ಕಟು ಸತ್ಯದ ‘ಮೌನದ ಚಿಪ್ಪಿನೊಳಗೆ ’

.................................

ಪ್ರತಿನಿತ್ಯ ಹೆಣ್ಣಿನ ಮೇಲಿನ ದೌರ್ಜನ್ಯ, ಶೋಷಣೆಯನ್ನು ನೋಡುತ್ತಿದ್ದೇವೆ, ಕೇಳುತ್ತಿದ್ದೇವೆ. ಇವಕ್ಕೆಲ್ಲ ನ್ಯಾಯ ಎಷ್ಟರ ಮಟ್ಟಿಗೆ ಸಿಗಬಹುದೆನ್ನುವುದು ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ. ಪ್ರಸ್ತುತ “ಮೌನದ ಚಿಪ್ಪಿನೊಳಗೆ” ಕೃತಿಯನ್ನು ಲೇಖಕಿ ಧರಣಿ ಮಾಯೆ ಅವರು ಇದೇ ವಿಷಯವನ್ನಿಟ್ಟುಕೊಂಡು ರಚಿಸಿದ್ದಾರೆ. ಜೊತೆಗೆ ಸಂತೋಷ ಮತ್ತು ನೆಮ್ಮದಿಯ ಜೀವನಕ್ಕೆ ಸ್ತ್ರೀ-ಪುರುಷರಿಬ್ಬರ ಕಾಣಿಕೆಯೂ ಇದೆ ಎನ್ನುವ ಪರಿಹಾರವನ್ನೂ ಸೂಚಿಸಿದ್ದಾರೆ.
 ಕೃತಿಯಲ್ಲಿ ಕೇವಲ ಗೃಹಿಣಿಯ ಪರ ಮಾತ್ರವಲ್ಲ, ಪುರುಷರು ಮತ್ತು ಮಕ್ಕಳ ಬಗ್ಗೆಯೂ ಬರೆಹಗಳಿವೆ. ನಮ್ಮೆಲ್ಲರ ನಡುವೆಯೇ ನಡೆಯುವಂತಹ ದೌರ್ಜನ್ಯ, ಶೋಷಣೆ, ಅತ್ಯಾಚಾರದ ಘಟನೆಗಳನ್ನು ನೆನಪಿಸುತ್ತ ಕುಟುಂಬಗಳು ಅನುಭವಿಸುತ್ತಿರುವ ತವಕ, ತಲ್ಲಣ, ಬೇಗುದಿಯನ್ನು ವಿವರಿಸಿದ್ದಾರೆ.  
ಇಲ್ಲಿ ಪುರುಷರ ಬಗ್ಗೆಯೂ ಕಾಳಜಿ ವಹಿಸುತ್ತ ಅವರ ನೋವುಗಳನ್ನು, ಪೂರ್ಣವಾಗಿ ಅರಳದ ಹೂ ಮನಸ್ಸಿನ ಮಕ್ಕಳ  ಮತ್ತು ಯುವಪೀಳಿಗೆಯ ಮನೋಸ್ಥಿತಿಯ ಸೂಕ್ಷ್ಮತೆಗಳನ್ನು ಹೊರತರುವ ಪ್ರಯತ್ನವೂ ಇದೆ ಎಂದು ಲೇಖಕಿ ಹೇಳಿಕೊಂಡಿದ್ದ್ದಾರೆ.
ಮೌನದ ಚಿಪ್ಪಿನೊಳಗೆ ಹೊತ್ತಗೆಯಲ್ಲಿ ೧೫ ಲೇಖನಗಳಿವೆ. ಲೇಖನಗಳು ಚಿಕ್ಕದಾದರೂ ಮಹತ್ವದ ಅಂಶಗಳನ್ನು ಒಳಗೊಂಡಿವೆ. ಇದರಲ್ಲಿನ  ಎಲ್ಲಾ ವಿಷಯಗಳು ನಮಗೆ ತಿಳಿದಿರುವಂತಹವೇ.  ಆದರೆ ಅದನ್ನು  ಇನ್ನೊಮ್ಮೆ ಓದುವಂತೆ ಸರಳ ಮತ್ತು ಸುಲಲಿತ ಭಾಷೆಯಲ್ಲಿ ತೆರೆದಿಟ್ಟಿದ್ದಾರೆ. ಜೊತೆಗೆ ಪ್ರತಿ ಲೇಖನದ ಕೊನೆಯಲ್ಲಿ  ತಾತ್ಪರ್‍ಯ ಬರೆದಿದ್ದ್ದಾರೆ.
