ಮಾಜದ ವಿವಿಧ ಆಯಾಮ ಪರಿಚಯಿಸು
‘ಪ್ರೀತಿಯಿಂದ ಗೆದ್ದ ಕಥೆಗಳು’
.............................................
ಶಿವಮೊಗ್ಗದ ಪ್ರಜ್ಞಾ ಬುಕ್ ಗ್ಯಾಲರಿಯವರು ಏರ್ಪಡಿಸಿದ್ದ ರಾಜ್ಯಮಟ್ಟದ ಪ್ರಪ್ರಥಮ ಪ್ರಜ್ಞಾ ಕಥಾ ಸ್ಪರ್ಧೆ-೨೦೨೫ರಲ್ಲಿ ಆಯ್ಕೆಯಾದ ಮೊದಲ ೧೦ ಕಥೆಗಳ ಸಂಕಲನವನ್ನು ‘ಪ್ರೀತಿಯಿಂದ ಗೆದ್ದ ಕಥೆಗಳು’ ಎಂಬ ಶೀರ್ಷಿಕೆಯಲ್ಲಿ ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾರೆ. ಇದರಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ಕೊಟ್ಟಿರುವುದನ್ನು ಕಾಣಬಹುದು. ಈ ಬರಹಗಾರಲ್ಲಿರುವ ಸೃಜನಶೀಲತೆಯನ್ನು, ವೈವಿಧ್ಯಮಯ ಚಿಂತನೆಯನ್ನು, ಆಳವಾದ ಅನುಭವಗಳನ್ನು ಮತ್ತು ಸಮಾಜದ ಕುರಿತಾಗಿ ಇರುವ ಸೂಕ್ಷ್ಮ ಅವಲೋಕನಗಳನ್ನು ಇಲ್ಲಿನ ಕಥೆಗಳು ಬಿಂಬಿಸುತ್ತವೆ. ಅತ್ಯುತ್ತಮ ಗುಣಮಟ್ಟದ ಕಥೆಗಳು ಇವಾಗಿವೆ. ಇಲ್ಲಿನ ೧೦ ಕಥೆಗಳನ್ನು ಓದಿದಾಗ ಹೊಸ ಬರಹಗಾರರಿಗೂ ಸ್ಫೂರ್ತಿ ಬರುತ್ತದೆ.
ದೇವ (ರ) ದಾಸಿ
ಇದು ಕಬ್ಬಾಳಪ್ಪ ಮರೂರು ಅವರ ಬರೆದ ಕಥೆ. ಕಥಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದೆ.
ದೇವದಾಸಿ (ಗಾಳೆಮ್ಮ)ಯ ಮಗಳು (ರೋಜಾ) ತನ್ನಂತೆಯೇ ತನ್ನ ಮಗಳು ಆಗಬೇಕೆಂದು ಬಯಸುವುದು, ಮಗಳನ್ನು ತಾಯಿಯಂತೆ ಬಳಸಿಕೊಳ್ಳಲು ಊರಿನ ಕೆಲವರು ಯತ್ನಿಸುವುದು, ಇದಕ್ಕೆ ಮಗಳು ವಿರೋಧ ವ್ಯಕ್ತಪಡಿಸುವುದು, ಊರಿನ ಗೌಡರ ಹೆಂಡತಿ ರೋಜಾಳನ್ನು ಪಿಯುವರೆಗೆ ಚೆನ್ನಾಗಿ ಓದಿಸಿ, ನಂತರ ಎಲ್ಲಾದರೂ ಕೆಲಸಕ್ಕ್ಕೆ ಸೇರಿಸು ಎನ್ನುವುದು, ಎಸ್ಸೆಸೆಲ್ಸಿ ಓದಿನ ನಂತರ ಪಟ್ಟಣ ಸೇರಿ ಫ್ಯಾನ್ಸಿ ಅಂಗಡಿಯಲ್ಲಿ ಕೆಲಸಕ್ಕೆ ಸೇರಿದಾಗ ಅಲ್ಲಿ ಆಟೋ ಚಾಲಕನ ಪರಿಚಯ, ಪ್ರೇಮ ಬೆಳೆಯುವುದು, ವಿವಾಹವಾಗುವುದು, ತಾಯಿಯಿಂದ ವಿರೋಧ, ಅಳಿಯನನ್ನು ಕೊಲ್ಲಲು ಆಹಾರದಲ್ಲಿ ನಿದ್ದೆಮಾತ್ರೆ ಹಾಕುವುದು, ಅನಾರೋಗ್ಯದಿಂದ ಆಸ್ಪತ್ರೆ ಸೇರಿದಾಗ ಕಿಡ್ನಿಗಳೆರಡೂ ಹಾಳಾಗಿರುವುದು ಗೊತ್ತಾಗುತ್ತದೆ. ಇದೇ ವೇಳೆ ಊರಿನ ಗೌಡರು ಅಂಗನವಾಡಿ ಶಿಕ್ಷಕಿಯಾಗಲು ಸೂಚಿಸುವುದು, ಆದರೆ ಆಸ್ಪತ್ರೆಯಲ್ಲಿ ಗಂಡ ಸಾಯುತ್ತಾನೆ. ರೋಜಾಳ ಮುಖದಲ್ಲಿ ಕೆಂಡದಾಟಿದ ಭಾವ ಗಾಳೆಮ್ಮನಿಗೆ ಕಂಡುಬರುತ್ತದೆ.
