ವಿಸ್ತೃತ ಅನುಭವದ ರಸಪಾಕ

‘ಯಕ್ಷಗಾನ ಮತ್ತು ಹರಿಕಥೆ’


ಕವಿ, ಸಾಹಿತಿ, ಪ್ರಸಂಗಕರ್ತೃ, ಅರ್ಥಧಾರಿ, ಹರಿದಾಸ ಅಂಬಾತನಯ ಮುದ್ರಾಡಿಯವರ ಮಹತ್ವದ ಕೃತಿ ‘ಯಕ್ಷಗಾನ ಮತ್ತು ಹರಿಕಥೆ -ಒಂದು ತೌಲನಿಕ ಅಧ್ಯಯನ’.  ನಿಡುಗಾಲ ಯಕ್ಷಗಾನ ಮತ್ತು ಹರಿಕಥಾ ಕ್ಷೇತ್ರದಲ್ಲಿ ಕಲಾಸಾಧನೆಗೈದ, ಎರಡು ಕಲಾ ಪ್ರಕಾರಗಳ ಹೊರಗನ್ನು ಚೆನ್ನಾಗಿ ಬಲ್ಲ ಅವರ ವಿಸ್ತೃತ ಅನುಭವದಿಂದ ಮೂಡಿ ಬಂದ ಈ ಕೃತಿ ಸಂಶೋಧನಾ ಪ್ರಬಂಧ ರೂಪದಲ್ಲಿ ಮೈದಾಳಿದೆ.
ನಾಲ್ಕು ಅಧ್ಯಾಯಗಳಿಂದ ಕೂಡಿದ ಈ ಹೊತ್ತಗೆಯು ಯಕ್ಷಗಾನ ಮತ್ತು ಹರಿಕಥೆಯ ಪ್ರಸ್ತಾವನೆಯೊಂದಿಗೆ ಹರಿಕಥೆಯಲ್ಲಿ ದಾಸ ಸಾಹಿತ್ಯದ ಕೀರ್ತನೆಗಳ ಬಳಕೆಯನ್ನು ವಿವರವಾಗಿ ಪರಿಶೀಲಿಸಿದೆ. ಯಕ್ಷಗಾನ ಮತ್ತು ಕೀರ್ತನೆಗಳಲ್ಲಿ ಬರುವ ಛಂದಸ್ಸು ಮತ್ತು ರಾಗಗಳ ಪೌರಾಣಿಕ ಅವಲೋಕನ ನಡೆಸಿದೆ. ಅಂಶ ಗಣ ಪ್ರಧಾನವಾದ ಛಂದಸ್ಸಿನ ಸುದೀರ್ಘ ವಿವೇಚನೆ ಇದೆ. ಛಂದಸ್ಸಿಗೆ ಸಂಬಂಧಿಸಿ ಪರಿಣಾಮಕಾರಿಯಾಗಿ ಪರಿಚಯವಿದೆ. ಸಂಗೀತದ ರಾಗಗಳನ್ನೇ ಹರಿದಾಸರು ಬಳಸಿದರೆ, ಯಕ್ಷಗಾನದಲ್ಲಿ ಆ ರಾಗಗಳನ್ನು ಯಕ್ಷಗಾನ ಶೈಲಿಯಲ್ಲಿ ಹಾಡುತ್ತಾರೆ ಎಂಬುದನ್ನು ಮನೋಜ್ಞವಾಗಿ ತಿಳಿಸಿದ್ದಾರೆ. ಈ ಎರಡು ಪ್ರಕಾರಗಳಲ್ಲಿ ಬಳಕೆಯಾದ ವಿವಿಧ ರಾಗಗಳ ದೊಡ್ಡಪಟ್ಟಿ ಇದರಲ್ಲಿದೆ.
