ಬದುಕಿಗೆ ಬೆಳಕು ನೀಡುವ
‘ಮತ್ತೆ ಹಾಡಿತು  ಕೋಗಿಲೆ’


ಪತ್ರಕರ್ತರೂ ಆಗಿರುವ ಬರಹಗಾರ ಎ. ಆರ್. ಮಣಿಕಾಂತ್ ಅವರ ಹತ್ತನೆಯ ಕೃತಿ  ‘ಮತ್ತೆ ಹಾಡಿತು ಕೋಗಿಲೆ’. ನಿರಂತರ ಪರಿಶ್ರಮ ಮತ್ತು ಹೋರಾಟಕ್ಕೆ ಬಳುವಳಿಯಾಗಿ ಗೆಲುವು ದೊರೆಯುತ್ತದೆ ಎಂಬ ಸಂದೇಶವನ್ನು ಹಲವರ ಮೂಲಕ ಈ ಕೃತಿ ಪ್ರಸ್ತುತಪಡಿಸಿದೆ. ಜೀವನದಲ್ಲಿ ಕಷ್ಟಗಳ ಕುಲುಮೆಯಲ್ಲಿ ಬೇಯುತ್ತಲೇ ಅಮೃತದ ಘಳಿಗೆಗೆ ಹಂಬಲಿಸಿದ ಮತ್ತು ಸೋಲುಗಳ ಸರಪಳಿಯನ್ನು ತುಂಡರಿಸಿ ಗೆಲುವಿನ ಗಾಳಿಪಟವನ್ನು ಮುಗಿಲಿಗೆ ಹಾರಿಬಿಟ್ಟ ಹೃದಯವಂತರ ಕಥೆಗಳು ಇದರಲ್ಲಿದೆ. ೩೧ ಜನರು ತಮ್ಮ ಜೀವನದಲ್ಲಿ ಅಸಾಧಾರಣ ಸಾಧನೆ ಮಾಡಿದ್ದನ್ನು ಇದರಲ್ಲಿ ಲೇಖಕರು ಚಿತ್ರಿಸಿದ್ದಾರೆ.
ನಾಡಿನಾದ್ಯಂತ ಅಪಾರ ಜನ ಮೆಚ್ಚುಗೆ ಗಳಿಸಿದ ಕೃತಿ ಇದು. ಇದರಲ್ಲಿರುವ ನತದೃಷ್ಟರು ಅಥವಾ ದುರದೃಷ್ಟವಂತರ ನೋವಿನ ನುಡಿಯನ್ನು ಲೇಖಕರು ಚಿತ್ರಿಸಿದ್ದಲ್ಲದೆ, ಅವರು ಅದನ್ನು ಸಾಧಿಸಿದ ಬಗೆಯನ್ನು ಕೂಡ ವಿವರಿಸಿದ್ದಾರೆ. ನೋವುಂಡವರು, ಅಸಹಾಯಕರು, ಕಲ್ಮಶ ಪ್ರೀತಿಯನ್ನು ಮತ್ತು ಜನಮನವನ್ನು ಗೆದ್ದಿರುವವರನ್ನು ಇಲ್ಲಿನ ಲೇಖನಗಳಲ್ಲಿ ಕಾಣಬಹುದು. ಈ ಕೃತಿಯನ್ನು  ಓದುವ ಮೂಲಕ ಬದುಕಿನ ಸಾಧ್ಯತೆಗಳ ಬಗ್ಗೆ ಭರವಸೆಯನ್ನು ಬೆಳೆಸಿಕೊಳ್ಳಲು ಸಾಧ್ಯವಿದೆ.
