ಕೆಳದಿ ಕುಲತಿಲಕ ಹಿರಿಯ ವೆಂಕಟಪ್ಪ ನಾಯಕ’ 


ಇದು ಐತಿಹಾಸಿಕ ಕಾದಂಬರಿ. ಇದನ್ನು ಸಂಗ್ರಹಿಸಿ ಬರೆದವರು ಹೊಸನಗರದ ಅಂಬ್ರಯ್ಯಮಠ. ಕೆಳದಿ ಪರಂಪರೆ ಕರ್ನಾಟಕದ ಇತಿಹಾಸದಲ್ಲಿ ಪ್ರಮುಖವಾದದ್ದು. ವೆಂಕಟಪ್ಪ ನಾಯಕ, ಶಿವಪ್ಪ ನಾಯಕರಂತಹ ಪ್ರಸಿದ್ಧ ಮನೆತನ.  ಇವರ ಆಡಳಿತ ವೈಖರಿಯೇ ಒಂದು ಶಿಸ್ತಿನದು. ಇವರ ರಾಜಧಾನಿ ಇಕ್ಕೇರಿ. ಕೆಳದಿ ಚೆನ್ನಮ್ಮರಂತಹ ಮಹಿಳೆಯರ ಆಡಳಿತವೇ  ಒಂದು ತೂಕದ್ದಾಗಿದೆ. ಪ್ರಸ್ತುತ ‘ಕೆಳದಿ ಕುಲತಿಲಕ ಹಿರಿಯ ವೆಂಕಟಪ್ಪ ನಾಯಕ ’ಕೃತಿಯಲ್ಲಿ ಅಂದಿನ ಬಹಳಷ್ಟು ರಾಜಕೀಯ, ಸಾಮಾಜಿಕ ವಿಚಾರಗಳ ಜೊತೆಗೆ ಅರಸರ ಆಂತರಂಗಿಕ, ಕೌಟುಂಬಿಕ ಜೀವನ ಮತ್ತು ಅವರ ರಾಜ್ಯ ವೈಶಾಲ್ಯv, ನೆರೆಹೊರೆಯ ರಾಜ್ಯದೊಂದಿಗೆ ಇದ್ದ ಸಂಬಂಧಗಳು, ನಡೆದ ಯುದ್ಧಗಳ ಕುರಿತಾಗಿ ವಿವರಿಸಲಾಗಿದೆ.
ಮಲೆನಾಡಿನ ಪ್ರಸಿದ್ಧ ಅರಸು ಮನೆತನವಾದ ಕೆಳದಿ ಅರಸರು ಸುಮಾರು ೬೩ ವರ್ಷಗಳ ಕಾಲ ಆಳ್ವಿಕೆ ಮಾಡುತ್ತಾರೆ. ಇವರ ಸ್ಮಾರಕಗಳು, ಕೆರೆ-ಕಟ್ಟೆಗಳು, ಇಂದಿಗೂ ಅವರನ್ನು ನೆನಪಿಸುತ್ತವೆ.
 ೪೭  ವರ್ಷಗಳ ಕಾಲ ನಿರಂತರವಾಗಿ ಆಳ್ವಿಕೆ ನಡೆಸಿದವನು ವೆಂಕಟಪ್ಪ ನಾಯಕ. ನಂತರ ಶಿವಪ್ಪ ನಾಯಕ, ವೀರಭದ್ರ ನಾಯಕ.  ಇವರೊಟ್ಟಿಗೆ ಗೇರುಸೊಪ್ಪೆಯ ಬೈರಾದೇವಿ, ಆಕೆಯ ಮಗಳು ಚೆನ್ನಬೈರಾದೇವಿಯ ಅರಸೊತ್ತಿಗೆಯ ವಿವರ ಇದರಲ್ಲಿದೆ. ಇವರೆಲ್ಲರೂ ಹೋರಾಟದಿಂದಲೇ ಬದುಕು ಆರಂಭಿಸಿ ಅದರಿಂದಲೇ ಬದುಕು ಅಂತ್ಯಗೊಳಿಸಿಕೊಂಡವರು. ದೈವಭಕ್ತ, ಸಮರ ಸೇನಾನಿ, ಮಹಾ ಶಕ್ತಿಶಾಲಿ, ಅದ್ಭುತ ಸಾಹಿತಿಗಳಾಗಿ, ರೈತರ, ಜನಸಾಮಾನ್ಯರ  ಮಿತ್ರರಾಗಿ ಕೆಲಸ ಮಾಡಿದವರು.
