ಬ್ಯಾಂಕಿನ ರಸವತ್ತಾದ ಘಟನೆಗಳ
‘ಅಸಲು ಫಸಲು’
ಎಸ್‌ಬಿಐ ಮತ್ತು ಸಿಂಡಿಕೇಟ್ ಬ್ಯಾಂಕಿನ ಜನರಲ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿ ರಾಷ್ಟ್ರೀಕೃತ ಬ್ಯಾಂಕೊಂದರ ಹಿರಿಯ ಅಧಿಕಾರಿಗಳಾಗಿ ನಿವೃತ್ತರಾದ ಎಸ್. ಸೀತಾರಾಮು, ತಮ್ಮ ವೃತ್ತಿ ಜೀವನದ ಅನುಭವಗಳಲ್ಲಿ ನಡೆದ ನೈಜ ಕೆಲವು ಆಯ್ದ ರಸವತ್ತಾದ ಘಟನೆಗಳ ಬಣ್ಣನೆಯನ್ನು ‘ಅಸಲು ಫಸಲು’ ಕೃತಿಯಲ್ಲಿ ಬಿಚ್ಚಿಟ್ಟಿದ್ದಾರೆ. ಬ್ಯಾಂಕ್ ಒಡನಾಟದಲ್ಲಿ ಗ್ರಾಹಕರ ಜೊತೆಗಿನ ಸಂಬಂಧ ಕೇವಲ ಹಣಕಾಸಿನ ವ್ಯವಹಾರದ ಶುಷ್ಕ ಪರೀಧಿಯನ್ನು ದಾಟಿ ವೈಯಕ್ತಿಕ ಸ್ನೇಹದ ಹಂತವನ್ನು ತಲುಪಿ, ಪರಸ್ಪರ ದುಃಖ-ಸುಖ ಹಂಚಿಕೆಯ ಮೆಟ್ಟಿಲನ್ನು ಮುಟ್ಟಿರುವುದನ್ನು ಇದರಲ್ಲಿ ಕಾಣಬಹುದು.
ಸಾಲ ವಸೂಲಾತಿಯಲ್ಲಿ ಬರುವ ಪ್ರಾಣಭಯದ ಅನುಭವ, ಟ್ರಾವೆಲ್ಸ್ ಚೆಕ್ಕುಗಳಲ್ಲಿ ವಿದೇಶಿ ಮಹಿಳೆಯರ ಮೋಸ, ಹೆಣ್ಣುಮಾಯೆಗೆ ಸಿಕ್ಕು ಮಣ್ಣುಮುಕ್ಕಿದ ಸಹೋದ್ಯೋಗಿ, ಬ್ಯಾಂಕ್ ಸಿಬ್ಬಂದಿಯ ಮೋಸ, ವಯಸ್ಸಾದ ತಂದೆ -ತಾಯಿಗಳ ಹಣವನ್ನೇ ಲಪಟಾಯಿಸುವ ಮಕ್ಕಳು, ಇಂತಹ ಸುಂದರವಾದ ಮಾನವ ಸ್ವಭಾವದ ವಿವಿಧ ಮಜಲುಗಳನ್ನು ಇಲ್ಲಿ ಕಾಣಬಹುದು. ಸೀತಾರಾಮು ಅವರ ಕಥೆಗಳು ಮನುಷ್ಯರಂತೆ ಸಹಜವಾಗಿ ಬದುಕುವಾಗ ಮನುಷ್ಯರು ಏನೆಲ್ಲ ಮಾಡುತ್ತಾರೆ ಎನ್ನುವುದನ್ನು ಬಿಂಬಿಸುತ್ತದೆ. ಒಬ್ಬ ಬ್ಯಾಂಕರ್ ಆಗಿ ಇಂತಹ ಘಟನೆಗಳನ್ನು ಕಾಣುವುದು ವಿಶಿಷ್ಟವಾಗಿದೆ. ಬ್ಯಾಂಕಿನ ಒಳಗಿನ ಮತ್ತು ಹೊರಗಿನ ಹಾಗೂ ಸಂಬಂಧಿಸಿದ ಸಂಗತಿಗಳನ್ನು ಸಾಮಾನ್ಯ ಸಂಗತಿಗಳೆಂದು ಕೈಬಿಡದೆ ಒಬ್ಬ ಮಾಲೆಗಾರ ಮಾಲೆಯನ್ನು ತವಕದಿಂದ ನೇಯುವಂತೆ ಸೀತಾರಾಮ ಕಥೆಯಾಗಿ ನೇಯ್ದಿದ್ದಾರೆ.
