ಹೃದಯ ತಟ್ಟುವ
‘ಕಾನನದ ಕುಸುಮ’
‘ಕಾನನದ ಕುಸುಮ’ ಇದು ಉಪನ್ಯಾಸಕಿ ಶುಭಲಕ್ಷ್ಮಿ ಆರ್. ನಾಯಕ ಅವರ ರಚನೆಯ ಕವನ ಸಂಕಲನ. ಇದರಲ್ಲಿ ಹೃದಯ ತಟ್ಟುವ ಕವನಗಳಿವೆ. ಸುಂದರ ರಚನೆಯ ಈ ಕವನಗಳು ಸ್ಪಷ್ಟ ಸಂದೇಶವನ್ನು ನೀಡುವಂತಹವು. ಕವನಗಳಲ್ಲಿ ಮಾನವೀಯ ಮೌಲ್ಯಗಳು, ನಾಡ ಪ್ರೇಮ, ದೇಶಪ್ರೇಮವಿದೆ. ಪ್ರಕೃತಿ, ರೈತ, ಬದುಕು, ಪ್ರಜಾಪ್ರಭುತ್ವ, ನದಿ, ಮಳೆ, ಬೇಸಾಯ, ಕನ್ನಡ ನಾಡು, ನೆನಪು, ಭಾವೈಕ್ಯತೆ, ದುಡಿಮೆ, ಗುರು, ನಾರಿ ಶಕ್ತಿ ..ಹೀಗೆ ವೈವಿಧ್ಯಮಯ ವಿಷಯ ವಸ್ತುಗಳನ್ನು ತಮ್ಮ ಅನುಭವದ ಆಧಾರದಲ್ಲಿ ಸುಂದರವಾಗಿ ಅಭಿವ್ಯಕ್ತಿಗೊಳಿಸಿದ್ದಾರೆ. ಪ್ರಕೃತಿ ಕುರಿತಾಗಿ ವಿಶೇಷವಾಗಿ ಹೆಚ್ಚಿನ ಕವನಗಳು ಇಲ್ಲಿರುವುದನ್ನು ಗಮನಿಸಿದಾಗ ಅವರ ಕಾಳಜಿಯನ್ನು ಗಮನಿಸಬಹುದು.
ಪ್ರತಿ ಕವನದಲ್ಲೂ ಒಂದು ಸಂದೇಶವಿದೆ. ನೀತಿ ಇದೆ. ಕವನವನ್ನು ಓದಿದಾಗ ಪ್ರತಿಯೊಬ್ಬರೂ ಇದನ್ನು ಅಳವಡಿಸಿಕೊಳ್ಳಬೇಕು ಎಂಬ ಸೂಚನೆ ಸಿಗುತ್ತದೆ. ಇದರಿದಮ ಪ್ರಾಮಾಣಿಕ ಬದುಕು ನಮ್ಮದಾಗುತ್ತದೆ. ಕವನಗಳೆಲ್ಲ ತುಂಬಾ ಸರಳ ಮತ್ತು ಅರ್ಥಪೂರ್ಣವಾಗಿವೆ. ಕವಿತೆಗಳು ಛಂದೋಬದ್ಧ ರಚನೆಗಳಲ್ಲಿ, ಮಾತ್ರೆ, ಗಣಗಳೊಂದಿಗೆ ಇರುವುದನ್ನು ಗಮನಿಸಬಹುದು. ನಾಡಗೀತೆಗಳು ಅಥವಾ ಕನ್ನಡದ ಗೀತೆಗಳು ಇದರಲ್ಲಿದ್ದು, ಇವು ಅತ್ಯಂತ ಸುಂದರ ರಚನೆಯಾಗಿವೆ. ಸಾಮೂಹಿಕ ಗಾಯನಕ್ಕೆ ಯೋಗ್ಯವಾದ ರೀತಿಯಲ್ಲಿ ಇವೆ. ಕನ್ನಡ ಮತ್ತು ಕನ್ನಡ ತಾಯಿಯ ಬಗ್ಗೆ ಇರುವ ಅವರ ಪ್ರೀತಿ, ನೆಲದ ವಾತ್ಯಲ್ಯವನ್ನು ಇಲ್ಲಿ ಕಾಣಬಹುದು.