 ಕೆಳದಿ ಅರಸರ ರಾಜ್ಯದ ಕುರುಹು ಗೇರುಸೊಪ್ಪೆ, ಬಿದನೂರು, ಕೊಲ್ಲೂರು, ಶೃಂಗೇರಿ, ಹೊಸಂಗಡಿ, ಕಾರ್ಕಳ, ಬಾರ್ಕೂರು, ಭಟ್ಕಳ, ಮಂಗಳೂರು, ಕಂಡ್ಲೂರು ಮೊದಲಾದೆಡೆ ಇಂದಿಗೂ ಇದೆ. ಅಂದರೆ ಮಲೆನಾಡ ಬಹುಭಾಗದಲ್ಲಿ ಅವರ ಆಡಳಿತ ಪಸರಿಸಿತ್ತು. ಇಂದಿನ ಉತ್ತರ ಕನ್ನಡದಿಂದ ಕಾಸರಗೋಡಿನವರಿಗೆ, ಮಡಿಕೇರಿ, ಉಡುಪಿ, ಬೇಲೂರು, ಹಾಸನ, ಕಡೂರು, ಚಿಕ್ಕಮಗಳೂರು ಪ್ರಾಂತ್ಯಗಳು ಇವರ ವಶದಲ್ಲಿದ್ದವು.
 ೧೫೮೩ ರಲ್ಲಿ ಇಕ್ಕೇರಿಯ ಅರಮನೆಯಲ್ಲಿ ಕೆಳದಿ ವೆಂಕಟಪ್ಪ ನಾಯಕನಿಗೆ ಪಟ್ಟಾಭಿಷೇಕವಾಗುತ್ತದೆ. ಈ ವೇಳೆ ಆನಂದಪುರ ಸುತ್ತಮುತ್ತ ಗ್ರಾಮಗಳಲ್ಲಿ ಕಿರಾತ ಬೇಡರ ಕಾಟ ವಿಪರೀತವಾದಾಗ ಅದರ ಸುದ್ದಿ ತಿಳಿದು ಧಾವಿಸಿ, ಹಿಂಸೆ ಇಲ್ಲದೆ ಅವರನ್ನೆಲ್ಲ ಶರಣಾಗುವಂತೆ ಮಾಡುತ್ತಾನೆ. ಇಲ್ಲಿನ ವಾಸಿಗಳೆಲ್ಲ ರೈತಾಪಿಗಳಾಗಿದ್ದರು. ಶಾಂತವಾಗಿ ಬದುಕು ಸಾಗುತ್ತಿದ್ದರು. ಇಂತಹ ಸ್ಥಳದಲ್ಲಿ ಸುಂದರ ಪಟ್ಟಣ ಕಟ್ಟಬೇಕೆಂಬ ಆಸೆ ಉಂಟಾಗುತ್ತದೆ. ಅದಕ್ಕೆ ಎಲ್ಲಾ ಕ್ರಮಗಳನ್ನು ಕೈಗೊಂಡು ಆನಂದಪುರ ಎಂಬ ಪಟ್ಟಣ ಕಟ್ಟುತ್ತಾನೆ. ಈ ನಗರ ಮುಕ್ತಾಯ ಹಂತದಲ್ಲಿದ್ದಾಗ ದೇಶಪರ್ಯಟನೆಯ ಮನಸ್ಸಾಗುತ್ತದೆ.
ಇದಕ್ಕಾಗಿ ಹೊರಡುತ್ತಾನೆ, ಅನೇಕ ಪಟ್ಟಣ ಸುತ್ತ್ತಾಡಿ ಕೊನೆಗೆ  ದೆಹಲಿಯ ದೊರೆ ಜಲಾಲುದ್ದೀನ್ ಮೊಹಮ್ಮದ್ ಅಕ್ಬರ್ ಅವನಲ್ಲಿಗೆ ತೆರಳುತ್ತಾನೆ. ಅಲ್ಲಿನ ಅರಮನೆ ಪ್ರವೇಶಿಸುತ್ತಿದ್ದಂತೆಯೇ ಮಹಾದ್ವಾರದಲ್ಲಿ ಖಡ್ಗವೊಂದನ್ನು ನೇತುಹಾಕಿರುವುದನ್ನು ಕಂಡು ಒಳಗಡೆ ಹೋಗಿ ವಿಚಾರಿಸಿದಾಗ ಪರಾಕ್ರಮಶಾಲಿ ಮಂತ್ರಿ ಅಂಕುಶ್ ಖಾನ್ ಅವನ ಒಂಟಿಗತ್ತಿ ಇದು ಆಗಿತ್ತು ಎನ್ನುವುದು ತಿಳಿದುಬರುತ್ತದೆ. ಒಂಟಿಗತ್ತಿ ಕಾಳಗ ನಿಪುಣನಾಗಿ ಆತ ತನ್ನನ್ನು ಎದುರಿಸುವವರು ಯಾರಾದರೂ ಇದ್ದರೆ ಅವರು ಬಿಚ್ಚಲಿ ಎಂದು ಸವಾಲೆಸೆದಿರುತ್ತಾನೆ.  ವೆಂಕಟಪ್ಪ ನಾಯಕ ಇದನ್ನು ತಾನು ಬಿಚ್ಚಿ  ಹೋರಾಡುವೆ ಎಂದು ಹೇಳುತ್ತಾನೆ. ಆಗ ದೊರೆ ಆತನಿಗೆ ಕತ್ತಿ  ಕೊಡುತ್ತಾನೆ. ಅದನ್ನು ತೆಗೆದುಕೊಂಡು ಖಾನ್ ಜೊತೆ ಹೋರಾಡುತ್ತಾನೆ ಹತ್ತಾರು ಕತ್ತಿ ಈ ವೇಳೆ ಪುಡಿಯಾಗುತ್ತದೆ. ಕೊನೆಗೆ ತನ್ನಲ್ಲಿದ್ದ  ನಾಗಮುರಿ ಕತ್ತ್ತಿಯಿಂದ ಹೋರಾಡಿ ಖಾನ್‌ನ ನಡು ಕತ್ತರಿಸುತ್ತಾನೆ. ಬಳಿಕ ರಾಜಮರ್ಯಾದೆಯನ್ನು ದೆಹಲಿ ಅರಸನಿಂದ ಪಡೆದು ಬೀಳ್ಕೊಳ್ಳುತ್ತಾನೆ.
