ಕೌಟುಂಬಿಕ ಚೌಕಟ್ಟಿನ
‘ಅನ್ನಪೂರ್ಣ’
‘ಅನ್ನಪೂರ್ಣ’ ಇದೊಂದು ಸೊಗಸಾದ ಕೌಟುಂಬಿಕ ಚೌಕಟ್ಟನ್ನು ಹೊಂದಿರುವ, ಕುತೂಹಲಕರ ಕಥಾಹಂದರದ ಕಾದಂಬರಿ. ಇದರ ಲೇಖಕರು ಭಾರತಿ ಪ್ರಸಾದ ಕೊಡ್ವಕೆರೆ. ತುಂಟತನದ ಹುಡುಗಿಯೊಬ್ಬಳು ತನ್ನ ಮನೆಯವರಿಂದಲೇ ಉಪೇಕ್ಷ್ಷೆಗೆ ಒಳಗಾಗುವುದು, ಜವಾಬ್ದಾರಿ ಬರಲೆಂದು ಬೆಂಗಳೂರಿನ ಸಂಬಂಧಿಕರ ಮನೆಗೆ ಕೆಲಸಕ್ಕೆ ಕಳುಹಿಸುವುದು, ಅಲ್ಲಿ ಮನೆಯ ಒಡತಿಯ ಗಯ್ಯಾಳಿತನ, ನಿರ್ಲಕ್ಷ್ಯಕ್ಕೆ ತುತ್ತಾಗುವುದು, ವಿಫಲ ಪ್ರೇಮ ಎದುರಾಗುವುದು, ನಂತರ ಆ ಮನೆ ಬಿಟ್ಟು ಅಕ್ಕನ ಮನೆ ಸೇರುವುದು, ಅಲ್ಲಿಂದ ಗಾರ್ಮೆಂಟ್ ಒಂದರಲ್ಲಿ ಕೆಲಸಕ್ಕ್ಕೆ ಸೇರುವುದು, ಎಸ್ಸೆಸೆಲ್ಸಿ, ಪಿಯು, ಡಿಗ್ರಿ ಪಾಸು ಮಾಡುವುದು, ಈ ವೇಳೆ ಸಂಜೆ ಕಾಲೇಜಿನಲ್ಲಿ ಉಪನ್ಯಾಸಕನಾಗಿ ಸಿಕ್ಕವನೇ ಆಕೆಯ ಬಾಳಿನ ಯಜಮಾನನಾಗುವುದು... ಹೀಗೆ ಜೀವನದಲ್ಲಿ ನತದೃಷ್ಟೆಯಾದ ಒಬ್ಬ ಹುಡುಗಿ ಸತತ ವೈಫಲ್ಯಗಳನ್ನು ಕಂಡು ನಂತರ ಯಶಸ್ಸನ್ನು ಕಾಣುವುದು, ಸುಖ ಜೀವನಕ್ಕೆ ಕಾಲಿಡುವುದು ಕಾದಂಬರಿಯ ಕಥಾ ವಸ್ತು. ಇದು ಸತ್ಯ ಘಟನೆಯಾದರೂ ಸಂಪೂರ್ಣ ನೈಜವಲ್ಲ ಎಂದು ಕಾದಂಬರಿಗಾರ್ತಿಯೇ ಹೇಳಿಕೊಂಡಿದ್ದಾರೆ.
ಪೂರ್ಣ ಅಥವಾ ಅನ್ನಪೂರ್ಣ ಈ ಕಾದಂಬರಿಯ ನಾಯಕಿ.
