ಕೃಷ್ಣನ ಮೌಲಿಕ ವ್ಯಕ್ತಿತ್ವ ಅನಾವರಣದ


‘ಕೃಷ್ಣ ತರಂಗಿಣಿ’



‘ಕೃಷ್ಣ ತರಂಗಿಣಿ’  ಕಾದಂಬರಿಯಲ್ಲಿ ಲೇಖಕಿ ಪದ್ಮಜಾ ಜೋಯಿಸ್ ತೀರ್ಥಹಳ್ಳಿ ಕೃಷ್ಣನನ್ನು ಸಮಕಾಲೀನ ಮನಃಸ್ಥಿತಿಯಿಂದ ತಮ್ಮದೇ ಆದ ದೃಷ್ಟಿಕೋನದಿಂದ ಚಿತ್ರಿಸಿ ಸಾರ್ವಕಾಲಿಕವಾಗಿ ಸಲ್ಲುವ ವ್ಯಕ್ತಿ. ಏಕಕಾಲದಲ್ಲಿ ಸಾಮಾನ್ಯ, ಅಸಾಮಾನ್ಯ, ಲೌಕಿಕನಾಗಿ ಕಾಣಿಸಿಕೊಳ್ಳಬಲ್ಲವನು ಎನ್ನುವುದನ್ನು  ಸೊಗಸಾಗಿ ನಿರೂಪಿಸಿದ್ದಾರೆ. ಕೃಷ್ಣನ ರಹಸ್ಯಗಳು ಯಾವೊಬ್ಬ ಜ್ಞಾನಿಗೂ ಪೂರ್ಣವಾಗಿ ತೆರೆದುಕೊಳ್ಳುವುದಿಲ್ಲ. ಆದುದರಿಂದಲೇ ಗೊಂದಲಗಳು, ಅನರ್ಥಗಳು ಆದರೂ ಕೃಷ್ಣ ನಮಗೆ ಬೇಕೇ ಬೇಕು. ಜೀವನಕ್ಕೆ ಬೆಳಕಾಗಿ ಒದಗುವ ಶ್ರೀಕೃಷ, ಅರಿವಿನ ಅಲೆಗಳಾಗಿ ಸದಾ ಬಾಳ ಕಡಲಿನಲ್ಲಿ ತೆರೆ ತೆರೆಯಾಗಿ ಸಾಗುತ್ತಿರುವವನು ಎಂದೇ ಈ ಕೃತಿಯಲ್ಲಿ ಬಿಂಬಿಸಲಾಗಿದೆ.
ಆಧ್ಯಾತ್ಮಿಕ, ಭಾವನಾತ್ಮಕ, ಸಾಮಾಜಿಕ, ರಾಜಕೀಯ ಹೀಗೆ ಎಲ್ಲ ವರ್ಗದ ಕೃಷ್ಣನನ್ನು ಸಾಮೂಹಿಕ ಭಾವದಿಂದ ಮೂಡಿಸುವಲ್ಲಿ ಲೇಖಕಿ ಸಫಲರಾಗಿದ್ದಾರೆ. ಕೃಷ್ಣ ಪವಾಡ ಪುರುಷ ಎಂಬ ಜನಮನದ ಭಾವ. ಬದಲಾಗಿ, ಅವನೊಬ್ಬ ಪರಿಪೂರ್ಣ ಮಿತ್ರ, ಸಹೋದರ, ರಾಜಕೀಯ ತಜ್ಞ, ಕುಶಲ ವ್ಯಾಪಾರಿ, ಪ್ರೇಮಿ, ವಿರಹಿ, ಸಾಮಾನ್ಯವಾಗಿಯೂ ನಿಲ್ಲುವಂತಹ ಆಕರ್ಷಕ ವ್ಯಕ್ತಿತ್ವದವನೆನ್ನುವುದು ಮನವರಿಕೆಯಾಗುತ್ತದೆ. ಕೃತಿಯಲ್ಲಿನ ಪ್ರತಿಯೊಂದು ಅಧ್ಯಾಯದಲ್ಲಿ ಬರುವ ಘಟನೆಗಳು ಎಲ್ಲೂ ಎಲ್ಲೆ ಮೀರದಿರುವುದನ್ನು ಇಲ್ಲಿ ಕಾಣಬಹುದು. ಕೆಲವು ವರ್ಣನೆಗಳು ತಣ್ಣಗೆ ಕಚಗುಳಿ ಇಡುತ್ತವೆ. ಆತ ಗೀತಾಚಾರ್ಯ. ಧರೆಗಿಳಿದ ದೇವ ಎನ್ನುವುದಷ್ಟೇ ಸಾಕಷ್ಟು ಜನರಿಗೆ ತಿಳಿದಿದೆ. ಆದರೆ ಅವನು ವರ್ಣರಂಜಿತ, ವೈವಿಧ್ಯಮಯ, ಪೌರಾಣಿಕ ಮಾತ್ರವಲ್ಲ, ಚಾರಿತ್ರಿಕ ವ್ಯಕ್ತಿತ್ವ ಎನ್ನುವುದನ್ನು ಇಲ್ಲಿ ವರ್ಣಿಸಿ ಕಟ್ಟಿಕೊಡಲಾಗಿದೆ.
ಮನದಲ್ಲಿ ಕುಳಿತ ಆರಾಧ್ಯದೈವ ಕೃಷ್ಣ ನಮ್ಮೊಳಗಿನ ನಂಬಿಕೆಯ ಜಾಗೃತ ಪ್ರಜ್ಞೆ.  ಎಲ್ಲರಿಗೂ ಎಲ್ಲಕ್ಕೂ ಸಲ್ಲುವ ಆಪದ್ಬಾಂಧವ. ಆತನ ಸಂಪೂರ್ಣ ಚರಿತ್ರೆಯನ್ನು ೩೪ ಅಧ್ಯಾಯಗಳ ಮೂಲಕ ಅತ್ಯಂತ ಸುಂದರವಾಗಿ ಲೇಖಕಿ ಇಲ್ಲಿ ಕಟ್ಟಿಕೊಟ್ಟಿದ್ದಾರೆ.  ಧರ್ಮಕ್ಕೆ ಹಾನಿಯಾದಾಗ ನಾನು ಸಜ್ಜನರನ್ನು ಕಾಪಾಡಿ, ದುರ್ಜನರನ್ನು ನಾಶ ಮಾಡಲು, ಧರ್ಮ ಸಂಸ್ಥಾಪನೆ ಮಾಡಲು ಪ್ರತಿ ಯುಗದಲ್ಲಿ ಭೂಮಿಯಲ್ಲಿ ಅವತರಿಸುವೆನು. ನನ್ನನ್ನು ಯಾವ ದೇವರೆಂದು ಭಾವಿಸುತ್ತೀರೋ ನಾನು ಅವರಿಗೆ ಹಾಗೆ ಅನುಗ್ರಹಿಸುತ್ತೇನೆ ಎನ್ನುವುದು ಶ್ರೀಕೃಷ್ಣನ ಜಗತ್ಪ್ರಸಿದ್ಧ ಸಂದೇಶವನ್ನು ಪ್ರಸ್ತಾಪಿಸಿದ್ದಾರೆ.  