  ಅಲ್ಲಿಂದ ವಾಪಸ್ ಹೊರಟ ನಾಯಕ  ದಾರಿಮಧ್ಯೆ ಆಯಾಸ ಪರಿಹಾರಕ್ಕಾಗಿ ಹಳ್ಳಿಯೊಂದರ ಒಂಟಿ ಮನೆ ಬಳಿ ಕುದುರೆ ನಿಲ್ಲಿಸುತ್ತಾನೆ.  ಆ ಮನೆಯ ಹೊರಗಡೆ ಚೆಲುವೆಯೊಬ್ಬಳು ಗಿಡಕ್ಕೆ ನೀರೆರೆಯುತ್ತಿರುವುದನ್ನು ಕಂಡು ಆಕೆಯಲ್ಲಿ ಅನುರಕ್ತನಾಗುತ್ತಾನೆ. ಆಕೆ ಹೆಸರು ಚಮೇಲಿ. ಅನಾಥೆಯಾಗಿರುತ್ತಾಳೆ, ಆಕೆ ಮುಸ್ಲಿಂ ಸಮಾಜದವಳು. ಇಬ್ಬರೂ ಸಂಧಿಸುತ್ತಾರೆ. ನಾಯಕ ಮದುವೆಯ ಪ್ರಸ್ತಾಪ ಇಡುತ್ತಾನೆ. ಆಗ ಆಕೆ ‘ತಾನು ನಿನ್ನನ್ನು ಮದುವೆಯಾದರೆ  ತೊಂದರೆ ಆಗುತ್ತದೆ. ಮದುವೆಯ ಕರಾರು ಬೇಡ’ ಎನ್ನುತ್ತಾಳೆ. ಆಗ ವೆಂಕಟಪ್ಪ ನಾಯಕ ‘ನಿನ್ನನ್ನು ಚಂಪಾ ಅಂತ ಕರೆಯಲೇ’ ಎನ್ನುತ್ತಾನೆ. ಅದಕ್ಕೆ ಅವಳು ‘ನೀವು ನನ್ನವರಾದ ಮೇಲೆ ನನ್ನ ಹೆಸರು ನೀವು ಇಟ್ಟಂತೆ ಆಗಲಿ, ಹಾಗೆ  ಕರೆಯಿರಿ’ ಎನ್ನುತ್ತಾಳೆ.
 ನಂತರ ಆನಂದಪುರದ ಪಕ್ಕದಲ್ಲಿ ಚಂಪಾಳಿಗಾಗಿ ಅರಮನೆ ನಿರ್ಮಿಸಿ ಕಲ್ಯಾಣಿಯನ್ನು ಕಟ್ಟುತ್ತಾನೆ. ಅದಕ್ಕೆ ‘ಚಂಪಕಸರಸಿ ಉದ್ಯಾನವನ’ ಎಂಬ ಹೆಸರು ಇಡುತ್ತಾನೆ. ವಾರಕ್ಕೊಂದು ಸಲ ಅಲ್ಲಿಗೆ ಬಂದು ಆಕೆಯನ್ನು ಭೇಟಿಯಾಗುತ್ತಿರುತ್ತಾನೆ. ಇತ್ತ ಈತನ ಹಿರಿಯ ರಾಣಿ ಭದ್ರ್ರಾ ಅನಾರೋಗ್ಯದಿಂದ ಸಾವನ್ನಪ್ಪುತ್ತಾ ಳೆ. ರಾಜನಿಗೆ ಅಪರಾಧಿ ಪ್ರಜ್ಞೆ ಕಾಡುತ್ತದೆ. ಚಂಪಾ ಲಿಂಗವನ್ನು ಧರಿಸಿ  ಲಿಂಗ ಪೂಜೆ ನಡೆಸಲಾರಂಭಿಸುತ್ತಾಳೆ.