 ಪೆಟ್ಟಿಗೆ ಅಂಗಡಿಯವನ ಮಗಳು ಪ. ಬಂಗಾಳದ ಹೂಗ್ಲಿ ಜಿಲ್ಲೆಯ ಶ್ವೇತಾ ಅಗರವಾಲ್, ಹಣಕಾಸಿನ ಮುಗ್ಗಟ್ಟಿದ್ದರೂ ೯ ಗಂಟೆಗಳ ಕಾಲ ಓದಿ ಯುಪಿಎಸ್ಸಿ ಪಾಸಾದ ವೈಖರಿ ಇದರಲ್ಲಿದೆ.  ರೈಲು ಹತ್ತುವ ವೇಳೆ ಕಾಲ ಮೇಲೆ ರೈಲು ಹರಿದು ಹೋಗಿ ಎರಡು ಕಾಲನ್ನು ಕಳೆದುಕೊಂಡ ದೇವನ್ ಮಿಶ್ರ್ರಾ ಎಂಬ ಬಿಹಾರದ ಯುವಕ  ನಟ ಜಾಕಿ ಶ್ರಾಫ್. ಫರ್‍ಹಾ ಅಲಿ ಖಾನ್ ಅವರ ಸಹಾಯದಿಂದ ಕಾಲು ಪಡೆದು ಡಾನ್ಸ್ ಕಲಿತು ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಸೆಲೆಬ್ರಿಟಿಯಾದ ಕಥೆ ಇದೆ.  ಆರ್ಮಿ ಆಫೀಸರ್ ಆಗಬೇಕೆಂದುಕೊಂಡಿದ್ದ ವಿಕಿ ನಿಗೇನ್ ಅರೇರಾ ಎಂಬ ಕೊಲ್ಕತ್ತಾದ ಯುವಕ ರೌಡಿ ಪಟ್ಟ ಕಟ್ಟಿಕೊಂಡು  ಜೈಲಿನಲ್ಲಿ ಬದುಕಿ ಅಲ್ಲಿಯೇ ಮನ: ಪರಿವರ್ತನೆ ಉದ್ದೇಶದಿಂದ ನಡೆಸಿದ ನಾಟಕ ಹಾಗೂ ನೃತ್ಯಗಳಲ್ಲಿ ಭಾಗವಹಿಸಿ ಅದ್ಭುತ ನಟನೆನಿಸಿಕೊಂಡು ಬಂಗಾಳಿ, ಮಲೆಯಾಳಿ ಸಿನಿಮಾದಲ್ಲಿ ನಟಿಸಿ ತನ್ನದೇ ಆದ ಸಂಸ್ಥೆಯೊಂದನ್ನು ಜೈಲಿನಿಂದ ಹೊರಬಂದ ನಂತರ ಕಟ್ಟಿಕೊಂಡು ೫೦೦ಕ್ಕೂ ಹೆಚ್ಚು ಮಂದಿಗೆ ಕೆಲಸ ನೀಡಿದ ವಿವರಣೆ ಇದೆ.
ರಕ್ತ ಹೆಪ್ಪುಗಟ್ಟಿ ತೀವ್ರ ಕಷ್ಟ ಅನುಭವಿಸಿದರೂ ಕೆಲವೇ ವರ್ಷಗಳಲ್ಲಿ ಜಿಮ್‌ಗೆ ಹೋಗಿ ಕಸರತ್ತು ಮಾಡಿ ಕಾಯಿಲೆಯಿಂದ ದೂರವಾಗಿ ಸ್ವತಃ ಜಿಮ್ ಆರಂಭಿಸಿ, ತೆಲುಗು ಸಿನಿಮಾಗಳಲ್ಲಿ ಅಭಿನಯಿಸಿ ಸೆಲೆಬ್ರಿಟಿಯಾದ ಆಗ್ರಾದ ಕಿರಣ್ ಡೆಂಬ್ಲಾ, ಐವತ್ತು ಪೈಸೆಯ ಶಾಂಪೂ ಮಾರಿ ೫೦೦ ಕೋಟಿ ರೂಪಾಯಿಯ ಉದ್ಯಮ ಕಟ್ಟಿದ ತಮಿಳುನಾಡಿನ ಸಿ ಕೆ ರಂಗನಾಥನ್ ಅವರ ಯಶೋಗಾಥೆ, ಕ್ಯಾನ್ಸರ್ ಗೆದ್ದು ಎನ್‌ಜಿಒ ಆರಂಭಿಸಿ ಸುಮಾರು ೨೫೦ ರಷ್ಟು ಭಿಕ್ಷುಕ ಮಕ್ಕಳಿಗೆ ಪ್ರತಿನಿತ್ಯ ಊಟ ಕೊಡುವ ಕೆಲಸ ಮಾಡುತ್ತಿರುವ, ಕೊಳಗೇರಿಯ ಮಕ್ಕಳಿಗೆ ಡಾನ್ಸ್ ಕಲಿಸುವ ಅಂಚಲ್ ಶರ್ಮಾ ಕಥೆ ಈ ಕೃತಿಯಲ್ಲಿದೆ.