ಈ ಕೃತಿಯಲ್ಲಿ ಕೃಷ್ಣನ ಆಗಮನ, ಕೃಷ್ಣನ ಬಾಲಲೀಲೆ, ನವನೀತ ಚೋರ, ಕೃಷ್ಣ- ರಾಧೆ- ಗೋಪಿಕೆಯರು ಬೃಂದಾವನದಲ್ಲಿ, ಬೃಂದಾವನದಲ್ಲಿ ಬಲರಾಮ ಕೃಷ್ಣ,  ಕೃಷ್ಣನ ಸಂದೇಶ, ದ್ವಾರಕದಲ್ಲಿ ಬಲರಾಮ ಕಲ್ಯಾಣ, ಕೃಷ್ಣ -ರುಕ್ಮಿಣಿ ಕಲ್ಯಾಣ, ಪ್ರದ್ಯುಮ್ನನ ಜನನ, ಸುಭದ್ರಾ ಪರಿಣಯ, ಕೃಷ್ಣ ರುಕ್ಮಿಣಿ ಸಂವಾದ, ಜರಾಸಂಧ ವಧೆ, ರಾಜಸೂಯಾ ಯಾಗ, ಕೃಷ್ಣ ಸುಧಾಮ, ಶಾಂತಿದೂತ ಕೃಷ್ಣ, ಕೃಷ್ಣ ರಾಯಭಾರ, ಅವತಾರದ ಕೊನೆಯ ದಿನಗಳು, ಗೀತೋಪದೇಶ... ಮುಂತಾದ ೩೪ ಅಧ್ಯಾಯಗಳಲ್ಲಿ ಕೃಷ್ಣನನ್ನು ಸಮಗ್ರವಾಗಿ ಪರಿಚಯಿಸಿದ್ದಾರೆ.
 ಪ್ರಾರಂಭದ ಪೂರ್ವ ಪೀಠಿಕೆಯಲ್ಲಿ ಕೃಷ್ಣ ಪ್ರಜ್ಞೆ -ಪ್ರಕೃತಿಯ  ಬಗ್ಗೆ ವಿವರಿಸಿದ್ದಾರೆ. ಪ್ರಕೃತಿಯಿಂದಲೇ ಎಲ್ಲಾ ಕಾರ್ಯಗಳು ನಡೆಯುತ್ತಿವೆ ಎಂಬುದನ್ನು ಅರ್ಥೈಸಿಕೊಂಡ ನಾನು ಸ್ವತಂತ್ರನಲ್ಲ. ಪ್ರಕೃತಿಯ ಶಕ್ತಿಗೆ ಒಳಪಟ್ಟಿದ್ದೇನೆ ಎಂಬ ಅರಿವಿನ ಜ್ಞಾನವುಳ್ಳವನು ಎಂದು ಶ್ರೀಕೃಷ್ಣ ಹೇಳಿಕೊಳ್ಳುತ್ತಾನೆ. ಕೃಷ್ಣ ಯಾರು ಎನ್ನುವ ಅಧ್ಯಾಯದಲ್ಲಿ ಕೃಷ್ಣ ಚಾರಿತ್ರಿಕ ವ್ಯಕ್ತಿಯಾಗಿ ಧೈರ್ಯ, ಶೌರ್ಯ, ರಾಜನೀತಿ ಪಾಂಡಿತ್ಯ ಇದ್ದವನಾಗಿರುತ್ತಾನೆ. ಸಾಮಾನ್ಯ ಮನುಷ್ಯನೂ, ಅದ್ಭುತ ಮನುಷ್ಯನೂ ಹೌದು. ಈ ಎಲ್ಲ ವಿಶೇಷಗಳ ಮೂರ್ತರೂಪವೇ ಶ್ರೀಕೃಷ್ಣ. ಈತ ಪರಿಪೂರ್ಣತೆಯ ಸಂಕೇತ. ಕೃಷ್ಣ ಎಲ್ಲವೂ ಹೌದು. ಅವನಲ್ಲಿ ಬುದ್ಧಿವಂತಿಕೆ, ಚಾಣಾಕ್ಷತನ, ಸಮಯಪ್ರಜ್ಞೆ , ಅಂತ:ಸತ್ವ, ಮೇಧಾವಂತಿಕೆ, ಆರ್ದೃ ಹೃದಯ, ತೀಕ್ಷ್ಣ ಪ್ರತಿಕ್ರಿಯೆ, ಆಳವಾದ ಒಳನೋಟ, ದೂರ ದೃಷ್ಟಿ ಎಲ್ಲವೂ ಇದೆ. ಕುಶಾಗ್ರಮತಿ, ಪ್ರೇಮ -ಸರಸ ಸಂಬಂಧ, ಲಾಲಿತ್ಯ -ನಿರ್ಮಲತ್ವದ ಪ್ರತಿಕ ಕೃಷ್ಣ ನಿರಂಕುಶ ಸರ್ವಾಧಿಕಾರಿಯೂ ಹೌದು ಎನ್ನುವುದನ್ನು ತೋರಿಸುತ್ತಾರೆ.