ಈ ವೇಳೆ ಗೇರುಸೊಪ್ಪೆಯ ರಾಣಿ  ಚೆನ್ನಭೈರಾದೇವಿಯೊಡನೆ  ಯುದ್ಧ ಮಾಡುವ ಸಂದರ್ಭ ಎದುರಾಗುತ್ತದೆ. ಯುದ್ಧದಲ್ಲಿ  ಆಕೆ ವೆಂಕಟಪ್ಪ ನಾಯಕನ  ಕೈಸೆರೆಯಾಗುತ್ತಾಳೆ.  ಆತ ಗೇರುಸೊಪ್ಪೆಯನ್ನು ನಿರ್ನಾಮ ಮಾಡುತ್ತಾನೆ. ಇಕ್ಕೇರಿಯಲ್ಲಿ ಆಕೆಗೆ ಅರಮನೆ ಒಂದನ್ನು ಬಿಟ್ಟುಕೊಟ್ಟು ಅಲ್ಲಿಯೇ ಚೆನ್ನಾಗಿ ನೋಡಿಕೊಳ್ಳುತ್ತಾನೆ. ಮತ್ತೆ ದಿಗ್ವಿಜಯ ಮಾಡಿ ಮಿರ್ಜಾನ್‌ನಿಂದ ಕಾಸರಗೋಡಿನ ಚಂದ್ರಗಿರಿಯವರಿಗೆ ತನ್ನ ರಾಜ್ಯ ವಿಸ್ತಾರ ಮಾಡುತ್ತಾನೆ ಈ ವೇಳೆ ವೆಂಕಟಪ್ಪನ ಚಿಕ್ಕಪ್ಪ ಸಿದ್ದಪ್ಪನಾಯಕನ ಮಗ ಶಿವಪ್ಪ ನಾಯಕ ಪ್ರಾಯಕ್ಕೆ ಬರುತ್ತಾನೆ.
ಶಿವಪ್ಪ ನಾಯಕ:  
ಶಿವಪ್ಪ ನಾಯಕನಿಗೆ ಚಿತ್ರದುರ್ಗದ ಶಾಂತಮ್ಮಾಜಿಯನ್ನು ತಂದು ವಿವಾಹ ಮಾಡಲಾಗುತ್ತದೆ. ಕೆಲವೇ ದಿನಗಳಲ್ಲಿ ವೆಂಕಟಪ್ಪ ನಾಯಕ ತಂದೆ ದೊಡ್ಡ ಸಂಗಮನಾಯಕ ಕಾಲವಾಗುತ್ತಾನೆ. ವಿಜಯನಗರದ ದುರಂತ ಪತನ ಈ ವೇಳೆ ಆರಂಭವಾಗುತ್ತದೆ. ವಿಜಯನಗರಕ್ಕ್ಕೆ ರಾಮರಾಯ ಸಹಾಯ ಮಾಡುತ್ತಾನೆ.  ೧೫೬೫ ರಲ್ಲಿ  ಎಲ್ಲಾ ಮುಸಲ್ಮಾನ ರಾಜರು ಇದರಿಂದ ಸಿಟ್ಟಿಗೆದ್ದು  ಕೆಳದಿ ಸಾಮ್ರಾಜ್ಯದ  ಪತನಕ್ಕೆ ಹುನ್ನಾರ ನಡೆಸುತ್ತಾರೆ. ಕೆಳದಿ ರಾಮರಾಯ ಅವರ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುತ್ತಾನೆ. ಯುದ್ಧದ ಕೆಲವು ಭಾಗಗಳಲ್ಲಿ ವಿಜಯನಗರದ ಕೈ ಮೇಲಾಗಿತ್ತು. ರಾಮರಾಯ ಗಮನಸೆಳೆಯುವಂತೆ ಯುದ್ಧ ಮಾಡಿದ.  ಇನ್ನೇನು ಜಯ ಸನ್ನಿಹಿತ ಎನ್ನುವ ವೇಳೆ ಮುಸ್ಲಿಂ ಸೈನಿಕರು ಮತ್ತೆ ನುಗ್ಗಿ ಬಂದು ಸೇಡು ತೀರಿಸಿಕೊಳ್ಳುತ್ತಾರೆ. ರಾಮರಾಯನ ಒಂದು ಲಕ್ಷ ಸೈನಿಕರನ್ನು ಕೊಲ್ಲಲಾಗುತ್ತದೆ. ವಿಜಯನಗರ ಸೈನ್ಯ ಸೋತು ರಾಮರಾಯನ ತಲೆದಂಡವಾದ ನಂತರ ಸುಲ್ತಾನರ ಸೈನ್ಯ ವಿಜಯನಗರವನ್ನು ಪ್ರವೇಶಿಸುತ್ತದೆ. ಕಂಡಕಂಡವರನ್ನು ಕೊಚ್ಚಿ ಹಾಕಿ, ದೇವಾಲಯಗಳನ್ನು,  ಅಂಗಡಿಗಳನ್ನು, ಮನೆಗಳನ್ನು ಕೊಳ್ಳೆ ಹೊಡೆಯುತ್ತದೆ. ಗೋಪುರ, ಮಂಟಪಗಳನ್ನು ನಾಶ ಮಾಡುತ್ತಾರೆ. ಏಕಶಿಲೆಯ ಸುಪ್ರಸಿದ್ಧ ನರಸಿಂಹ ವಿಗ್ರಹವನ್ನು ಧ್ವಂಸ ಮಾಡುತ್ತಾರೆ.  