 ಕೀರ್ತನೆಗಳು ಅಧ್ಯಾತ್ಮತತ್ವ ನಿರೂಪಣೆ ಮತ್ತು ರಾಗ ಪ್ರಧಾನವಾದರೆ, ಯಕ್ಷಗಾನ ಪದ್ಯಗಳು ಅರ್ಥ, ಭಾವ, ನೃತ್ಯಾಭಿವ್ಯಕ್ತಿಗೆ ರಚನೆಯಾದುದನ್ನು ಸೋದಾಹರಣವಾಗಿ ವಿವರಿಸಿದ್ದಾರೆ. ಇಲ್ಲಿ ಕೃತಿಕಾರರು ನಾಡಿನ ಪ್ರಸಿದ್ಧ ಹರಿದಾಸರನ್ನು ಹೆಸರಿಸಿದ್ದಾರೆ ಉಡುಪಿಯ ಯತಿಶ್ರೇಷ್ಠರು ಸೇರಿದಂತೆ ಕರಾವಳಿ ಕರ್ನಾಟಕದ ಹರಿಕಥೆ, ಹರಿಕೀರ್ತನೆಯೊಂದಿಗೆ ಯಕ್ಷಗಾನ ಪ್ರಸಂಗ ರಚಿಸಿದ ಮಹನೀಯರ ಹೆಸರನ್ನು, ಅವರು ಬದುಕಿದ ಕಾಲದೊಂದಿಗೆ ಉಲ್ಲೇಖಿಸಿದ್ದಾರೆ. ಯಕ್ಷಗಾನ ಮತ್ತು ಹರಿಕಥಾ ಕ್ಷೇತ್ರವನ್ನು ಧೀಮಂತಗೊಳಿಸಿದ ಸಾಮಗಧ್ವಯರ ಮತ್ತು ಶೇಣಿಯವರ ಕುರಿತು ಬರೆದಿದ್ದಾರೆ. ಜೊತೆಯಲ್ಲಿ ಹಲವು ಹರಿದಾಸರ ಹೆಸರುಗಳನ್ನು ದಾಖಲಿಸುವ ಪ್ರಯತ್ನ ಮಾಡಿದ್ದಾರೆ. ಹರಿಕಥೆಯಲ್ಲಿ ಪೀಠಿಕೆಯ ಮಹತ್ವ ಹೇಳಿದ್ದಾರೆ. ಪಡುವಲಪಾಯ ಯಕ್ಷಗಾನ ವಿಶೇಷವಾಗಿ ಉತ್ತರ ಕರ್ನಾಟಕದ ಬಯಲಾಟಗಳಲ್ಲಿ ಪೀಠಿಕೆ ಮತ್ತು ಬೇರೆ ಸಂದರ್ಭದ ಗದ್ಯದ ನಮೂನೆಗಳನ್ನು ನೀಡಿದ್ದಾರೆ. ಹರಿಕಥೆ ಮತ್ತು ಯಕ್ಷಗಾನ ಎರಡು ಕಲಾ ಪ್ರಕಾರಗಳಲ್ಲಿ ಬಳಕೆಯಾಗಿರುವ ಪೌರಾಣಿಕ ಪ್ರಸಂಗಗಳನ್ನು ಹೆಸರಿಸಿದ್ದಾರೆ. ಇವು ಈ ಕುರಿತು ಅಧ್ಯಯನ ಮಾಡುವವರಿಗೆ ಆಕರ ಗ್ರಂಥ ಎನ್ನಬಹುದು.
 ಈ ಕೃತಿ ವಿದ್ವತ್ತಿನ ಭಾರವಿಲ್ಲದೆ ಓದಿಸಿಕೊಂಡು ಹೋಗುವ ಗುಣದಿಂದ ಓದುಗನನ್ನು ತಟ್ಟುವಂತಿದೆ. ಕನ್ನಡ ನಾಡಿನಲ್ಲಿ ಆಗಿ ಹೋದ ಹರಿದಾಸ ಪರಂಪರೆ ಬಹುದೊಡ್ಡದು. ಅವರೆಲ್ಲರ ಕಾಣಿಕೆಯು ದೊಡ್ಡದೇ. ಅವರಲ್ಲಿ ಪ್ರಮುಖರು ಎಂದರೆ ಶ್ರೀಪಾದದಾಸರು, ವ್ಯಾಸರಾಜರು, ಪುರಂದರದಾಸರು, ಕನಕದಾಸರು, ಪ್ರಸನ್ನವೆಂಕಟದಾಸರು, ವಿಜಯದಾಸರು, ಗೋಪಾಲದಾಸರು, ಹೆಳವನಕಟ್ಟೆ ಗಿರಿಯಮ್ಮ, ಜಗನ್ನಾಥದಾಸರು, ಬೇಲೂರು ಕೇಶವದಾಸರು ಮೊದಲಾದವರು. ಹರಿಕೀರ್ತನೆ ಎಂದರೆ ಹರಿಯನ್ನು ಕುರಿತು ಕೀರ್ತಿಸುವುದು, ಅವನನ್ನು ಕೊಂಡಾಡುವುದು, ಅವನ ಭಜನೆ ಮಾಡುವುದು. ಅಂದರೆ ತಾವೇ ಕೀರ್ತನೆಗಳನ್ನು ರಚಿಸುವುದು ಮತ್ತು ಹಾಡುವುದು. ಹರಿದಾಸರ ಕೀರ್ತನೆಗಳನ್ನು ಹಾಡುಗಳೆಂದು ಭಜನೆಗಳೆಂದು ಹೇಳುವುದಿದೆ. ಹರಿಯನ್ನು ಕೀರ್ತಿಸುವವರೆಲ್ಲ ಹರಿದಾಸರೇ. ಹರಿಕಥೆ ಮಾಡುವವರನ್ನೆಲ್ಲಾ ಹರಿದಾಸರು ಎನ್ನುತ್ತೇವೆ.
