗೆದ್ದರೆ ಹೀಗೆಯೇ ಆಗುತ್ತದೆ ಎನ್ನುತ್ತಾರೆ.
ಬಾರ್ ಕೌನ್ಸಿಲ್ ಚುನಾವಣೆಗೆ ನಿಂತ ವಕೀಲನೊಬ್ಬ ಮಾತನಾಡುತ್ತ, ಕರ್ಣ ಸೂತಪುತ್ರ. ಧರ್ಮಜನಿಗೆ ಅಧಿಕಾರ ಬಿಟ್ಟುಕೊಟ್ಟಿದ್ದನ್ನು ‘ಗುಣಕ್ಕೆ ಮತ್ಸರ ಇಲ್ಲ’ ಎಂದು ವರ್ಣಿಸುತ್ತಾನೆ. ಆದರೆ ಆ ವಕೀಲನಿಗೆ ಚುನಾವಣೆಯಿಂದ ಹಿಂದೆ ಸರಿದು ಸ್ಪರ್ಧಿಸಿರುವ ಶೂದ್ರನನ್ನು ಬೆಂಬಲಿಸಬೇಕು ಎಂಬ ಸಲಹೆ ಬಂದಾಗ ‘ಆತ ಶೂದ್ರ, ಅವನೆಷ್ಟು ಒಳ್ಳೆಯವನಾದರೆ ಅದನ್ನು ಕಟ್ಟಿಕೊಂಡು ನಾನೇನು ಮಾಡಲಿ’ ಎಂದು ಕೇಳುತ್ತಾನೆ. ಅಂದರೆ ಆಡುವುದು ಒಂದು, ಮಾಡುವುದು ಒಂದು ಎನ್ನುತ್ತಾ ನಮ್ಮ ಜನರ ನಾನಾ ರೀತಿಯ ಮುಖವಾಡಗಳನ್ನು ಬೀಚಿ ಇಲ್ಲಿ ಬಿಚ್ಚಿಡುತ್ತಾರೆ.
ಹೀಗೆ ಸಮಾಜದ ಅಂಕು-ಡೊಂಕುಗಳನ್ನು ‘ಮಾತ್ರೆಗಳು’ ಕೃತಿಯನ್ನು ಓದುವ ಮೂಲಕ ಮನಗಾಣಬಹುದಾಗಿದೆ. ಇಲ್ಲಿನ ಲೇಖನಗಳೆಲ್ಲ ಮಾತ್ರೆಯಂತಿವೆ. ಮಾತ್ರೆ ನುಂಗುವಾಗ ಸ್ವಲ್ಪ ಕಹಿ ಎನಿಸಿದರೂ ಅದು ನಮ್ಮ ಆರೋಗ್ಯವನ್ನು ಹತೋಟಿಗೆ ತರುತ್ತದೆ. ಈ ಕೃತಿಯೂ ಹಾಗೆಯೇ. ಬೀಚಿಯವರ ಬರಹ ನಮಗೆ ಕಹಿ ಎನಿಸಿದರೂ ಅದರ ಆಳ ಸತ್ಯದ ದರ್ಶನವನ್ನು ತೋರುತ್ತದೆ.
..................................

Comments
Post a Comment