ತನಗೆ ಇಬ್ಬರೂ ಹೆಣ್ಣು ಮಕ್ಕಳೇ ಹುಟ್ಟಿದರೆಂಬ ಕಾರಣಕ್ಕೆ ಹೆಂಡತಿಯ ಮೇಲಿನ ಕೋಪದಿಂದ ಆಕೆಯನ್ನು ಗಂಡನ ಮನೆಗೆ ಬಿಟ್ಟು ಬರುವುದು, ತಂದೆ, ತಾಯಿ ಮನೆಯಲ್ಲಿ ಮಕ್ಕಳಾದ ಸರ್ವಮಂಗಳ ಮತ್ತು ಅನ್ನಪೂರ್ಣ ಬೆಳೆಯುವುದು, ಅಕ್ಕ ಡಿಗ್ರಿ ಮುಗಿಸಿ ಬೆಂಗಳೂರಿನಲ್ಲಿ ಪುಟ್ಟ ಕೆಲಸಕ್ಕೆ ಸೇರಿದರೂ ಪೂರ್ಣ ಎಸ್ ಎಸ್ ಎಲ್ ಸಿ ಯನ್ನು ಪಾಸು ಮಾಡಲಾಗದೆ ಊರಿನ ಮಕ್ಕಳನ್ನು ಕಟ್ಟಿಕೊಂಡು ಮರ ಹತ್ತುವುದು, ಬೇರೆಯವರ ತೋಟದ ಹುಣಸೆಕಾಯಿ ಕೀಳುವುದು, ಇಡೀ ದಿನ ಪುಂಡಾಟಿಕೆ, ಮಕ್ಕಳೊಂದಿಗೆ ಆಟವಾಡುವುದು ಮೊದಲಾದವುಗಳಲ್ಲಿ ನಿರತಳಾಗಿರುತ್ತಾಳೆ. ಊರವರು ಬಂದು ಈಕೆ ಬಗ್ಗೆ ದೂರು ಹೇಳುವುದು, ಜವಾಬ್ದಾರಿ ಇಲ್ಲದಂತೆ ವರ್ತಿಸುವ ಪೂರ್ಣಳಿಗೆ ತಾಯಿ ಕೆನ್ನೆಗೆ ಹೊಡೆಯುತ್ತಾಳೆ. ನಂತರ ಸಹೋದರರೊಂದಿಗೆ ಚರ್ಚಿಸಿ ಬೆಂಗಳೂರಿನಲ್ಲಿರುವ ಅಕ್ಕನಲ್ಲಿಗೆ ಕಳಿಸಲು ಯೋಚನೆ ಮಾಡುತ್ತಾರೆ ಆದರೆ ಆಕೆಯ ಕಷ್ಟಪಟ್ಟು ದುಡಿದು ತಿನ್ನುತ್ತಿರುವಾಗ ಇವಳ ಜವಾಬ್ದಾರಿಯನ್ನು ಅವಳಿಗೆ ಹೊರಿಸುವುದು ಬೇಡವೆಂದು ನಿರ್ಧರಿಸಿ ಬೆಂಗಳೂರಿನಲ್ಲಿರುವ ಸಂಬಂಧಿ ಅಶೋಕ ಮನೆಗೆ ಕೆಲಸಕ್ಕೆ ಕಳಿಸುತ್ತಾರೆ. ಅಶೋಕ ಪ್ರೀತಿ ಇಲ್ಲದ ಈ ಹುಡುಗಿಯನ್ನು ಚೆನ್ನಾಗಿ ನೋಡಿಕೊಳ್ಳುವುದಾಗಿ ಭರವಸೆ ಕೊಡುತ್ತಾನೆ. ಆದರೆ ದಿನಗಳು ಕಳೆದಂತೆ ರೇವತಿಯ ಗಯ್ಯಾಳಿ ರೂಪ ಗೊತ್ತಾಗುತ್ತದೆ. ಅಶೋಕ್ ಮಾತ್ರ ಅವಳನ್ನು ಮಗಳಂತೆ ಕಾಣುತ್ತಾನೆ.