 ಹರಿಕೀರ್ತನೆ ಮೊದಲೋ ಯಕ್ಷಗಾನ ಮೊದಲೋ ಎಂಬುದರ ಬಗ್ಗೆ ಯಾವುದೇ ಖಚಿತತೆ ಇಲ್ಲವಾದರೂ ಒಂದೇ ಕಾಲದಲ್ಲಿ ಅವು ಕಾಣಿಸಿಕೊಂಡವು ಎಂದು ತಿಳಿಯಬಹುದಾಗಿದೆ. ಹರಿಕಥೆಯಲ್ಲಿ ಮುಖ್ಯವಾಗಿ ರಾಮಾಯಣ, ಭಾರತ, ಭಾಗವತ ಎಂದು ಹೇಳಲಾಗುವ ಕಥೆಗಳನ್ನು ಆಯ್ದುಕೊಳ್ಳಲಾಗುತ್ತದೆ. ಇದರಲ್ಲಿ ಧರ್ಮಜಾಗೃತಿ ಉಂಟು ಮಾಡುವುದು, ಮನುಷ್ಯನಾಗಿ ಬದುಕುವುದಕ್ಕೆ ಬೆಳಕು ತೋರುವುದು ಮುಖ್ಯ ಉದ್ದೇಶವಾಗಿರುತ್ತದೆ. ಈ ಕಥೆ ಅತ್ಯಂತ ಪ್ರಭಾವಶಾಲಿಯಾದ ಸಾಹಿತ್ಯ. ದುರದೃಷ್ಟವೆಂದರೆ, ಇದರ ಸಮೃದ್ಧ ಸಾಹಿತ್ಯದ ಸಂಗ್ರಹವಾಗಿಲ್ಲ. ಧ್ವನಿಸುರುಳಿಯ ಅಡಕಗಳಲ್ಲಿ ಇರುವುದು ಈ ಸಾಹಿತ್ಯದ ಮಾದರಿಗಳಷ್ಟೇ. ಏನಿದ್ದರೂ ಹರಿಕಥೆ ಮತ್ತು ಯಕ್ಷಗಾನ ಪೌರಾಣಿಕ ಅಧ್ಯಯ, ಚಿಂತನೆಗೆ ಉಪಯುಕ್ತ ಎಂಬುವುದರಲ್ಲಿ ಎರಡು ಮಾತಿಲ್ಲ. ಕನ್ನಡದ ಪ್ರಸಿದ್ಧ ಹರಿದಾಸರಾದ ಕೀರ್ತನ ಆಚಾರ್ಯ ಲಕ್ಷ್ಮಣದಾಸ ವೇಲಂಕರ್ ಎನ್ನುವರು ‘ಕಥಾಕೀರ್ತನ ಶ್ರೀ’ ಎಂಬ ಹತ್ತು ಹರಿಕಥಾ ಕುಸುಮಗಳನ್ನು ಹರಿದಾಸ ಪ್ರಪಂಚಕ್ಕೆ ನೀಡಿದ್ದಾರೆ. ಇದು ಹರಿಕೀರ್ತನ ರಂಗಕ್ಕೆ ಪ್ರವೇಶಿಸುವ ಆಸಕ್ತರಿಗೆ ಬರೆದ ಕೃತಿಯಾಗಿದೆ.
