ಯುವಪೀಳಿಗೆಗೆ ಒಂದು ಕೈದೀವಿಗೆ

‘ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’

 

    ಇದು ರಾಷ್ಟ್ರಕವಿ ಕುವೆಂಪು ಅವರ  ವಿಚಾರೋಪನ್ಯಾಸದ ಕೃತಿ. ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿಯ ಮೂಲಕ ವಿಶ್ವಮಾನವತೆಯ ಸಂದೇಶವನ್ನು ಸಾರಿದ ಕನ್ನಡದ ಮೊದಲ ಜ್ಞಾನಪೀಠ ಪುರಸ್ಕೃತ ಕವಿ ಕುಪ್ಪಳ್ಳಿ ಪುಟ್ಟಪ್ಪನವರು ಯುವಕರನ್ನು ಕುರಿತು ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ ಎಂದು ಕರೆನೀಡುತ್ತಾರೆ. ಈ ಕರೆಯ ಹಿಂದಿರುವ ಉದ್ದೇಶ ಸ್ಪಷ್ಟ, ಅದೇನೆಂದರೆ ಯುವಕರು ದೇಶದ ಆಸ್ತಿ, ಅವರು ಮನಸು ಮಾಡಿದರೆ ಅಸಾಧ್ಯ ಎಂಬುದೇ ಇಲ್ಲ. ಹಾಗಾಗಿ ಮೊದಲು ಈ ಸಮಾಜದ, ನಾಡಿನ ಯುವಕರು ವೈಜ್ಞಾನಿಕ ಮನೋಧೋರಣೆಯುಳ್ಳವರಾಗಿ ಎಚ್ಚೆತ್ತುಕೊಳ್ಳಬೇಕು ಎಂಬುದು ಕುವೆಂಪು ಅವರ ಸದಾಶಯ, ಆದ್ದರಿಂದಲೇ ಅವರು ಯುವಕರನ್ನು ಕುರಿತು ಅವರ ಮತಿಯನ್ನು ಎಚ್ಚರಿಸುವ ಮಾತುಗಳನ್ನಾಡಿದ್ದಾರೆ.
ಈ ಕೃತಿಯಲ್ಲಿ ನಾಲ್ಕು ಲೇಖನಗಳಿವೆ.

ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ

    “ಯುವಕರು ‘ನಿರಂಕುಶಮತಿ’ಗಳಾಗಬೇಕು, ‘ನಿರಂಕುಶಮತಿ’ತ್ವ ಎಂದರೆ ನಿರಂಕುಶ ಪ್ರಭುತ್ವದಂತೆ ಎಂದು ತಿಳಿಯಬಾರದು. ನಿರಂಕುಶ ಪ್ರಭುತ್ವದ ಲಕ್ಷಣವೆಂದರೆ ವಿವೇಕಹೀನವಾದ ಸ್ವಚ್ಛಂದ ವರ್ತನೆ. ಸಂಯಮಪೂರ್ಣವಾದ ಬುದ್ಧಿ ಸ್ವಾತಂತ್ರ್ಯವೇ ‘ನಿರಂಕುಶ ಮತಿ”’. ಇಲ್ಲಿ ಕುವೆಂಪು ನಿರಂಕುಶಮತಿ ಎಂಬ ಪದವನ್ನು ಹೇಗೆ ಅರ್ಥೈಸಿಕೊಳ್ಳಬೇಕು ಎಂಬುದನ್ನು ಮನವರಿಕೆ ಮಾಡಿಕೊಡುತ್ತಾರೆ.
  ಮತಿ ಮಾನವನ ಸರ್ವೋತ್ಕೃಷ್ಟ ಆಯುಧ ಎಂಬುದನ್ನು ಒತ್ತಿಹೇಳುತ್ತಾರೆ. “ಮತಿಯೇ ಕತ್ತಲಲ್ಲಿ ದಾರಿ ತೋರುವ ರತ್ನದ ಕೈದೀವಿಗೆ. ಮತಿಯ ದೆಸೆಯಿಂದಲೇ, ಪ್ರಾಣಿಮಾತ್ರವಾಗುತ್ತಿದ್ದ ನರಜೀವಿ ಮನುಷ್ಯತ್ವಕ್ಕೆ ಏರಿದ್ದಾನೆ. ಮತಿಯ ಕೃಪಾಮಹಿಮೆಯಿಂದಲೇ ನಾವು ಮನುಷ್ಯತ್ವದಿಂದ ದೇವತ್ವಕ್ಕೆ ಏರಬೇಕಾಗಿದೆ” ಎಂಬುದನ್ನು ಒತ್ತಿ ಹೇಳುತ್ತಾರೆ. ಅಂದರೆ ಪ್ರತಿಯೊಬ್ಬ ವ್ಯಕ್ತಿಯು ಬುದ್ಧಿಯಿಂದ ಯೋಚಿಸುವುದನ್ನು ಬಿಟ್ಟು ಮನಸ್ಸಿನಿಂದ ಆಲೋಚಿಸಬೇಕು ಆಗಮಾತ್ರ ಮಾನವೀಯ ಅಂಶಗಳು ನೆಲೆಯೂರಲು ಸಾಧ್ಯ. ಮಾನವ ಜನ್ಮದ ಸಾರ್ಥಕತೆ ಇರುವುದೇ ಮನುಷ್ಯತ್ವವನ್ನು ಉಳಿಸಿಕೊಳ್ಳುವುದರ ಮೂಲಕ. ‘ಏನಾದರೂ ಆಗು ಮೊದಲು ಮಾನವನಾಗು’ ಎಂಬ ಪದದ ಅರ್ಥವೂ ಇದೇ ಆಗಿದೆ.
    ಮೌಢ್ಯದಿಂದ, ಮತಾಚಾರಗಳಿಂದ ತುಂಬಿರುವ ಇಂದಿನ ಸಮಾಜವನ್ನು ಉದ್ಧರಿಸಬೇಕಾದರೆ ಅದು ಯುವಶಕ್ತಿಯಿಂದ ಮಾತ್ರ ಸಾಧ್ಯ ಎಂಬುದನ್ನು ಕುವೆಂಪು ಅವರು ಒತ್ತಿ ಹೇಳುತ್ತಿದ್ದಾರೆ. ಧರ್ಮ, ಜಾತಿ, ಕುಲಗಳ ಅಂಧಶ್ರದ್ಧೆಯ ನಡುವೆ ಯುವಕರು ನರಳುವಂತಾಗಬಾರದು,  ಈಗ ನಾವು ಮತ ಎಂದು ಕರೆದುಕೊಳ್ಳುವ ಆಚಾರ ಸಮೂಹ ಬರಿಯ ಸಾಮಾಜಿಕವಾದ ಕಟ್ಟುಕಟ್ಟಳೆಗಳ ಕಾಟವಾಗಿದೆ” ಎನ್ನುತ್ತಾರವರು.
ಯಾವುದೇ ಒಂದು ಸಂಪ್ರದಾಯದ ಸಂಕೋಚಕ್ಕೆ ಯುವಕರು ಸಿಕ್ಕಿಕೊಳ್ಳಬಾರದು, ಯಾವ ಒಂದು ಪಂಥದ ಇಕ್ಕಟ್ಟಿಗೂ ಯುವಜನತೆ ಒಳಗಾಗಬಾರದು ಎಂಬುದು ಕುವೆಂಪು ಅವರ ಆಶಯ.  ಮತಭ್ರಾಂತಿಯನ್ನು ಬಿಟ್ಟು ಮತಿಯ ದೀವಿಗೆಯನ್ನು ಕೈಯಲ್ಲಿ ಹಿಡಿದುಕೊಂಡು ಹೊರಡುವ ಸರ್ವರಿಗೂ ಅದು ಸುಲಭಸಾಧ್ಯ”, ಇಂತಹ ದಿವ್ಯ ‘ದರ್ಶನ’ದ ಪ್ರಾಪ್ತಿಗಾಗಿ ನಮಗೆ ಬೇಕಾಗುವ ಧೀರ, ಸ್ವತಂತ್ರ, ಉದಾರ ಪ್ರತಿಭಾಪೂರ್ಣವಾದ ಬುದ್ಧಿಯನ್ನೇ ಕುವೆಂಪು ಅವರು ‘ನಿರಂಕುಶಮತಿ’ ಎಂದು ಕರೆದಿದ್ದಾರೆ. ಆದ್ದರಿಂದಲೇ ಸಮಾಜ, ದೇಶದ, ಜಗತ್ತಿನ ಶ್ರೇಯಸ್ಸನ್ನು ಕೋರುವ ಯುವಕರೆಲ್ಲರೂ ‘ನಿರಂಕುಶಮತಿ’ಗಳಾಗಬೇಕು ಎಂಬುದು ಕುವೆಂಪು ಅವರ ಸದಾಶಯ.