ಕೊಲ್ಲ ಬಂದವರನ್ನೇ ಕೊಂದ:
    ಗೋಕುಲದಲ್ಲಿ ಶ್ರೀಕೃಷ್ಣ ಜನಿಸಿದಾಗ ತಮ್ಮ ಪ್ರೀತಿಯ ವಾರಸುದಾರರನ್ನು ನೋಡಲು ಎಲ್ಲರೂ ತಮ್ಮ ಕೆಲಸವನ್ನು ಬಿಟ್ಟು ಬರುತ್ತಾರೆ. ಒಂದು ವರ್ಷದಲ್ಲಿ ಹುಟ್ಟಿದ ಎಲ್ಲಾ ಮಕ್ಕಳನ್ನು ಸಾಯಿಸಲು ಕಂಸನು ಪೂತನಿಯನ್ನು ನೇಮಿಸಿ ಆಕೆಯನ್ನು ಗೋಕುಲ ಪ್ರಯಾಣಕ್ಕೆ ಕಳುಹಿಸುತ್ತಾನೆ. ಗೋಕುಲದಲ್ಲಿ ನಂದನ ಅರಮನೆ ಇಂದ್ರಪ್ರಸ್ಥದಂತೆ ಶೋಭಿಸುತ್ತದೆ. ಕಣ್ಣು ಕೋರೈಸುವ ತೊಟ್ಟಿಲಲ್ಲಿ ಮಲಗಿದ್ದ ಶಿಶು ಕೃಷ್ಣನನ್ನು ಎತ್ತಿಕೊಂಡು ತನ್ನೊಳಗಿನ ವಿಷವನ್ನೆಲ್ಲ ಹೀರಿ ಬಿಡು ಎಂಬಂತೆ ಆತನನ್ನು ನೋಡುತ್ತಾಳೆ. ತಕ್ಷಣ ಕೃಷ್ಣನ ಕರ್ಕಶ ಆರ್ತನಾದ ಎಲ್ಲರನ್ನೂ ಬೆಚ್ಚಿ ಬೀಳಿಸುತ್ತದೆ. ಬಂದ ಬೃಹತ್ ಕಾಯದ ರಾಕ್ಷಸಿ ಅಲ್ಲಿ ಸತ್ತು ಬಿದ್ದಿರುತ್ತಾಳೆ. ಹಾಲಿನೊಂದಿಗೆ ರಕ್ತ ಮತ್ತು ಜೀವವನ್ನೇ ಸೆಳೆದಿದ್ದ ಪರಮಾತ್ಮ ವಿಷವುಣಿಸ ಬಂದ ಮಾತೆಗೆ ಮೋಕ್ಷ ನೀಡುತ್ತಾನೆ. ನಂತರ  ಶಕಟನನ್ನು ಶ್ರೀಕೃಷ್ಣನ ಸಂಹಾರಕ್ಕೆ ಕಂಸ ಕಳುಹಿಸುತ್ತಾನೆ. ಶಕಟ ಬಂಡಿಯ ಚಕ್ರದಲ್ಲಿ ಅಡಗಿಕೊಂಡಿರುತ್ತಾನೆ. ಕೃಷ್ಣ ಆಡುತ್ತಿರುವಾಗ ತನ್ನ ಮೇಲೇರಿ ಬಂದ ಚಕ್ರವನ್ನು  ತನ್ನ ಹೆಬ್ಬೆರಳಿನಿಂದಲೇ ತಳ್ಳುತ್ತಾನೆ. ಅದು ನುಚ್ಚುನೂರಾಗಿ ಹರಡಿ ಬೀಳುತ್ತದೆ. ನಂತರ ತೃಣಾವರ್ತ ಎಂಬ ರಕ್ಕಸ ಮತ್ತೆ ಕೃಷ್ಣನನ್ನು ಕೊಲ್ಲಲು ಕಂಸನಿಂದ ನೇಮಕಗೊಳ್ಳುತ್ತಾನೆ. ಸುಂಟರಗಾಳಿಯಂತೆ ಬಂದ ಆತ ಆಗಸಕ್ಕೇರಿ ಶ್ರೀಕೃಷ್ಣನನ್ನು ಕೆಳಗೆ ಬೀಳಿಸಲು ಸಜ್ಜಾಗುತ್ತಾನೆ. ಆದರೆ ಕೃಷ್ಣನ ಭಾರ ಹೆಚ್ಚಾಗುತ್ತದೆ. ಆಗ ತೃಣಾವರ್ತನ ಕೊರಳನ್ನು ಕೃಷ್ಣ ಬಿಗಿ ಹಿಡಿದುರುಳುತ್ತಾನೆ. ಇದರಿಂದ ಉಸಿರುಗಟ್ಟ್ಟಿ ಧೊಪ್ಪೆಂದು ನೆಲಕ್ಕೆ ಬೀಳುತ್ತಾನೆ.
 ಹೀಗೆ ಕೃಷ್ಣ ತುಂಟನಾಗಿ ಬೆಳೆಯುತ್ತಾ, ತನ್ನನ್ನು ಕೊಲ್ಲ ಬಂದವರೆಲ್ಲರನ್ನು ತಾನೇ ಕೊಲ್ಲುತ್ತಾನೆ. ಎಷ್ಟೇ ತುಂಟತನ ಮಾಡುತ್ತಿದ್ದರೂ ಯಾರೂ ಆತನನ್ನು ಬಯ್ಯುವುದು, ಹೊಡೆಯುವುದು ಮಾಡುವುದಿಲ್ಲ. ಬದಲಿಗೆ ಅದನ್ನು ನೋಡಿ ಸಂತೋಷಪಡುತ್ತಿದ್ದರು. ಬೆಣ್ಣೆ ಕದಿಯುವುದರ ಜೊತೆಗೆ ಪ್ರತಿಯೊಬ್ಬರ ಮನಸ್ಸನ್ನು ಕದಿಯುತ್ತಿದ್ದ.  ಬೆಣ್ಣೆ ಮಾನವನ ಆಧ್ಯಾತ್ಮಿಕ ಮನೋಭಾವವನ್ನು ತಿಳಿಸುವಂಥದ್ದು. ಅದು ಮೃದು ಮತ್ತು ಕಶ್ಮಲರಹಿತ. ನಮ್ಮ ಅಂತರಂಗ ಕೂಡ ಬೆಣ್ಣೆಯಂತೆ ಇರಬೇಕು. ಹೃದಯದಲ್ಲಿರುವ ಕೆಟ್ಟ ಅಂಶಗಳನ್ನು ತೆಗೆದು ಬೆಣ್ಣೆ ರೂಪದ ಪ್ರೀತಿಯನ್ನು ತುಂಬಿಕೊಳ್ಳಬೇಕು. ಹಾಗಾಗಿ ಕೃಷ್ಣನನ್ನು ಬೆಣ್ಣೆಕಳ್ಳ ಎಂದು ತೋರಿಸಲಾಗುತ್ತಿದೆ.