ಈ ಮಧ್ಯೆ ಪೂರ್ಣ ಮನೆಯ ವಸ್ತುಗಳನ್ನು ಖರೀದಿಸಲು ಸಮೀಪದಲ್ಲಿದ್ದ ರಾಮಣ್ಣನ ಅಂಗಡಿಗೆ ಹೋಗುತ್ತಿದ್ದುದರಿಂದ ಅವನ ಮಗ ವಿನಾಯಕನ ಬಲೆಗೆ ಬೀಳುತ್ತಾಳೆ. ಎಸ್ಸೆಸೆಲ್ಸಿ ಪಾಸು ಮಾಡಲು ಅಶೋಕ್ ಹೇಳಿದಾಗ ರೇವತಿ ರಾದ್ಧಾಂತ ಮಾಡಿ, ಆಕೆ ಮನೆ ಕೆಲಸ ಮಾಡಲಿ, ಕಲಿತು ಮಾಡುವುದೇನಿದೆ ಎಂದು ಬಿರುನುಡಿದರೂ ಕಿವಿಗೆ ಹಾಕಿಕೊಳ್ಳದೆ ಟ್ಯೂಶನ್‌ಗೆ ಹಾಕಿದಾಗ ವಿನಾಯಕ ಇವಳನ್ನು ಸಂಧಿಸುವುದು, ಕರೆದುಕೊಂಡು ಬರುವ ಮೂಲಕ ಆಕೆಯ ಸಂಪೂರ್ಣಳ ಮನ ಕದಿಯುತ್ತಾನೆ. ಅಂಗಡಿಗೆ ಹೋದಾಗ ಭೇಟಿಯಾಗುವುದು, ಪ್ರೀತಿ ಪ್ರೇಮದ ವಿಚಾರ ಮಾತನಾಡುವುದನ್ನು ಮಾಡುತ್ತಾರೆ. ಇದನ್ನು ಕಂಡ ಅಶೋಕನ ಮಗ ಚೇತನ್ ವಿನಾಯಕನಿಗೆ ರಾತ್ರಿ ಕಾದು ಹೊಡೆದು ಕೈ ಮುರಿಯುತ್ತಾನೆ. ರಾಮಣ್ಣ ಮಗನನ್ನು ಹೆಚ್ಚಿನ ಓದಿಗೆ ಬೇರೆಡೆಗೆ ಕಳಿಸುತ್ತಾನೆ.
ಈ ವಿಫಲ ಪ್ರೇಮದ ಬಳಿಕ ಪೂರ್ಣ ಡಲ್ ಆಗಿರುತ್ತಾಳೆ. ಅಶೋಕ್‌ಗೆ ವಿಷಯ ಗೊತ್ತಾಗುತ್ತದೆ.
ಕೆಲವು ದಿನದಲ್ಲಿ ಪೂರ್ಣಾಳ ಎಸ್ ಎಸ್ ಎಲ್ ಸಿ ಫಲಿತಾಂಶ ಬರುತ್ತದೆ. ಖುಷಿಯಿಂದ ಸಂತೋಷ ಹಂಚಿಕೊಳ್ಳಲು ಮನೆಗೆ ಬಂದರೆ ಅಶೋಕ್‌ಗೆ ಹೃದಯಾಘಾತದ ಜೊತೆಗೆ ಸ್ಟ್ರೋಕ್ ಬಡಿದು ಆಸ್ಪತ್ರೆಗೆ ದಾಖಲಾಗಿರುತ್ತಾನೆ ದಿನಗಳ ನಂತರ ಚೇತರಿಕೆಗೊಂಡಾಗ ಆಕೆ ಎಸ್ ಎಲ್ ಸಿ ಪಾಸಾದ ವಿಚಾರ ಗೊತ್ತಾಗುತ್ತದೆ. ಅವಳನ್ನು ಹರಸುತ್ತಾನೆ. ಅಶೋಕ್ ಆರೈಕೆಗೆ ರೂಮಿನಲ್ಲಿದ್ದ ರೇವತಿ ಅಶೋಕನಿಂದ ಆಸ್ತಿ ಬರೆಸಿಕೊಂಡು ಕೊಲ್ಲುವ ಸಂಚು ಹೂಡುತ್ತಾಳೆ. ಇದನ್ನು ಪೂರ್ಣ ನೋಡಿದ್ದರಿಂದ ಹೆದರುತ್ತಾಳೆ. ನಂತರ ಘಟನೆಯನ್ನು ಅಶೋಕ್ ಪೂರ್ಣಗೆ ವಿವರಿಸುತ್ತಾನೆ ಒಂದು ದಿನ ಅಶೋಕ್ ಒಂದು ಲಕೋಟೆಯನ್ನು ತರಿಸಿ ಅದರಲ್ಲಿ ಒಂದು ಪತ್ರ ಬರೆದು ಹಾಕಿ ಪೂರ್ಣ ಕೈಗೆ ಕೊಟ್ಟು ಪೋಸ್ಟ್ ಮಾಡಿ ಬರಲು ತಿಳಿಸುತ್ತಾನೆ. ಮತ್ತೊಂದು ಕವರನ್ನು ಪೂರ್ಣಳ ಕೈಯಲ್ಲಿ ಕೊಡುತ್ತಾರೆ.