ಮಲೆನಾಡಿನ ಯುವಕರಲ್ಲಿ

ಮಲೆನಾಡೆಂದರೆ ಕರ್ನಾಟಕದ ಕಾಶ್ಮೀರ, ಪ್ರಕೃತಿಯ ವರುಣ ಶಾಲೆ. ಮಲೆನಾಡು ಅತ್ಯಂತ ರಮಣೀಯವೂ, ಕಮನೀಯವೂ ಆಗಿದೆ.  ಇಲ್ಲಿ ಮಳೆ ಇದೆ, ಬೆಳೆ ಇದೆ, ಆದರೆ ಅನೇಕ ಮನೆತನದ ಜೀವನ ನೆಮ್ಮದಿಯಾಗಿ ಇಲ್ಲ. ದುಂದು ವೆಚ್ಚ ಮಾಡುವುದು ಇದಕ್ಕೆಲ್ಲ ಮುಖ್ಯ ಕಾರಣ. ಅಪ್ರಯೋಜಕಗಳಿಗೆ ವಿನಾಕಾರಣ ಖರ್ಚು ಮಾಡಲಾಗುತ್ತಿದೆ.  
ಬೆಟ್ಟ, ಕಣಿವೆ, ಕಾಡುಗಳಲ್ಲಿ ದೂರದಲ್ಲಿ ಒಂದೊಂದು ಮನೆ ಇರುವುದರಿಂದ ಈ ಹಳ್ಳಿಗಳಿಗೆ ಹೊರಗಿನವರು ಬರದಿರುವುದರಿಂದ ಹಳ್ಳಿಯವರು ಹೊರಗಿನ ಜಗತ್ತಿನ ವಿಚಾರವನ್ನು ತಿಳಿಯದೆ ಹೋಗುವ ಸಂಭವವಿದೆ. ಸಂಕುಚಿತ ಜೀವನದ ಬಿಂದುಗಳನ್ನು  ಬಾಹ್ಯ ಜೀವನದ   ಮಹಾ ಸಿಂಧುವಿನಲ್ಲಿ ಲಗ್ನ ಮಾಡಬೇಕು.  ಯುವಕರು ಪುಸ್ತಕಗಳ ವಿಚಾರಗಳತ್ತ ಗಮನಹರಿಸಬೇಕು. ಜನಪ್ರಿಯ ಕಾವ್ಯಗಳಾದ ಮಹಾಭಾರತ, ರಾಮಾಯಣ, ಭಾಗವತ, ಜೈಮಿನಿ ಭಾರತ ಇವುಗಳನ್ನು ಮನೆಯಲ್ಲಿಡಬೇಕು. ಆತ್ಮಕಲ್ಯಾಣಕ್ಕಾದರೂ ಅವುಗಳನ್ನು ಓದಬೇಕು. ಯಾವ ಮನೆಯಲ್ಲಿ ಪ್ರತಿದಿನ ಅರ್ಧ ಗಂಟೆ ಮಟ್ಟಿಗಾದರೂ ಕಾವ್ಯವಾಚನವಾಗುವುದಿಲ್ಲವೋ ಆ ಮನೆಯ ಮಂದಿ ಭಾವನಾ ಪ್ರಪಂಚದಲ್ಲಿ ಇರುವುದಿಲ್ಲ. ಮನೆಯಲ್ಲಿರುವ ಮಕ್ಕಳಿಗೂ ಈ ಓದಿನಿಂದ ಉಪಕಾರವಾಗುತ್ತದೆ. ದುರ್ವಿಷಯಗಳ ಕಡೆಗೆ ತಿರುಗುವ ಮನಸ್ಸು ಸಾತ್ವಿಕವಾಗುತ್ತದೆ. ಅಕ್ಷರಸ್ಥರೆಲ್ಲರೂ ಓದುವಂತರಾಗಿರಬೇಕು. ಜೀವನದಲ್ಲಿ ಶಾಂತಿ, ಭಕ್ತಿ, ವಿವೇಕ, ಸುಖ ಎಲ್ಲವೂ ಇದರಿಂದ ಸಿಗುತ್ತದೆ.