ಮುನಾವರ್ ಚಾಯ್ ಸ್ಟಾಲ್
ತೀರ್ಥಹಳ್ಳಿಯ ವಿನಾಯಕ ಅರಳಸುರುಳಿ ಅವರ ಈ ಕಥೆ ಎರಡನೆಯ ಬಹುಮಾನ ಪಡೆದಿದೆ.
ಮೃಗಶಿರ ಎನ್ನುವವನು ಕುಡಿದ ಮತ್ತಿನಲ್ಲಿ ಮಿತ್ರನ ಹೆಂಡತಿಯ ಮೇಲೆ ದುಷ್ಕೃತ್ಯ ಎಸಗುತ್ತಾನೆ. ಆಕೆಯ ಮಗ ಆಗ ಎರಡು ವರ್ಷದವ. ಪಾಪಪ್ರಜ್ಞೆ ಕಾಡತೊಡಗಿದಾಗ ಜಮೀನು ಮಾರಿ ಬಿಜಾಪುರ ಬಿಟ್ಟು ಭದ್ರಾವತಿಯಲ್ಲಿ ಒಂದು ಎಲೆಕ್ಟ್ರಾನಿಕ್ಸ್ ಅಂಗಡಿ ಶುರುಮಾಡುತ್ತಾನೆ. ಅಲ್ಲಿ ಏಳಿಗೆಯಾಗದೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಶಿವೇಂದ್ರನಿಗೆ ಉಚಿತವಾಗಿ ದಾನಮಾಡಿ ಬೆಂಗಳೂರಿಗೆ ಬಂದು ಚಹಾ ಅಂಗಡಿ ತೆರೆಯುತ್ತಾನೆ. ಇತ್ತ ಊರಿನಲ್ಲಿ ಶ್ರ್ರವಣ ನೇಣಿಗೆ ಬಲಿಯಾಗುತ್ತಾನೆ. ಕೆಲವು ದಿನಗಳ ನಂತರ ಮಗಳು ಮಾನ್ವಿಯ ಹೆಸರಿಗೆ ಲಕೋಟೆ ಬರುತ್ತದೆ. ಅದರಲ್ಲಿ ಮೃಗಶಿರ ಶ್ರವಣ ಹೆಂಡತಿ ಮೇಲೆ ದುಷ್ಕೃತ್ಯ ಎಸಗಿರುವ ವಿವರವಿತ್ತು. ಹೆಂಡತಿ ಮಕ್ಕಳು ಆತನಿಂದ ವಿಮುಖರಾಗುತ್ತಾರೆ. ಅಂಗಡಿಯಲ್ಲಿ ಮುನಾವರ್ ಪರಿಚಯವಾಗುತ್ತಾನೆ. ಮೃಗಶಿರನಿಗೆ ಸಹಾಯ ಮಾಡುತ್ತಾನೆ. ಇದರಿಂದ ಮುನಾವರ ಚಾಯ್ ಸ್ಟಾಲ್ ಎಂದು ಹೆಸರಾಗುತ್ತದೆ. ಮುನಾವರ್ ಸಹ ಬಿಜಾಪುರದವನು. ಆತ ಒಂದು ದಿನ ತನ್ನ ಪರಿಚಯ ಹೇಳಿಕೊಳ್ಳುತ್ತಾ ತನ್ನ ತಂದೆ ಶ್ರ್ರವಣ. ತಾನು ಎರಡು ವರ್ಷದವನಿದ್ದಾಗ ನೇಣು ಹಾಕಿಕೊಂಡು ಸತ್ತ. ತಾಯಿ ಹುಸೇನಿ ಎನ್ನುವವನನ್ನು ಮದುವೆಯಾದಳು ಎಂದಾಗ ಮೃಗಶಿರನ ಜೀವ ಕಂಪಿಸುತ್ತದೆ. ತಾನೇ ಕೊಂದ ಗೆಳೆಯನ ಮಗ ಇವನು, ಋಣ ತೀರಿಸಲು ಬಂದ ರಕ್ತವೇ ಎಂದು ಪ್ರಶ್ನಿಸಿಕೊಳ್ಳುತ್ತಾನೆ. ಪಾಪ್ರ ಪ್ರಜ್ಞೆಯಿಂದ ನರಳುತ್ತಾನೆ.
ತಿಕ್ಕಲು ಬುಡ್ಡಿ
ಸುಮಾ ರಮೇಶ್ ಅವರ ಈ ಕಥೆ ಮೂರನೆಯ ಬಹುಮಾನ ಪಡೆದಿದೆ.