 ಯಾವ ಕಾರಣಕ್ಕ್ಕೂ ವೆಂಕಟಪ್ಪ ಮುಂದುವರೆಯಲು ಅವಕಾಶ ಕೊಡಬಾರದೆಂದು ಕಟ್ಟಪ್ಪಣೆ ಮಾಡುತ್ತಾರೆ. ಬಾದಶಹನ ಸೈನ್ಯದ ಮೇಲೆ ಮುಗಿಬಿದ್ದು ಕ್ಷುದ್ರಗೊಳಿಸಿ ಅದನ್ನು ಓಡಿಸುತ್ತಾರೆ. ಕೆಳದಿಯ ಯೋಧರು ‘ದೋನೇಜ’ಎಂಬ ಬಿರುದನ್ನು ಕೊಟ್ಟು ಶಿವಪ್ಪ ನಾಯಕನಿಗೆ ಜೈಕಾರ ಹಾಕುತ್ತಾರೆ. ನಂತರ ಶಿವಪ್ಪ ನಾಯಕನ ದಂಡು ರಾಯದುರ್ಗ ಹಾಗೂ ಬೇಲೂರಿನಡೆಗೆ ನಡೆಯುತ್ತದೆ. ಆಶ್ರಮ ಧರ್ಮಗಳನ್ನು ಪಾಲಿಸುತ್ತಾನೆ. ತಾನು ಗೆದ್ದ ಸ್ಥಳದಲ್ಲಿ ಅಧಿಕಾರಿಗಳನ್ನು ನೇಮಿಸಿ, ಸೈನ್ಯಗಳನ್ನು ನೆಲೆಗೊಳಿಸಿ ಬರುತ್ತಿದ್ದನು. ಉಪಯೋಗಿ ಕಾರ್ಯಕ್ರಮಗಳಾದ ಕೆರೆ -ಕಾಲುವೆಗಳನ್ನು ತೋಡಿಸಿದ.
ಆಗ ಕಾರ್ಕಳದ ಭೈರರಸನಿಂದ ಎಲ್ಲಿಲ್ಲದ ತೊಂದರೆಗಳು ಆಗುತ್ತಿವೆ ಎಂದು ಶೃಂಗೇರಿ ಜಗದ್ಗುರು ಅಭಿನವ ನರಸಿಂಹ ಭಾರತೀ ಸ್ವಾಮೀಜಿಯವರು ತಮ್ಮ  ಶಿಷ್ಯರಾದ ಸಚ್ಚಿದಾನಂದ ಭಾರತೀಯವರ ಮೂಲಕ ಶಿವಪ್ಪ ನಾಯಕನಲ್ಲಿ ಹೇಳಿಕೊಳ್ಳುತ್ತಾರೆ. ಶೃಂಗೇರಿ ಮಠವೆಂದರೆ ನಾಯಕನಿಗೆ ಎಲ್ಲಿಲ್ಲದ ಪ್ರೀತಿ ಮತ್ತು ಭಕ್ತಿ. ಭೈರರಸನ ಮೇಲೆ ನಾಯಕರ ಸೈನ್ಯ ಮುಗಿಬಿದ್ದು ಮಠದ ಭೂಮಿಯನ್ನು ತಮ್ಮ ಸ್ವಾಧೀನಕ್ಕೆ ತೆಗೆದುಕೊಂಡು ಅದನ್ನು ಸ್ವಾಮೀಜಿಗೆ ಮರಳಿಸುತ್ತಾನೆ. ಮತ್ತು ಶೃಂಗೇರಿಯ ಧರ್ಮಸಂಸ್ಥಾನವನ್ನು ಉದ್ಧ್ದರಿಸಿ ಕಾಪಾಡುತ್ತಾನೆ. ಹೀಗೆ ಹಲವಾರು ಜನರು ಉಪಯೋಗಿ ಮತ್ತು ಸಮಾಜಮುಖಿ ಕೆಲಸಗಳನ್ನು ಮಾಡುತ್ತಾನೆ.