‘ಮನೋರಮೆಯರ ತಲ್ಲಣಗಳು’ ಬರೆಹದಲ್ಲಿ ಗಂಡ ತನ್ನ ಮಡದಿಯನ್ನು, ಮಕ್ಕಳು ತಮ್ಮ ತಾಯಿಯ ವ್ಯಕ್ತಿತ್ವವನ್ನು ಪ್ರೀತಿಸಿ ಗೌರವಿಸದಿದ್ದರೆ ಅವಳು ತನ್ನೆಲ್ಲಾ ಭಾವನೆಗಳನ್ನು ಕಳೆದುಕೊಂಡು ಬದುಕಬೇಕಾಗುತ್ತದೆ. ತಾಯಿಯ ತಲ್ಲಣ ಮತ್ತು ಅಂತಃಕರಣವನ್ನು ಮನೆಮಂದಿ ಅರಿಯಲು ಕಿಂಚಿತ್ತ್ತಾದರೂ ಪ್ರಯತ್ನಪಟ್ಟರೆ ಅವಳ ಜೀವನ ಸಾರ್ಥಕವಾದೀತು ಎನ್ನುತ್ತಾರೆ.
ಮನಸೆಳೆಯುವ ಇನ್ನೊಂದು ಬರೆಹ ‘ಮೂಕ ಹಕ್ಕಿಯು ಹಾಡುತಿದೆ’ ಇದರಲ್ಲಿ ಹೆಣ್ಣನ್ನು ಮೂಕಹಕ್ಕಿಗೆ ಹೋಲಿಸಿ ನೋವ ಬಾಣ ಎದೆಗೆ ನಾಟಿದರೂ ಎಲ್ಲವನು ಸಹಿಸಿ ಜಗದೆದುರು ಹುಸಿನಗೆ ಬೀರುವಳು ಎನ್ನುವ ಮೂಲಕ ಅವಳ ಅವ್ಯಕ್ತ ಭಾವನೆಯನ್ನು ತೆರೆದಿಡುತ್ತಾರೆ.    
 ‘ಪುರುಷಾಯಣ’ದಲ್ಲಿ ಬರುವ ಲೇಖನಗಳಲ್ಲಿ ಪತಿ-ಪತ್ನಿ ಅನುಬಂಧಕ್ಕೆ ಪ್ರೀತಿ, ವಿಶ್ವಾಸ ಹಾಗೂ ವಿವೇಚನೆಯೇ ಮುಖ್ಯ ಎನ್ನುತ್ತಾ, ಕಂಬನಿ ಬರಿ ಹೆಣ್ಣಿನ ಒಡವೆ ಅಲ್ಲ, ಅವಳ ಸ್ವತ್ತ್ತೂ ಅಲ್ಲ. ಪುರುಷರೇ, ನೋವಾದಾಗ ನೀವೂ ಕಂಬನಿ ಹರಿಸಿ ಹಗುರವಾಗಿರಿ ಎಂಬ ಸಲಹೆ ನೀಡುತ್ತಾರೆ. ತಂದೆ ಕೇವಲ ಅಪ್ಪ ಮಾತ್ರ ಆಗಿರದೆ ತಾಯಿಯ ಅಮೂರ್ತರೂಪ ಪಡೆದಿರುವ ಅನರ್ಘ್ಯ ಜೀವಿ ಎಂದು ವಿಶ್ಲೇಷಿಸುತ್ತಾರೆ.
ಮುನ್ನುಡಿಯನ್ನು ಸಾಹಿತಿ, ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್, ಬೆನ್ನುಡಿಯನ್ನು ವಾಸುದೇವ ನಾಡಿಗ್ ಅವರು ಬರೆದಿದ್ದ್ದಾರೆ. ಪ್ರತಿಭಟನಾತ್ಮಕ ಮನೋಭಾವ ಮತ್ತು ವಾಸ್ತವವನ್ನು  ಅದರ ಕಹಿ ಸತ್ಯಗಳೊಂದಿಗೆ  ನವಿರಾಗಿ ಮನವೊಲಿಸುವ ಲೇಖನದ ಶೈಲಿಯೊಳಗೆ ಸಾತ್ವಿಕವಾದ, ಸಿಟ್ಟು ವ್ಯಂಗ್ಯವಿದೆ ಎಂದಿದ್ದಾರೆ ವಾಸುದೇವ ನಾಡಿಗ್.
 ಒಟ್ಟಿನಲ್ಲಿ, ಲೇಖಕಿ ಈ ಕೃತಿಯ ಮೂಲಕ ಕಟುಸತ್ಯವನ್ನು ತಣ್ಣಗೆ  ಓದುಗರಿಗೆ ತಲುಪಿಸುವ ಯತ್ನ ಮಾಡಿದ್ದಾರೆ. ಸಂತೋಷ ಮತ್ತು  ನೆಮ್ಮದಿಯ ಜೀವನದಲ್ಲಿ ಪುರುಷ- ಮಹಿಳೆ ಇಬ್ಬರದೂ ಪಾಲಿದೆ ಎನ್ನುವುದನ್ನು ಒತ್ತಿ ಹೇಳುತ್ತಾರೆ.
........................

Comments

Popular posts from this blog