ಕೆಲವೇ ದಿನದಲ್ಲಿ ಅಶೋಕ್ ಸಾವಿಗೀಡಾಗುತ್ತಾನೆ. ನಂತರ ಪೂರ್ಣ ತನ್ನ ಅಕ್ಕ ಸರ್ವಮಂಗಳ ಮನೆಗೆ ಬರುತ್ತಾಳೆ. ಅಲ್ಲಿ ತನ್ನ ಭಾವನಲ್ಲಿ ತನಗೊಂದು ಕೆಲಸ ಕೊಡಿಸುವಂತೆ ಹೇಳುತ್ತಾಳೆ. ಆತ ಗಾರ್ಮೆಂಟ್ಸ್ ಒಂದರಲ್ಲಿ ಕೆಲಸವನ್ನು ಕೊಡಿಸುತ್ತಾನೆ. ಗೆಳತಿ ಆಶಾ ತನ್ನ ಸಹೋದರಿಯಂತೆ ಪೂರ್ಣಳನ್ನು ನೋಡಿಕೊಳ್ಳುತ್ತಾಳೆ. ಆಕೆಗೆ ಪಿಯು ಓದುವಂತೆ ಸಲಹೆ ಕೊಟ್ಟು ಸಂಜೆ ಕಾಲೇಜಿಗೆ ಅಡ್ಮಿಶನ್ ಮಾಡಿಸಿ ಬರುತ್ತಾಳೆ. ಪಿಯು ಪಾಸಾಗಿ ಪದವಿಗೂ ಸೇರುತ್ತಾಳೆ. ಕಾಲೇಜಿನಲ್ಲಿ ನವೀನ್ ಎನ್ನುವ ಯುವ ಉಪನ್ಯಾಸಕನ ಪರಿಚಯವಾಗುತ್ತದೆ ನವೀನ್ ಬೆಳಗ್ಗೆ ಆಟೋ ಓಡಿಸುತ್ತಾ ರಾತ್ರಿ ಉಪನ್ಯಾಸಕನಾಗಿರುತ್ತಾನೆ. ಈತ ಆಶಾಳ ಉತ್ತಮ ಗೆಳೆಯನಾಗಿರುತ್ತಾನೆ. ಹೀಗಾಗಿ ಪೂರ್ಣಳ ಬಗ್ಗೆಯೂ ಆತ್ಮಿಯತೆ ಹೆಚ್ಚುತ್ತದೆ. ಆಕೆಯನ್ನು ಇಷ್ಟಪಡಲು ಆರಂಭಿಸುತ್ತಾನೆ. ಆಶಾಳ ವಿವಾಹ ನಿಶ್ಚಯವಾಗಿ ಮದ್ವೆಯಾಗಿ ಆಕೆ ಊರು ಸೇರುತ್ತಾಳೆ. ರೂಮಿನಲ್ಲಿ ಪೂರ್ಣ ಒಂಟಿಯಾಗಿದ್ದರೂ ನವೀನ್ ಆಗಾಗ ಬರುತ್ತಿರುತ್ತಾನೆ. ಒಮ್ಮೆ ವಿಪರೀತ ಜ್ವರ ಬಂದಾಗ ಆತನೇ ವೈದ್ಯರ ಬಳಿ ಕರೆದೊಯ್ದು ನಂತರ ಕೆಲವು ದಿನದ ಆರೈಕೆಗಾಗಿ ತನ್ನ ಮನೆಗೆ ಕರೆತರುತ್ತಾನೆ. ಈ ಮಧ್ಯೆ ಆತನ ತಾಯಿ ಸಹ ಊರಿನಲ್ಲಿ ಹೃದಯಾಘಾತದಿಂದ ಸಾವಿಗೀಡಾಗುತ್ತಾಳೆ.
