eಲ್ಲರ ಅಮ್ಮನ ಕಥೆ ನೆನೆಪಿಸುವ
‘ನನ್ನವ್ವನ ಬಯೋಗ್ರಫಿ’
ಬರಹಗಾರರಾಗಿರುವ, ವೃತ್ತಿಯಿಂದ ನಮ್ಮ ಮೆಟ್ರೋದಲ್ಲಿ ಸ್ಟೇಶನ್ ಸೂಪರಿಂಡೆಂಡೆಂಟ್ ಆಗಿರುವ ಜಯರಾಮಾಚಾರಿ ಅವರ ಕೃತಿ ‘ನನ್ನವ್ವನ ಬಯೋಗ್ರಫಿ. ಈಗಾಗಲೇ ಹಲವು ಕೃತಿಗಳನ್ನು ಬರೆದಿರುವ ಇವರು, ಈ ಕೃತಿಯ ಮೂಲಕ ತನ್ನ ಅವ್ವನ ಸಮಗ್ರ ಪರಿಚಯ, ಜೀವನ ಚರಿತ್ರೆ ಕಟ್ಟಿಕೊಟ್ಟಿದ್ದಾರೆ. ಅವ್ವನ ಗುಣಾವಗುಣಗಳು, ಕುಟುಂಬಕ್ಕೆ, ಮಕ್ಕಳಿಗೆ ತೋರುತ್ತಿದ್ದ ಪ್ರೀತಿ, ಕಾಳಜಿ, ಅವರು ಪಟ್ಟ ಕಷ್ಟ, ಗಂಡನಿಲ್ಲದಿದ್ದರೂ ಕುಟುಂಬವನ್ನು ಮಕ್ಕಳೊಂದಿಗೆ ನಿಭಾಯಿಸಿದ ರೀತಿ, ಮಕ್ಕಳು ದೂರವಾದರೂ ಅವರನ್ನು ಕಾಳಜಿಯಿಂದ ಕಂಡಿದ್ದು, ಜಿವನದ ಕೊನೆಯ ಹಂತದಲ್ಲಿ ಕ್ಯಾನ್ಸರ್ ಬಾಧಿಸಿದ್ದು, ಇದರಿಂದ ಸಾಕಷ್ಟು ನೋವುಂಡು ಕೊನೆಗೆ ತಾನು ಕಾಶ್ಮೀರ ಪ್ರವಾಸಕ್ಕೆ ಹೋದಾಗಲೇ ವಿಧಿವಶರಾದ್ದು, ಮೈಸೂರಿನಲ್ಲಿ ಅವರ ಅಂತ್ಯಕ್ರಿಯೆ ನೆರವೇರಿದ್ದರವರೆಗೆ ಚಿತ್ರಿಸಿದ್ದಾರೆ.
ಕೃತಿಯನ್ನು ಕೈಗೆತ್ತಿಕೊಂಡಾಗ ಪ್ರೀತಿ -ವಾತ್ಸಲ್ಯದಲ್ಲಿ ಮತ್ತು ಬರುವ ಕಷ್ಟಗಳನ್ನೆದುರಿಸುವಲ್ಲಿ ಎಲ್ಲ ತಾಯಂದಿರೂ ಒಂದೇ ಎನ್ನುವುದನ್ನು ನಾವು ಕಾಣುತ್ತೇವೆ. ಮಕ್ಕಳ ಮೇಲೆ ತಾಯಿ ಇಡುವ ಪ್ರೀತಿ, ಶಾಲಾ-ಕಾಲೇಜಿನಿಂದ ಮಕ್ಕಳ ಬರುವಿಕೆಗಾಗಿ ಕಾದು ಕುಳಿತಿರುವುದು, ಅವರು ದೂರದ ಊರಿನಲ್ಲಿದ್ದಾಗ ಪ್ರತಿದಿನ ಫೋನ್ ಕರೆ ಮಾಡಿ ಆರೋಗ್ಯ, ಆಹಾರದ ಬಗ್ಗೆ ವಿಚಾರಿಸುವುದು, ಆಗಾಗ ‘ಹುಷಾರು ಮಗ’ ಎಂದು ಎಚ್ಚರಿಸುವುದು ಮೊದಲಾದವುಗಳನ್ನು ಅತ್ಯಂತ ಮನೋಜ್ಞವಾಗಿ ವಿವರಿಸಿದ್ದಾರೆ. ಇದು ನಮ್ಮೆಲ್ಲರ ಅಮ್ಮನ ಕಥೆಯನ್ನೂ ನೆನೆಪಿಸುತ್ತದೆ.
