ಸಮಷ್ಟಿ ಪ್ರಜ್ಞೆಯನ್ನು ಸಾರುವ
‘ಯುದ್ಧ ವಿರೋಧಿ ಶಾಂತಿಗೀತೆಗಳು’
‘ಯುದ್ಧ ವಿರೋಧಿ ಶಾಂತಿ ಗೀತೆಗಳು’ ಈ ಕವನ ಸಂಕಲನವನ್ನು ಬರೆದವರು ಕವಯತ್ರಿ ಸವಿತಾ ನಾಗಭೂಷಣ. ಇತ್ತೀಚೆಗಷ್ಟೇ ಬಿಡುಗಡೆಗೊಂಡಿರು ಕೃತಿ. ಯುದ್ಧ, ಯುದ್ಧದಿಂದ ಆಗುವ ಅನಾಹುತಗಳು, ಸಂಕಷ್ಟಕ್ಕೆ ಒಳಗಾಗುವ ಜನರು, ಯುದ್ಧಕ್ಕಾಗಿ ಹಪಹಪಿಸುವ ದೇಶಗಳು, ಮನುಷ್ಯತ್ವ ಇಲ್ಲದಂತೆ ವರ್ತಿಸುವ ರಾಜಕಾರಣಿಗಳು, ಯುದ್ಧದ ನಂತರ ಉಂಟಾಗುವ ದುಃಖ, ಸಂತೈಸುವಿಕೆ ಮೊದಲಾದ ವಿಷಯಗಳನ್ನು ಕುರಿತು ಈ ಕೃತಿಯಲ್ಲಿ ೩೦ ಕವನಗಳನ್ನು ಬರೆದಿದ್ದಾರೆ.
ಕವನ ಸಂಕಲನದ ಮುಖಪುಟದ ಚಿತ್ರವೇ ಅರ್ಥಗರ್ಭಿತವಾಗಿದೆ.
ಯುದ್ಧಕ್ಕೆ ಕಾರಣ ಏನೇ ಇದ್ದರೂ ಅದು ಮಾಡುವುದು ಹಾನಿಯನ್ನೇ. ನಮಗೆ ಯುದ್ಧ ಬೇಡ, ಶಾಂತಿ ಬೇಕು. ಘಾಸಿಗೊಂಡ ಮನಸಿಗೆ ಮರುಚೈತನ್ಯ ಬೇಕು, ಗಾಯಾಳುಗಳಿಗೆ ಸಾಂತ್ವನ ಬೇಕು. ಸೇತುವೆ ಕಟ್ಟುವ ಮೂಲಕ ಒಂದಾಗಿಸಬೇಕು. ಇರುವವರೆಲ್ಲ ನೆಮ್ಮದಿಯಿಂದ ನಿದ್ದೆ ಮಾಡುವವರಾಗಬೇಕು. ಎಲ್ಲರೂ ಕೂಡಿ, ಹಾಡುತ್ತ, ಆಡುತ್ತಾ, ಮನ ಗೆಲ್ಲುವ ಬಗೆಯನ್ನು ಅವಲೋಕಿಸಬೇಕೆಂದು ಕವಯಿತ್ರಿ ಆಶಿಸುತ್ತಾರೆ. ಕೃತಿಯನ್ನು ಓದುವಾಗ ಅಂತ:ಕರಣ, ಆರ್ದ್ರತೆ ಉಕ್ಕಿಬರುತ್ತದೆ.