ಊರಿನಿಂದ ಬಂದ ನಂತರ ಇಬ್ಬರೂ ವಿವಾಹದ ನಿರ್ಧಾರಕ್ಕೆ ಬಂದರೂ ಡಿಗ್ರಿ ಮುಗಿದ ಮೇಲೆ ದಾಂಪತ್ಯಕ್ಕೆ ಕಾಲಿಡಲು ನಿಶ್ಚಯಿಸುತ್ತಾರೆ. ಡಿಗ್ರಿಯನ್ನೂ ಪಾಸಾದ ಬಳಿಕ ಮದುವೆ ನಿಶ್ಚಯವಾಗುತ್ತದೆ. ತನ್ನ ಬಾಲ್ಯದ ಊರಿನವರನ್ನೆಲ್ಲ ಕರೆದು ಬರುತ್ತಾಳೆ. ದಾರಿಯಲ್ಲಿ ಬರುವಾಗ ಗಣಪತಿ ಗುಡಿಯಲ್ಲಿ ವಿಶೇಷ ಪೂಜೆ ನಡೆಯುತ್ತಿರುತ್ತದೆ. ಅಲ್ಲಿ ಲಾಯರ್ ವೆಂಕಟೇಶ್ ಅವರ ಪರಿಚಯವಾಗುತ್ತದೆ. ಅವರು ಕೂಡ ಅಶೋಕ್ ಫ್ಯಾಮಿಲಿ ಫ್ರೆಂಡ್ ಆಗಿರುತ್ತಾರೆ. ಪೂರ್ಣಾಳ ಹೆಸರು ಕೇಳಿದ ತಕ್ಷಣ ಕರೆದು ಮಾತನಾಡಿಸುತ್ತಾರೆ. ಅಶೋಕ್ ಅವರು ತನಗೆ ಒಂದು ಕವರನ್ನು ಕೊಟ್ಟಿದ್ದನ್ನು ನೆನಪು ಮಾಡುತ್ತಾರೆ.
ಈ ಕವರ್ ಕೊಡಲು ಪೂರ್ಣಳನ್ನು ಹುಡುಕಾಡಿದ್ದಾಗಿ ಹೇಳುತ್ತಾರೆ. ತಮ್ಮ ಮನೆಗೆ ಕರೆದುಕೊಂಡು ಹೋಗಿ ಪೂರ್ಣ ಕೈಗೆ ಕವರ್ ಒಪ್ಪಿಸುತ್ತಾರೆ. ಆನಂತರ ಅಶೋಕನ ಹೆಂಡತಿ ರೇವತಿ ಮತ್ತು ಮಗ ಚೇತನ್ ಬಗ್ಗೆ ವಿಚಾರಿಸಿದಾಗ ಅವರು ಮಾಡಿದ ಪಾಪಕ್ಕೆ ಫಲವಾಗಿ ಮನೆಯನ್ನು ಮಾರಿ ಅಮೆರಿಕಕ್ಕೆ ಹೋಗಿದ್ದಾರೆ ಎಂಬ ಮಾಹಿತಿಯನ್ನು ಹೇಳುತ್ತಾರೆ. ಆ ಕವರ್ ಬಿಡಿಸಿ ನೋಡಿದಾಗ ಅಶೋಕ್ ಅವರ ದುಡಿಮೆಯ ಹಣವನ್ನು ಪೂರ್ಣಾಳ ಹೆಸರಿಗೆ ಬರೆದಿದ್ದು ಕಂಡುಬರುತ್ತದೆ. ಆದರೆ ಪೂರ್ಣ ತನ್ನಂತಹ ಎಷ್ಟೋ ಹುಡುಗಿಯರ ಊಟ, ವಸತಿ , ಓದಿಗೆ ಬಳಕೆಯಾಗಲಿ ಎನ್ನುತ್ತಾ ಅದನ್ನು ಅನಾಥಾಶ್ರಮಕ್ಕೆ ನೀಡುತ್ತಾಳೆ. ಹೃದಯತುಂಬಿ ಬಂದ ವೆಂಕಟೇಶ್, ನೀನು ಹೆಸರಿಗೆ ಮಾತ್ರ ಅನ್ನಪೂರ್ಣ ಅಲ್ಲ, ನಿಜವಾಗಿಯೂ ಅನಾಥರ ಬಾಳಿಗೆ ಅನ್ನಪೂರ್ಣೆ ಎಂದು ಹೆಮ್ಮೆಯಿಂದ ಹೇಳುತ್ತಾರೆ.
ನಿಶ್ಚಿತಾರ್ಥ ಮುಗಿದು ವಿವಾಹ ನಿಶ್ಚಯವಾಗಿದ್ದರಿಂದ ಗಾರ್ಮೆಂಟ್ ಕೆಲಸ ಬಿಡುತ್ತಾಳೆ. ಈ ಮಧ್ಯೆ ನವೀನ್‌ಗೆ ಸರಕಾರಿ ಕಾಲೇಜಿನಲ್ಲಿ ಕೆಲಸ ಸಿಗುತ್ತದೆ. ಮದುವೆಯಾಗಿ ಹೊಸ ಬಾಳಿಗೆ ನಾಂದಿ ಹಾಡುತ್ತಾರೆ.
.........................

Comments
Post a Comment