 ದೇವರ ಪೂಜಾ ವೈಭವಗಳಿಗೆ ಸೀಮೆಯನ್ನು ವಿಂಗಡಿಸಿ ಅಧಿಕಾರಿಗಳನ್ನು ನಿಯಮಿಸುತ್ತಾನೆ. ಕೆಳದಿ ರಾಮೇಶ್ವರ, ವೀರಭದ್ರ ದೇವರಿಗೆ ವಿಶೇಷ ಭೂಮಿಗಳನ್ನು ಬಿಟ್ಟು ಕೊಡುತ್ತಾನೆ. ರಾಮೇಶ್ವರ ದೇವರ ರಂಗಮಂಟಪವನ್ನು ಶಿಲಾಮಯವಾಗಿಸುತ್ತಾನೆ. ‘ವಿಶಿಷ್ಟ ವೈದಿಕಾದ್ವೈತ ಸಿದ್ಧಾಂತ ಸ್ಥಾಪನಾಚಾರ್ಯ’ ಎಂಬ ಬಿರುದಿಗೆ ಇದರಿಂದ ವೆಂಕಟಪ್ಪ ನಾಯಕ ಪಾತ್ರವಾಗುತ್ತಾನೆ. ನಾನಾ ವಿಧದಲ್ಲಿ ಧರ್ಮಗಳನ್ನು ಸಮಗ್ರವಾಗಿ ಅಧ್ಯಯನ ನಡೆಸಿ ಸಮಸ್ತರನ್ನು ಸಂರಕ್ಷಿಸುತ್ತಿದ್ದನು. ವಯಸ್ಸು ೮೪ ಆದರೂ ಯುವಕರ ಉತ್ಸಾಹವಿತ್ತು. ಯುದ್ಧವೆಂದರೆ ಖಡ್ಗ ghiಳಪಿಸುವುದಲ್ಲ. ಅದು ನ್ಯಾಯಯುತವಾಗಿರಬೇಕು. ಧರ್ಮದ ಮೇಲೆ ಆಕ್ರಮಣವೆಸಗಿದರೆ ಕೈಕೊಟ್ಟಿ ಕೂಡ್ರಲಾಗದು ಎಂದು ಹೇಳುತ್ತಿದ್ದನು.
   ವೆಂಕಟಪ್ಪನಾಯಕನ ದಿನಗಳ ನಂತರ ವೀರಭದ್ರ ನಾಯಕನಿಗೆ ಪಟ್ಟ ಲಭಿಸುತ್ತದೆ. ಆದರೆ  ಜನರು ಶಿವಪ್ಪ ನಾಯಕ ಪಟ್ಟಕ್ಕೆ ಬರುತ್ತಾನೆ ಎಂದು ಮಾತನಾಡಿಕೊಳ್ಳುತ್ತಿದ್ದರು. ವೀರಭದ್ರ ನಾಯಕ ಅರಸನಾದುವರಿಂದ ಎಲ್ಲರೂ ನಿಬ್ಬೆರಗಾದರು. ವೀರಭದ್ರನಾಯಕ ಮಹಾಕ್ರಾಂತಿಯನ್ನು ಮಾಡಲಿಲ್ಲ.  ಅಖಂಡ ಕರ್ನಾಟಕವನ್ನು ಒಂದುಗೂಡಿಸುವ ಮೂಲಕ ಸಮಾಜವನ್ನು ಸರಿದಾರಿಗೆ ತರಲು  ಕೆಲಸ ಮಾಡುತ್ತಾನೆ. ಪರಂಪರಾಗತವಾಗಿ ಬಂದ ಛಿದ್ರತೆಯ ಮನೋಭಾವವನ್ನು ನಿಲ್ಲಿಸುತ್ತಾನೆ. ಕೆಳದಿಯ ಪತನದ ಹಾದಿಯನ್ನು ತಡೆಗಟ್ಟುತ್ತಾನೆ. ಧರ್ಮದ ಉಳಿವಿಗಾಗಿ ಪ್ರಯತ್ನಿಸುತ್ತಾರೆ. ಎಲ್ಲರ ಮನಸ್ಸುಗಳನ್ನು ಒಗ್ಗೂಡಿಸುತ್ತಾನೆ.
    ಚೆನ್ನಬೈರಾದೇವಿಯ ಆಳ್ವಿಕೆ:
 ವಿಜಯನಗರ ಸಾಮ್ರಾಜ್ಯದ ಸಾಮಂತರಾದ ಗೇರುಸೊಪ್ಪೆಯ ಚನ್ನಬೈರಾದೇವಿಯನ್ನು ಕೆಳದಿಯ ವೆಂಕಟಪ್ಪ ನಾಯಕನಿಗಿಂತ ಹಿಂದಿನ ಅರಸರಿಂದ  ಏನೂ ಮಾಡಲಾಗಲಿಲ್ಲ. ಏಕೆಂದರೆ ವಿಜಯನಗರದ ಕೃಪೆ ಅವಳ ಮೇಲಿತ್ತು. ಕೆಳದಿಯವರ ದುರಾಕ್ರಮಣ ನೀತಿಯ ಬಗ್ಗೆ ವಿಜಯನಗರಕ್ಕೆ ಆಗಾಗ ದೂರು ಸಲ್ಲಿಸುತ್ತಿದ್ದಳು. ವಿಜಯನಗರ ಸಾಮ್ರಾಜ್ಯ ಧೂಳಿಪಟವಾದ ನಂತರ ಕೆಳದಿಯವರು ತಮ್ಮ ಸ್ವಾತಂತ್ರ್ಯವನ್ನು ಘೋಷಿಸಿಕೊಂಡರು. ವೆಂಕಟಪ್ಪ ನಾಯಕ ಇದೇ ಸಂದರ್ಭವನ್ನು ಸಾಧಿಸಿ ಗೇರುಸೊಪ್ಪೆಯ ಮೇಲೆ ದಾಳಿ ಮಾಡಿದನು.