ಮುನ್ನುಡಿಯನ್ನು ಸಹ ‘ಶಾಂತಿ ನೆಲೆಸಿತ್ತು’ ಎನ್ನುವ ಕವನದಿಂದಲೇ ಆರಂಭಿಸಿ, ರಣರಂಗದ ಚಿತ್ರಣವನ್ನು ಕಟ್ಟಿಕೊಡುತ್ತಾರೆ. ಎಲ್ಲೆಡೆ ಕತ್ತಲೆಯೇ ತುಂಬಿತ್ತು. ಚಂದ್ರನ ಬೆಳಕು ಎಲ್ಲವ ವಿವರಿಸುತ್ತಿತ್ತು, ಶಾಂತಿ ನೆಲೆಸಿತ್ತು ಎಂದು ಮುಗಿಸುತ್ತಾರೆ. ‘ಕಾದಾಟ’ ಹೇಗಿರುತ್ತದೆ ಎಂದರೆ, ಫೋನ್ ಮಾಡಿದರೆ, ಒಂದು ಗುಂಡಿ ಒತ್ತಿದರೆ, ಸಾವಿರಾರು ಹೆಣಗಳು ಬೀಳುತ್ತವೆ. ಬದುಕುಳಿದವ ಸಾವಿರ ವರ್ಷ ಗುಂಡಿ ತೋಡುತ್ತಲೇ ಇರಬೇಕಾಗುತ್ತದೆ ಎನ್ನುವಂತಹ ಅದ್ಭುತ ಮಾತಿನಿಂದ ಇಡೀ ಕವನ ಸಂಕಲನ ಗಮನ ಸೆಳೆಯುತ್ತದೆ. ‘ನುಡಿಯಲಿಲ್ಲ ನಾಲಿಗೆ’ ಕವಿತೆಯಲ್ಲಿ ಯುದ್ಧ ಹೇಗೆ ಆಯಿತು, ಯುದ್ಧ ಏಕೆ ಆಯಿತು, ಯುದ್ಧ ಏನು ನೀಡಿತು, ಯುದ್ಧ ಎಂದು ಮುಗಿಯಿತು ಈ ಬಗ್ಗೆ ಏನೂ ಗೊತ್ತಿಲ್ಲದ, ಬೆರಳು ಚೀಪುತ್ತ ನಿಂತಿದ್ದ ಮಗು, ತನ್ನ ಅಪ್ಪನನ್ನು ಕಳೆದುಕೊಳ್ಳುತ್ತಾಳೆ. ತಾನು ಅಪ್ಪನನ್ನು ‘ಅಪ್ಪ’ ಎಂದು ಕರೆಯಲಿಲ್ಲ, ಅಜ್ಜಿ ಮಾತ್ರ ಅಪ್ಪ ಎಂದು ತೋರಿಸಿದ್ದು ನೆನಪಿದೆ. ಅದು ಶವದ ಪೆಟ್ಟಿಗೆ ಮನೆಗೆ ಬಂದಾಗ. ಅದರಲ್ಲಿ ಅಪ್ಪ ಇದ್ದನಂತೆ ಎನ್ನುವುದಷ್ಟೇ ಗೊತ್ತು. ಯುದ್ಧ ಅಪ್ಪನನ್ನು ಕಸಿದುಕೊಂಡಿತು ಎನ್ನುವ ಈ ಕವನ ಎಂತಹ ಹೃದಯವನ್ನೂ ಹಿಂಡುತ್ತದೆ. ಇಂತಹ ಮನಕಲಕುವ ಗೀತೆಗಳೇ ಇಲ್ಲಿನ ಕಥಾ ವಸ್ತುಗಳು.
ರಕ್ತ ದೇಹದಲ್ಲಿರಬೇಕು, ಬೀದಿಯಲ್ಲಿ ಚೆಲ್ಲಬಾರದು. ಹಗೆಯನ್ನು ಮೊಳಕೆಯಲ್ಲಿ ಸುಟ್ಟು ಬಿಡಬೇಕು. ಹಗೆಯ ಹೊಗೆ ಹಬ್ಬಲು ಬಿಡಬಾರದು. ಎಲ್ಲರಲ್ಲೂ ಮಿಡಿಯುವ ಹೃದಯವಿದೆ ಎನ್ನುವುದನ್ನು ವಿವರಿಸುತ್ತಾರೆ. ಕೆಲವು ದೇಶಗಳು ತಾವು ಬಲಾಢ್ಯರೆಂದು ಬಿಂಬಿಸಿಕೊಳ್ಳುತ್ತಿವೆ. ಇಂಥವರ ಬೆಂಬಲಕ್ಕೆ ಇನ್ನೂ ಕೆಲವು ದೇಶಗಳು ನಿಂತಿವೆ. ಇವರು ಕೆಲವರನ್ನು ಅಂಚಿಗೆ ತಳ್ಳುತ್ತಿದ್ದಾರೆ, ನರಕ ಸೃಷ್ಟಿಸುತ್ತಿದ್ದಾರೆ. ಒಂದು ಕಡೆ ಶಸ್ತ್ರಾಸ್ತ್ರವನ್ನು ನೀಡುತ್ತಾ ಇನ್ನೊಂದು ಕಡೆ ಗಾಯಾಳುಗಳಿಗೆ ಆರೈಕೆ ಮಾಡುತ್ತಾರೆ. ಒಂದೆಡೆ ಶಸ್ತ್ರಾಗಾರವನ್ನು ನಿರ್ಮಿಸುತ್ತಾರೆ, ಮತ್ತೊಂದೆಡೆ ಶವಾಗಾರವನ್ನು ನಿರ್ಮಿಸುತ್ತಾರೆ. ಒಟ್ಟಿನಲ್ಲಿ ಎಲ್ಲರೂ ತಮ್ಮ ಅಂಕೆಯಲ್ಲಿರಬೇಕು, ಇಡೀ ಭೂಮಿಯನ್ನಾಳುವುದೇ ತಮ್ಮ ಜನ್ಮ ಸಿದ್ಧ ಹಕ್ಕು. ಜಗತ್ತು ಇವರಿಗೆ ಒಂದು ತುತ್ತಾಗಿದೆ ಎನ್ನುವುದನ್ನು ‘ಬಲಾಢ್ಯರು’ ಕವನದ ಮೂಲಕ ವಿವರಿಸುತ್ತಾರೆ.