ವಿಭಾ ಗಾಡಿಯಲ್ಲಿ ಬರುತ್ತಿದ್ದಾಗ ಡ್ರಗ್ಗಿಸ್ಟ್, ಕುಡುಕ, ಇಂಜಿನೀಯರಿಂಗ್‌ನಿಂದ ಡ್ರಾಪ್ ಔಟ್ ಆದ ಮಾಜಿ ಸಚಿವನ ಮಗ ಸಚಿನ್ ಆಕೆಯ ಗಾಡಿ ನಿಲ್ಲಿಸಿ ಕರೆಯುತ್ತಾನೆ. ಹೆದರಿದ ಆಕೆ ಗಾಡಿ ತಿರುಗಿಸಿ ವೇಗವಾಗಿ ಓಡಿಸುವಾಗ ಬಿದ್ದು ಕಲ್ಲಿಗೆ ಬಡಿದು ಗಾಯಗೊಳ್ಳುತ್ತಾಳೆ. ಆಗ ಆತ ಅವಳ ಕೆನ್ನೆ ಸವರಿ ಸ್ವರ್ಗ ತೋರಿಸುವೆ ಬಾ ಎನ್ನುತ್ತಾನೆ. ಇದೇ ವೇಳೆ ಊರಿನಲ್ಲೆಲ್ಲ ಸದಾ ತಿರುಗಾಡುತ್ತಾ, ಮಾನಸಿಕ ಅಸ್ವಸ್ಥೆಯಂತಿರುವ ತಿಕ್ಕಲುಬುಡ್ಡಿ ಬಂದು ರಣಚಂಡಿಯಮತೆ ಕೆರಳಿ ಆತ ರಕ್ತದಲ್ಲಿ ಹೊರಳಾಡುವಂತೆ ಮಾಡುತ್ತಾಳೆ. ಅಲ್ಲಿಂದ ವಿಭಾ ಗಾಡಿ ಏರಿ ಮನೆಗೆ ಬರುತ್ತಾಳೆ. ಮನೆಗೆ ಬಂದಾಗ ಟಿವಿಯಲ್ಲಿ ಸಚಿನ್ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಆಕ್ರಮಣ ಮಾಡಿದ ಇಳಿವಯಸ್ಸಿನ ಮಾನಸಿಕ ಅಸ್ವಸ್ಥೆ ತಿಕ್ಕಲುಬುಡ್ಡಿಯನ್ನು ಪೊಲೀಸರು ಬಂಧಿಸಿ ಕರೆದೊಯ್ಯುವಾಗ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆಂಬ ವಾರ್ತೆ ಬರುತ್ತಿರುತ್ತದೆ. ಮಾರನೆಯ ದಿನ ವಿಭಾ ಆಸ್ಪತ್ರೆಯ ಶವಾಗಾರಕ್ಕೆ ಹೋಗಿ ಅನಿರಿಕ್ಷಿತವಾಗಿ ಬಂದು ಆಪತ್ಕಾಲದಲ್ಲಿ ತನ್ನ ಮಾನ, ಪ್ರಾಣ ಕಾಪಾಡಿದ ಜೀವ, ಮರುಳೆಯಂತೆ ಜೀವ ಸಾಗಿಸಿದ ನತದೃಷ್ಟೆ ಬಿಳಿಬಟ್ಟೆಯಲ್ಲಿ ತಣ್ಣಗೆ ಮಲಗಿದ್ದನ್ನು ಕಂಡು ಚೀರುತ್ತಾಳೆ, ಕುಸಿದುಬೀಳುತ್ತಾಳೆ.
ಸುಪ್ತ ಶರಧಿಯ ಸೇರುವ ಮುನ್ನ
ಈ ಕಥೆಯ ಲೇಖಕರು ದೇವೇಂದ್ರ ಅಬ್ಬಿಗೇರಿ.
ಬಯಲುಸೀಮೆಯ ಸಿದ್ದಪ್ಪ ಬಹುರಾಷ್ಟ್ರೀಯ ಕಂಪನಿಯಲ್ಲಿ ಟೆಕ್ಕಿ ಆಗಿದ್ದ. ಕೆಲಸದಲ್ಲಿ ನೈಪುಣ್ಯ ಇದ್ದುದರಿಂದ ಹೆಸರುಗಳಿಸಿದ್ದ. ಸಿದ್ದಪ್ಪ ಎಲ್ಲರ ಬಾಯಲ್ಲೂ ಸಿಡ್ ಆಗಿದ್ದ. ಇಲ್ಲಿ ಸಾರಾ ಎನ್ನುವವಳ ಪರಿಚಯವಾಗಿ, ಸ್ನೇಹ, ಪ್ರೀತಿಯಾಗಿ ಅರಳಿದರೂ ಆಕೆ ಆತನ ಸ್ವಾಮ್ಯ ಪ್ರವೃತ್ತಿಯಿಂದಾಗಿ ದೂರಮಾಡಿ ಬೇರೆ ಕಂಪನಿ ಸೇರುತ್ತಾಳೆ. ಇದರಿಂದ ಸಂಬಂಧಗಳ ಬಗ್ಗೆ ಬೇಸರಗೊಂಡ ಆತ ಸೆಕ್ಸ್‌ನಲ್ಲಿ ಮಿತಿಮೀರುತ್ತಾನೆ. ಕೆಲಸದ ಒತ್ತಡ, ಅಶಿಸ್ತಿನ ಜೀವನ ಶೈಲಿ, ಹತಾಶೆ, ಸಿಟ್ಟು, ದ್ವೇಷ, ಸಾರಾಳ ಕನವರಿಕೆಯಿಂದ ಬೆಂದುಹೋಗಿದ್ದ. ಪರಿಹಾರಕ್ಕಾಗಿ ಡಾ|| ಪ್ರಿಯಾ ಮೆನನ್ ಎನ್ನುವವರಲ್ಲಿ ಕೌನ್ಸಿಲಿಂಗ್‌ಗೆ ಒಳಗಾಗುತ್ತಾನೆ. ಅವನಿಗೆ ದೈರ್ಯ ತುಂಬಿದ ಅವರು, ನೀವು ಸುಂದರ ಜೀವನಕ್ಕೆ ಅರ್ಹರು. ಏನನ್ನೂ ಸಾಧಿಸಬಹುದು. ಅಸಾಧ್ಯ ಎನ್ನುವುದು ನಿಮ್ಮಲ್ಲಿಲ್ಲ. ನೀವು ನಿಮ್ಮ ಹಳ್ಳಿಗೆ ಭೇಟಿ ಕೊಡಿ. ಇಲ್ಲವೇ ನಿಮ್ಮ ಅನುಭವಗಳ ಮರುಸೃಷ್ಟಿಸಿ ಅವುಗಳ ಬಗ್ಗೆ ಬರೆಯಿರಿ. ಪ್ರತಿದಿನ ಕೆಲವು ಸಾಲು ಮನಸ್ಸಿಗೆ ಬಂದಂತೆ ಬರೆಯಿರಿ, ಚಿಂತಿಸಬೇಡಿ, ಪೆನ್ನು ಹಿಡಿದು ನಿಮ್ಮಲ್ಲಿರುವ ಎಲ್ಲಾ ಭಾವನೆಗಳಿಗೆ ಅಕ್ಷರ ರೂಪ ಕೊಡಿ ಎಂದು ಸೂಚಿಸುತ್ತಾರೆ. ಕೌನ್ಸೆಲಿಂಗ್ ಮುಗಿಸಿ ಹೊರಬಂದಾಗ ಸಿಡ್‌ನಲ್ಲಿ ಹೊಸ ನೀರು ತುಂಬುವ, ಒರತೆಯ ನೆನಪಾಗುವ, ನೀರು ತಿಳಿಯಾಗುವ, ನೀರಿನ ರುಚಿ ಸಿಹಿಯಾಗುವಂತಹ ಭಾವನೆ ಮೂಡುತ್ತದೆ.
ಕಳಲೆ ಕಮಲಾಕ್ಷ
ಮಂಗಳೂರಿನ ಮನೋಹರ ಪೈ ಅವರು ಬರೆದ ಕಥೆ ಇದು.
ಕಳಲೆ ಮಾರಾಟ ಮಾಡುವ ಕಮಲಾಕ್ಷ ಕಾಡಿಗೆ ಹೋಗಿ ಕಳಲೆ ತುರವುದು, ಮಾರಾಟ ಮಾಡುವುದು, ಅಧಿಕಾರಿಗಳ ಕಣ್ಣಿಗೆ ಬಿದ್ದು, ಹಿಡಿಯಲು ಹೋದಾಗ ಮನೆಗೆ ಓಡಿ ಬಂದು ಚಿಲಕ ಹಾಕಿಕೊಳ್ಳು, ತೋಟದದಲ್ಲಿ ಜೋಪಡಿ ಹಾಕಿ ಅಡಗಿಕೊಳ್ಳುವುದು, ಕೊನೆಗೂ ಕಮಲಾಕ್ಷನೇ ಕದ್ದವನು ಎಂದು ಗೊತ್ತಾದಾಗ ಆತನ ಮನೆಗೆ ಬರುವುದು, ಮನೆಯಲ್ಲಿ ಕಮಲಾಕ್ಷನ ಅತ್ತಿಗೆ ಸರಸ್ವತಿ ಬಾಗಿಲು ತೆರೆಯುವುದು, ಆಕೆಯನ್ನು ನೋಡಿ ಅಧಿಕಾರಿ ಅಚ್ಚರಿಗೊಂಡು, ಕಮಲಾಕ್ಷನ ಜೊತೆ ವಿವಾಹವಾಯಿತೇ ಎಂದು ಕೇಳುತ್ತಾನೆ. ಆಕೆಯ ಜೊತೆ ಮಾತನಾಡಿದ ಬಳಿಕ ಕಮಲಾಕ್ಷನನ್ನು ತೋರಿಸುತ್ತಾಳೆ. ಸಹಪಾಠಿ ರವೀಂದ್ರನ ಜೊತೆ ಹೈಸ್ಕೂಲಿನ ಗೆಳತಿಯಾದ, ತನ್ನ ಅತ್ತಿಗೆ ಸರಸ್ವತಿ ನಿಂತಿರುವುದನ್ನು ಕಂಡು ‘ಹಿಂದಿನದ್ದನ್ನೆಲ್ಲ ಮರೆತುಬಿಡು, ಏನೂ ಹೇಳಬೇಡ ರವಿ, ಈಗ ಸರಸ್ವತಿ ನನ್ನ ಅತ್ತಿಗೆ’ ಎಂದು ಆತನ ಕೈ ಹಿಡಿದು ಬಿಕ್ಕಳಿಸುತ್ತಾನೆ.