ರೈಲು ಅಪಘಾತದಲ್ಲಿ ಬಲಗೈ ತುಂಡಾದರೂ ನಾಲ್ಕೇ ತಿಂಗಳಲ್ಲಿ ಎಡಗೈಯಲ್ಲಿ ಬರೆಯಲು ಕಲಿತು, ಯುನಿವರ್ಸಿಟಿಗೆ ಮೊದಲ ರ್‍ಯಾಂಕ್ ಬಂದು, ನಂತರ ಪರಿಚಯವಾದ ಯುವಕ ಆಕೆಯನ್ನು ಮದುವೆಯಾಗಿದ್ದು, ಆರ್ಕಿಟೆಕ್ಚರ್  ವಿಭಾಗದ ಲೆಕ್ಚರ್ ಆಗಿ ಸಾಧನೆ ಮಾಡಿದ ಶ್ರೇಯಾ ಸೇನ್, ಹೋಟೆಲ್‌ನಲ್ಲಿ ಕೆಲಸ ಮಾಡಿ, ನಂತರ ಅಪ್ಪನೊಟ್ಟಿಗೆ ಕೆಲಸ ಮಾಡಿ, ಕೆಲಸ ಮಾಡಿದ ಹೋಟೆಲ್ ಜಾಗವನ್ನೇ ಖರೀದಿ ಮಾಡಿ ದೊಡ್ಡ ಹೋಟೆಲ್ ಕಟ್ಟಿಸಿ, ಫರ್ನಿಚರ್ ಶಾಪ್, ಫಿಲಂ ಪ್ರೊಡಕ್ಷನ್, ಹೊಟೇಲ್ ಮ್ಯಾನೇಜ್ಮೆಂಟ್ ಮೊದಲಾದ  ಹತ್ತಾರು ಬಿಸಿನೆಸ್ ವ್ಯವಹಾರಗಳಲ್ಲಿ ಹೂಡಿಕೆ ಮಾಡಿ, ಕೊನೆಯವರೆಗೂ ತಂದೆಯ ಪ್ರೀತಿ ವಿಶ್ವಾಸ ಗಳಿಸಿ ಅವರ ಸೇವೆ ಮಾಡಿದ ಬಾಲಿವುಡ್ ನಟ ಸುನಿಲ್ ಶೆಟ್ಟಿ, ಪತ್ನಿ, ಮಕ್ಕಳನ್ನು ಸಾಯಿಸಬೇಕೆಂದು ಉದ್ದೇಶದಿಂದ ತಂದೆ ಆಸಿಡ್ ಹಾಕಿದಾಗ ಒಂದು ಕಣ್ಣು ಕಳೆದುಕೊಂಡರೂ, ಧೈರ್ಯದಿಂದ ಡಿಸ್ಟಿಂಕ್ಷನ್‌ನಲ್ಲಿ ಪಾಸಾಗಿ ಕಂಪನಿಯೊಂದರ ಮಾನವ ಸಂಪನ್ಮೂಲ ಭಾಗದಲ್ಲಿ ಕೆಲಸ ಪಡೆದು, ಮಾಡೆಲ್ ಆಗಿ, ಸುಶ್ಮಿತಾ ಸೇನ್ ಮತ್ತು ಜೂಹಿ ಚಾವ್ಲಾ ಅವರ ಕೈ ಹಿಡಿದು ನಡೆದಾಡಿದ, ಇದರಿಂದ ಬಂದ ಹಣದಿಂದ ಎನ್ ಜಿ ಓ ಸ್ಥಾಪಿಸಿ ಆಸಿಡ್ ದಾಳಿಗೆ ತುತ್ತಾದವರಿಗೆ ಆಶ್ರಯ ಕಲ್ಪಿಸಿ ‘ಬಾಳ ಯುದ್ಧದಲ್ಲಿ ಗೆಲ್ಲಬೇಕು’ ಎಂದು ಹಂಬಲಿಸುವವರಿಗೆ ಮಾದರಿಯಾದ ಮುಂಬೈನ ಅನ್‌ಮೋಲ್ ರಾಡ್ರಿಗಸ್ ಎಂಬ ದಿಟ್ಟೆಯ ಕಥೆಗಳು ಇದರಲ್ಲಿವೆ.
  ಬೆಂಗಳೂರಿಗೆ ಬಂದ ಮಲಯಾಳಂ ಮೂಲದ ಶಫಿ ಕನ್ನಡ ಕಲಿತು ಹಗಲಿನಲ್ಲಿ ಹೊತ್ತು ಕೂಲಿ ಕೆಲಸ ಮಾಡುತ್ತಾ ರಾತ್ರಿ ವೇಳೆ ಶ್ರೇಷ್ಠ ಅನುವಾದಕನಾಗಿ ಸಾಧನೆ ಮಾಡಿ, ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದದ್ದು, ಚಿಪ್ಸ್ಸ್ ಮಾರುತ್ತಲೇ ಅದರಲ್ಲಿ ಹೆಸರಾಗಿ ಬ್ಯಾಂಡ್ ನೇಮ್ ಪಡೆದು ಹೆಸರು ಗಳಿಸಿದ ತಮಿಳುನಾಡಿನ ಇಳವರಸಿ, ಕಣ್ಣಿಲ್ಲದೇ ಹೋದರೂ ಬಿಎ ಪದವಿ ಪಡೆದು ಹೆಂಡತಿಯೊಂದಿಗೆ ಸೇರಿ ಕ್ಯಾಂಡಲ್ ಬಿಸಿನೆಸ್ ಆರಂಭಿಸಿ ಅದರಲ್ಲಿ ಯಶಸ್ವಿಯಾಗಿ ದೊಡ್ಡ ದೊಡ್ಡ ಕಂಪನಿಗಳಿಗೆ ಕ್ಯಾಂಡಲ್ ಪೂರೈಸುವ ಕೆಲಸ ಆರಂಭಿಸಿ ಸಾಧನೆ ಮಾಡಿದ ಅಪ್ರತಿಮ ಕ್ರೀಡಾಪಟು ಭವೇಶ್, ಪಿಯುಸಿ ಫೇಲಾದರೂ ನಾಗಾಲ್ಯಾಂಡ್ ನ ಯುವಕ ರೋಂಗ್ ಮೈ ಎನ್‌ಜಿಓ ತೆರೆದು, ಈಗ ಯು ಸಿ ಡ್ರಾಪೌಟ್ ಆದ ಸುಮಾರು ಸಾವಿರ ಜನರಿಗೆ ನೌಕರಿ ಕೊಡಿಸಿದ ಕೀರ್ತಿಗಳಿಸಿದ್ದಾರೆ.
    ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ರಮೇಶ್ ಎಂಬ ಯುವಕ ಪೋಲಿಯೋಪೀಡಿತನಾಗಿ ಬಳೆ ಮಾರುತ್ತಲೇ ಪಿಯುನಲ್ಲಿ ಶೇಕಡ ೮೮ ರಷ್ಟು ಅಂಕ ಗಳಿಸಿ ಬಿ ಎಡ್  ಮುಗಿಸಿ ಶಿಕ್ಷಕನಾಗಿ, ಅಲ್ಲಿಂದಲೇ ಯುಪಿಎಸ್ಸಿ ಮತ್ತು ಎಂಪಿಎಸ್‌ಸಿ ಬರೆದು ಐಎಎಸ್‌ಅಧಿಕಾರಿಯಾಗಿ ಜಿಲ್ಲಾಧಿಕಾರಿಯಾದ ಕಥೆ,  ಚರ್ಮದ ಕಾಯಿಲೆಯಿಂದ ಶೇಕಡ ೯೦ರಷ್ಟು ದೃಷ್ಟಿರಹಿತಳಾಗಿದ್ದ ನಿಶಾ ವಿಕ್ಸ್ ಕಂಪನಿಯ ಜಾಹೀರಾತಿನಲ್ಲಿ ರೂಪದರ್ಶಿಯಾಗಿ, ಡಿಜಿಟಲ್ ಮಾರ್ಕೆಟಿಂಗ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವುದು, ರಾಜಸ್ಥಾನದ ಜಯಂತ್ ಕಂಡಾಯ ೬ ಬಾರಿ ಕ್ಯಾನ್ಸರ್ ಎದುರಿಸಿ, ‘ಧೈರ್ಯದಿಂದ ಮಾತ್ರ ಎಂಥ ರೋಗವನ್ನು ಬೇಕಾದರೂ ಎದುರಿಸಬಹುದು’ ಎನ್ನುವುದಕ್ಕೆ ತೋರಿಸಿಕೊಟ್ಟಿರುವುದು, ಹೈದರಾಬಾದ್‌ನ ಮಧುಸೂದನ ರಾವ್ ೨೦ ವರ್ಷಗಳ ಹಿಂದೆ ದಿನಗೂಲಿ ನೌಕರನಾಗಿ ೩೦ ರೂಪಾಯಿ ಸಂಬಳಕ್ಕಾಗಿ ದುಡಿದು, ಈಗ ೩೦೦ ಕೋಟಿ ರೂಪಾಯಿ ವರಮಾನದ ಉದ್ಯಮಕ್ಕೆ ಅಧಿಪತಿಯಾಗಿ, ಈಗ ಆಂಧ್ರದ ಐದಾರು ಜಿಲ್ಲೆಗಳಲ್ಲಿ ಉಚಿತ ಶಿಕ್ಷಣ ನೀಡುವ ಶಾಲಾ -ಕಾಲೇಜುಗಳನ್ನು ಆರಂಭಿಸಿ ಜನಸೇವೆ ಮಾಡುತ್ತಿರುವುದರ ಚಿತ್ರಣ ಈ ಕೃತಿಯಲ್ಲಿದೆ.
