ಮೌಲ್ಯಯುತ ಸಂದೇಶ ನೀಡುವ

‘ಭಾವ ಶರಧಿ’



ಜನಸಾಮಾನ್ಯರನ್ನು ಆಕರ್ಷಿಸುವ ಗುಣವನ್ನು ಕವಿತೆ ಹೊಂದಿದೆ. ಇದರಿಂದಲೇ ಕವಿತೆಗೆ ಜನ ಹೆಚ್ಚು ಮಾರುಹೋಗುತ್ತಿದ್ದಾರೆ. ಕವಿಗಳ ಅಥವಾ ಕವನದ ಹೆಸರು ನೆನಪಿರದಿದ್ದರೂ ಜನರ ಬಾಯಲ್ಲಿ ಕವಿತೆಗಳು ಹರಿದಾಡುತ್ತವೆ. ಜನಮನ ಸೂರೆಗೊಂಡು ತಮ್ಮದೇ ಛಾಪು ಮೂಡಿಸುತ್ತವೆ. ಇಂಥಹವುಗಳಲ್ಲಿ ವರಲಕ್ಷ್ಮೀ ಮಂಜುನಾಥ ಅವರ ಕವನಗಳೂ ಸೇರುತ್ತವೆ.  
‘ಭಾವ ಶರಧಿ’ ಇದು  ನಂಜನಗೂಡಿನ ಕವಯತ್ರಿ ಎಸ್. ಎಲ್. ವರಲಕ್ಷ್ಮಿ ಮಂಜುನಾಥ್ ಅವರ ಕವನ ಸಂಕಲನ. ವೈವಿಧ್ಯಮಯ ವಿಷಯಗಳ ಮೇಲೆ ಬೆಳಕನ್ನು ಚೆಲ್ಲಿದ ಕೃತಿ ಇದು. ಇಲ್ಲಿನ ಕವನಗಳು ಗೇಯಗುಣ ಸಂಪನ್ನವಾಗಿದ್ದು, ಸಾಹಿತ್ಯ ಉತ್ಕೃಷ್ಟವಾಗಿದೆ.  ಉಪಮಾ ಮತ್ತು ರೂಪಕಾಲಂಕಾರಗಳನ್ನು ಸಮರ್ಥವಾಗಿ ಬಳಸಿರುವ ಲೇಖಕಿ, ಶಬ್ದ ಲಾಲಿತ್ಯ ಮತ್ತು ಪದಗಳ ಅರ್ಥ ಗೌರವದಿಂದ ಗಮನಸೆಳೆಯುತ್ತಾರೆ. ಕವನ ಸಂಕಲನದಲ್ಲಿ ಸುಮಾರು ಒಂದು ನೂರರಷ್ಟು ಕವನಗಳಿವೆ. ಇಲ್ಲಿ ಅವರು ಬಳಸಿರುವ  ಶಬ್ದಗಳ ಪುಂಜ ನಮ್ಮ ಗಮನ ಸೆಳೆಯುತ್ತದೆ. ಈ ಮೂಲಕ   ಅತ್ಯುತ್ತಮ ಕವನಗಳನ್ನು ಅವರು ಕಟ್ಟಿಕೊಟ್ಟಿದ್ದಾರೆ.
  ಇದರಲ್ಲಿ  ಕನ್ನಡ ನಾಡಿನ ಹಿರಿಮೆ, ಕನ್ನಡದ ಶಬ್ದ ಸಂಪತ್ತು, ಹಬ್ಬಗಳು, ಸಾಧಕರು, ಪ್ರೀತಿ -ಪ್ರೇಮದ ಕವನಗಳು, ಕೃಷ್ಣ, ಸೀತೆ, ಬುದ್ಧ , ಬೇಂದ್ರೆ, ವಿವೇಕಾನಂದ, ಅಂಬೇಡ್ಕರ್, ವಿದ್ಯಾಗುರುಗಳು, ಮಲೆನಾಡು, ಮುಂಗಾರು ಮಳೆ....  ಹೀಗೆ  ಸಾಲು ಸಾಲು ವಿಷಯಗಳ ಬಗ್ಗೆ ಕವನಗಳನ್ನು ರಚಿಸಿದ್ದಾರೆ. ಈ ವಿಷಯಗಳೆಲ್ಲ ನಮಗೆ ಚಿರಪರಿಚಿತವಾದರೂ ಅವುಗಳನ್ನು ಕವಯತ್ರಿ ಕಂಡ ಮತ್ತು ಚಿತ್ರಿಸಿದ ಬಗೆ ಮಾತ್ರ ನಿಜಕ್ಕೂ ವಿಸ್ಮಯವಾದುದು.  
‘ರಂಗವಲ್ಲಿ’ ಎಂಬ ಮೊದಲ ಕವನದಲ್ಲಿ ನಮ್ಮ ಕೈಯಲ್ಲಿ ಮತ್ತು ಮನದಲ್ಲಿರುವ ಸುಂದರ ಆಕೃತಿಯ ರೇಖೆಗಳು ರಂಗವಲ್ಲಿ ಹೆಸರಲ್ಲಿ ಹೇಗೆ ಸುಂದರವಾಗಿ ಮೂಡಿ ಜನರನ್ನು ಸೆಳೆಯುತ್ತವೆ ಎನ್ನುವುದನ್ನು ವಿಶ್ಲೇಷಿಸಿದ್ದಾರೆ. ಚುಕ್ಕಿಗಳೆಲ್ಲಾ ಸೇರಿ ಚಂದದ ರಂಗವಲ್ಲಿ ರಚನೆಯಾಗುತ್ತದೆ. ಮುಗ್ಧ ನಗೆಯ ಪ್ರತಿಮೆಯಾಗಿ ಅರಳಿ ನಿಂತು ಬಿಡುತ್ತದೆ. ನೋಡುಗರ  ಕಣ್ಣೆಲ್ಲ ಇದರೆಡೆಗೆ ಆಕರ್ಷಿತವಾಗುತ್ತದೆ. ರಂಗವಲ್ಲಿ ಎನ್ನುವುದು ಜೀವಗಳ ಬೆಸೆಯುವ ತಂತು ಎಂದು ವರ್ಣಿಸುತ್ತಾರೆ . ರಂಗೋಲಿಯ ಬೆಳಕು ಅವಳ/ಮನದ ಶುದ್ಧತೆಗೆ ಸಾಕ್ಷಿಯಾಗಿ /ಧವಳ ಕಾಂತಿ ತುಳುಕಿಸಿ ಬಿಡುವುದು /ಮನೆಗೊಂದು ಶೋಭೆ/ಅಸ್ಖಲಿತವಾಗಿ ಹರಿಯುವುದು
ಎಂದು ಸುಂದರವಾಗಿ ವರ್ಣಿಸುತ್ತಾರೆ
‘ಜಾಗ ಕೊಡಿ’ ಎಂಬ ಕವನ ಅತ್ಯಂತ ಅರ್ಥಗರ್ಭಿತವಾಗಿ ಮೂಡಿಬಂದಿದೆ. ಮನುಷ್ಯರಲ್ಲಿ ಕರುಣೆಯ ಕಣ್ಣು ಕಾಣದಾಗಿದೆ. ಮತ -ಧರ್ಮಗಳ ಗಲಾಟೆಯಲ್ಲಿ ಕರುಣೆಯನ್ನು ಸಮತಟ್ಟು ಮಾಡಲಾಗಿದೆ. ನಮ್ಮ ಎದೆಯೊಳಗೆ ಅದನ್ನು ಬದುಕಿಸಿಕೊಳ್ಳುವ ಕೆಲಸವನ್ನು ನಾವು ಮಾಡಬೇಕಿದೆ. ಅಳಿವಿನಂಚಿನಲ್ಲಿರುವ ಕರುಣೆಯನ್ನು ದಯವಿಟ್ಟು ಕಾಪಾಡಿ, ಅದರ ಅಹವಾಲು ಏನೆಂದು ಕೇಳಿ, ನಿರಾಶ್ರಿತವಾಗಿರುವ ಕರುಣೆಗೆ ದಯಮಾಡಿ ‘ಜಾಗ ಕೊಡಿ’ ಎಂದು ಮನವಿ ಮಾಡುತ್ತಾರೆ. ‘ಮಧುಬನದಲ್ಲಿ ಅವನಿಲ್ಲ ಸಖಿ’ ಎಂಬ ಕವನ ಕೃಷ್ಣನನ್ನು ಗೊಲ್ಲತಿಯರು ಹುಡುಕುವುದಕ್ಕೆ ಸಂಬಂಧಿಸಿದ್ದಾಗಿದೆ. ಮಧುಬನದಲ್ಲಿ ಕಾದುಕೂತರೂ ಕೃಷ್ಣನ ಸುಳಿವಿರುವುದಿಲ್ಲ.  ಸಂಜೆಗತ್ತಲಾಗುತ್ತಿದ್ದಂತೆ ಕುಸುಮಗಳು ಮುರುಟುತ್ತಿದ್ದರೆ, ಹಕ್ಕಿಗಳ, ಭ್ರಮರಗಳ  ಹಾರಾಟ ಕ್ಷೀಣವಾಗುತ್ತಿದೆ, ಮಡಿಕೆಯಲ್ಲಿನ ಮೊಸರು ಕೆಡುತ್ತಿದೆ.   ಆದರೆ ಅವನಿಗೆ ಹೆಣ್ಣು ಜೀವನದ ಕಷ್ಟಗಳು ಗೊತ್ತಿಲ್ಲ. ಹೃದಯ ಕದಿಯುವುದಷ್ಟೇ ಗೊತ್ತು. ಎದೆಯೊಳಗೆ ಹರಳುಗಟ್ಟಿದ ಪ್ರೀತಿ ಹೊನಲಾಗಿ ಹರಿಯಲು ಹವಣಿಸುತ್ತಿದೆ. ಒಂದು ವೇಳೆ ಕೃಷ್ಣ ಬಂದಲ್ಲಿ ಈ ಬಾರಿ ಪ್ರೇಮವನ್ನು ಹೇಳಿಬಿಡಬೇಕು ಎಂದು ತೀರ್ಮಾನಿಸಿಬಿಡುತ್ತಾರೆ. ಆದರೂ ಕೃಷ್ಣ ಬಾರದೆ ಅವರನ್ನು ಕಾಯಿಸುತ್ತಾನೆ.
 ‘ಅವಳು ವೈದೇಹಿ’ ಕವನದಲ್ಲಿ ಅವಳು ಪದವಿರದ ಕವಿತೆ/ ಮಹಾಕಾವ್ಯದ ನಾಯಕಿ/ ಧೀಮಂತೆ, ಲೋಪವಿರದ ಪುಣ್ಯಚರಿತೆ/ ರಾಮನೆಡೆಗೆ ಅನನ್ಯ ಪ್ರೀತಿ,ವಿರಹ ವ್ಯಥೆ/ ಎಂದು ವೈದೇಹಿ (ಸೀತೆ)ಯ ಅಮೋಘ ವ್ಯಕ್ತಿತ್ವವನ್ನು ಕಟ್ಟಿಕೊಟುತ್ತಾರೆ. ರಾಮನನ್ನು ಸರಿಗಟ್ಟಿದವಳು, ದಿವ್ಯ ಸೌಂದರ್ಯದ ಖನಿ, ಮಾನವಾಕೃತಿಯ ಗುಣಸಾಗರಿ, ಸ್ಪರ್ಶಿಸಿದೆಡೆಯಲ್ಲೆಲ್ಲ ದೇವ ಸನ್ನಿಧಿ ಎಂದು ವರ್ಣಿಸುತ್ತಾರೆ.
