ಸಿಕ್ಕಿಂ ಪ್ರವಾಸದ ಅನುಭವಗಳ ಹೂರಣ
‘ನನ್ನ ಗ್ರಹಿಕೆಯ ಸಿಕ್ಕಿಂ’
ಸಾಹಿತಿ, ನಿವೃತ್ತ ಪ್ರಾಧ್ಯಾಪಕ, ಸಿನಿಮಾ ನಿರ್ಮಾಪಕ ನಾಗತಿಹಳ್ಳಿ ಚಂದ್ರಶೇಖರ್ ಅವರ ಸಿಕ್ಕಿಂ ಪ್ರವಾಸದ ಅನುಭವಗಳ ಹೂರಣವೇ ‘ನನ್ನ ಗ್ರಹಿಕೆಯ ಸಿಕ್ಕಿಂ’. ಪ್ರವಾಸ ಕಥನ ಎಂದರೆ ಕೇವಲ ಅಂಕಿ- ಅಂಶಗಳ ಮಾಹಿತಿಗಳಿಗೆ ಸಂಗ್ರಹವಾಗದೆ ಮನುಷ್ಯರ ಮತ್ತು ಸಂಸ್ಕೃತಿಯ ಬೆರಗು ಬವಣೆಗಳನ್ನು ಚಿತ್ರಿಸುವ ಒಳನೋಟದಿಂದ ಕೂಡಿರಬೇಕು. ಅದು ಒಂದು ಧ್ಯಾನಸ್ಥಿತಿ. ಈಗ ಕುಳಿತಲ್ಲೇ ಸಾಕಷ್ಟು ಮಾಹಿತಿಗಳು ಅಂತರ್ಜಾಲದಲ್ಲಿ ಚೆಲ್ಲಾಡುತ್ತವೆ. ಆದರೆ ಅಲ್ಲಿನ ಅಚ್ಚರಿ, ಕುತೂಹಲ, ಅನ್ವೇಷಣೆ ಮತ್ತು ವಿರಾಟದರ್ಶನ ಅಂತಹ ಸ್ಥಳಗಳಿಗೆ ಹೋದಾಗ ಮಾತ್ರ ಲಭ್ಯ.
ಈ ಕೃತಿಯಲ್ಲಿ ೧೩ ಚಿಕ್ಕ ಲೇಖನಗಳಿವೆ. ಸೊಬಗಿನ ಸಿಕ್ಕಿಂ, ಸಿಕ್ಕಿಂ ಹಾದಿಯಲ್ಲಿ ಸಾವಿನ ನೆನಪು, ಕಾಂಚನಗಂಗಾ, ಲಾಚೆನ್ ಹಾದಿಯಲ್ಲಿ, ಧೀರ ಕನ್ನಡಿಗನಿಗೆ ನಮಿಸಿ, ದುಂಡಪ್ಪ ಅಕ್ಕಿಗೆ ಶ್ರದ್ದಾಂಜಲಿ, ತಂಪು ಒಡಲು, ಕುದಿಯುವ ಮಡಿಲು, ಸಿಕ್ಕಿಂ ಒಪ್ಪಂದ, ಮೊದಲಾದವು ಸೇರಿವೆ. ಸಿಕ್ಕಿಂನ್ನು ಕಣ್ತುಂಬ ನೋಡಿ ಬರಬೇಕೆಂಬ ತನ್ನ ಹಂಬಲ ಈಡೇರಿದೆ. ಭಾರತದ ಪುಟ್ಟ ಗಿರಿಬಾಲೆ ಸಿಕ್ಕಿಂ. ಭುಜದ ಮೇಲೆ ಹೆಬ್ಬೆರಳಿನ ಗುರುತಿನಂತಿರುವ ಸಿಕ್ಕಿಂನಲ್ಲಿ ಕಾಂಚನ್‌ಗಂಗಾ ಪರ್ವತವಿದೆ. ಜಗತ್ತಿನ ಮೂರನೇ ಎತ್ತರದ ಪರ್ವತ ಶ್ರೇಣಿ ಕಾಂಚನಗಂಗಾ. ಈ ರಾಜ್ಯದಲ್ಲಿ ೨೮ ಶಿಖರಗಳು, ೧೦೪ ನದಿಗಳು, ೨೫೭ ಸರೋವರಗಳು ಇವೆ. ಒಂದು ಪುಟ್ಟದಾದ ವಿಮಾನ ನಿಲ್ದಾಣ ಕೂಡ ಈ ರಾಜ್ಯದಲ್ಲಿಲ್ಲ ಎನ್ನುವುದನ್ನು ಲೇಖಕರು ವಿವರಿಸುತ್ತಾರೆ.