ಅವ್ವ ತನ್ನ ಅಪ್ಪನಿಗೆ ಎರಡನೆಯ ಹೆಂಡತಿ. ಅಪ್ಪ ಭಯಂಕರ ದೈಹಿಕ ಹಿಂಸೆ ಕೊಡುತ್ತಿದ್ದ. ಆದರೂ ಆರು ಮಕ್ಕಳಿಗೆ ನಾರ್ಮಲ್ ಡೆಲಿವರಿ ಮೂಲಕ ಜನ್ಮನೀಡಿದ್ದಾಳೆ. ಇಡೀ ಜೀವನವನ್ನು ಮನೆ ಕೆಲಸ ಮಾಡಲಿಕ್ಕೆ, ಮಕ್ಕಳನ್ನು ಪೊರೆಯಲಿಕ್ಕೆ, ದೇವರ ಪೂಜೆ ಮಾಡಲಿಕ್ಕೆ ಮೀಸಲಿಟ್ಟವರು. ಯಾವಾಗಲೂ ಒಂದಲ್ಲ ಒಂದು ಕೆಲಸದಲ್ಲಿ ತೊಡಗಿಕೊಂಡಿರುವವಳು. ನೆನಪಾದಾಗಲೆಲ್ಲ ಅವಳ ಬಾಲ್ಯದ ನೆನಪುಗಳನ್ನು ಹೇಳುತ್ತಿದ್ದಳು. ಜೀವನಪೂರ್ತಿ ಕಷ್ಟಪಟ್ಟು ಮೇಲೆ ಬಂದವಳು. ಅವಳೆಂದೂ ಬೆಳಿಗ್ಗೆ ಐದರ ನಂತರ ಎದ್ದ ಉದಾಹರಣೆ ಇಲ್ಲ. ಒಂಟಿ ಜೀವನ ಅವಳಿಗೆ ನೆಮ್ಮದಿ ಕೊಟ್ಟಿತ್ತು ಎಂದು ಸುಂದರವಾಗು ಅವಳ ಬಾ ಚಿತ್ರಣ ನೇಯ್ದಿದ್ದಾರೆ.
ನನ್ನ ಅಮ್ಮ ಚಿತ್ರ ನಟ ರಾಜಕುಮಾರ್ ಅವರ ಕಟ್ಟಾ ಅಭಿಮಾನಿಯಾಗಿದ್ದಳು. ರಸ್ತೆ ಅಂಚಿನಲ್ಲಿ ಎಲ್ಲಿಯೇ ಅವರ ಸಿನಿಮಾದ ಪೋಸ್ಟರ್ ಕಂಡರೆ ಅಲ್ಲಿಯೇ ನಿಂತು ಅವರ ಮುಖವನ್ನು ಎರಡು ಕೈಯಿಂದ ನಿವಾಳಿಸಿ ಲೊಟಕೆ ತೆಗೆಯುತ್ತಿದ್ದಳು. ಸಾಕ್ಷಾತ್ ದೇವರಂತೆ ಕಾಣುತ್ತಿದ್ದಳು. ರಾಜಕುಮಾರ್ ಸಿನಿಮಾವನ್ನು ನೋಡುವುದರಲ್ಲಿ ತುಂಬಾ ಆಸಕ್ತಿ ಹೊಂದಿದ್ದರಿಂದ ಮಕ್ಕಳಿಗೆಲ್ಲ ರಾಜಕುಮಾರ್ ಸಿನಿಮಾ ನಟನೆಯಲ್ಲಿನ ತೋರಿಸಿದ ರೀತಿಯಲ್ಲಿ ಜೀವನ ರೂಪಿಸಿಕೊಳ್ಳಬೇಕೆನ್ನುತ್ತಿದ್ದಳು. ಸಿನಿಮಾ ನಟನೊಬ್ಬ ಜೀವನವನ್ನೇ ರೂಪಿಸುತ್ತಾನೆ ಎನ್ನುವುದಕ್ಕೆ ತನ್ನವ್ವನೇ ಸಾಕ್ಷಿ ಎನ್ನುತ್ತಾರೆ.