ಒಟ್ಟೂ ೧೧ ಕತೆಗಳನ್ನು ಹೊಂದಿರುವ ಈ ಕೃತಿಯಲ್ಲಿ ಕೋಮಲವಾದ, ಸರಳವಾದ, ನಿರಾಲಂಕರವಾದ ಭಾಷೆ ಇದೆ. ಓದಲಾರಂಭಿಸಿದರೆ ಓದುಗನನ್ನು ಈ ಕಥೆಗಳು ಕೈಬಿಡುವುದಿಲ. ಅಪ್ಯಾಯಮಾನ ಅನುಭವವನ್ನು ಉಳಿಸಿಬಿಡುತ್ತದೆ. ಇಲ್ಲಿ ನಾವು ಅಸಲು ಹೂಡಿದಷ್ಟು ನಮಗೆ ಬಡ್ಡಿ. ನಮ್ಮ ಅಸಲು ಸತ್ಯ, ಧರ್ಮ, ನಿಷ್ಠೆ ಮತ್ತು ಪ್ರೀತಿಗಳಾದರೆ ಮನಸ್ಸಿನ ಶಾಂತಿ, ಸಂತೃಪ್ತಿ, ಆನಂದ, ಪ್ರೀತಿಯ ಫಸಲು. ಇಲ್ಲದಿದ್ದರೆ ಆತಂಕ, ಭಯ, ಅಶಾಂತಿಯ ಫಸಲು ಎನ್ನುವದುನ್ನು ಅರಿಯಬಹದು.
‘ಕ್ಲಾಸ್’ ಎಂಬ ಕಥೆಯಲ್ಲಿ ತಾನು ಪ್ರಾಥಮಿಕ ಶಾಲೆಯಲ್ಲಿ ಓದುವಾಗ ನನಗೆ ಪಾಠ ಮಾಡುತ್ತಿದ್ದ ಕಮಲಮ್ಮ ಅವರ ನೆನಪನ್ನು ಲೇಖಕರು ಇಲ್ಲಿ ಮಾಡಿದ್ದಾರೆ. ಜೀವನ ಮತ್ತು ಜೀವನದ ಪಾಠ ಕಲಿಸಿದ ಕಮಲಮ್ಮರ ಚಿತ್ರ ನೋಡಿ ನೆನಪು ಮಾಡಿಕೊಳ್ಳುತ್ತಿರುತ್ತಾರೆ. ಬ್ಯಾಂಕಿನಲ್ಲಿ ನೌಕರರೇ ಗ್ರಾಹಕರ ಅಕೌಂಟಿನಿಂದ ಹೇಗೆ ವಂಚನೆ ಮಾಡುತ್ತಾರೆ ಎನ್ನುವುದರ ಬಗ್ಗೆ ಕಥೆ . ‘ಅಣ್ಣಾ ಸಾಲೈ’ ನಲ್ಲಿ ಇದೆ. ‘ಅವ್ವ’ದಲ್ಲಿ ಕುಟುಂಬದ ಗಲಾಟೆ ಬ್ಯಾಂಕಿನಲ್ಲಿ ಎದುರಾದ ಬಗ್ಗೆ, ‘ಗೋವಿಂದಾ ಗೋವಿಂದಾ’ದಲ್ಲಿ ಪರಿಚಿತ ಗೆಳೆಯನ ಹೆಸರು ಹೇಳಿಕೊಂಡು ನೂರು ರೂಪಾಯಿ ಪಡೆದು ನಾಮ ಹಾಕಿದವನ ಬಗ್ಗೆ ಸುಂದರವಾಗಿ ಬರೆದಿದ್ದಾರೆ.
ವಿದೇಶಿ ವಿನಿಮಯ ವ್ಯವಹಾರ ಮಾಡುವಾಗ ಎಷ್ಟೊಂದು ಎಚ್ಚರವಾಗಿರಬೇಕಾಗುತ್ತದೆ ಎನ್ನುವುದನ್ನು ‘ ನಾವು ಶರ್ಲಾಕ್ ಹೋಮ್ಸ್’ ನಲ್ಲಿ, ‘ಸೇವೆ’ ಯಲ್ಲಿ ಸಮಾಜ ಸೇವೆ ಮಾಡಲು ಹೋದ ನಿವೃತ್ತನೊಬ್ಬ ಈ ಸೇವೆಯ ಸಹವಾಸ ಸಾಕಪ್ಪಾ ಎಂದು ಹೇಳುವುದು,
‘ಕುಸುಮಾದಪಿ’ ಯಲ್ಲಿ ಬ್ಯಾಂಕಿನ ಕೃಷಿ ವಿಭಾಗದ ಮ್ಯಾನೇಜರ್‌ನನ್ನು ಸಾಲ ವಸೂಲಾತಿಗೆ ಹಳ್ಳಿಯವರು ಪಂಪ್ ಹೌಸ್ ಒಳಗೆ ಹಾಕಿ ಬೀಗ ಜಡಿಯುವುದು, ‘ಗಂಡು ಮಾಯೆಯೋ, ಹೆಣ್ಣು ಮಾಯೆಯೋ’ ಕಥೆಯಲ್ಲಿ ಸ್ತ್ರೀ ವ್ಯಾಮೋಹಿಯಾದ ಬ್ಯಾಂಕ್ ಮ್ಯಾನೇಜರ್‌ನನ್ನು ವರ್ಗಾವಣೆಯಾಗಿ ಹೋದಲ್ಲೆಲ್ಲಾ ಹೆಂಗಸರ ವ್ಯಾಮೋಹಕ್ಕೆ ಬಿದ್ದು ಮುಂದೆ ಅನುಭವಿಸಿದ ಸಂಕಷ್ಟಗಳ ಸರಮಾಲೆಯ ವಿವರಣೆ ಇದೆ.
.............................
Comments
Post a Comment