ಹಿಮಾಲಯದೊಳಗೆ ಸಿಕ್ಕಿ ಬಿದ್ದು ಹೊರಗಿನವರಿಗೆ ಸರಿಯಾಗಿ ಗೊತ್ತೇ ಇಲ್ಲದ ಸಿಕ್ಕಿಂನ ಜನತೆ ಅಪಾರ ಶ್ರಮಜೀವಿಗಳು ಮತ್ತು ಹೃದಯವಂತರು. ಗೋವಾದ ನಂತರ ದೇಶದ ಅತಿ ಪುಟ್ಟ ರಾಜ್ಯವಾದ ಸಿಕ್ಕಿಂ ಒಂದು ಸುಂದರ, ಅವಿಭಕ್ತ, ರುದ್ರರಮಣೀಯ ಉದ್ಯಾನವಾಗಿದೆ. ತೀಸ್ತಾ ನದಿ ರಾಜ್ಯದ ಪೂಜನೀಯ ನದಿ. ಇಲ್ಲಿನ ದೊಡ್ಡಸ್ತಿಕೆ ಎಂದರೆ ಸಿಕ್ಕಿಂನ ಪ್ರವೇಶವು ಕಾವ್ಯದಂತಿದೆ. ಸಿಕ್ಕಿಂನ ಲಿಂಬು ಭಾಷೆಯಲ್ಲಿ ‘ಸು’ ಅಂದರೆ ಹೊಸ ಎಂದರ್ಥ. ‘ಕಿಂ’ ಅಂದರೆ ಅರಮನೆ. ಎರಡು ಸೇರಿ ಸಿಕ್ಕಿಂ ಆಗಿದೆ. ಸಿಕ್ಕಿಂ ಎಂದರೆ ಟಿಬೆಟಿಯನ್ ಭಾಷೆಯಲ್ಲಿ ‘ಅಕ್ಕಿ ತುಂಬಿದ ಕಣಿವೆ’.
ಪ್ರಮುಖ ನಗರ ಗ್ಯಾಂಗ್ಟಕ್‌ಗೆ ಹೋದವರು ಮೊಮೊ ತಿನ್ನದೇ ಬರಬಾರದು. ಸಣ್ಣ ಕರ್ಜಿಕಾಯಿಯಂತಿರುವ, ಮೃದುವಾದ ಮೊಮೊಗಳು ಸಸ್ಯಾಹಾರಿ ಮತ್ತು ಮಾಂಸಾಹಾರಿಗಳಿಗೂ ಪ್ರಿಯವಾದವು. ಗ್ಯಾಂಗ್ಟಕ್‌ನ ಸ್ವರೂಪವನ್ನು ಬೆಲೆಬಾಳುವ ವಾಹನಗಳು, ವಿದೇಶಿ ಬ್ಯಾಂಕ್‌ಗಳು ಸೂಚಿಸುತ್ತವೆ. ವಿಶಿಷ್ಟವಾದ ಹೆರಿಟೇಜ್ ಅಚ್ಚುಕಟ್ಟಾದ ಈ ನಗರಕ್ಕೆ ಇದೆ. ಇಲ್ಲಿನ ಮಹಾತ್ಮ ಗಾಂಧಿ ಮಾರ್ಗದಲ್ಲಿ ಅಪಾರ ಸಂಖ್ಯೆಯ ಲಿಕ್ಕರ್ ಶಾಪ್‌ಗಳು ಇರುವುದು ಮಾತ್ರ ವಿಪರ್ಯಾಸ. ಜಗತ್ತಿನ ಮೂರನೆಯ ಅತಿ ಎತ್ತರದ ಶಿಖರ ಶ್ರೇಣಿ ಕಾಂಚನ್ ಗಂಗಾ ಇದು ನಿಜವಾಗಿಯೂ ಖಾಂಗ್ ಛೆಂದ್ ಝೊಂಗಾ ಎಂದು. ಆದರೆ ಕಾಂಚನಗಂಗಾ ಎಂದು ಕರೆಯಲ್ಪಡುತ್ತಿದೆ. ಕಾಂಚನ್‌ಗಂಗಾದ ಶಿಖರಗಳು ಬೆಳ್ಳಿ ಕಿರೀಟವನ್ನು ಹೊದ್ದು ನಿಂತಿವೆ. ಮಾರ್ಚ್ ಮತ್ತು ಜೂನ್ ನಡುವಿನ ಕಾಲ ಇಲ್ಲಿನ ಪರ್ವತಾರೋಣಕ್ಕೆ ಸೂಕ್ತ . ಇದನ್ನೇ ಟ್ರೆಕ್ಕಿಂಗ್ ಎನ್ನುವುದು. ಅಸಂಖ್ಯಾತ ಜಾತಿಯ ಹೂಗಳು ಇಲ್ಲಿ ಮಿನುಗುತ್ತಿವೆ. ಎಲ್ಲಕ್ಕೂ ಕಿರೀಟವಿಟ್ಟಂತೆ ಎತ್ತರದಲ್ಲಿ ಕಾಂಚನಗಂಗಾ ಇದೆ. ಕಾಂಚನ್‌ಗಂಗಾ ಶಿಖರದ ಮೇಲೆ ಚಿಕ್ಕ ವಿಮಾನದಲ್ಲಿ ಹಾರಾಡಬಹುದು. ಆದರೆ ಅದು ತುಂಬಾ ದುಬಾರಿ. ಆದ್ದರಿಂದ ದೂರದಿಂದಲೇ ಕಣ್ಣು ಸೋಲುವವರೆಗೆ ಅದನ್ನು ನೋಡಬಹುದು. ಬೆಳಗಿನ ಹೊತ್ತು ಇದರ ಪ್ರಕೃತಿಯನ್ನು ನೋಡುವುದು ಇಮ್ಮಡಿ ಚೆಲುವು. ಸಿಕ್ಕಿಂನ ಇನ್ನೊಂದು ನಗರ ಲಾಚೆನ್ ದಾರಿಯಲ್ಲಿ ಅದ್ಭುತವಾದ ನಾಗ ಜಲಪಾತವಿದೆ. ಇಲ್ಲಿನ ತನ್ಮಯತೆ ಅನುಭೂತಿಯಾಗಿ ಮೈದಳೆಯುತ್ತದೆ. ಹೆಪ್ಪುಗಟ್ಟುವ ನೀರು, ಹೃದಯ ದ್ರವಿಸಿ ನೀರಾಗುವ ನೀರು, ಕೆಸರಲ್ಲಿ ಬಗ್ಗಡವಾಗುವ ನೀರು, ಪನ್ನೀರ್ ಆಗಿ ಅಮೃತವಾಗುವ ನೀರು... ಹೀಗೆ ಅದ್ಭುತವಾಗಿ ನೀರು ನಮ್ಮನ್ನು ಸೆಳೆಯುತ್ತದೆ. ನೀರಾಟ ಆಡುವವರ ಸ್ವರ್ಗ. ಇಲ್ಲಿನ ರಿವರ್ ರಾಫ್ಟಿಂಗ್ ರೋಮಾಂಚನಕಾರಿ.