ಅಮ್ಮನಿಗೆ ಕಿವಿ ಕೇಳಿಸುತ್ತಿರಲಿಲ್ಲ. ಇದರಿಂದಾಗಿ, ಎಚ್ಚರಿಕೆಯಿಂದ ಪ್ರತಿ ಮಾತನ್ನು ಕೇಳಿಸಿಕೊಳ್ಳಲು ಪ್ರಯತ್ನ ಪಡುತ್ತಿದ್ದರು. ಆದರೂ ಫೋನಿನಲ್ಲಿ ಮಾತಾಡುವ ಹಂಬಲವಿತ್ತು. ಫೋನಿನಲ್ಲಿ ನಾವು ಏನು ಹೇಳಿದರೂ ಅವಳು ಬೇರೆ ಏನಾದರೂ ಉತ್ತರ ಕೊಡುತ್ತಿದ್ದಳು. ಜಗತ್ತಿನ ಆಗುಹೋಗುಗಳನ್ನೆಲ್ಲ ತಲೆಗೆ ಹಾಕಿಕೊಳ್ಳದೆ ಅವಳು ಬದುಕಿದ ರೀತಿ ಅನನ್ಯ. ಪರಿಸ್ಥಿತಿಗೆ ಹೆದರಿ ಎಂದೂ ಓಡಿ ಹೋಗಲಿಲ್ಲ. ಕಡೆಯವರೆಗೂ ಪ್ರತಿಕ್ಷಣವನ್ನು, ಜೀವನವನ್ನು ಪ್ರೀತಿಸುತ್ತಾ, ಎಲ್ಲರೂ ಬೇಕು ಎಂದು ಮನೆಯಿಂದ ಹೊರಗಟ್ಟಿದ ಮಕ್ಕಳನ್ನೂ ಸಹ ಕ್ಷಮಿಸಿದಳು. ಬೈದು, ಹೊಡೆದು, ಹೊರಗೋಡಿಸಿದ್ದ ಸೊಸೆಯನ್ನು ಸಹ ಕ್ಷಮಿಸಿದಳು.