 ವಿದ್ಯಾರ್ಥಿಗಳಲ್ಲಿ ಮತಿಗೌರವದ ಅವಶ್ಯಕತೆ


ಇದರಲ್ಲಿ ಲೇಖಕರು ವಿದ್ಯಾರ್ಥಿಯ ಜೀವನ ಒಂದು ತಪಸ್ಸಿನ ಸಾಧನೆ ಎಂದು ಅರಿಯಬೇಕು. ವಿದ್ಯಾರ್ಥಿಯು ಒಬ್ಬ ಗೌರವ ತಪಸ್ವಿಯಾಗಬೇಕು. ವಿದ್ಯಾರ್ಜನೆಯ ಸಮಯವೆಂದರೆ ಆತ್ಮಶಕ್ತಿ ಸಂಗ್ರಹದ ಕಾಲ. ಬುದ್ಧಿಯನ್ನು ಮಸೆದು, ಭಾವವನ್ನು ಪಡೆದು, ಕವಿಗಳ ಕಾವ್ಯಗಳಲ್ಲಿಯೂ, ತತ್ವಜ್ಞರ ದರ್ಶನಗಳಲ್ಲಿಯೂ, ವೈಜ್ಞಾನಿಕ ಸಂಶೋಧನೆಯಲ್ಲಿಯೂ, ರಾಜಕೀಯ ಶಾಸ್ತ್ರಗಳಲ್ಲಿಯೂ ಮನಸ್ಸನ್ನು ಹದಗೊಳಿಸಬೇಕು. ಬಹಿರ್ಮುಖ ಕರ್ಮಗಳು ವಿದ್ಯಾರ್ಥಿಯ ಮತಿ ಗೌರವವನ್ನು ಹೆಚ್ಚಿಸುತ್ತವೆ. ಗ್ರಾಮಸೇವೆ ಆಶಯವೇ ಜ್ಞಾನಪ್ರಸಾರ. ಸಾಹಿತ್ಯ ಪ್ರಚಾರ, ವೈದ್ಯ ಸಹಾಯ ಮುಂತಾದ ಕಾರ್ಯಗಳಲ್ಲಿ ಪಾಲ್ಗೊಳ್ಳುವುದರಿಂದ ವಿದ್ಯಾರ್ಥಿಯ ಮತಿ ಸಜೀವವೂ ಆಗುತ್ತದೆ. ಅನುಭವಲಯವನ್ನು ವಿಸ್ತಾರಗೊಳಿಸಿಕೊಳ್ಳಬೇಕು. ಇವು ಮತಿಯ ಗೌರವವನ್ನು ಹೆಚ್ಚಿಸುತ್ತವೆ ಎನ್ನುತ್ತಾರೆ.