ಅಪಾರ ಜನಸಂಪತ್ತಿನ ಸಿಕ್ಕಿಂನಲ್ಲಿ ೧೨ ಹೈಡ್ರೋ ಪವರ್ ಪ್ರಾಜೆಕ್ಟ್‌ಗಳಿವೆ. ಮೂರು ನಿರ್ಮಾಣ ಹಂತದಲ್ಲಿವೆ. ಗ್ಯಾಂಗ್ಟಕ್‌ನ ಉದ್ಯಮಿಗಳು, ಪಶ್ಚಿಮಬಂಗಾಲದ ಕಾರ್ಖಾನೆಗಳು, ರೈತರ ಜಮೀನನ್ನು ಕಸಿದುಕೊಂಡಿದ್ದಾರೆ. ಲಾಚೆನ್‌ಗೆ ತೆರಳುವ ದಾರಿಯಲ್ಲಿ ಗುರುದೊಂಗ್‌ಮಾರ್ ಎಂಬಲ್ಲಿ ಮಿಲಿಟರಿ ಕ್ಯಾಂಪ್ ಇದೆ. ಅಲ್ಲಿನ ಹೋಟೆಲ್‌ನಲ್ಲಿ ಕಪ್ಪು ಬಿಳುಪಿನ ಹಳೆಯ ನೆನಪಿನ ಫೋಟೊಗಳು ಸಾಲಾಗಿವೆ. ಅದರಲ್ಲಿ ಒಂದು ಮುಖ್ಯವಾದ ಫೋಟೋ ನಮ್ಮ ಕೊಡಗಿನ ಫೀಲ್ಡ್ ಮಾರ್ಷಲ್ ಕೆ ಎಮ್ ಕಾರ್ಯಪ್ಪ ಅವರದು. ಗುರುದೊಂಗ್‌ಮಾರ್ ಸರೋವರ ಇರುವುದು ೧೭,೮೦೦ ಅಡಿಗಳ ಎತ್ತರದಲ್ಲಿ. ಇಲ್ಲಿನ ಸರೋವರ ತಣ್ಣಗಿದ್ದು ಹಾಲಿನಂತಿದೆ. ಬಹಳ ಹೊತ್ತು ನೀರಿನಲ್ಲಿ ಕಾಲಿಟ್ಟು ಕುಳಿತುಕೊಳ್ಳಲು ಆಗುವುದಿಲ್ಲ. ಎಳೆ ಬಿಸಿಲಿನಲ್ಲಿ ನೀರು ತಣ್ಣಗೆ ಮೈ ಕೊರೆಯುತ್ತದೆ. ಸರೋವರ ಸುತ್ತ ಹಿಮಾವೃತ ಪ್ರದೇಶಗಳಿವೆ. ಸರೋವರದ ಅಲೆಗಳು ಮತ್ತು ಬೀಸುವ ಗಾಳಿ ಮಾತ್ರ ತಮ್ಮೊಳಗೆ ಮಾತನಾಡಿಕೊಳ್ಳುವಂತೆ ಅನಿಸುತ್ತದೆ. ಬೌದ್ಧರಿಗೂ, ಹಿಂದುಗಳಿಗೂ ಇದು ಪವಿತ್ರವಾದ ಸ್ಥಳ. ಈ ಸರೋವರದ ನೀರು ಕುಡಿದರೆ ಬಂಜೆಯರಿಗೆ ಮಕ್ಕಳಾಗುತ್ತವೆ ಎನ್ನುವ ಪ್ರತೀತಿ ಇದೆಯಂತೆ.
ಇಲ್ಲಿನ ಸರೋವರ ಮತ್ತು ಗ್ಲೇಸಿಯರ್‌ಗಳನ್ನು ನೋಡಿ ಬರುವಾಗ ಚಿಕ್ಕ ಒಂದು ಜಾಗದಲ್ಲಿ ಯೋಧನೊಬ್ಬನ ಸಮಾಧಿ ಇದೆ. ಅದು ಕರ್ನಾಟಕದ ದುಂಡಪ್ಪ ಅಕ್ಕಿ ಎನ್ನುವವರದು. ೧೯೮೭ರಲ್ಲಿ ಈ ಜಾಗದಲ್ಲಿ ಅವರು ಹೃದಯಾಘಾತದಿಂದ ತೀರಿಕೊಂಡಿದ್ದರ ಸ್ಮರಣಾರ್ಥವಾಗಿ ಸಮಾಧಿ ಇದೆ. ಸಿಕ್ಕಿಂ ಪರ್ವತ ಶ್ರೇಣಿಗಳಲ್ಲಿ ಬಿಸಿ ನೀರ ಬುಗ್ಗ್ಗೆಗಳಿವೆ. ಹೊರಗೆ ಕೊರೆಯುವ ಚಳಿ. ಆದರೆ ನೆಲಗರ್ಭದಿಂದ ಹೊರಗೆ ಬರುವ ಬಿಸಿ ನೀರು ಬುಗ್ಗೆಗಳು ವಿಸ್ಮಯಕರ. ತಂಪು ಒಡಲಿನ ನಡುವೆ ಕುದಿಯುವ ಮಡಿಲುಗಳು. ಸಿಕ್ಕಿಂನಲ್ಲಿ ೯ ಬಿಸಿನೀರು ಬುಗ್ಗೆಗಳಿವೆ. ಅದರಲ್ಲಿ ಆರು ಬುಗ್ಗೆಗಳು ಉತ್ತರ ಸಿಕ್ಕಿಂನಲ್ಲಿವೆ.