ವಯಸ್ಸಾದರೂ ಚೈತನ್ಯಶೀಲಳಾಗಿ ಲವಲವಿಕೆಯಿಂದ ಒಬ್ಬಳೇ ಕೊಡ ಹಿಡಿದು ಹೋಗಿ ನೀರು ತರುವಷ್ಟು ಗಟ್ಟಿಗಿತ್ತಿಯಾಗಿದ್ದಳು. ಎಂದೂ ಬತ್ತದ ಉತ್ಸಾಹ. ಆಕೆ ಓದಿರಲಿಲ್ಲ, ಬರವಣಿಗೆ ತಿಳಿದಿರಲಿಲ್ಲ. ಹಾಗಾಗಿ ಬಸ್‌ಗೆ ಕೂಡ ಹೋಗದೆ ನಡೆದುಕೊಂಡೇ ಹೋಗುತ್ತಿದ್ದಳು. ತನ್ನನ್ನು ಶಾಲೆಗೆ ಸೇರಿಸುವಾಗ ಅಮ್ಮ ಶಾಲಾ ಶುಲ್ಕಕ್ಕೆಂದು ಅಗರಬತ್ತಿಯನ್ನು ಹೊಸೆಯುವ, ನಂತರ ರಟ್ಟು ಕಟ್ಟುವ ಕೆಲಸ ನೆರವೇರಿಸುತ್ತಿದ್ದರು ಅತ್ತಿಗೆ ಜೊತೆಗಿನ ಜಗಳದಿಂದಾಗಿ ಬಿಟ್ಟು ಹೋಗಿ ಹಾಸ್ಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು ತಾನೇ ಮಾಸಾಶನ ಮಾಡಿಸಿಕೊಂಡು ಸ್ವಾಭಿಮಾನಿ ಮತ್ತು ಸಾವಲಂಬಿಯಾಗಿ ಬದುಕಿ ಪಾಠ ಕಲಿಸಿ ಹೋದರು.
ಯಾರನ್ನೂ ದ್ವೇಷಿಸದೆ ಆಲದ ಮರದಂತೆ ಬದುಕಿದವರು. ಸಂಬಂಧ ಬಲು ದೊಡ್ಡದು ಎಂದು ನಂಬಿ ತನಗೂ ಅದನ್ನು ಕಲಿಸಿದವರು. ಜೀವನಪೂರ್ತಿ ಬರಿಗಾಲಲ್ಲೇ ನಡೆದಾಡುತ್ತಿದ್ದರು. ಓದಲು ಬರೆಯಲು ಬಾರದ ಕಾರಣ ಬಸ್ಸಿಗೆ ಕಾಯದೆ ನಡೆದುಕೊಂಡೇ ಹೋಗುತ್ತಿದ್ದರು. ಅವಳಿಲ್ಲದ ಬದುಕು ಅಪರಿಪೂರ್ಣ ಎಂದು ವಿವರಿಸುತ್ತಾರೆ.
ಒಮ್ಮೆ ಎದೆ ನೋವು, ಹೊಟ್ಟೆ ನೋವು, ಕಾಲು ನೋವು ಎಂದು ಸಂಕಟಕ್ಕೆ ಒಳಗಾಗಿದ್ದಳು. ಆಸ್ಪತ್ರೆಗೆ ಕರೆದೊಯ್ದಾಗ ವಯೋಸಹಜ ಎಂದು ವೈದ್ಯರು ಸಮಾಧಾನ ಮಾಡಿದ್ದರು. ನೋವು ಕಾಣಿಸಿಕೊಂಡ ನಂತರ ತತ್ತರಿಸಿ ಹೋಗಿದ್ದಳು. ಡಾಕ್ಟರ್ ಸೂಚನೆಯಂತೆ ಎಂಡೋಸ್ಕೋಪಿ ಮಾಡಿಸಿದಾಗ ಗ್ಲಾಡ್ ಬ್ಲಾಡರ್ ಬಳಿ ಮತ್ತು ಕ್ಯಾನ್ಸರ್ ಸೆಲ್ಸ್ ಕೂಡ ಪತ್ತೆಯಾಗಿದೆ ಎಂದು ವೈದ್ಯರು ಹೇಳಿದರು. ನಿಂತ ನೆಲವೇ ಕುಸಿದಿತ್ತು. ಇದಕ್ಕೂ ಮುನ್ನ ಆಕೆ ಎಂದಿಗೂ ರೋಗಕ್ಕೆ ಬಿದ್ದವಳಲ್ಲ. ಸ್ವಾಭಿಮಾನಿಯಾಗಿಯೇ ಬೆಳೆದವಳು, ಬದುಕಿದವಳು. ಆದರೆ ಕ್ಯಾನ್ಸರ್ ಅವಳನ್ನು ಅಲ್ಲಾಡಿಸಿತ್ತು. ವಾರದಲ್ಲಿ ನಾಲ್ಕು ದಿನ ಪೂಜೆ ಮಾಡುವುದನ್ನು ಯಾವತ್ತೂ ತಪ್ಪಿಸುತ್ತಿರಲಿಲ್ಲ. ಗ್ಲಾಡ್ ಬ್ಲಾಡರ್ ಚಿಕಿತ್ಸೆ ನಂತರ ಅಮ್ಮನಿಗೆ ಪಿತ್ತಕೋಶದ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಆಗ ವೈದ್ಯರು ಹೆಚ್ಚೆಂದರೆ ಮೂರು ವಾರ ಬದುಕಬಹುದು, ಚೆನ್ನಾಗಿ ನೋಡಿಕೊಳ್ಳಿ. ಇಲ್ಲಿಂದ ನನಗೆ ಗೊತ್ತಿಲ್ಲದ ಹಾಗೆ ನಾನು ಅಳುತ್ತಲೇ ಇದ್ದೆ.