ಮೊದಲ ಕವನ ‘ಭೂಮ್ತಾಯಿ ಬರಡಾಗಲು’ ಇದರಲ್ಲಿ ಪರಿಸರವನ್ನು ನಾಶಪಡಿಸಿದ್ದಕ್ಕಾಗಿ ನೀರಿಗಾಗಿ, ನೆರಳಿಗಾಗಿ ಪರಿತಪಿಸುವಂತಾಗಿದೆ. ಹನಿ ನೀರಿಗೂ ಜನ ಪರದಾಡುವಂತಾಗಿದೆ. ಮಳೆ ಬರುತ್ತಿಲ್ಲ. ಭೂಮಿತಾಯಿಯನ್ನು ಚೆನ್ನಾಗಿ ನಾವು ನೋಡಿಕೊಂಡರೆ ಹೀಗೆ ಮನುಕುಲದ ಉಳಿವು ಎನ್ನುತ್ತಾರೆ. ಜಪವ ಮಾಡಲು ಮಳೆ ಹನಿ ಹನಿಸದು/ ತಪಕೆ ಕಲಿಯುಗದಿ ಜಲಧಾರೆ ಹರಿಯದು/ ಸಾಲು ಗಿಡಗಳ ನೆಟ್ಟು ಬೆಳೆಸಿದರೆ ಮನುಜ/ ಕಾಲಕಾಲಕ್ಕೆ ಮಳೆ ಬೆಳೆ ಎಂಬುವುದೆ ಸಹಜ/ ಎಂದು ಹೇಳುತ್ತಾರೆ. ‘ಪ್ರಕೃತಿ ಐಸಿರಿ’ಯಲ್ಲಿ ಪ್ರಕೃತಿ ಮಡಿಲೇ ಮನುಜಗೆ ಚೆಂದ ಎನ್ನುತ್ತಾರೆ. ಹಚ್ಚ ಸಸುರಿನ ವನಸಿರಿ, ಹರಿಯುವ ಜಲಝರಿ, ಮುತ್ತಿಕ್ಕುವ ಗಿರಿಶಿಖರ, ಶುದ್ಧ ವಾಯು ನಮ್ಮ ಜೀವದುಸಿರಾಗಿವೆ. ಇದನ್ನೆಲ್ಲ ಅಂದರೆ ಪ್ರಕೃತಿಯ ಈ ಐಸಿರಿಯನ್ನು ಉಳಿಸುವ ಕೆಲಸವಾಗಲಿ ಎನ್ನುತ್ತ್ತಾರೆ.
ಪ್ರಸ್ತುತ ಕವನ ಸಂಕಲನದಲ್ಲಿ ಅತಿ ಹೆಚ್ಚು ಪ್ರಾಮುಖ್ಯತೆಯನ್ನು ಪ್ರಕೃತಿಗೆ ಕವಯತ್ರಿ ನೀಡಿದ್ದಾರೆ. ಮರಗಿಡ ನಾಶ, ಭುವಿಯೊಡಲ ವಿರಹಾಗ್ನಿ, ಆಗದಿರು ದಾನವ, ನೆರಳು ಹಸನಾಗಲಿ ಬದುಕು, ಪ್ರಕೃತಿ ಬೆಸುಗೆ ಪ್ಲಾಸ್ಟಿಕ್ ದೈತ್ಯ, ಜೀವಜಾಲ ಜೋಡಿಸಿ, ತಾಯಿಗ ಬಗೆದೆಯಾ ಕೇಡು, ಅನ್ನದಾತನ ಅಳಲು ಮೊದಲಾದ ಕವನಗಳಲ್ಲಿ ವನ, ಜಲರಾಶಿಯ ಜೊತೆಯಿಂದ ಮಾಲಿನ್ಯವಿರದೆ ಪರಿಸರವನ್ನು ಪ್ರಕೃತಿ ಕಟ್ಟಿಕೊಟ್ಟಿದೆ. ಪ್ರಾಣಿ -ಪಕ್ಷಿಗಳಿಗೆ ಮನುಜನಿಗೆ ಇದು ಸಹಕಾರಿ ಹಾಗೂ ನಮ್ಮನ್ನು ಚೇತೋಹಾರಿಯಾಗಿಸಿವೆ. ಸಂಕುಲಗಳು ಉಳಿಯಲಿ ಹಾರೈಸುತ್ತಾರೆ. ತೊರೆಗಳು ಇಲ್ಲದೆ ಕೆರೆಗಳು ಬತ್ತಿವೆ/ ಭೂಮಿಯು ಬಿರುಕನು ಬಿಟ್ಟಿಹುದು/ ಹಸಿರದು ಕಾಣದೆ ತಂಪನು ಹೊಂದದೆ/ ಸಂಕುಲ ಉರಿಯಲಿ ಬೆಂದಿಹುದು ಎಂದು ಗಮನ ಸೆಳೆಯುತ್ತಾರೆ. ಮಳೆ ಹನಿ ಹನಿಯದೆ ಕ್ಷಾಮ ಎದುರಾಗಿದೆ. ಮರ-ಗಿಡ ಬೆಳೆಸಿ ಹಸಿರನ್ನು ಬೆಳೆಸಿ. ಆ ಮೂಲಕ ಮಳೆಯನ್ನು ತರಿಸಲು ಶ್ರಮಿಸೋಣ ಎನ್ನುತ್ತಾ ಅಹಂಕಾರದಲ್ಲಿ ಜೀವಸಂಕುಲವನ್ನು ಹೊಡೆದುರುಳಿಸಿ ನಾವು ದಾನವರಾಗಬಾರದು. ಭೂದೇವಿಯ ಕಂಗಳಲ್ಲಿ ಕಂಬನಿ ತರಿಸಬಾರದು. ವಿಕೃತಿ ಬಿಟ್ಟು ವಿನಾಶದ ಬುದ್ಧಿಯನ್ನು ತ್ಯಜಿಸಿದರೆ ಪರಿಸರವನ್ನು ಉಳಿಸಬಹುದು ಎಂದು ಹೇಳುತ್ತಾರೆ
‘ಕನ್ನಡವಾಗಿರು’ ಎಂಬ ಕವನದಲ್ಲಿ ಕನ್ನಡ ಭಾಷೆಯನ್ನು ನಿರಂತರ ಬಳಸುತಿರು/ ಚಿನ್ನದ ನಾಡಿಗಾಗಿ ಕಾಯಕವ ಮಾಡುತಿರು/ ಮೃದು ಮಧುರ ಭಾಷೆಯನು ಎಲ್ಲೆಲ್ಲೂ ಹರಡುತಿರು/ ಎಂದೆಂದಿಗೂ ನೀ ಕನ್ನಡವಾಗಿರು ಕನ್ನಡತರು/ ಎಂದು ಹೇಳಿದರೆ ಇದೇ ರೀತಿಯ ‘ಕರುನಾಡ ವೈಭವ’ ಎಂಬ ಸುಂದರ ಕವನದಲ್ಲಿ ಕನ್ನಡ ಹಣತೆಯ ಮನೆಯಲ್ಲಿ ಇಡುತ/ ಪ್ರೀತಿಯ ತೈಲವ ಎರೆಯೋಣ/ ಉರಿಯುವ ಭಕ್ತಿಯ ತೆರದಲ್ಲಿ ಜಗಕೆ/ ಪ್ರಭೆಯನ್ನು ಹರಡುತ ಬೆಳಗೋಣ/ ಎನ್ನುತ್ತಾರೆ. ಇಲ್ಲಿ ಕವಯತ್ರಿಯ ಬೆಲೆ ಕಟ್ಟಲಾಗದ ಕನ್ನಡ ಪ್ರೇಮವನ್ನು ಕಂಡು ನಿಜಕ್ಕೂ ತಲೆದೂಗಲೇಬೇಕು.