 ಪ್ರಕೃತಿ ಸಂರಕ್ಷಣೆ’ ಯಲ್ಲಿ ಪ್ರಕೃತಿಯನ್ನು ನಾಶ ಮಾಡುತ್ತಿರುವ ನಾವು ಅದು ಸಮತೋಲನ ತಪ್ಪುವಂತೆ ಮಾಡಿದ್ದೇವೆ. ಪರಿಸರ ಮಾಲಿನ್ಯ ಮತ್ತು ಮತಿಹೀನತೆ ಅತಿಯಾಗಿ, ಮಿತಿಮೀರಿ ಜೀವ- ಜನಕ್ಕೆ ಮಾರಕವಾಗಿದೆ. ಜೀವವೈವಿಧ್ಯತೆಯನ್ನು ಮರೆತು ನಾವು ನರಕವನ್ನು ಸೃಷ್ಟಿಸಿಕೊಂಡಿದ್ದೇವೆ. ಅತಿವೃಷ್ಟಿ, ಅನಾವೃಷ್ಟಿ, ಗಗನಚುಂಬಿ ಕಟ್ಟಡಗಳು, ಮತ್ತು ಕೈಗಾರಿಕೀಕರಣದಿಂದ ಪ್ರಾಕೃತಿಕ ಸಂಪನ್ಮೂಲಗಳನ್ನು ನಾಶಮಾಡುತ್ತಿದ್ದೇವೆ ಎಂದು ವಿಷಾದಿಸುತ್ತಾರೆ. ತಲ್ಲಣಗೊಳಿಸುತ್ತಿವೆ/ ಅಲ್ಲಲ್ಲಿ ಪ್ರಾಕೃತಿಕ ವಿಕೋಪ/ಎಚ್ಚೆತ್ತು ಪ್ರಕೃತಿಯ ರಕ್ಷಿಸದಿರೆ/ ಮನುಕುಲ ಪಡಬೇಕಾದೀತು ಪರಿತಾಪ/ ಎಂದು ಎಚ್ಚರಿಸುತ್ತಾರೆ.
ಈ ಜಗತ್ತಿನಲ್ಲಿ ಗುರುವೇ ಶ್ರೇಷ್ಠ. ಅವನು ಜಾತ್ಯತೀತ. ಬೆತ್ತದಿಂದ ಬೆದರಿಸಿ ಅಕ್ಷರ ಬಿತ್ತುತ್ತಾನೆ. ಸಮಾಜದ ನೀತಿ, ಮೌಲ್ಯಗಳನ್ನು ಕಲಿಸಿ, ಅನ್ನದ ದಾರಿ ತೋರಿಸುತ್ತಾನೆ. ಶಿಸ್ತು ಕಲಿಸಿ, ಕ್ಷಮೆ ತೋರಿಸಿ, ಕರುಣೆ ಮೂಡಿಸಿ, ದೇವರೆಡೆಗೆ ದಾರಿ ತೋರುತ್ತಾನೆ. ಅವನಲ್ಲಿ ಜಾತಿ -ಧರ್ಮ- ಲಿಂಗದ ತಾರತಮ್ಯವೇ ಇಲ್ಲ . ಸಕಲರಿಗೂ ಸಮಭಾವದವನು ಎಂದು ‘ಜಾತ್ಯತೀತ ಗುರು’ ಎಂಬ ಕವನದಲ್ಲಿ ವರ್ಣಿಸುತ್ತಾರೆ. ‘ಗುರು ನಮನ’ ಎಂಬ ಇನ್ನೊಂದು ಕವನದಲ್ಲಿ, ‘ದೇಶದ ಭವಿಷ್ಯ ಬರೆಯುವ/ ಭವ್ಯಶಿಲ್ಪಿಗೆ ನಮನ/ ಹೊಂಗನಸಿನ ಮುನ್ನುಡಿದಾತನಿಗೆ/ ಇದೋ ನನ್ನ ನಮನ/ ಎಂದು ಹೇಳುತ್ತಾ, ಗುರುವಿಗಿಂತ ಅನ್ಯ ದೇವರಿಲ್ಲ. ಸಿಟ್ಟು ತ್ಯಜಿಸಿ, ಸಂಯಮ ಕಲಿಸಿ, ನಾನಾ ವಿಷಯದ ಸವಿತುಂಬಿ, ಸಂಗೀತ, ನೃತ್ಯ, ನಾಟಕದ ಕಲೆ ಉಣಿಸಿ, ಬದುಕಿಗೆ ಮೌಲ್ಯ ಮತ್ತು ಶ್ರಮಕ್ಕೆ ಗೌರವ, ಕಷ್ಟ -ನಷ್ಟ ಎದುರಿಸುವ ಕಲೆಯನ್ನು ತುಂಬಿ ಶಿಷ್ಯರ ಏಳಿಗೆಯನ್ನು ಅನುದಿನ ಜಪಿಸುವವನೇ ಗುರು.  ಅವರ ಋಣ ತೀರಿಸಲು ಈ ಜನ್ಮ ಸಾಲದು ಎಂದು  ವಿವರಿಸುತ್ತಾರೆ.