ಹೀಗೆ ಸಿಕ್ಕಿಂ ಎಂಬ ಕಿರುರಾಜ್ಯದ ರಮಣಿಯ ನೋಟವನ್ನು ಸುಂದರವಾಗಿ ಈ ಕೃತಿಯಲ್ಲಿ ಲೇಖಕರು ವರ್ಣಿಸಿದ್ದಾರೆ. ಆದರೆ ಸಿಕ್ಕಿಂ ಚರಿತ್ರೆಯ ಪುಟ ತಿರುಗಿಸಿದರೆ ಕಾಣುವುದು ಬರೇ ಒಪ್ಪಂದ, ಒಪ್ಪಂದ. ಇದರಿಂದ ಸಿಕ್ಕಿಂ ರಾಜಕೀಯವಾಗಿ ಮಲಗಿರುವುದು ಸ್ಪಷ್ಟವಾಗುತ್ತದೆ. ಸುಖಿ, ಸಮೃದ್ಧ ಈ ರಾಜ್ಯವು ಇತಿಹಾಸದಲ್ಲಿ ಹೇಡಿ ದೊರೆಗಳ ಮುಗ್ಧ ದೊರೆಗಳ ದೆಸೆಯಿಂದ ಒದೆತ ತಿಂದಿದೆ. ಸಾಮ್ರಾಜ್ಯಶಾಹಿ ಅನ್ನುವುದು ಸಣ್ಣಪುಟ್ಟಗಳ ರಾಜ್ಯಗಳ ಮೇಲೆ ಯಾವ ರೀತಿ ಆಕ್ರಮಣ ಮಾಡಿದೆ ಎನ್ನುವುದನ್ನು ಇಲ್ಲಿ ಕಾಣಬಹುದು. ೧೯೭೫ರಲ್ಲಿ ಸಿಕ್ಕಿಂ ಭಾರತದ ೨೨ನೇ ರಾಜ್ಯವಾಗಿ ಉದಯವಾಯಿತು. ಈಗ ಭಾರತದ ಸ್ಪಷ್ಟವಾದ ಭೂಭಾಗ. ನೆಲಮುಗಿಲು ಬೆಸೆಯುತ್ತ ಭಾರತೀಯರಾಗಿ ಸಿಕ್ಕಿಂನ ಜನರು ಬದುಕುತ್ತಿದ್ದಾರೆ. ಇಲ್ಲಿ ಬುಟಿಯ, ಲೆಫ್ಟ್‌ಜಾ, ಮತ್ತು ನೇಪಾಳಿ ಭಾಷೆಗಳನ್ನು ಆಡುವ ವಿವಿಧ ಸಮುದಾಯಗಳಿವೆ.
ಹೀಗೆ ಮನಮೋಹಕವಾದ ಸಿಕ್ಕಿಂನ ಬಹುತೇಕ ಪ್ರದೇಶಗಳನ್ನು ಸುತ್ತಾಡಿದ ಲೇಖಕರು ಅದನ್ನು ಅಷ್ಟೇ ಸುಂದರವಾಗಿ ಶಬ್ದಗಳಲ್ಲಿ ಸೆರೆಹಿಡಿದಿದ್ದಾರೆ. ಬದುಕಿಗೆ ಅವಶ್ಯವಾದ ಮೌಲ್ಯಗಳಲ್ಲಿ ಪ್ರವಾಸವೂ ಒಂದು. ಸಿಕ್ಕಿಂ ಭಾರತದ ಭೂಭಾಗವೇ ಆದರೂ ವಿಶಿಷ್ಟವಾದ ಚಾರಿತ್ರಿಕ ಮತ್ತು ವರ್ತಮಾನದ ಸತ್ಯವನ್ನು ಬಚ್ಚಿಟ್ಟುಕೊಂಡಿದೆ. ಪ್ರವಾಸದ ಹುಚ್ಚಿರುವವರು ನೋಡಲೇಬೇಕಾದ ಸ್ಥಳ ಸಿಕ್ಕಿಂ ಎಂದು ನಾಗತಿಹಳ್ಳಿ ಹೇಳುತ್ತಾರೆ.
.....................

Comments
Post a Comment