ಜೀವನ ದೃಷ್ಟಿಯನ್ನು ಕಾಣಿಸುವ
‘ಕನಸಿನ ದನಿ’
‘ಕನಸಿನ ದನಿ’ ಇದು ಡಾ|| ಅಜಿತ್ ಹರೀಶ್ ಅವರ ಕವನ ಸಂಕಲನ. ಆದಷ್ಟು ಕಡಿಮೆ ಪದಗಳಲ್ಲಿ, ಪರಿಣಾಮಕಾರಿ ಕವಿತೆ ಕಟ್ಟುವ ಕಲೆಗಾರಿಕೆಯನ್ನು ‘ಕನಸಿನ ದನಿ’ಯಲ್ಲಿ ನಾವು ಕಾಣಬಹುದು. ಇಲ್ಲಿನ ಕವಿತೆ ಸ್ಫುರಿಸುವ ರಸಾಸ್ವಾದನೆಯ ಅನುಭೂತಿಯನ್ನು ನೀಡುತ್ತವೆ. ಕೆಲವು ಕವಿತೆಗಳು ಕವಿತೆಯಾಚೆಗೂ ವಿಸ್ತರಿಸಿಕೊಂಡಿವೆ. ಮನುಷ್ಯ ಸಂಬಂಧಗಳು, ಮನೋವಿಜ್ಞಾನ, ಪರಿಸರದ ಕಾಳಜಿ, ಹಳ್ಳಿಯ ಕುರಿತ ಪ್ರೀತಿ, ಪ್ರೇಮ -ಕಾಮ -ವಿರಹ- ವಿಷಾದ, ಸ್ನೇಹ, ಸೌಹಾರ್ದತೆ ಇಲ್ಲಿನ ಕವಿತೆಯ ಪ್ರಮುಖ ವಿಷಯಗಳಾಗಿವೆ.
ಕೆಲವು ಅಪರೂಪದ ಸಂಗತಿಗಳಿಂದಲೂ ಕವನಗಳು ರಚಿಸಲ್ಪಟ್ಟಿವೆ. ವೈವಿಧ್ಯಪೂರ್ಣ ಕವಿತೆಗಳಿಂದ ಕೂಡಿರುವ ಈ ಕವನ ಸಂಕಲನ ಜೀವನ ದೃಷ್ಟಿಯನ್ನು ಕಾಣಿಸುವಂತಿದೆ. ಇಲ್ಲಿ ಅವರ ಭಾಷಾ ಪ್ರಯೋಗ ನಮ್ಮನ್ನು ಸೆಳೆಯುತ್ತದೆ. ಸ್ಥಾಪಿತ ಸಿದ್ಧಾಂತಗಳಿಗೆ ಶರಣಾಗದೆ ಸಶಕ್ತವಾದ ಹೊಸ ಜಾಡನ್ನು ಅನ್ವೇಷಿಸುತ್ತಿರುವುದನ್ನು ಇಲ್ಲಿನ ಕವಿತೆಗಳು ತೋರಿಸುತ್ತವೆ. ಯಥಾರ್ಥತೆಯನ್ನು ಗುರುತಿಸುವ ತಾತ್ವಿಕತೆ ಇಲ್ಲಿನ ಕವಿತೆಗಳಲ್ಲಿ ಕಂಡುಬರುತ್ತದೆ. ಇದು ಕಾವ್ಯಶಕ್ತಿಯೂ ಹೌದು, ಕಾವ್ಯ ಸೌಂದರ್ಯವೂ ಹೌದು.
ಕೃತಿಯಲ್ಲಿ ೪೬ ಕವಿತೆಗಳಿವೆ ಮೊದಲ ಕವಿತೆ ‘ತಿಮಿರ’. ಕತ್ತಲಲ್ಲಿ ಇಣುಕುವ ಬೆಳಕು ಬರುವ ಶಬ್ದ/ ಎಂಥವರನ್ನೂ ಮಾಡುವುದು ಸ್ತಬ್ಧ/ ಎಲ್ಲರೊಳಗೊಬ್ಬ ಕವಿ ಆಗ ರವಿ ಇಲ್ಲ/ ಕಲ್ಪನೆಗೆ ಕಾಲು ಬಾಲ/ ಬೆಳಕನ್ನು ಕಂಡವನಿಗೆ ಕತ್ತಲೆ ಭಯ ಎನ್ನುವುದನ್ನು ಸುಂದರವಾಗಿ ಕವಿತೆಯಲ್ಲಿ ವರ್ಣಿಸಿದ್ದಾರೆ. ಅಕ್ರಮಗಳಿಗೆ ಅಮಾವಾಸ್ಯೆ ಸೂಕ್ತ. ವಿದ್ಯುತ್ ಕಡಿತಗೊಳಿಸಿದರೂ ಅಮಾವಾಸ್ಯೆ ಭಯ ಕಾಡುತ್ತದೆ. ಕತ್ತಲೆಯ ಬಗ್ಗೆ ಬಾಲ್ಯದಲ್ಲಿ ಅಜ್ಜಿ ಹೆದರಿಸಿದ್ದನ್ನು ಇಲ್ಲಿ ಸ್ಮರಿಸುತ್ತಾ ಕತ್ತಲೆಯ ಬಗ್ಗೆ ಕಾಲು-ಬಾಲ ಹಚ್ಚಿ ಮಾತನಾಡುವುದೇ ಅಧಿಕ. ರಕ್ತಕಾರಿ, ಬೆನ್ನ ಮೇಲೆ ಬೆರಳು ಮೂಡಿ, ಗೋಣು ಮುರಿದು ಧ್ವನಿ ಅಡಗಿ ಸತ್ತವರು ಅಂತರ್‌ಪಿಶಾಚಿಯಾಗಿ ನಡೆದಾಡುತ್ತಿರುವುದರ ಬಗ್ಗೆ ಬಾಲ್ಯದಲ್ಲಿ ಹೇಳಿದ್ದನ್ನು ನೆನಪಿಸುತ್ತಾರೆ. ಕತ್ತಲೆ ಎಂದರೆ ಹಗ್ಗ ಹಾವಾಗಿ ಹತನಾಗುವ ಉಪಮೆ/ ಅರಿವ ಹಣತೆ ಆರದಿರೆ ನಿತ್ಯ ಹುಣ್ಣಿಮೆ/ ಎಂದು ಕವನವನ್ನು ಮುಗಿಸುತ್ತಾರೆ.
‘ಪಕ್ಕದ ಮನೆ’ ಕವಿತೆಯಲ್ಲಿ ಇಬ್ಬರು ಇಬ್ಬರಾಗುವ, ಒಂದು ಮನೆ ಎರಡು ಮನೆಗಳಾಗುವ ಪರಿ ಚೆನ್ನಾಗಿದೆ. ಇದರೊಳಗೆ ಭ್ರಮೆ, ಅಧ್ಯಾತ್ಮ, ವಾಸ್ತವ ಎಲ್ಲವೂ ಇದೆ. ತನ್ನ ಪಕ್ಕದ ಮನೆಯ ಖಾಲಿ ಸೈಟಿನಲ್ಲಿ ತನ್ನದೇ ಒಂದು ಭ್ರಾಮಕ ಸ್ಥಿತಿಯನ್ನು ಕಟ್ಟಿಕೊಂಡು ತೇಲುವ ಚಿತ್ರಣವನ್ನು ಈ ಕವಿತೆ ಕಟ್ಟಿಕೊಡುತ್ತದೆ. ಸೈಟಿನಲ್ಲಿ ತನ್ನ ಸುಂದರ ಮನೆಯನ್ನು ಕಟ್ಟಿಕೊಂಡು ಸಾಕಾರಗೊಳಿಸುವ ಕನಸನ್ನು ಕಾಣುತ್ತಾನೆ. ಹೆಂಡತಿ ಆತನನ್ನು ತಟ್ಟಿ ಎಬ್ಬಿಸಿ ವಾಸ್ತವಕ್ಕೆ ತಂದಾಗ ಈ ನಿವೇಶನವನ್ನು ಅವರು ಮಾರಾಟ ಮಾಡಿ ಬೇರೆ ನಿವೇಶನವನ್ನು ಕೊಂಡಿದ್ದಾರೆ ಎಂಬ ವಸ್ತುಸ್ಥಿತಿ ಅರಿವಾಗುತ್ತದೆ. ಪಕ್ಕದ ಮನೆ ಅಷ್ಟು ದೂರವಾಗುತ್ತದೆಯೇ ಎಂದು ಈತ ಪ್ರಶ್ನಿಸಿಕೊಳ್ಳುತ್ತಾನೆ. ಕಾಲ್ಪನಿಕ ಸುಖ ಎನ್ನುವುದು ಕೇವಲ ಮರೀಚಿಕೆ ಎನ್ನುವ ವಿಷಣ್ಣ ಭಾವ ಇಲ್ಲಿ ಕಂಡುಬರುತ್ತದೆ
‘ರಜೆಯ ಮೇಲಿದ್ದೇನೆ’ ಎಂಬ ಕವಿತೆಯಲ್ಲಿ ರಜೆಯ ಮೇಲಿದ್ದರೂ ಅಷ್ಟೇ, ಸ್ವಲ್ಪವೂ ಸುಖವಿಲ್ಲ. ಒಂದೆಡೆ ಮೊಬೈಲಿನ ಕಾಟವಾದರೆ, ಮತ್ತೊಂದೆಡೆ ಹೆಂಡತಿಯ ಕಾಟ. ಹೊರಗೆ ಹೋಗಿ ವಿವಿಧ ವಸ್ತುಗಳನ್ನು ತರುವಂತೆ ವರಾತ ಮಾಡುತ್ತಾಳೆ. ಮನೆಲಿದ್ದರೂ ಗ್ರಾಹಕನಿಂದ ಬಾಸ್‌ನವರೆಗೆ ಫೋನಿನ ಕರೆ ಬಂದು ತಲೆ ಚಿಟ್ಟು ಹಿಡಿಸುತ್ತದೆ. ರಜೆ ಎಂದರೆ ನೆಮ್ಮದಿಯಿಲ್ಲದ ದಿನ ಎಂಬಂತೆ ಬಿಂಬಿಸಿದ್ದಾರೆ. ‘ಹೇ ರಾಮ್’ ಎಂಬ ಕವನದಲ್ಲಿ ಗಾಂಧಿಯನ್ನು ಅಂದು ಗುಂಡಿಕ್ಕಿದರು. ಆದರೆ ಯಾರೂ ಪ್ರಶ್ನಿಸಲಿಲ್ಲ. ಇಂದು ಅವರನ್ನು ಪ್ರಶ್ನಿಸದವರೇ ಇಲ್ಲ. ಆದರೆ ಅವರು ಬಿತ್ತಿದ ಬೀಜ ಫಲ ಕೊಟ್ಟಿದೆ. ಮತ್ತೆ ಹುಟ್ಟುವುದಿಲ್ಲ ಅವರು ಏಕೆಂದರೆ ಅವರು ಸತ್ತಿಲ್ಲ ಎಂದು ಬರೆಯುತ್ತಾರೆ.
‘ಗಂಡಸರೇ ಹೀಗೆ’ ಎಂಬ ಕವನದಲ್ಲಿ ಗಂಡಸರ ಮಾತುಗಳು ಹೊರಬರದೆ ಮೌನದ ಹಾಗೆ ಒಳಗೆ ತುಂಬಿರುತ್ತವೆ. ಮನಸಾರೆ ಅಳಬೇಕೆಂದು, ಭಾವ ತೀವ್ರತೆಯ ಭರಪೂರವನ್ನು ಅನುಭವಿಸಬೇಕೆಂದರೂ ಅದು ಆಗುವುದಿಲ್ಲ ಬಹಿರಂಗದಲ್ಲಿ. ಗೆಳೆಯನ ಹೊಸ ಕಾರನ್ನು ಕಂಡು ಕರುಬದೆ ಒಂದು ಪೆಗ್ಗಿನ ಪ್ರೀತಿಗೆ ಕರಗುತ್ತಾರೆ. ಮಗುವಾಗಿದ್ದಾಗ ಒಂದು ನಮೂನೆ, ಮಗುವಾಗದಾದಾಗ, ಮಗುವಾದಾಗ ಮಗದೊಂದು ನಮೂನೆಯಲ್ಲಿ ಕಾಣುತ್ತಾರೆ ಎಂದು ಹೇಳು ಹೇಳುವ ಮೂಲಕ ಗಂಡಸರ ವಿವಿಧ ಮುಖಗಳನ್ನು ಇಲ್ಲಿ ಚಿತ್ರಿಸಿದ್ದಾರೆ.