 ‘ಒಮ್ಮೆ ಹುಟ್ಟಿ ಬನ್ನಿ, ವಿವೇಕಾನಂದರೇ’ ಎಂಬ ಕವನದಲ್ಲಿ, ಇಂದಿನ ಸಮಾಜ ಹೇಗಿದೆ ಎನ್ನುವುದನ್ನು ವಿವರಿಸುತ್ತಾ, ಮತ್ತೊಮ್ಮೆ ಸಿಡಿಲವಾಣಿ ಮೊಳಗಬೇಕಿದೆ. ಪಾಶ್ಚಾತ್ಯ  ಅನುಕರಣೆಯ ಅಂಗಾರ ಸುಡುತ್ತಿದೆ. ಭಾರತೀಯ ಸಂಸ್ಕೃತಿ ನೆರಳಿಲ್ಲದೆ ನಲುಗಿದೆ. ದರಿದ್ರ ನಾರಾಯಣರು ಬಸವಳಿದಿದ್ದಾರೆ, ಹಣಕ್ಕಾಗಿ ನೈತಿಕತೆ ಮಾರಿಕೊಳ್ಳುತ್ತಿದ್ದಾರೆ. ಧರ್ಮ, ಜಾತಿಗಳ ಜಗ್ಗಾಟ, ಕಿತ್ತ್ತಾಟ ನಡೆದಿದೆ  ಎಂದು ಹೇಳುತ್ತಾ, ಮನದ ನಂಜು ಕಳೆಯುವವರಿಲ್ಲ /ಅರಿವು ಪಂಜು ಹೊತ್ತಿಸುವವರಿಲ್ಲ/  ಮತ್ತೊಮ್ಮೆ ಜಾಗೃತಿಯ ಕಹಳೆ ಊದಬೇಕಿದೆ/ ಬಂದು ಬಿಡಿ/ ಎಂದು ಕೋರುತ್ತಾರೆ.
‘ಮುಂಗಾರು ಮಳೆ’ ಮತ್ತು ‘ಮುಂಗಾರು ವೈಭವ’ವನ್ನು ಸಹ ಕವಯತ್ರಿ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ ಮುಂಗಾರು ಮಳೆಯಿಂದ ಜಗದ ಜೀವಜಾಲಕ್ಕೆ ಚೈತನ್ಯ ತುಂಬಿ ಜೀವ ಕಳೆ ಬಂದಿದೆ. ನಾಚಿಕೆಯಿಂದ ಹೂವಿನ ಪಕಳೆಗಳು ಅರಳುತ್ತಿವೆ. ಮಣ್ಣಿನ ಕಂಪು ತೇಲಿಬರುತಿದೆ. ನಿಸರ್ಗ ಮಾತೆ ಜೀವಂತ ಕಾವ್ಯವನ್ನು ಬರೆಯುತ್ತಿದ್ದಾಳೆ. ಪ್ರಕೃತಿ ವೈಭವದ ದೃಶ್ಯ ಎಲ್ಲೆಡೆ ವಿರಾಜಿಸುತ್ತಿದೆ. ಪಕ್ಷಿ -ಕೂಜನಗಳ ತಾಳಮೇಳ ಗಮನಿಸಬಹುದು. ಭ್ರಮರಗಳ ಹಿಮ್ಮೇಳ ಇಲ್ಲಿದೆ. ಭೂಮಿಗೂ ಬಾನಿಗೂ ಮಧುರ ಸಂಬಂಧ ಬೆಸೆದು ಮಧುರ ಗಾನ ಎಲ್ಲೆಡೆ ಕೇಳಿಬರುತ್ತಿದೆ ಎನ್ನುತ್ತಾರೆ. ‘ಮುಂಗಾರು ಮಳೆ’ ಯಲ್ಲಿ ಧವಳ ಸೆರಗ ಹಾಸಿ ಕ್ರೀಡಿಸುತಿಹಳು/ ನಿಸರ್ಗ ಸುಂದರಿ ಮನೋಹರಿ/ ಒದ್ದೆ ಕಡಲೊಳಗೆ ಭೋರ್ಗರೆದಿವೆ ಕಡಲ/ಸೇರುವ ತವಕದಿ ಸಾವಿರಾರು ನದಿ/ ಎಂದು ವರ್ಣಿಸುತ್ತ ಭೂಮಿಗೆ ಧಾವಿಸುತ್ತಿರುವ ಅಮೃತ ಸಿಂಚನದಂತಹ ಮಳೆಯ ವೈಭವವನ್ನು ವರ್ಣಿಸಿದ್ದಾರೆ.