 ವಿದ್ಯಾರ್ಥಿಗಳಿಗೆ ಆತ್ಮಶ್ರೀ

ಆತ್ಮ ಸಾಧನೆಯ ವಿಚಾರವು ತುಂಬಾ ಅವಶ್ಯವಾದದ್ದು. ಅಂತಹ ಸಾಧನೆಯಿಂದ ಆತ್ಮಶ್ರೀ ಸಂಬಂಧವನ್ನು ಬುದ್ಧಿಯಲ್ಲಿ, ಭಾವದಲ್ಲಿ, ದೇಹದಲ್ಲಿ, ಜೀವನ ಸಂಗ್ರಾಮದಲ್ಲಿ, ಆತ್ಮಶ್ರೀವಿಹೀನನಿಗಿಂತಲೂ ನಿಸ್ಸಂದೇಹವಾಗಿ ಮೇಲುಗೈ ಸಾಧಿಸುತ್ತಾನೆ. ಅಪಮಾನ ಮುಂತಾದ ಸನ್ನಿವೇಶಗಳು ಒದಗಿದಾಗಲೂ ಅವನ ಶಾಂತಿ, ಧೈರ್ಯ, ನಿರ್ಭರತೆ ಅವನನ್ನು ಕೈಬಿಡದೆ ಉದ್ಧಾರ ಮಾಡುತ್ತದೆ. ಆತ್ಮಶ್ರೀ ಸಾಧಕನಾದ ವಿದ್ಯಾರ್ಥಿಯು ಕೂಡ ತಪಸ್ವಿಯಾಗಿರುತ್ತಾನೆ. ಆತನ ತಪಸ್ಸು ದೇಹಶ್ರೀ -ಭಾವಶ್ರೀ -ಬುದ್ಧಿಶ್ರೀಗಳ ತಿರಸ್ಕಾರ ರೂಪದಲ್ಲಿ, ದೇಹದ ಅಧ್ಯಯನದಲ್ಲಿ, ಜಾಗ್ರತೆಯಲ್ಲಿ, ಸಂಯಮದಲ್ಲಿ, ಧ್ಯಾನದಲ್ಲಿ, ಆತ್ಮಾನುಸಂಧಾನದಲ್ಲಿಲ್ಲಿ ಆತನ ತಪಸ್ಸು ಇರುತ್ತದೆ. ಆತ್ಮಶ್ರೀ ಇತರಶ್ರೀಗಳಂತಲ್ಲ. ಇದು ಎಲ್ಲಾ ಶ್ರೀಗಳ ಶ್ರೀ. ಉಚ್ಛ್ರಾಯವನ್ನು ಸಾಧಿಸಬಲ್ಲದು. ಎಲ್ಲವನ್ನೂ ಮೀರಿರುವ ಸಾರ್ವಭೌಮಿಕಶ್ರೀ. ಆತ್ಮಶ್ರೀ ಸಹಿತವಾದರೆ ಎಲ್ಲ ಶ್ರೀಗಳು ಶೋಭಿಸುತ್ತವೆ. ಶ್ರೀ ಮಾತ್ರವಲ್ಲ, ಅಶ್ರೀಯೂ ಪೂಜ್ಯವಾಗುತ್ತದೆ. ಆತ್ಮಶ್ರೀ ಯಾವ ರೂಪದಲ್ಲಾದರೂ ವ್ಯಕ್ತವಾಗಬಹುದು. ವಿದ್ಯಾರ್ಥಿಗಳಿಗೆಕೆ ಆತ್ಮಶ್ರೀ ಎಂಬ ಪ್ರಶ್ನೆ ಕೇಳಿದರೆ ಅದಕ್ಕೆ ಉತ್ತರ- ಆತ್ಮಶ್ರೀ ಇಲ್ಲದ ವಿದ್ಯೆ ಶ್ರೀರಾಮನಿಲ್ಲದ ಅಯೋಧ್ಯೆಯಂತೆ.
 ಒಟ್ಟಿನಲ್ಲಿ, ಕುವೆಂಪು ಅವರ ಲೇಖನದ ಈ ಉದ್ದೇಶ ಪ್ರತಿಯೊಬ್ಬರು ಜೀವನದಲ್ಲಿ ಮುಂದುವರಿಯಬೇಕಾದರೆ ತಮ್ಮ ತಮ್ಮ ಹೃದಯದಲ್ಲಿ ಒಂದು ಶಕ್ತಿಯ ನಿಧಿಯನ್ನು ಶೇಖರಿಸಬೇಕು, ಮತ್ತು ಅವರವರ ಆತ್ಮಶ್ರೀಗಾಗಿ ಅವರವರೇ ಪ್ರಯತ್ನಿಸಬೇಕು, ಇತರರ ಮೇಲೆ ಅವಲಂಬಿತವಾಗಬಾರದು ಎಂಬ ಆಶಯವನ್ನು ಹೊಂದಿರುವ ಕುವೆಂಪು ಅವರ ದೃಷ್ಟಿಕೋನ ಯುವಪೀಳಿಗೆಗೆ ಒಂದು ಕೈದೀವಿಗೆಯಾಗಿದೆ ಎಂಬುದರಲ್ಲಿ ಹೆಚ್ಚುಗಾರಿಕೆ ಇಲ್ಲ.
 ,,,,,,,,,,,,,,,,,,,,,,
 

Comments

Popular posts from this blog