‘ದಾದಿಯರು’ ಎಂಬ ಕವನದಲ್ಲಿ ದಾದಿಯರ ಕರ್ತವ್ಯ, ಅವರ ನಿಷ್ಕಲ್ಮಶ ಹೃದಯದ ಬಗ್ಗೆ ಮನೋಹರವಾಗಿ ಚಿತ್ರಿಸಿದ್ದಾರೆ. ದಾದಿಯರೆಂದರೆ/ ಸ್ತ್ರೀಲಿಂಗ ಮಾತ್ರವಲ್ಲ/ ಹೆಣ್ಣು ಮನಸ್ಸಿನ ಶುಶ್ರೂಷಕರು/ ತಾಯಿಯಂತವರು/ ಹೂಹೃದಯದ ದಾದಿಯರ/ ಹೊತ್ತು ಗೊತ್ತಿಲ್ಲದೆ ಕರೆದಾಗ/ ಸಿಂಡರಿಸದೆ ವದನ/ಕರ್ತವ್ಯದ ಕರೆಗೆ ಓಗೊಟ್ಟು/ ಬರುವ ದೇವದೂತರು/ ಎಂದು ಶ್ಲಾಘಿಸಿದ್ದಾರೆ. ದಾದಿಯರು ಬೊಗಸೆಯಲ್ಲಿ ಹಿಡಿ ಪ್ರೀತಿಯನ್ನು ಮಾತ್ರೆಯ ಜೊತೆ ನೀಡುವವರು, ಭರವಸೆಯ ಸ್ಪರ್ಶ ಮತ್ತು ಹಸನ್ಮುಖದವರು, ಸದಾ ಸ್ಮರಣೀಯರು ಎಂದು ವಿವರಿಸುತ್ತಾರೆ.
‘ಶರಾವತಿಯ ಅಳಲು’ ಕವನದಲ್ಲಿ ಒಂದೆಡೆ ಶರಾವತಿ ಸೊಬಗನ್ನು ಸವಿಯುವ ನೋಟವನ್ನು ನೀಡಿದರೆ, ಇನ್ನೊಂದೆಡೆ ಬೆಳಕನ್ನು ಕೊಡುವುದು. ಮತ್ತೊಂದೆಡೆ, ಯೋಜನೆಯ ಮೇಲೆ ಯೋಜನೆಗಳನ್ನು ಹೊರಿಸಿ ಮಲೆನಾಡಿನ ಜನರನ್ನು ಒಕ್ಕಲೆಬ್ಬಿಸಿ ಪರಿಸರವನ್ನು ನಾಶ ಮಾಡಲಾಗುತ್ತಿದೆ. ಸಂತ್ರಸ್ತರನ್ನು ತ್ಯಾಗಿಗಳು, ಬಲಿದಾನಿಗಳೆಂದು ಹೇಳಿ ದೂರವಿಡಲಾಗಿದೆ. ಬಾಯ್ತುಂಬ ಶರಾವತಿ ಎನ್ನುತ್ತಾ ಅದರ ಪಥವನ್ನೇ ಬದಲಾಯಿಸ ಹೊರಟಿದ್ದಾರೆ. ಆದರೆ ಶರಾವತಿ ಮಾತ್ರ ನನಗೆ ನೀವೆಲ್ಲರೂ ಮಕ್ಕಳು ಎಂದು ಎಲ್ಲರನ್ನೂ ಅಪ್ಪಿಕೊಳ್ಳುತ್ತಾಳೆ, ಶರಾವತಿಯ ದುರ್ಬಳಕೆಯ ಅಮಲು ಇಳಿಯಬೇಕಿದೆ ಎನ್ನುತ್ತಾ ಶರಾವತಿಯ ಮಡಿಲನ್ನು ನಾಶ ಮಾಡುತ್ತಿರುವ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ.