ಖಂಡವಿದೆಕೋ ಮಾಂಸವಿದೆಕೋ
ಸಂತೆಬೆನ್ನೂರಿನ ಫೈಜ್ನಟ್ರಾಜ್ ಅವರು ರಚಿಸಿದ ಕಥೆ ಇದು.
ಪ್ರೀತಿಯಿಂದ ಸಾಕಿದ್ದ ಮನೆಯ ಆಕಳು ಮುನ್ನಿ. ಮನೆಯವರ ಸಂಗಾತಿ ಆಗಿದ್ದು, ಅದನ್ನು ಹಬ್ಬಕ್ಕೆ ಬಲಿ ಕೊಡಲು ಬಾಲಕಿ ರಜಿಯಾ ತಂದೆ ಅಲ್ಲಾಭಕ್ಷ್
ಹೇಳಿದಾಗ ತಾಯಿ-ಮಗಳು ಕಣ್ಣೀರು ಹಾಕುತ್ತಾರೆ. ಮಾರಾಟ ಮಾಡುವ ಹಿಂದಿನ ದಿನ ರಾತ್ರಿ ರಜಿಯಾ ನಿದ್ರಿಸಲಿಲ್ಲ. ಅಲ್ಲಾಭಕ್ಷ ಆಕಳನ್ನು ತೆಗೆದುಕೊಂಡು ಹೋಗುವಾಗ ಹಳ್ಳಿಯ ಯುವಕರು ಅಡ್ಡಗಟ್ಟಿ, ಬೈದಾಡಿ ಆಕಳನ್ನು ಪಡೆಯುತ್ತಾರೆ. ಶಾಲೆಯಿಂದ ಬಂದ ರಜಿಯಾ ವಿಷಯ ತಿಳಿದು ತಾಯಿಜೊತೆ ಹೋಗಿ ‘ಅದು ನಮ್ಮ ಜೀವ. ನಮ್ಮ ಮನೆ ದೇವರಿದ್ದಂಗೆ’ ಎಂದು ಗೋಳಾಡಿ ಆ ಹುಡುಗರಿಂದ ಆಕಳನ್ನು ವಾಪಸ್ ಪಡೆದುಕೊಳ್ಳುತ್ತಾರೆ. ಶಾಲೆಯಲ್ಲೊಂದು ದಿನ ಶಿಕ್ಷಕರು ಪುಣ್ಯಕೋಟಿಯ ಕಥೆಯನ್ನು ಹೇಳುವಾಗ ರಜಿಯಾ ಕಣ್ಣಲ್ಲಿ ನೀರು ಬರುತ್ತದೆ. ಆಕಳು ಹುಲಿಯನ್ನು ಕೊಲ್ಲಲು ಯತ್ನಿಸಿ ಕೊನೆಗೆ ತಾನೇ ಪ್ರಾಣ ಬಿಡುವುದನ್ನು ಕೇಳಿ ಕಣ್ಣೀರಿಡುತ್ತಾಳೆ.
ಇತ್ತ ಅತ್ತಹರ್ ಸಾಬ್ ಎಂಬಾತ ಆಕಳನ್ನು ಕಡಿಯಲು ಎಳೆದುಕೊಂಡು ಹೋಗುತ್ತಾನೆ. ಇದನ್ನು ನೋಡಿದ ರಜಿಯಾ ಕುಸಿದು ಬೀಳುತ್ತಾಳೆ. ಹಬ್ಬದ ನಮಾಜು ಮುಗಿಸಿ ಅಲ್ಲಾಭಕ್ಷ ಮನೆಗೆ ಬಂದಾಗ ಅಡುಗೆಯೂ ಇರಲಿಲ್ಲ, ಸಡಗರವೂ ಇರಲಿಲ್ಲ. ಅಕ್ಕಪಕ್ಕದ ಮನೆಯವರು ಬಂದು ಒಂದಷ್ಟು ಮಾಂಸದ ತುಣುಕನ್ನು ಪ್ಲಾಸ್ಟಿಕ್‌ನಲ್ಲಿ ಹಾಕಿ ಕೊಟ್ಟು ಹೋಗಿದ್ದರು. ಮಾಂಸದ ತುಣುಕುಗಳನ್ನು ಗಮನಿಸಿದ ರಜಿಯಾಗೆ ಅದರಲ್ಲಿ ತನ್ನ ಮೆಚ್ಚಿನ ಮುನ್ನಿ ಜೀವಂತ ಎದ್ದು ನಿಂತಂತೆ ಕಂಡುಬಂದಿತು. ಹೊರ ಓಡುತ್ತಾ ಮುನ್ನಿ ಮುನ್ನಿ ಎನ್ನುತ್ತಾ ಹುಚ್ಚಿಯಂತೆ ಕುಣಿಯುತ್ತಾಳೆ. ಮಾರನೆಯ ದಿನ ಬೆಳಿಗ್ಗೆ ಮನೆಯಂಗಳದಲ್ಲಿ ‘ಅಮ್ಮಾ’ ಎನ್ನುವ ಧ್ವನಿ ಕೇಳಿಸಿದಾಗ ತಾಯಿ ಮಗಳಿಬ್ಬರು ಅಂಗಳಕ್ಕೆ ಬಂದರೆ, ಹಸುವನ್ನು ಕೊಲ್ಲಲು ಒಯ್ದಿದ್ದ ಅತ್ತಹರ್ ಮುನ್ನಿಯನ್ನು ಹಗ್ಗದೊಂದಿಗೆ ಹಿಡಿದು ನಿಂತಿದ್ದ. ‘ಜೀವ ತೆಗೆದು ಪುಣ್ಯ ಗಳಿಸಬೇಕೇ ಎಂದುಕೊಂಡು ಸಂತೆಬೆನ್ನೂರಿನ ಸಂತೆಯಿಂದ ಕುರಿ ತಂದು ದಾನ ಮಾಡಿದೆ. ನಿನ್ನ ಮುನ್ನಿಯನ್ನು ಕೊಲ್ಲುವ ಮನಸ್ಸು ಬರಲಿಲ್ಲ. ನನಗೆ ಹಣ ಬೇಡ. ನೀನು ಓದಿ ಸುಖವಾಗಿ ಇರು ’ ಎನ್ನುತ್ತಾ ಆಕಳನ್ನು ಬಿಟ್ಟು ಹೋಗುತ್ತಾನೆ. ಮೂವರ ಕಣ್ಣಲ್ಲೂ ನೀರೂರುತ್ತದೆ.