 ‘ಬುದ್ಧ ನಕ’ ಎಂಬ ಕವನದಲ್ಲಿ ಅನ್ಯಾಯ, ಅಕ್ರಮದ ಮೌನ ಮುದ್ರೆ ಒತ್ತಿ ಬುದ್ಧನ ವಿಗ್ರಹಗಳು ಶ್ರೀಮಂತರ ಕಪಾಟಿನಲ್ಲಿ ಅಲಂಕರಿಸಿವೆ. ಇದನ್ನು ನೋಡಿ ಬುದ್ಧ ನಗುತ್ತಾನೆ. ದುಃಖ, ಆಸೆ ಬಿಡದವರನ್ನು ಕಂಡು ಅರಿಷಡ್ವರ್ಗಕ್ಕೆ ಪಕ್ಕಾದವರ ಕಂಡು, ಶಾಶ್ವತತೆ ಅರಸುವವರ ಕಂಡು ಬುದ್ಧ ನಗುತ್ತಿದ್ದಾನೆ. ಬೆಳಕು ಹಂಚಿದರೂ ಹುಳುಕನಿಟ್ಟುಕೊಂಡವರು, ಅಶಾಂತಿ, ಲಜ್ಜೆ, ಲಂಚ ಪಡೆಯುವವರನ್ನು, ಮುಗ್ಧ ಜನರ ಶೋಷಣೆ ನಡೆಯುತ್ತಿರುವುದನ್ನು, ಲೋಭಿಗಳನ್ನು, ಮಾನಿನಿಯರ ಶೀಲಹರಣವಾಗುತ್ತಿರುವುದನ್ನು ಕಂಡು ಬುದ್ಧ ನಗುತ್ತಿದ್ದಾನೆ.
ರಕ್ಷಕರೇ ಭಕ್ಷಕರಾಗಿ/ ದೇಶದ ಸಿರಿಯ ಎಗ್ಗಿಲ್ಲದೆ/ ಕೊಳ್ಳೆ ಹೊಡೆಯುವುದ ಕಂಡು/ಬುದ್ಧ ವಿಷಾದದೀ ನಕ್ಕ ...! ಎಂದು ಇಂದಿನ ಸಾಮಾಜಿಕ, ರಾಜಕೀಯ ಪರಿಸ್ಥಿತಿಯನ್ನು ವಿಶ್ಲೇಷಿಸುವ ಮೂಲಕ ಬುದ್ಧನ ಚಿಂತನೆಗಳನ್ನು, ಬೋಧನೆಗಳನ್ನು ಹೇಗೆ ನಾವು ಕೈಬಿಟ್ಟಿದ್ದೇವೆ ಎನ್ನುವುದನ್ನು ವಿಷಾದದಿಂದ ವಿವರಿಸುತ್ತಾರೆ.
ಹೀಗೆ ಈ ಕೃತಿಯಲ್ಲಿನ ಎಲ್ಲಾ ಕವನಗಳು ವಿಶೇಷ ಅರ್ಥಗಳಿಂದ ಓದುಗರನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿವೆ. ಶಾಕುಂತಲೆ, ರಾಧಾ ಮಾಧವ, ವಿರಹಿ ರಾಧೆ, ಪ್ರೀತಿಯ ನೆರಳು, ನಿನ್ನದೇ ಗುಂಗು, ನನ್ನ ಕವಿತೆ, ಸ್ವಾಭಿಮಾನದ ಕಲಿಗಳು ಮೊದಲಾದವು ಸಹ ಸಮಾಜಕ್ಕೆ ಒಂದು ಮೌಲ್ಯಯುತ ಸಂದೇಶ ನೀಡುವ ಕವನಗಳಾಗಿವೆ.
..........................



 

Comments

Popular posts from this blog