 ಸ್ಟ್ರೋಕ್‌ನಿಂದ ಬದುಕಿನಲ್ಲಿ ಆಸಕ್ತಿಯನ್ನೇ ಕಳೆದುಕೊಂಡಿದ್ದ, ವ್ಹೀಲ್‌ಚೇರಲ್ಲಿ ಕುಳಿತು ಕುಳಿತು ಜಗತ್ತನ್ನು ನೋಡುವ ಸ್ಥಿತಿಯಲ್ಲಿದ್ದ ಬೆಂಗಳೂರಿನ ನಂದಿನಿ ಲೇ ಔಟ್‌ನ  ಸ್ವರ್ಣಲತಾ, ಗಾಯಕಿಯಾಗಿ, ಛಾಯಾಗ್ರಾಹಕಿಯಾಗಿ, ಅದ್ಭುತ ಭಾಷಣಗಾರ್ತಿಯಾಗಿ ಸುಮಾರು ೩೦೦೦ಕ್ಕೂ ಹೆಚ್ಚು ಮೋಟಿವೇಷನಲ್ ಸ್ಪೀಕರ್ ಆಗಿ ಮಾಡೆಲಿಂಗ್ ಕ್ಷೇತ್ರದಲ್ಲೂ ಮಿಂಚುತ್ತ, ಅಡುಗೆ ಸ್ಪರ್ಧೆ, ಸಂಗೀತ ಕಚೇರಿಯಲ್ಲಿ ಭಾಗವಹಿಸುತ್ತಿರುವುದರ ಸುಂದರ ಬರಹ ಇದರಲ್ಲಿದೆ. ಬೈಕ್ ಸವಾರಿಯಲ್ಲಿ ತುಂಬಾ ಆಸಕ್ತಿ ಉಳ್ಳವನು ಬೆಂಗಳೂರಿಗೆ ಹೋಗುವಾಗ ಬೈಕ್ ಅಪಘಾತವಾಗಿ ಎರಡೂ ಕಾಲು ಕಳೆದುಕೊಂಡರೂ, ಇನ್ನೊಬ್ಬರ ಸಹಾಯವಿಲ್ಲದೆ ನಡೆಯಬಲ್ಲೆ ಎಂಬ ಆತ್ಮವಿಶ್ವಾಸ ಹೊಂದಿ ಒಬ್ಬನೇ ಲಡಾಖ್‌ಗೆ ಬೈಕಿನಲ್ಲಿ ಹೋಗಿ ಬಂದಿದ್ದಲ್ಲದೆ, ಸಿನಿಮಾದಲ್ಲಿ ನಟಿಸಿದ ರೋಚಕ ಕಥೆ ಇದೆ.
 ಹೆಣ್ಣು ಹೆತ್ತ ಕಾರಣಕ್ಕೆ ಅತ್ತೆ ಮನೆಯ ಮೂರನೇ ಮಹಡಿಯಿಂದ ಕೆಳಕ್ಕೆ ತಳ್ಳಲ್ಪಟ್ಟ ಪೂನಂ ರಾಯ್, ಬೆನ್ನು ಹುರಿ ಮುರಿದು ಹೋದರೂ ೧೫ ವರ್ಷ ಜೀವಚ್ಛವವಾಗಿ, ನಂತರ ಫಿಜಿಯೋಥೆರಪಿ ಚಿಕಿತ್ಸೆ ನಂತರ ಫಿಟ್ ಆಗಿ ಎನ್ ಜಿಓ ಆರಂಭಿಸಿ ಹೆಣ್ಣು ಮಕ್ಕಳಿಗೆ ಆತ್ಮರಕ್ಷಣೆಯ ಶಿಕ್ಷಣವನ್ನು ಕೊಡುತ್ತಿದ್ದಾರೆ.
ಕೈ ಕಾಲು ಇಲ್ಲದಿದ್ದರೂ. ಆರ್ಥಿಕವಾಗಿ ಜರ್ಜರಿತರಾಗಿದ್ದರೂ, ಕೆಲವರು ಅನೇಕರ ಸಹಾಯ ಪಡೆದು ಧೈರ್ಯದಿಂದ ಮೇಲೆದ್ದು ನಿಂತು  ಅನೇಕ ಸಾಧನೆ ಮಾಡಿದವರ ಕಥೆ ಇದರಲ್ಲಿದೆ. ಇವೆಲ್ಲವೂ ಸಾಧನೆ ಮಾಡಲೇಬೇಕೆಂಬ ಛಲವುಳ್ಳವರಿಗೆ ಮಾಗ್ದರ್ಶನ ನೀಡಬಲ್ಲವು.  
...................

Comments

Popular posts from this blog