ಸಾವಂತ್ರಿ
ಈ ಕಥೆಯ ಲೇಖಕಿ ಸಾಗರದ ದಿವ್ಯಶ್ರೀ ಅದರಂತೆ.
ಕಾಡಿನಿಂದ ಕಟ್ಟಿಗೆ ಕಡಿದು ತುಂಬಿಕೊಂಡು ಅಳಿಯನ ಜೊತೆ ಟ್ರ್ಯಾಕ್ಟರ್‌ನಲ್ಲಿ ಮನೆಗೆ ವಾಪಸಾಗಲು ಹೊರಟ ಗಂಡನಿಲ್ಲದ ಸಾವಂತ್ರಿಗೆ ಊರಿನ ಮಾಜಿ ಚೇರ್ಮನ್ ಬಸಪ್ಪ ಎದುರಾಗಿ, ‘ಪರವೂರಿನವನು ಬಂದು ಕಟ್ಟಿಗೆ ಕಡಿಯಲು ಕಾಡೊಳಗೆ ಬಿಡಂಗಿಲ್ಲ’ ಎನ್ನುತ್ತಾನೆ. ಜೊತೆಗೆ ‘ಗಂಡ ಇಲ್ಲ ಅಂತ ಅವ್ವಳಿಗೂ, ಮಗಳಿಗೂ ಒಬ್ನೇ ಗಂಡಸಾ’ ಎಂದು ವ್ಯಂಗ್ಯ ಮಾಡುತ್ತಾನೆ. ‘ಹಾದರಗಿತ್ತಿ ಅಂತೀಯಾ’ ಎಂದು ಕೊರಳಪಟ್ಟಿ ಹಿಡಿದಾಗ ಊರಿನವರು ಸೇರಿ ‘ಅಳಿಯನ ಕರೆಸುವ ಮುನ್ನ ಪಂಚಾಯತಿಯ ಒಪ್ಪಿಗೆ ಪಡೆಯಬೇಕಿತ್ತು’ ಎನ್ನುತ್ತಾರೆ. ಆಗ ಇನ್ನೊಬ್ಬ ಸದಸ್ಯ ‘ಎರಡು ಸಾವಿರ ರೂ. ದಂಡ ಕಟ್ಟಿ ಕಟ್ಟಿಗೆ ತೆಗೆದುಕೊಂಡು ಹೋಗು. ಇಲ್ಲಾಂದ್ರೆ ನಾಳೆ ಹರಾಜು ಹಾಕ್ತೀವಿ, ೫ ವರ್ಷ ಬಹಿಷ್ಕಾರ ಹಾಕ್ತೀವಿ’ ಎನ್ನುತ್ತಾನೆ. ಬೇಸರದಿಂದ ಮನೆಗೆ ಬಂದಾಗ ಚಿಮಣಿ ಎಣ್ಣೆ ಕಂಡುಬರುತ್ತದೆ. ಮಾರನೆ ಬೆಳಿಗ್ಗೆ ಎದ್ದು ಸೀದಾ ತನ್ನ ಕಟ್ಟಿಗೆಯನ್ನು ವಶಪಡಿಸಿಕೊಂಡು ತಂದು ಹಾಕಿದ್ದ ರಾಶಿಗೆ ಸೀಮೆಎಣ್ಣೆ ಚೆಲ್ಲಿ ಬೆಂಕಿ ಹಚ್ಚುತ್ತಾಳೆ. ಪಂಚಾಯ್ತಿಯವರ ಸೊಕ್ಕಿಗೆ ಪ್ರತಿ ಸೇಡು ತೀರಿಸಿಕೊಂಡ ಕಥೆ ಇದು.