ಯುದ್ಧದಲ್ಲಿ ಯಾರನ್ನು ರಕ್ಷಿಸಬೇಕು ಅಥವಾ ಶಿಕ್ಷಿಸಬೇಕು ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ. ಮುದ್ದು- ಗುಂಡು ಕಂಡುಹಿಡಿದವರು, ಅದನ್ನು ತಯಾರಿಸಿದವರು, ಮಾರಾಟ ಮಾಡಿದವರು, ಖರೀದಿಸಿದವರು ಮತ್ತು ಪ್ರಯೋಗಿಸಿದವರು ಎಲ್ಲರೂ ತಪ್ಪಿತಸ್ಥರು. ಬದುಕು ಕಸಿದುಕೊಂಡವರು, ಜನರನ್ನು ಬೀದಿಗೆ ತಂದವರು, ಒಬ್ಬರ ಮೇಲೆ ಇನ್ನೊಬ್ಬರನ್ನು ಎತ್ತಿ ಕಟ್ಟಿದವರು, ಜನರ ಮಧ್ಯೆ ಬತ್ತಿ ಇಡುವವರೂ ಸಹ ತಪ್ಪಿತಸ್ಥರು. ಹಾಗಾಗಿ ಇವರೆಲ್ಲರೂ ‘ಯಮದೂತರು’ ಎಂದು ಎಂದು ಲೇಖಕಿ ಕರೆಯುತ್ತಾರೆ.
ಯುದ್ಧವಾದರೆ ರಾಜನಿಗೆ ಏನೂ ತೊಂದರೆ ಇಲ್ಲ. ಆದರೆ ಜನರು ಮಾತ್ರ ಲೆಕ್ಕಕ್ಕಿಲ್ಲ. ಅಧಿಕಾರಿಶಾಹಿಗಳಿಗೆ ಯುದ್ಧ ಒಂದು ಪ್ರತಿಷ್ಠೆಯ ಪ್ರಶ್ನೆಯಾಗುತ್ತದೆ. ಈ ಭೂಮಿಗಂತೂ ಯುದ್ಧ ಎನ್ನುವುದು ತುಂಬಾ ಹಳೆಯ ವಿಷಯ. ಬದುಕು ಬೆಳಗಿಸಲು ಹೊಸ ಅಸ್ತ್ರ, ಶಸ್ತ್ರ ಏನಾದರೂ ಕಂಡುಹಿಡಿಯಬೇಕು. ಕೇಡು ಮತ್ತು ಸೇಡು ಮುದಿಯಾಗಿ ಅವುಗಳನ್ನು ಹೂಳಿದ ಮೇಲಷ್ಟೇ ಹೊಸ ಬಾಳು ಶುರುವಾಗುತ್ತದೆ ಎಂದು ಹೇಳುತ್ತಾರೆ. ಶಾಂತಿ ಬಯಸುವವರೆಲ್ಲ/ ಸಭೆ ಸೇರಿದರು/ ಶವದ ಪೆಟ್ಟಿಗೆಗಳ/ ಮೇಲೆ ಕುಳಿತು/ ಠರಾವು ಮಂಡಿಸಿದರು/ ಎನ್ನುವ ಸಾಲು ವಿಶೇಷವಾಗಿ ಮನಸೆಳೆಯುತ್ತದೆ. ಯಾರು ಶಾಂತಿ, ಸಂಧಾನ ಮಾಡುತ್ತಾರೋ ಅವರೇ ಯುದ್ಧಕ್ಕೆ ನಾಂದಿ ಹಾಡುವುದನ್ನು ಇಲ್ಲಿ ವಿವರಿಸುತ್ತಾರೆ.