ಇದೇ ವೇಳೆ ಉಳ್ಳಾಲದ ರಾಣಿ ಅಬ್ಬಕ್ಕ ದೇವಿಯ ಹಾಗೂ ಆಕೆಯ ಗಂಡ ವೀರಲಕ್ಷ್ಮಪ್ಪ ಇವರ ದಾಂಪತ್ಯದ ವಿರಸವನ್ನು ಲಾಭ ಮಾಡಿಕೊಂಡ ಇಕ್ಕೇರಿ ಅರಸರು ಉಳ್ಳಾಲದ ಮೇಲೆ ದಾಳಿ ಮಾಡಿ ಮಂಗಳೂರನ್ನು ವಶಪಡಿಸಿಕೊಂಡರು ಲಕ್ಷ್ಮಪ್ಪನನ್ನು ರಾಜ್ಯದಿಂದಲೇ ಓಡಿಸಿದರು. ಹಿಂದಿನಿಂದಲೂ ಗೇರುಸೊಪ್ಪೆಪ್ಪೆಯ ಮೇಲೆ ಹೊಟ್ಟೆ ಕಿಚ್ಚನ್ನು ಮೆತ್ತಿಕೊಂಡೇ ಬಂದಿದ್ದ ಕೆಳದಿ ಅರಸರು ಚನ್ನಬೈರಾದೇವಿ  ಶ್ರೀಮಂತರಾಗಬಾರದೆಂದು ಕಾದು ಕುಳಿತಿದ್ದರು. ಪೋರ್ಚುಗೀಸರೊಂದಿಗೆ ಗೇರುಸೊಪ್ಪೆ ಅನ್ಯೋನ್ಯ ವ್ಯಾಪಾರ ಸಂಬಂಧ ಹೊಂದಿತ್ತು. ಅಪಾರ ಸಾಂಬಾರು ಪದಾರ್ಥವನ್ನು ಗೇರುಸೊಪ್ಪೆ ಸುತ್ತಮುತ್ತಲಲ್ಲಿ ಬೆಳೆಯುತ್ತಿತ್ತು. ಅದರಲ್ಲೂ ಕಾಳುಮೆಣಸಿಗೆ ಪ್ರಸಿದ್ಧವಾದ ಪ್ರದೇಶವಾಗಿತ್ತು. ಅದಕ್ಕಾಗಿಯೇ ‘ಕಾಳುಮೆಣಸಿನ ರಾಣಿ’ ಎಂದೇ ಚೆನ್ನಬೈರಾದೇವಿ ಖ್ಯಾತಳಾಗಿದ್ದಳು.  ಅದನ್ನು ಪೋರ್ಚುಗೀಸರು ಹೊನ್ನಾವರದ ಮೂಲಕ ಸಾಗಿಸುತ್ತಿದ್ದರು. ಉತ್ತಮ ಸ್ನೇಹ ಪೋರ್ತುಗೀಸರೊಂದಿಗೆ ಇದ್ದುದರಿಂದ ವೆಂಕಟಪ್ಪ ನಾಯಕ ಹೊಟ್ಟೆ ಉರಿಪಡುತ್ತಿದ್ದನು.
 ಚೆನ್ನಬೈರಾದೇವಿಗೆ ೧೬ರ ಹರಯದಲ್ಲೇ ಮದುವೆಯಾಗುತ್ತದೆ. ೨೦ರ ಹರಯದಲ್ಲಿ ರಾಣಿಯಾಗುತ್ತಾಳೆ.  ಸೋದರ ಮಾವ ಭೈರವ ಭೂಪತಿಯೇ ಇವಳ ಗಂಡ. ತನ್ನಷ್ಟಕ್ಕೆ  ತಾನಿರುತ್ತಿದ್ದನೇ ಹೊರತು ಪತ್ನಿಯ ಬಗ್ಗೆ ಗಮನಹರಿಸುತ್ತಿರಲಿಲ್ಲ. ವಿರಾಗಿಯಾಗಿದ್ದ. ಪೋರ್ತುಗೀಸರಿಗೆ ಆಗಾಗ ಕಪ್ಪಕಾಣಿಕೆ ಕೊಡುತ್ತಿದ್ದಳು. ಒಮ್ಮೆ ಅದನ್ನು ನಿಲ್ಲ್ಲಿಸಿದ್ದರಿಂದ ಭಟ್ಕಳ ಪಟ್ಟಣವನ್ನು ಸುಟ್ಟು ನಿರ್ನಾಮ ಮಾಡಿದ್ದರು. ರಾಣಿಯಾಗಿ ೨೦ ಸಂವತ್ಸರ ಉರುಳಿ ಹೋದಾಗ ವಿನಾಶಕಗಳಿಂದ ಭಟ್ಕಳ ಮತ್ತು ಹೊನ್ನಾವರ ನಗರ ಚೇತರಿಸಿಕೊಂಡಿತು. ಆ ಕಾಲದಲ್ಲಿ ಇವು ನೌಕಾ ಕ್ಷೇತ್ರವಾಗಿದ್ದವು. ಕಾಳುಮೆಣಸಿನ ಉತ್ಪತ್ತಿ ಹೆಚ್ಚುತ್ತಲೇ ಇತ್ತು. ಒಂದು ಮಹಾನಗರವಾಗಿ ಗೇರುಸೊಪ್ಪೆ ಬೆಳೆಯಿತು.