 ಬೆಳೆದಂತೆ ಕೃಷ್ಣ ಗೋಪಾಲಕರ ಜೊತೆಗೆ ಗೋಕುಲದಿಂದ ಬೃಂದಾವನದತ್ತ ತೆರಳುತ್ತಾನೆ. ಗೋಪಾಲಕರು ಗೋವರ್ಧನಗಿರಿಯಲ್ಲಿ ದನಗಳನ್ನು ಮೇಯಿಸುವಾಗ ಕೋಪಗೊಂಡ ಇಂದ್ರ ಮಳೆ ಮತ್ತು ದೇವತೆಗಳನ್ನು ಕರೆದು ಭೀಕರ ಮಾರುತಗಳನ್ನು ಪ್ರವಾಹಗಳನ್ನು ಸೃಷ್ಟಿಸುತ್ತಾನೆ. ಆದರೆ ದೇವತೆಗಳೆಲ್ಲರೂ ಇಂದ್ರನ ತಪ್ಪಿಗೆ ಕೃಷ್ಣನ ಬಳಿ ಕ್ಷಮೆ ಕೇಳುತ್ತಾರೆ. ಕೃಷ್ಣ ಗೋವರ್ಧನಗಿರಿಯನ್ನು ಮೇಲೆ ಎತ್ತಿ ಪವಾಡ ಪುರುಷ ಎನಿಸಿಕೊಳ್ಳುತ್ತಾನೆ. ನಂತರ ಕೃಷ್ಣನಿಗೆ ಕಾಮಧೇನುವಿನಿಂದ ಪಟ್ಟಾಭಿಷೇಕ ಮಾಡಿಸಲು ಮುಂದಾದಾಗ ಕಾಮಧೇನು ಧಾರಾಕಾರ ಹಾಲು ಸುರಿಸುತ್ತಾಳೆ.
 ಕೊಳಲಗಾನದಿಂದ ಎಲ್ಲರನ್ನೂ ತನ್ಮಯರನ್ನಾಗಿಸಿದ್ದ  ಶ್ರೀಕೃಷ್ಣ  ಗೋಪಿಕೆಯರೊಡನೆ ಕೃಷ್ಣಭಾವದಲ್ಲಿ ಮುಳುಗಿದ್ದ. ನಿನ್ನ ಕೊಳಲ ಕರೆಯಿಂದ ನಾವು ಸಂಸಾರ ತ್ಯಜಿಸಿ ಬಂದಿದ್ದೇವೆ. ಈಗ ನೀವು ಮರಳಿ ಎಂದರೆ ಯಾವ ಸಂಸಾರಕ್ಕೆ ಮರಳಬೇಕು, ನೀನೇ ಅಲ್ಲವೇ ಎಲ್ಲರಿಗೂ ಪತಿ? ಎಂದು ಕಣ್ಣೀರಿಡುತ್ತಾರೆ. ಕೊಳಲ ಗಾನಕ್ಕೆ  ನೃತ್ಯದೊಂದಿಗೆ ಎಲ್ಲರೂ ಪರಸ್ಪರರ ತೋಳು ಬಳಸಿ ನರ್ತಿಸುತ್ತಿರುತ್ತಾರೆ. ಕೃಷ್ಣ ಮಾಯವಾಗಿ ಮತ್ತೆ ಪ್ರತ್ಯಕ್ಷನಾದಾಗ ಗೋಪಿಕೆಯರ ವಿರಹ ವೇದನೆ ಬೃಂದಾವನವನ್ನು ತುಂಬುತ್ತದೆ. ನಿಮ್ಮ ಇಹದ ಕಟ್ಟು ಕಳಚಿ ಮನೆಯಲ್ಲಿದ್ದು ನನ್ನ ಉಪಾಸನೆ ಮಾಡಿಕೊಂಡಿರಿ. ಇನ್ನಾರೂ ನಿಮ್ಮನ್ನು ತಡೆಯಲಾಗದು ಎಂದು ಅವರನ್ನು ಮನೆಗೆ ಕಳುಹಿಸುತ್ತಾನೆ.
ಅತ್ಯುನ್ನತ ಪ್ರೇಮ:
ಕೃಷ್ಣನ ರಾಸಲೀಲೆ ಮುಗಿದರೂ ರಾಧೆ ಮಾತ್ರ ಉಳಿದಿರುತ್ತಾಳೆ. ಕೃಷ್ಣನ ಜೊತೆ ಸ್ನೇಹದಿಂದ ಇದ್ದವಳು ರಾಧೆ. ರಾಧೆ ಕೃಷ್ಣನ ಪ್ರೇಮದಲ್ಲಿ ಮುಳುಗಿ ತನ್ನನ್ನು ವಿವಾಹವಾಗುವಂತೆ ಕೇಳುತ್ತಾಳೆ. ಆದರೆ ‘ವಿವಾಹವಾಗಲು ಎರಡು ಆತ್ಮಗಳು ಬೇಕು’ ಎಂದು ಕೃಷ್ಣ ಹೇಳುತ್ತಾನೆ. ‘ನಾನು ನೀನು ಒಂದೇ ಆತ್ಮವಾಗಿರುವಾಗ ಹೇಗೆ ವಿವಾಹವಾಗಲಿ’ ಎಂದು ಮರುಪ್ರಶ್ನಿಸುತ್ತಾನೆ. ಕೃಷ್ಣ ರಾಧೆಯರ ಸಂಬಂಧ ಅತ್ಯುನ್ನತ ಪ್ರೇಮಕ್ಕೆ ಉದಾಹರಣೆ ಎನ್ನುವುದನ್ನು ಇಲ್ಲಿ ಕಾಣಬಹುದು. ಇಲ್ಲಿ ಭಕ್ತಿ ಇದೆ, ಪ್ರೀತಿ ಇದೆ, ತ್ಯಾಗವಿದೆ, ಬದ್ಧತೆ ಇದೆ, ಸಹಸ್ರಾರು ಪತ್ನಿಯರಿದ್ದರೂ ಕೇವಲ ಪ್ರೇಮಿಯಾಗಿಯೇ ರಾಧೆ ಉಳಿಯುತ್ತಾಳೆ. ಅಂದರೆ ಅವರ ಪ್ರೇಮ ದೈವತ್ವಕ್ಕೇರಿತ್ತು ಎನ್ನುವುದನ್ನು ಇಲ್ಲಿ ಅರಿಯಬಹುದು. ರಾಧೆ ಶ್ರೀಕೃಷ್ಣನ ಅಂತಃಶಕ್ತಿಯಾಗಿದ್ದಳು. ಕೃಷ್ಣನ ಸ್ತ್ರೀ ರೂಪ ಎಂದು ಕೆಲವೆಡೆ ಪರಿಗಣಿಸಲಾಗುತ್ತಿದೆ. ಪುರಾಣೇತಿಹಾಸಗಳ ಪ್ರಕಾರ, ರಾಧಾಕೃಷ್ಣರು ಶಿವ ಶಕ್ತಿಯಂತೆ ಅರ್ಧನಾರೀಶ್ವರರ ತತ್ವದಂತೆ.