‘ಭುವಿಯ ರಂಗೋಲಿ’ ಗಮನ ಸೆಳೆಯುವಂತಹುದು. ಇಲ್ಲಿ ಭೂಮಿಯ ವರ್ಣನೆ ಸುಂದರವಾಗಿದೆ. ಕವಿಯ ಕಲ್ಪನೆ ಅದ್ಭುತವಾಗಿದೆ. ಸೂರ್ಯ ಉದಯಿಸಲು ಜಡತೆ ಹೋಗಿ ಸುಮಗಳೆಲ್ಲ್ಲ ಹರಡಿ ಸುವಾಸನೆಯನ್ನು ಹರಡುತ್ತವೆ. ಪ್ರಕೃತಿಯ ಒಡಲಲ್ಲಿ ಚಿತ್ತಾರ ಮೂಡುತ್ತದೆ. ದೇವ ಬಿಡಿಸಿದ ರಂಗವಲ್ಲಿಯ ನೋಡು/ ಜೀವಕಳೆಯನು ತುಂಬಿರುವ ಹಾಡು/ ಅವನಿಯಿದು ಸಗ್ಗಕೂ ಮಿಗಿಲಾದ ಬೀಡು/ ಎಂದು ಹಾಡುತ್ತಾರೆ. ‘ಭರವಸೆಯ ಬೆಳಕು’ ಇದರಲ್ಲಿ ಗುರು- ಹಿರಿಯರಿಂದ ನಾವು ಕಲಿತ ಸಂಸ್ಕೃತಿ, ಸಂಯಮ ನಮ್ಮ ಬದುಕಿಗೆ ಆಸರೆಯಾಗಿದೆ. ಹಿರಿಯರ ಆದರ್ಶದ ಬದುಕಿನಲ್ಲಿ ಸಾಗುವುದೇ ವ್ಯಕ್ತಿತ್ವ ವಿಕಸನಕ್ಕೆ ದಾರಿ ಎನ್ನುತ್ತ್ತಾರೆ.
ಇಲ್ಲಿ ಸಾಮಾಜಿಕ ಕಳಕಳಿಯ ಕವನಗಳೂ ಇವೆ. ಹೆಣ್ಣು ಭ್ರೂಣವನು ಹತ್ಯೆಗೈಯ್ಯದಿರಿ/ಅಬಲೆಯಲ್ಲಿ ಸಬಲೆಯೆಂಬ ಸತ್ಯವನರಿಯಿರಿ/ವರದಕ್ಷಿಣೆಗಾಗಿ ಹಿಸಕುದಿರಿ ನೀರೆಯ ಕತ್ತನು/ಬಾಲ್ಯವಿವಾಹ ಮಾಡಿ ಕಟ್ಟದಿರಿ ಕೋಳವನು ಎಂಬ ಎಚ್ಚರಿಕೆ ಕೊಡುತ್ತಾರೆ. ಹೆಣ್ಣು ಮನೆ ಬೆಳಗುವವಳು, ಬಾಳು ಬೆಳಗುವವಳು, ಪ್ರತ್ಯಕ್ಷ ದೇವತೆ, ಹೆಣ್ಣು ಭ್ರೂಣ ಹತ್ಯೆಯನು ಎಲ್ಲರೂ ಸೇರಿ ತಡೆಯಬೇಕಿದೆ. ಸ್ತ್ರೀಯ ಬದುಕಿಗೆ ಸಾಟಿ ಯಾರೆಂದು ಪ್ರಶ್ನಿಸುತ್ತಾರೆ (ಸ್ತ್ರೀ ಎಂಬ ದೀಪ). ಇದರಂತೆ ನೀರೆಯ ಕನಸು, ತಾಯ ಗರ್ಭ, ಅಮ್ಮಾ ಎಂದರೆ, ಮೊದಲ ಗುರು, ನಾರಿಶಕ್ತಿ, ಅಮ್ಮಾ ನೀನೇ ನಾವೆ ಮೊದಲಾದ ಕವನಗಳು ಮಾತೆಯ ಬಗ್ಗೆ ಇವೆ.
ಹೀಗೆ ಇಲ್ಲಿನ ಕವಿತೆಗಳೆಲ್ಲ ನಮ್ಮನ್ನು ಸೆರೆಹಿಡಿಯುವ ಗುಣವನ್ನು ಹೊಂದಿವೆ. ಏಕೆಂದರೆ ಇದರ ವಿಷಯಗಳು ಪ್ರತಿದಿನ ಸಮಾಜದಲ್ಲಿ ಕಣ್ಣೆದುರೇ ಕಾಣುವಂತಹವು. ಜೊತೆಗೆ ಕೆಲವು ನಾವು ಅನುಭವಿಸುತ್ತಿರುವ ಸಮಸ್ಯೆಗಳಾಗಿವೆ. ನೀತಿಬೋಧೆ ಜೊತೆ ಮಾನವೀಯ ಮೌಲ್ಯಗಳನ್ನು ಇಲ್ಲಿ ಸಾರಿದ್ದಾರೆ.
.........................

Comments
Post a Comment