ಇತ್ತ ಪತಿ-ಪತ್ನಿಯರ ಮಧ್ಯೆ ಸಂಬಂಧ ಇರಲಿಲ್ಲ. ಒಂದು ದಿನ ಗಂಡ ಇನ್ನಿಲ್ಲವಾದ. ರಾಣಿಗೆ ಮಕ್ಕಳಾಗಿರಲಿಲ್ಲ. ಕನ್ಯೆಯಾಗಿಯೇ ಉಳಿದಿದ್ದಳು. ಒಂದು ರಾತ್ರಿ  ಭೀಕರ ಸಿಡಿಲು,- ಮಳೆಗಾಳಿ. ಪ್ರಕೃತಿಯ ಭೀಕರತೆ ಮೀರಿತ್ತು. ಶಯ್ಯಾಗೃಹದಲ್ಲಿ ಮಲಗಿದ್ದಾಗ ತುಂಬಿದ ಪ್ರ್ರಾಯದ ಸಾಮಾನ್ಯ ಯೋಧ ರಾಣಿಯ ಹತ್ತಿರ ಬಂದಿದ್ದ.  ಆತ ಅವಳನ್ನು ಆವರಿಸಿಕೊಂಡಿದ್ದ. ರಾತ್ರಿಕ ಕನಸಿಗೆ ಚಿತ್ತ್ತಾರ ಬರೆದಿದ್ದ. ಕೆಲವೇ ದಿನದಲ್ಲಿ ಈ ಗುಟ್ಟು ರಟ್ಟಾಯಿತು. ನಂತರ ಈತನನ್ನು ಆಪ್ತ ಸಚಿವನನ್ನಾಗಿಸಿಕೊಳ್ಳುತ್ತಾಳೆ.  ರಾತ್ರಿಯ ಹಿಂಸೆ ಕಳೆದು ನೆಮ್ಮದಿ ತುಂಬುವಂತಾಗುತ್ತದೆ. ಆತನ ಬಗ್ಗೆ ಅಪಾರ ಗೌರವ ಹೊಂದಿದ್ದಳು. ಆದರೆ ಈ ನಂಬಿಕೆ ಬಹುಕಾಲ ಉಳಿಯಲಿಲ್ಲ. ಗೇರುಸೊಪ್ಪೆಯ ರಾಜ ತಾನಾಗಬೇಕೆಂದು ಕೆಳದಿ ವೆಂಕಟಪ್ಪ ನಾಯಕನಿಗೆ  ರಾಣಿಯ ಬಗ್ಗೆ ಇಲ್ಲಸಲ್ಲದ ಆಪಾದನೆ ಹೊರಿಸಿ  ದಾಳಿ ಮಾಡಲು ನೆರವಾಗುತ್ತಾನೆ. ಈ ಬಗ್ಗೆ ಮಾಹಿತಿ ಸಿಕ್ಕಾಗ ಆತನಲ್ಲಿ ಕೇಳಿದಾಗ ತಾನು ಮಹಾಪಾಪ ಮಾಡಿದೆ. ರಾಜದ್ರೋಹಿಯಾದೆ.  ಕೆಟ್ಟ ಆಸೆಗೆ ಬಿದ್ದು ಮಾಡಬಾರದ್ದನ್ನು ಮಾಡಿದೆ ಎಂದು ಒಪ್ಪಿಕೊಳ್ಳುತ್ತಾನೆ.
ನಾಯಕನ  ಸೈನ್ಯ ಆಗಲೇ ಗೇರುಸೊಪ್ಪೆಗೆ ಪ್ರವೇಶಿಸಿತ್ತು.  ಯುದ್ಧದಲ್ಲಿ ಚೆನ್ನಬೈರಾದೇವಿ ಸೋಲುತ್ತಾಳೆ. ನಂತರ ಆಕೆಯನ್ನು ಇಕ್ಕೇರಿಯಲ್ಲಿ ಗ್ರಹಬಂಧನದಲ್ಲಿಲಾಗುತ್ತದೆ. ಪ್ರೇಮವೂ ಸತ್ತುಹೋಯಿತು, ರಾಜ್ಯವೂ ಸೋತುಹೋಯಿತು. ದೇಹ ಉಸಿರು ಚೆಲ್ಲುವುದನ್ನು ಕಾಯುತ್ತಿದ್ದೇನೆ ಎಂದು ಗೃಹಬಂಧನದ ವೇಳೆ ಹೇಳುತ್ತಾಳೆ. ಸಲ್ಲೇಖನ ವ್ರತಳಾಗಿ ಜಿನೈಕ್ಯಳಾಗಲು ನಿರ್ಧರಿಸುತ್ತಾಳೆ.
 

Comments

Popular posts from this blog