 ಇತ್ತ ಮಗಧೆಯ ರಾಜ ಜರಾಸಂಧ ಮಥುರೆಯತ್ತ  ಸೈನ್ಯದೊಂದಿಗೆ ಬರುವ ಸೂಚನೆ ಸಿಗುತ್ತದೆ. ಕೃಷ್ಣ ಇವನನ್ನೆದುರಿಸಲು ತಂತ್ರ ಹೂಡಿರುತ್ತಾನೆ.  ಇದೇ ವೇಳೆ ಹಸ್ತಿನಾವತಿಯ ವಾರಣಾವತಾರದ ಅರಮನೆಯಲ್ಲಿ ಪಾಂಡವರು ಸುಟ್ಟು ಭಸ್ಮವಾದ ಸುದ್ದಿ ಬರುತ್ತದೆ. ಕೃಷ್ಣ- ಬಲರಾಮರು ಅಲ್ಲಿಗೆ ಹೊರಡುತ್ತಾರೆ. ತಿಥಿ ಕಾರ್ಯ ಮುಗಿದ ನಂತರ ರೈವತ ಎಂಬ ರಾಜ ತನ್ನ ಮಗಳು ರೇವತಿಯನ್ನು ಬಲರಾಮನಿಗೆ ಕೊಟ್ಟು ಮದುವೆ ಮಾಡುತ್ತಾನೆ.
   ಇತ್ತ ಮಥುರೆಯಲ್ಲಿ  ಕೃಷ್ಣ ಬಂದರೆ ತನಗೆ ಉಳಿಗಾಲವಿಲ್ಲ ಎಂದು ಅರಿತ ಕಂಸ ಖಡ್ಗವನ್ನು ಹಿಡಿದುಕೊಂಡು ಕೃಷ್ಣನನ್ನು ಕೊಲ್ಲಲು ಬರುತ್ತಾನೆ. ಕೃಷ್ಣ ಹಾರಿ ಆತನ ಹಿಂದೆ ಹೋಗಿ ನಿಂತು ಕಂಸನ ಕೂದಲನ್ನು ಹಿಡಿದೆಳೆದು, ಕುತ್ತಿಗೆ ಹಾರಿಸುತ್ತಾನೆ. ಕುತ್ತಿಗೆಯಲ್ಲಿದ್ದ ಶಂಖವನ್ನು ತೆಗೆದು ಊದಿ ತನ್ನ ಗೆಲುವಿನ ಘೋಷಣೆ ಮಾಡುತ್ತಾನೆ. ಹದಿನಾರರ ಹರಯದ ದೇವಕಿ ಪುತ್ರ ಕಂಸನನ್ನು ಕೊಲ್ಲುತ್ತಾನೆ. ಪತಿ ಕಂಸ ಸತ್ತ ನಂತರ ಆತನ ಪತ್ನಿಯರು ತವರಾದ ಮಗಧ ದೇಶಕ್ಕೆ ಬರುತ್ತಾರೆ. ಮಗಧದ ರಾಜ ಜರಾಸಂಧ ಕೃಷ್ಣ- ಬಲರಾಮನ ಮೇಲೆ ಅಂದರೆ ಮಥುರೆಯ ಮೇಲೆ ಯುದ್ಧಸಾರುತ್ತಾನೆ. ಜನಸಂದಣಿ  ಇದ್ದಾಗ ಸೈನಿಕನೊಬ್ಬ ಬೆಂಕಿ ಹಚ್ಚುತ್ತಾನೆ. ಇದರಿಂದ ಉರಿಯುವ ಬೆಂಕಿ ಮೇಲೇರಿ ಮೋಡಸಾಂದ್ರವಾಗಿ ಪ್ರವಾಹದಂತೆ ಮಳೆ ಬೀಳುತ್ತದೆ. ಆಗ ಜರಾಸಂಧನ ಸೈನ್ಯ ಪ್ರವಾಹದಲ್ಲಿ  ಸಿಲುಕುತ್ತದೆ. ಇದರಿಂದ ಸಿಟ್ಟಿಗೆದ್ದ ಜರಾಸಂಧ ಮಥುರೆಗೆ ಬೆಂಕಿ ಹಚ್ಚಿ ಸುಟ್ಟು ಬೂದಿಯಾಗಿಸುತ್ತಾನೆ. ಇತ್ತ ದ್ವಾರಕಾದಿಂದ  ಅಣ್ಣ-ತಮ್ಮ ಬಂದಾಗ ಬಲರಾಮನಿಗೆ ರೇವತಿಯೊಡನೆ ವಿವಾಹ ನಿಶ್ಚಯವಾಗಿ ಸಾಂಗವಾಗಿ ನಡೆಯುತ್ತದೆ.