‘ಕನಸಿನ ದನಿ’ ಕವನ ಈ ಕವನ ಸಂಕಲನದ ಹೆಸರೂ ಹೌದು. ಈ ಕವನದಲ್ಲಿ ಸಹಜ ಮತ್ತು ಯಾಂತ್ರಿಕ ಬದುಕಿದೆ. ಹಳ್ಳಿಯ ಬದುಕಿನ ಸಹಜತೆ ತೊಲಗಿ ಕ್ರೌರ್ಯ ಪ್ರವೇಶ ಪಡೆಯುತ್ತದೆ. ಬದುಕು ಒಂದು ಕನಸಾಗಿ ಬಿಡುವ ವಿಚಿತ್ರ ಇದರಲ್ಲಿದೆ. ತಾನು ಕಾಲೇಜಿಗೆ ಹೋಗುತ್ತಿದ್ದ ಹಳ್ಳಿಯ ಅಂದಿನ ದಿನಗಳ ನೆನಪನ್ನು ಬಿಚ್ಚಿಡುತ್ತಾ, ದಿನಕ್ಕೊದು ಸಲ ಬರುವ ಬಸ್ ಯಾರನ್ನೂ ಬಿಡದೆ ಕರೆದೊಯ್ದು, ಮಧ್ಯರಾತ್ರಿಯೊಳಗೆ ವಾಪಸ್ ಊರಿಗೆ ತಲುಪಿಸುತ್ತಿತ್ತು ಎಂದು ಚೆಂದವಾಗಿ ಕಟ್ಟಿಕೊಟ್ಟಿದ್ದಾರೆ. ‘ಪಾಕ’ ಎಂಬ ಕವನದಲ್ಲಿ, ಎದೆಯೊಳಗೆ ಸಿಕ್ಕಿಬಿದ್ದ/ ಪದಗಳು ಸೀಳಿ/ಹೊರಬಂದು ಘೀಳಿಡುತ್ತವೆ/ ನಮ್ಮನ್ನು ಕಟ್ಟಿಹಾಕಲು/ ನಿನಗಾವ ಹಕ್ಕಿದೆ ಎಂದು?/ ಕವಿತೆ ಮತ್ತು ಕವಿ ಪರಸ್ಪರ ಎದುರುಬದುರಾಗುವ ಈ ಸನ್ನಿವೇಶ ಇಲ್ಲಿದೆ. ಬರಹ ತಾನೇ ತಾನಾಗಿ ಬರೆಸಿಕೊಳ್ಳುವುದನ್ನು ಇಲ್ಲಿ ಕಾಣಬಹುದು. ಅಭಿವ್ಯಕ್ತಿಯ ತುಡಿತ ಸಹಜ ಎನ್ನುವುದನ್ನು ಈ ಕವಿತೆಯ ಮೂಲಕ ಕವಿ ಚಿತ್ರಿಸಿದ್ದಾರೆ.
ಹೀಗೆ ಇಲ್ಲಿನ ಕವನಗಳಲ್ಲಿ ಪರಂಪರೆ ಮತ್ತು ಆಧುನಿಕತೆಗೆ ತೆರೆದುಕೊಳ್ಳುವ ಮುಕ್ತತೆಯನ್ನು ಕಾಣಬಹುದು. ಎಲ್ಲ ಕವನಗಳು ಗಮನ ಸೆಳೆಯುವ ರಚನೆಗಳಾಗಿದ್ದು, ಕಾವ್ಯತೀವ್ರತೆಯನ್ನು ಹೊಂದಿವೆ. ಎಷ್ಟೋ ಸಾಲುಗಳು ಮನದಲ್ಲಿ ನಿಂತು ಬಿಡುವಂತಿವೆ. ಆಪ್ತವಾಗುವ ಈ ಕವನ ಸಂಕಲನದಲ್ಲಿ ಕವಿಯ ಅಪಾರ ಸೃಜನಶೀಲತೆಯನ್ನು ಕಾಣಬಹುದು.
........................

Comments
Post a Comment