ಹರಿಕಥೆ ಅಥವಾ ಯಕ್ಷಗಾನ ಕೇವಲ ಕನ್ನಡ ಭಾಷೆ ಒಂದರಲ್ಲಿ ನಡೆದಿಲ್ಲ. ಯಕ್ಷಗಾನ ಕನ್ನಡ, ಇಂಗ್ಲಿಷ್, ಹಿಂದಿ ಭಾಷೆಗಳಲ್ಲಿ ಪ್ರದರ್ಶನ ಕಂಡಿದೆ. ಹರಿಕಥೆಯು ತಮಿಳು, ತೆಲುಗು, ಮರಾಠಿ ಭಾಷೆಗಳಲ್ಲಿ ಪ್ರಸಾರಗೊಂಡಿದೆ. ಕನ್ನಡ, ತುಳು, ಕೊಂಕಣಿ ಭಾಷೆಗಳಲ್ಲಿ ಹರಿಕಥೆ ಮಾಡಿದ ಮೊದಲಿಗರು ಸಂತ ಭದ್ರಗಿರಿ ಕೇಶವದಾಸರು. ಭದ್ರಗಿರಿ ಅಚ್ಯುತದಾಸರು ಸಹ ಈ ಭಾಷೆಗಳಲ್ಲಿ ಹರಿಕಥೆ ಮಾಡಿದ್ದಾರೆ. ಸಂತರ, ಮಹಾಪುರುಷರ ಕಥೆಗಳನ್ನು ಈ ಹರಿಕಥೆಯಲ್ಲಿ ಅವರು ನಿರೂಪಿಸಿದ್ದಾರೆ. ಹರಿಕಥೆಗೆ ತತ್ವಪ್ರತಿಪಾದನೆ ಮುಖ್ಯ. ಒಬ್ಬನೇ ಹರಿಕಥೆಯನ್ನು ಹೇಳುವುದರಿಂದ ಅವನಿಗಿಲ್ಲಿ ಸ್ವಾತಂತ್ರ್ಯವಿದೆ. ಕಥೆಯ ಅಂತರಂಗವನ್ನು ತೆರೆದಿಡುವಲ್ಲಿ ಅವನ ಅಧ್ಯಯನ, ಚಿಂತನೆ ಸಾಕಷ್ಟು ವಿಸ್ತರಿತವಾಗುತ್ತದೆ. ಆದರೆ, ಯಕ್ಷಗಾನದಲ್ಲಿ ಕಥೆಯ ಪಾತ್ರಗಳು ಮುಖಾಮುಖಿಯಾಗುವುದರಿಂದ ಅಲ್ಲಿ ತನಗೆ ಗೊತ್ತಿದ್ದ ಎಲ್ಲವನ್ನೂ ಹೇಳಲಾಗುವುದಿಲ್ಲ. ಇದು ಪರಸ್ಪರ ಒಟ್ಟಂದದಲ್ಲಿ ಅಲ್ಲಿ ಪ್ರಕಟವಾಗಬೇಕಾಗುತ್ತದೆ
ಹರಿಕಥೆ ಇಡೀ ರಾತ್ರಿ ನಡೆಯುವಂತದ್ದಲ್ಲ. ಹಲವು ತಾಸುಗಳ ಕಾರ್ಯಕ್ರಮ. ನಮ್ಮಲ್ಲಿ ಹರಿದಾಸರಾಗಿ ಯಕ್ಷಗಾನದಲ್ಲಿ ತೊಡಗಿಸಿಕೊಂಡ ಹಲವರಿದ್ದಾರೆ ಯಕ್ಷಗಾನದಲ್ಲಿದ್ದು ಹರಿಕಥೆಯಲ್ಲಿ ತೊಡಗಿಸಿಕೊಂಡವರೂ ಇದ್ದಾರೆ. ಹರಿದಾಸ ಮಲ್ಪೆ ಶಂಕರನಾರಾಯಣ ಸಾಮಗ, ಹರಿದಾಸ ಮಲ್ಪೆ ರಾಮದಾಸ ಸಾಮಗ, ಹರಿದಾಸ ಶೇಣಿ ಗೋಪಾಲಕೃಷ್ಣ ಭಟ್ಟರು ಹರಿದಾಸರಾಗಿ ಕೀರ್ತಿಪಡೆದು, ಯಕ್ಷಗಾನ ರಂಗವನ್ನು ಪ್ರವೇಶಿಸಿ ಅಲ್ಲಿಯೂ ಬೆಳಗಿದವರು. ಸಂತ ಭದ್ರಗಿರಿ ಕೇಶವ ದಾಸರು ಹರಿಕಥೆ ಮಾಡುತ್ತಾ ಜೊತೆಯಲ್ಲಿ ಯಕ್ಷಗಾನದಲ್ಲೂ ಕುಣಿಯುತ್ತ, ಅನಂತರ ಹರಿದಾಸರಾಗಿ ಕೀರ್ತಿವೆತ್ತವರು. ಅವರು ಭಕ್ತಿರಸ ಪ್ರಧಾನವಾದ ಪಾತ್ರಗಳನ್ನು ಚೆನ್ನಾಗಿ ನಿರ್ವಹಿಸುತ್ತಿದ್ದರು.