ಕೃಷ್ಣ -ರುಕ್ಮಿಣಿ ಕಲ್ಯಾಣ:
ಬಳಿಕ ಕೃಷ್ಣ -ರುಕ್ಮಿಣಿ ಕಲ್ಯಾಣಕ್ಕೆ ದ್ವ್ವಾರಕೆಯಲ್ಲಿ ಸಂಭ್ರಮ. ಊರೆಲ್ಲಾ ದೇವಲೋಕದಂತೆ ಸಜ್ಜುಗೊಳ್ಳುತ್ತಿದ್ದವು. ಇದನ್ನು ಕಣ್ತುಂಬಿಕೊಳ್ಳಲು ಸಮಸ್ತ ಜನರು ನೆರೆದಿದ್ದಾರೆ. ಆದರೆ ರಥದಲ್ಲಿ ಕೃಷ್ಣ ಬರುತ್ತಾನೆಂದು ಕಾದು ಕುಳಿತಿದ್ದವರಿಗೆ ಕೇಳಿದ್ದು ಪಾಂಚಜನ್ಯದ ಮೊರೆತ.  ಎಲ್ಲರೂ ಬೆಚ್ಚುತ್ತ್ತಾರೆ. ಆದರೂ ‘ನ ಭೂತೋ ನ ಭವಿಷ್ಯತಿ’ ಎನ್ನುವಂತೆ ವಿವಾಹ ನಡೆಯುತ್ತದೆ. ನಂತರ ಹಸ್ತಿನಾವತಿಗೆ ಕೃಷ್ಣ -ಬಲರಾಮರು ಬರುತ್ತಾರೆ. ಪಾಂಡವರು ಜೀವಂತ ಇರುವ ವಿಚಾರ ಗೊತ್ತಾಗುತ್ತದೆ.
  ಅಲ್ಲಿ ಅಪರಿಮಿತ ಚೆಲುವಿನ ಗಣಿಯಾಗಿದ್ದ ರಾಜಕುಮಾರಿ ಸುಭದ್ರೆಯ ಅಂದಕ್ಕೆ ಮನಸೋತು ಅರ್ಜುನ ವಿವಾಹವಾಗಲು ಇಷ್ಟಪಡುತ್ತಾನೆ. ಆದರೆ ಅವನಿಗೆ ನಿರಾಶೆ ಕಾದಿರುತ್ತದೆ. ದುರ್ಯೋಧನನಿಗೆ ಆಕೆಯನ್ನು ಕೊಟ್ಟು ವಿವಾಹ ಮಾಡಲು ಬಲರಾಮ ಉದ್ದೇಶಿಸಿದ್ದ. ಇದನ್ನರಿತ ಕೃಷ್ಣ  ಸನ್ಯಾಸಿ ವೇಷದಲ್ಲಿ ಅರ್ಜುನನನ್ನು ದ್ವಾರಕೆಗೆ ಕಳುಹಿಸುತ್ತಾನೆ. ಶ್ರೀಕೃಷ್ಣನ ಬಳಿ ಸುಭದ್ರೆ ತಾನು ಸನ್ಯಾಸಿಯನ್ನು ಮನಸಾರೆ ಪ್ರೀತಿಸುತ್ತಿರುವುದಾಗಿಯೂ, ಆತನ ಚೆಲುವಿಗೆ ಮನಸೋತಿ ತಿರುವುದಾಗಿಯೂ ಹೇಳುತ್ತಾಳೆ. ಆಗ ಕೃಷ್ಣನ ಆತ ಅರ್ಜುನ ಎನ್ನುವುದನ್ನು ಬಹಿರಂಗಪಡಿಸುತ್ತಾನೆ.
ರಾಜಸೂಯ ಯಾಗ:
 ಹಸ್ತಿನಾವತಿಯಲ್ಲಿ ಅಣ್ಣ ಧರ್ಮರಾಜ ರಾಜ ಅಪರೂಪದ ರಾಜಸೂಯ ಯಾಗವನ್ನು ಮಾಡಬೇಕು. ಇದನ್ನು ಮಾಡಿ ಲೋಕವನ್ನೆಲ್ಲ ಆಳಬೇಕು. ಜರಾಸಂಧನ ಯತ್ನ ವಿಫಲಗೊಳಿಸಿ ಲೋಕಕ್ಕೆ ಸಾಮ್ರಾಟನಾಗಬೇಕು ಎಂದು ಶ್ರೀಕೃಷ್ಣ ಹೇಳುತ್ತಾನೆ. ಗಹಗಹಿಸಿ ನಕ್ಕ ಜರಾಸಂಧ, ನನ್ನ ಎದುರಿಸಲಾಗದೆ ೧೮ ಬಾರಿ ಓಡಿ ಹೋದವ ಈಗ ಮಲ್ಲಯುದ್ಧಕ್ಕೆ ಕರೆಯುತ್ತಿದ್ದಾನೆ ಎನ್ನುತ್ತಾ ಶ್ರೀಕೃಷ್ಣನನ್ನು ತಿರಸ್ಕಾರದಿಂದ ಕಾಣುತ್ತಾನೆ. ಸಾಮ್ರಾಟನಾಗಬೇಕು ಎಂದುಕೊಂಡಿದ್ದ ಜರಾಸಂಧಾನ ಯುದ್ಧ ಆರಂಭವಾದಂತೆ ಭೀಮನು ಜರಾಸಂಧನನ್ನು ಮೇಲಕ್ಕೆತ್ತಿ ಬಿಸಾಡಿದಾಗ ಆತ ಎರಡು ಸೀಳಾಗಿ ಪರಸ್ಪರ ವಿರುದ್ಧವಾಗಿ ಎಸೆಯಲ್ಪಡುತ್ತಾನೆ, ಸಾಯುತ್ತಾನೆ. ಧರ್ಮರಾಯ ಎಲ್ಲರನ್ನೂ ಅಪ್ಪಿ ಆನಂದಭಾಷ್ಪ ಸುರಿಸುತ್ತಾನೆ.