ವೃತ್ತ
ಈ ಕಥೆಯನ್ನು ಬರೆದವರು ಟಿ ಎಂ ರಮೇಶ್.
ಬರಮ ಮತ್ತು ಕಟರ ಒಂದೇ ತರಗತಿಯಲ್ಲಿ ಓದಿದವರು, ಕಟರ ಮಾಡಬಾರದ್ದನ್ನೆಲ್ಲ ಮಾಡಿ ಬೆಂಗಳೂರು ಸೇರಿಕೊಂಡು ಸಿರಿವಂತನಾಗಿದ್ದ. ಕಟರ ಒಮ್ಮೆ ಊರಿಗೆ ಬಂದು ಬರಮನನ್ನು ಮಾತಾಡಿಸಿ ಬೆಂಗಳೂರಿಗೆ ಬರುವಂತೆ ಹೇಳಿ ಹೋಗಿದ. ಇದರಿಂದಾಗಿ ಬರಮ ಎಂದೂ ನೋಡರಿಯದ ಬೆಂಗಳೂರಿನ ಗಾಂಧಿಬಜಾರ್‌ನಲ್ಲಿರುವ ಕಟರನ ಮನೆಗೆ ಹೋಗಿದ್ದ. ಮನೆಯಲ್ಲಿ ಆತನ ಶ್ರೀಮಂತಿಕೆ, ದರ್ಪ, ಬಳಸುವ ಭಾಷೆಯ ಪದಪುಂಜ, ಕೆಟ್ಟ ಬೈಗುಳುಗಳು, ಇನ್ನೊಬ್ಬನನ್ನು ನಿಕೃಷ್ಟವಾಗಿ ಕಾಣುವ ಗುಣ ಎಲ್ಲವನ್ನೂ ಕಾಣುತ್ತಾನೆ. ಅಲ್ಲಿ ತಿಂಡಿ ತಿಂದರೂ ಅವನಿಗೆ ಅದು ಸರಿ ಎನಿಸಲಿಲ್ಲ. ಬೆಂಗಳೂರಿಗೆ ಕೆಲಸದ ಮೇಲೆ ಬಂದಿದ್ದೆ. ನಿನ್ನನ್ನು ನೋಡಿ ಹೋಗಲು ಇಲ್ಲಿಗೆ ಬಂದೆ ಎಂದು ಸುಳ್ಳು ಹೇಳುತ್ತಾನೆ. ದೊಡ್ಡವನಾದಾಗ ಸಮಾನತೆ ತರ್ತೀನಿ. ಯಾರಿಗೂ ಸಲಾಂ ಹೊಡಿಬಾರದು ಅಂತ ಹೇಳುತ್ತಿದ್ದ ಕರಟ, ಭಾವ, ಭಾಷೆ, ಇಲ್ಲದ ಮನುಷ್ಯ ಎನ್ನುತ್ತಾ ಆ ಮನೆಯಿಂದ ಹೊರಬರುತ್ತಾನೆ.
ಡೆಡ್ ಲೈನ್ ಡಿನ್ನರ್
ಶ್ವೇತಾ ನರಗುಂದ್ ರಚನೆಯ ಕಥೆ ಇದು.
ಎಂನ್‌ಸಿಯಲ್ಲಿ ಕೆಲಸ ಮಾಡುವ ಗಂಡ-ಹೆಂಡತಿ, ಡೆಡ್‌ಲೈನ್‌ನ ಒತ್ತಡ, ಜೀವನ ಶೈಲಿಯ ಕುರಿತಾದ ಕಥೆ ಇದು. ಕಾರ್ಪೊರೇಟ್ ಜಾಲದಲ್ಲಿ ಸಿಲುಕಿ ಹಗಲು- ರಾತ್ರಿ ಒಂದಾಗುವುದು, ರೊಬೋಟ್‌ನಂತಾಗವುದು, ವರ್ಕ್‌ಪ್ರ್ರೆಶರ್‌ನಲ್ಲಿ ಅಪ್ಪಚ್ಚಿಯಾಗುವುದು, ವೀಕ್ ಡೇಸ್‌ನಲ್ಲಿ ತಲೆ ಹೋಳಾಗುವಷ್ಟು ಕೆಲಸ, ೩೫ ವಯಸ್ಸಾದರೂ ಮಕ್ಕಳನ್ನು ಮಾಡಿಕೊಳ್ಳದಿರುವುದು, ಸ್ಟ್ರೆಸ್‌ನಿಂದ ಮೂರ್ಛೆ ಹೋಗುವುದು, ವಿವಿಧ ರೋಗಗಳು ಆರಂಭವಾಗುವುದು ಹೀಗೆ ಸಾಗುತ್ತದೆ. ಕಾರ್ಪೊರೇಟ್ ಜಗತ್ತಲ್ಲಿ ಸರ್ವೈವ್ ಆಗಬೇಕೆಂದರೆ ವರ್ಕ್ ಲೈಫ್, ಪರ್ಸನಲ್ ಲೈಫ್ ಎರಡನ್ನೂ ಏಕೀಕರಿಸಿಕೊಂಡು ಹೋಗಬೇಕು ಎನ್ನುವ ಮಾತಿದೆ. ಕಥೆಯ ಅಂತ್ಯದಲ್ಲಿ ಒತ್ತಡದಿಂದ ಬದಲಾಗುವುದು, ಎಲ್ಲಿ ನಿಲ್ಲಬೇಕೆನ್ನುವ ನಿರ್ಧಾರವನ್ನು ತೆಗೆದುಕೊಂಡು ದಂಪತಿ ತಂದೆ-ತಾಯಿಯಾಗುತ್ತಾರೆ.
ಬೆಂಕಿ ಮತ್ತು ಬಾವಿ
ಮೈಸೂರಿನ ಡಾ|| ಭದ್ರಪ್ಪ ಶಿ. ಹೆನ್ಸಿ ಅವರು ರಚಿಸಿದ ಕಥೆ ಇದು
ಕಣ್ಣಾಪಂಡಿತರ ನಾಲ್ಕನೆಯ ತಲೆಮಾರಿನ ಅನಂತಕೃಷ್ಣ ಕಾಲೇಜು ವಿದ್ಯಾಭ್ಯಾಸಕ್ಕಾಗಿ ಊರು ಬಿಟ್ಟವನು. ಅಪ್ಪ ಸಂಪ್ರದಾಯಸ್ಥನಾದರೆ ಮಗ ಉಪನ್ಯಾಸಕನಾಗಿ ಸಮಾಜವಾದ ಸೇರಿ ಮೌಢ್ಯ, ಸಂಪ್ರದಾಯ, ಜಾತಿ ಧಿಕ್ಕರಿಸಿದವನಾದ. ಗ್ರೇಸಿ ಎನ್ನುವ ಟೆಕ್ಕಿಯ ಪರಿಚಯವಾಗಿ ವಿವಾಹವಾಗುತ್ತಾರೆ. ಇದರಿಂದ ಪಂಡಿತರ ಕುಟುಂಬ ಬಹಿಷ್ಕ್ಕಾರಕ್ಕೊಳಗಾಗುತ್ತದೆ. ಪೌರೋಹಿತ್ಯ ಹೋಗಿ ರೈಲು ನಿಲ್ದಾಣದಲ್ಲಿ ಕಾಫಿ ಸೆಂಟರ್ ತೆರೆಯಬೇಕಾಯಿತು. ಮಗ ಮನೆಯತ್ತ ಕಾಲು ಹಾಕಲಿಲ್ಲ. ಗ್ರೇಸಿಯ ತಂದೆ ತಮ್ಮ ಸಮಾಜದ ಸದಸ್ಯರಾಗಿ ಎನ್ನುತ್ತಾರೆ. ಅನಂತು ಧಿಕ್ಕರಿಸಿದ, ಗ್ರೇಸಿ ಹೊರಬರಲಿಲ್ಲ. ಭವಬಂಧನ ಕರಗಿ, ಅನ್ಯಾಯದ ವಿರುದ್ದ ಆಂದೋಲನಕ್ಕಿಳಿದು, ಜೈಲಿಗೆ ಹೋಗಿ, ಹೊರಬಂದಾಗ ಕಡ್ಡಾಯ ನಿವೃತ್ತಿ ಎದುರಾಗುತ್ತದೆ. ಇತ್ತ ಅಪ್ಪಯ್ಯನ ಪತ್ರ ತಲುಪುತ್ತದೆ. ಅಂತು (ಅನಂತು) ಒಮ್ಮೆ ಬಂದು ಹೋಗು, ತಪ್ಪಿಸಬೇಡ ಎಂದಿತ್ತು. ಊರಿಗೆ ಬಂದಾಗ ಅಣ್ಣ ಕಾಫಿ ಸೆಂಟರ್ ಗಲ್ಲದಲ್ಲಿದ್ದ. ಅವ್ವ, ತಂಗಿ ಬೆರಗಾಗುತ್ತ್ತಾರೆ. ಆದರೆ ಅಪ್ಪಯ್ಯ ಕಣ್ಮುಚ್ಚಿದ್ದ್ದರು. ಕುಟುಂಬದ ಋಣಾನುಬಂಧ ಬಿಡಲು ಸಾಧ್ಯವಿಲ್ಲ ಎಂದು ತಂದೆ ಹೇಳಿದ್ದು ನೆನಪಾಗುತ್ತದೆ. ಬಿಸಿರಕ್ತದ ತಾರುಣ್ಯದಲ್ಲಿ ಕೈಗೊಂಡ ನಿರ್ಧಾರದ ಬಗ್ಗೆ ಚಿಂತಿತನಾಗುತ್ತಾನೆ. ಅಪ್ಪಿಕೊಂಡ ಬೆಂಕಿಯಾಗಲಿ, ತೊರೆದ ಬಾವಿಯಾಗಲಿ ಒಪ್ಪಿಕೊಳ್ಳಲಿಲ್ಲ. ಸಾಮಾಜಿಕ ನ್ಯಾಯ ಎಂದು ಹೋರಾಡಿದವನ ಕಾಲು ಸೋತುಹೋಗಿತ್ತು ಅನಾಥ ಭಾವದಿಂದ.
............................

Comments
Post a Comment