ಅಮ್ಮನಿಗೆ ಕ್ಯಾನ್ಸರ್ ಜಾಸ್ತಿ ಆದಾಗ ಬೇರೆಯವರ ಮೇಲೆ ಅವಲಂಬಿತರಾಗಿದ್ದರು. ಅವ್ವನನ್ನು ಕ್ಯಾನ್ಸರ್‌ನಿಂದ ಆದಷ್ಟು ದಿನ ಉಳಿಸಿಕೊಳ್ಳಬೇಕೆನ್ನುವುದು ಗುರಿಯಾಗಿತ್ತು. ಕ್ಯಾನ್ಸರ್ ಬೆಳೆಯುತ್ತಿದ್ದಂತೆ ಮಕ್ಕಳಂತೆ ಅಮ್ಮ ಅಳುತ್ತಿದ್ದರು. ಕಾಲು ಕೂಡ ಸ್ವಾಧೀನ ತಪ್ಪಿ ಹಾಸಿಗೆ ಹಿಡಿದಿದ್ದರು. ನೆನಪಿನ ಶಕ್ತಿ ಕೈಕೊಟ್ಟಿತ್ತು. ಪರಿಚಯ ಹಿಡಿಯುವ ಸಾಮರ್ಥ್ಯ ಕುಗ್ಗಿತ್ತು. ಯಾರಾದರೂ ಬಂದು ಮಾತನಾಡಿಸಿದರೆ ಸುಮ್ಮನೆ ನೋಡುತ್ತಿದ್ದರು. ಮನೆಯಲ್ಲಿ ನೋಡಿಕೊಳ್ಳುವವರಿದ್ದುದರಿಂದ ಒಂದು ವಾರದ ಮಟ್ಟಿಗೆ ಗೆಳೆಯರೊಟ್ಟಿಗೆ ಕಾಶ್ಮೀರ ಪ್ರವಾಸಕ್ಕೆ ಹೋದಾಗ ಅಮ್ಮನ ಸಾವಿನ ಸುದ್ದಿ ಬಂದಿತು. ಆಗ ತನ್ನ ಜೊತೆ ಇದ್ದ ಮಿತ್ರರು ತನ್ನನ್ನು ಸಮಾಧಾನ ಮಾಡಿಸಿ ಮರುದಿನ ಅಲ್ಲಿಂದ ಕಳುಹಿಸುವ ವ್ಯವಸ್ಥೆ ಮಾಡಿದರು. ಬದುಕಿನ ಎಲ್ಲಾ ಘಟನೆಗಳಲ್ಲೂ ಅಷ್ಟು ಸ್ನೇಹಿತರು ತನ್ನ ಜೊತೆ ಹೇಗಿದ್ದರೂ ಎನ್ನುವುದನ್ನು ಈ ಕೃತಿಯಲ್ಲಿ ಚಿತ್ರಿಸಿದ್ದಾರೆ.
....................
.

Comments
Post a Comment