ರಾಜಸೂಯಾಗದಲ್ಲಿ ಭೀಷ್ಮನು  ಧರ್ಮರಾಜ ಯುಧಿಷ್ಠಿರನಿಗೆ ಯಾರಿಗೆ ಮೊದಲ ಉಡುಗೊರೆಯನ್ನು ಕೊಡಬೇಕೆಂದು ಕೇಳುತ್ತಾನೆ. ಆಗ ಭೀಷ್ಮನು ಕೃಷ್ಣನೇ ಈ ಅರ್ಹತೆ, ಗೌರವ ಇರುವ ವ್ಯಕ್ತಿ ಎಂದು ಹೇಳುತ್ತಾನೆ. ನಂತರ ಅಘವನ್ನು ಸಮರ್ಪಿಸಿ ಕಾಣಿಕೆ ಕೊಡುತ್ತಾನೆ. ಆಗ ಭೀಷ್ಮನು ‘ಲೋಕದಲ್ಲಿ ಎಲ್ಲರಿಗಿಂತ ಹಿರಿಯನು ನೀನು. ನಿನ್ನನ್ನು ತಿರಸ್ಕರಿಸುವವನಿಗೆ ಯಾವುದೇ ರೀತಿಯ ಸಭ್ಯತೆ ತೋರಿಸಬಾರದು’ ಎಂದು ಕೃಷ್ಣನಿಗೆ ಹೇಳುತ್ತಾನೆ. ಅಲ್ಲಿಂದ ಬೀಳ್ಕೊಂಡು ಕೃಷ್ಣ ದ್ವ್ವಾರಕೆಗೆ ಮರಳುತ್ತಾನೆ.
ರಾಜಸೂಯಾದಲ್ಲಿ ಶಿಶುಪಾಲ ವಧೆಯಾಗುತ್ತಾನೆ. ಇತ್ತ ಶ್ರೀಕೃಷ್ಣ ದ್ವಾರಕೆಯಲ್ಲಿದ್ದಾನೆ ಎನ್ನುವುದರಿತು ಶಿಶುಪಾಲನ ಮಿತ್ರ ಶಾಲ್ವ ಮಹಾರಾಜ ದ್ವಾರಕೆಗೆ ಮುತ್ತಿಗೆ ಹಾಕುತ್ತಾನೆ. ಈ ಬಗ್ಗೆ ಬಲರಾಮ ಕೃಷ್ಣರಿಗೆ ಮಾಹಿತಿ ಬರುತ್ತದೆ. ಕೃಷ್ಣನನ್ನು ಕೊಲ್ಲುವ ಶಪಥವನ್ನು ರುಕ್ಮಿಣಿಯ ಸ್ವಯಂವರ ವೇಳೆ ಈತ ಮಾಡಿರುತ್ತಾನೆ. ದ್ವಾರಕೆಗೆ ದಾಳಿ ಮಾಡಿ ಅಪಾರ ಹಾನಿ ಮಾಡುತ್ತಾನೆ. ಪ್ರದ್ಯುಮ್ನ  ಶಾಲ್ವನ ಶಸ್ತ್ರಾಗಾರವನ್ನೇ ನಾಶ ಮಾಡುತ್ತಾನೆ. ಇತ್ತ ಪಾಂಚಜನ್ಯದ ಶಬ್ದ ಕೇಳಿ  ಯಾದವ ವೀರರೆಲ್ಲ ಪುಟಿದೆದ್ದಾಗ  ಆ ರಾಜ ಮಾಯವಾಗುತ್ತಾನೆ.
ರಾಯಭಾರಿಯಾಗಿ ಶ್ರೀಕೃಷ್ಣ:
ಕೌರವರಿಂದ ಮೋಸದ ದ್ಯೂತದಲ್ಲಿ ರಾಜ್ಯವಂಚಿತರಾದ ಪಾಂಡವರಿಗೆ ನ್ಯಾಯಸಮ್ಮತವಾಗಿ ರಾಜ್ಯಬಿಟ್ಟು ಕೊಡಬೇಕಾಗುತ್ತದೆ.  ಆಗ ಧೃತರಾಷ್ಟ್ರ ದುರ್ಯೋಧನನನ್ನು ಕೇಳಲಿ, ಅವನು ಕೊಟ್ಟರೆ ಸಂತೋಷ, ನಾನು ಯುದ್ಧ ಬಯಸುವುದಿಲ್ಲ ಎನ್ನುತ್ತಾನೆ. ಕೃಷ್ಣ ಪಾಂಡವರ ರಾಯಭಾರಿಯಾಗಿ
ಹಸ್ತಿನಾವತಿಗೆ  ಆಗಮಿಸುತ್ತಾನೆ. ಅಲ್ಲಿ ಸಂಧಾನ ನಡೆಯುತ್ತದೆ. ಆದರೆ ದುರ್ಯೋಧನ ಮಾತು ಕೇಳುವುದಿಲ್ಲ. ಕೃಷ್ಣನನ್ನೇ ಕುತಂತ್ರದಿಂದ ಬಂಧಿಸಲೆತ್ನಿಸುತ್ತಾನೆ. ಆಗ ಕೃಷ್ಣ ತನ್ನ  ನಿಜರೂಪ ಪ್ರಕಟಿಸುತ್ತಾನೆ. ಎದುರಿದ್ದ್ದ ಎಲ್ಲರಿಗೂ ಎಲ್ಲೆಲ್ಲೂ ಕೃಷ್ಣ ಕಾಣತೊಡಗಿದ. ನಂತರ ‘ನೀನು ಅನ್ಯಾಯ, ಅಧರ್ಮ ಮಾಡುತ್ತ್ತಿರುವೆ. ಸಾಧ್ಯವಾದಷ್ಟು ನಿನಗೆ ಹೇಳಿದ್ದೇನೆ. ಕಾಲಾಯ ತಸ್ಮೈ ನಮಃ’ ಎನ್ನುತ್ತಾ ಕೃಷ್ಣ ಅಲ್ಲಿಂದ ನಿರ್ಗಮಿಸುತ್ತಾನೆ.