ಕನ್ನಡನಾಡಿನ ಉದ್ದಗಲಗಳಲ್ಲಿ ಯಕ್ಷಗಾನ ಮತ್ತು ಕೀರ್ತನೆಯ ಬೇರೆ ಬೇರೆ ಸ್ವರೂಪವನ್ನು ಕಾಣಬಹುದು. ಈ ದಿನಗಳಲ್ಲಿ ದಾಸಪರಂಪರೆ ಅಥವಾ ಹರಿಕಥಾ ಪರಂಪರೆ ಕ್ಷೀಣಿಸುತ್ತ ಬಂದಿದೆ. ಇದನ್ನು ಬೆಳೆಸುವ, ಉಳಿಸುವ ಬಗ್ಗೆ ವಿಶಾಲ ಮನಸ್ಸಿನಿಂದ ಯೋಚಿಸಬೇಕಿದೆ. ಹಿಂದಿನ ವೈಭವವನ್ನು ಮತ್ತೆ ಮರಳಿ ಪಡೆಯಬೇಕಾಗಿದೆ. ಬೆಂಗಳೂರಿನ ಕೀರ್ತನ ಕಲಾ ಪರಿಷತ್ತು, ರಾಯಚೂರಿನ ದಾಸ ಸಾಹಿತ್ಯ ಸಂಶೋಧನಾ ಕೇಂದ್ರ ಮತ್ತು ನಮ್ಮ ವಿಶ್ವವಿದ್ಯಾಲಯಗಳು ಈ ಕುರಿತು ಸಾಧ್ಯವಾದಷ್ಟು ಕೆಲಸಗಳನ್ನು ಮಾಡುತ್ತಿವೆ. ಮಂಗಳೂರಿನ ಹರಿಕಥಾ ಪರಿಷತ್ತು ಈ ನಿಟ್ಟಿನಲ್ಲಿ ಶ್ರಮಿಸುತ್ತಿದೆ. ಮಾಸಿಕ ಪತ್ರಿಕೆ ‘ಹರಿಕಥೆ’  ಪ್ರಕಟವಾಗುತ್ತಿದೆ. ಎಳೆಯವರಿಗೆ ತರಬೇತಿ ನೀಡಿ ವೇದಿಕೆ ಒದಗಿಸುವ ಕೆಲಸ ನಡೆಯಬೇಕಾಗಿದೆ. ಆದರೆ ಈಗ ಮೊದಲಿನಷ್ಟು ಪ್ರಚಾರಗಳಿಲ್ಲ, ಪ್ರಸ್ತುತಿಗಳೂ ಇಲ್ಲ.
ಒಟ್ಟಿನಲ್ಲಿ, ಈ ಕೃತಿಯಲ್ಲಿ ಅಂಬಾತನಯರ ಗದ್ಯ ಲಾಲಿತ್ಯಪೂರ್ಣವೂ, ಪ್ರಾಸಬದ್ಧವೂ ಆಗಿದೆ. ಇದು ಅವರ ಮಾತುಗಾರಿಕೆಯಲ್ಲೂ ಕಂಡುಬರುತ್ತಿತ್ತು. ಸಂಸ್ಕೃತ ಶ್ಲೋಕಗಳ ಅರ್ಥವನ್ನರಿತು ಔಚಿತ್ಯಪೂರ್ಣವಾಗಿ ಬಳಸಿಕೊಂಡಿರುವುದು ವಿಶೇಷ. ಲೇಖಕರ ಅನುಭವದ ರಸಪಾಕ ಇಲ್ಲಿ ಚೆಲ್ಲಿದೆ. ಓದುಗನನ್ನು ಈ ಕೃತಿ ತಟ್ಟುವಂತಿದೆ.
,,,,,,,,,,,,,,,,,,,,,,,
    

 

Comments

Popular posts from this blog