ಪ್ರಾಣಿ- ಪಕ್ಷಿಗಳು, ಹಲ್ಲು, ಉಗುರು, ಕೊಕ್ಕು, ಕೊಂಬು, ಕೈ, ಕಾಲು ಬಳಸಿ ತಮ್ಮತಮ್ಮಲ್ಲಿ ಹೋರಾಡುತ್ತವೆ ಅಥವಾ ದುರುಗುಟ್ಟಿ ನೋಡುತ್ತವೆ. ಈ ಮೂಲಕ ತಮ್ಮ ಎದುರಾಳಿಗಳನ್ನು ಓಡಿಸುತ್ತವೆ. ಅವು ಯಾರನ್ನೂ ಸಾಯಿಸುವುದಿಲ್ಲ. ಆದರೆ ಮನುಷ್ಯ ಮಾತ್ರ ಕತ್ತಿ, ಕೋವಿ, ಫಿರಂಗಿ, ನೆಲಬಾಂಬು, ಅಣುಬಾಂಬು, ರಾಸಾಯನಿಕ ವಸ್ತುಗಳನ್ನು ಬಳಸಿ ಯುದ್ಧ ಮಾಡುತ್ತಾನೆ ಮತ್ತು ಜನರನ್ನು ಸಾಯಿಸುತ್ತಾನೆ ಇದೇ ಪ್ರಾಣಿಗಳಿಗೂ ಮತ್ತು ಮನುಷ್ಯರಿಗೂ ಇರುವ ವ್ಯತ್ಯಾಸ ಎನ್ನುವುದನ್ನು ‘ಕಾದಾಟ’ದಲ್ಲಿ ಚಿತ್ರಿಸಿದ್ದಾರೆ.
ಯುದ್ಧಕ್ಕೆ ಗುಡ್ ಬೈ ಹೇಳೋಣ, ಕೋಟಿ ಕೋಟಿ ಹಣವನ್ನು ಯಾಕೆ ಖರ್ಚು ಮಾಡಬೇಕು, ಮುದ್ದು ಗುಂಡುಗಳನ್ನು ಯಾಕೆ ಸಂಗ್ರಹಿಸಬೇಕು ಎನ್ನುತ್ತಾ ‘ಮನುಜರು ಯಾಕೋ/ ಅನ್ನ ತಿನ್ನುವವರಂತೆ ಕಾಣುತ್ತಿಲ್ಲ/ ಅವರಿಗೆ ಪ್ರಶ್ನೆಗಳಿಲ್ಲ/ ಬದುಕಿಲ್ಲ, ಸತ್ತಿಲ್ಲ/ ಎನ್ನುತ್ತಾರೆ. ನಮ್ಮ ಪೂರ್ವಿಕರು ಒಂದೇ ನದಿಯ ನೀರು, ಒಂದೇ ಭೂಮಿಯ ಅನ್ನ ತಿಂದು ಬೆಳೆದವರು. ಹಗೆ ಬೆಳೆಸಲಿಲ್ಲ, ಬುಸ್ ಎನ್ನಬೇಕು, ಆದರೆ ಕಚ್ಚಬಾರದು ಎಂದು ಹೇಳುತ್ತಾರೆ. ಕೊನೆಯದಾಗಿ, ನಾನು ‘ಗಾಂಧಿ ಚೌಕ’ದಲ್ಲಿ ನಿಂತು ಯುದ್ಧ ವಿರೋಧಿ ಕವಿತೆ ಓದಬೇಕು. ಕವಿತೆಯ ಮೂಲಕ ಕಲ್ಲೆದೆಯನ್ನು ಕರಗಿಸಬಹುದು. ಗಡಿಯಲ್ಲಿ ಸಾಲಾಗಿ ಕವಿತೆಗಳನ್ನು ನಿಲ್ಲಿಸಬೇಕು. ಕವಿತೆಗೆ ಯಾರೂ ಗುಂಡಿಡುವಷ್ಟು ಹೃದಯಹೀನರಲ್ಲ. ಕವಿತೆಗೆ ಎಲ್ಲರನ್ನೂ ಕರಗಿಸುವ ವಿಶ್ವಾಸವಿದೆ ಎನ್ನುವ ಮೂಲಕ ಶಾಂತಿಮಂತ್ರದ ಅಗತ್ಯತೆಯನ್ನು ಸಾರುತ್ತಾರೆ.
ಬಿಳಿ ಪಾರಿವಾಳಗಳು ಹಾರಿ ಬರಲಿ/ ಗೋಡೆಗಳು ಏಳುವ ಮುನ್ನವೇ /ಸೇತುವೆ ಕಟ್ಟುವಂತಾಗಲಿ/ ಎಂದು ಆಶಿಸುತ್ತಾರೆ.
Comments
Post a Comment