ಯುದ್ಧಕ್ಕೆ ಸೈನ್ಯ ಜಮಾವಣೆಯಾಗತೊಡಗುತ್ತದೆ. ಅರ್ಜುನ, ದುರ್ಯೋಧನ ಕೃಷ್ಣನ ಅರಮನೆಗೆ ಬಂದಾಗ ಕೃಷ್ಣ, ನಾನು ಯುದ್ಧ ಮಾಡಲಾರೆ ಎನ್ನುತ್ತಾನೆ. ಅರ್ಜುನ ಕೃಷ್ಣನನ್ನು ಸಾರಥಿಯಾಗಿ ಆಯ್ಕೆ ಮಾಡಿಕೊಳ್ಳುತ್ತಾನೆ. ರಣೋತ್ಸಾಹ ಉಕ್ಕುತ್ತಿರುವಂತೆಯೇ ಅರ್ಜುನ ‘ನಾನು  ಮಹಾರಾಜರನ್ನು, ಭೀಷ್ಮರನ್ನು ದ್ರೋಣರನ್ನು, ನನ್ನ ಕುಲವನ್ನೇ ಕೊಲ್ಲ ಹೊರಟಿದ್ದೇನೆ ಎಂದು ದುಃಖಿಸುತ್ತಾ ಯುದ್ಧ ಒಲ್ಲೆ ಎಂದು ಗಾಂಢೀವವನ್ನು ಕೆಳಗಿಡುತ್ತಾನೆ. ಆಗ ಕೃಷ್ಣ ತನ್ನ ವಿಶ್ವರೂಪ ದರ್ಶನ ಮಾಡಿಸುತ್ತಾ ೧೮ ಅಧ್ಯಾಯದ ಗೀತೆಯೊಂದಿಗೆ ಸಂದೇಶವನ್ನು ನೀಡುತ್ತಾನೆ.
ದುರ್ಯೋಧನನ ಸಾವಿನೊಂದಿಗೆ ೧೮ ದಿನದ ಯುದ್ಧ ಮುಗಿದು ಧರ್ಮರಾಜ ಸಿಂಹಾಸನವೇರುತ್ತಾನೆ. ಇತ್ತ ತನ್ನ ಹೊಣೆ ಮುಗಿಯಿತೆಂದು ಕೃಷ್ಣ ನಿರಾಳನಾಗುತ್ತಾನೆ.  ಸಮುದ್ರ ತೀರಲ್ಲಿ ಕುಳಿತು ಯೋಗ ಶಕ್ತಿಯಿಂದ ತನ್ನನ್ನು ಪರಮಾತ್ಮನಲ್ಲಿ ವಿಲೀನಗೊಳಿಸಿಕೊಳ್ಳುತ್ತಾನೆ. ಮುಚ್ಚಿದ ಕಂಗಳೆದುರು ರಾಧೆ ಪ್ರತ್ಯಕ್ಷಳಾಗುತ್ತಾಳೆ. ಅವಳ ಕೈಯಲ್ಲಿ ಕೊಳಲಿದೆ. ಅವಳ ಮಡಿಲಿಗೆ ಒರಗಿ, ರೆಪ್ಪೆ ಮುಚ್ಚಿದಂತೆಯೇ ಕೊಳಲನ್ನು ತುಟಿಗಿಡುವ ಕೃಷ್ಣ ಅಲ್ಲಿಯೇ ಯೋಗ ಸಮಾಧಿಗೆ ಜಾರುತ್ತಾನೆ.
ಕೃಷ್ಣನ ಕಥೆ ಓದಿದ ಮೇಲೆ:
 ಕೃಷ್ಣನ ಕಥೆ ಓದಿದ ಮೇಲೆ ನಮಗೆ ಅರಿವಾಗುವುದೆಂದರೆ, ಕೃಷ್ಣ ಮತ್ತು ಆತನ ಜೀವನ ಪ್ರತಿಯೊಬ್ಬ ಮನುಷ್ಯನಿಗೆ ನಿಜಕ್ಕ್ಕೂ ಉದಾಹರಣೆ ಎನ್ನುವುದು. ಆತ ತನ್ನ ಜೀವನದುದ್ದಕ್ಕೂ ಒಂದು ನಿಮಿಷವೂ ಶಾಂತಿಯಿಂದಿರಲಿಲ್ಲ.  ಪ್ರತಿ ಬಾರಿಯೂ ದೊಡ್ಡ ಸವಾಲನ್ನೇ ಎದುರಿಸಿದ್ದಾನೆ. ಎಲ್ಲವನ್ನೂ ಜವಾಬ್ದಾರಿಯುತ ಪ್ರಜ್ಞೆಯೊಂದಿಗೆ ಎದುರಿಸಿದ್ದಾನೆ.  ಸೋದರ ಸಂಬಂಧಿಗಳ ವನವಾಸದ ಸಮಯದಲ್ಲಿ ಅವರೊಂದಿಗೆ ನಿಲ್ಲುತ್ತಾನೆ. ಗತ, ಮತ್ತು ಭsವಿಷ್ಯವನ್ನು ತಿಳಿದಿದ್ದ ಏಕೈಕ ವ್ಯಕ್ತಿ ಆತ. ಯಾವಾಗಲೂ ಆ ಕ್ಷಣದಲ್ಲಿ ಮಾತ್ರ ಆತ ವಾಸಿಸುತ್ತಿದ್ದ.
 ಎಲ್ಲ ರೀತಿಯಿಂದಲೂ ಕೃಷ್ಣ  ತನ್ನ ಕಾರ್ಯಚಟುವಟಿಕೆಗಳ ಮೂಲಕ ಮನುಕುಲಕ್ಕೆ ಸಂದೇಶ ನೀಡಿದ್ದಾನೆ. ತತ್ವ ಮತ್ತು ಸಂದೇಶಗಳು ಸೇರಿದಂತೆ ಕೃಷ್ಣನ ಕಥೆಗಳನ್ನು ಮಕ್ಕಳಿಗೆ ತಲುಪಿಸಬೇಕು. ಖಾಲಿ ಕೈಯಲ್ಲಿ ಮರಳುವ ನಾವು  ಬದುಕು -ಸಾವನ್ನು ಮರೆತು ಹಾರಾಡುತ್ತೇವೆ. ಆದರೆ ಬದುಕನ್ನು ಹೇಗೆ ಸಾಗಿಸಬೇಕುವ, ಸುಂದರವಾಗಿಸಿಕೊಳ್ಳಬೇಕು  ಎನ್ನುವುದಕ್ಕೆ ಶ್ರೀ ಕೃಷ್ಣ ಆದರ್ಶನಾಗಿ ನಿಲ್ಲುತ್ತಾನೆ
,,,,,,,,,,,,,,,,,,,,,,,,,,,,,,,,,,

 

Comments

Popular posts from this blog